ಸಾಗರದ ಶಬ್ದ ಮಾಲೆಯ ಭಾಗವತಿಕೆ. ಸುಳಿಗಾಳಿಯ ಶೃತಿ. ತೆರೆ ತಿರೆ ಸೇರಿ ಬಾರಿಸುವ ಮೃದಂಗ. ಕೇದಿಗೆಮುಂದಲೆ, ಕಿರೀಟ ಕಟ್ಟಿ ಒತ್ತೊತ್ತಿ ಬಂದು ಕುಣಿವ ತರಂಗ. ಸೈನ್ಯವು ಇದೆ, ದಿಬ್ಬಣವು ಇದೆ. ಹಾಗಾಗಿ ಕಾಳಗ, ಕಲ್ಯಾಣಗಳಿಂದುದುರಿದ ಮುತ್ತು ಹವಳದಿಂದಲಂಕಾರಗೊಂಡ ರಂಗಸ್ಥಳ. ವೈಯಾರದ ಕಿರುತೆರೆಗಳ ಪೀಠಿಕಾವೇಷ. ತೆರೆ ಒಡ್ಡೋಲಗದ ರಾಜವೇಷ. ಇರುವಿಕೆ ಗೊತ್ತಾಗದ, ಹರಿವಿನಲ್ಲಿ ತೊನೆದಾಡುವ ಲಾವಣ್ಯವೇ ಲಾವಣ್ಯ. ಕಲಾನಿಧಿ ಕಡಲಕಿನಾರೆ ದಕ್ಷಿಣಕನ್ನಡದ ಈ ಭೂಮಿಯಲ್ಲಿ ಹುಟ್ಟಿದವರಿಗೆ ಯಕ್ಷಗಾನ ಉಸಿರಾಗದೆ ಕೆಸರು ಬಣ್ಣವಾಗದೆ! ಹೀಗೆ ಕಳೆಕಟ್ಟಿ ಬೆಳೆಯುವ ಮಕ್ಕಳ ಮನದಲ್ಲಿ ಚಂಡೆ ಮೃದಂಗವನ್ನು ನುಡಿಸಿದವರು ಪಟೇಲರ ಮನೆ ಅಥವಾ ಮಕ್ಕಳ ಮೇಳದ ಶ್ರೀಧರ ಹಂದೆಯವರು. ಪಟೇಲರ ಮನೆಯೆಂದರೆ ಮನೆಯೂ ಮೇಳವೇ, ಮನೆಯಲ್ಲಿಯೂ ಮೇಳವೆ! ಮಕ್ಕಳ ಮೇಳವೆಂದರೆ ಮನೆಮನೆಯಲ್ಲಿಯೂ ಮೇಳವೆ! ಒಂದು ಪರಂಪರೆಯಿಂದ ಬಂದ ಹೆಸರು, ಇನ್ನೊಂದು ಸ್ವಯಾರ್ಜಿತ ಹೀಗೆ ಈ ಎರಡು ವಿಶೇಷಣದ ವ್ಯಾಖ್ಯಾನದಿಂದ ಶ್ರೀಧರ ಹಂದೆಯವರ ಹರವು ಅರ್ಥವಾಗಬಹುದು.

ನನ್ನ ಬಾಲ್ಯದಲ್ಲಿ ಶ್ರೀಧರ ಹಂದೆಯವರನ್ನು ಕಂಡರೆ ಆಟವನ್ನು ಕಂಡಂತೆ. ಅವರಿಗೆ ನಮ್ಮನ್ನು(ಮಕ್ಕಳನ್ನು) ಕಂಡರೆ ವೇಷವನ್ನು ಕಂಡಂತೆ. ಆದರೆ ಅವರ ಮುಂದೆ ನಿಲ್ಲುವುದಕ್ಕೆ ನನಗೇನೊ ಭಯ.ಆಟದ ಆಕರ್ಷಣೆಯಿದ್ದರು ಓದಲು ಹಿಂದಾದ ಕಾರಣವೂ ಇರಬಹುದು. ಅವರು ಶಾಲಾಶಿಕ್ಷಕರೂ ಹೌದಷ್ಟೇ! ಅವರಲ್ಲಿ ಯಕ್ಷಗಾನ ಕಲಿಯಲು ಮೀರಿದದ ವಯಸ್ಸು ನನ್ನದು. ಆದರೂ ಅವರಿಂದ ಕಲಿತವರು ಸಹಪಾಠಿಗಳು ಎಂಬ ಹೆಮ್ಮೆ ನನಗೆ. ಅವರಲ್ಲಿ ಕಲಿಯುವ ಅವಕಾಶ ಸಿಗಲಿಲ್ಲ ಎಂಬ ಸಣ್ಣ ಅಸೂಯೆಯೂ ಕಾಡಿತ್ತು. ಆದರೂ ಹಂದೆಯವರಲ್ಲಿ ಕಲಿತವರು ಎಂಬ ಕಾರಣಕ್ಕೆ ನಾರಾಯಣ ಆಚಾರಿ, ನಾಗೇಶ ಶಾನಭಾಗ್ ಇಬ್ಬರನ್ನು ಆಪ್ತರನ್ನಾಗಿ ಮಾಡಿಕೊಂಡಿದ್ದೆ. ನಾನಂತೂ ಮನಸ್ಸಲ್ಲೇ ಮಂಡಿಗೆ ಮುರಿದದ್ದಾಯಿತು. ಹಂದೆಯವರಲ್ಲಿ ಕಲಿಯುವ ಭಾಗ್ಯ ಬರಲಿಲ್ಲ. ಆದರೆ ಆಗ ಹಂದೆಯವರು ಮಕ್ಕಳಿಗೆ ಯಕ್ಷಗಾನವನ್ನು ಕಲಿಸುತ್ತಾರೆ ಎಂಬುದು ನನಗೆ ಅದ್ಭುತವಾದ ವಿಷಯವಾಗಿತ್ತು. ಈಗಲೂ ಹೌದು. ಆಗ ಅರ್ಥವಾಗದ ವಿಸ್ಮಯ, ಈಗ ಅರ್ಥವಾಗಿ ವಿಸ್ಮಯ. ಆದ್ದರಿಂದ ನಾವು ಬೆಳೆದಂತೆ ಹಂದೆಯವರು ಕಾಣುತ್ತಾರೆ. ಇದಲ್ಲವೇ ಗುರುವಿನ ಲಕ್ಷಣ.

ಪಟೇಲರ ಮನೆ ಎಂಬ ಹೆಸರಿನಲ್ಲೊಂದು ಪರಂಪರೆಯಿದೆ. ಅದರಿಂದ ಹಂದೆಯವರು ಕೂಡ ಪರಂಪರಾ ಪ್ರಿಯರು. ಅನೇಕರಿಗೆ ಭಾಷಣದ ವಿಷಯ ಪರಂಪರೆ ಬೇಕು ಎನ್ನುವುದು. ಆದರೆ ಹಂದೆಯವರಿಗೆ ಅದು ದಾರಿ. ಶುದ್ಧ ಯಕ್ಷಗಾನದ ಪರಂಪರೆಯ ಸೊಗಸನ್ನೆ ಮಕ್ಕಳಿಗೆ ಹೇಳಿಕೊಡುವುದು. ಅದು ಈ ಮಟ್ಟದಲ್ಲಿ ಇನ್ನೆಲ್ಲಿಯೂ ಕಾಣದು. ಇದರಿಂದ ಯಕ್ಷಗಾನ ಪರಂಪರೆಯ ಹಕ್ಕು ಬಾಧ್ಯತೆಗಳೆರಡು ಶ್ರೀಧರ ಹಂದೆಯವರದು. ಮಕ್ಕಳಿಗೆ ಯಕ್ಷಗಾನ ಕಲಿಸುವುದು ಉದ್ದೇಶವಲ್ಲ, ಪರಂಪರೆಯನ್ನು ಉಳಿಸುವುದು ಉದ್ದೇಶ. ಅದಕ್ಕಾಗಿ ಸಮಯ, ಶ್ರಮ, ಎಲ್ಲವನ್ನು ವಿನಿಯೋಗಿಸುತ್ತಾರೆ. ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿ ಪ್ರದರ್ಶನ ಮಾಡುವುದು ಸಹನೆಗೆ ಸವಾಲು. ಅಭಿಮನ್ಯುವಿಗೆಂದು ಸಿದ್ಧಗೊಳಿಸಿದ ಹುಡುಗ, ಕುಣಿಯುವುದರಿಂದ ಮೈಕೈಗೆ ವ್ಯಾಯಾಮವಾಗಿ ದಷ್ಟಪುಷ್ಟವಾಗಿ ಎತ್ತರ ಬೆಳೆದು ಕರ್ಣನಾಗುತ್ತಾನೆ. ಕರ್ಣನನ್ನು ಸಿದ್ಧಗೊಳಿಸಿ ಪ್ರದರ್ಶನದ ಯುದ್ಧಕ್ಕೆ ಸಿದ್ಧರಾದರೆ ಅಂದೆ ಅನಾರೋಗ್ಯವಾಗಿ ಆತ ಬರಲಾರ. ಹೀಗೆ ನೂರೆಂಟು ವಿಘ್ನಗಳನ್ನು ದಾಟಬೇಕು. ಶಿಕ್ಷಕರಾದ್ದರಿಂದಲೋ ಏನೋ ಸಹನೆಯಿಂದ ಎಲ್ಲವನ್ನು ನಿಭಾಯಿಸುತ್ತಾರೆ. ಅಥವಾ ಸಹನೆ ಇರುವುದರಿಂದಲೇ ಶಿಕ್ಷಕರಾದರೇನೊ!

ಶ್ರೀಧರ ಹಂದೆಯವರ ಶ್ರದ್ಧೆ ಪರಂಪರೆಯಲ್ಲಿ ಮಾತ್ರ. ಆದರೆ ಬೇರೆಯವರು ಹಾಗೆಯೇ ಇರಬೇಕೆಂಬ ಹಠವೇನೂ ಇಲ್ಲ. ಪರಂಪರೆಯ ಪ್ರಯೋಗದಲ್ಲಿ ಹೊಸತನ ವಿರಬೇಕೆ ಹೊರತು, ಹೊಸತನದ ಹೆಸರಲ್ಲಿ ಪರಂಪರೆ ಮರೆಯಾಗಬಾರದು ಎಂಬ ಕಾಳಜಿ ಹಂದೆಯವರದು. ಕಾಲದ ಪರಿಣಾಮದಲ್ಲಿ ಕಳೆದುಹೋಗದೆ ಪರಂಪರೆಯ ಶ್ರದ್ಧೆಯಿಂದ ಆ ಸತ್ಯವನ್ನು, ಸತ್ವವನ್ನು ಉಳಿಸಿದ್ದಾರೆ. ಈಗಲೂ ಯಕ್ಷಗಾನ ಹೇಗಿರುತ್ತದೆ? ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಹಂದೆಯವರ ಮಕ್ಕಳ ಮೇಳವೇ! ಶಿಸ್ತು ಸಂಯಮದಲ್ಲಿ ವೃತ್ತಿಪರರಿಗೆ ಸೆಡ್ಡು ಹೊಡೆಯಬಲ್ಲ ಶಕ್ತಿ ಈ ಮಕ್ಕಳದು.

ಶ್ರೀಧರ ಹಂದೆಯವರು ಗುಣಗ್ರಾಹಿಗಳು ಏಕವ್ಯಕ್ತಿ ಯಕ್ಷಗಾನ ವಿಚಾರದಲ್ಲಿ ಅಭಿಪ್ರಾಯಬೇಧವಿದ್ದರೂ, ಯಕ್ಷಗಾನವನ್ನು ಬಳಸಿಕೊಂಡು ಭರತನಾಟ್ಯ, ಕೂಚಿಪುಡಿಗಳಂತೆ ಎರಡು ಗಂಟೆಯ ಕಾಲ ಜನರನ್ನು ಹಿಡಿದಿಟ್ಟುಕೊಂಡು ಪ್ರದರ್ಶನ ನಡೆಸುವ ಆ ಕಲೆಗಳ ಸಾಲಿಗೆ ಯಕ್ಷಗಾನವನ್ನು ತಂದವನು ಪ್ರಭಾಕರ ಎಂಬ ಹೆಮ್ಮೆಯಿದೆ ಎಂದು ಅನೇಕ ಸಾರಿ ಹೇಳಿದ್ದಾರೆ.

ಮಕ್ಕಳ ಬಗ್ಗೆ ಅವರಿಗಿರುವ ಪ್ರೀತಿ ಅಪಾರ. ನಾವು ಅವರ ಬಗ್ಗೆ ಹೇಳುವುದಕ್ಕಿಂತ ಮಕ್ಕಳ ಬಗ್ಗೆ ಮಾತನಾಡಿದರೆ ಹೆಚ್ಚು ಸಂತೋಷಪಡುವವರು. ಸುಮಾರು ವರ್ಷಗಳ ಹಿಂದೊಮ್ಮೆ ಬೆಂಗಳೂರಿನಲ್ಲಿ ಮಕ್ಕಳ ಯಕ್ಷಗಾನ ಪ್ರದರ್ಶನಕ್ಕೆ ಹಂದೆಯವರು ಬಂದಿದ್ದರು, ನಾನು ಮಕ್ಕಳ ಸಹಿತ ಹಂದೆಯವರನ್ನು ನಮ್ಮ ಅಂಗಡಿಗೆ ಬರಹೇಳಿದೆ. ನಮ್ಮದು ಐಸ್ ಕ್ರೀಮ್ ಅಂಗಡಿಯಾದ್ದರಿಂದ ಮಕ್ಕಳಿಗೆ ಮನೆಗಿಂತ ಅಂಗಡಿಯೇ ಹೆಚ್ಚು ಸಂತೋಷವಾಗುವ ಸ್ಥಳ. ಮಕ್ಕಳು ಬಂದರು ಅರಳಿದ ಕಣ್ಣು, ತೆರೆದ ಬಾಯಿ ಐಸ್ ಕ್ರೀಮ್ ಹೊಟ್ಟೆಗೆ ಹೋಗಿ ಮನಸ್ಸನ್ನು ತುಂಬಿತ್ತು‌. ನನ್ನ ಗತಕಾಲದ ಕನಸು ನನಸಾಗಿದ್ದರೆ ನಾನು ಅವರಲ್ಲೊಬ್ಬನಾಗಿರುತ್ತಿದ್ದೆ. ಹೀಗೆ ನನ್ನ ಬಾಲ್ಯದ ಕನಸನ್ನು ಅವರಲ್ಲಿ ಕಂಡೆ. ಹಾಗಾಗಿ ಆ ಕಾಲದ ನೆನಪಿನಿಂದ ಎಲ್ಲ ಮಕ್ಕಳಿಗೂ ಒಂದೊಂದು ಎಲೆಕ್ಟ್ರಾನಿಕ್ ವಾಚನ್ನು ಕೊಟ್ಟೆ. ಆ ಕಾಲದಲ್ಲಿ ಎಲೆಕ್ಟ್ರಾನಿಕ್ಸ್ ನಮ್ಮ ದೇಶದಲ್ಲಿ ಸ್ವಲ್ಪ ಕಾಲಿಡುತ್ತಿರುವ ಸಮಯ. ಆ ವಾಚು ಸಂಖ್ಯೆಯಲ್ಲಿ ಸಮಯವನ್ನು ತೋರುವುದು, ಬೆಳಕಾಗುವುದು ಎಲ್ಲ ಮಕ್ಕಳಿಗೆ ಖುಷಿಯೋ ಖುಷಿ! ನನಗೆ ಆ ವಿಷಯಕ್ಕಿಂತ, ಅದನ್ನು ಕಂಡ ಶ್ರೀಧರ ಹಂದೆಯವರು ಮಕ್ಕಳಲ್ಲಿ ಮಕ್ಕಳಾಗಿದ್ದರು. ಮಕ್ಕಳ ಆನಂದವನ್ನು ಕಂಡು ಅರಳಿದ ಶ್ರೀಧರ ಹಂದೆಯವರ ಕಣ್ಣಿನಲ್ಲಿ, ನನ್ನ ಕನಸಿನ ಗುರುಗಳಿಗೆ ಗುರುದಕ್ಷಿಣೆಯನ್ನು ನೀಡಿದ ಧನ್ಯತೆಯನ್ನು ನಾನು ಪಡೆದೆ. ಆದರೆ ಹಂದೆಯವರ ಆ ಆನಂದ ಇನ್ನೂ ಕಡಿಮೆಯಾಗಿಲ್ಲ. ಈಗಲೂ ಅದನ್ನು ನೆನಪಿಸಿಕೊಂಡು ಹೇಳುತ್ತಿರುತ್ತಾರೆ. ಮಕ್ಕಳ ಮೇಲಿನ ಆ ಪ್ರೀತಿಯಲ್ಲವೇ ಮಕ್ಕಳಿಗೆ ಹಿಮ್ಮೇಳವಾದದ್ದು.

ಮಕ್ಕಳ ಮೇಳವನ್ನು ಕಟ್ಟಿಕೊಂಡು ದೇಶ-ವಿದೇಶಗಳಲ್ಲಿ ಹಂದೆಯವರು ಕುಣಿದಿದ್ದಾರೆ. ಆ ಕಾಲದ ಪ್ರಯಾಣದ ಕಷ್ಟ, ಆರ್ಥಿಕ ಮುಗ್ಗಟ್ಟುನ್ನೆಲ್ಲ ಚಂಡೆಯ ಸದ್ದಿನಲ್ಲಿ ಅಡಗಿಸಿದ್ದಾರೆ. ನಮಗೆ ಕಾಣುವುದು ರಂಗದಲ್ಲಿ ಕುಣಿಯುವುದು ಮಾತ್ರ, ವೇಷ ಕಟ್ಟಿಕೊಳ್ಳುವುದಲ್ಲವಲ್ಲ!

ಹಣ ಆಸ್ತಿಯನ್ನೇ ಯೋಗ್ಯವಾಗಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವುದು ಕಷ್ಟ. ಆದರೆ ಹಂದೆಯವರು ವಿದ್ಯೆಯನ್ನು, ಮಕ್ಕಳ ಮೇಳದ ಹೊಣೆಗಾರಿಕೆಯನ್ನು ಯೋಗ್ಯವಾಗಿಯೇ ಮಗ ಸುಜಯೀಂದ್ರ ಹಂದೆಗೆ ಹಸ್ತಾಂತರಿಸಿದ್ದಾರೆ. ಆತನು ತಂದೆಯ ಶ್ರದ್ಧೆಗೆ ವಾರಸುದಾರ.

ಹಂದೆಯವರಿಗೆ ಎಂಬತ್ತು ಮೀರಿತು. ಆದರೂ ಮಗುವಿನ ಮನಸ್ಸು. ಮೊದಲಿನಿಂದಲೂ ಅವರಿಗೆ ಮಕ್ಕಳಲ್ಲಿ ಮನಸ್ಸು. ಅವರ ಉತ್ಸಾಹ ಕಲೆಯೆರಡು ಅವರಲ್ಲಿ ಮಗುವಾಗಿರಲಿ. ಆರೋಗ್ಯ ಮಾತ್ರ ಪ್ರಾಯಕ್ಕೆ ಬರಲಿ. ಹಂದೆಯವರಂತೆ ಹಾಡಿನ ಹಂದರವನ್ನು ನಾನು ಕಟ್ಟಲಾರೆ.( ಯಾವುದೇ ಕಾರ್ಯಕ್ರಮ, ಶುಭ ಸಮಾರಂಭಗಳಲ್ಲಿ ಹಂದೆಯವರು ಒಂದು ಪದ್ಯವನ್ನು ರಚಿಸಿ ಹೇಳುತ್ತಾರೆ) ಹಾಗಾಗಿ ಮಾತಿನ ಮಾಲೆಯನ್ನು ತೊಡಿಸಿದ್ದೇನೆ. ಸರಿಯಾಗಿದೆಯೆ?!

ನೆನಪಿನ ಬರಹ
ಮಂಟಪ ಪ್ರಭಾಕರ ಉಪಾಧ್ಯ.

ನೆನಪಿನ ಪುಟಗಳಿಂದ-72 (ರಂಗ ಹಂದರ)

error: Content is protected !!
Share This