• ಡಾ. ಎಂ ಪ್ರಭಾಕರ ಜೋಶಿ

ಜ್ಞಾನೇನಾಕಾಶ ಕಲ್ಪೇನ ಯೋಧರ್ಮಾನ್ ಗಗನೋಪಮಾನ್
ಜ್ಞೇಯಾಭಿನ್ನೇನ ಸಂಬುದ್ಧಃ ತಂವಂದೇ ದ್ವಿಪದಾಂ ವರಂ

(ಗೌಡಪಾದಾಚಾರ್ಯರ ಮಾಂಡುಕ್ಯಕಾರಿಕಾ)

ಇದು ಆಚಾರ್ಯ ಗೌಡಪಾದರು ಮಾಂಡುಕ್ಯ ಉಪನಿಷತ್ತಿನ ಬಗೆಗೆ ಬರೆದ ಕಾರಿಕಾ ಗ್ರಂಥದ ಒಂದು ಶ್ಲೋಕ ರತ್ನ. ಆಕಾಶದಂತೆ ಅನಂತ ಅಸೀಮವಾದ ತನ್ನ ಜ್ಞಾನದಿಂದ ಯಾವನು, ಗಗನ ಸದೃಶವಾದ ಧರ್ಮ (ಜ್ಞಾನ ವಸ್ತು, ಜೀವ ) ಗಳನ್ನು ಜ್ಞಾನ-ಜ್ಞೇಯ (ಅರಿವು ಮತ್ತು ಅರಿವಿನ ವಸ್ತು) ಗಳ ಅಭೇದವಾಗಿ, ಪೂರ್ಣವಾಗಿ ತಿಳಿ (ತಿಳಿಸಿ)ದನೋ ಆ ದೇವ -ಮಾನವ ಶ್ರೇಷ್ಠನಿಗೆ ವಂದನೆಗಳು.

ಭಗವಾನ್ ಬುದ್ಧನ ಗಗನ ಜ್ಞಾನ (ಶೂನ್ಯವಾದ ) ಮತ್ತು ಉಪನಿಷತ್ತಿನ ಬ್ರಹ್ಮವನ್ನು ಸಮನ್ವಯಗೊಳಿಸಿದ ಒಂದು ಅದ್ಭುತವಾದ ಕಾಣುವಿಕೆ
ಸೃಷ್ಟಿಶೀಲ ವ್ಯಾಖ್ಯಾನ ಇದರಲ್ಲಿದೆ.

ಬೌದ್ಧ ದರ್ಶನ ಮತ್ತು ವೇದಾಂತ ದರ್ಶನಗಳ ಸಮನ್ವಯವನ್ನು ಇಲ್ಲಿ ಸಾಧಿಸಿದ ಬಗೆ-ಅಸಾಮಾನ್ಯ. ಇಲ್ಲಿ ಆಕಾಶ ಇದೆ. ಗಗನ ಇದೆ. ಧರ್ಮ
ಇದೆ. ಸಂಬುದ್ಧಂ ಎಂಬಲ್ಲಿ ಬುದ್ಧನಿದ್ದಾನೆ. ದ್ವಿಪದಾಂ ವರ ಎಂಬಲ್ಲಿ ಬ್ರಹ್ಮನ ವ್ಯಕ್ತ ರೂಪವಾದ ದೇವರು ಇದ್ದಾನೆ. ಧರ್ಮ ಎಂಬುದಕ್ಕೆ ಸ್ವಭಾವ
ಸ್ವರೂಪ ಎಂಬ ಅರ್ಥಗಳ ಜತೆಗೆ ಬೌದ್ಧ ಧರ್ಮದ ವಿಶಿಷ್ಟ ಪಾರಿಭಾಷಿಕ ಅರ್ಥವೂ ಉಂಟು. ಧರ್ಮವೆಂದರೆ ಸರ್ವಲೋಕಗಳಿಗೆ ಜೀವಿಗಳಿಗೆ
ಅನ್ವಯವಾಗುವ ತತ್ವ ಸ್ವಭಾವ, ಸ್ವರೂಪ ವಿವರ. ಜೊತೆಗೆ ಶ್ರೀರತ್ನದ (ಬುದ್ಧ ಸಂಘ, ಧರ್ಮ )ಗಳ ಭಾಗ ಇವೆಲ್ಲವೂ ಗಗನೋಪಮ. ಅದರ
ಅರಿವು ಆಕಾಶ ಕಲ್ಪ! ಗಗನ, ಆಕಾಶಗಳು ಶೂನ್ಯ ಮತ್ತು ಪೂರ್ಣಗಳ ಪ್ರತಿಮೆಗಳು. ದ್ವಿಪದಾಂ ವರ ಯಾರು? ಶ್ರೀ ನಾರಾಯಣ, ಶಿವ,
ಬುದ್ಧ ಹಾಗೂ ಅಥವಾ ಎಲ್ಲವೂ ಆಗಿ ಅರ್ಥವಿಸಬಹುದು.

ಬೌದ್ಧ ಧರ್ಮ (ಧಮ್ಮ-ಪದ) ಮತ್ತು ವೇದಾಂತ, ಶೂನ್ಯ ಮತ್ತು ಬ್ರಹ್ಮ, ಆಕಾಶ ಮತ್ತು ಪರತತ್ವ ಇವನ್ನು ಒಂದಾಗಿಸಿ ಸಮನ್ವಯಗೊಳಿಸಲು
ಇದಕ್ಕಿಂತ ಅದ್ಭುತವಾಗಿ ಹೇಗೆ ಸಾಧ್ಯ? ಬೌದ್ಧ ವೇದಾಂತಗಳ ಉಪನಿಷತ್ ಮೂಲವನ್ನು ಸೊಗಸಾಗಿ ಸ್ಥಾಪಿಸಿದ ಕಾರಿಕಾ ಗ್ರಂಥವು
ಆಚಾರ್ಯ ಶಂಕರರ ಪ್ರತಿಪಾದನೆಯ ಗುರು ಗ್ರಂಥಗಳಲ್ಲಿ ಒಂದು. ಆದುದರಿಂದ ಗೌಡಪಾದರೂ ಅವರ ಆರಾಧ್ಯರಾದ ಬುದ್ಧನೂ
ದ್ವಿಪದಾಂ ವರಂ.

ಹೊಸದಿಗಂತ

error: Content is protected !!
Share This