ಎಸ್ . ಆರ್ . ವಿಜಯಶಂಕರ

ನಮ್ಮ ನಾಡಿನಲ್ಲೀಗ ಲಿಂಗ ಸಮಾನತೆ ಹಾಗೂ ಲಿಂಗ ವೈವಿಧ್ಯತೆ ಹಲವು ಹಂತಗಳಲ್ಲಿ ಚರ್ಚೆಗೆ ಒಳಗಾಗುತ್ತಿದೆ. ಭಾರತೀಯ ದಂಡ ಸಂಹಿತೆ ದೇವಸ್ಥಾನ, ಧರ್ಮ, ವಿವಾಹ ವಿಚ್ಛೇದನ (ತಲಾಖ್)- ಇಲ್ಲೆಲ್ಲ ಲಿಂಗ ಸಮಾನತೆಯನ್ನು ಸಂವಿಧಾನ ನೀಡಿದ ಸಮಾನತೆಯ ಹಕ್ಕಿಗೆ ಅನುಗುಣವಾಗಿ ಸರ್ವೋಚ್ಛ ನ್ಯಾಯಾಲಯ ಎತ್ತಿಹಿಡಿದ ಬಳಿಕ ಲೈಂಗಿಕ ಸಮಾನತೆಯ ಚರ್ಚೆಗೆ ವಿಶೇಷ ಕಾವು ಬಂದಿದೆ. ಇಂತಹ ಸಂದರ್ಭದಲ್ಲಿ ಒಂದು ದಶಕದ ಹಿಂದೆಯೇ ಪ್ರಕಟವಾದ ಡಾ. ಪ್ರಭಾಕರ ಶಿಶಿಲ ಅವರ ‘ಪುಂಸ್ತ್ರೀ’ ಎಂಬ ಕಾದಂಬರಿ ವಿಶೇಷ ಗಮನ ಸೆಳೆಯುತ್ತದೆ.

ಮಹಾಭಾರತದ ಅಂಬೆ ಹಾಗೂ ಭೀಷ್ಮರ ಕುರಿತಾದ ಈ ಕಾದಂಬರಿಯನ್ನು ರಚಿಸಿದ ಪ್ರಭಾಕರ ಶಿಶಿಲ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ, ಅದೇ ಕಾಲೇಜಿನ ಪ್ರಾಂಶುಪಾಲರೂ ಆಗಿ ನಿವೃತ್ತಿ ಹೊಂದಿದ್ದಾರೆ. ಅರ್ಥಶಾಸ್ತ್ರ ಹಾಗೂ ಕನ್ನಡ ಸಾಹಿತ್ಯ ಸಂಬಂಧಿ ಹಲವಾರು ಕೃತಿಗಳನ್ನು ಶಿಶಿಲರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ರಚಿಸಿದ್ದಾರೆ. ಇವರ ಕಾದಂಬರಿಗಳಾದ ‘ಪುಂಸ್ತ್ರೀ’ ಇಂಗ್ಲಿಷ್ ಹಾಗೂ ಹತ್ತಕ್ಕೂ ಹೆಚ್ಚು ಭಾರತೀಯ ಭಾಷೆಗಳಿಗೆ ಮತ್ತು ‘ಮತ್ಸ್ಯಗಂಧಿ’ ಐದು ಭಾಷೆಗಳಿಗೆ ಅನುವಾದಗೊಂಡಿವೆ. ‘ಒಂದು ಹಳ್ಳಿಯ ಕಥೆ’ ಕಥಾ ಸಂಕಲನ, ‘ಕೊಡಗು ಕಥನ’ ಎಂಬ ಐತಿಹಾಸಿಕ ಕಾದಂಬರಿ ಜನಮನ್ನಣೆ ಗಳಿಸಿವೆ. ಆರು ಕಾದಂಬರಿಗಳಲ್ಲದೆ ಜನಪದ, ಯಕ್ಷಗಾನ, ಪ್ರವಾಸ ಸಾಹಿತ್ಯ, ಸಂಶೋಧನೆ, ವಿಮರ್ಶೆ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿಯೂ ಅವರು ಕೆಲಸ ಮಾಡಿದ್ದಾರೆ.

ಕನ್ನಡದಲ್ಲಿ ಪೌರಾಣಿಕ ಪಾತ್ರಗಳನ್ನು ಆಧರಿಸಿದ ಕಾದಂಬರಿಗಳು ಹೊಸದಲ್ಲ. ‘ಮಹಾಬ್ರಾಹ್ಮಣ’, ಮಹಾಕ್ಷತ್ರಿಯ’ ಮೊದಲಾದ ಕಾದಂಬರಿಗಳನ್ನು ಬರೆದ ದೇವುಡು ಮೊದಲಿಗೆ ನೆನಪಿಗೆ ಬರುತ್ತಾರೆ. ಮರಾಠಿಯಿಂದ ಖಾಂಡೇಕರ್‌ ಅವರ ‘ಯಯಾತಿ’ ಕನ್ನಡಕ್ಕೆ ಅನುವಾದಗೊಂಡು ಕನ್ನಡ ಕೃತಿಯಷ್ಟೇ ಜನಪ್ರಿಯವಾಗಿದೆ. ಇರಾವತಿ ಕರ್ವೆಯವರ ‘ಯುಗಾಂತ’ದ ಎರಡು ಅನುವಾದಗಳು ಕನ್ನಡದಲ್ಲಿವೆ. ಈಚೆಗಂತೂ ಎಸ್‌.ಎಲ್‌. ಭೈರಪ್ಪ ಅವರ ‘ಪರ್ವ’ ಮಹಾಭಾರತವನ್ನು ಪುರಾಣ ಪ್ರತಿಮೆಗಳಿಂದ ಕಳಚಿ ವಾಸ್ತವದ ಮಾನುಷ ವಿವರಗಳಲ್ಲಿ ನಿರೂಪಿಸಿದ ಕಾದಂಬರಿ. ಸತ್ಯಕಾಮರು ಕೂಡಾ ಹಲವು ಪೌರಾಣಿಕ ಕಾಲ್ಪನಿಕ ಕಾದಂಬರಿಗಳನ್ನು ಸೃಜಿಸಿದ್ದಾರೆ. ಈ ಪಟ್ಟಿಗೆ ಇನ್ನೂ ವಿವರಗಳನ್ನು ಸೇರಿಸಬಹುದಾಗಿದೆ. 

ಪುರಾಣದ ಬಗ್ಗೆ ಇಂದಿನ ದೃಷ್ಟಿಕೋನದಲ್ಲಿ ಬರೆದಾಗ ನಾವು ‘ಮಿಥ್‌’ ಎನ್ನಬಹುದಾದ ಪೌರಾಣಿಕ ನಂಬಿಕೆಯ ಕಲ್ಪನಾಲೋಕ, ಚಾರಿತ್ರಿಕ ವಿವರಗಳ ಲೋಕ, ಇಂದಿನ ವಾಸ್ತವದ ಮಾನವೀಯ ಲೋಕ- ಈ ಮೂರೂ ಕೂಡಾ ಇರುತ್ತವೆ. ಮಾಸ್ತಿಯವರ ‘ಗೌತಮಿ ಹೇಳಿದ ಕತೆ’ ‘ಹೇಮಕೂಟದಿಂದ ಬಂದ ಮೇಲೆ’ ಮೊದಲಾದ ಸಣ್ಣ ಕತೆಗಳು ಮಿಥ್‌, ಚರಿತ್ರೆ, ಇಂದಿನ ಮಾನುಷ ವಾಸ್ತವ ಮೂರನ್ನೂ ಬಳಸಿಕೊಳ್ಳುತ್ತವೆ. ಪಂಪ, ಕುಮಾರವ್ಯಾಸ, ಕುವೆಂಪು ಮಹಾಭಾರತ ಹಾಗೂ ರಾಮಾಯಣಗಳೆಂಬ ಪುರಾಣಗಳನ್ನು ತಮ್ಮ ಕೃತಿಗಳಲ್ಲಿ ಪುನರ್‌ ಸೃಷ್ಟಿ ಮಾಡುತ್ತಾರೆ. ಪಂಪ ಅರ್ಜುನನ ವಿಕ್ರಮವನ್ನು ಎತ್ತಿ ಹಿಡಿದರೆ ಕುಮಾರವ್ಯಾಸ ಭಕ್ತಿಯನ್ನು ಮುನ್ನೆಲೆಗೆ ತರುತ್ತಾನೆ. ಕುವೆಂಪು ಅವರ ‘ರಾಮಾಯಣ ದರ್ಶನಂ’ನಲ್ಲಿ ನೆಲಕ್ಕೆ ಬಿದ್ದ ಹಕ್ಕಿಗೆ ತಮ್ಮ ಸಂಜೀವಿನೀ ವಿದ್ಯೆಯಿಂದ ವಾಲ್ಮೀಕಿ ಜೀವ ಬರಿಸುತ್ತಾರೆ. ಶೋಕವನ್ನು ಅವರು ಭೂಮಾನುಭವಕ್ಕೇರಿಸುತ್ತಾರೆ. ಹೀಗೆ ಪೌರಾಣಿಕ ಕಥಾಂತರಗಳು, ಬದಲಾವಣೆಗಳು ಮತ್ತು ನೂತನ ವ್ಯಾಖ್ಯಾನಗಳು ಕನ್ನಡ ಪರಂಪರೆಯ ಭಾಗವೇ ಆಗಿವೆ. 

ದ.ಕ. ಜಿಲ್ಲೆ ಯಕ್ಷಗಾನ ಪ್ರಧಾನವಾದ ಜಾಗ. ಪಾರ್ತಿಸುಬ್ಬನ ಕಾಲದಿಂದ ಇಂದಿನ ವರೆಗೆ ಪೌರಾಣಿಕ ಪಾತ್ರಗಳ ಬಗ್ಗೆ ಹಲವು ವ್ಯಾಖ್ಯಾನಗಳು ನಡೆದಿವೆ. ಯುರೋಪಿನಂತೆ ನಮ್ಮ ದೇಶದಲ್ಲೂ ಮಾನವತಾವಾದ ಪೌರಾಣಿಕತೆಯನ್ನು ಸರಳ ಭಾಷೆಯಲ್ಲಿ ಜನರಿಗೆ ಅನುವಾದಗೊಳಿಸಿತು. ಇಂಗ್ಲಿಷ್‌ ವಿದ್ಯಾಭ್ಯಾಸದಿಂದ ಬಂದ ಮಾನವತಾವಾದದ ಸಾಹಿತ್ಯ ಪ್ರಜ್ಞೆ ನಮ್ಮಲ್ಲೂ ಹಲವು ಪುರಾಣ ನಾಯಕ ನಾಯಕಿಯರನ್ನು ಆಧುನಿಕ ಮಾನವ ಪಾತ್ರಗಳಂತೆ ಚಿತ್ರಿಸತೊಡಗಿತು. ಒಂದು ರೀತಿಯಲ್ಲಿ ಇದು ರವೀಂದ್ರನಾಥ ಠಾಗೋರರ ‘ಊರ್ಮಿಳೆ’ಯಿಂದಲೇ ಪ್ರಾರಂಭವಾಯಿತು. ಅದರ ಜತೆ ಆಧುನಿಕ ಸಮಸ್ಯೆಗಳಿಗೂ ಪ್ರತಿಕ್ರಿಯಿಸತೊಡಗಿ ಪುರಾಣ ಕೃತಿಗಳನ್ನೂ ರೂಪಕದಂತೆ ಬಳಸಿರುವುದನ್ನು ಕಾಣಬಹುದು. ಈಚೆಗೆ ವೀರಪ್ಪ ಮೊಯಿಲಿಯವರ ‘ರಾಮಾಯಣ ಮಹಾನ್ವೇಷಣಂ’ನಲ್ಲಿ ಕಾಡಿನಲ್ಲಿ ಮದ್ಯಸೇವನೆ ಮಾಡಿ ಹೆಂಡತಿಗೆ ಹೊಡೆಯುವ ಒಬ್ಬ ಕಾರ್ಮಿಕನನ್ನು ನೋಡಿದ ಬಳಿಕ ಸೀತೆಯು ರಾಮನಲ್ಲಿ ಅಯೋಧ್ಯೆಯ ಅರಸನಾದ ಬಳಿಕ ಪಾನನಿಷೇಧ ಜಾರಿಗೆ ತರಬೇಕೆಂದು ವಚನ ಕೇಳುತ್ತಾಳೆ. ಪ್ರಭಾಕರ ಶಿಶಿಲರು ಕೃತಿ ರಚಿಸಿದ ದ.ಕ. ಜಿಲ್ಲೆಯ ಯಕ್ಷಗಾನ ತಾಳಮದ್ದಳೆಗಳಲ್ಲಂತೂ ಪುರಾಣಗಳ ಸಮಕಾಲೀನತೆ ಹಾಗೂ ಮಾನವೀಯತೆಗಳು ಹಲವು ನೆಲೆಗಳನ್ನು ಪಡೆಯುತ್ತವೆ. ಯಕ್ಷಗಾನ ಚಿಂತನೆಯಲ್ಲಿ ಹುಟ್ಟಿಬಂದರೂ ‘ಪುಂಸ್ತ್ರೀ’ ಕನ್ನಡ ಸಾಹಿತ್ಯ ಪರಂಪರೆಗೆ ಸೇರಿದ ಕೃತಿ. ಕಾದಂಬರಿಯ ಶೀರ್ಷಿಕೆಯನ್ನು ನೋಡಿದಾಗ ‘ಶಬ್ದಮಣಿದರ್ಪಣಂ’ ಕೃತಿಕಾರ ಕೇಶಿರಾಜನು ಕನ್ನಡ ಭಾಷೆಯಲ್ಲಿ ಒಂಬತ್ತು ಬಗೆಯ ಲಿಂಗಗಳನ್ನು ಉದಾಹರಣೆ ಸಹಿತ ಗುರುತಿಸಿದರೂ ‘ಪುಂ ಸ್ತ್ರೀ ನಪ್‌’ಗಳ ಹೊರತು ಉಳಿದ ಲಿಂಗಗಳನ್ನು ‘ಅಲಂಕಾರಿಕವಾದವು’ ಎಂದ ಮಾತುಗಳು ನೆನಪಾಗುತ್ತವೆ. 

ಖ್ಯಾತ ಯಕ್ಷಗಾನ ಅರ್ಥಧಾರಿ ಶೇಣಿ ಗೋಪಾಲಕೃಷ್ಣ ಭಟ್ಟರು ಒಮ್ಮೆ, ”ಭೀಷ್ಮನು ಹೆಣ್ಣಿಗೆ ಸೋಲುವುದಿಲ್ಲ; ಭೀಷ್ಮನನ್ನು ಸೋಲಿಸುವ ಗಂಡಸು ಇಲ್ಲ,” ಎಂದಿದ್ದರು. ಅಂತಹ ಹಲವು ಮಿಂಚುವಾಕ್ಯಗಳು ‘ಪುಂಸ್ತ್ರೀ’ಯಲ್ಲಿವೆ. ಯಕ್ಷಗಾನದ ಸಾಂದರ್ಭಿಕ ಹಾಸ್ಯಕ್ಕೂ (ಉದಾ: ಪರಶುರಾಮರೇ ಅಂಬೆಯನ್ನು ಮದುವೆಯಾಗಲಿ ಎಂಬ ಭೀಷ್ಮನ ತಿಳಿಹಾಸ್ಯ) ಕಾದಂಬರಿ ಗಂಭೀರ ತಾರ್ಕಿಕ ಸಾಧ್ಯತೆಗಳನ್ನು ಸೂಚಿಸುತ್ತದೆ. 

ಇರಾವತಿ ಕರ್ವೆಯವರು ‘ಯುಗಾಂತ’ದಲ್ಲಿ ಸಮಾಜ ಶಾಸ್ತ್ರ, ಅರ್ಥಶಾಸ್ತ್ರ, ಚರಿತ್ರೆ- ಹೀಗೆ ಹಲವು ಹಿನ್ನೆಲೆಗಳಲ್ಲಿ ಮಹಾಭಾರತವನ್ನು ವಿಶ್ಲೇಷಿಸಿದರು. ಗಾಂಧಾರಿಯ ಅಂತರಂಗ ಚಿಂತನೆಯನ್ನು ಆಧುನಿಕ ಪಾತ್ರ ಕಲ್ಪನೆಯಿಂದ ವ್ಯಾಖ್ಯಾನಿಸಿ ಕಾಣಿಸಿದರು. ಪುರಾಣಗಳಲ್ಲಿ ಆಧುನಿಕ ಸಾಹಿತ್ಯದ ಪ್ರಜ್ಞಾ ಪ್ರವಾಹ ತಂತ್ರ ಇಲ್ಲ. ಅಂತಹ ಮನಸ್ಸಿನ ಒಳತೋಟಿಯ ವಿವರಣೆಯನ್ನು ‘ಪೀಠಿಕೆ’ಯ ಮಾತುಗಳಲ್ಲಿ ಯಕ್ಷಗಾನ ತಾಳಮದ್ದಳೆಯ ಅರ್ಥಧಾರಿಗಳು ಹೇಳುತ್ತಾರೆ. ಅಂತಹ ಅರ್ಥಗಾರಿಕೆಯ ತಂತ್ರಗಳನ್ನು ‘ಪುಂಸ್ತ್ರೀ’ ಕಾದಂಬರಿಯ ನಿರೂಪಣೆಯಲ್ಲಿ ಬಾಗುಬಳಕುಗಳೊಡನೆ ಶಿಶಿಲ ಉಪಯೋಗಿಸುತ್ತಾರೆ. ಪಾತ್ರಗಳ ಸ್ವಗತ ರೀತಿಯ ಮಾತುಗಳು, ಪರಸ್ಪರ ಪಾತ್ರಗಳ ಸಂಭಾಷಣೆ ಹಾಗೂ ನಿರೂಪಕನ ಮಾತುಗಳು ಈ ಕಾದಂಬರಿಯ ತಂತ್ರಭಾಗ. ದ.ಕ. ಜಿಲ್ಲೆಯ ಯಕ್ಷಗಾನ ತಾಳಮದ್ದಳೆಗಳನ್ನು ಕೇಳಿದವರಿಗೆ ಕಲಾಪ್ರಕಾರವೊಂದು ಸಾಹಿತ್ಯದ ಕಾದಂಬರಿ ಪ್ರಕಾರದ ಮೇಲೆ ಮಾಡಿದ ಪ್ರಭಾವವನ್ನು ಸುಲಭವಾಗಿ ಗುರುತಿಸಬಹುದು. ಅದರ ಜತೆ ‘ಗಿರಿನಾಯಕ’ ಮೊದಲಾದ ನೂತನ ಪಾತ್ರಗಳು ಮೂಲ ಪುರಾಣದಲ್ಲಿ ಇಲ್ಲದ; ತಮ್ಮ ವಿಚಾರ ನಿರೂಪಣೆಗಾಗಿ ಕಾದಂಬರಿಕಾರರು ಕಲ್ಪಿಸಿಕೊಂಡ ಪಾತ್ರಗಳು. 

ಯಕ್ಷಗಾನದ ಪ್ರಮುಖ ವಿದ್ವಾಂಸರೂ ಶ್ರೇಷ್ಠ ಕಲಾವಿದರೂ ಆದ ಡಾ. ಎಂ. ಪ್ರಭಾಕರ ಜೋಷಿಯವರು ಈ ಕೃತಿಗೆ ಬರೆದ ಮುನ್ನುಡಿಯಲ್ಲಿ ಪುಂಸ್ತ್ರೀಯ ರೂಪಕ ಶಕ್ತಿಯನ್ನು ವಿವರಿಸಿದ್ದಾರೆ. ಮಹಾಭಾರತದಲ್ಲಿ ಶಿಖಂಡಿ ಪುರುಷನೇ. ಆದರೆ ಹೆಣ್ಣಾಗಿ ಆ ಬಳಿಕ ಗಂಡಾದ ಹಿನ್ನೆಲೆ ಇರುವವನು. ಪುರಾಣಗಳಲ್ಲಿ ಬೃಹನ್ನಳೆಯಂತೆ ಹೆಣ್ಣಾಗಿ ಗಂಡಾದ ಪಾತ್ರಗಳು ಸಾಮಾನ್ಯ. ಗಂಡಾಗಿ ಮಕ್ಕಳನ್ನು ಪಡೆದು, ಮತ್ತೆ ಹೆಣ್ಣಾಗಿ ಹೆತ್ತು, ಪುನಃ ಗಂಡಾದ ಭಂಗಾಸ್ವನ ಮಹಾರಾಜನಂತಹ ಪಾತ್ರಗಳೂ ಇವೆ. ಶಿಖಂಡಿ ಜನಮಾನಸದ ತಿಳಿವಳಿಕೆಯಲ್ಲಿ ನಪುಂಸಕ ಎಂಬ ಗ್ರಹಿಕೆ ಇದೆ. ಅಂಬೆಯನ್ನು ವಿವಾಹ ಮಂಟಪದಿಂದ ಭೀಷ್ಮ ಅಪಹರಿಸಿ ತರುವಾಗ ಆತನನ್ನು ಎದುರಿಸುವವ ಸಾಲ್ವ ಮಾತ್ರ. ವಿಚಿತ್ರವೀರ್ಯನನ್ನು ಮದುವೆಯಾಗಲೊಪ್ಪದ ಅಂಬೆ ಭೀಷ್ಮನ ಮೇಲೆ ಪ್ರತೀಕಾರಕ್ಕಾಗಿ ಪಾಂಚಾಲ ರಾಜನ ಸಂತತಿಯಾಗಿ ಹುಟ್ಟಿದ ಶಿಖಂಡಿ. ಅಂಬೆ ಇಲ್ಲಿ ‘ಪುಂಸ್ತ್ರೀ’. ಹೆಣ್ಣಾಗಿ ತನ್ನ ಗುರಿ ಸಾಧನೆಗಾಗಿ ಗಂಡಿನ ಬದುಕನ್ನು ಅನುಭವಿಸಿದವಳು. ಕಾದಂಬರಿಯಲ್ಲಿ ಭೀಷ್ಮನೂ ಪುಂಸ್ತ್ರೀ. ಶ್ರೇಷ್ಠ ಪುರುಷನಾಗಿದ್ದರೂ, ತನ್ನ ಕಟ್ಟುಪಾಡುಗಳೊಳಗೇ ಬಂಧಿಯಾದವ. ಇದೇ ತರ್ಕವನ್ನು ವಿಸ್ತರಿಸುತ್ತಾ ಹೋದರೆ ದ್ರೌಪದಿ, ಕೃಷ್ಣ ಈ ರೀತಿಯ ಪಾತ್ರಗಳನ್ನು ಕೂಡಾ ಹೊಸ ವ್ಯಾಖ್ಯಾನಗಳಿಗೆ ಒಳಪಡಿಸಬಹುದು. 

ಪ್ರತಿಯೊಬ್ಬ ಮನುಷ್ಯನಲ್ಲೂ ಗಂಡು- ಹೆಣ್ಣು ಎರಡೂ ಭಾವಗಳು ಸೇರಿರುತ್ತವೆ. ಗಾಂಧೀಜಿ ಅಥವಾ ಇತರರ ಸಂದರ್ಭದಲ್ಲಿ ಮಾತೃಹೃದಯ, ಅವನೊಳಗೆ ಒಂದು ಸ್ತ್ರೀ ಹೃದಯವಿದೆ, ಇಂತಹ ಮಾತುಗಳಲ್ಲಿ ಗೋಚರಿಸುವುದು ಪುರುಷನೊಳಗಿರುವ ಹೆಣ್ಣನ್ನು ಕಾಣುವ ಪ್ರಯತ್ನ. ವೈದೇಹಿಯವರ ಕಥೆಯೊಂದರಲ್ಲಿ ಗಂಡ- ಹೆಂಡಿರಾಗಿ ಬಹಳ ಕಾಲ ಬದುಕಿದ ದಂಪತಿಗಳಲ್ಲಿ ಹೆಣ್ಣು ಗಂಡನ ದಿರಿಸನ್ನು ಧರಿಸಿ ಪೇಟೆಯಲ್ಲಿ ಓಡಾಡಿದಾಗ ಜನರಿಗೆ ವ್ಯತ್ಯಾಸವೇ ತಿಳಿಯುವುದಿಲ್ಲ. ಅಂಬೆಯಂತೆ ಗುರಿ ಸಾಧನೆಗಾಗಿ ಕೌಟುಂಬಿಕ ಚೌಕಟ್ಟಿನಿಂದ ಹೊರ ಹೋದಾಗ ಅದರ ರೂಪುರೇಷೆಗಳು ಬೇರೆಯಾಗಿರುತ್ತವೆ. ಈ ಹಿನ್ನೆಲೆಯಲ್ಲಿ ಪುಂಸ್ತ್ರೀಯ ಹದಿನೆಂಟು ಅಧ್ಯಾಯಗಳು ಮಹಾಭಾರತದ ಹದಿನೆಂಟು ಪರ್ವಗಳೊಡನೆ ಸಂಖ್ಯಾ ಸಾಮ್ಯ ಹೊಂದಿರುವುದು ಕಾಕತಾಳೀಯ ಇರಲಾರದು. 

ಪುರಾಣ ಕಲ್ಪನೆಗಳಿಗೂ ಮಾನವನ ಆದಿಮ ಕಲ್ಪನೆಗಳಿಗೂ ಇರುವ ಸಂಬಂಧದ ಕುರಿತು ಹಲವು ಚಿಂತನೆಗಳಾಗಿವೆ. ನಾರ್ಥೋಪ್‌ ಫ್ರೈಯರ್‌ ‘ಆರ್ಕಿಟೈಪ್‌’ ಎಂಬ ಪದಪ್ರಯೋಗ ಮಾಡಿ ವಾಸ್ತವವನ್ನು ಮೀರಿದ ಆದಿಮ ಕಲ್ಪನೆಯಲ್ಲಿ ಮನುಷ್ಯನ ಒಳಗೇ ಇಳಿದಿರುವ ಯುಗಾಂತರಗಳಿಂದ ಹರಿದು ಬಂದಿರುವ ಮೂಲ ಕಲ್ಪನೆಗಳ ಕುರಿತಾಗಿ ಚರ್ಚಿಸುತ್ತಾನೆ. ಯುರೋಪಿನ ವಾಸ್ತವವಾದ ಇಂಗ್ಲಿಷ್‌ ವಿದ್ಯಾಭ್ಯಾಸದ ಮೂಲಕ ನಮ್ಮ ನೆಲವನ್ನು ಸೇರಿದ ಬಳಿಕ ನಾವು ಪುರಾಣಗಳನ್ನು ನೋಡುವ, ವ್ಯಾಖ್ಯಾನಿಸುವ ಹಲವು ಹೊಸ ಕ್ರಮಗಳು ಹುಟ್ಟಿಕೊಂಡಿವೆ. ಅಂತಹ ಕ್ರಮಗಳು ನೀಡುವ ಕೊಡುಗೆಗಳೇನು? ಭಾರತೀಯ ನವೋದಯ ಕಾಲದಿಂದ ಅಂತಹ ಹಲವು ಪ್ರಯತ್ನಗಳಾಗಿವೆ. ಅವುಗಳು ನಮ್ಮ ಪುರಾಣ ಪ್ರವೃತ್ತಿಯನ್ನಾಗಲಿ, ಇಂದಿನ ಗ್ರಹಿಕೆಯನ್ನಾಗಲಿ ಹೆಚ್ಚು ಮಾಡಿವೆಯೇ? ಎಂಬ ಪ್ರಶ್ನೆಗಳನ್ನೂ ಈಗ ಕೇಳಿಕೊಳ್ಳಬೇಕಾಗಿದೆ. 

‘ಶೂದ್ರ ತಪಸ್ವಿ’ಯ ಸಂದರ್ಭದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಹಾಗೂ ಕುವೆಂಪು ಅವರ ನಡುವೆ ನಡೆದ ಚರ್ಚೆಯಲ್ಲಿ ಮಾಸ್ತಿ ಒಂದು ವಿಚಾರ ಸೂಚಿಸುತ್ತಾರೆ. ಅದೆಂದರೆ ಆಧುನಿಕ ಧರ್ಮ ವಿಚಾರಗಳನ್ನು ಹೇಳಲು ಆಧುನಿಕ ಕತೆಗಳನ್ನು ಬಳಸಬೇಕು ಎಂಬುದು. ‘ಜೀವನ’ ಪತ್ರಿಕೆಯಲ್ಲಿ ಮಾಸ್ತಿಯವರು ‘ಶೂದ್ರತಪಸ್ವಿ’ ಬಗ್ಗೆ ಬರೆದ ಲೇಖನಕ್ಕೆ ಆ ನಾಟಕದ ಎರಡನೇ ಮುದ್ರಣದಲ್ಲಿ ಕುವೆಂಪು ಉತ್ತರ ನೀಡುತ್ತಾರೆ. ಅದರ ಜತೆ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಹಾಗೂ ಅವರ ಎರಡು ಕಾದಂಬರಿಗಳನ್ನು ಗಮನಿಸಿದರೆ ಕುವೆಂಪು ಅವರು ಆಧುನಿಕ ಧರ್ಮ ಹಾಗೂ ವಿಚಾರಗಳನ್ನು ಎರಡೂ ರೀತಿಯಲ್ಲಿ- ಪೌರಾಣಿಕ ಮತ್ತು ಆಧುನಿಕ ಕತೆಗಳ ಮೂಲಕ ಹೇಳಬಹುದು ಎಂಬುದನ್ನು ಸೂಚಿಸಿದಂತೆ ಭಾಸವಾಗುತ್ತಿದೆ. ಆದರೆ ಪೌರಾಣಿಕ ಕೃತಿಗಳ ಪುನರ್‌ ಸೃಷ್ಟಿಯಲ್ಲಿ ಆಧುನಿಕ ವಾಸ್ತವವಾದದ ಪಾಲು ಹೇಗಿರಬೇಕು ಎಂಬ ಚರ್ಚೆ ಇನ್ನೂ ಅಪೂರ್ಣವಾಗಿಯೇ ಇದೆ. 

ಪಂಪ ಅರಿಕೇಸರಿಯನ್ನು ಅರ್ಜುನನಿಗೆ ಸಮೀಕರಿಸುತ್ತಾನೆ. ಕುಮಾರವ್ಯಾಸನಲ್ಲಿ, ಸಂಧಾನಕ್ಕೆ ರಥದಲ್ಲಿ ಪ್ರಯಾಣಿಸಿ ಹಸ್ತಿನಾಪುರಕ್ಕೆ ಬರುವ ಕೃಷ್ಣನ ಮೀಸೆಯಲ್ಲಿ ರಸ್ತೆಯ ಕೆಂಪಡರ್ದ ರೇಣುಗಳು (ಧೂಳಿನ ಕೆಂಪು ಕಣಗಳು) ಕುಳಿತಿರುತ್ತವೆ. ಇಂತಹ ವಾಸ್ತವಕ್ಕೂ ‘ಪುಂಸ್ತ್ರೀ’ಯಲ್ಲಿ ಕಾಶೀರಾಜನ ಪುತ್ರಿಯರ ಸ್ವಯಂವರಕ್ಕೆ ಹೋಗುವಾಗ ಅಲ್ಲಲ್ಲಿ ಛತ್ರಗಳಂತಹ ಜಾಗಗಳಲ್ಲಿ ತಂಗಿ ಕುದುರೆಗಳನ್ನು ಬದಲಿಸುತ್ತಾ ಹೋಗುವ ಭೀಷ್ಮನಿಗೂ ಇರುವ ವ್ಯತ್ಯಾಸಗಳೇನು? ಎಂಬುದನ್ನು ನಾವು ಚಿಂತಿಸಬೇಕಾಗುತ್ತದೆ. ಮಾಸ್ತಿಯವರ ‘ಶ್ರೀಕೃಷ್ಣನ ಕೊನೆಯ ಸಂದರ್ಶನ’ ಎಂಬ ಕತೆಯಲ್ಲಿ ವಾಸ್ತವ ವಿವರ (ಕುದುರೆಗಳ ಬದಲಾವಣೆ ಇತ್ಯಾದಿ) ಪ್ರಕರಣ ಪೌರಾಣಿಕ ಕಲ್ಪನಾಲೋಕಕ್ಕೆ ಸವಾಲು ಒಡ್ಡದೇ ಇದ್ದು ವಾಸ್ತವವನ್ನೂ ಹೇಳಲು ಬಳಸಿದ ತಂತ್ರ ಈ ಸಂದರ್ಭದಲ್ಲಿ ಗಮನಾರ್ಹ. 

ಪ್ರಭಾಕರ ಶಿಶಿಲ ವ್ಯಾಖ್ಯಾನ ರೂಪದ ಕಾದಂಬರಿಯನ್ನು ಬರೆದಿದ್ದಾರೆ. ವ್ಯಾಖ್ಯಾನ ವಿಮರ್ಶೆಯ ಒಂದು ಭಾಗ. ಮೂಲ ಪುರಾಣದ ಕಲ್ಪನೆಗಳಲ್ಲಿ ವ್ಯಾಖ್ಯಾನಕ್ಕೆ ತೊಡಗಿ ಇಂದಿನ ಕಾಲದ ಕಾದಂಬರಿಯನ್ನು ರಚಿಸುವಾಗ ಕೆಲವು ತೊಡಕುಗಳಾಗುತ್ತವೆ. ಕಾದಂಬರಿಯ ತಾರ್ಕಿಕತೆ ಮೂಲವನ್ನು ಆಧರಿಸುತ್ತದೆ. ಅದೇ ಕಾದಂಬರಿಯ ಸೃಜನಶೀಲ ಒತ್ತಡ ನೂತನ ಸೃಷ್ಟಿಯಲ್ಲಿ ತೊಡಗಬೇಕಾಗುತ್ತದೆ. ಹೀಗಾಗಿ ವ್ಯಾಖ್ಯಾನದ ಅಗತ್ಯಕ್ಕೆ ಬೇಕಾದ ತಾರ್ಕಿಕತೆಗಾಗಿ ಪಾತ್ರಗಳು ಲೇಖಕನ ಕೈಗೊಂಬೆಗಳಾಗಿ ಒಂದು ಉದ್ದೇಶಕ್ಕಾಗಿ ಕೆಲಸ ಮಾಡಬೇಕಾಗುತ್ತದೆ. ಆಗ ಅವು ಸ್ವತಂತ್ರ ಪಾತ್ರಗಳಾಗದೆ ವಿಚಾರ ಅಥವಾ ವ್ಯಾಖ್ಯಾನ ಮಂಡನೆಯ ದಾಳಗಳಾಗುತ್ತವೆ. ಅಂತಹ ಸಂದರ್ಭಗಳಲ್ಲಿ ಆ ರೀತಿಯ ಕೃತಿಗಳು ಮರುಸೃಷ್ಟಿ ಆಗುವ ಬದಲು ಮಾರ್ಪಾಟುಗೊಳ್ಳುತ್ತವೆ. ಇದು ಮೀಮಾಂಸೆಯ ಪ್ರಶ್ನೆಯಾದರೂ ನೂತನ ಪುರಾಣ ಕೃತಿಗಳು ಎದುರಿಸಲೇಬೇಕಾದ ಸಮಸ್ಯೆಗಳಲ್ಲಿ ಒಂದಾಗಿದೆ. 

ಇಂದಿನ ಸ್ತ್ರೀವಾದಿ ಚಿಂತನೆಯಲ್ಲಿ ಬಳಸಿಕೊಳ್ಳಲು ಅವಕಾಶವಿರುವ ಈ ಕಾದಂಬರಿ ಒಂದು ರೀತಿಯಲ್ಲಿ ಕನ್ನಡ ಸಾಹಿತ್ಯಕ್ಕೆ ಯಕ್ಷಗಾನ ನೀಡಿದ ಕೊಡುಗೆ. ದೇರಾಜೆ ಸೀತಾರಾಮಯ್ಯ, ಮಂದಾರ ಕೇಶವಭಟ್ಟ, ಹರಿಕೃಷ್ಣ ಭರಣ್ಯ, ವೀರಪ್ಪ ಮೊಯಿಲಿ ಮೊದಲಾದವರು ರಚಿಸಿದ ಕೆಲವು ಕೃತಿಗಳಲ್ಲಿ ನಾವು ಯಕ್ಷಗಾನದ ಪ್ರಭಾವವನ್ನು ಗುರುತಿಸಬಹುದು. ಆದರೆ ಈ ರೀತಿಯ ಬರಹಗಳೆಲ್ಲವೂ ಮಹಾಕಾವ್ಯದ ಮಾರ್ಗದಲ್ಲಿ ಗದ್ಯ, ಪದ್ಯಗಳನ್ನು ಬಳಸಿ ನಡೆಯಲು ಪ್ರಯತ್ನಿಸಿದವು. ಇದೀಗ ಯಕ್ಷಗಾನದ ಪ್ರಭಾವದಿಂದ ಕಾದಂಬರಿ ಪ್ರಕಾರದಲ್ಲೂ ಶಿಶಿಲರ ನೂತನ ಗಮನಾರ್ಹ ಪ್ರಯೋಗ ನಡೆದಿದೆ. 

ವಿಜಯಕರ್ನಾಟಕ ( ಹೂ ಬೆರಳು )

error: Content is protected !!
Share This