‘ಯಕ್ಷಧ್ರುವ ಪಟ್ಲ ಸಂಭ್ರಮ’ದಲ್ಲಿ ಎನ್‌. ವಿನಯ್‌ ಹೆಗ್ಡೆ ಶ್ಲಾಘನೆ

ಯಕ್ಷಗಾನದ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರು ಕಲಾವಿದರಿಗೆ ಆತ್ಮಸ್ಥೈರ್ಯ ತುಂಬುವ ಮೂಲಕ ಸಮಾಜಮುಖಿ ಕೆಲಸಕ್ಕೆ ಮಾದರಿಯನ್ನು ರೂಪಿಸಿದ್ದಾರೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್‌. ವಿನಯ್‌ ಹೆಗ್ಡೆ ಹೇಳಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್‌ ವತಿಯಿಂದ ನಗರದ ಅಡ್ಯಾರ್ ಗಾರ್ಡನ್‌ನಲ್ಲಿ ಭಾನುವಾರ ಆಯೋಜಿಸಿದ್ದ ‘ಯಕ್ಷಧ್ರುವ ಪಟ್ಲ ಸಂಭ್ರಮ –2019’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸತೀಶ್ ಶೆಟ್ಟಿ ಕೇವಲ ಕಲಾವಿದರಿಗೆ ಸ್ಥೈರ್ಯ ತುಂಬುವ ಕೆಲಸ ಮಾಡಿಲ್ಲ. ಸಮಾಜದ ಒಂದು ಭಾಗವಾಗಿರುವ ಕಲಾವಿದರಲ್ಲಿ ಹುಮ್ಮಸ್ಸು ತುಂಬ ಕಾರ್ಯ ಮಾಡಿದ್ದಾರೆ. ಯಕ್ಷಗಾನ ಕಲಾವಿದರಿಗೆ ಸೂರು, ಆರೋಗ್ಯ, ಅವರ ಮಕ್ಕಳಿಗೆ ಶಿಕ್ಷಣ.. ಹೀಗೆ ಹತ್ತು ಹಲವು ಸೌಲಭ್ಯಗಳನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್‌ ಒದಗಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಟೀಲು ದುರ್ಗಾ ಪರಮೇಶ್ವರಿ ಕ್ಷೇತ್ರ ಅರ್ಚಕ ಲಕ್ಷ್ಮಿನಾರಾಯಣ ಆಸ್ರಣ್ಣ ಮಾತನಾಡಿ, ಒಳ್ಳೆಯ ವಿಚಾರಗಳನ್ನು ಪ್ರೋತ್ಸಾಹಿಸುವ ಕಲೆ ಯಕ್ಷಗಾನ. ಕರಾವಳಿಯ ಸಂಸ್ಕೃತಿಯ ಪ್ರತೀಕವಾಗಿರುವ ಯಕ್ಷಗಾನದ ಬೆಳವಣಿಗೆಗೆ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಸಾರ್ಥಕ ಸೇವೆ ಮಾಡುತ್ತಿದೆ ಎಂದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಮಾತನಾಡಿ, ಪ್ರತಿಷ್ಠಾನವು ಮುಡಿಪು, ಬೆಳ್ತಂಗಡಿ, ಮೂಡುಬಿದಿರೆ, ಕಾರ್ಕಳ, ಪುತ್ತೂರು, ಬಿ.ಸಿ. ರೋಡ್, ಸುಳ್ಯ, ಪೊಳಲಿ, ಒಡಿಯೂರು, ವಿಟ್ಲ, ಎಕ್ಕಾರ–ಕಟೀಲ್‌, ವಾಮಂಜೂರು, ಉಪ್ಪಿನಂಗಡಿ, ಮಂಗಳೂರು, ಪುಂಜಾಲಕಟ್ಟೆ, ಸುರತ್ಕಲ್‌, ಪಡುಬಿದಿರೆ, ಉಪ್ಪಳ, ಕುಂಬ್ಳೆ ಹಾಗೂ ಪುಂಜಾಲಕಟ್ಟೆ ಮಹಿಳಾ ಘಟಕಗಳನ್ನು ಹೊಂದಿದೆ. ಹೊರ ಜಿಲ್ಲೆಗಳಾದ ಬೆಂಗಳೂರು, ಚಿಕ್ಕಮಗಳೂರು, ಹೊರರಾಜ್ಯಗಳಾದ ಚೆನ್ನೈ, ಮುಂಬೈ, ಗುಜರಾತ, ನವದೆಹಲಿಗಳಲ್ಲೂ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಸೌದಿ ಅರೇಬಿಯಾ, ಬಹರೇನ್‌, ಕತಾರ್, ಮಸ್ಕತ್‌, ದುಬೈಗಳಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಘಟಕಗಳನ್ನು ಆರಂಭಿಸಲಾಗಿದೆ. ಇದೇ 29 ರಂದು ಅಮೆರಿಕ ಘಟಕದ ಉದ್ಘಾಟನೆ ನಡೆಯಲಿದೆ ಎಂದು ವಿವರಿಸಿದರು.

ಡಾ.ಎಂ. ಪ್ರಭಾಕರ ಜೋಷಿ ಅವರ ಕುರಿತಾದ ‘ಯಕ್ಷ ಪ್ರಭಾಕರ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಪಟ್ಲ ಪ್ರಶಸ್ತಿ ಪ್ರದಾನ:

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಅರ್ಥದಾರಿ ಡಾ.ಎಂ. ಪ್ರಭಾಕರ ಜೋಷಿ ಅವರಿಗೆ 1 ಲಕ್ಷ ನಗದು ಹಾಗೂ ಸನ್ಮಾನ ಪತ್ರವನ್ನು ಒಳಗೊಂಡ ‘ಪಟ್ಲ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.

ಪೆರವಾಯಿ ನಾರಾಯಣ ಭಟ್, ಬಂಟ್ವಾಳ ಜಯರಾಮ್ ಆಚಾರ್ಯ, ಕಂದಾವರ ರಘುರಾಮ್ ಶೆಟ್ಟಿ, ಐರೋಡಿ ಗೋವಿಂದಪ್ಪ, ಕಿರಂಗಾಲ ನಾರಾಯಣ ಹೊಳ್ಳ, ವೆಂಕಪ್ಪ ಮಾಸ್ತರ್ ಕಿನ್ನಿಗೋಳಿ, ದಯಾಮಣಿ ಎಸ್‌.ಶೆಟ್ಟಿ ಎಕ್ಕಾರು, ರತ್ನಾ ಕೆ. ಭಟ್‌ ಅವರಿಗೆ ತಲಾ 10 ಸಾವಿರ ನಗದು, ಸನ್ಮಾನಪತ್ರವುಳ್ಳ ‘ಯಕ್ಷಧ್ರುವ ಕಲಾ ಗೌರವ’ ಪ್ರದಾನ ಮಾಡಲಾಯಿತು.

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಯಕ್ಷಗಾನ ಕಲಾವಿದರ ಮಕ್ಕಳಿಗೆ ಚಿನ್ನದ ಪದಕ, ಕಲಾವಿದ ಮಕ್ಕಳ ಶಿಕ್ಷಣಕ್ಕಾಗಿ ಪ್ರತಿಭಾ ಪುರಸ್ಕಾರಗಳನ್ನು ನೀಡಲಾಯಿತು. ಕಳೆದ ವರ್ಷ ನಿಧನರಾದ ಯಕ್ಷಗಾನ ಕಲಾವಿದರ ಕುಟುಂಬಗಳಿಗೆ ತಲಾ 50 ಸಾವಿರ ಸಹಾಯಧನ, 10 ಕಲಾವಿದರ ಮನೆ ನಿರ್ಮಾಣಕ್ಕೆ ತಲಾ ₹25 ಸಾವಿರ ಸಹಾಯಧನ ನೀಡಲಾಯಿತು.

ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಮಾಧೂರು ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಯು.ಟಿ. ಆಳ್ವ ಉದ್ಘಾಟಿಸಿದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಚಿಕ್ಕಮಕ್ಕಳ ತಜ್ಞ ಡಾ. ಸಂದೀಪ್‌ ರೈ, ಪೊಳಲಿ ಕ್ಷೇತ್ರದ ಆಡಳಿತ ಟ್ರಸ್ಟಿ ಡಾ. ಮಂಜುನಾಥ ಶೆಟ್ಟಿ, ಹಿರಿಯ ಲೆಕ್ಕ ಪರಿಶೋಧಕ ಎಸ್‌.ಎಸ್‌ ನಾಯಕ, ಶಾಂತಿವನ ಟ್ರಸ್ಟ್‌ ಕಾರ್ಯದರ್ಶಿ ಸೀತಾರಾಮ್‌ ತೋಳ್ಪಡಿತ್ತಾಯ, ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ. ಸತೀಶ್‌ಕುಮಾರ್‌ ಭಂಡಾರಿ ವೇದಿಕೆಯಲ್ಲಿದ್ದರು.

3 ವರ್ಷದಲ್ಲಿ ₹ 4 ಕೋಟಿ ನೆರವು

ಪಟ್ಲ ಫೌಂಡೇಶನ್‌ ಮೂರುವರೆ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದು, ಅಲ್ಲಿಂದ ಇಲ್ಲಿಯವರೆಗೆ ಯಕ್ಷಗಾನ ಕಲಾವಿದರು ಹಾಗೂ ಅವರ ಮಕ್ಕಳಿಗೆ ಒಟ್ಟು ₹4 ಕೋಟಿ ಮೊತ್ತದ ನೆರವು ಒದಗಿಸಿದೆ.

ನಿವೃತ್ತರಾದ ಕಲಾವಿದರು ಹಾಗೂ ಹಾಲಿ ಮೇಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲಾವಿದರ ಕುಟುಂಬಗಳಿಗೆ ಆರ್ಥಿಕ ಹಾಗೂ ವೈದ್ಯಕೀಯ ನೆರವು ಒದಗಿಸಲಾಗಿದೆ. ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಅಲ್ಲದೇ ಸೂರು ಇಲ್ಲದ ಕಲಾವಿದರಿಗೆ ಪಟ್ಲ ಯಕ್ಷಾಶ್ರಯ ಯೋಜನೆಯಡಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಈ ಯೋಜನೆಗಾಗಿ ಕಿನ್ನಿಗೋಳಿಯ ಬಳಿ 11 ಎಕರೆ ಜಮೀನು ಖರೀದಿಸಲಾಗಿದ್ದು, 100 ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಫೌಂಡೇಶನ್‌ ಸ್ಥಾಪಕಾಧ್ಯಕ್ಷ ಸತೀಶ್‌ ಶೆಟ್ಟಿ ಪಟ್ಲ ತಿಳಿಸಿದರು.

ಯಕ್ಷಗಾನ ಶ್ರೀಮಂತ ಕಲೆ. ಇನ್ಯಾವುದೋ ಫ್ಯಾನ್ಸಿ ರಂಗದಿಂದ ಅದು ಏನನ್ನೂ ಪಡೆಯಬೇಕಿಲ್ಲ. ವಿಶ್ವರಂಗಭೂಮಿಯನ್ನು ಸರಿಗಟ್ಟುವ ನೆಲೆಯಲ್ಲಿ ಯಕ್ಷಗಾನ ಬೆಳೆಯಬೇಕಾಗಿದೆ.

ಡಾ.ಎಂ. ಪ್ರಭಾಕರ ಜೋಷಿ, ಪ್ರಶಸ್ತಿ ಪುರಸ್ಕೃತ

(ಪ್ರಜಾವಾಣಿ )

error: Content is protected !!
Share This