-ಡಾ.ಎಂ. ಪ್ರಭಾಕರ ಜೋಶಿ

ದಿನಾಂಕ 28.12.2019 42ನೆಯ ವಾದಿರಾಜ ಕನಕದಾಸ ಸಂಗೀತೋತ್ಸವದ ಉದ್ಘಾಟನೆಯನ್ನು ನೆರವೇರಿಸಿದ ಡಾ.ಎಂ.ಪ್ರಭಾಕರ ಜೋಶಿಯವರ ಭಾಷಣದ ಸಾರಾಂಶ.

ನಮ್ಮ ಪ್ರದೇಶದ ಒಂದು ಪ್ರಮುಖ ಸಾಂಸ್ಕೃತಿಕ ಪ್ರಕಲ್ಪವು ಈ ಶ್ರೀ ವಾದಿರಾಜ – ಶ್ರೀ ಕನಕದಾಸ ಸಾಹಿತ್ಯ ಸಂಗೀತ ಉತ್ಸವ. ಸಾಹಿತ್ಯ, ಕಲೆ, ಧರ್ಮ, ದರ್ಶನಗಳನ್ನು ಅನುಸಂಧಾನ ಮಾಡುವ ಒಂದು ಹಬ್ಬ ಮತ್ತು ಚಿಂತನ ಸಂದರ್ಭ.ಸಂಘಟಕರೆಲ್ಲರಿಗೆ ನನ್ನ ಅಭಿನಂದನೆಗಳು.

ಹಿಂದಣ ಕಾಲದ ಸಂತ, ಸಾಧಕ, ಕವಿ, ನೇತಾರ ಮೊದಲಾದವರನ್ನು ಬೇರೆ ಬೇರೆ ರೀತಿಗಳಲ್ಲಿ ನೋಡಬಹುದು. ಅವರ ವಿಚಾರ, ಸಾಹಿತ್ಯ, ವಿಧಾನಗಳನ್ನು ಸಂಶೋಧನೆ, ಭಾಷೆ, ತಾಂತ್ರಿಕ ಸ್ವರೂಪ (ಸಂಗೀತವಾದರೆ ರಾಗ, ತಾಳ, ರಚನಾ ವಿಶೇಷ ಇತ್ಯಾದಿ) ಹಿನ್ನೆಲೆ, ಪ್ರಭಾವಗಳು, ಕೊಡುಗೆಗಳು ಹೀಗೆ ಬೇರೆ ಬೇರೆ ಕೋನಗಳಿಂದ ನೋಡಿ ವಿವರಿಸಿ ವಿಶ್ಲೇಷಿಸಬಹುದು.ಇದು ಬೇಕಾದಷ್ಟು, ಕೆಲವೊಮ್ಮೆ ಬೇಡವಾದಷ್ಟು ನಡೆದೂ ಇದೆ.

ಸಾಧಕ ಮಹನೀಯರ ಕುರಿತಾದ ಆದರ ಇರುವ ಹಾಗೆ ನಿರೀಕ್ಷೆಗಳೂ ವಿವಿಧ ಪ್ರೇರಣಾತ್ಮಕ ಅನುಸಂಧಾನಗಳೂ ತಪ್ಪೇನಲ್ಲ. ಆದರೆ ನಮ್ಮ ಕಾಲದ ಚಿಂತನೆಗಳನ್ನೆಲ್ಲ ಹಿಂದಿನ ವರ ಕೃತಿಗಳಲ್ಲಿ ಕಾಣುವುದು, ನಾವು ಒಪ್ಪಿದ, ಮೆಚ್ಚಿದ, ನಮ್ಮ ಸಮುದಾಯದ ಸಾಧಕನಲ್ಲಿ ‘ಇಂದಿನ’ ಎಲ್ಲವನ್ನೂ ಕಾಣುವುದು, ಹಿಂತಿ ರುಗಿಸಿದ ದೂರದರ್ಶಕ–backward telescope ತರಹದ ಧೋರಣೆಯಾಗುತ್ತದೆ. ಸರ್ವರ ಸಮಾನತೆ, ಕೈಗಾರಿಕಾ ಕ್ರಾಂತಿ, ಬಂಡವಾಳವಾದ, ಮಾರ್ಕ್ಸಿಸಂ ಎಲ್ಲವೂ ನಮ್ಮ ಗ್ರಂಥಗಳಲ್ಲಿವೆ, ಇಂತಿAತಹ ಮಹಾತ್ಮರು ಹೇಳಿಯಾಗಿದೆ ಎಂಬುದು ಅಭಿಮಾನವಾದೀತೇ ಹೊರತು, ವಾಸ್ತವವಾಗಲಾರದು.ಇಂದಿನ ನಮ್ಮ ಬದುಕಿಗೆ ಪ್ರೇರಣೆ ನೀಡಬಲ್ಲ ಜೀವನ ಚಿಂತನೆಗಳು ಹಿಂದಿನವರಲ್ಲಿ, ಆಯಾ ಕಾಲದ ಮಿತಿಯಲ್ಲಿ ಮತ್ತು ಅದನ್ನು ಮೀರಿ, ಅನೇಕಾನೇಕ ಋಷಿ, ಮುನಿ, ಕವಿ ತತ್ತ್ವಜ್ಞರಲ್ಲಿ ಇದ್ದುವು.ಆದುದರಿಂದಲೇ ನಾವು ಈಗ ಹೀಗೆ ಅಥವಾ ಹೀಗಾದರೂ ಇದ್ದೇವೆ.

ಹಾಗೆಂದು – ನಮ್ಮ ಇಂಥವನು ಮಾತ್ರ ಮೊದಲ ಬಾರಿ, ಇಂತಿಂತಹ ಸಿದ್ಧಾಂತವನ್ನು ಹೇಳಿದ್ದು ಎಂಬಂತೆ ಹೇಳುವುದು ಅಭಿನಿವೇಶದ ಆವೇಶ ಅಷ್ಟೆ. ‘ಜಾತಿ ವಿನಾಶವಾಗಬೇಕು, ಜಾತಿ ತೊಲಗಿ ಸಮತೆಬರಲಿ’ ಎಂದುಹೇಳಿದ್ದು ನಮ್ಮ ಜಾತಿಯವನು’ ಎಂಬಂತಹ ಮಾತು ಎಲ್ಲೆಲ್ಲೂ ಕೇಳಿಬರುತ್ತಿರುವ ಕಾಲವಿದು. ಹಾಗಾಗಿ ಯಾವುದನ್ನೆ, ಯಾರನ್ನೆ ಕುರಿತಾಗಿ ಅಧ್ಯಯನಾತ್ಮಕವಾಗಿ academic ಆಗಿ, ಹೇಳುವುದೂ ಕಷ್ಟವೆಂಬಂತೆಯೂ ಆಗಿದೆ. ಈ ಮಧ್ಯೆ ಪ್ರಮಾಣಾಧಾರಿತ, ದಿಟ್ಟ ವಿಶ್ಲೇಷಣೆಗಳೂ ಬರುತ್ತಿವೆ.

ಶ್ರೀ ವಾದಿರಾಜತೀರ್ಥ ಯತಿಗಳು, ಶ್ರೀ ಕನಕದಾಸರು 1500-1600ರ ಕಾಲದಲ್ಲಿ ಇದ್ದವರು. ಕರ್ನಾಟಕದಲ್ಲೂ, ದೇಶಾದ್ಯಂತವೂ ಭಕ್ತಿಮಾರ್ಗದ, ಧಾರ್ಮಿಕ, ಸಾಹಿತ್ಯಿಕ ಚಳವಳಿಯ ಉಬ್ಬರದ ಕಾಲ ಅದು.ದಾಸ ಸಾಹಿತ್ಯದ ಮಧ್ಯಕಾಲವೂ ಹೌದು. ಮಹಾನ್ ಪ್ರತಿಭಾಶಾಲಿ ದಾರ್ಶನಿಕ ಆಚಾರ್ಯ ಮಧ್ವ ರಿಂದ ಪ್ರತಿ ಪಾದಿತವಾದ ತತ್ತ್ವವಾದವು ನರಹರಿತೀರ್ಥ ಶ್ರೀಪಾದರಾಜರಿಂದ  ಕುಡಿವ ಡೆದ ದಾಸಸಾಹಿತ್ಯವೂ ಬೆಳೆದು ಮುಂದೆ  ಜಯತೀರ್ಥ, ವ್ಯಾಸತೀರ್ಥ, ಶ್ರೀಪಾದರಾಜ, ವಾದಿರಾಜ, ಪುರಂದರ, ಕನಕರಿಂದ ಬೆಳೆದು ನಿಂತ ಕಾಲ. ದ್ವೈತಸಿದ್ಧಾಂತವು ಭಕ್ತಿಗೆ ವಿಶೇಷ ಮಹತ್ತ್ವವನ್ನು ಕೊಡುತ್ತದೆ. ‘ದ್ವೈತ’ವೆಂಬುದರಲ್ಲೆ ದೇವ–ಜೀವ ಪ್ರತ್ಯೇಕತೆ, ಭಕ್ತಿಗಳು  ಅಂತರ್ಗತವಾಗಿವೆ. ಇದಕ್ಕೆ ಹಿನ್ನೆಲೆ-ಮುನ್ನೆಲೆಗಳಾಗಿ ವೈದಿಕ-ಪೌರಾಣಿಕ, ಶೈವ, ವೈಷ್ಣವ ಭಕ್ತಿ ವಿಧಗಳೂ, ತಮಿಳುನಾಡಿನಿಂದ ಅಸ್ಸಾಂವರೆಗೆ ಹಬ್ಬಿದ ಸಂತ ಕವಿ ಭಕ್ತರ ಪರಂಪರೆಗಳೂ ಇವೆ. ಆನಂದತೀರ್ಥ ಮಧ್ವರಿಂದಾಗಿ, ಉಡುಪಿಯು ವೈಷ್ಣವ ವೇದಾಂತ ಮತ್ತು ಭಕ್ತಿಮಾರ್ಗಕ್ಕೆ ಪ್ರಮುಖ ಕೇಂದ್ರವಾಯಿತು.

ಈ ವೈಷ್ಣವ ಭಕ್ತಿ ವೇದಾಂತ ಸಂಪ್ರ ದಾಯದಲ್ಲಿ ವಾದಿರಾಜ-ಕನಕದಾಸರ,  ಪುರಂದರ ದಾಸರ ಹಲವು ಮುಖಗಳ ಪ್ರಭಾವ ಮತ್ತು ಗುಣ, ಗಾತ್ರಗಳೆರಡರಲ್ಲೂ ಗಣ್ಯವಾದ ಸಾಹಿತ್ಯ ಸೃಷ್ಟಿಗಳು ವಿಶೇಷವಾದುವುಗಳು. ಅವರಿಬ್ಬರೂ ಸಮಕಾಲೀನರು ಮಾತ್ರವಲ್ಲ ಸಹವರ್ತಿ ಸಹಕಾರಿಗಳೂ ಆಗಿದ್ದರೆಂಬುದು ಐತಿಹ್ಯಗಳಿಂದಲೂ, ಸಂದರ್ಭಗಳಿಂದಲೂ ಸ್ಪಷ್ಟ. ಇಬ್ಬರೂ ಸುಧಾರಕರಾಗಿ, ದಾರ್ಶನಿಕ ಕವಿಗಳಾಗಿ, ಜನರ ಬದುಕನ್ನು ಬದಲಿಸುವ ಛಲಗಾರರಾಗಿ ಸತ್ಕಾರ್ಯಗಳನ್ನು ಗೈದು ಚರಿತ್ರೆಯಲ್ಲಿ ತಮ್ಮ ಸ್ಪಷ್ಟವಾದ ಮುದ್ರೆಗಳನ್ನು ಅಂಕಿಸಿದ್ದಾರೆ. ಇಂದಿನವರೆಗೂ ನಮ್ಮ ನಾಡಿ ನಲ್ಲೂ, ಕರಾವಳಿ ಪ್ರದೇಶದಲ್ಲೂ ಮುಂದು ವರಿದಿರುವ ದರ್ಶನ, ವಿದ್ವತ್ತು ಮತ್ತು ಹರಿದಾಸ ಪರಂಪರೆಯ ಹಿಂದೆ ಇವರ ಬಲವಾದ  ಪ್ರೇರಣೆಗಳಿವೆ. ಯೋಗ್ಯತೆಯಿಂದಲೂ, ಸಾಧನೆಗಳಿಂದಲೂ ಮುಖ್ಯರಾದ ಇವರೀರ್ವರು ಸಹವರ್ತಿಗಳಾಗಿದ್ದುದು ಒಂದು ಯೋಗವೂ ಕೂಡ. ಕಾಲಸಾಮ್ಯದಿಂದಲೂ ಚಿಂತನೆಗಳ ಸಮಾನತೆಯಿಂದಲೂ ಇವರೀರ್ವರ ಸಾಧನೆಗಳಲ್ಲಿ ನಿಕಟತೆ ಕಾಣುತ್ತದೆ. ಈರ್ವರೂ ಶ್ರೇಷ್ಠಮಟ್ಟದ ಕವಿಗಳು, ಭಕ್ತರು ಮತ್ತು ಪ್ರತಿಭಾಶಾಲಿಗಳು. ಕೈಗೆತ್ತಿಕೊಂಡ ವಸ್ತುವಿನ ನಿರ್ವಹಣೆಯಲ್ಲಿ ಹೊಸತನವನ್ನೂ ಪುಷ್ಟಿ ಯನ್ನೂ ತಂದವರು.

ಕನಕರ ಸಾಧನೆಯ ಶ್ರೇಷ್ಠತೆ ಇರುವುದು ಎರಡು ಕಾರಣಗಳಿಂದ- ಒಂದು, ಅವರ ಕೀರ್ತನೆ, ಕಾವ್ಯಗಳಲ್ಲಿ ಅವರು ಸಾಧಿಸಿರುವ ಔನ್ನತ್ಯ, ಅನನ್ಯತೆ ಮತ್ತು ಕೌಶಲಗಳಲ್ಲಿ. ಎರಡು, ಆ ಕಾಲದಲ್ಲಿ ಪ್ರಾಯಃ ಅವರು ಹುಟ್ಟಿ ಬೆಳೆದ  ಜನವರ್ಗ(ಕುರುಬ-ನಾಯಕ?)ದವರಲ್ಲಿ ವಿದ್ಯೆ, ಕಾವ್ಯ, ಅಧ್ಯಾತ್ಮಗಳಲ್ಲಿ ಸಾಧಕನಾಗುವುದಕ್ಕೆ ಇದ್ದ ಸಾಮಾಜಿಕ ಪ್ರತಿಕೂಲಗಳ ನೆಲೆಯಲ್ಲಿ ಅವರ ಸಾಧನೆಯು ಮಹತ್ವದ್ದು. ಈ ಅಂಶ  Margin for adverse situation ಇಲ್ಲದೆಯೂ, ಅವರ ಸಾಧನೆ ಅಸಾಮಾನ್ಯವೇ, ಇಂದಿನ ಆಡಳಿತಾತ್ಮಕ, ರಾಜನೈತಿಕ ಪರಿಭಾಷೆಯಲ್ಲಿ ಹೇಳುವುದಾದರೆ ರಿಸರ್ವೇಶನ್ (ರಿಯಾಯ್ತಿ)  ಇಲ್ಲದೆಯೂ, ಅವರು ಸಾಮಾನ್ಯ General category ಯಲ್ಲೂ, ಉನ್ನತ ಸಾಧಕ ಸ್ಥಾನಕ್ಕೆ ಯೋಗ್ಯರೇ ಹೌದು. ಮತ-ಧರ್ಮ ಸಂಪ್ರದಾಯ, ವೇದಾಂತ, ಭಕ್ತಿ, ಸಾಮಾಜಿಕ ವಿಚಾರ, ಕನ್ನಡ, ಸಂಸ್ಕೃತ ಭಾಷೆ – ಈ ವಿಷಯಗಳಲ್ಲಿ ಕನಕರಿಗೆ ಉತ್ತಮ ಪಾಂಡಿತ್ಯ ಪರಿಶ್ರಮಗಳಿದ್ದುದು ಸ್ಪಷ್ಟ.

ವಾದಿರಾಜರು ಬ್ರಾಹ್ಮಣ, ಯತಿ ಮತ್ತು ಕ್ರಾಂತಿಕಾರಿ ಧಾರ್ಮಿಕ ನಾಯಕ. ಅವರೊಬ್ಬ ತಾತ್ವಿಕ, ರಿಲೀಜಿಯಸ್ ಮತ್ತು ಸಾಹಿತ್ಯಕ ನೇತಾರ. ಈ ದೇಶದ ವಿಶಿಷ್ಟ ಉತ್ಕ್ರಾಂತಿಕಾರ. ಆ ನೆಲೆಯಲ್ಲಿ ಅವರು ಇನ್ನಷ್ಟು ಗಮನಿಸಲ್ಪಡಬೇಕಾದ ವ್ಯಕ್ತಿತ್ವ.

ವಾದಿರಾಜರ ಶ್ರೇಷ್ಠತೆ ಇರುವುದು ಅವರ ಅಸಾಧಾರಣ ಕರ್ತೃತ್ವ ಶಕ್ತಿ. ಸುಧಾರಕ ಮನೋವೃತ್ತಿ, ಅದರ ಪ್ರಾಮಾಣಿಕ ಅನ್ವಯ ಮತ್ತು ಸಾಹಿತ್ಯಕ ಸಾಂಸ್ಕೃತಿಕ ಸಾಧನೆಗಳಲ್ಲಿ. ಆಚಾರ್ಯ ಮಧ್ವರು ಮೌಲಿಕವಾದೊಂದು ನವೀನ ಪ್ರಸ್ಥಾನವನ್ನು ತಂದು ಭಕ್ತಿ ವೇದಾಂತದ ವಿಶಿಷ್ಟ ಆಚಾರ್ಯರೆಂದೆನಿಸಿದವರು. ಅವರ ಸಿದ್ಧಾಂತಕ್ಕೆ ಓರ್ವ ವ್ಯವಸ್ಥಾ ನಿರ್ಮಾಪಕರಾಗಿ  system builder ಆಗಿಯೂ ವಾದಿರಾಜರು ಕಾರ್ಯಗೈದರು. ಅವರಲ್ಲಿದ್ದ ಪಾಂಡಿತ್ಯ, ಸಾಮರ್ಥ್ಯ, ಸಂಘಟನಾ ‘ರಾಜಕೀಯ’ ಶಕ್ತಿ ಮತ್ತು ಕವಿತ್ವಗಳು ಮೇಲು ದರ್ಜೆಯವು.ಅವರ ಒಟ್ಟು ಮಹಾಕಾರ್ಯಗಳಿಗಾಗಿ ಅವರನ್ನು ಭಾವೀಸಮೀರ (ಮುಂದಣ ವಾಯುದೇವ, ಪ್ರಾಣದೇವರ ಮುಂದಿನ ಸ್ಥಾನಕ್ಕೆ ಅರ್ಹ) ಎಂದಿರುವುದು ಸಾಧಕನೊಬ್ಬನನ್ನು ಹೊಗಳುವ ಕ್ರಮ. ಎರಡನೆಯದು ಇಂತಹವ, ಅಭಿನವ ಇಂತಹ, ನಮ್ಮ ಕಾಲದ…ವರು…  ಎಂಬಂತೆ…..

ವಾದಿರಾಜರ ಶಕ್ತಿ ಮತ್ತು ಮಿತಿ ಎರಡೂ ಅವರ ಪೀಠಾಧಿಪತಿತ್ವ. ನಮ್ಮ ಕಾಲದ ಶ್ರೀ ಪೇಜಾವರ ವಿಶ್ವೇಶತೀರ್ಥರ ಹಾಗೆ ಓರ್ವ ಮತೀಯ ಪೀಠಾಧಿಪತಿಯಾಗಿ, ಅವರು ಆ ಚೌಕಟ್ಟನ್ನು ಮೀರಿ, ಸ್ವೀಕರಣ ವಿಸ್ತರಣಗಳನ್ನು ಸಾಧಿಸಿದರೆಂಬುದು, ಇನ್ನಷ್ಟು ಮಾಡಬೇಕಿತ್ತು ಎಂಬುದು ಹೀಗೆ ಎರಡು ಮುಖಗಳ ಪ್ರತಿಕ್ರಿಯೆ ಇರುವುದು ಸಹಜ.

ಹಿಂದಿನ ಸಾಧಕರ ಬಗೆಗೆ ವಿವೇಚಿಸುವಾಗ ಅತಿ ನಿರೀಕ್ಷೆಗಳು ಮತ್ತು ವಿಚಿತ್ರವಾದ ಹೋಲಿಕೆಗಳು, ಕಲ್ಪನೆಗಳು ಎಷ್ಟೋಬಾರಿ, ವಿವೇಚನೆಯನ್ನು ದಾರಿತಪ್ಪಿಸುವುದು ಮಾತ್ರವಲ್ಲ, ಆ ವ್ಯಕ್ತಿಗಳಿಗೂ ಅನ್ಯಾಯವೆಸಗುತ್ತವೆ ಮತ್ತು ಚರ್ಚೆ ಎಂಬುದು ನಮ್ಮ ನಮ್ಮ ನಿಷ್ಠೆಗಳನ್ನು ಸ್ಥಾಪಿಸುವ ಅಜೆಂಡಾ ಆಗಿಬಿಡುತ್ತವೆ. ಓರ್ವ ಮಹನೀಯರು- ಬುದ್ಧ, ಶಂಕರ, ಬಸವೇಶ್ವರ, ಕನಕ, ವಾದಿರಾಜ ಹೀಗೆ ಯಾರೇ ಆದರೂ ಅವರನ್ನು ದೇಶ, ಕಾಲಗಳಲ್ಲೂ, ದೇಶ – ಕಾಲಾತೀತ ಸಾಧ್ಯತೆ – ಸಂದೇಶಗಳಿಂದಲೂ ನೋಡಬೇಕು, ನೋಡಬಹುದು. ಹಾಗೆಂದು ನಮ್ಮ ಅತಿ ನಿರೀಕ್ಷೆಗಳನ್ನು ಉದ್ದಿಷ್ಟ ಸಾಧಿಸುವಿಕೆಗಳನ್ನೂ ಇಟ್ಟುಕೊಂಡು, ಆಯ್ದ ಪ್ರಥಕ್ಕರಣ (selective classification) ಗಳಲ್ಲಿ ಅಳೆದರೆ, ಏನನ್ನೂ ಸಾಧಿಸಬಹುದು. ಆದರೆ ಏನನ್ನೂ ಹೇಳಿದಂತಾಗುವುದಿಲ್ಲ.

-ಇಂತಹ ಅನೇಕಾನೇಕ ಮಂಡನೆಗಳು, ತಿಳಿದವರು ವಿದ್ವಾಂಸರು, ಚಿಂತಕರೆನಿಸಿದವರಿAದ ಬರುತ್ತಲೆ ಇರುತ್ತವೆ. ಕೆಲವು ಸ್ವಲ್ಪ ನಾಜೂಕಾಗಿ, ಸಾಹಿತ್ಯ ವಿಮರ್ಶೆಯ ಭಾಷೆಯಲ್ಲಿ ಬರುತ್ತವೆ, ಮೇಲೆ ಹೇಳಿದಷ್ಟು ಸರಳವಾಗಿ ಅಲ್ಲ, ಅಷ್ಟೆ. ತಾತ್ಪರ್ಯದಲ್ಲಿ ವ್ಯತ್ಯಾಸವಿಲ್ಲ.

ಇಲ್ಲಿ ಒಂದು ಪ್ರಸಿದ್ಧವಾದ ಕತೆ ನೆನಪಿಸಬಹುದು. ಗುರುಗಳಾಗಿದ್ದ ವ್ಯಾಸರಾಯ ತೀರ್ಥರ ಮುಂದೆ (?) ಶಿಷ್ಯರನೇಕರು – ಕನಕ, ಪುರಂದರದಾಸರು ಸೇರಿರುವರು. ಮೋಕ್ಷಕ್ಕೆ ಏನು ಸಾಧನಾಮಾರ್ಗ, ಯಾರು ‘ಮೋಕ್ಷಕ್ಕೆಹೋದಾರು’ಮುಂತಾಗಿ ಚರ್ಚಿಸುತ್ತಿದ್ದರೆಂದೂ, ಅದರಲ್ಲಿ ಕನಕದಾಸರು – ‘ನಾನುಹೋದರೆಹೋದೇನು’ ಎಂದು ಒಗಟಾಗಿ ನುಡಿದರೆಂದೂ, ಆ ಬಳಿಕ ಅದಕ್ಕೆ ನಾನು ಎಂಬ ಭಾವ, ಅಹಂ, ಆಗ್ರಹ ನಾಶವಾದರೆ ಮೋಕ್ಷ ಪ್ರಾಪ್ತಿ ಸಾಧ್ಯ ಎಂಬ ತಾತ್ತ್ವಿಕಾರ್ಥವನ್ನು ತಿಳಿಸಿದರೆಂದೂ ಕತೆ. ಅದರ ಐತಿಹಾಸಿಕತೆ ಏನೇ ಇರಲಿ, ಅದು ಸೂಚಿಸುವ ವಿಚಾರವು ನಮಗೆ ವಾದಿರಾಜ ಕನಕರನ್ನು ಅರ್ಥಮಾಡುವಲ್ಲಿಯೂ ಮಾರ್ಗದರ್ಶನವಾಗಿದೆ.

ಕನಕದಾಸ-ವಾದಿರಾಜರಂತಹವರನ್ನು ಅರ್ಥ ಮಾಡುವಾಗ, ನಮ್ಮ ಕಾಲ, ದೇಶ, ಇಸಂ, ಉದ್ದೇಶಾದಿ ಸಂಸ್ಕಾರ ಮುಂತಾದ ಗ್ರಹಗಳಿಂದ ಆದಷ್ಟು ಪ್ರತ್ಯೇಕಿಸಿ ವಿಮರ್ಶಾ ಔದಾರ್ಯಪೂರ್ವಕ ನೋಡುವುದು ವಿಹಿತ. ಇಲ್ಲವಾದರೆ ‘ಶ್ರೇಷ್ಠ ಆಡಳಿತಗಾರನಾದ ಅಕ್ಬರನುಮೋಟಾರ್‌ಕಾರ್ ಆವಿಷ್ಕಾರಮಾಡಿಸ ಲಿಲ್ಲ. ಚಂದ್ರಗುಪ್ತನ ಬಳಿ, ಏನಿದ್ದರೇನು, ಕಂಪ್ಯೂಟರ್ ಇರಲಿಲ್ಲವಲ್ಲ? ’‘ವೇದ ಕಾಲದಲ್ಲಿ ಬಾಂಬುಗಳಿದ್ದುವು,’ – ಮೊದಲಾಗಿ ಹೇಳಿದಂತಾಗುತ್ತದೆ. ಆ ಕಾಲದ ಮಿತಿಯಲ್ಲಿ ಅವರ ಚಿಂತನೆಗಳು ವೈಚಾರಿಕ, ವಸ್ತು ಸಂಬಂಧಿಯಾದ, ಜ್ಞಾನ – ವಿಜ್ಞಾನಾತ್ಮಕ ಸ್ಥಿತಿಗಳ ಮಧ್ಯೆ ಹೇಗಿತ್ತೆಂದು ನೋಡಬೇಕಲ್ಲದೆ, ಅತಿಕರಿಸಿ ಯಾ ತುಚ್ಛೀಕರಿಸಿ ನುಡಿವುದರಿಂದ ಪ್ರಯೋಜನವಿಲ್ಲ. ನಮ್ಮ `ನಾನು’ಗಳು, `ನಾವು’ಗಳು ದೂರ ವಾದರೆ, ನಾವು ಅವರಲ್ಲಿಗೆ ಹೋದೇವು, ಅವರನ್ನು ತಿಳಿದೇವು.ದೇವರಿಗೆ ಅರ್ಪಣೆಯಾಗಿ ಪ್ರಾಣಿಬಲಿ ಈಗಲೂ ನಡೆಯುತ್ತದೆ. ಹಾಗಿರುವಲ್ಲಿ ಎಂಟನೆಯ ಶತಮಾನದ ಓರ್ವ ಯತಿ, ಆಚಾರ್ಯ ಶಂಕರರು ಒಬ್ಬನಾಗಿ ಕಾಪಾಲಿಕರನ್ನು ಇದಿರಿಸಿ ಪ್ರಾಣಿಬಲಿ, ನರಬಲಿ ನಿಲ್ಲಿಸಿದ್ದನ್ನು ಮೆಚ್ಚುವ ಕಣ್ಣು ಬೇಕು.

* * *

ವಾದಿರಾಜರು (1480-1600) ಮೂಲತಃ ಕೋಟೇಶ್ವರದವರೆಂದೂ, ನೂರಿಪ್ಪತ್ತು ವರ್ಷ ಬಾಳಿ ಬಹುವಿಧ ಸಾಧನೆ, ಸಮಾಜಮುಖಿ ಕಾರ್ಯ, ಚಿಂತನೆ, ದಾರ್ಶನಿಕ ಸಾಹಿತ್ಯಕ ಸೃಜನಗಳನ್ನು ಮಾಡಿದವರೆಂದೂ ಪ್ರಸಿದ್ಧಿ. ಪ್ರಾಯಃ ಇದರ ಬಹುಪಾಲು ಯಥಾರ್ಥವಾಗಿದೆ. ಯತಿ, ಕೃತಿ, ಕ್ರಾಂತಿ, ಕಾಂತಿ ಈ ನಾಲ್ಕು ಮುಖಗಳಲ್ಲೂ ವಾದಿರಾಜರು ವಿಶೇಷ ಮಾನ್ಯರು. ಬಹುವಿದ್ಯಾವಿದ (polymath)ರಾಗಿ ಅಂತಹ ಶ್ರೇಷ್ಠದ ವಿಶ್ವಾಮಿತ್ರ, ಶುಕ್ರ, ಚಾಣಕ್ಯ, ಅಭಿನವ ಗುಪ್ತ, ವಿಜ್ಞಾನಭಿಕ್ಷು, ಜಯತೀರ್ಥರಂತಹವರ ಸಾಲಿನಲ್ಲಿ ಗಣ್ಯರು.

ಉಡುಪಿ ಅಷ್ಟಮಠಗಳ ಶ್ರೀಕೃಷ್ಣಪೂಜಾ ಪರ್ಯಾಯವನ್ನು ಎರಡು ತಿಂಗಳ ಅವಧಿ ಯಿಂದ ಎರಡು ವರ್ಷಗಳಿಗೆ ತಂದುದು, ಹಲವು ಸಮುದಾಯಗಳಿಗೆ ವೈಷ್ಣವ ದೀಕ್ಷೆಯನ್ನು ನೀಡಿದುದು, ಕೃಷಿಕ್ರಾಂತಿ (ವಾದಿರಾಜ ಗುಳ್ಳ, ಮಟ್ಟಿ ಗುಳ್ಳ ಎಂದು ಪ್ರಸಿದ್ದವಾಗಿರುವ ಬದನೆಯ ಬಹು ಸ್ವಾದಿಷ್ಟವಾದ ಪ್ರಭೇದದ ಕೃಷಿಗೆ ಪ್ರೋತ್ಸಾಹ), ಕನಕದಾಸರಿಗೆ ಆಶ್ರಯ, ಬೆಂಬಲ, ಕಾವ್ಯದರ್ಶನಾದಿ ಗ್ರಂಥರಚನೆ – ಹೀಗೆ ಅವರ ಸಾಧನೆಗಳು ಪರಂಪರೆಯಿಂದ ಬಂದ ಜನಶ್ರುತಿಗಳಲ್ಲಿವೆ.

ಅವರ ಕಾರ್ಯಗಳಿಗೆ ಬೆಂಬಲವಾಗಿ ಭೂತರಾಜನೆಂಬ ಒಂದು ದೈವವು ಇದ್ದಿತೆಂದು ಪ್ರತೀತಿ. ಸುಧಾರಕನ ಕಾರ್ಯ ಅನ್ವಯಕ್ಕೆ ಬರುವ ಅಡ್ಡಿಗಳ ನಿವಾರಣೆಗೆ ಒಂದು ಪ್ರಮಾಣ. ಭೌತಿಕ ಶಕ್ತಿ, ಕಾರ್ಯಕರ್ತರ ಪಡೆ ಬೇಕೇಬೇಕಷ್ಟೆ? ಭೂತರಾಜರು ಅಂತಹ ಓರ್ವ ಕಾರ್ಯ ಸೇನಾನಿ ಇರಬಹುದು.

ಹೂವಿನಕೆರೆಯಲ್ಲಿ ಹುಟ್ಟಿ ಭೂವರಾಹ ಜನ್ಮನಾಮದಿಂದ, ಮತ್ತೆ ವ್ಯಾಸತೀರ್ಥ, ವಾಗೀಶ ತೀರ್ಥ, ವಿದ್ಯಾನಿಧಿತೀರ್ಥ, ವಿಜಯೇಂದ್ರರ ಶಿಷ್ಯರಾಗಿ ದೊಡ್ಡ ಪಂಡಿತರಾದರು. ಬಾಲ್ಯದಿಂದಲೆ ಅಸಾಧಾರಣ ಗ್ರಹಣ ಶಕ್ತಿ, ಶಾಸ್ತ್ರಜ್ಞಾನಗಳಿಂದ ಕೂಡಿದ್ದ ಅವರಿಗೆ ಅನೇಕ ಭಾಷೆಗಳ (ಕನ್ನಡ, ಸಂಸ್ಕೃತ, ತುಳು, ತೆಲುಗು ಮೊದಲಾಗಿ) ಪಾಂಡಿತ್ಯವಿತ್ತು. ಕೆಳದಿ, ಮೇಲುನಗರ ರಾಜಾ ಸ್ಥಾನಗಳಲ್ಲಿ ಪ್ರಭಾವಿಯಾಗಿದ್ದವರು ಪ್ರಾಯಃ ಕೆಲವು ಕಾಲ ವಿಜಯನಗರದಲ್ಲಿ ಇದ್ದರು. ವಾದದಲ್ಲಿ ರಾಜರೇ ಆಗಿ ಮೆರೆದವರಂತೆ.

ವಾದಿರಾಜರ ಕೃತಿಗಳ ಹರಹು ಬಲು ದೊಡ್ಡದು. ಅರವತ್ತಕ್ಕೂ ಮಿಕ್ಕಿ ಕೃತಿಗಳನ್ನು ರಚಿಸಿದ್ದಾರೆ. ಅವರ ‘ಉಪನ್ಯಾಸ ರತ್ನಮಾಲಾ‘ತತ್ತ್ವಪ್ರದೀಪ, ‘ಯುಕ್ತಿಮಲ್ಲಿಕಾ’, ‘ನ್ಯಾಯ ರತ್ನಾವಲಿ’, ‘ವಾಗ್ವಜ್ರಾವಲಿ’ಮೊದಲಾದಮಾಧ್ವ ದಾರ್ಶನಿಕ ಗ್ರಂಥಗಳು ಪ್ರಸಿದ್ಧವಾಗಿವೆ.

ಕೇವಲ ದಾರ್ಶನಿಕರಷ್ಟೇ ಆಗದೆ, ‘ರುಕ್ಮಿಣೀಶವಿಜಯ’ ಎಂಬ ಮಹಾಕಾವ್ಯವನ್ನೂ ಬರೆದರು. ಇದು ಸಂಸ್ಕೃತ ಸಾಹಿತ್ಯದ ಮಹತ್ತ್ವದ ಕೃತಿ. ಸುದೀರ್ಘ ತೀರ್ಥಯಾತ್ರೆಗಳಫಲವಾದ‘ತೀರ್ಥಪ್ರಬಂಧ’ಮತ್ತು ‘ಭೂಗೋಲವರ್ಣನ’ ಇವು ಅವರ ದೀರ್ಘ ಕೃತಿಗಳು. ತೀರ್ಥಪ್ರಬಂಧವು ಬಹುಶಃ ಆ ತರಹದ ಮೊತ್ತಮೊದಲ ಪ್ರವಾಸ ಸಾಹಿತ್ಯ ಕೃತಿ. ಅವರ ವ್ಯಕ್ತಿತ್ವ, ಕೃತಿಗಳಂತೆ ಇದು ಕೂಡ ಒಂದು ವಿಭಿನ್ನ ಕಾರಣಕ್ಕಾಗಿ ಚರ್ಚೆಗೆಬಂದಿದೆ. ಅದರಲ್ಲಿ ಅವರು ಅಯೋಧ್ಯೆಯ ಬಗೆಗೆ ಬರೆಯುತ್ತ‘ರಾಮನ ನಿರೀಕ್ಷೆಯಲ್ಲಿರುವ ನಗರ’ಎಂದು ಹೇಳಿದುದು, ರಾಮಜನ್ಮಭೂಮಿ ವನಂಗತಸ್ಯಾ ಪಿತಸ್ಯಾ ಪಾದುಕೇ ಯಃ ಕರೋತ್ ಪತಿಂ | ‘ರಾಮ ವನವಾಸಕ್ಕೆ ಹೋಗಿದ್ದಾನೆ, ಅವನ ಪಾದುಕೆ ಆಳ್ವಿಕೆ ನಡೆಸುತ್ತಿದೆ’ ಎಂಬುದು, ರಾಮ ಮಂದಿರ ವಿನಾಶವಾದುದರ ಸೂಚನೆ ಎಂದು ಒಂದು ಅಭಿಪ್ರಾಯ.

* * *

ನೂರಾರು ಹಾಡುಗಳನ್ನು ವಾದಿರಾಜರು ಬರೆದಿದ್ದು ಇವು ದಾಸಸಾಹಿತ್ಯದಲ್ಲಿ ಪ್ರಮುಖ ರಚನೆಗಳಾಗಿ ಸಾಹಿತ್ಯ, ಸಂಗೀತಗಳೆರಡರಲ್ಲೂ ಒಳ್ಳೆಯ ಕವಿತೆಗಳೆಂದು ಗುರುತಿಸಲ್ಪಟ್ಟು, ಇಂದಿಗೂ ಹಾಡುಗಾರರ ಬಾಯಿಯಲ್ಲಿ ನಲಿಯುತ್ತಿವೆ. ‘ನೀರೆತೋರೆ ನೀರಜ ನಯನ’ ‘ಪಾಲಕಡಲೊಡೆಯ’, ‘ತಾಳುವಿಕೆಗಿಂತನ್ಯ ತಪವು ಇಲ್ಲ’,  ‘ಮುದ್ದುಮುಖದಾತ ನಮ್ಮ’, ‘ಎಷ್ಟು ಸಾಹಸವಂತ’,  ‘ಬಾರೋ ಮುರಾರಿ’, ಕೃಷ್ಣಾಷ್ಟಕ -ಇವು ಕೆಲವು ಪ್ರಸಿದ್ಧ ಪದಗಳು.

ದಾರ್ಶನಿಕ ಗ್ರಂಥ, ಕನ್ನಡ-ಸಂಸ್ಕೃತ ಪದಗಳು, ಮಹಾಕಾವ್ಯಗಳನ್ನು ಬರೆದ ವಾದಿರಾಜರು, ತುಳುಭಾಷೆಯಲ್ಲಿ ರಚಿಸಿದ ದಶಾವತಾರ ಹಾಡು (ಲೇಲೇಲೆಗಾ) ಒಂದು ಕ್ರಾಂತಿಕಾರಿ ಆರಂಭ. ಈಗ ಲಭ್ಯವಿರುವ ಮೊತ್ತ ಮೊದಲ ತುಳು ಹಾಡು ಇದೇ ಆಗಿದೆ. ಅವರು ಒಂದೇ ಹಾಡು ಬರೆದಿರಲಿಕ್ಕಿಲ್ಲ. ಬರೆದಿರಬಹುದಾದ ಉಳಿದವು ನಷ್ಟವಾಗಿವೆ. ವಾದಿರಾಜರ ಲಕ್ಷ್ಮೀಶೋಭಾನೆ ಕೂಡ ಒಂದು ಅಮರ ಕೃತಿ.

ಇಂತಹ ಓರ್ವ ನಮ್ಮ ಉಡುಪಿಯ ಬಹುಮುಖಿ ಮಹಾಸಂತ ವಾದಿರಾಜರಿಗೆ ಇತ್ತೀಚೆಗೆ ದೊಡ್ಡ ಗೌರವವನ್ನು ಸಲ್ಲಿಸಿದವರು ಸಾಹಿತಿ, ರಂಗ ನಿರ್ದೇಶಕ ಪ್ರೊ.ಉದ್ಯಾವರ ಮಾಧವಾಚಾರ್ಯರು. ಅವರು ವಾದಿರಾಜರ ರುಕ್ಮಿಣೀಶ ವಿಜಯ, ಕೀಚಕ ವಧೆ, ಹಾಡುಗಳು ಮತ್ತು ಯಕ್ಷಗಾನ ಕೃತಿಯೆನ್ನಬಹುದಾದ ‘ನಾರದಕೊರವಂಜಿ’ಯನ್ನು ಉತ್ಕೃಷ್ಟ ರಂಗ ಕೃತಿಗಳಾಗಿ ರಚಿಸಿ ಪ್ರದರ್ಶಿಸಿದ್ದಾರೆ. ಇದು ದಾಖಲಾಗಬೇಕಾದ ಒಂದು ವಿವರ.ನಾವು ಮಹಾತ್ಮರನ್ನು ಅಭಿಮಾನಪೂರ್ವ ಪ್ರಶಂಸಿಸುವುದು ಒಂದು.ಅವರ ಕೃತಿಗಳ ವ್ಯಾಸಂಗ, ಪ್ರಯೋಗಗಳು ಅದಕ್ಕಿಂತ ಹೆಚ್ಚು. ಮೈಸೂರಿನ ವಿದ್ವಾನ್ ಆರ್.ಎಸ್. ನಂದಕುಮಾರ್ ಅವರೂ ರಂಗಪ್ರಯೋಗಗಳನ್ನು ನಡೆಸಿದರೆಂದು ಕೇಳಿದ್ದೇನೆ.

ಈ ಸಂಬಂಧವಾಗಿ ಒಂದು ಮುಖ್ಯ ವಿಚಾರ ಇಲ್ಲಿ ಪ್ರಸ್ತುತ. ಪ್ರೊ.ಮಾಧವಾಚಾರ್ಯರೇ ನನ್ನಲ್ಲಿ ಕೇಳಿದ ಪ್ರಶ್ನೆ –‘ದೊಡ್ಡ ವ್ಯಾಪ್ತಿಯ ಲೇಖಕ, ಕ್ರಾಂತಿಕಾರಿ ವಾದಿರಾಜರು, ಯಕ್ಷಗಾನ ಪ್ರಸಂಗ ಏಕೆ ಬರೆಯಲಿಲ್ಲ’ಎಂದು. ಬರೆಯಲೇ ಬೇಕೆಂದಿಲ್ಲ ಎಂಬುದು ಒಂದು ಉತ್ತರ. ಆದರೆ ಅವರು ಬರೆದಿದ್ದಾರೆ. ನಾವು ಗಮನಿಸಿಲ್ಲ. ಕಾರಣ ಅದರಲ್ಲಿ ಯಕ್ಷಗಾನ ಎಂಬ ಶಬ್ದವಿಲ್ಲ ಮತ್ತು ಪ್ರಸಂಗವೆಂಬುದರ ರೂಪ, ಗಾತ್ರಗಳು ಕಾಲಾಂತರದಲ್ಲಿ ಬದಲಾಗಿವೆ.

ಅವರ ರಚನೆ ‘ಕೀಚಕವಧೆ’ (ಭೀಮ ಭಾಮಿನಿಯಾದನು) ಯಕ್ಷಗಾನದಿಂದ ಪ್ರಭಾವಿತ ಎಂಬುದು ಸ್ಪಷ್ಟ. ಅವರ ‘ನಾರದ ಕೊರವಂಜಿ’ ಎಂಬುದು ಯಕ್ಷಗಾನವೆ ಆಗಿದೆ. ರುಕ್ಮಿಣಿಗೆ  ಕೃಷ್ಣನು ಪತಿಯಾಗಿ ದೊರಕುವನೆಂದು ಕೊರವಂಜಿಯು ಕಣಿ ಹೇಳುವುದು ಇದರ ಮುಖ್ಯ ವಸ್ತು.

ತೆಲುಗಿನಲ್ಲೂ, ಕನ್ನಡದಲ್ಲೂ ಅನೇಕ ಕೊರವಂಜಿ ಪ್ರಬಂಧಗಳು (ಕೊರವಂಜಿಯು ಕಣಿ ಹೇಳುವ ವಿಷಯ ಮುಖ್ಯವಾಗಿರುವ ರಚನೆ) ಯಕ್ಷಗಾನಗಳೆಂದೆ ಗುರುತಿಸಲ್ಪಟ್ಟಿವೆ. (ಈ ಬಗೆಗೆ ದಿ. ಪು.ಶೀನಿವಾಸ ಭಟ್ಟ ಕಟೀಲು ಅವರ ‘ಕೊರವಂಜಿ ಯಕ್ಷಗಾನಗಳು’ ಎಂಬ ಲೇಖನವನ್ನು ಬರೆದಿರುವರು.) ‘ಯುಕ್ತಿಮಲ್ಲಿಕಾ’, ‘ರುಕ್ಮಿಣೀಶವಿಜಯ’ಬರೆದವಾದಿ ರಾಜರೆ‘ದಿಮ್ಮಿಸಾಲೆ’, ‘ಸುವ್ವಾಲೆ’ಗಳನ್ನುಬರೆದು ತನ್ನನ್ನು ತಾನು ಮುಕ್ತಗೊಳಿಸಿ, ಸಾಧಾರಣೀಕರಿಸಿಕೊಂಡರಲ್ಲವೆ? ನಾರದ ಕೊರವಂಜಿಯಲ್ಲಿ, ತೆಲುಗು ಮಾತುಗಳಿರುವುದರಿಂದ ವಾದಿರಾಜರು ತೆಲುಗು ಕೊರವಂಜಿ ಕೀರ್ತನೆಗಳಿಂದ ಪ್ರಭಾವಿತರಾಗಿ ಬರೆದುದು ಸಂಭವನೀಯವಾಗಿ ಕಾಣುತ್ತದೆ. ವಾದಿರಾಜರ ಕೃತಿಗಳ ಸಂಪಾದಿತ ಪದ್ಯಗಳಲ್ಲಿ ರಾಗ ತಾಳ ಸಹಿತವಾಗಿ ಹೇಳಿಲ್ಲ. ಪದ್ಯಗಳ ರೂಪವನ್ನು ನೋಡಿ, ಅಭ್ಯಸಿಸಿದಲ್ಲಿ ಇನ್ನಷ್ಟು ವಿಷಯ ತಿಳಿಯಬಹುದು.

ಇಂದು ನಾವು ಕಾಣುವ ಬಹುಶಃ ಪಾರ್ತಿಸುಬ್ಬ ಕವಿಯ ಬಳಿಕ ನಿರ್ಮಿತವಾದ ಸ್ವರೂಪ ಮತ್ತು ಗಾತ್ರವು ಈಗ ನಮಗೆ ಮಾನಕ standard ಅಗಿ ಕಾಣುತ್ತಿದೆ. ಆದರೆ ಎಲ್ಲ ರಚನೆಗಳೂ ಅದೇ ಪಾಕದಲ್ಲಿರಬೇಕಿಲ್ಲವಷ್ಟೆ?

* * *

ಶ್ರೀ ಕನಕದಾಸರು ಓರ್ವ ನಾಯಕ ಮತ್ತು ಯೋಧರಾಗಿದ್ದವರು.ಆದಿಲ್ ಶಾಹಿಯ ವಿರುದ್ಧದ ಒಂದು ಹೋರಾಟದಲ್ಲಿ (1567?) ಪ್ರಾಯಃ ರಾಜ್ಯಾಧಿಕಾರ, ಯುದ್ಧ ಮೊದಲಾದುವುಗಳ ನಿರರ್ಥಕತೆಯನ್ನು ಕಂಡು ಅಧ್ಯಾತ್ಮಿಕದತ್ತ ತಿರುಗಿದವರು. ಅದಕ್ಕೆ ಮೊದಲೇ ಅವರು ಪ್ರೌಢವಿದ್ಯಾ ಸಂಪನ್ನರೂ, ಕನ್ನಡ ಸಂಸ್ಕೃತಗಳನ್ನು ಚೆನ್ನಾಗಿ ಬಲ್ಲ ವಿದ್ವಾಂಸರೂ ಆಗಿದ್ದರೆಂಬುದು ಸ್ಪಷ್ಟ. ಹಾವೇರಿಯ ಕಾಗಿ ನೆಲೆಯ ತಿಮ್ಮಪ್ಪನಾಯಕನಾದ ಅವರು, ಶ್ರೀರಾಮಾನುಜ, ತಾತಾಚಾರ್ಯರನ್ನು ಓದಿ ಸೇರಿ ವಿಶಿಷ್ಟಾದ್ವೈತ ಚಿಂತನೆಗೊಲಿದವರು. ಮುಂದೆ ವೈಷ್ಣವ ಮತದ ಇನ್ನೊಂದು ರೂಪವಾದ ಮಾಧ್ವಚಿಂತನೆಗಳನ್ನು ಸ್ವೀಕರಿಸಿದರು. ಸಂತ ಭಕ್ತ ಕವಿಗಳಾದ ಅವರಿಗೆ ಈ ಸೂಕ್ಷ್ಮಪಂಥ ಭೇದಗಳು ಮುಖ್ಯವೂ ಆಗಿರಲಿಲ್ಲ. ಕನಕರು ವಾದಿರಾಜ, ಪುರಂದರರ ಕಿರಿಯ ಸಮಕಾಲೀನರು ಮತ್ತು ವ್ಯಾಸತೀರ್ಥರ ಶಿಷ್ಯರೆಂಬುದು ನಿರ್ಣೀತ ವಿಚಾರ. ಕನಕದಾಸರು ವ್ಯಾಸರಾಯ ಸ್ವಾಮಿಗಳ ಕೇಳಿಕೆಯಂತೆ ಉಡುಪಿಗೆ ಬಂದರೆಂದು ಪ್ರತೀತಿ. ಹೀಗಿರುತ್ತ ಅವರನ್ನು ಕೃಷ್ಣದರ್ಶನದಿಂದ ಹೊರಗಿಟ್ಟರು ಮೊದಲಾದ ಕಥನಗಳು ಏನು? ಎಂಬುದನ್ನು ಮರಳಿ ಪರಿಶೀಲಿಸಬೇಕಾಗುತ್ತದೆ. ಆ ಕಾಲದಲ್ಲಾದರೂ ಶ್ರೀಕೃಷ್ಣ ಮಠದ ದೇವರ ಗುಡಿಯ ಹೊರಸುತ್ತಿಗೆ ಬರಲು ಜಾತ್ಯಾಧಾರಿತ ನಿರ್ಬಂಧವಿತ್ತೆ? ಎಂಬುದೂ ವಿಚಾರಣೀಯವಾಗಿದೆ.

“ಕನಕನ ಬಗೆಗೆ ಉಡುಪಿಯ ಸಾಂಪ್ರದಾಯಿಕರು ಒಂದಿಷ್ಟು‘ಅಸ್ವೀಕಾರ’ ತೋರಿಸಿದ್ದು ಜಾತಿಯಿಂದಾಗಿ ಅಲ್ಲ. ಬದಲಾಗಿ ದ್ವೈತ-ವಿಶಿಷ್ಟಾದ್ವೈತಪಂಥೀಯತೆಯ (sectarianism) ಕಾರಣದಿಂದ” ಎಂದು ಪ್ರಸಿದ್ಧ ಹರಿದಾಸ, ಕಲಾವಿದದಿ. ಮಲ್ಪೆ ರಾಮದಾಸಸಾಮಗರು (ಸಣ್ಣ ಸಾಮಗರು) ನನ್ನಲ್ಲಿ ಹೇಳಿದ್ದಿದೆ. ಹಾಗೆಯೆ ಜನ ಶ್ರುತಿ ಇತ್ತೆಂದೂ ಅವರು ಹೇಳಿದ್ದರು, ಇರಲಿ.

ಕನಕ-ವ್ಯಾಸತೀರ್ಥ-ಪುರಂದರ-ವಾದಿರಾಜರ ಸಮಕಾಲೀನತೆ, ಕನಕರ ಭಕ್ತಿಗೊಲಿದು ಶ್ರೀ ಕೃಷ್ಣವಿಗ್ರಹ ತಿರುಗಿ ನಿಂತು ಕನಕನ ಕಿಂಡಿಯ ಮೂಲಕ ದರ್ಶನ ನೀಡಿದುದು, ಕನಕದಾಸರ ಮನೆಯಿದ್ದ ನೆಲೆ (ಈಗ ಅಲ್ಲಿ ಸ್ಮಾರಕ ಮಂಟಪವಿದೆ) ಕನಕನ ಕಿಂಡಿ, ಕೃಷ್ಣ ಮಠದ ಕಟ್‌ಪಂಜರವಿದ್ದುದು ಈಗ ಕನಕ ಗೋಪುರವಾದುದು, ಶ್ರೀ ವಿಶ್ವೇಶತೀರ್ಥರು ನಿರ್ಮಿಸಿದ ಕನಕ ಮಂಟಪ ಇವೆಲ್ಲ ಧಾರ್ಮಿಕ ಸಾಮಾಜಿಕ ಚರ್ಚೆ, ಪರಿವರ್ತನ, ಮುನ್ನಡೆಗಳ ಸಂಕೇತಗಳಾಗಿ ನಿಂತಿವೆ. ಕೃಷ್ಣವಿಗ್ರಹವು ಕನಕನಿಗಾಗಿ ತಿರುಗಿದ್ದು (‘ಬಾಗಿಲನು ತೆರೆದುಸೇವೆಯನು ಕೊಡುಹರಿಯೆ’ಎಂಬಪದವನ್ನು ಹಾಡಿದಾಗ ನಡೆದ ಪವಾಡ) ಎಂಬುವುದರ ಐತಿಹಾಸಿಕತೆಯ ಚರ್ಚೆ ಏನೇ ಇರಲಿ – ಅದರ ಸಂದೇಶವು ಬಹು ಆಯಾಮಿಯಾಗಿದೆ. ಚಿಂತನೆಗಳು‘ ತಿರುಗುವುದಕ್ಕೆ’ ಪ್ರೇರಕವಾಗಿವೆ.

ಕನಕದಾಸರನ್ನು ವಾದಿರಾಜರು ಕೃಷ್ಣ ದೇವಾಲಯದೊಳಗೆ ಕರಕೊಂಡು ಹೋಗಿ ಕೃಷ್ಣದರ್ಶನ ಮಾಡಿಸಿದ್ದರು ಎಂದು ಸಂಶೋಧಕ ಹರ್ಮನ್ ಮೊಗ್ಲಿಂಗ್ (1811-1881) ಎಂಬ ಜರ್ಮನ್ ಬಾಸೆಲ್ ಮಿಶನ್ ಸಂಶೋಧಕರು ಬರೆದಿರುವುದಾಗಿ ದಾಸಸಾಹಿತ್ಯತಜ್ಞ ಪ್ರೊ.ಎ. ವಿ.ನಾವಡರು ಹೇಳಿದ್ದಾರೆ. (ಭಾಷಣಗಳಲ್ಲಿ ಮತ್ತು ಖಾಸಗಿಯಾಗಿ ನನ್ನಲ್ಲೂ ಹೇಳಿದ್ದಾರೆ) ಇದು ಬಹಳ ಮಹತ್ತ್ವದ ವಿಷಯ. ಕಾರಣ ಮೊಗ್ಲಿಂಗ್ ಅವರು ಓರ್ವ ಪಾದ್ರಿ, ಅವರು ಮತೀಯವಾಗಿ ಹೇಳುವುದಿದ್ದರೆ, ಕನಕನಿಗಾದ ನಿರಾಕರಣೆಗೆ ಒತ್ತುಕೊಟ್ಟು ಹೇಳಬಹುದಾಗಿತ್ತು.  ಆದರೆ ಅವರು ಬ್ರಾಹ್ಮಣ ಯತಿಯೊಬ್ಬರ ಔದಾರ್ಯವನ್ನೆ ಹೇಳಿದ್ದಾರೆ. ಆದುದರಿಂದ ಅದರ ನೈಜ್ಯ ಮತ್ತು ಅಧಿಕೃತತೆ ಖಚಿತವಾಗಿದೆ.

ಆ ಸಂದರ್ಭದಲ್ಲಿ ದೂರದರ್ಶನ ವಾಹಿನಿಯ ಚರ್ಚೆಯೊಂದರಲ್ಲಿ ಪೇಜಾವರ ವಿಶ್ವೇಶತೀರ್ಥ ಶ್ರೀಗಳ ಜತೆ ಭಾಗವಹಿಸಿದ್ದ ಓರ್ವ ಹಿರಿಯ ರಾಜಕಾರಣಿ. ಕನಕ ಮಂಟಪ ಮಾಡಿದರೇನು ಬಂತು? ಅದೇನು ದಯಾಭಿಕ್ಷೆಯೆ? ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣ ಮತ್ತು ಕನಕರಿಗೆ ಒಟ್ಟಾಗಿ ಪೂಜೆ ಸಲ್ಲಬೇಕು. ನಮ್ಮ ಪಕ್ಷದ ಸರಕಾರ ಬಂದರೆ ಮಾಡುತ್ತೇವೆ ಎಂದಿದ್ದರು. ಅವರ ಪಕ್ಷಗಳ ಎರಡೆರಡು ಸರ್ಕಾರಗಳು ಬಂದರೂ ಈವರೆಗೂ ಆಗಿಲ್ಲ ವೆಂಬುದು ಬೇರೆ ವಿಚಾರ. ಆಗ ಕೇಳಿದರೆ, ಯಾರ ತಲೆಗಾದರೂ ಕಟ್ಟಿ ‘ಹುನ್ನಾರ, ‘ಮಠ, ‘ಬ್ರಾಹ್ಮಣ- ಎಂದರಾಯಿತು. ಪೇಜಾವರ ಶ್ರೀಗಳಂತಹ ರಚನಾತ್ಮಕ ಸುಧಾರಕರ ಜವಾಬ್ದಾರಿ ಧೋರಣೆ, ಅಂತಹವರಿಗೆ ಇಲ್ಲ

ಕನಕದಾಸರು ಬರಿಯ ಹಾಡಿಗಳನ್ನಷ್ಟೆ ಬರೆಯದೆ ದೀರ್ಘವಾದ ಕಾವ್ಯಗಳನ್ನೂ ಬರೆದಿದ್ದಾರೆ. ‘ಮೋಹನ ತರಂಗಿಣಿ, ‘ರಾಮ ಧಾನ್ಯ ಚರಿತ್ರೆ, ‘ನಳಚರಿತ್ರೆ, ‘ಹರಿಭಕ್ತಿ ಸಾರ’ಗಳು ಅವರ ಕೃತಿಗಳು.ಇವೆಲ್ಲವೂ ಕಾವ್ಯ ದೃಷ್ಟಿಯಿಂದ ಉತ್ತಮ, ಯಶಸ್ವಿ ರಚನೆಗಳು. ಮಹಾಕಾವ್ಯಕ್ಕಾಗಿ ರಾಮ, ಕೃಷ್ಣಾದಿ ಅವತಾರಿ ಪುರುಷರನ್ನು ಆರಿಸದೆ, ನಳನನ್ನು ನಾಯಕನನ್ನಾಗಿ ಮಾಡಿದ್ದು, ಕನಕರ ವಿಶಿಷ್ಟ ದೃಷ್ಟಿಯ ದ್ಯೋತಕ. ಪ್ರಸಿದ್ಧ ಯಕ್ಷಗಾನ ಪ್ರಸಂಗವಾದ ‘ನಳಚರಿತ್ರೆ’ (ಕವಿ. ಧ್ವಜಪುರ ನಾಗಪ್ಪಯ್ಯ)ಗೆ ಕನಕ ಕಾವ್ಯವೆ ಆಕರವಾಗಿದೆ.

ಬಂಕಾಪುರ ಶ್ರೀನಿವಾಸಾಚಾರ್ಯರೆಂಬ ದಾಸರ ಮೂಲಕ ಕನಕರು ಹರಿದಾಸರಾದರೆಂದು ಸಂಪ್ರದಾಯ. ಕನಕರ ರಚನೆಗಳು – ಆ ಕಾಲದ ಒಟ್ಟು ಭಾರತೀಯ ಭಕ್ತ. ಸಂತ, ದಾಸ, ಶರಣ ಸಾಹಿತ್ಯದ ರೀತಿಯಲ್ಲೆ ಇದ್ದರೂ, ಅಭಿವ್ಯಕ್ತಿ ವಿಧಾನದಲ್ಲೂ ಮೊನಚಿನಲ್ಲೂ ಪ್ರತ್ಯೇಕವಾಗಿಯೂ ಇದೆ.

ಕನಕರ ಬಹು ಚರ್ಚಿತ ರಾಮಧಾನ್ಯ ಚರಿತ್ರೆಯೆಂಬುದು ತುಂಬ ವಿಶಿಷ್ಟವಾದ ಕೃತಿ. ಬಡವರ ಆಹಾರವಾದ ರಾಗಿಯೂ, ‘ಮೇಲ್ವರ್ಗದ’ ತಿನಿಸಾದ ಅಕ್ಕಿಗೂ ಒಂದು ವಾದ, ಸಂವಾದ ಏರ್ಪಡಿಸಿ, ಕೊನೆಗೆ ಶ್ರೀರಾಮನೆ ರಾಗಿಯ ಪರವಾಗಿ ತೀರ್ಪುಕೊಟ್ಟು, ಅಕ್ಕಿಗೂ ಪ್ರಾಶಸ್ತ್ಯವನ್ನು ಉಳಿಸಿ ಸಮನ್ವಯಗೊಳಿಸುವ ಈ ಕಾವ್ಯವು ವಸ್ತು, ವಿಧಾನ, ನಿರೂಪಣೆ ಮೂರರಲ್ಲೂ ಪ್ರತ್ಯೇಕತೆಯುಳ್ಳ ಕೃತಿ.

* * *

ಕನಕರ ವಾದಿರಾಜ ಕನಕದಾಸರ ಕಾಲಕ್ಕಾಗಲೆ, ದಾಸಪಂಥವು ಉದಯವಾಗಿ, ಪ್ರಭಾವಿ ಯಾಗಿತ್ತು. ಭಕ್ತಿ ವೇದಾಂತ ಪ್ರಮೇಯಗಳ ಪ್ರಸಾರ, ಅನುಸಂಧಾನಗಳಿಗೆ ದಾಸಕೂಟವು ಪ್ರಭಾವಿ ಮಾಧ್ಯಮವಾಗಿತ್ತು. ಆಗಲೇ- ಪ್ರಾಯಃ ಹನ್ನೊಂದನೆಯ ಶತಮಾನಕ್ಕಾಗಲೇ ಪ್ರಾದುರ್ಭಾವಕ್ಕೆ ಬಂದಿದ್ದ ‘ಯಕ್ಷಗಾನ’ (ಅಂದರೆ ಆಗಿನ ಆಟ, ದಶಾವತಾರ, ಬಯಲಾಟ) ಮತ್ತು ಸೋದರ ಕಲೆಗಳೂ ಭಾರತದಾದ್ಯಂತ ಭಕ್ತಿವಿಚಾರದ ಪ್ರಚಾರದಲ್ಲಿ ತೊಡಗಿದ್ದುವು. ಉತ್ತರಮಾರ್ಗ – ದಕ್ಷಿಣ ಮಾರ್ಗಗಳು ಸ್ಪಷ್ಟವಾಗಿ ಪ್ರತ್ಯೇಕವಾಗಿ – ಕರ್ನಾಟಕ ಸಂಗೀತಕ್ಕೆ ಪುರಂದರದಾಸರು ಶಿಕ್ಷಣ ವಿಧಾನವನ್ನು ರೂಪಿಸಿದ್ದರು. ಇದರಿಂದಲೇ ಅವರಿಗೆ ಬಹುಶಃ ಕರ್ನಾಟಕ ಸಂಗೀತ ಪಿತಾಮಹನೆಂಬ ಖ್ಯಾತಿ ಬಂದುದು. (ಇಲ್ಲಿ ಕರ್ನಾಟಕ ಎಂದರೆ, ದಾಕ್ಷಿಣಾತ್ಯ – ಈಗಿನ ಕರ್ನಾಟಕ, ಆಂಧ್ರ, ಕೇರಳ, ತೆಲಂಗಾಣ, ತಮಿಳುನಾಡು ಸಹಿತ ಎಂದರ್ಥ)

ಕನಕ-ವಾದಿರಾಜರಿಬ್ಬರಿಗೂ ಸಂಗೀತದ ಶಾಸ್ತ್ರೀಯ, ಮತ್ತು ಪ್ರಯೋಗ ಮಾರ್ಗಗಳಲ್ಲಿ ಪರಿಣತಿ ಇದ್ದುದು ಸ್ಪಷ್ಟ. ಕನಕರು ಉತ್ತಮ ಗಾಯಕರಾಗಿದ್ದರೆಂಬುದೂ ಪ್ರಸಿದ್ಧ. (ವಾದಿರಾಜ-ಕನಕದಾಸರ ರಚನೆಗಳ ಸಂಗೀತ ವೈಶಿಷ್ಟ್ಯಗಳನ್ನು, ಧಾಟಿಗಳ ಸೊಬಗನ್ನು ಸಂಗೀತ ಶಾಸ್ತ್ರ ಮತ್ತು ಪ್ರಯೋಗಗಳೆರಡರಲ್ಲೂ ಅಸಾಧಾರಣ ಪರಿಣತರಾಗಿದ್ದ ದಿ ಪ್ರೊ. ಎಂ.ರಾಜಗೋಪಾಲಾಚಾರ್ಯರು ಹಿಂದೆ ಇದೇ ವೇದಿಕೆಯಲ್ಲಿ ವಿವರಿಸಿದುದು ನೆನಪಾಗುತ್ತದೆ.) ಇವರಿಬ್ಬರ ರಚನೆಗಳಲ್ಲಿ ‘ವಾಗ್ಗೇಯಕಾರತ್ವ (ವಾಕ್ಕನ್ನು ಗೇಯಕ್ಕೆ ಹೊಂದಿಸುವ, ಸಂಗೀತ ರಚನಕಾರತ್ವ, lyricist ವಾಗ್ಗೇಯಕಾರ ಅವೆರಡು ಒಟ್ಟಾಗಿ ಸೃಜನಗೊಳ್ಳುವ ಅಂಶಗಳು) ಎದ್ದು ಕಾಣುತ್ತದೆ.

ವಾದಿರಾಜ ಕನಕ-ಪುರಂದರರಿಂದ ಹಾಡುಗಳ ಮಟ್ಟುಗಳ ಸ್ಥಿರೀಕರಣವಾಗಿರಬೇಕು. ಅವರ ರಚನೆಗಳಲ್ಲಿ ಉತ್ಕೃಷ್ಟ ನಾಟ್ಯಗುಣವೂ ತುಂಬಿದೆ.

ಕನಕದಾಸರ ಸಂಗೀತ ಮುಖದ ಕುರಿತು, ಕನಕ ಸಂಗೀತದ ಕುರಿತಾಗಿ ಡಾ.ಕೆ. ಎಸ್. ಪವಿತ್ರಾ ಅವರು ವಿವರವಾದ ಉತ್ತಮ  ಮಟ್ಟದ ಅಧ್ಯಯನವನ್ನು ಮಾಡಿದ್ದಾರೆ. ವಾದಿರಾಜರ ಬಗೆಗೂ ಇಂತಹದೆ ಅಧ್ಯಯನವು ಅಪೇಕ್ಷಿತವಿದೆ. ಕನಕರ ಕೃತಿಗಳಿಗೆ ಸಂಗೀತ ಸಭಾಗಾನ (ಕಚೇರಿ) ಪ್ರಯೋಗವಾಗಿದೆ.

ವಾದಿರಾಜರ ಲಕ್ಷ್ಮೀಶೋಭಾನೆ, ದಶಾವತಾರ ಸ್ತುತಿ, ಕೋಲು ಪದ, ಉದಯ ರಾಗ, ವೈಕುಂಠವರ್ಣನೆ, ಗುಂಡಕ್ರಿಯೆ (ರಾಗ ವೊಂದರಿಂದ ಬಂದ ಹೆಸರು) ತಾಳುವಿಕೆಗಿಂತನ್ಯ ತಪವು ಇಲ್ಲ, ಭ್ರಮರಗೀತೆ, ಕುದುರೆಬಂದಿದೆ, ಮೊದಲಾದುವು ಈಗಲೂ ಜನಪ್ರಿಯವಾಗಿವೆ. ಅವರ ದಿಮ್ಮಿಸಾಲೆ ಪದ್ಯದ ಜಾನಪದ ಸೊಬಗಿನ ಸ್ಫೂರ್ತಿಯ ಹರವು ಚೆಲುವು ಅನನ್ಯ.

ಕನಕರ ಹಾಡುಗಳಂತೂ ಗೀತ ಸಾಹಿತ್ಯದ ಉತ್ಕೃಷ್ಟ ಮಾದರಿಗಳು.ಅವರ ಹಾಡುಗಳಲ್ಲಿ ಕಾಣುವ ಸಹಜತೆ ಮತ್ತು ಸಾಹಿತ್ಯ ಔನ್ನತ್ಯಗಳು ಈ ಗುಣ ಎಲ್ಲ ಭಕ್ತರ ರಚನೆಗಳಲ್ಲಿ (ಲೀಲಾಶುಕ ಮೀರಾ, ಶಂಕರದೇವ, ತುಕಾರಾಮ) ಇವೆ ಯಾದರೂ, ಕನಕರ ಭಾಷೆಯ ಸಲೀಸು, ಪ್ರವಾಹ ಬೆರಗಾಗಿಸುವಂತಹದ್ದು. ಸ್ವಭಾವೋಕ್ತಿ ಸುಲಭದ್ದಾಗಿ ಕಾಣುವ ಬಲುಕಷ್ಟದ ಅಲಂಕಾರವಾಗಿದ್ದು ಅದರ ನಾಡಿ ಕನಕರಿಗೆ ಸಿಕ್ಕಿದೆ.

‘ಇಷ್ಟು ದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ’, ‘ಈ ಬರಿಯ ಸೊಬಗಾವ ದೇವರಲಿ ಕಾಣೆ’, ‘ಏನೆ ಮನವಿತ್ತೆ’, `ಕೂಸಿನ ಕಂಡೀರಾ ಮುಖ್ಯಪ್ರಾಣನ ಕಂಡೀರಾ’ – ಇಂತಹ ಪದ್ಯಗಳಲ್ಲಿ ಬರುವ ಜೀವ ಜೀವ ಭಾವ, ಭಾಷೆ-ಗೀತ ಸಂಬಂಧ ಅಸಾಧಾರಣವಾದದ್ದು. ವಸ್ತು, ಅಭಿವ್ಯಕ್ತಿ, ಭಕ್ತಿ ಎದ್ದುಬಂದಂತಿರುತ್ತವೆ, ಕನಕ ಪದಗಳ ಖನಿ.

ಕೆಲವೊಂದು ಹಾಡುಗಳಲ್ಲಿ ಕಾಣುವ ಆರ್ತತ್ವ. ಕವಿಗೆ ಸ್ವತಃ ಬಂದ ನಿರಾಕರಣೆಯ, ಜಾತಿ ಮೂಲವಾದ ದೂರೀಕರಣದಿಂದ ಬಂದಿರಬಹುದಾಗಿ ಅದರ ತೀವ್ರತೆ ತುಂಬ ಮುಟ್ಟುತ್ತದೆ. ಉದಾ: ‘ನೀನುಪೇಕ್ಷೆಯಮಾಡೆಬೇರೆಗತಿ ಯಾರೆನಗೆ, ‘ಈತನೀಗವಾಸು ದೇವನು, ‘ಬಾಗಿಲನು ತೆರೆದುಸೇವೆಯನು ಕೊಡುಹರಿಯೆ’. . . ‘ದ್ರೋಹಿಗಳವಿವರವನು ನಾ ಪೇಳೆನು; ‘ಪುಟ್ಟದಾಸನಾನಲ್ಲ, ‘ತೊರೆದು ಜೀವಿಸಬಹುದೆ, ‘ತಲ್ಲಣಿಸದಿರು ಕಂಡ್ಯ. ಇಂತಹ ಪದಗಳನ್ನು ಕೇಳಿದಾಗ ಮನದಟ್ಟಾದೀತು. ‘ನೀಮಾಯೆಯೊಳಗೊ| ನಿನ್ನೊಳು ಮಾಯೆಯೋ’ ಎಂಬ ದಾರ್ಶನಿಕ  ಪ್ರಮೇಯ ಹಾಡಿನಲ್ಲಿ ಹೇಗೆ ಗಹನ ವಿಚಾರ ವನ್ನು ಸರಳವಾಗಿ ಗಾಂಭೀರ್ಯ ಉಳಿಸಿ ಹೇಳಬಹುದು ಎಂಬುದಕ್ಕೆ ಉತ್ಕೃಷ್ಟ ದೃಷ್ಟಾಂತ   ನೀಡಿದ್ದಾರೆ.

* * *

ವಾದಿರಾಜರ, ಕನಕರ ಪದ್ಯಗಳನ್ನು ಸಂಗೀತಸಭಾಗಾನವಾಗಿ ಕಚೇರಿ ಏಕೆ ಮಾಡ ಬಾರದು? ತ್ಯಾಗರಾಜ, ಶ್ಯಾಮಾಶಾಸ್ತ್ರಿ, ದೀಕ್ಷಿತರು, ವಾಸುದೇವಾಚಾರ್ಯರು ಮುಂತಾದವರ ಕೃತಿಗಳೆ ಏಕಾಗಬೇಕು? ಎಂಬ ಪ್ರಶ್ನೆ ಯನ್ನು ಪರಿಶೀಲಿಸಬಹುದು.  ಒಂದು ಕಾಲದಲ್ಲಿ ಸಂಗೀತಕ್ಕೆ ತೆಲುಗೇ ಸೂಕ್ತ ಭಾಷೆ ಎಂಬ ವಾದವಿದ್ದಿತಂತೆ! ಅದು ಆಯಾ ಕಾಲದ ಪ್ರಭಾವ, ಪ್ರಭುತ್ವ ಕಲ್ಪನೆ.

ಶ್ರೀಮತಿ ಟಿ ಎಸ್. ಸತ್ಯವತಿ, ಡಾ.ರಾ. ಸತ್ಯನಾರಾಯಣ,  ಆರ್.ಕೆ. ಶ್ರೀಕಂಠನ್, ಆರ್.ಕೆ.ಶ್ರೀಲತಾ, ದೊರೆಸ್ವಾಮಿ ಅಯ್ಯಂಗಾರ್, ಸುಕನ್ಯಾ ಪ್ರಭಾಕರ ಮೊದಲಾದ ಹಿರಿಯ ತಜ್ಞರು, ಗಾಯಕರು ದಾಸ ಸಂಗೀತದ ಸಭಾಗಾನ ಪ್ರಯೋಗವನ್ನು ಮಾಡಿದ್ದಾರೆ. ರಂಗನಿರ್ದೇಶಕ ಬಿ. ವಿ. ಕಾರಂತರು ದಾಸರ (ಅಂತೆಯೆ ಕನಕದಾಸರ) ಪದಗಳಿಗೆ ನೀಡಿದ ಹೊಸ ಸಂಗೀತ ಭಾವ, ಜೀವ, ಹೊಸ ಪ್ರಸ್ಥಾನ ನಿರ್ಮಾಪಕವಾದುದು.

ಸಾಹಿತ್ಯ ಸಂಗೀತಜ್ಞ ಶೋಧಕರಾದ ಡಾ.ಕೆ.ಎಂ.ರಾಘವ ನಂಬಿಯಾರರು ಹೇಳುವಂತೆ “ದಾಸರಪದಗಳಲ್ಲೂ ಸಂಗೀತ ಪ್ರಯೋಗಕ್ಕಾಗುವ ಎಲ್ಲ ದ್ರವ್ಯ ಕೃತ್ಯಗಳಿವೆ. ಕೃತಿಗಳೆಂದೋ, ವರ್ಣ ಮೊದಲಾದುವೆಂದೋ ಪ್ರಸಿದ್ಧವಾದ ತ್ಯಾಗರಾಜಾದಿಗಳ ರಚನೆಗಳೂ, ದಾಸಪಂಥದ ರಚನೆಗಳ ಇನ್ನೊಂದು ರೂಪವೇ ಆಗಿವೆ. ವ್ಯತ್ಯಾಸಗಳು ಅಂತಹದ್ದೇನಲ್ಲ. ದಾಸರ ಪದಗಳು ಕೇವಲ ದೇವರನಾಮ ಎಂಬ ವರ್ಗಕ್ಕೆ ಸೀಮಿತವಾಗಬೇಕಿಲ್ಲ”.

ಇದರೊಂದಿಗೆ ಹೇಳಬಹುದಾದ ಒಂದು ವಿಚಾರವೆಂದರೆ, ನಮ್ಮ ಯಕ್ಷಗಾನ ಸಾಹಿತ್ಯ, (ಪ್ರಸಂಗಗಳ ಪದ್ಯಗಳು)ದ ಬಳಕೆಯ ವಿಚಾರ. ವಿಫುಲ ಸಂಖ್ಯೆಯಲ್ಲಿರುವ  ಯಕ್ಷಗಾನದ ಹಾಡುಗಳನ್ನು ಸಂಗೀತ ಕಾರ್ಯಕ್ರಮಗಳಲ್ಲೂ, ನೃತ್ಯ(ಭರತ ನೃತ್ಯಾದಿ)ಕ್ಕೂವನ್ನು ಏಕೆ ಅಳವಡಿಸಬಾರದು. ಆಂಧ್ರಪ್ರದೇಶದಲ್ಲಿ ಯಕ್ಷಗಾನದ ಹಾಡುಗಳನ್ನು ಕಛೇರಿಯ ಭಾಗವಾಗಿ ಹಾಡುವುದುಂಟು. ನೃತ್ಯಯೋಗ್ಯವಾದ ಅನೇಕ ಪದ್ಯಗಳೂ, ಸನ್ನಿವೇಶಗಳೂ ನಮ್ಮ ಯಕ್ಷಗಾನ ಸಾಹಿತ್ಯದಲ್ಲಿ ತುಂಬ ಇವೆ. ‘ಅದು ಬೇರೆ ಎಂಬ ಭಾವನೆ ಹೋಗಬೇಕು ಅಷ್ಟೆ.

ವಾದಿರಾಜ-ಕನಕದಾಸರು ಅಸಾಮಾನ್ಯ ಯುಗಚೇತನಗಳು. ಭೂವರಾಹ ಜನ್ಮನಾಮದ ವಾದಿರಾಜ ಯತಿನಾಮದವರಾಗಿ, ಹಯಗ್ರೀವ ಭಕ್ತರಾಗಿ ‘ವಾದಿರಾಜ’, ‘ಭೂವರಾಹ’ ಎರಡನ್ನೂ ನಿಜಗೊಳಿಸಿದವರು.  ವಾದಿಗಳನ್ನೂ ಗೆದ್ದುದಷ್ಟೇ ಅಲ್ಲ, ಪರ್ಯಾಯ ಸುಧಾರಣೆ, ಪರ್ಯಾಯ ಸಾಹಿತ್ಯಗಳಿಂದ, ಸಾಂಸ್ಕೃತಿಕ ಉದ್ಧಾರಕರಾಗಿ ಭೂವರಾಹರೆ ಆದರೆ, ಹಯಗ್ರೀವಾಶ್ರಯರೆನಿಸಿದರು.

ಕನಕದಾಸರು ದಾಸರಲ್ಲೆ ಕನಕಪ್ರಾಯ. ಪದ್ಯ ಮತ್ತು ಕಾವ್ಯ ಸಾಹಿತ್ಯಕ್ಕೆ ಹೊಸ ನೆಲೆ ನೀಡಿದ ಕಾಗಿನೆಲೆಯಾದಿ ಕೇಶವನ ಭಕ್ತ. ಕನಕನ ಕಿಂಡಿ ಸಂಸ್ಕೃತಿಯದೊಂದು ಕಿಂಡಿ. ಕನಕ ಗೋಪುರ, ಕನಕ ಕುಟೀರ, ಕನಕ ಮಂಟಪ ಎಲ್ಲವೂ ಇತಿಹಾಸದ ಶಿಖರಗಳು.

ಅನುಬಂಧ

ಶ್ರೀವಾದಿರಾಜ ಜೀವನದ ಒಂದು ವಿಚಾರದ ಕುರಿತಾಗಿ ನನ್ನ ಬಹುಕಾಲದ ಕುತೂಹಲವನ್ನು ಇಲ್ಲಿ ಮಂಡಿಸುತ್ತಿದ್ದೇನೆ. ಅವರು ಉಡುಪಿಯನ್ನು ಕಾರ್ಯಕ್ಷೇತ್ರವಾಗಿಸಿ, ಎಷ್ಟೋ ಮಹತ್ಕಾರ್ಯಗಳನ್ನು ಸಾಧಿಸಿದವರು.  ನೂತನ ಪರ್ಯಾಯ ವ್ಯವಸ್ಥೆ, ದಾರ್ಶನಿಕ ಗ್ರಂಥರಚನೆ, ಪದ್ಯ ಸಾಹಿತ್ಯ, ದೀಕ್ಷಾಪ್ರದಾನಗಳು, ಹೀಗೆ ಉಡುಪಿಯನ್ನು ಶ್ರೀಕೃಷ್ಣ ಸಾನ್ನಿಧ್ಯವನ್ನು ಬಹಳವಾಗಿ ಹಚ್ಚಿಕೊಂಡವರು. ಅಂಥವರು ತಮ್ಮ ಬದುಕಿನ ಕೊನೆಯ ದೀರ್ಘ ಅವಧಿ ಯನ್ನು ಸುಮಾರು ಎರಡು – ಮೂರು ದಶಕಗಳ ಕಾಲ – ದೂರದ ಮೂಲ ಮಠ ವಿರುವ ಸೋದೆಯಲ್ಲಿ (ಶಿರಸಿ ಬಳಿ) ಏಕೆ ಇದ್ದರು, ಎಂಬುದು ವಿಲಕ್ಷಣವಾಗಿ ಕಾಣುತ್ತದೆ. ಇಲ್ಲಿ ಅವರಿಗೇನಾದರೂ ಭಿನ್ನಮತಗಳು, ತೊಂದರೆಗಳು ಬಂದುವೆ? ಅವರು ತಾನಾಗಿ ಅದನ್ನು ಆರಿಸಿಕೊಂಡು ಹೋದುದದರ, ಸಂನ್ಯಾಸಿಯ ನೈಜ ನಿಸ್ಪೃಹತೆಯನ್ನು ಮೆಚ್ಚಲೇ ಬೇಕು.

ಇಂತಹದೆ ಇನ್ನೂ ಎರಡು ಉದಾಹರಣೆ ಪ್ರಸ್ತಾಪಿಸುವುದಾದರೆ ತುಳುನಾಡನ್ನು ಆಳವಾಗಿ ಪ್ರೀತಿಸಿ, ತುಳು ಭಾಷೆ, ಸಂಸ್ಕೃತಿಗಳ ಪುನರುತ್ಥಾನ ಅಭಿಯಾನದ ಆದ್ಯರಲ್ಲಿ ಓರ್ವರೆನಿಸಿದ ಪಣಿಯಾಡಿ ಶ್ರೀನಿವಾಸ ಉಪಾಧ್ಯಾಯ (ಎಸ್.ಯು. ಪಣಿಯಾಡಿ) ಮತ್ತು ದಕ್ಷಿಣ ಕನ್ನಡದ ಸಹಕಾರಿ ಚಳುವಳಿಯ ಪಿತಾಮಹರೆನಿಸಿದ ಮೊಳಹಳ್ಳಿ ಶಿವರಾಯರು. ಇವರಿಬ್ಬರೂ ಬದುಕಿನ ಕೊನೆಯ ವರ್ಷಗಳನ್ನು ಮದರಾಸಿನಲ್ಲಿ  ಕಳೆದರು.  ಸಹಜ ಕಾರಣಗಳಿರಬಹುದಾದರೂ ಇದು ವಿಚಿತ್ರವಾಗಿಯೆ ಕಾಣುತ್ತದೆ.

error: Content is protected !!
Share This