ರಾಜ್ಯೋತ್ಸವ ಪ್ರಶಸ್ತಿಯ ಈ ಬಾರಿಯ ಯಾದಿ ಡಾ. ಎಂ. ಪ್ರಭಾಕರ ಜೋಶಿಯವರ ಹೆಸರಿನಿಂದ ಧನ್ಯವಾಯಿತು.

ಪ್ರದೇಶ, ವಯಸ್ಸು, ಜಾತಿ, ಆರೋಗ್ಯ ಇತ್ಯಾದಿ ನಿಜವಾಗಿ ಕಲಾ ಸಾಧನೆಯಲ್ಲಿ ಅಪ್ರಸ್ತುತವಾಗಿದ್ದರೂ ಪ್ರಶಸ್ತಿ ಆಯ್ಕೆಯಲ್ಲಿ ಮುಖ್ಯ ಮಾನದಂಡ ಆಗುವ ಸರಕಾರಿ ವ್ಯವಸ್ಥೆಯಲ್ಲಿ ಜೋಶಿಯವರಿಗೆ (76) ಈ ಮನ್ನಣೆ ದೊರೆಯಲು ತುಂಬ ತಡವಾಯಿತೆಂಬುದು ನಿಜ.

ನನ್ನ ಬಾಲ್ಯ ಸ್ನೇಹಿತ ಪ್ರಭಾಕರ ಜೋಶಿ ಯಕ್ಷಗಾನದಲ್ಲಿ ಆಯ್ದುಕೊಂಡ ಕ್ಷೇತ್ರ ತಾಳಮದ್ದಳೆ ಅರ್ಥಗಾರಿಕೆ. ಅದರಲ್ಲಿ ಈಗಿರುವವರಲ್ಲಿ ಇವರೇ ಅಗ್ರಮಾನ್ಯರು. ನಾವು ಸಹಅರ್ಥಧಾರಿಗಳಾಗಿ ಬಹುಕಾಲ ಸಂಘಗಳಲ್ಲೂ , ಕರೆ ಪಡೆದು ಹೋಗಿಯೂ, ವಿವಿಧ ಪಾತ್ರಗಳ ಪ್ರಶ್ನೆ ಹಿಡಿದು ಹೊಡೆದಾಡಿದುದಕ್ಕೆ ಇವತ್ತು ತಾರ್ಕಿಕ ತೀರ್ಪು, ಸಮಾಧಾನ ದೊರೆತಂತಾಯಿತು.

ಸ್ನೇಹಶೀಲ ಅಧ್ಯಯನವ್ಯಸನಿಯಾದ ಜೋಶಿ ಅವರು ಅಕಾಡೆಮಿಕ್ ಆಗಿ ಆವರಿಸಿದ ಕ್ಷೇತ್ರಗಳ ಸಂದೋಹವನ್ನು ನೋಡಿದರೆ , ಒಬ್ಬ ಕಾಲೇಜು ಶಿಕ್ಷಕನ ಆಸಕ್ತಿ ಈ ಬಗೆ ಬೆಳವಣಿಗೆ ತರಲು ಸಾಧ್ಯವೆ ಎಂದು ಅಚ್ಚರಿಯಾಗಲೆಬೇಕು. ಪತ್ರಕರ್ತನಿಗಾದರೆ ಇದು ಸಹಜ ಆವಶ್ಯಕತೆ. ಸೂರ್ಯನ ಬೆಳಕು ಬೀಳುವ ಎಲ್ಲದರ ಬಗೆಗೂ ಆತ ಥಟ್ಟನೆ ವರದಿ ಬರೆಯಲೆಬೇಕು. ವಿಷಯದ ಅರಿವಿಲ್ಲವಾದರೆ ಆ ಕ್ಷಣವೇ ಹುದ್ದೆಗೆ ಆತ ಅಸಂಗತನಾಗಿಬಿಡುತ್ತಾನೆ.

ಸ್ವತಃ ಮಹಾನ್ ವಾಗ್ಮಿಯಾಗಿದ್ದ ಪ್ರೊ. ಕು. ಶಿ. ಹರಿದಾಸ ಭಟ್ಟರಿಂದಲೆ ಪ್ರಭಾವಿ ವಾಗ್ಮಿಯೆಂದು ಮುಕ್ತ ಪ್ರಶಂಸೆ ಗಳಿಸಿದ ಡಾ. ಜೋಶಿ ಅವರಿಗೆ ಸಾರ್ವಜನಿಕ ರಂಗದಲ್ಲಿ ಹೇಳಿಕೊಳ್ಳಲು ಅರ್ಹತೆಯಿರುವ ಹತ್ತಾರು ಕೃತಕೃತ್ಯವಾದ ಮಹತ್ಸಾಧನೆಗಳಿವೆ. ಕಾಲೇಜು ಶಿಕ್ಷಕರ ಪ್ರಶ್ನೆಯನ್ನು ತೀರಿಸುವಲ್ಲಿ ಸಂಘಟನಾ ಮಾರ್ಗದಲ್ಲಿ ಅವರಿತ್ತ ನೇತೃತ್ವ ಮಹತ್ತರವಾದುದು. ಯಕ್ಷಗಾನ ಕಲಾವಿದರ, ಅದರಲ್ಲೂ ಖ್ಯಾತನಾಮ ಸಹಕಲಾವಿದರ, ಇಕ್ಕಟ್ಟುಗಳನ್ನು ಪರಿಹರಿಸಿ ಸುಗಮಗೊಳಿಸುವಲ್ಲಿ ಇವರು ಮಾಡಿರುವ ಸಹಾಯ ದೊಡ್ಡದು. ಇದು ಅಪವ್ಯಾಖ್ಯಾನಕ್ಕೊಳಗಾಗಿದ್ದರೆ ಸಮಾಜದ ಹಣೆಬರಹ ಹಾಗಿರುವಂಥದೆ ಎನ್ನುತ್ತ ಸುಮ್ಮನಾಗಬೇಕು. ಯಕ್ಷಗಾನ ರಂಗದ ಸಾಧಕರನ್ನು ಪತ್ರಿಕೆಯ ಬರಹಗಳ ಮೂಲಕ ಪರಿಚಯಿಸಿದ ದಶಕಗಳ ಸಾಧನೆ ಬಲು ದೊಡ್ಡದು. ಅವರ ವರ್ಚಸ್ಸನ್ನು ಬಳಸಿಕೊಳ್ಳದ ಯಶಸ್ವೀ ಕಲಾ ಸಂಘಟನೆಗಳು ಕರಾವಳಿ ಜಿಲ್ಲೆಗಳಲ್ಲಿ ವಿರಳ. ಈ ಸಹಾಯಶೀಲತೆ ಜನರ ಹಕ್ಕೊತ್ತಾಯ ಎನಿಸಿ ಅವರನ್ನು ಬಾಧಿಸಿದ ಸಂದರ್ಭಗಳೂ ಕಡಿಮೆಯಲ್ಲ. ಹಲವರು ಇವರ ಪ್ರೋತ್ಸಾಹದ ಕಾರಣವಾಗಿಯೆ ಅರ್ಥಗಾರಿಕೆಯಲ್ಲಿ ಹಿರಿತನಕ್ಕೆ ತಲಪಿದ್ದಾರೆ.

ತಾಳಮದ್ದಳೆ ಅರ್ಥಗಾರಿಕೆಯಲ್ಲಿ ಕನ್ನಡ ಭಾಷೆಗೆ ಪರಿಷ್ಕಾರವನ್ನು ತಂದ ಮುಖ್ಯರಲ್ಲಿ ಇವರೊಬ್ಬರು. ಬಹುಶಿಸ್ತುಗಳ ಅವಗಾಹನೆ ಮೂಲಕ ಅವರ ವಿಷಯ ಮಂಡನೆಗೆ ಆಳ ವಿಸ್ತಾರಗಳು ಬಂದಿವೆ. ಯಕ್ಷಗಾನದ ವಾಣಿಜ್ಯಪರತೆಯ ಅರ್ಥಶಾಸ್ತ್ಕೀಯ ವಿಶ್ಲೇಷಣೆಯನ್ನು ಮಂಡಿಸಿದ ಮೊದಲಿಗರು ಅವರು. ಬರಹಗಾರಿಕೆಗೆ ಸಾಹಿತ್ಯದ ಸ್ಪರ್ಶವಂತು ಇದ್ದೇ ಇದೆ. ಕೃಷ್ಣ ಸಂಧಾನ ಪಠ್ಯ ಮತ್ತು ಪ್ರದರ್ಶನ ಎಂಬ ವಿಷಯದ ಮೇಲೆ ಮಹಾನಿಬಂಧ ಬರೆದು ಮಂಗಳೂರು ವಿಶ್ವವಿದ್ಯಾಲಯದ ಪಿಎಚ್ ಡಿ ಪದವಿ ಗಳಿಸಿ ಈ ಬಗೆ ಅಧ್ಯಯನಕ್ಕೆ ಮಾದರಿ ಹಾಕಿ ಕೊಟ್ಟಿದ್ದಾರೆ. ಅವರಿಗೆ ಅರ್ಹವಾಗಿಯೆ ಮಂಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಬಂದಿದೆ.

ಒಬ್ಬ ನ್ಯಾಯವಾದಿಯಾಗಿ ಬದಲಿದುದಾಗಿದ್ದರೆ ಜೋಶಿ ಅವರು ಆಗಲೆ ಕೇಂದ್ರ ಸರಕಾರದ ಸಂಪುಟದಲ್ಲಿ ಅರ್ಥ ಅಥವಾ ನ್ಯಾಯ ಖಾತೆಯನ್ನು ನೋಡಬಲ್ಲವರಾಗುತ್ತಿದ್ದರು. ಆರ್ ಎಸ್ಎಸ್ ನ ಸಂಘ ಚಾಲಕರಾಗಿ, ಓಟಿಸಿ ಭಾಗಿಯಾಗಿ, ಪ್ರಭಾವಿ ನಾಯಕರ ಸಂಪರ್ಕ, ಸಾಹಚರ್ಯ ಗಳಿಸಿದ ಇವರಿಗೆ ರಾಜಕಾರಣಿಯಾಗಿ ಬದಲುವ ಎಲ್ಲ ಅವಕಾಶಗಳಿದ್ದವು. ಆದರೆ ಅವರನ್ನು ಹಾಗೆ ಬಳಸಿಕೊಳ್ಳುವ ಇರಾದೆ ಸಂಬಂಧಿತರಿಗೆ ಬಾರದಿದ್ದುದು ಸಮಾಜಕ್ಕಾದ ನಷ್ಟ.

ಕಲಾ ಮೀಮಾಂಸೆಯ ಮೇಲೆ ಜಾಗರ, ಕೇದಗೆ, ವಾಗರ್ಥ, ಮಾರ್ಮಾಲೆ, ಪ್ರಸ್ತುತ, ಮುಡಿ ಇತ್ಯಾದಿ ಪುಸ್ತಕಗಳನ್ನು ತಂದಿರುವ ಜೋಶಿ ಅತ್ಯಂತ ಸೂಕ್ಷ್ಮ ಸಂವೇದನೆಯ ಕಾವ್ಯಪ್ರತಿಭೆಯೂ ಹೌದು. ಆದರೆ ರಚನೆಗಳೆಲ್ಲ ಪತ್ರಿಕೆಗಳ ಕಡತಗಳಲ್ಲಿ ಬಾಕಿ. ಹಬ್ಬ ಹರಿದಿನಗಳ ಬಗೆಗೆ ಸಾಂದರ್ಭಿಕ ಲೇಖನಗಳೂ ಬಹಳ ಬಂದಿವೆ. ತತ್ತ್ವ ಶಾಸ್ತ್ರದ ಪಾಂಡಿತ್ಯ ಅವರ ‘ತತ್ತ್ವಮನನ’ ಗ್ರಂಥದಲ್ಲಿ ಪಡಿಮೂಡಿದೆ. ಹಿಂದಿ ರಾಷ್ಟ್ರ ಭಾಷಾ ಪ್ರವೀಣ ಪದವಿಯನ್ನೂ ಪಡೆದಿರುವ ಜೋಶಿ ಅವರು ಕನ್ನಡ ದಂತೆ ಇಂಗ್ಲಿಷ್, ಹಿಂದಿ, ಚಿತ್ಪಾವನಿ ಭಾಷೆಗಳಲ್ಲೂ ಭಾಷಣ ಮಾಡಬಲ್ಲರು. ಪರ ಸ್ಥಳಗಳಲ್ಲಿ ಯಕ್ಷಗಾನ, ತತ್ತ್ವಶಾಸ್ತ್ರ ಗಳನ್ನು ಪರಿಚಯಿಸುವುದರಲ್ಲಿ ಈ ಬಹು ಭಾಷಾ ಜ್ಞಾನ ಸಹಾಯಕವಾಗಿದೆ. ತುಳುವಿನಲ್ಲಿ ‘ಗುರ್ತ’ ಕವನ ಸಂಕಲನವನ್ನು ಅವರು ತಂದಿದ್ದಾರೆ.

ಅಕಾಡೆಮಿ ತಜ್ಞ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ, ಪಟ್ಲ ಪ್ರತಿಷ್ಠಾನ ಪ್ರಶಸ್ತಿ, ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಷನ್ ವರ್ಷದ ವ್ಯಕ್ತಿ ಪ್ರಶಸ್ತಿ, ಹಲವು ಯಕ್ಷಗಾನ ಸಮ್ಮೇಳನಗಳ ಅಧ್ಯಕ್ಷತೆ, ಮೈಸೂರಿನಲ್ಲಿ ಗನಾಭಟ್ಟರ ನೇತೃತ್ವದಲ್ಲಿ ಸಾರ್ವಜನಿಕ ಸಂಮಾನ ಇತ್ಯಾದಿಗಳಿಂದ ಅವರು ಆಗಲೆ ಪುರಸ್ಕೃತರು.

ಇಷ್ಟು ದೀರ್ಘ ಕಾಲದ ಅವರ ಸಾಂಸ್ಕೃತಿಕ ಕೃತ ರಾಜ್ಯೋತ್ಸವ ಪ್ರಶಸ್ತಿಗೆ ಮಿಗಿಲಾದುದೆಂದು ಸಧೈರ್ಯ ಉದ್ಘೋಷಿಸುವೆ.

ರಾಘವ ನಂಬಿಯಾರ್

error: Content is protected !!
Share This