ದಿನಾಂಕ 11-04-2022 ರಂದು ನಮ್ಮನ್ನಗಲಿದ ಬಲಿಪ ಪ್ರಸಾದ ಭಾಗವತರ ಕುರಿತು ಕೆಲವು ನೆನಪುಗಳು
ಅತ್ಯಂತ ವಿನಯಶೀಲ ವ್ಯಕ್ತಿ ,ಹಿರಿಯರೊಂದಿಗೆ ವಿನೀತ ಭಾವ,ಗೌರವವೇ ಶರಣಾಗುವ ಗುಣವಂತ,ಹೀಗೇ ಮಾತಾಡುವಾಗ ಅತ್ಯಂತ ಸಣ್ಣ ಸ್ವರದಲ್ಲಿ ಮಾತಾಡುವ ಈ ‘ಬಲಿಪ್ಪ’ ವೀರರಸದಲ್ಲಿ ಪದ್ಯತೆಗೆಯುವಾಗ ಎಂತಹ ಗಂಡೆದೆಯೂ ಗಡಗುಟ್ಟುವ ಆರ್ಭಟ.,ಜಾಗಟೆ ಬಾರಿಸದೆ ಹಾಡಿದರೂ ನರ್ತಿಸುವ,ನುಡಿಸುವ ಖಚಿತ ಲಯ ಸಿದ್ಧಿ…ಅದೇ ಯಕ್ಷಗಾನಕ್ಕೆ ಕಟೀಲು ದೇವಿಯೇ ನೀಡಿದ ಪ್ರಸಾದ ಬಲಿಪ ಪ್ರಸಾದ ಭಾಗವತ. ಒಮ್ಮೆ ಅವರು ನನ್ನ ರಚನೆಯ ಆದಿನಾರಾಯಣ ದರ್ಶನದ ಅಷ್ಟತಾಳದ ಪದ್ಯವನ್ನು ತ್ರಿವುಡೆಯಲ್ಲಿ ಬಹು ಸೊಗಸಾಗಿ ಹಾಡಿದಾಗ ಬೆರಗಾಗಿ ಅವರಲ್ಲಿ ಹೇಳಿದ್ದೆ “ಪ್ರಸಾದರೆ ಈ ರಚನೆಗೆ ಮುಂದೆ ತ್ರಿವುಡೆ ಎಂದೂ ನಾಮನಿರ್ದೇಶನ ಮಾಡುತ್ತೇನೆ”
“ಆಗ್ಬಹುದು” ಅಂದಿದ್ದರು.
ಇಂದು ಅವರಿಲ್ಲ ಎಂದರೆ ನಂಬಲಾಗುವುದಿಲ್ಲ.ಹಾಡುವ ಗಂಟಲಿಗೇ ಕ್ಯಾನ್ಸರ್ ಕೊಡಲಿಯನ್ನು ವಿಧಿ ಏಕೆ ಬೀಸಿದನೋ ಅರಿಯದು. ಅವರ ಪದ್ಯದಷ್ಟೇ ಬದುಕಿನ ನಡೆಯೂ ಸೂಕ್ಷ್ಮ…
ಅವರನ್ನು ನಾನು ಗಣೇಶ ಚತುರ್ಥಿಯ ಕಾರ್ಯಕ್ರಮಕ್ಕೆ ಕರೆಯುತ್ತಿದ್ದೆ. ಒಂದು ವರ್ಷ ಅನಿವಾರ್ಯವಾಗಿ ಬರಲಾಗಲಿಲ್ಲ. ಆದರೆ ಕೈಚೆಲ್ಲಲಿಲ್ಲ. ಅವರ ಭಾವ ಪುಂಡಿಕಾಯಿ ಗೋಪಣ್ಣನವರನ್ನು ನಮ್ಮ ಕಾರ್ಯಕ್ರಮಕ್ಕೆ ಕಳುಹಿಸಿದರು. ಅವರೂ ಇವರಷ್ಟೇ ಸಮರ್ಥರು.ಅದೇ ಮುಂದುವರಿಯಿತು.
ಒಮ್ಮೆ ಸುರತ್ಕಲ್ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯಲ್ಲಿ ಸುರತ್ಕಲ್ ವಾಸುದೇವರಾಯರ ಹಿರಿತನದಲ್ಲಿ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತರಾಗಿದ್ದ ಬಲಿಪ ನಾರಾಯಣ ಭಾಗವತರಿಗೆ ಸಂಮಾನವೇರ್ಪಡಿಸಿದ್ದರು. ಅಂದು ನಡೆಯುವ ತಾಳಮದ್ದಲೆಗೆ ಅವರ ಮಗ ಪ್ರಸಾದರೇ ಭಾಗವತರು. ಅಂದೇ ಪ್ರಸಾದರ ಅಭಿಮಾನಿಯೊಬ್ಬರು ಪ್ರಸಾದರನ್ನೂ ಬಂಗಾರದ ಉಂಗುರವನ್ನು ತೊಡಿಸಿ ಅಭಿನಂದಿಸಬೇಕೆಂದು ಯೋಚಿಸಿದ್ದರು. ಸಂಘಟಕರು ತಂದೆ ಮಗ ಇಬ್ಬರನ್ನೂ ಸಂಮಾನಿಸುವ ಯೋಚನೆ ಮಾಡಿದರು. ಆದರೆ….
ಪ್ರಸಾದ ಬಲಿಪರು ಈ ಸಂಮಾನವನ್ನು ಗೌರವದಿಂದ ನಿರಾಕರಿಸಿದರು.ತಂದೆಯವರೊಂದಿಗೆ ಸಂಮಾನ ಪಡೆಯುವ ಯೋಗ್ಯತೆ ನನಗೆ ಬಂದಿಲ್ಲ…ದಯವಿಟ್ಟು ಹಾಗೆ ಮಾಡಬೇಡಿರಿ ಎಂದು ಏನೇ ಹೇಳಿದರೂ ಒಪ್ಪದೆ ಉಳಿದರು.ಅವರಿಗೆ ತಂದೆಯೂ,ಗುರುಗಳೂ,ಅನುಭವಿಗಳೂ ಆದವರಮೇಲಿರುವ ಗೌರವ ಈ ಬಗೆಯದ್ದು. ಒಮ್ಮೆ ನನ್ನ ಪ್ರಸಂಗ ಭೃಗುಶಾಪದಲ್ಲಿ ಒಂದು ಸಾಲಿನಲ್ಲಿದ್ದ ತಪ್ಪನ್ನು ತೋರಿಸಿದ ಸೂಕ್ಷ್ಮವನ್ನು ನಾನು ಮರೆಯುವಂತಿಲ್ಲ.
ಶ್ವಾಪದರ ನಿಗ್ರಹಣದಾ ಕಲಾಪದುಪಕ್ರಮ
ಮೂರು ಮಾತ್ರೆಗಳ ನಡೆಯ ರೂಪಕತಾಳದ ಈ ನಡೆಯನ್ನು ನಾನು ರಚಿಸಿದ್ದು ಸರಿಯೇ ಇದೆ.ಭಾಗವತರು ಶ್ರೀಧರಣ್ಣ ಒಂದು ಮಾತ್ರೆ ಹೆಚ್ಚಾಗುವಂತಿದೆ ಎನ್ನುತ್ತಾರೆ..
ಅವರ ಹಾಡನ್ನು ಗಮನಿಸಿದೆ
ಶ್ವಾಪ|ದರನಿ|ಗ್ರಹಣ| ದಾಕ| ಲಾಪ| ದುಪಕ್ರಮ||
ಇದನ್ನು ಶ್ವಾಪದರ ನಿಗ್ರಹಣದಾ ಎಂದು ಸಾಹಿತ್ಯಾನುಗುಣವಾಗಿ ವಿಂಗಡಿಸುವಾಗ ಒಂದು ಮಾತ್ರೆ ಹೆಚ್ಚಾಗುತ್ತಿತ್ತು!!
ಒಮ್ಮೆ ಅವರು ಮುದದಿಂದ ನಿನ್ನ ಕೊಂಡಾಡುವೆನು…ಈ ಪದ್ಯಗಳ ಗುಚ್ಛದಲ್ಲಿ ಬರುವ ” ಮಹಶೇಷಗರಿದು” ಎಂಬುದನ್ನು ಅವರು “ಶೇಷಗರಿದು” ಎಂದಷ್ಟೇ ಹಾಡಿದ್ದರು.ಯಾರೂ ಈ “ಮಹ” ಬಿಟ್ಟು ಹಾಡುವುದಿಲ್ಲ.ಇವರೇಕೆ ಬಿಟ್ಟರು ಎಂದು ತಿಳಿಯದೆ ಮತ್ತೆ ಆ ವಿಷಯವನ್ನು ಕೇಳಿದೆ.
“ತಂದೆಯವರು ಅದನ್ನು ಹಾಡುವುದಿಲ್ಲ.ನಮಗೂ ಕಲಿಸಿಲ್ಲ” ಎಂದರು.
ಮನೆಗೆ ಹೋದಮೇಲೆ ಸಭಾಲಕ್ಷಣ ಗ್ರಂಥವನ್ನು ನೋಡಿದರೂ ಅಲ್ಲಿಯೂ ” ಮಹ” ಇತ್ತು.
ಆ ಪದ್ಯಗಳ ಮೂರೂ ಪದ್ಯಗಳನ್ನೂ ಸೂಕ್ಷ್ಮವಾಗಿ ಗಮನಿಸಿದಾಗ ತಿಳಿಯಿತು .ಆ ಪದ್ಯದ “ಮಹ” ಛಂದಸ್ಸಿಗೆ ಹೆಚ್ಚಿಗೆ ಇತ್ತು! ಇದು ಖಚಿತಾದ ಬಲಿಪ ಪರಂಪರೆ.
ನನ್ನ ಪ್ರಸಂಗಗಳನ್ನು ಅವರ ಕಂಠದಿಂದ ಹಲವು ಬಾರಿಕೇಳಿದ ಸುಖ ನನ್ನದು..ಜನಪ್ರಿಯರಾಗುತ್ತಿದ್ದಂತೆ ಅವರಿಗೆ ಬೇಡಿಕೆಯೂ ಹೆಚ್ಚಿತ್ತು. ಮಳೆಗಾಲದ ತಾಳಮದ್ದಲೆಗಳಲ್ಲಿ ಅವರಿಗೆ ತುಂಬಾ ಬೇಡಿಕೆ ಇತ್ತು. ಒಮ್ಮೆ ಎರಡು ಮೂರು ಕಾರ್ಯಕ್ರಮ ಮುಗಿಸಿ ಬಹುದೂರದ ಶರವೂರಿಗೆ ಆಟದ ಭಾಗವತಿಕೆಗೆ ಬಂದಿದ್ದರು. ಬೈಕ್ ಪ್ರಯಾಣ.ನಾನೇ ಅವರಲ್ಲಿ ಈ ಮಾತು ಹೇಳಿದ್ದೆ.
” ಭಾಗವತರೆ ಹೀಗೆ ಅಪರ ರಾತ್ರಿಯ ಪ್ರಯಾಣವನ್ನು ಇಟ್ಟುಕೊಳ್ಳಬೇಡಿರಿ.ನಮಗೆ ನೀವು ಬಹುಕಾಲ ಬೇಕು”
ಪ್ರಸಾದರು ” ಉಪಾಯವಿಲ್ಲ ಯಾರಿಗೂ ಬೇಸರವಾಗಬಾರದಲ್ಲ” ತಣ್ಣಗೆ ನಕ್ಕಿದ್ದರು…ಈಗ ….ಓಂ ಶಾಂತಿಃ.
ಶ್ರೀಧರ ಡಿ.ಎಸ್. ಕಿನ್ನಿಗೋಳಿ