ಯಕ್ಷಗಾನ ಎಂದರೆ ವೀರರಸವೇ ಪ್ರಾಧಾನ್ಯ. ಅಬ್ಬರದ ಚೆಂಡೆ ಸದ್ದು ಇಲ್ಲವಾದರೆ ಆಟ ರೈಸುದಿಲ್ಲ ಎಂದು ಹಲವರ ಅಭಿಪ್ರಾಯವಿದೆ. ಪೂರ್ಣಪ್ರಮಾಣದ ಆಟದಲ್ಲಿ ಇರುಳಿಂದ ಮುಂಜಾವಿನವರೆಗೆ ಇರುವ ವಿವಿದ ಜಾವಗಳಲ್ಲಿ ಇಂತಹುದೇ ಸನ್ನಿವೇಶ ಇರಬೇಕು. ತಡರಾತ್ರಿ ಹನ್ನೆರಡು ಗಂಟೆಯಿಂದ ನಾಲ್ಕು ಗಂಟೆ ಅವಧಿಯ ಆಟ ಎಲ್ಲದಕ್ಕಿಂತಲೂ ಪ್ರಾಧ್ಯಾನ್ಯವಿರುವ  ಭಾಗ. ಹಾಗಿದ್ದರೂ ಇಲ್ಲಿ ಅಬ್ಬರದ ಚೆಂಡೆಯ ಬಳಕೆ ತುಂಬ ಕಡಿಮೆ  ಎಂದು ಹೇಳಬಹುದು. ಸಾಮಾನ್ಯಾವಾಗಿ ಮುಂದಿನ ಸಾಲುಗಳಲ್ಲಿ  ಕುಳಿತುಕೊಳ್ಳುವ ರಸಿಕರ ಅಭಿರುಚಿಯಂತೆ ಆಟ ನಡೆಯುತ್ತದೆ. ಅಥವಾ ಮುಂದಿನ ಸಾಲಿನ ಪ್ರೇಕ್ಷಕನು ಇದಕ್ಕೆ ಸಿದ್ದವಾಗಿರುತ್ತಾನೆ.  ಪ್ರಧಾನ ಭಾಗವತ ಹಾಗೆ ಪ್ರಧಾನ ವೇಶಧಾರಿ ಹೀಗೆ ಮೇಳದ ಪ್ರಧಾನ ಕಲಾವಿದರು ಹೆಚ್ಚಾಗಿ ರಂಗವೇರುವ ಸನ್ನಿವೇಶಗಳು. ಇಂತಹ ಸನ್ನಿವೇಶಕ್ಕಾಗಿ  ಪ್ರೇಕ್ಷಕ ತುದಿಗಾಲಲ್ಲಿ ಕಾದಿರುತ್ತಾನೆ. ಹಣಕೊಟ್ಟು ಖರೀದಿಸಿದ ಟಿಕೇಟಿನ ಮೌಲ್ಯದ ಸದ್ವಿನಿಯೋಗಕ್ಕಾಗಿ ಕಾದಿರುತ್ತಾನೆ. ಮೊದಲೆಲ್ಲ ಇಂತಹ ಸನ್ನಿವೇಶ ಕಳೆದೊಡನೆ ಆಟದವರು ಟೆಂಟ್ ಬಿಚ್ಚಲು ತೊಡಗುತ್ತಿದ್ದರು. ಚೆಂಡೆ ಪೆಟ್ಟಿನಿಂದ ಅಬ್ಬರಿಸುವ ಪ್ರಸಂಗ ಈ ಸಮಯಕ್ಕೆ ಬಂದಾಗ ಮಂದ್ರವಾಗಿಬಿಡುತ್ತವೆ. ಪ್ರೇಕ್ಷಕರ ನಡುವಿನ ಕಲರವ ಕಡಿಮೆಯಾಗಿ ಬಿಡುತ್ತದೆ. ಒಂದು ರೀತಿಯ ನಿದ್ದೆಯ ಮಂಪರಿಗೆ ಪ್ರೇಕ್ಷಕ ಹತ್ತಿರವಾಗುವಾಗ, ಮನಸ್ಸನ್ನು ಭಾವನೆಯ ತೊಟ್ಟಿಲಲ್ಲಿಟ್ಟು ತೂಗುವ ಕೆಲಸ ಕಲಾವಿದನದ್ದಾಗಿಬಿಡುತ್ತದೆ. ಚೆಂಡೆ ವಾದಕ ಚೆಂಡೆ ಬದಿಗಿರಿಸಿ ಚಹಾ ಅಥವಾ ತಾಂಬೂಲ ಸವಿದು ಮದ್ಲೆಗಾರನಾಗುವ ಸಮಯ. ಭಾಗವತ ತನ್ನ ರಾಗ ತಾಳಗಳ ಜಾಣ್ಮೆಯನ್ನು ಪ್ರದರ್ಶಿಸವ ಸಮಯ.ಇಂತಹ ಅತಿಪ್ರಾಮುಖ್ಯ ಸನ್ನಿವೇಶದಲ್ಲಿ ಚೆಂಡೆ ಗೌಣವಾಗಿದ್ದರೂ ಸಹ ಯಕ್ಷಗಾನ ಎಂದರೆ ಚೆಂಡೆಯ ಸದ್ದು  ನೆನಪಿಗೆ ಬರುವುದು ಮಾತ್ರ ವಿಚಿತ್ರವಲ್ಲವೆ?

ಹಲವು ಪ್ರಸಂಗಗಳು ವಿಶಿಷ್ಟ ಸನ್ನಿವೇಶವನ್ನೆ ಹೆಣೆದು ಶ್ರುತಿಬರಿಸಿ ಇಂತಹ ಜಾವಕ್ಕೆ ಕಾದಿರುತ್ತವೆ. ಹೆಸರು ಮಾತ್ರದಲ್ಲೇ ರೌದ್ರತೆಯನ್ನು ಮೆರೆಯುವ ಗಧಾಯುದ್ದ, ವಾಲಿಸುಗ್ರೀವ ಕಾಳಗ ಅಥವಾ ಕೃಷ್ಣಾರ್ಜುನ ಕಾಳಗ ಮುಂತಾದ ಪ್ರಸಂಗಗಳು ತಮ್ಮ ಭಾವಾನತ್ಮಕ ಸನ್ನಿವೇಶಗಳನ್ನು ಇಂತಹವೇಳೆಯಲ್ಲಿ ಹೊಂದಿಕೊಂಡಿರುತ್ತದೆ.

ಕಳೆದ ವರ್ಷ ಎಡನೀರು ಮೇಳದವರ ಒಂದು ಆಟ ಉದಾಹರಿಸುವುದು ಹೆಚ್ಚು ಸೂಕ್ತ ಅನ್ನಿಸುತ್ತದೆ. ಬೆಂಗಳೂರಿನ ರಂಗ ಮಂದಿರದಲ್ಲಿ ಪ್ರದರ್ಶಿತವಾದ ಅಂದಿನ ಪಾಂಚ ಜನ್ಯ ಪ್ರಸಂಗ. ಹೆಸರು ಕೇಳಿ ಮನಸ್ಸಿನಲ್ಲೇ ಊಹಿಸಿ ಲೆಕ್ಖಾಚಾರ ಹಾಕಬಹುದು. ಕೃಷ್ಣನ ವೇಶ, ಪಂಚಜನನೆಂಬ ಅಸುರನ ವೇಶ. ಆದರೆ ಊಹನೆಗೆ ಮೀರಿ ಅಂದಿನ ಆಟದಲ್ಲಿ ಮಿಂಚಿದ್ದು ಬೇರೆಯದೆ ಪಾತ್ರಗಳು. ಸಾಮಾನ್ಯವಾಗಿ ಗೌಣವಾಗುತ್ತಿದ್ದ ಸನ್ನಿವೇಶವನ್ನು ಅಮ್ಮಣ್ಣಾಯರು ಸೊಗಸಾಗಿ ಹೆಣೆದರು. ಸಾಂದೀಪನಿ ಮಹರ್ಶಿಯ ಪಾತ್ರ ಅಂದು ಬಹಳವಾಗಿ ಮತ್ತು ಯಶಸ್ವಿಯಾಗಿ ವೈಭವೀಕರಿಸಲಾಯಿತು. ಆ ಸನ್ನಿವೇಶದ ಸೌಮ್ಯ ಪದಗಳು ಕಲಾವಿದನ ಅಭಿನಯ ಸಾಮಾರ್ಥ್ಯವನ್ನು ಒರೆಗೆ ಹಚ್ಚಿ ಹುದುಗಿದ್ದ ಕಲೆಯನ್ನು ಹೊರ ಹೊಮ್ಮಿಸಿತು. ಸೇರಿದ ಪ್ರತೀ ಯೊಬ್ಬ ಪ್ರೇಕ್ಶಕನ ಕಣ್ಣು ತೇವವಾಗಿದ್ದರೆ ಅದು ಪೂರ್ಣವಾಗಿಯೂ ಯಕ್ಷಗಾನದೊಳಗಣ ಸತ್ಯದರ್ಶನ ಮಾತ್ರವಲ್ಲ ಸತ್ವ ದರ್ಶನವೂ ಆಗಿರುತ್ತದೆ.  ಚೆಂಡೆಯ ಸದ್ದು ನಿಶ್ಯಬ್ಧವಾದ ಸನ್ನಿವೇಶಗಳು. ಇಂತಹುದೇ ಸನ್ನಿವೇಶಗಳು ಪೂರ್ಣರಾತ್ರಿಯ ಅವಧಿಯ ಆಟಗಳಲ್ಲಿ ನಿರ್ದಿಷ್ಟ ವೇಳೆಗೆ  ಹೊಂದಿಕೊಂಡು ಭಾವನಾ ಲೋಕಕ್ಕೆ ಪ್ರೇಕ್ಷಕರನ್ನು ಸೆಳೆಯುತ್ತದೆ. ಪೌರಾಣಿಕ ಪಾತ್ರಗಳೇ ಆಗಿದ್ದರೂ ಅವುಗಳು ಭಾವನಾ ಪ್ರಪಂಚಕ್ಕೆ ಸ್ಪಂದಿಸುವ ರೀತಿ ಹಾಗಿರುತ್ತದೆ. ಸಮರ್ಥ ಭಾಗವತ ಹೊಂದಿಕೆಯ ಹಿಮ್ಮೇಳದೊಂದಿಗೆ ಮುಮ್ಮೇಳದ ಸಮರ್ಥ ಕಲಾವಿದರ ಅಂತಃಸತ್ವವನ್ನು ಇಂತಹ ವೇಳೆಯಲ್ಲೇ ಹೊರಗೆಳೆಯ ಬಲ್ಲ. ಯಕ್ಷಗಾನ ಅಬ್ಬರದ ಚೆಂಡೆಯ ಸದ್ದು ಎಂದು ಊಹಿಸುವವರಿಗೆ ಇದು ತೀರ ವ್ಯತಿರಿಕ್ತವಾಗಿರುವಂತೆ ಭಾಸವಾಗುತ್ತದೆ.ಪ್ರಸಂಗ ಸನ್ನಿವೇಶಗಳಿಗೆ ಅದರದ್ದೆ ಅದ ಶಾಸ್ತ್ರೀಯ ಕ್ರಮಗಳು ಯಕ್ಷಗಾನದಲ್ಲಿ ಸರ್ವಗುಣವೂ ಅಡಕವಾಗಿದೆ ಎಂಬುದನ್ನು ತೋರಿಸುತ್ತದೆ.

ಆದರು ಇತ್ತೀಚೆಗೆ ಪ್ರಸಂಗ ನಿರ್ಣಯಿಸುವಾಗ ಈ ಕ್ರಮಗಳ ಬಗ್ಗೆ ಗಮನ ಕಡಿಮೆಯಾಯಿತೆಂದೆ ಅನಿಸುತ್ತದೆ. ಕಲಾವಿದರ ಸಾಮಾರ್ಥ್ಯವನ್ನು ಗಮನಿಸದೆ ಒಟ್ಟು ಅವೈಜ್ಞಾನಿಕವಾಗಿ  ಪ್ರಸಂಗ ನಿರ್ಣಯಿಸುವ ಹಾಗಿರುತ್ತದೆ. ಸಮಯಕ್ಕೆ ಹೊಂದಿಕೊಂಡು ಸನ್ನಿವೇಶಗಳು ಬಂದರೆ ಅಪಸ್ವರವಾಗುವುದಿಲ್ಲ. ಶೃಂಗಾರ ಕರುಣ ವೀರ ಮುಂತಾದ ರಸಗಳ ಸನ್ನಿವೇಶಗಳು ಸಮಯವನ್ನು ಹೊಂದಿಕೊಂಡು ಯಕ್ಷಗಾನದಲ್ಲಿ ಬರುತ್ತದೆ ಎಂದು ನನ್ನ ಅನಿಸಿಕೆ. ನಡು ರಾತ್ರಿಯ ಶಾಂತವಾದ ಮೌನದ ನಡುವೆ ಗಂಭೀರ ಸನ್ನಿವೇಶಗಳು, ಪ್ರಮುಖ ಕಲಾವಿದರಿಗೆ ಮೀಸಲಾಗಿರಿಸುವುದರಿಂದ ಅದಕ್ಕೆಂದೇ ಇರುವ ಪ್ರೇಕ್ಷಕವರ್ಗವಿರುತ್ತದೆ. ಅಮ್ಮಣ್ಣಾಯರಂತಹ ಭಾಗವತರು ಇಂತಹ ಸಮಯದಲ್ಲಿ ಪೂರ್ಣಪ್ರಮಾಣದಲ್ಲಿ ವಿಜ್ರಂಭಿಸಿಬಿಡುತ್ತಾರೆ. ತಮ್ಮ ಸೌಮ್ಯಪದಗಳು ಮೊಳಗಿದಾಗ ನಿಜಕ್ಕೂ ಯಕ್ಷದ ಸಂಚಾರ ಆದಂತೆ ಭಾಸವಾಗುತ್ತ, ಪ್ರೇಕ್ಷಕ ಸಮ್ಮೋಹನಾಸ್ತ್ರದ ಗುರಿಯಾಗಿ ಬಿಡುತ್ತಾನೆ.  ಸಮಯಕ್ಕೆ ತಕ್ಕ ಸನ್ನಿವೇಶದ ಸೃಷ್ಟಿ ಬಹುಶಃ ಯಕ್ಷಗಾನದಂತಹ ಸಮಷ್ಟೀ ಕಲೆಯಲ್ಲಿ ಮಾತ್ರ ಕಾಣಬಹುದೇನೋ? ಆದರು ಯಕ್ಷಗಾನವೆಂದರೆ ಚೆಂಡೆಯ ಸದ್ದು ಮೊದಲಿಗೆ ಸ್ಮೃತಿಪಟಲದಲ್ಲಿ ಬರುವುದು ವಿಚಿತ್ರವಲ್ಲವೆ? ಇಂತಹ ವೈವಿಧ್ಯಮಯ ವೈಶಿಷ್ಟ್ಯಗಳೇ ಯಕ್ಷಗಾನದ ನಿಜವಾದ ಸೆಳೆತಕ್ಕೆ ಕಾರಣ.

(ರಾಜಕುಮಾರ್ ಬೆಂಗಳೂರು)

error: Content is protected !!
Share This