ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಅಮೇರಿಕಾ ಘಟಕದ ಆರಂಭೋತ್ಸವ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗಿ ಯಕ್ಷಗಾನ ಕಲಾವಿದರು ಸೇರಿದಂತೆ ಸುಮಾರು 36 ಮಂದಿ ಫೌಂಡೇಶನ್‌ನ ಸದಸ್ಯರು ಮತ್ತು ಹಿತೈಷಿಗಳು ಅಮೆರಿಕ ಯಾತ್ರೆ ಕೈಗೊಂಡರು. ಇದಕ್ಕೆ ಮೂಲ ಕಾರಣರಾದವರು ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಭಾಗವತ ಪಟ್ಲ ಸತೀಶ್‌ ಶೆಟ್ಟಿ ಮತ್ತು ಅಮೆರಿಕದ ನ್ಯೂಜೆರ್ಸಿಯಲ್ಲಿರುವ ಪುತ್ತಿಗೆ ಮಠ ಶ್ರೀ ಕೃಷ್ಣ ವೃಂದಾವನದ ಕಾರ್ಯನಿರ್ವಹಣಾಧಿಕಾರಿ ವಿ|ಯೋಗೇಂದ್ರ ಭಟ್ಟ ಉಳಿ.

ನ್ಯೂಜೆರ್ಸಿಯಲ್ಲಿ ಪುತ್ತಿಗೆ ಶ್ರೀಗಳು ಸ್ಥಾಪಿಸಿದ ಶ್ರೀಕೃಷ್ಣ ವೃಂದಾವನ ದೇಗುಲದ ಸಭಾಂಗಣದಲ್ಲಿ ಜುಲೈ 20ರಂದು ಪಟ್ಲ ಸತೀಶ್‌ ಶೆಟ್ಟರ ನೇತೃತ್ವದಲ್ಲಿ ಶ್ರೀಕೃಷ್ಣ ಲೀಲೆ-ಕಂಸವಧೆ ಯಕ್ಷಗಾನ ಪ್ರದರ್ಶನ ಜರಗಿತು.ಮರುದಿನ ಕರಾವಳಿಯ ಯಕ್ಷಗಾನ ಇತಿಹಾಸದಲ್ಲೊಂದು ಮಹತ್ವದ ಘಟನೆಯೆಂಬಂತೆ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ 34ನೇ ಘಟಕ ಅಮೆರಿಕದಲ್ಲಿ ಉದಿಸಿತು. ಇದರಂಗವಾಗಿ ಶ್ರೀನಿವಾಸ ಕಲ್ಯಾಣ ಯಕ್ಷಗಾನವನ್ನು ಪ್ರದರ್ಶಿಸಲಾಯಿತು. ಈ ಸಂದರ್ಭ ನಾವೂ ಯಕ್ಷಗಾನ ವೇಷಧಾರಿಗಳಾಗಿ ರಂಗಸ್ಥಳವೇರಿದ್ದು ಒಂದು ವಿಶೇಷ ಅನುಭವ. ಈ ಲೇಖಕನೂ ಸೇರಿದಂತೆ ಪ್ರೊ| ಎಂ.ಎಲ್‌. ಸಾಮಗ, ಕದ್ರಿ ನವನೀತ ಶೆಟ್ಟಿ, ಅಜಿತ್‌ಕುಮಾರ್‌ ಹೆಗ್ಡೆ ಶಾನಾಡಿ, ಪೂವಪ್ಪ ಶೆಟ್ಟಿ ಅಳಿಕೆ, ಚಂದ್ರಶೇಖರ ಧರ್ಮಸ್ಥಳ, ಪ್ರಶಾಂತ ಶೆಟ್ಟಿ ನೆಲ್ಯಾಡಿ, ಮಹೇಶ್‌ ಮಣಿಯಾಣಿ, ಮೋಹನ ಬೆಳ್ಳಿಪ್ಪಾಡಿ, ಸುಮಂತ್‌ ಭಟ್‌ ಮತ್ತು ಕು| ಸ್ಫೂರ್ತಿ ಪೂಂಜ ಪಾತ್ರಧಾರಿಗಳಾಗಿದ್ದು ಪಟ್ಲ ಸತೀಶ್‌ ಶೆಟ್ಟಿ, ಪದ್ಯಾಣ ಜಯರಾಮ ಭಟ್‌ ಹಾಗೂ ಪದ್ಮನಾಭ ಉಪಾಧ್ಯಾಯರ ಹಿಮ್ಮೇಳ ಸಾಂಗತ್ಯ ಅನಿವಾಸಿ ಭಾರತೀಯರ ಮನಗೆದ್ದಿತು.

ಕರಾವಳಿಯ ಯಕ್ಷಗಾನ ಸೀಮೋಲ್ಲಂಘನೆ ಮಾಡಿ ದಶಕಗಳೇ ಕಳೆದರೂ, ಅಮೆರಿಕದಂತಹ ಪ್ರಮುಖ ರಾಷ್ಟ್ರದಲ್ಲಿ ಪಟ್ಲ ಫೌಂಡೇಶನ್‌ ತನ್ನ ಶಾಖೆ ತೆರೆದುದು ಒಂದು ಮಹತ್ವದ ಘಟನೆ ಎನ್ನಬಹುದೇನೊ. ಈ ಯಕ್ಷಯಾನದಲ್ಲಿ ಕಲಾವಿದರು ಮಾತ್ರವಲ್ಲದೆ ಬಹು ಸಂಖ್ಯೆಯ ಅಭಿಮಾನಿಗಳೂ ಪಾಲ್ಗೊಂಡು ಕಡಲಾಚೆ ನೆಲಸಿರುವ ತುಳು-ಕನ್ನಡಿಗರ ಯಕ್ಷಗಾನ ಪ್ರೀತಿಗೆ ಸಾಕ್ಷಿಯಾದುದು ಕೂಡ ಅಷ್ಟೇ ಮಹತ್ವಪೂರ್ಣವಾದುದು.

ಭಾಸ್ಕರ ರೈ ಕುಕ್ಕುವಳ್ಳಿ

(ಉದಯವಾಣಿ )

error: Content is protected !!
Share This