ಪ್ರಕಟಣೆಯ ಕೋರಿಕೆಯೊಂದಿಗೆ

• ಅಂಬುರುಹ, ಲವ, ಕುಶ, ಯಕ್ಷಗಾನ ಪ್ರಸಂಗ ಸಂಪುಟಗಳು.
• ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ೨೦೧೬
• ಪುಟಗಳು ೪೮೬, ೫೭೨, ರೂ ೧೦೦೦/- (೫೦೦+೫೦೦)

ಅರ್ವಾಚೀನ ಕಾಲದ ಶ್ರೇಷ್ಠ ಯಕ್ಷಗಾನ ಕವಿಗಳಲ್ಲಿ, ಸುಜ್ಞ ಭಾಗವತರಲ್ಲಿ ಒಬ್ಬರಾದ ಶ್ರೀ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ೨೯(೧೪+೧೫) ಯಕ್ಷಗಾನ ಕಾವ್ಯಗಳು ಪ್ರಕಟವಾಗುತ್ತಿರುವುದು ಒಂದು ಪ್ರಮುಖ ಸ್ವಾಗತಾರ್ಹ ಘಟನೆ. ಪ್ರಸಂಗ ರಚನೆ, ಹಾಡುಗಾರಿಕೆ ಎರಡರ ಅಂತರAಗವನ್ನು ಬಲ್ಲ, ಕಲಾಹೃದಯಿಗ್ರಾಹಿ ಪೂಂಜರು – ಪ್ರಸಿದ್ಧಿಗಿಂತ ಹೆಚ್ಚಿನ ಸಿದ್ಧಿಯುಳ್ಳವರು. ಪ್ರಸಕ್ತ ಅವರ ಇಪ್ಪತ್ತೊಂಬತ್ತು ಪ್ರಸಂಗಳನ್ನೊಳಗೊಂಡ – ಅಂಬುರುಹ ಸಂಪುಟ (ಭಾಗ ೧. ಲವ, ೨. ಕುಶ ಹೆಸರುಗಳಲ್ಲಿ) ಯಕ್ಷಗಾನ ಪ್ರಸಂಗ ಸಾಹಿತ್ಯದ ಒಂದು ಸಮೃದ್ಧ ಪುಷ್ಟ ಸಂಚಯ. ಮಾನಿಷಾದ, ಉಭಯಕುಲ ಬಿಲ್ಲೋಜ, ಮನ್ಮಥೋಪಾಖ್ಯಾನ, ಮಾತಂಗ ಕನ್ಯೆ, ಕಲಿಕೀಚಕ, ಅಮರ ಸಿಂಧೂದ್ಭವ, ಕಾರ್ತಿಕೇಯ, ಕಲ್ಯಾಣ, ಪಾಂಚಜನ್ಯ, ಭಕ್ತ ಕುಚೇಲ, ಭುವನಾಭಿರಾಮ, ಮೇಘ ಮಯೂರಿ, ಐಗುಳೆ ದಚ್ಚಿನೆ, ಜೇವು ಕೇದಗೆ, ಬಂಗರ‍್ದ ಗೆಜ್ಜೆ, ವಧೂ ವೈಶಾಲಿನಿ, ನಳಿನಾಕ್ಷನಂದಿನಿ, ಗಂಡುಗಲಿ ಘಟೋತ್ಕಚ, ರಾಜಾದ್ರುಪದ, ಸತೀ ಉಲೂಪಿ, ಲೋಕಾಭಿರಾಮ, ಸೋಮೇಶ್ವರ ಮಹಾತ್ಮೇ, ಬೋಪದೇವೋಪಾಖ್ಯಾನ, ದತ್ತ ಸಂಭವ, ಅಂಧಕ ನಿದಾನ, ಸ್ವರ್ಣನೂಪುರ, ಮೇಘ ಮಾಣಿಕ್ಯ, ಕುಡಿಯನ ಕಣ್ಣ್, ಕುಡಿಯನ ಕೊಂಬಿರೆಲ್, ದಳವಾಯಿ ಮುದ್ದಣ್ಣೆ – ಈ ಯಾದಿಯೆ ಕವಿಯ ಆಯ್ಕೆಯ ವೈವಿಧ್ಯ ಮತ್ತು ಬದಲಾಗುತ್ತಿರುವ ಯಕ್ಷಗಾನರಂಗ ಅಪೇಕ್ಷಗಳು, ವಿಶಾಲ ಶ್ರೇಣಿ, ಸಾಧ್ಯತಾ ನಾವೀನ್ಯ- ಎಲ್ಲವನ್ನು ಹೇಳುತ್ತದೆ. ಉಭಯಕುಲ ಬಿಲ್ಲೋಜ, ನಳಿನಾಕ್ಷ ನಂದಿನಿ, ಮೇಘ ಮಯೂರಿ, ಕುಡಿಯನ ಕೊಂಬಿರೆಲ್- ಇವು ಪೂಂಜರಿಗೆ ದೊಡ್ಡ ಖ್ಯಾತಿ ತಂದಿತ್ತ ರಚನೆಗಳು. ಹೆಚ್ಚಿನ ಪ್ರಸಂಗಗಳು, ಮೇಲ್ಮಟ್ಟದ ರಚನೆಯಲ್ಲಿ ಸ್ವಂತಿಕೆಯ ಸಾರ್ಥಕ್ಯವಿರುವಂತಹವು.

ಸರಳ ಸುಂದರ ಶೈಲಿ, ನಿರಾಯಾಸ ಪ್ಯಾಸ, ಛಂದೋವೈವಿಧ್ಯ ಸಹಜತೆ, ಸಾಹಿತ್ಯದ ಸೊಬಗು, ರಂಗಯೋಗ್ಯತೆ, ಕಥೆಯ ಅರ್ಥೈಸುವಿಕೆಯ ಪ್ರಸ್ತುತಿ, ಗೇಯತೆ, ಪ್ರಮಾಣಬದ್ಧತೆ, ದ್ಯಶ್ಯ ವಿಧಾನ, ಜೀವಂತಿಕೆ-ಈ ಗುಣಗಳಲ್ಲಿ ಪೂಂಜರ ರಚನೆಗಳಲ್ಲಿ, ಯಕ್ಷಗಾನ ಕಾವ್ಯ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠರಲ್ಲಿ ಸೇರುವ, ಅರ್ಹತೆಯಿದೆ, ಭಾಷೆ, ಪದ್ಯರಚನೆ ಈ ಕವಿಗೆ ನೂಲೆಳೆದಂತೆ ಸಲೀಸಾಗಿ ಬರುತ್ತದೆ. ಸ್ವಾಧೀನವಾಗಿದೆ. ರಚನೆಗಳಲ್ಲಿ ವಸ್ತು ಪ್ರಧಾನ, ಪಾತ್ರಪ್ರಧಾನ, ಘಟನಾಪ್ರಧಾನ, ಸಂದೇಶ ಪ್ರಧಾನ, – ಹೀಗೆ ಬೇರೆ ಬೇರೆ ಕೋನಗಳಿಂದ ರಚಿತವಾಗಿದೆ. ಗೀತಗುಣ, ನೃತ್ಯಾಭಿನಯ ಯೋಗ್ಯತೆ ಮೇಲ್ಮಟ್ಟದಲ್ಲಿವೆ. ಭಾಗವತ-ಪ್ರಸಂಗಕರ್ತನೊಬ್ಬ ಪ್ರಸಂಗರಚನೆ ಮಾಡಿದಾಗ ಹೇಗಿರಬೇಕು ಎಂಬುದರ ಮಾದರಿಗಳು ಈ ಸಂಪುಟಗಳಲ್ಲಿ ಕಾಣುತ್ತವೆ. ಗೇಯ ಕಾವ್ಯ ರಚನೆಯ ಅಂದ ಪುಟ ಪುಟಗಳಲ್ಲಿ ಕಾಣುತ್ತೇವೆ. ಸನ್ನಿವೇಶಗಳ ನಿರ್ವಹಣೆ ಮತ್ತು ಸಂದರ್ಭದ ಸಾರ ನಿರೂಪಣೆಗಳಲ್ಲಿ ತಿದ್ದಿದ ಪ್ರಸಂಗ ಕವಿತ್ವ ಪೂಂಜರದು.

ಅವರ ಉತ್ತಕೃಷ್ಟವಾದ ಕಾವ್ಯ ಶಕ್ತಿಗೆ ಅನೇಕ ಉದಾಹರಣೆಗಳನ್ನು ಕೊಡಬಹುದು. ಇಲ್ಲಿ -ಒಂದೆರಡು ಸೂಚಕವಾಗಿ ಮಾತ್ರ.
ಹಾದಿ ಹೋಕರ ಸುರಿವ ವ್ಯಾಧನೋಳಾದಿಕವಿಯನು ಮತ್ಸö್ಯಗಂಧಿ ಯೊಳ್ಪೇದವ್ಯಾಸನ ಗೊಲ್ಲರೊಳು ಯೋಗೇಶ್ವರ ಸೃಜಿಸಿ |
ಭೂದಿವಿಜರಲಿ ಕ್ಷಾತ್ರದೊಲವನು | ಮೇದಿನಿಪರಲಿ ತತ್ತ÷್ವ ಮಸಿಯನು ಚೋದಿಸುವ ವೀಲಾವಿನೋದಿಗೆ ಸಲ್ಗೆ ಕವಿನಮನ || (ರಾಜಾದ್ರು ಪದ)
ಸ್ತುತಿ ಮತ್ತು ಮಂಗಲ ಪದ್ಯಗಳಲ್ಲಿ ಗುಣಗಳ, ಮೌಲ್ಯಗಳ ಕುರಿತು ಬರೆದಿದ್ದಾರೆ. ತುಳು ಕನ್ನಡ ಎರಡೂ ನುಡಿಗಳಲ್ಲಿ ಭಾಷೆಗಳಲ್ಲಿ ಈ ಕವಿಯ ಭಾಷೆ ಜೀವ ಜೀವ ಮಾತಾಡುವಂತಿದೆ.

ಈ ವಿಸ್ತಾರ ವೈವಿಧ್ಯ ಕಾವ್ಯ ಶ್ರೀಮಂತಿಕೆಗಳ ಈ ಸಂಪುಟಗಳನ್ನು ಪ್ರಕಟಿಸಿ. ಯಕ್ಷಧ್ರುವ ಪಟ್ಲ ಫೌಂಡೇಶನ್ ಒಂದು ಅಗತ್ಯ ಸತ್ಕಾರ‍್ಯವನ್ನು ಮಾಡಿ ಕೃತಕೃತ್ಯವಾಗಿದೆ.

ಡಾ. ಎಂ. ಪ್ರಭಾಕರ ಜೋಶಿ

error: Content is protected !!
Share This