ದೇರಾಜೆ ಸೀತಾರಾಮಯ್ಯ ಸಂಸ್ಮರಣ ಸಮಿತಿಯ ನೇತೃತ್ವದಲ್ಲಿ ಸಿದ್ಧಗೊಂಡ ‘ದೇರಾಜೆ ಸೀತಾರಾಮಯ್ಯ ನೆನಪು ನೂರೆಂಟು’ ಎಂಬ ಸಂಸ್ಮರಣಾ ಗ್ರಂಥ ಮತ್ತು ಮರು ಮುದ್ರಣಗೊಂಡ ದೇರಾಜೆ ಅಭಿನಂಧನಾ ಗ್ರಂಥ ‘ರಸಋಷಿ’ ಯ ಲೋಕಾರ್ಪಣೆಯು ದಿನಾಂಕ 14-10-2023ರ ಮಂಗಳವಾರದಂದು ಶ್ರೀ ಮಠದಲ್ಲಿ ಸಂಪನ್ನಗೊಂಡಿತು.

ಕಾಸರಗೋಡಿನ ಎಡನೀರು ಮಠದ ಆಶ್ರಯದಲ್ಲಿ ಮತ್ತು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಟಾನದ ಸಂಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಅನುಗ್ರಹ ಸಂದೇಶ ನೀಡುತ್ತಾ  “ದೇರಾಜೆ ಸೀತಾರಾಮಯ್ಯನವರು ಓರ್ವ ಅಪರೂಪದ ಕಲಾವಿದ. ಭಾವನಾತ್ಮಕ ಮತ್ತು ಮಾನವೀಯ ನೆಲೆಗಟ್ಟಿನಲ್ಲಿ ಯಾವುದೇ ಪಾತ್ರಕ್ಕೂ ಅರ್ಥ ಮಾತಾಡುವ ಸಾಮರ್ಥ್ಯ ಹೊಂದಿದ್ದ ಶ್ರೇಷ್ಠ ಸಾಹಿತಿ ಮತ್ತು ಕಲಾವಿದ. 1971ರಲ್ಲಿಯೇ ಸಾರ್ವಜನಿಕವಾಗಿ ಅರ್ಥ ಹೇಳುವುದನ್ನು ನಿಲ್ಲಿಸಿದ್ದರೂ ನಮ್ಮ ಮಠದಲ್ಲಿ ಮಾತ್ರ ಕೊನೆವರೆಗೂ ಅರ್ಥ ಹೇಳಿದ್ದಾರೆ. ದೇರಾಜೆಯವರು ಅರ್ಥ ಹೇಳುತ್ತಾ ಇದ್ದಾಗ, ಅವರಿಗೆ ಗಂಟಲು ಕೆರೆತ ಉಂಟಾಗದಂತೆ,  ತನ್ನ ಪೂರ್ವಾಶ್ರಮದಲ್ಲಿ ಅವರಿಗೆ ಉಪ್ಪು ತಂದು ಕೊಡುತ್ತಿದ್ದೆ. ಆ ಉಪ್ಪಿನ ಋಣದ ನಂಟು, ಈ ಗ್ರಂಥ ಲೋಕಾರ್ಪಣೆಗೆ ಕಾರಣವಾಯ್ತೋ ಏನೋ…!!  ಅಲ್ಲದೇ ನಮ್ಮ ಹಿರಿಯ ಗುರುಗಳಾದ ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀಯವರ ಪರಮಾತ್ಮ ಶಿಷ್ಯ ಆಗಿದ್ದರು. ದೇರಾಜೆಯವರ ಕುರಿತಾದ ಗ್ರಂಥ ಲೋಕಾರ್ಪಣೆ  ನಮ್ಮ ಮಠದಲ್ಲೇ ಆಗುತ್ತಿರುವುದು ನಮಗೆ ಬಹಳ ಸಂತಸದ ವಿಚಾರ ಎಂದರು.“

ಗ್ರಂಥ ಲೋಕಾರ್ಪಣೆಯು ಸಾಮಾನ್ಯವಾಗಿರದೆ ವಿಶಿಷ್ಟವಾಗಿ, ಔಚಿತ್ಯಪೂರ್ಣವಾಗಿತ್ತು. ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಬಣ್ಣದ ಕಾಗದದೊಳಗೆ ಸುತ್ತಿಟ್ಟಿದ್ದ  ಗ್ರಂಥಗಳನ್ನೊಳಗೊಂಡ ಆಕರ್ಷಕ ರಟ್ಟಿನ ಪೆಟ್ಟಿಗೆಯನ್ನು  ಹೊರತೆಗೆದು ಅದರೊಳಗಿದ್ದ ಎರಡು ಗ್ರಂಥಗಳನ್ನು ಅನಾವರಣಗೊಳಿಸಿ ಅದನ್ನು ಸಂಪಾದಕರಿಗೆ ಹಸ್ತಾಂತರಿಸಿದರು. ನಂತರ ಸಂಪಾದಕರು ಗ್ರಂಥಗಳನ್ನು ಶ್ರೀಗಳವರಿಗೆ, ಸಭಾಧ್ಯಕ್ಷರಿಗೆ ಮತ್ತು ವೇದಿಕೆಯಲ್ಲಿದ್ದ ಅತಿಥಿಗಳಿಗೆ ಸಮರ್ಪಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ. ಟಿ. ಶ್ಯಾಮಭಟ್ “ದೇರಾಜೆಯವರು ಜ್ಞಾನಪೀಠ ಪ್ರಶಸ್ತಿಗೆ ಎಲ್ಲಾ ರೀತಿಯಲ್ಲೂ ಯೋಗ್ಯರಾಗಿದ್ದವರು. ಅವರ ಅರ್ಥಗಾರಿಕೆ ವಿಶಿಷ್ಟ ಮತ್ತು ವಿಭಿನ್ನ.” ಎಂದರು.

ದೇರಾಜೆ ಸಂಸ್ಮರಣಾ ಭಾಷಣವನ್ನು ಹಿರಿಯ ಅರ್ಥದಾರಿ, ದೇರಾಜೆ ಶಿಷ್ಯ ಶ್ರೀ ಉಡ್ವೇಕೋಡಿ ಸುಬ್ಬಪ್ಪಯ್ಯನವರು ಮಾಡಿದರು. ದೇರಾಜೆ ಸಂಸ್ಮರಣಾ ಸಮಿತಿಯ ಅಧ್ಯಕ್ಷ ಶ್ರೀ ಜಿ.ಕೆ. ಭಟ್ ಸೇರಾಜೆ ಪ್ರಸ್ತಾವನೆಗೈದರು. ಗ್ರಂಥದ ಕುರಿತಾಗಿ ಸಂಪಾದಕ ಶ್ರೀಕರ ಭಟ್ ಮರಾಟೆ ಮಾತಾಡಿದರು. ಇದೇ ಸಂದರ್ಭದಲ್ಲಿ ಗ್ರಂಥ ರಚನಾ ಕಾರ್ಯದಲ್ಲಿ ಸಹಕರಿಸಿದ ಜಯರಾಮ ಅಳಿಕೆ ಹಾಗೂ ಕೊಕ್ಕಡ ವೆಂಕಟರಮಣ ಭಟ್ ಇವರನ್ನು ಸನ್ಮಾನಿಸಲಾಯಿತು.

ಕಲಾವಿದ ಹರೀಶ ಬಳoತಿಮೊಗರು ನಿರ್ವಹಿಸಿದ ಕಾರ್ಯಕ್ರಮದಲ್ಲಿ ದೇರಾಜೆಯವರ ಮರಿಮಗಳು ಕುಮಾರಿ ನೀಹಾರಿಕಾ ದೇರಾಜೆ ಪ್ರಾರ್ಥನಾ ಗೀತೆ ಹಾಡಿದರು. ಪ್ರಸಿದ್ಧ ಅರ್ಥಧಾರಿ ಹಾಗೂ ಸಾಹಿತಿ ಶ್ರೀ ರಾಧಾಕೃಷ್ಣ ಕಲ್ಚಾರ್ ಸ್ವಾಗತಿಸಿ, ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಟಾನದ ಅಧ್ಯಕ್ಷ ಶ್ರೀ ರಾಮಕೃಷ್ಣ ಮಯ್ಯ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಶ್ರೀ ದಿವಾಕರ ಹೆಗಡೆ ಅವರಿಂದ “ಕನಕ ಜಾನಕಿ” ಎಂಬ ಏಕವ್ಯಕ್ತಿ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ವಿದ್ವಾನ್ ಗಣಪತಿ ಭಟ್ ಯಲ್ಲಾಪುರ, ಮದ್ದಳೆಯಲ್ಲಿ ಶ್ರೀ ಎ. ಪಿ. ಪಾಠಕ್ ಅವರು ಸಹಕರಿಸಿದರು. ಈ ಕಾರ್ಯಕ್ರಮ ಬಹಳ ಹೃದ್ಯವಾಗಿ ಮೂಡಿ ಬಂದಿತು.

error: Content is protected !!
Share This