– ಡಾ. ಎಂ. ಪ್ರಭಾಕರ ಜೋಶಿ

ಹೌದು, ಇದೆಲ್ಲವೂ ನಿಜ, ಪ್ರಾಸವಲ್ಲ, – ಕನ್ನಡದ ವಿಶಿಷ್ಟ ಮೌಖಿಕ ಕಲೆ ತಾಳಮದ್ದಲೆಯ ಬಗೆಗೆ ಇನ್ನಷ್ಟು ನಿಜ. ತನ್ನ ಸ್ವರೂಪ, ಸೃಜನಶೀಲತೆ, ಸಾಧ್ಯತೆ, ಶ್ರೀಮಂತಿಕೆಗಳಲ್ಲಿ ಈ ಎಲ್ಲ ವಿಶೇಷಣಗಳಿಗೆ ಅದು ಅರ್ಹವಾಗಿದೆ.

ನಾಲ್ಕಾರು ಕಲಾವಿದರು, ಒಬ್ಬ ಹಾಡುಗಾರ, ಒಬ್ಬ ವಾದಕ, ಒಂದಿಷ್ಟು ಸ್ಥಳ- ಇಷ್ಟು ಸಾಕು. ವೇಷ ಸಾಮಗ್ರಿ, ಬೆಳಕಿನ ವಿಶೇಷತೆ, ಪರದೆ, ಮೇಕಪ್ ಯಾವುದೂ ಇಲ್ಲ. ಪ್ರಾಪರ್ಟಿ ಬೇಕಿಲ್ಲ. ತೀರ ರಿಕ್ತವಾಗಿದ್ದು, ಅತಿ ಶ್ರೀಮಂತ ಕಲಾನುಭವ, ವಿಚಾರ ಸಂಪತ್ತನ್ನು ದರ್ಶಿಸುವ ಕಲೆ ಇದು. ಇದನ್ನು ತಾಳಮದ್ದಲೆ, ಪ್ರಸಂಗ, ಬೈಠಕ್, ಓದಿಕೆ, ಯಕ್ಷಗಾನ ಕೂಟ (ಆಟಕ್ಕಿಂತ ಭಿನ್ನ ಎಂಬ ಅರ್ಥ) ಎಂದೂ ಕರೆಯುತ್ತಾರೆ. ಆದರೆ ತಾಳಮದ್ದಲೆ ಎಂಬ ಹೆಸರೇ ಈಗ ಹೆಚ್ಚು ಪ್ರಚಲಿತ.

ವೇಷ, ನೃತ್ಯ, ಹಿಮ್ಮೇಳ, ರಂಗ ರೂಢಿಗಳಿಂದ ಕೂಡಿರುವುದು ಬಯಲಾಟ, ಯಕ್ಷಗಾನ ಆಟ. ಅದರಿಂದ ವೇಷ-ನೃತ್ಯ-ರಂಗ ವಿಧಾನ ತೆಗೆದರೆ, ತಾಳಮದ್ದಲೆ ಆಯಿತು. ಇದೊಂದು ಸಂಕ್ಷಿಪ್ತ ‘ನಾಟ್ಯ’. – ನಾಟಕ ಸ್ವರೂಪ.

ಭಾಗವತನೆಂಬ ಹಾಡುಗಾರ – ಯಕ್ಷಗಾನ ಅಥವಾ ಪ್ರಸಂಗ ಎನ್ನಲಾಗುವ ತಾಳರಾಗ ಸಂಯುಕ್ತ ಗೀತಪ್ರಬಂಧ, ಹಾಡುಗಬ್ಬವನ್ನು ವಿಶಿಷ್ಟ ರೀತಿಯಲ್ಲಿ ಹಾಡುತ್ತಾನೆ. ಮದ್ದಳೆ, ಚೆಂಡೆ (ಐಚ್ಛಿಕ) ಹಿಮ್ಮೇಳವಿರುತ್ತದೆ. ಅದನ್ನಾಧರಿಸಿ, ಸಾದಾ ಉಡುಪಿನಲ್ಲಿ ‘ಅರ್ಥದಾರಿ’ ಎಂಬ ಪಾತ್ರಧಾರಿಗಳು ಆಶುಭಾಷಣ ಮೂಲಕ ‘ನಾಟಕ’ ವನ್ನು ವಿಸ್ತರಿಸುತ್ತಾರೆ. ಪದ್ಯಗಳ ಆಯ್ಕೆ, ಮುಂದುವರಿಕೆ (ಕೊಂಡಿ CUE, linking), ಎತ್ತುಗಡ, ಭಾವ ಪ್ರಕಾಶನ, ಸಂವಾದಗಳಿಗೆ ಸ್ಥೂಲವಾದ ನಿಯಮಗಳಿವೆ. ಮಾತಿನ ಮಂಟಪವಾದ ಈ ರಂಗವು ಪುರಾಣದ ತಿಳಿವು, ಅನುಭವ, ನಾಟಕೀಯತೆ, ವಾಕ್ ಸಾಮರ್ಥ್ಯಗಳನ್ನು ಬಯಸುವ ಕಲೆ. ಇದರಲ್ಲಿರುವ ಹೂರಣ, INPUT ಅಸಾಧಾರಣ. ಕನ್ನಡದ ಒಂದು ವಿಶಿಷ್ಟ ಸೃಜನ, ಒಂದು ಸ್ವಂತ ಪರಂಪರೆ – ತಾಳಮದ್ದಲೆ. ಪ್ರಾಯಃ – ಇದನ್ನು ದೂರದಲ್ಲಿ ಹೋಲುವ ಕಲೆಗಳಿದ್ದರೂ, ತಾಳಮದ್ದಲೆ ಇರುವುದು ಕನ್ನಡ ನಾಡಲ್ಲಿ ಮಾತ್ರ. ಕೊಂಕಣಿ, ತುಳು, ಹಿಂದಿ, ಇಂಗ್ಲಿಷ್, ಮರಾಠಿಗಳಲ್ಲೂ ಇದು ಅವತರಿಸಿ ಪ್ರಯೋಗಗೊಂಡಿದೆ.

ಬಹುಶಃ – ಸುಮಾರು ಹದಿನೈದನೆಯ ಶತಕದಲ್ಲಿ – ಪುರಾಣ ಪ್ರವಚನದ ವಿಸ್ತರಣೆಯಾಗಿ, ಯಾ, ಬಯಲಾಟ ಒಳಾಂಗಣ ರೂಪವಾಗಿ, ಇದು ರೂಪಿತವಾಗಿರಬಹುದು. ಬಹುಶಃ – ಇದರ ಅಲಂಕೃತ ರೂಪವೇ ಆಟ ಹಾಗಾಗಿ ಕೂಟ ಮೊದಲು, ಆಟ ಅದರ ಪರಿಷ್ಕಾರ, ವೃದ್ಧಿ ಎಂಬ ಅಭಿಪ್ರಾಯವೂ ಇದೆ. ಇದು ಕಳೆದ ಶತಮಾನದ ಆದಿಭಾಗದಿಂದ ಹೊಸ ರೂಪ ಪಡೆದು, 1930ರಿಂದ ಸ್ಪಷ್ಟವಾಗಿ ನವೋದಯವೊಂದನ್ನು ಹೊಂದಿತು.

ದೇವಳಗಳಲ್ಲಿ, ಮನೆಗಳ ಧಾರ್ಮಿಕ ಸಂದರ್ಭಗಳಲ್ಲಿ ಸೇವಾರೂಪವಾಗಿ ಇದ್ದ ಈ ಕಲೆಯು ಸಭಾಪ್ರದರ್ಶನ ಕಾರ್ಯಕ್ರಮವಾದುದು 1930ರ ಬಳಿಕ. ಸಭೆಯ ಮಧ್ಯೆ ಕುಳಿತಲ್ಲೆ ‘ಅರ್ಥ’ ವೆಂಬ ಮಾತುಗಾರಿಕೆ ನಡೆಯುತ್ತಿತ್ತು. ಇಡೀಯ ಪ್ರಸಂಗವನ್ನು ಹಾಡುತ್ತಿದ್ದರು. ಮುಂದೆ ಪದ್ಯಗಳ ಆಯ್ಕೆ, ಪಾತ್ರ ನಿರ್ಣಯ, ತುಸು ಪ್ರತ್ಯೇಕ ರಂಗ ವೇದಿಕೆ- ಎಲ್ಲ ಬಂದುವು. ಇಡೀ ರಾತ್ರಿ ಬರಿಯ ಹಾಡು ಮಾತುಗಳಿಂದ ಜನರಂಜನೆ ಮಾಡುವ, ಶ್ರೋತೃಗಳ ಆಸಕ್ತಿಯನ್ನು ಕಾಯ್ದಿರಿಸುವ ಈ ಕಲೆಯ ಶಕ್ತಿ-ಸರಳ, ಗಹನ, ಗಂಭೀರ, ಆಪ್ತವಾದುದು. ಮಾತಿನಲ್ಲಿ ವೇದ-ಪುರಾಣ-ಶಾಸ್ತ್ರ, ಸಾಹಿತ್ಯ – ಜನಪದ ರೀತಿ ಎಲ್ಲ ಹಾದು ಹೋಗುತ್ತದೆ. ಕನ್ನಡವಾಙ್ಮೀಯದ ಉತ್ತುಂಗ ಸಿದ್ಧಿಗಳಲ್ಲಿ ಅರ್ಥಗಾರಿಕೆಯು ಒಂದಾಗಿದೆ. ಇದು ಶರಣರ ವಚನಗಳಂತೆ, ಪಂಪ ನಾರಣಪ್ಪರಂತೆ, ಕನಕ, ಪುರಂದರರ ಹಾಡುಗಳಂತೆ. ಯಕ್ಷಗಾನ ವಾಙ್ಮಯೋಪನಿಷತ್ತು. ಜೀವಂತ ನಾಟಕ, ಪುರಾಣದ ನಾಟ್ಯೋಜ್ಜೀವನ.

ಪ್ರಸಂಗದ ಚೌಕಟ್ಟು ತುಂಬ ಸ್ಥೂಲ. ಕಥಾರೇಖೆ ಮಾತ್ರ ಅನ್ನಬಹುದು. ಅದರೊಳಗೆ ಅರ್ಥದಾರಿಯ ವಿಹಾರ- ವಿಶಾಲ. ಅರ್ಥಕಲ್ಪನೆ ಅಮಿತ. ರಾಮ-ರಾವಣರ, ಕೃಷ್ಣ-ಕೌರವರ ವಾದಗಳು, ರಾಮಸೀತೆ, ಭೀಮ ದ್ರೌಪದಿಯರ ಸಲ್ಲಾಪಗಳು, ಭೀಷ್ಮನ ಭಕ್ತಿ ನಿವೇದನೆ, ಕರ್ಣನ ದುರಂತ ಸ್ವಗತ, ಕೌರವನ ರಣಕಾವ್ಯಗಳೆಲ್ಲ ತಾಳಮದ್ದಲೆಯ ನಿತ್ಯ ನೂತನ ಮಹಾಕಾವ್ಯಗಳು. ದಿನ ದಿನವೂ ಹೊಸತಾಗಿ ಕಾಲ ಸ್ಥಳ, ಪಾತ್ರದಾರಿಗಳ ಬದಲಾವಣೆಯೊಂದಿಗೆ ಅಸಂಖ್ಯ ರೂಪಗಳನ್ನು ಹೊಂದುವ ಅನಂತ ಪಾಠನಾಟಕ.

ಇಲ್ಲಿ ಪ್ರಸಂಗದ ಆಧಾರದಲ್ಲಿ ಕಲಾವಿದರ – ಪಾತ್ರಗಳ ಸ್ವಂತ ಮಾತು ನಡೆಯುವುದು. ಹೌದು. ಆದರೆ ಅದು ನೂತನ ಪುರಾಣ ಸೃಷ್ಟಿ. ಕಾರಣ ಒಬ್ಬೊಬ್ಬ ಅರ್ಥದಾರಿಯು ರಾಮ, ವಾಲಿ, ಶೂರ್ಪನಖಿ, ಸೀತೆ, ಕೃಷ್ಣ, ರಾವಣರು ಬೇರೆ ಬೇರೆ ಸೃಷ್ಟಿ. ಪಾಂಡಿತ್ಯ, ಕಲ್ಪನೆ, ಸ್ವಂತಿಕೆ, ವ್ಯಕ್ತಿತ್ವಗಳಿಗನುಸರಿಸಲು ಅಪಾರ ಸಾಧ್ಯತೆ.

ಪುರಾಣ ವಿಸ್ತಾರ, ನೂತನ ಪುರಾಣ ಸೃಜನ, ಪುರಾಣವನ್ನು ಬಲವಾಗಿ ಪ್ರಶ್ನಿಸಿ ಬೆಳೆಸುವ, ಭಂಜನೆ-ರಚನೆಗಳ ಕ್ರಿಯೆಗಳು ಇಲ್ಲಿ ನಿತ್ಯ, ಸಾಮಾನ್ಯ, ಸಲೀಸು.

ವಿವಿಧ ಕಥಾ ಸನಿವೇಷಗಳ ಆಶುನಾಟಕದ ಸೃಷ್ಟಿಯು ಒಂದು ಕುತೂಹಲಕರ ಪ್ರಕ್ರಿಯೆಯಾಗಿದೆ. ಪ್ರಸಂಗ ಕಾವ್ಯದ ಪದ್ಯ, ಅದರ ಗಾಯನ ಸ್ವರೂಪ, ಪಾತ್ರದಾರಿ ಕಲಾವಿದನ ಅಧ್ಯಯನ ಸಂಸ್ಕಾರ, ಜೊತೆಗೆ ಆ ಆ ದಿನದ ಮನೋಧರ್ಮ, ಸಹ ಕಲಾವಿದನ ಪ್ರೇರಣೆ, ಮೊದಲಾದವು ಎಲ್ಲ ಸೇರಿ ಪಾತ್ರಗಳ ಮಾತು ಅವುಗಳ ದಿಕ್ಕು ದೆಸೆಗಳನ್ನು ನಿರ್ಣಯಿಸುತ್ತವೆ. ಅರ್ಥದಾರಿಯೆಂಬ ಕಲಾವಿದರು ಪುರಾಣವನ್ನು ವರ್ತಮಾನದಲ್ಲಿ ನಾಟಕವಾಗಿಸುತ್ತಾ ದರ್ಶಿಸಿ ಪ್ರದರ್ಶಿಸುತ್ತಾರೆ.

ಸಾಮಾನ್ಯ ಹಳ್ಳಿಗರಿಂದ ತೊಡಗಿ, ವಿದ್ವಾಂಸರ ತನಕ ಈ ಕೆಲಸವನ್ನು ಶತಮಾನಗಳಿಂದ ಮಾಡುತ್ತ ಬಂದ ಕಲಾವಿದರು ಅದೆಷ್ಟು, ಲೆಕ್ಕವಿಲ್ಲ. ಈ ಕಳೆದ ಐವತ್ತು ವರ್ಷಗಳಲ್ಲಿ ತಾಳಮದ್ದಲೆಯು ರಂಗದಲ್ಲಿ ಹೊಸ ಉಲ್ಲಾಸ, ಹೊಸ ಬೆಳೆ. ಸಂಖ್ಯೆ-ಕ್ಷೇತ್ರಗಳೆರಡರಲ್ಲೂ ಈ ಕತೆ ಬಹಳ ವಿಸ್ತರಿಸಿದೆ. ಆದರೂ, ಎಲ್ಲ ಕನ್ನಡಿಗರಿಗೂ ಸುಲಭವಾಗಿ ತಲಪಬಲ್ಲ. ಈ ಪ್ರಕಾರವನ್ನು ನಾವಿನ್ನೂ ಕರ್ನಾಟಕದಲ್ಲಿ ಎಲ್ಲೆಡೆ ಹರಡಿ ಹಬ್ಬಿಸಿಲ್ಲ. ಮನ ಮುಟ್ಟಿಸಿಲ್ಲ.

error: Content is protected !!
Share This