ಬಹುಶ್ರುತ ವಿದ್ವಾಂಸ, ಲೇಖಕ, ಪ್ರವಚನಕಾರ, ಅರ್ಥಧಾರಿ ಡಾ. ಪಿ. ಶಾಂತಾರಾಮ ಪ್ರಭುಗಳು ಉಪನ್ಯಾಸಕರಾಗಿ ನಿವೃತ್ತರು.

ಭುಗಳ ಹಿರಿಯರು ಮೂಲತಃ ಉಡುಪಿಯ ಸಮೀಪದ ಪೆರ್ಣಂಕಿಲದವರು. ಅವರ ತಂದೆ ಆಯುರ್ವೇದ ಪಂಡಿತರಾಗಿ ತೀರ್ಥಹಳ್ಳಿಯ ಚಿಕ್ಕಬಿಂತಳ ಊರಿನಲ್ಲಿ ನೆಲೆಸಿದರು. ಪಿ. ಶ್ಯಾಮ ಪ್ರಭು-ಶಾರದಾ ದಂಪತಿ ಸುಪುತ್ರರಾಗಿ 1949ರಲ್ಲಿ ಜನಿಸಿದ ಇವರ ಆರಂಭದ ವಿದ್ಯಾಭ್ಯಾಸ ಆದದ್ದು ತೀರ್ಥಹಳ್ಳಿ ಪರಿಸರದಲ್ಲಿ ತುಂಗಾ ಪ್ರಥಮದರ್ಜೆ ಕಾಲೇಜಿನಲ್ಲಿ ಪದವೀಧರರಾಗಿ ಕರ್ನಾಟಕ ಮತ್ತು ಮೈಸೂರು ವಿಶ್ವವಿದ್ಯಾಲಯಗಳಲ್ಲಿ ಅನುಕ್ರಮವಾಗಿ ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಎ. ಎನ್ ಮೂರ್ತಿರಾಯರ ಸಮಗ್ರ ಸಾಹಿತ್ಯ ಒಂದು ಅಧ್ಯಯನ ಎಂಬ ವಿಷಯದ ಮೇಲೆ ಮಹಾಪ್ರಬಂಧ ಬರೆದು ಕುವೆಂಪು ವಿಶ್ವವಿದ್ಯಾನಿಲಯದ ಪಿ.ಹೆಚ್ ಡಿ ಉಪಾಧಿಯಿಂದ ಮಾನ್ಯರು.

ಡಾ. ಪ್ರಭುಗಳಿಗೆ ಯಕ್ಷಗಾನಾಸಕ್ತಿ ತಂದೆಯಿಂದ ಬಂದ ಬಳುವಳಿ. ತಾಳಮದ್ದಲೆ ಆರ್ಥಗಾರಿಕೆಗೆ ಶಾಂತಾರಾಮ ಪ್ರಭುಗಳಿಗೆ ಗುರುಗಳಾಗಿ ಒದಗಿದವರು ವೇದಬ್ರಹ್ಮ ತ್ರಿವೇದಿ ಹಂದಲಸು ಲಕ್ಷ್ಮೀನಾರಾಯಣ ಭಟ್ಟರು. ಶೇಣಿ, ಸಾಮಗ, ಪೆರ್ಲರಂತಹ ಅತಿರಥ ಮಹಾರಥರ ಕೂಟಗಳಲ್ಲಿ ಅರ್ಥಧಾರಿಯಾಗಿ ಭಾಗವಹಿಸಿದ್ದಾರೆ. ಅಪಾರ ಪುರಾಣಜ್ಞಾನ, ನಿರರ್ಗಳವಾಗಿ ಪ್ರವಹಿಸುವ ವಾಗ್ದಾರೆಯಿಂದ ಅವರ ಅರ್ಥ ಕರ್ಣಾನಂದಕರ, ಲೋಕಾನುಭವದ ಗಣಿ.

ಇವರು ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಅನೇಕ ಉತ್ತಮ ಲೇಖನಗಳನ್ನು ಪ್ರಕಟಿಸಿದ್ದಾರೆ. ವಿಸ್ತ್ರತ ಓದು ಅವರನ್ನು ಬೆಳೆಸಿದೆ. ಅವರ ಮನೆಯೊಂದು ಗ್ರಂಥಾಲಯ, ಕನ್ನಡ, ಇಂಗ್ಲೀಷ್, ಹಿಂದಿ ಅನ್ಯಾನ್ಯ ಭಾಷೆಯ ಉತೃ ಷ್ಟ ಗ್ರಂಥಗಳು ಅವರ ಭಂಡಾರದಲ್ಲಿವೆ. 2013 ರಲ್ಲಿ ಹೊಸನಗರ ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷತೆಯ ಗೌರವ ಸಂದಿದೆ. ಉತ್ತಮ ಪ್ರವಚನಕಾರ. ಪುರಾಣ ಕತೆಗಳಿಗೆ ಅವರು ನೀಡುವ ವ್ಯಾಖ್ಯಾನ ಮನೋಜ್ಞ. ಅನೇಕ ಅವಧಾನ ಕಾರ್ಯಕ್ರಮಗಳಲ್ಲಿ ಪ್ರಚಕರಾಗಿ ಭಾಗವಹಿಸಿದ್ದಾರೆ.

ನಿಟ್ಟೂರಿನಲ್ಲಿ ತಮ್ಮ ಸ್ವಂತ ಮನೆ, ಕೃಷಿಯಲ್ಲಿ ಬಾಳಸಂಗಾತಿಯೊಂದಿಗೆ ಸಂತೃಪ್ತ ಬದುಕು ಸಾಗಿಸುತ್ತಿರುವ ಪ್ರಭುಗಳು ಪ್ರಚಾರ ಆಡಂಬರವನ್ನು ಬಯಸದ ಮೌನ ಸಾಧಕ. ಎಲ್ಲವನ್ನೂ ಸಮಚಿತ್ತ ದಿಂದ ಶಾಂತವಾಗಿ ಸ್ವೀಕರಿಸುವ ಇವರಿಗೆ ಶಾಂತಾರಾಮ ಎಂಬುದು ಅಂಕಿತನಾಮವಷ್ಟೇ ಅಲ್ಲ ಅನ್ವರ್ಥವಾಗಿಯೂ ಭೂಷಣ.

ಕಲಾಂತರಂಗ

error: Content is protected !!
Share This