ಪಚ್ಚನಾಡಿಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿನ ಭೂಕುಸಿತದಿಂದ ಅಪಾಯಕ್ಕೆ ಸಿಲುಕಿರುವ ಸಾಹಿತಿ ಮಂದಾರ ಕೇಶವ ಭಟ್‌ ಅವರ ಮನೆಯನ್ನು ಸಂರಕ್ಷಿಸಿ, ಸ್ಮಾರಕ ನಿರ್ಮಿಸುವಂತೆ ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.ಮಂದಾರ ಕೇಶವ ಭಟ್‌ ಕನ್ನಡ, ತುಳು ಮತ್ತು ಮರಾಠಿ ಭಾಷೆಯಲ್ಲಿ ಪ್ರಸಿದ್ಧ ಬರಹಗಾರರಾಗಿದ್ದು, ಭಾಷಾ ಸಮ್ಮಾನ್‌ ಪ್ರಶಸ್ತಿ ಪಡೆದ ಮೊದಲ ಸಾಹಿತಿ. ತುಳು ಭಾಷೆಯಲ್ಲಿ ಅವರು ರಚಿಸಿದ್ದ ‘ಮಂದಾರ ರಾಮಾಯಣ’ ತುಳು ಸಾಹಿತ್ಯ ಕ್ಷೇತ್ರದ ಪ್ರಮುಖ ಕೃತಿಯಾಗಿದೆ.ಸೋಮವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ,‘ಕಳೆದ ಮಳೆಗಾಲದಲ್ಲಿ ಪಚ್ಚನಾಡಿಯಲ್ಲಿ ಸಂಭವಿಸಿದ ಕುಸಿತದಿಂದ ಶತಮಾನದ ಹಿಂದಿನ ಮಂದಾರ ಕೇಶವ ಭಟ್‌ ಮನೆಗೆ ಹಾನಿಯಾಗಿದೆ. ಮನೆಯ ಸುತ್ತಲೂ ಘನತ್ಯಾಜ್ಯ ಆವರಿಸಿರುವುದರಿಂದ ದುರಸ್ತಿ ಮಾಡುವುದೂ ಸಾಧ್ಯವಾಗುವುದಿಲ್ಲ’ ಎಂದರು. ಈ ಮನೆಯನ್ನು 1919ರಲ್ಲಿ ನಿರ್ಮಿಸಿದ್ದು, 2019ರಲ್ಲಿ ಶತಮಾನ ತುಂಬಿತ್ತು. 2019ರಲ್ಲಿ ಕೇಶವ ಭಟ್‌ ಅವರ ಜನ್ಮದಿನೋತ್ಸವದ ಆಚರಣೆಗೆ ಸಾಹಿತ್ಯ ಪ್ರೇಮಿಗಳು ಮತ್ತು ಲೇಖಕರ ಕುಟುಂಬದವರು ಸಿದ್ಧತೆ ನಡೆಸುತ್ತಿದ್ದಾಗಲೇ ತ್ಯಾಜ್ಯದ ರಾಶಿ ಕುಸಿತದ ದುರಂತ ಸಂಭವಿಸಿತು. ಲೇಖಕರ ಮನೆಯನ್ನು ಸ್ಥಳಾಂತರಿಸಿ, ಸ್ಮಾರಕವಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.

‘ಒಂದು ಶತಮಾನದಷ್ಟು ಹಳೆಯದಾದ ಕೇಶವ ಭಟ್‌ ಮನೆ ತುಳುನಾಡಿನ ವಾಸ್ತು ಶೈಲಿಗೆ ಉದಾಹರಣೆಯಾಗಿ ಇತ್ತು. ಮನೆಯಲ್ಲಿ ಧರ್ಮ ಚಾವಡಿಯೂ ಇದ್ದು, ಕೋಲ ಮತ್ತಿತರ ಸಂದರ್ಭಗಳಲ್ಲಿ ಇಲ್ಲಿ ಧಾರ್ಮಿಕ ವಿಧಿಗಳನ್ನು ನೆರವೇರಿಸಲಾಗುತ್ತಿತ್ತು. ತ್ಯಾಜ್ಯದ ರಾಶಿಯ ಕುಸಿತದಿಂದ ಮಂದಾರದ 27 ಮನೆಗಳು, ದೈವಸ್ಥಾನ, ನಾಗಬನ, 12 ಎಕರೆಕೃಷಿ ಜಮೀನಿಗೆ ಹಾನಿಯಾಗಿದೆ. ಎಲ್ಲ ಮನೆಗಳ ಪುನರ್‌ ನಿರ್ಮಾಣ ಮಾಡಿ, ದೈವಸ್ಥಾನ ಮತ್ತು ನಾಗಬನಗಳನ್ನೂ ಪುನರುಜ್ಜೀವನ ಮಾಡಬೇಕು. ಕುಪ್ಪಳಿಯಲ್ಲಿ ಕುವೆಂಪು ಅವರ ಮತ್ತು ಧಾರವಾಡದಲ್ಲಿ ಬೇಂದ್ರೆ ಅವರ ಸ್ಮಾರಕಗಳನ್ನು ನಿರ್ಮಿಸಿರುವ ಮಾದರಿಯಲ್ಲೇ ಮಂದಾರದಲ್ಲಿ ಕೇಶವ ಭಟ್‌ ಸ್ಮಾರಕವನ್ನೂ ನಿರ್ಮಿಸಬೇಕು’ಎಂದು ಜೋಶಿ ಒತ್ತಾಯಿಸಿದರು.

error: Content is protected !!
Share This