ಇಡಗುಂಜಿ ಕೃಷ್ಣ ಯಾಜಿ

ಚಂಡೆ ವಾದಕರಾಗಿ ಪ್ರಸಿದ್ಧಿ ಪಡೆದ ಇಡಗುಂಜಿ ಕೃಷ್ಣ ಯಾಜಿ (74) ಹೃದಯಾಘಾತದಿಂದ ಶುಕ್ರವಾರ ಸಂಜೆ ಇಹಲೋಕ ತ್ಯಜಿಸಿದ್ದಾರೆ. ಇವರು ಪತ್ನಿ ರತ್ನಾವತಿ ಯಾಜಿ ಮತ್ತು ಮೂವರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ದೇಶ-ವಿದೇಶಗಳಲ್ಲೂ ಚಂಡೆ ಮತ್ತು ಮದ್ದಳೆಯ ನಾದ ಹೊರಡಿಸಿದ್ದ ಇವರು ಕಿನ್ನೀರು ನಾರಾಯಣ ಹೆಗಡೆ ಪ್ರತಿಷ್ಠಾನದ ಮೊದಲ ಪ್ರಶಸ್ತಿ ಪಡೆದಿದ್ದರು‌. ಭಾಗವತ ನಾರಾಯಣ ಉಪ್ಪೂರು ಕಲಾರಂಗ ಪ್ರಶಸ್ತಿ, ಕರ್ನಾಟಕ ರಾಜ್ಯ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ವಾದನ ರತ್ನಾಕರ ಹೀಗೆ ನೂರಾರು ಪ್ರಶಸ್ತಿ ಮತ್ತು ಸನ್ಮಾನಗಳು ಇವರನ್ನು ಅರಸಿ ಬಂದಿವೆ. ಅಲ್ಲದೇ ಈ ಬಾರಿಯ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ -2020 ರಲ್ಲಿ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು‌‌.

ಕೋಡಂಗಿ, ಬಾಲಗೋಪಾಲ ವೇಷಗಳ ಮೂಲಕ ಯಕ್ಷರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಚಂದ್ರಹಾಸ, ಅರ್ಜುನ, ಸ್ತ್ರೀವೇಷಗಳ ಮೂಲಕ ಮತ್ತಷ್ಟು ಜನಪ್ರಿಯರಾದರು‌. ಬಳಿಕ ಖ್ಯಾತ ಮದ್ದಳೆ ವಾದಕ ಕಿನ್ನೀರು ನಾರಾಯಣ ಹೆಗಡೆ ಅವರಲ್ಲಿ ಮದ್ದಳೆ ಅಭ್ಯಾಸ ನಡೆಸಿದರು. ಹಿರಿಯ ಭಾಗವತ ಗುಂಡ್ಮಿ ರಾಮಚಂದ್ರ ನಾವಡರಿಂದ ಮದ್ದಳೆ ಹಾಗೂ ಚಂಡೆಯ ಕುರಿತು ಸೂಕ್ತ ಮಾರ್ಗದರ್ಶನ ಪಡೆದಿದ್ದರು.

ಐದು ದಶಕಗಳ ಕಾಲ ಚಂಡೆ ವಾದಕರಾಗಿ ಇಡಗುಂಜಿ, ಗುಂಡಿಬೈಲ್, ಕರ್ಕಿ ಹಾಸ್ಯಗಾರ, ಕಮಲಶಿಲೆ, ಅಮೃತೇಶ್ವರಿ, ಗುಂಡಬಾಳ ಹೀಗೆ ವಿವಿಧ ಯಕ್ಷಗಾನ ಮೇಳಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದರು. ಅಲ್ಲದೇ ಗುಣವಂತೆಯ ಶ್ರೀಮಯ ಕಲಾಕೇಂದ್ರ ಮತ್ತು ಮೂರೂರಿನ ದೇವರು ಹೆಗಡೆ ಯಕ್ಷಗಾನ ಶಾಲೆಯಲ್ಲಿ 10-12 ವರ್ಷಗಳ ಕಾಲ ಗುರುವಾಗಿ ಹಲವಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ತರಬೇತಿ ನೀಡಿದ್ದರು‌.

error: Content is protected !!
Share This