ನಾದಲೋಲ
ಪೊಲ್ಯ ಶ್ರೀ ಲಕ್ಷ್ಮೀನಾರಾಯಣ ಶೆಟ್ಟಿ ಅಭಿನಂದನಾ ಗ್ರಂಥ
ಸಂಪಾದಕರು: ಪ್ರಾ| ಸೀತಾರಾಮ್ ಆರ್. ಶೆಟ್ಟಿ
ಪ್ರಕಾಶಕರು: ಅಜೆಕಾರು ಕಲಾಭಿಮಾನಿ ಬಳಗ ಪ್ರಕಾಶನ, ಮುಂಬಯಿ
ವರ್ಷ : 2009

ನನ್ನಂತಹ ಹಲವರಿಗೆ – ನಮ್ಮ ಪೊಲ್ಯ ಎಂಬುದು ಎರಡು ನೆಲೆಗಳಲ್ಲೂ ನಿಜ. ಯಕ್ಷಗಾನದ ಅಸಾಧರಣ ವರ್ಚಸ್ವಿ, ಅರ್ಥಧಾರಿ, ಮಾರ್ಗದರ್ಶಿ, ಪ್ರೋತ್ಸಾಹಕ ಶ್ರೀ ಪೊಲ್ಯ ದೇಜಪ್ಪ ಶೆಟ್ಟರು ನಮ್ಮವರು, ಹಿರಿಯ ಹಿತೈಷಿ, ಆತ್ಮೀಯ. ಅವರ ಮನೆ ಯಕ್ಷಗಾನ ಕಲಾವಿದರಿಗೆ ಕಲಾಸಕ್ತರಿಗೆ ಒಂದು ಆಪ್ತತೆಯ ತಾಣ.

ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟರಂತೂ ನಮ್ಮ ಗೆಳೆಯ, ನಮ್ಮ ಬಳಗದವರು, ನಮ್ಮವರು. ಅವರ ಸಂಪರ್ಕಕ್ಕೆ ಬಂದವರೆಲ್ಲರಿಗೆ ‘ಇವ ನಮ್ಮವ’ ನೆಂಬ ಭಾವ ಸ್ಫುರಿಸುವಂತಾಗುವುದು ಅವರ ವ್ಯಕ್ತಿತ್ವದ ವಿಶಿಷ್ಟ ಗುಣ. ದೇಜಪ್ಪ ಶೆಟ್ಟರ ಮಕ್ಕಳಲ್ಲೆಲ್ಲ ಆ ಕಲಾಪ್ರೇಮ, ಆತ್ಮೀಯತೆಯ ಗುಣ ಸಹಜವಾಗಿ ಬಂದಿದೆ.

ಮನೆತನದ ಹಿನ್ನೆಲೆಯಿಂದ ಬಂದ ಕಲಾಸಕ್ತಿ, ಪ್ರಾಕೃತಿಕವಾದ ಸ್ವರಸಂಪತ್ತು, ಮೇಲ್ಪಟ್ಟದ ಪ್ರತಿಭೆ, ಅಧ್ಯಯನಶಿಲತೆಗಳಲ್ಲಿ ಲಕ್ಷ್ಮೀನಾರಾಯಣ ಶೆಟ್ಟರು ಬಲಿಷ್ಟವಾದ ಯೋಗ್ಯತೆಯುಳ್ಳವರು. ಗುರು ನೀಲಾವರ ರಾಮಕೃಷ್ಣಯ್ಯನವರಿಂದ, ಮತ್ತಿತರ ಹಿರಿಯರ ಒಡನಾಟದಿಂದ ಪಡೆದ ಹಾಡುಗಾರಿಕೆಯ ಸಂಸ್ಕಾರವನ್ನು, ಸ್ವಂತ ಯೋಗ್ಯತೆ ಸಾಮರ್ಥ್ಯಗಳಿಂದ ಬೆಳೆಸಿಕೊಂಡು, ಭಾಗವತರಾದ ಪೊಲ್ಯರು, ಯಕ್ಷಗಾನದ ನೃತ್ಯ, ಮಾತುಗಾರಿಕೆಗಳನ್ನೂ ಬಲ್ಲವರಾಗಿ, ಒಟ್ಟು ಕಲೆಯ ಪರಿಕಲ್ಪನಾತ್ಮಕವಾದ (Conceptual) ಗ್ರಹಿಕೆ ಉಳ್ಳ ಕಲಾವಿದ. ತಾರುಣ್ಯದಲ್ಲೇ ಒಳ್ಳೆಯ ಕಲಾವಿದನಾಗಿ ಎತ್ತರದ ಸಿದ್ಧಿಯ ಸಾಧ್ಯತೆ ತೋರಿದ ಇವರು, ಬರಿಯ ಹಾಡುಗಾರನಾಗದೆ, ಭಾಗವತನೆನಿಸಿದವರು.

ಪೊಲ್ಯರದು ತುಂಬುನಾದದ, ಆಳವಾದ ಪ್ರಭಾವವುಳ್ಳ ಜೇನುಗೊರಳು. ಸಮೃದ್ಧವಾದ ವಿಸ್ತಾರ (Range) ವಿರುವ ಸ್ವರಸಂಚಾರ. ಒಳ್ಳೆಯ ರಾಗಜ್ಞಾನ ಮತ್ತು ರಾಗಗಳ ಅನ್ವಯದ ಅರಿವು. ಕಸರಿಲ್ಲದ ಇವರ ಮಧುರ ಕಂಠಶ್ರೀ, ಅದರ ನಾಜೂಕಿನ ಬಳಕೆಗಳು, ಸ್ಪಷ್ಟವಾದ ಉಚ್ಛಾರ, ಭಾವದ ಮತ್ತು ಅದರ ವಿವಿಧ ಮಟ್ಟಗಳ ಕುರಿತಾದ ಸೂಕ್ಷ್ಮವಾದ ಜ್ಞಾನ, ಭಾಗವತಿಕೆಯ ತೀಕ್ಷ್ಣತೆಗಳಿಂದ, ಸಾಹಿತ್ಯದ ಪ್ರೌಢವಾದ ಗ್ರಹಿಕೆಯಿಂದ ರೂಪಿತವಾದ ಇವರ ಹಾಡುವಿಕೆ ಒಂದು ಉತ್ಕೃಷ್ಟ ಕಲಾನುಭವವನ್ನು ನೀಡುವಂತಹುದು. ಸ್ವಚ್ಛ, ಚೊಕ್ಕ, ಖಚಿತ, ಆಕರ್ಷಕ ನಿರ್ವಹಣೆ ಪೊಲ್ಯರದು. ತೆಂಕು ಬಡಗುಗಳೆರಡರಲ್ಲೂ ಏಕಪ್ರಕಾರವಾದ ಪ್ರಾವೀಣ್ಯವಿದ್ದ ಇರುವ ಬೆರೆಳೆಣಿಕೆಯ ಭಾಗವತರಲ್ಲೊಬ್ಬರಾಗಿ, ತಾಳಮದ್ದಳೆಯ ಭಾಗವತಿಕೆಯ ಪ್ರತ್ಯೇಕತೆಯನ್ನು ಅರಿತು ಅಳವಡಿಸುವವರಾಗಿ, ಪೊಲ್ಯರು ಯಕ್ಷಗಾನದಲ್ಲಿ ಒಂದು ಪ್ರತ್ಯೇಕ ಯೋಗ್ಯತೆಯನ್ನು ಗಳಿಸಿ, ಜನಮಾನ್ಯರಾದವರು.

ಹಾಡುವಿಕೆ, ಭಾಗವಹಿಸುವಿಕೆಗಳಿಂದ ರಂಗದಲ್ಲಿ, ರಂಗದ ಸುತ್ತ ಜೀವಂತಿಕೆ, ಲವಲವಿಕೆ ತುಂಬಬಲ್ಲ ಪೊಲ್ಯ, ಘನವಾದ ರಂಗ ಅಸ್ತಿತ್ವ ಮತ್ತು ರಂಗ ನಿಯಂತ್ರಣದ ಶಕ್ತಿ ಉಳ್ಳ ಕಲಾವಿದ. ಇವರ ಜನಾಕರ್ಷಣೆ, ತಾರಾ ಮೌಲ್ಯಗಳು ದೊಡ್ಡ ಮಟ್ಟದವು. ಹಾಗೆಯೆ ತನ್ನ ಜನಾಕರ್ಷಣೆಯನ್ನೆ ಕೇಂದ್ರಿಕರಿಸಿ ಭಾಗವತಿಕೆಯನ್ನು ಹಾಡುವಿಕೆಯಾಗಿ, ಹಿಂಜಿ ಹಿಗ್ಗಿಸಿ ಕಾಣಿಸಿದವರಿಲ್ಲ. ರಂಗದ ಅಗತ್ಯ, ಸನ್ನಿವೇಶ, ನಟರ ಅಪೇಕ್ಷೆ, ಸಾಮರ್ಥ್ಯಗಳು ಅವರಿಗೆ ಮುಖ್ಯ.

ರಂಗದಲ್ಲೂ ರಂಗದ ಹೊರಗೂ, ಸಹಜವಾಗಿ ಗುಣ, ಪ್ರಭಾವಗಳಿಂದ ಮನ್ನಣೆ ಗಳಿಸಿದ ಪೊಲ್ಯ ಇವರ ಸಹಜ ನಾಯಕ (natural leader). ಅವರ ಸಲಹೆಗಳು, ತೀರ್ಮಾನಗಳು, ವಸ್ತುನಿಷ್ಠ, ಸಂತುಲಿತ, ನಿಷ್ಪಕ್ಷಪಾತಿ.

ತುಂಬ ಕ್ಷಿಪ್ರವಾದ ಅಸಾಮಾನ್ಯ ಗ್ರಹಣ ಶಕ್ತಿಯುಳ್ಳ ಪೊಲ್ಯ, ಪ್ರೌಢ ಅಭಿರುಚಿ, ಪ್ರೌಢ ಅಭಿಪ್ರಾಯಗಳುಳ್ಳವರು. ಪಾರಂಪರಿಕ ಸೌಂದರ್ಯವನ್ನು, ಪರಿಶ್ರಮ, ಪ್ರತಿಭೆಗಳನ್ನು, ಕೊಡುಗೆ, ನಿಲುಮೆಗಳನ್ನು ಅಭಿವ್ಯಕ್ತಿಯ ಅಂದವನ್ನು ಸರಿಯಾಗಿ ಸೂಕ್ಷ್ಮವಾಗಿ ಗ್ರಹಿಸಬಲ್ಲ ಮತ್ತು ಅದನ್ನು ಅಚ್ಚುಕಟ್ಟಾಗಿ ಹೇಳಬಲ್ಲ ಪ್ರಜ್ಞಾಶಾಲಿ, ವಿಮರ್ಶಕ, ವಿಚಾರ ವಿನಿಮಯದಲ್ಲಿ ನಂಬುಗೆ ಇರುವವರು. ಸಹಕಲಾವಿದರ ಮಟ್ಟವರಿತು ಅವರನ್ನು ಹೊಂದಿಸಿ, ಪ್ರೇರಿಸಿ, ಕಾಣಿಸಿಕೊಡಬಲ್ಲ ಸಮರ್ಥ, ಸಜ್ಜನ ಭಾಗವತ ಉನ್ನತ ಕಲಾವಿದರ ಜತೆ ಅದೇ ಮಟ್ಟಕ್ಕೇರಿ ಅಭಿವ್ಯಕ್ತಿಸಬಲ್ಲ ಗಟ್ಟಿಗ.

ಕನ್ನಡ, ತುಳು, ಹಿಂದಿ, ಸಂಸ್ಕøತ, ಇಂಗ್ಲೀಷ್, ಮರಾಠಿ ಭಾಷೆಗಳ ರಚನೆಗಳನ್ನು ಆ ಭಾಷೆಯ ಬನಿಯೊಂದಿಗೆ ನುಡಿಯಬಲ್ಲ ಪೊಲ್ಯ, ಭಾವಗೀತೆ, ಸಿನಿಮಾ ಗೀತೆಗಳನ್ನು ಚೆನ್ನಾಗಿ ಹಾಡಬಲ್ಲವರು. ಆ ಕ್ಷೇತ್ರಗಳಲ್ಲಿ ಎತ್ತರಕ್ಕೇರಬಹುದಾದ ಹಾಡುಗಾರ. ಅದೇಕೋ ಹಾಗೆ ಅವರು ಬೆಳೆಯಲಿಲ್ಲ. ಯೋಗ್ಯತೆ ಇದ್ದವರಿಗೆಲ್ಲ ಯೋಗ ಇರುವುದಿಲ್ಲ ನಿಜ. ಆದರೆ ಪೊಲ್ಯರಿಗೆ ಇನ್ನೂ ಬಹಳಷ್ಟು ಅವಕಾಶ ಇದೆ. ಯೋಗವೂ ಬಂದೀತು.

ಪೊಲ್ಯರ ಒಡನಾಟವು ಒಂದು ಸಮೃದ್ಧ ಅನುಭವ. ಒಳ್ಳೆಯ ಸಂಭಾಷಣಾ ಪಟುವಾದ ಇವರಲ್ಲಿ ಹಾಸ್ಯಚಟಾಕಿ, ಅನುಭವ ವಿಸ್ತಾರ, ವ್ಯಂಗೋಕ್ತಿ, ಮಸ್ಕಿರಿ, ಜೋಕು, ವಿಶ್ಲೇಷಣೆ ಎಲ್ಲ ಇವೆ. ಆಸಕ್ತಿ ವೈವಿಧ್ಯವಿದೆ. ಸಾಹಿತ್ಯ, ಕಲೆಯಿಂದ ಕ್ರಿಕೆಟ್ ತನಕ, ಸಿನಿಮಾದಿಂದ ಉದ್ಯಮ ಆರ್ಥಿಕ ವಿಚಾರಗಳವರೆಗೆ, ರಾಜಕೀಯದಿಂದ ಧಾರ್ಮಿಕದವರೆಗೆ ವಿಸ್ತಾರವ್ಯಾಪ್ತಿಯಲ್ಲಿ ಚರ್ಚಿಸಬಲ್ಲ ಪೊಲ್ಯ ಸ್ವತಃ ಒಳ್ಳೆಯ ಕ್ರೀಡಾಪಟು. ವಿನಯವಂತರಾಗಿ, ಸ್ವಾಭಿಮಾನಿ ಇವರ ಸ್ನೇಹಶೀಲತೆಯು ಒಂದು ತರಹ ವಿಚಿತ್ರ ರೀತಿಯದು. ಶಿಸ್ತು, ಹಣದ ಲೆಕ್ಕಗಳಲ್ಲಿ ಇವರು ಗೋಶ್ವಾರಿ.

ಇವರ ಪ್ರೋತ್ಸಾಹ, ಔದಾರ್ಯ, ಪ್ರೀತಿ, ಆತಿಥ್ಯಗಳಂತೂ ಪ್ರಸಿದ್ಧ. ಅರ್ಹರಿಗೆ, ಹಲವು ಬಾರಿ: ಅನರ್ಹರಿಗೆ, ಬೇಕಷ್ಟು, ಕೆಲವೊಮ್ಮೆ ಬೇಡದಷ್ಟು ಇವರ ನೆರವು ಸಂದಿದೆ. ಸಂಘಟನೆ, ಖರ್ಚುವೆಚ್ಚ, ನಡೆನುಡಿಗಳಲ್ಲಿ ಇವರು-ಪ್ರಸಿದ್ಧವಾದ ಆಧುನಿಕ.. ‘ಬಿಂದಾಸ್’ ಎಂಬುದಕ್ಕೆ ಜೀವಂತ ದೃಷ್ಟಾಂತ. ಸಮಯಪಾಲನೆ, ಭೇಟಿ, ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆಗಳಲ್ಲಿ ಇವರು ಅವಧೂತ. ಇಂತಹದರಲ್ಲಿ ಇವರ ಮೇಲೆ ನಮಗೆ ಕೋಪ ಬರುವಂತೆ ಆದರೂ, ಒಂದು ಮಾತು, ಒಂದು ನಗೆಯಿಂದ ಅದನ್ನು ಮರೆಯಿಸಬಲ್ಲ ಒಂದು ವಿಲಕ್ಷಣ ಶಕ್ತಿ ಇವರಿಗಿದೆ. ಅತಿ ಅನಿವಾರ್ಯಗಳಲ್ಲಿ ಇವರು ಅಷ್ಟೇ ಖಚಿತ, ಚುರುಕು, ಸಮಯಪಾಲಕನೂ ಹೌದು. ಇದೂ ವಿಚಿತ್ರವೇ.

(1992ರ ದುಬೈ, ಬಹರೈನ್ ಪ್ರವಾಸಗೈದ ಯಕ್ಷಗಾನ ತಂಡದ ಸಂಯೋಜನೆ, ಪ್ರವಾಸ ವ್ಯವಸ್ಥೆಗಳಲ್ಲಿ ನನಗೆ ಅವರು ತುಂಬ ನೆರವಾಗಿದ್ದರು. ಆ ಸಂದರ್ಭದಲ್ಲಿ ಈ ವಿಚಾರ ನನ್ನ ಅನುಭವಕ್ಕೆ ಬಂತು)

ಉಡುಪು, ತೊಡುಗೆಗಳಲ್ಲಿ ಸದಭಿರುಚಿ, ಕಲಾತ್ಮಕತೆಗಳು ಎದ್ದು ಕಾಣುವ ಆಯ್ಕೆ ಅವರದು. ಬದುಕಿನ ಏರಿಳಿತಗಳನ್ನು ದಿಟ್ಟವಾಗಿ ಇದಿರಿಸುವ, ವಿಘ್ನ ವಿಡ್ಡೂರಗಳ ನಡುವೆ ನಗುತ್ತ ಇರಬಲ್ಲವರು ಪೊಲ್ಯ. ವ್ಯಕ್ತಿತ್ವವೂ ತುಂಬ ಆಕರ್ಷಕ ಮತ್ತು ಪ್ರಭಾವಿ. ಪೊಲ್ಯ ಎಂದರೆ ಎಲ್ಲದರಲ್ಲೂ ಒಂದು ಬೇರೆಯೆ ತರಹ.

ಐವತ್ತರ ಅಂಚಿನಲ್ಲಿರುವ ಗೆಳೆಯ ಕಲಾವಿದ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟರಿಗೆ ಸಲ್ಲುತ್ತಿರುವ ಸನ್ಮಾನ, ಗೌರವ ಅವರ ಸಾಧನೆಗೆ, ಸ್ನೇಹಕ್ಕೆ ಸಲ್ಲುವ ಪ್ರೀತಿಯ ಮಾನ್ಯತೆ. ವಿಶೇಷತಃ ಮುಂಬಯಿಯ ಯಕ್ಷಗಾನ ರಂಗಕ್ಕೆ ಅವರಿತ್ತ ಪುಷ್ಟಿಗೆ ಗೆಳೆಯರು ನೀಡುವ ಗುರುತಿಸುವಿಕೆ.

ಈ ಗೌರವ ಪೊಲ್ಯರ ಬದುಕಿನಲ್ಲೊಂದು ತಿರುವಾಗಲಿ, ಭಾಗವತ ಹಾಡುಗಾರ ಪೊಲ್ಯರ ಸಾಧನೆಗೆ ಹೊಸ ಪಥದ ಪ್ರಾರಂಭವಾಗಲಿ. ಅದಕ್ಕೆ ಬೇಕಾದ ಆಯುರಾರೋಗ್ಯ, ಆಸಕ್ತಿ ಉತ್ಸಾಹಗಳು ಅವರಲ್ಲಿ ತುಂಬಿ ಬರಲಿ.

– ಡಾ. ಎಂ. ಪ್ರಭಾಕರ ಜೋಶಿ

error: Content is protected !!
Share This