“ನಾವು ಇಂದು ಯಕ್ಷಗಾನದಲ್ಲಿ ಏನೆಲ್ಲಾ ಕೆಲಸಗಳು ನಡೆಯಬೇಕೆಂದು ಯೋಚಿಸುತ್ತಿದ್ದೇವೋ ಅದನ್ನು ಅಂದು ಡಾ.ಕಾರಂತರೊಬ್ಬರೇ ಮಾಡಿ ತೋರಿಸಿದವರು.ಅವರ ದೈತ್ಯ ಪ್ರತಿಭೆಯ ಪ್ರಭಾವ ಯಕ್ಷಗಾನದ ಪ್ರಯೋಗಗಳ ಮೂಲಕ ಕಾಣಲು ಸಾಧ್ಯವಿದೆ. ತಾತ್ವಿಕ ಹಿನ್ನಲೆಯನ್ನು ಇಟ್ಟುಕೊಂಡು ಯಕ್ಷಗಾನ ಕಲೆಯನ್ನು ಬೆಳೆಸಿದವರು ಡಾ.ಶಿವರಾಮ ಕಾರಂತರು” ಎಂದು ಹಿರಿಯ ವಿದ್ವಾಂಸ, ಯಕ್ಷಗಾನ ಅರ್ಥದಾರಿ ಡಾ.ಎಂ ಪ್ರಭಾಕರ ಜೋಶಿ ಅಭಿಪ್ರಾಯ ಪಟ್ಟರು.

ಅವರು ಡಾ. ಶಿವರಾಮ ಕಾರಂತರ ಬಾಲವನ ಪುತ್ತೂರು ಹಾಗೂ ಸಹಾಯಕ ಆಯುಕ್ತರ ಕಛೇರಿ ಪುತ್ತೂರು ಇವುಗಳ ಆಶ್ರಯದಲ್ಲಿ ಬಾಲವನದಲ್ಲಿ ನಡೆದ ವಾರದ ಆನ್ ಲೈನ್ ಕಾರ್ಕ್ರಮದಲ್ಲಿ ‘ಯಕ್ಷಗಾನ ಮತ್ತು ಡಾ.ಕಾರಂತ’ ಎನ್ನುವ ವಿಷಯದಲ್ಲಿ ಮಾತನಾಡಿದರು.

“ಯಕ್ಷಗಾನದ ದೋರಣೆ ಹಾಗೂ ಯಕ್ಷಗಾನವನ್ನು ಏನಾಗಿ ನೋಡಬೇಕು ಎನ್ನುವುದನ್ನು ಅತ್ಯಂತ ಖಚಿತವಾಗಿ ಹೇಳಿದವರಲ್ಲಿ ಡಾ.ಕಾರಂತರು ಪ್ರಮುಖರು. ಅವರು ಯಕ್ಷಗಾನದ ಬಗ್ಗೆ ಬರೆದ ಸುಮಾರು ಎರಡುವರೆ ಸಾವಿರ ಪುಟಗಳು ಮತ್ತು ದುಡಿದ ಸುಮಾರು ಅರವತ್ತು ವರ್ಷಗಳು ಯಕ್ಷಗಾನದ ಬೆಳವಣಿಗೆಯ ದಿಕ್ಕನ್ನೇ ಬದಲಾಯಿಸಿದೆ. ಯಕ್ಷಗಾನ ಪ್ರಯೋಗ, ಕವಿಚರಿತೆ, ಕಲಾವಿದರ ನಿಧಿ ಸಂಗ್ರಹದ ಪ್ರತಿಪಾದನೆ ಈ ಕಲೆಯ ಬೆಳವಣಿಗೆಗೆ ಹಾಗೂ ಅಧ್ಯಯನಕ್ಕೊಂದು ಹೊಸ ಆಯಾಮವನ್ನು ಕೊಟ್ಟಿದೆ. ಅವರು ಆರಂಭಿಸಿದ ಯಕ್ಷಗಾನ ಸಂಬಂಧಿ ಗೋಷ್ಠಿಯಿಂದ ಯಕ್ಷಗಾನಕ್ಕೂ ಗೋಷ್ಠಿಗಳನ್ನು ಆಯೋಜಿಸಬಹುದೆಂಬ ಪರಿಕಲ್ಪನೆಗೆ ನಾಂದಿ ಹಾಡಿತು” ಎಂದು ಅವರು ತಿಳಿಸಿದರು.

ಬಾಲವನದ ವಿಶೇಷ ಕರ್ತವ್ಯಾಧಿಕಾರಿ ಡಾ. ಸುಂದರ ಕೇನಾಜೆ ಸ್ವಾಗತಿಸಿ ಪರಿಚಯಿಸಿದರು. ಮೇಲ್ವಿಚಾರಕ ಅಶೋಕ ಮಣಿಯಾಣಿ ವಂದಿಸಿದರು. ಈ ಕಾರ್ಯಕ್ರಮ ಡಾ.ಶಿವರಾಮ ಕಾರಂತರ ಬಾಲವನ ಫೇಸ್ ಬುಕ್, ಯೂಟ್ಯೂಬ್, ಬಾಲವನದ ಎಲ್ಲಾ ವಾಟ್ಸ್ ಆಪ್ ಗ್ರೂಪ್, ಪುತ್ತೂರು ಸುದ್ದಿ ಮಲ್ಟಿಮೀಡಿಯಾ ಚಾನೆಲ್ ಮತ್ತು ಗ್ರೂಪ್, ಸ್ಥಳೀಯ ದೃಶ್ಯ ಮಾದ್ಯಮಗಳ ಮೂಲಕ ಪ್ರಸಾರಗೊಂಡಿತು. ಪುತ್ತೂರಿನ ಪತ್ರಕರ್ತರು, ತಾಲೂಕು ಪತ್ರಕರ್ತರ ಸಂಘ, ವಿಭಾ ಟೆಕ್ನಾಲಜಿ ಹಾಗೂ ಸಿಟಿವಿ ಕೇಬಲ್ ನೆಟ್ವರ್ಕ್ನವರು ಕಾರ್ಯಕ್ರಮಕ್ಕೆ ಸಹಕರಿಸಲಿದ್ದಾರೆ.

error: Content is protected !!
Share This