– ಲೇಖಕರು: ಡಾ|| ಕೆ. ಎಂ. ರಾಘವ ನಂಬಿಯಾರ್

ಬಲಿಪ ಕಿರಿಯ ನಾರಾಯಣ ಭಾಗವತರ ಮನೆಯ ಶ್ರದ್ಧಾಂಜಲಿ ಸಭೆಯಲ್ಲಿ (1-3-2023) ನಾನು ಏನು ಹೇಳಿದೆ ಎಂದು ನೆನಪಿಸಿಕೊಳ್ಳುತ್ತೇನೆ.

ಎಷ್ಟೆಷ್ಟೊ ಕಲಾವಿದರು ವಿದ್ವಾಂಸರ ಮಾತುಗಳನ್ನು ಸ್ವಯಂ ಆಗಿ ವರದಿಮಾಡಿ ಪತ್ರಿಕೆಯಲ್ಲಿ ಬರುವಹಾಗೆ ಮಾಡಿದ ನನ್ನ ಪತ್ರಿಕಾ ಪೀಳಿಗೆಯವರಿಗೆ ವರದಿ ಮಾಡಲು ನನ್ನ ಗುರುತೇ ಸಿಗದಾಗುವುದು ಕಣ್ಣೆದುರಿನ ಅಚ್ಚರಿ. ಅಚ್ಚರಿ ಯಾತಕ್ಕೆ? ಕಲಿಕಾಲ ಹೌದಲ್ಲ!

ಆದ್ದರಿಂದಲೆ ನನ್ನ ಮಾತನ್ನು ನಾನೇ ವರದಿ ಮಾಡುವುದು.
ಬಲಿಪ ಭಾಗವತರು ನನ್ನನ್ನು ಇತರರಿಗಿಂತ ಭಿನ್ನವಾಗಿ ವಿಶೇಷ ಗೌರವದಿಂದ ನೋಡಿದ್ದರು. ಅವರಿಗೆ ನನ್ನ ಅಂತರಂಗದಲ್ಲಿ ಅತ್ಯಂತ ಎತ್ತರದ ಸ್ಥಾನವಿದೆ.

ಯಕ್ಷಗಾನ ರಂಗದಲ್ಲಿ ಗುರು ಎಂಬ ಸ್ಥಾನಕ್ಕೆ ಪಾತ್ರರಾಗುವವರು ಬಲಿಪ ಕಿರಿಯ ನಾರಾಯಣ ಭಾಗವತರು. ಅವರು ತಮ್ಮ ಗುರುವೆಂದು ಹಿರಿಯ ಬಲಿಪ ನಾರಾಯಣ ಭಾಗವತರನ್ನು ಶ್ರದ್ಧಾಪೂರ್ವಕ ಅನುಸರಿಸಿದ್ದರೆಂಬುದಕ್ಕೆ ನಮಗೆ ಪುರಾವೆ ದೊರೆತಿದೆ. ಕಲಿಕೆಯಲ್ಲಿ ಗುರು-ಶಿಷ್ಯ ಸಂಬಂಧ ಹೇಗಿರಬೇಕೆಂಬುದನ್ನು ತೋರಿಕೊಟ್ಟವರು ಕಿರಿಯ ಬಲಿಪರು.

ಇದಕ್ಕೊಂದು ನಿದರ್ಶನವನ್ನು ನೆನಪಿಸಬೇಕು. ಹಿರಿಯ ಬಲಿಪ ನಾರಾಯಣ ಭಾಗವತರ ಪದವನ್ನು ಪ್ರತ್ಯಕ್ಷ ಕೇಳುವ ಭಾಗ್ಯ ನನ್ನ ಪಾಲಿಗೆ ಇರಲಿಲ್ಲ. ದೊಡ್ಡ ತಾಳಮದ್ದಳೆಗೆ ಬರಲೊಪ್ಪಿದ ಹಿರಿಯ ಬಲಿಪರು ಕಾರ್ಯಕ್ರಮಕ್ಕೆ ಕೆಲವೆ ದಿನಗಳ ಮೊದಲು ವಿಧಿವಶವಾದರು. ಆ ನಿರಾಸೆ ಬಹುಕಾಲ ಉಳಿದಿತ್ತು. ಅವರ ಆಕಾಶವಾಣಿಯ ಕಾರ್ಯಕ್ರಮದ ಧ್ವನಿ ಮುದ್ರಿಕೆ ಪಡೆಯುವ ಯತ್ನ ಸಫಲವಾಗಿರಲಿಲ್ಲ.

ಹತ್ತು ವರ್ಷಗಳ ಹಿಂದೆ ಹಿರಿಯ ಬಲಿಪರದೆಂದು ಮನೋಹರ ಕುಂದರ್ ಕ್ಯಾಸೆಟ್ ಒಂದನ್ನು ತಂದರು.ಕೇಳಿದಾಗ ನನಗೆ ಅದು ಕಿರಿಯ ಬಲಿಪರದೆಂದೇ ಅನಿಸಿತು. ಅದನ್ನು ಬಲಿಪರು ಆಲಿಸಿ ಅವರ ಅಭಿಪ್ರಾಯ ಕೇಳುವ ಅನಿಸಿತು. ಕೆಲವು ದಿನಗಳ ಬಳಿಕ ಕಾರ್ಯಕ್ರಮಕ್ಕಾಗಿ ಉಡುಪಿಗೆ ಬಂದ ಕಿರಿಯ ಬಲಿಪರ ಮುಂದೆ ರೆಕಾರ್ಡರ್ ನಡೆಸಲಾಯಿತು. ಅದು ‘ಸುಧನ್ವ ಕಾಳಗ’ ದ ತಾಳಮದ್ದಳೆ. ಅವರಿಗದು ತನ್ನದೇ ಪದ ಅನಿಸಿತು. ಅವರಿಗೆ ದೊರೆತ ಹೆಚ್ಚುವರಿ ಆಧಾರ ಹಿರಿಯರು ‘ಸುಧನ್ವಕಾಳಗ’ ಸ್ವಂತ ಪ್ರತಿ ಹಾಡುವವರಲ್ಲದೆ ಪ್ರಿಂಟ್ ಪ್ರತಿ ಹಾಡುವವರಲ್ಲ ಎಂಬುದು. ಅದನ್ನು ಅಲ್ಲಿಗೇ ಬಿಡಬೇಕಾಯಿತು.

ಕಳೆದ ವರ್ಷ ಮತ್ತೆ ಅದೇ ಬೆಂಗಳೂರು ಆಕಾಶವಾಣಿ ಧ್ವನಿ ಮುದ್ರಿಕೆ , ಬೆಂಗಳೂರು ಆಕಾಶವಾಣಿಗೆ ನೀಡಿದ ಹಿರಿಯ ಬಲಿಪರ ಸಂದರ್ಶನದ ಜತೆಗೆ ನನಗೆ ಮಿತ್ರರಿಂದ ವಾಟ್ಸ್ಆಪ್ ಮೂಲಕ ಬಂತು. ಈ ಬಾರಿ ಇನ್ನೂ ಸೂಕ್ಷ್ಮವಾಗಿ ಆಲಿಸಿದಾಗ 1966 ರ ಆ ಮುದ್ರಿಕೆಯ ದನಿ ಆಗಿನ್ನೂ ಯುವಕರಾಗಿದ್ದ ಕಿರಿಯ ಬಲಿಪರದಲ್ಲ ಎಂದು ಸ್ಪಷ್ಟವಾಯಿತು. ಅಲ್ಲದೆ ಅದರಲ್ಲಿ ನುಡಿದ ಮದ್ದಳೆ ಬೋಲುಗಳು ಮತ್ತು ಚಾಪು, ನುಡಿಕಾರಗಳು 1960 ರ ದಶಕದ ಹಳೆ ಪೆಟ್ಟುಗಳು ಹೊರತು ಕಿರಿಯರ ಕಾಲದ್ದಲ್ಲ. ಅಲ್ಲದೆ ಕೆಲವೇ ಕಡೆಗಳಲ್ಲಿ ಹಿರಿಯ ಬಲಿಪರ ವಾರ್ಧಕ್ಯದ ಸ್ವರ ಸ್ಖಲನ ಇಣುಕುತ್ತಿತ್ತು. ಅವರ ಸಂದರ್ಶನದಲ್ಲಿ ಹೇಳಿದ ಅನೇಕ ವಿಚಾರಗಳು ಕಿರಿಯ ಬಲಿಪರು ಹುಟ್ಟುವುದಕ್ಕೆ ಮೊದಲಿನದು.

ಒಟ್ಟಿನಲ್ಲಿ ಈ ಘಟನೆಯಿಂದ ಎರಡು ಅಂಶಗಳು ಸ್ಪಷ್ಟವಾದವು. ದೊಡ್ಡ ಬಲಿಪರ ಪದ ಪ್ರತ್ಯಕ್ಷ ಕೇಳದೆ ಬಹಳ ನಷ್ಟವೇನೂ ಆಗಲಿಲ್ಲ ಎಂಬುದು ಒಂದು. ಯಾಕೆಂದರೆ ಇಬ್ಬರ ಪದಗಳು ಶೇಕಡಾ 90 ರಷ್ಟು ನಿರ್ವಿವಾದವಾದ ಹೋಲಿಕೆ ಹೊಂದಿತ್ತು. ಗುರು-ಶಿಷ್ಯ ಸಂಬಂಧ ಹೇಗಿರಬೇಕೆಂಬುದಕ್ಕೆ ಇದು ನಿದರ್ಶನವಾಯಿತು. ಹಿರಿಯ ಬಲಿಪರ ವೀರರಸದ ಪದದ ಅದೇ ಅಚ್ಚಿನಲ್ಲಿ ಅಗರಿ ಶ್ರೀನಿವಾಸ ಭಾಗವತರು ಹಾಡುತ್ತಿದ್ದರು ಎಂಬುದು ಇನ್ನೊಂದು ಅಂಶ.

ಹೀಗೆನ್ನುವಾಗ ಶಿಷ್ಯ ಗುರುವಿನ ಮಿಮಿಕ್ ಮಾಡಬೇಕೆಂದು ಅರ್ಥವಲ್ಲ. ಬಲಿಪ ಅಜ್ಜ-ಮೊಮ್ಮಗರಲ್ಲಿ ಶಾರೀರ ಸಾಮ್ಯ ಇದ್ದುದರಿಂದ ಶಿಷ್ಯನ ಸೃಷ್ಟಿಶೀಲ ಹಾಡುಗಾರಿಕೆಯೂ ದೊಡ್ಡ ಬಲಿಪರ ಹೋಲಿಕೆಯಾಗುತ್ತಿತ್ತು. ಗುರುವಿನ ಹೇಳುವಣಿಗೆಯಲ್ಲಿ ಸಾಹಿತ್ಯದ ಭಾವವನ್ನು ಹೊರಪಡಿಸಲು ಸ್ವರಗಳು ಪಡೆಯುವ ವಿನ್ಯಾಸವನ್ನು ಗುರುತಿಸಿ ಅನುಸರಿಸುವುದು ಮುಖ್ಯ.

ಕಿರಿಯ ಬಲಿಪರ ಕಾವ್ಯ ಪಾಂಡಿತ್ಯ ಅನ್ಯಾದೃಶ. ಪದದ ಛಂದೋವಿನ್ಯಾಸವನ್ವು ತಾಳ ಗತಿಯಲ್ಲಿ ಒಂದಿಷ್ಟೂ ಬಿಡದೆ ಸಾಹಿತ್ಯ ಭಾವ ಸಂಪೂರ್ಣವಾಗಿ ಬಿಂಬಿಸುವಂತೆ , ಅವರಂತೆ ಈಗ ಯಾರೂ ಹಾಡುತ್ತಿಲ್ಲ. ಒಂದು ಪದವೆಂದರೆ ಅಂತಿಮವಾಗಿ ಏನು? ಒಂದು ವಾಕ್ಯ. ನಮ್ಮ ಮಾತಿನಲ್ಲಿ ವಾಕ್ಯ ಪಡೆಯುವ ಅರ್ಧವಿರಾಮ, ಅಲ್ಪವಿರಾಮ, ಪೂರ್ಣವಿರಾಮ, ಆಶ್ಚರ್ಯಚಿಹ್ನೆ ಇವೆಲ್ಲವೂ ಸ್ವರ ಕದಂಬಗಳ ಮೂಲಕ ಬಲಿಪರ ಹಾಡಿಕೆಯಲ್ಲಿ ಸ್ಫುಟವಾಗುತ್ತಿದ್ದವು. ಪದ ಕಥನವಾದರೆ ಒಂದು ಬಗೆ, ದು:ಖವಾದರೆ ಆ ರಾಗಾಲಾಪದ ಧಾಟಿಯೇ ಬೇರೆ. ಸಿಟ್ಟಿನದಾದರೆ ಆ ಗರ್ಜನೆಯಲ್ಲಿ ರಂಗಸ್ಥಳದ ಕಂಬಗಳು ನಡುಗಬೇಕು. ಶಿಷ್ಯರು ಈ ನಿಟ್ಟಿನಲ್ಲಿ ಪಳಗಬೇಕು.

ಅವರ ನೆನಪು ಜನಮಾನಸದಲ್ಲಿ ಚಿರಕಾಲ ಉಳಿಯುತ್ತದೆಂಬುದರಲ್ಲಿ ಸಂಶಯವಿಲ್ಲ. ಇಷ್ಟು ಹೇಳಲು ಅವಕಾಶವಿತ್ತುದಕ್ಕೆ ಕೃತಜ್ಞತೆಗಳು.

ಡಾ.ರಾಘವ ನಂಬಿಯಾರ್

error: Content is protected !!
Share This