ಉಡುಪಿಯ ಹಿರಿಯ ಸಾಮಾಜಿಕ ಕಾರ್ಯಕರ್ತರು, ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಆದ ಪ್ರೊ.ಕೆ.ಸದಾಶಿವ ರಾವ್ ಅವರನ್ನು ಆಗಸ್ಟ್ 01, 2024ರಂದು ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಸರಿಗಮ ಭಾರತಿ,ಪರ್ಕಳ ಈ ಸಂಸ್ಥೆಯ ರಜತ ಸಂಭ್ರಮದ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರೊ.ಕೆ.ಸದಾಶಿವ ರಾವ್ ಒಬ್ಬ ಉತ್ತಮ ಪ್ರಾಧ್ಯಾಪಕರು, ಆಡಳಿತಗಾರರು,ಪದವಿ ವಿದ್ಯಾರ್ಥಿಗಳಿಗೆ ಅವರು ಬರೆದ ಟ್ಯಾಕ್ಸೇಶನ್ ಪಠ್ಯವು 30ಕ್ಕೂ ಹೆಚ್ಚು ಬಾರಿ ಪುನರ್ ಮುದ್ರಣಗೊಂಡಿದೆ. ಉಡುಪಿಯ ಯಕ್ಷಗಾನ ಕಲಾರಂಗ,ರಾಗಧನ, ಸರಿಗಮ ಭಾರತಿ,ಹವ್ಯಕಸಭಾ ಅಲ್ಲದೆ ಇನ್ನೂ ಹಲವಾರು ಸಂಘಟನೆಗಳ ಲೆಕ್ಕಪರಿಶೋಧಕರಾಗಿ ಸೇವೆಸಲ್ಲಿಸಿದ ಸಾಮಾಜಿಕ ಕಾರ್ಯಕರ್ತರಿವರು. ಹಲವಾರು ಮಂದಿಯ ವೈಯಕ್ತಿಕ ಲೆಕ್ಕ ಪತ್ರದ ನಿರ್ವಹಣೆಯನ್ನೂ ಕೂಡ ಉಚಿತವಾಗಿ ಕಳೆದ ಹಲವು ದಶಕಗಳಿಂದ ನಿರ್ವಹಿಸುತ್ತಾ ಬಂದಿರುತ್ತಾರೆ. ಯಕ್ಷಗಾನ ಕಲಾರಂಗದಲ್ಲಿಯೂ ಕಳೆದ 20 ವರ್ಷಗಳಿಂದ ವಿದ್ಯಾಪೋಷಕ್‌ನ ಲೆಕ್ಕಪತ್ರ ನಿರ್ವಹಣೆ ಮಾಡುತ್ತಿದ್ದ ಇವರು ಕಳೆದ ವರ್ಷದಿಂದ ಇಡೀ ಸಂಸ್ಥೆಯ ಕೋಶಾಧಿಕಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.ಈ ಹಿಂದೆ ಇವರಿಗೆ ಸೇವಾಭೂಷಣ ಪ್ರಶಸ್ತಿ ನೀಡಿ ಕಲಾರಂಗ ಗೌರವಿಸಿತ್ತು.ಇಂತಹ ಸಾಧಕರನ್ನು ಮಾಜಿ ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್,ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಸಮ್ಮುಖದಲ್ಲಿ ರಜತ ಗೌರವದೊಂದಿಗೆ ಸನ್ಮಾನಿಸಲಾಯಿತು.ಈ ಸಂರ್ಭದಲ್ಲಿ ಅವರ ಪತ್ನಿ ಮಮತಾ ರಾವ್ ಉಪಸ್ಥಿತರಿದ್ದರು.ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಅಭಿನಂದಿಸಿದರು. ಸರಿಗಮ ಭಾರತೀ ಸಂಸ್ಥೆಯ ನಿರ್ದೇಶಕರಾದ ಡಾ.ಎಚ್.ಎನ್.ಉದಯಶಂಕರ್ ಸ್ವಾಗತಿಸಿದ ಕಾರ್ಯಕ್ರಮದ ಕೊನೆಗೆ ಸಂಗೀತ ಗುರುಗಳಾದ ಉಮಾಶಂಕರಿ ಧನ್ಯವಾದ ಸಲ್ಲಿಸಿದರು. ಶಿಲ್ಪಾ ಜೋಶಿ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!
Share This