• ಶ್ರೀನಿವಾಸ ಜೋಕಟ್ಟೆ, ಮುಂಬಯಿ

ನಮ್ಮ ಮುಂಬೈಯ ಹರಸಾಹಸಿ, ಕಲಾತಪಸ್ವಿ ,ಮುಂಬೈ ಕನ್ನಡ ಸೇನಾನಿ ಕ.ಸಾ.ಪ.ಮಹಾರಾಷ್ಟ್ರ ಘಟಕದ ಮಾಜಿ ಅಧ್ಯಕ್ಷ, ಪದವೀಧರ ಯಕ್ಷಗಾನ ಸಮಿತಿಯ ಅಧ್ಯಕ್ಷ, ಸಾಹಿತ್ಯ ಬಳಗದ ಅಧ್ಯಕ್ಷ ಎಚ್ .ಬಿ .ಎಲ್. ರಾವ್ ನಮ್ಮನ್ನು ಎಪ್ರಿಲ್ 22 ರ ಮುಂಜಾನೆ ಅಗಲಿ ಬಿಟ್ಟರು. ಬದುಕಿನ ಕೊನೆಯ ತನಕವೂ ಮುಂಬೈಯಲ್ಲಿ ಆಗಬೇಕಾದ ಭಾವೀ ಕಾರ್ಯಕ್ರಮಗಳ ಯೋಜನೆಗಳನ್ನು ರೂಪಿಸಿಕೊಳ್ಳುತ್ತ ಅದನ್ನು ಇತರ ಮಿತ್ರರಲ್ಲಿ ಹಂಚಿಕೊಳ್ಳುತ್ತಾ ಆಯಾಯ ಲೇಖಕರಿಗೆ ಬರೆಯಬೇಕಾದುದನ್ನೆಲ್ಲ ಬರೆಸುತ್ತಾ ಇದ್ದಂತಹ ರಾಯರು ಕೆಲವರಿಗಷ್ಟೇ ಅಂತಿಮ ದರ್ಶನದ ಅವಕಾಶವನ್ನು ಕರುಣಿಸಿ ಇತಿಹಾಸದ ಪುಟಗಳಿಗೆ ಸೇರಿಹೋದರು.

ರಾಯರು ನನಗೆ ಎಂಭತ್ತರ ದಶಕದಿಂದಲೂ ಪರಿಚಿತರು.ಅದರಲ್ಲೂ ‘ತಾಯಿನುಡಿ’ ಪತ್ರಿಕೆಯ ಮೂಲಕವೂ ಅವರು ನನಗೆ ಹೆಚ್ಚು ಪರಿಚಿತರು. ಎಲ್ಲರಂತೆ ನಾನೂ ಅವರೂ ಸಾಕಷ್ಟು ವಾದ ಚರ್ಚೆಗಳನ್ನು ಮಾಡಿದವರೇ.

” ಸಾಹಿತ್ಯದಲ್ಲಿ ದಲಿತ ಬಲಿತ ಕಲಿತ ಅಂತೇನೂ ಇಲ್ಲ” ಎಂದು ಕ.ಸಾ.ಪರಿಷತ್ ನ ಎಪ್ಪತ್ತರ ದಶಕದ ಅಧ್ಯಕ್ಷರು ಹೇಳಿದ ನಂತರ ಹೇಗೆ ಬಂಡಾಯ ಸಾಹಿತ್ಯ ಸಂಘಟನೆ , ಸಮ್ಮೇಳನ ಕಾಣಲು ಕಾರಣವಾಯ್ತೋ ಅಂಥದ್ದೇ ಮತ್ತೊಂದು ಘಟನೆ ಮುಂಬಯಿಯಲ್ಲೂ ಅದೇ ಕಾಲಕ್ಕೆ ನಡೆದಿತ್ತು ಎನ್ನುವುದು ಈಗಿನ‌ ಪೀಳಿಗೆಗೆ ಬಹುಷ ತಿಳಿದಿರಲಿಕ್ಕಿಲ್ಲ. ಮುಂಬಯಿಯಲ್ಲಿ ಜರಗಿದ 1981 ರ ಸಾಹಿತ್ಯ ಸಮ್ಮೇಳನದಲ್ಲಿ ಯಕ್ಷಗಾನ ಗೋಷ್ಟಿಗೆ ಅವಕಾಶ ನಿರಾಕರಿಸಲಾಗಿತ್ತು.ಅದರ ಪ್ರತಿಭಟನೆಯಾಗಿ ಮುಂದೆ ಪದವೀಧರ ಯಕ್ಷಗಾನ ಸಮಿತಿಯ ಮೂಲಕ “ಪರ್ಯಾಯ ಯಕ್ಷಗಾನ ಸಾಹಿತ್ಯ ಸಮ್ಮೇಳನ”ವನ್ನೇ ಮುಂಬಯಿಯಲ್ಲಿ ನಡೆಸಿದ ಮಹಾನ್ ವ್ಯಕ್ತಿ ಎಚ್ ಬಿ.ಎಲ್ ರಾವ್. ಮೂರು ದಶಕಗಳಿಗೂ ಹೆಚ್ಚು ಕಾಲ ಈ ಪರ್ಯಾಯ ಯಕ್ಷಗಾನ ಸಾಹಿತ್ಯ ಸಮ್ಮೇಳನ ಮುಂಬಯಿಯಲ್ಲಿ ನಡೆಯಿತು.

ಈ ಮಾತುಗಳಿಂದ ಅದರ ಹುಟ್ಟಿನ ಕಾರಣ ಇನ್ನಷ್ಟು ಸ್ಪಷ್ಟಪಡಿಸುವೆ–
ದಿನಾಂಕ10, 11 ಅಕ್ಟೋಬರ್ 1981 ರಂದು ಮುಂಬಯಿಯ ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ನಡೆದ ಮುಂಬಯಿ‌ ಕನ್ನಡಿಗರ ಮೂರನೆಯ ಸಾಹಿತ್ಯ ಸಮ್ಮೇಳನದಲ್ಲಿ ಪೂರ್ವಾಗ್ರಹ ಪೀಡಿತರಾಗಿ ದ್ದ ಕಾರ್ಯಾಧ್ಯಕ್ಷ ವ್ಯಾಸರಾಯ ಬಲ್ಲಾಳರು ಮತ್ತು ಸದಸ್ಯರು ಯಕ್ಷಗಾನ ಎನ್ನುವ ಶಬ್ದವು ವಿಚಾರಗೋಷ್ಠಿಯಲ್ಲಿ ಬಾರದಂತೆ ಜಾಗ್ರತೆ ವಹಿಸಿದ್ದರು. ಮುಂಬೈಯಲ್ಲಿ ಕನ್ನಡ ಭಾಷೆಯ ಜಾಗೃತಿಗೆ ಕಾರಣ ರಾತ್ರಿ ಶಾಲೆ ಮತ್ತು ಯಕ್ಷಗಾನ .ಸಾರ್ವಜನಿಕರಿಂದ ಹಣ ಸಂಗ್ರಹಿಸಿ ವೇದಿಕೆಯಲ್ಲಿ ಭಾಷಣ ಬಿಗಿದು ಬರ್ಕಾಸ್ತುಗೊಳ್ಳುವ ಸಮ್ಮೇಳನಗಳಿಂದ ಅಲ್ಲ.” ಇದು ಎಚ್ ಬಿ ಎಲ್ ರಾವ್ ಅವರ ಕ್ರಾಂತಿಕಾರಿ ನಿಲುವಾಗಿ ದಾಖಲು ಗೊಂಡಿತು.

ಈ ಪ್ರತಿಭಟನೆಯ ಕರಪತ್ರವು 23.05.1982 ರಂದು ಪದವೀಧರ ಯಕ್ಷಗಾನ ಸಮಿತಿಯ ವಾರ್ಷಿಕೋತ್ಸವದ ಆಮಂತ್ರಣದ ಹಿಂಬದಿ ಪುಟದಲ್ಲಿ ಮುದ್ರಣವಾಗಿತ್ತು. ಆವಾಗಲೇ ರಾಯರು ಮುಂಬಯಿಯಲ್ಲಿ ಸಾಹಿತಿಗಳಿಗೆ ಸಡ್ಡು ಹೊಡೆಯಲು ಹಿಂಜರಿದಿರಲಿಲ್ಲ.

ತನ್ನ ನೇರ ಮಾತುಗಳಿಂದ ರಾಯರು ಆಗಲೇ ಪರಿಚಿತರಾಗಿದ್ದರು. ಶತ್ರುಗಳನ್ನೂ ಸಂಪಾದಿಸಿದ್ದರು. ಕಳೆದ ವಾರವಷ್ಟೇ ಎಚ್ ಬಿ.ಎಲ್. ರಾಯರು ತಮ್ಮ ನೂತನ ಯೋಜನೆ “ಕರಾವಳಿ ಸಾಹಿತ್ಯ”ದ ಬಗ್ಗೆ ಬೃಹದ್ಗ್ರಂಥ ತರುವ ಕನಸಿನ ಕುರಿತು ನನ್ನಲ್ಲಿ ಸುಮಾರು ಅರ್ಧಗಂಟೆ ಮಾತನಾಡಿದ್ದಿದೆ. ಕರಾವಳಿ ಬಂಡಾಯ ಸಾಹಿತ್ಯದ ಕುರಿತಂತೆ ಅನೇಕ ಸಂಗತಿಗಳನ್ನು ನನ್ನಿಂದ ತಿಳಿದುಕೊಂಡಿದ್ದು ಆ ಹೆಸರುಗಳನ್ನು ಪಟ್ಟಿಮಾಡಿ ಕೊಡುವಂತೆಯೂ ಹೇಳಿದ್ದರು. ” ಈಗ ಮನೆಯಲ್ಲಿ ಅಲ್ವಾ ,ಆಗಾಗ ಫೋನ್ ಮಾಡ್ತಾ ಇರ್ತೀನಿ. ತೊಂದರೆ ಇಲ್ಲವಲ್ಲ” ಎಂದು ಮಾತು ಮುಗಿಸಿದ್ದರು.

ಎಚ್ ಬಿ ಎಲ್ ರಾಯರ ” ಸಾಹಿತ್ಯ ಬಳಗ”ದ ಬೆಳ್ಳಿಹಬ್ಬದ ಸಮಾರೋಪ ಸಮಾರಂಭವು ಡಿಸೆಂಬರ್ 8, 2019 ರ ಸಂಜೆ ಮೈಸೂರ್ ಅಸೋಸಿಯೇಷನ್ ನಲ್ಲಿ 12 ಕೃತಿಗಳ ಬಿಡುಗಡೆಯೊಂದಿಗೆ ಜರಗಿತ್ತು. ಅದರಲ್ಲಿ ಸಮಾಜ ಸೇವಕ ಪ್ರಾಧ್ಯಾಪಕ ಪಿ ಸೋಮಶೇಖರ ರಾವ್ ಕೃತಿಯನ್ನು ನನಗೆ ಬಿಡುಗಡೆ ಮಾಡುವ ಅವಕಾಶ ದೊರೆತಿತ್ತು. ನಾನು ಎಚ್ ಬಿ ಎಲ್ ರಾಯರು ಒಂದೇ ವೇದಿಕೆಯಲ್ಲಿ ಇದ್ದದ್ದು ಬಹುಶಃ ಅದೇ ಕೊನೆಯ ಕಾರ್ಯಕ್ರಮವಾಗಿತ್ತು. ಅವರನ್ನು ಕೊನೆಯ ಬಾರಿಗೆ ನಾನು ನೋಡಿದ್ದು ವಿದ್ವಾನ್ ರಾಮಚಂದ್ರ ಉಚ್ಚಿಲರ ಜನ್ಮಶತಮಾನೋತ್ಸವ ಉದ್ಘಾಟನಾ ಸಮಾರಂಭವು ಜನವರಿ ನಾಲ್ಕರಂದು 2020 ಮುಂಬೈ ವಿಶ್ವವಿದ್ಯಾಲಯದ ಡಬ್ಲ್ಯೂ ಆರ್ ಐ ಸಿ ಸಭಾಗೃಹದಲ್ಲಿ ಜರಗಿದಾಗ .ಅದೇ ಕೊನೆ.

ಎಚ್ ಬಿ ಎಲ್ ರಾಯರು ಅನೇಕ ಬಾರಿ ನಮ್ಮ ಕರ್ನಾಟಕ ಮಲ್ಲ ಪತ್ರಿಕಾ ಕಚೇರಿಗೆ ಬರುತ್ತಿದ್ದರು. ತಮ್ಮ ಕಾರ್ಯಕ್ರಮಗಳ ಕುರಿತು ಚರ್ಚಿಸಲು ಅಥವಾ ಸುದ್ದಿಗಳನ್ನು ನೀಡಲು ಬರುತ್ತಿದ್ದರು.ತಮ್ಮನ್ನು ಸದಾ ಬಡ ಬ್ರಾಹ್ಮಣ ಎನ್ನುವುದು ಅವರ ಸ್ಲೋಗನ್ ಆಗಿತ್ತು. ಇನ್ನೂರಕ್ಕೂ ಹೆಚ್ಚು ಅವರು ಕೃತಿಗಳನ್ನು ಸಂಪಾದಿಸಿದ್ದಾರೆ. ಅವರ ” ಅಣಿ ಅರದಲ ಸಿರಿ ಸಿಂಗಾರ ” ಸಂಪಾದಿತ ಗ್ರಂಥಕ್ಕೆ ಪುಸ್ತಕ ಪ್ರಾಧಿಕಾರದಿಂದ ಪುಸ್ತಕ ಸೊಗಸು ಪ್ರಶಸ್ತಿ ದೊರಕಿದೆ .ಅಂತಹ ಗ್ರಂಥ ಮುಂಬಯಿ ಸಾಹಿತ್ಯಲೋಕದ ಹೆಮ್ಮೆ. ಯಕ್ಷಗಾನಕ್ಕೆ ಸಂಬಂಧಪಟ್ಟು ಇರುವ ಎಲ್ಲಾ ಪ್ರಮುಖ ಪ್ರಶಸ್ತಿಗಳು ರಾಯರಿಗೆ ದೊರೆತಿದೆ.

ರಾಯರ ಬಗ್ಗೆ ನನಗೆ ಅತ್ಯಂತ ಖುಷಿಯ ಸಂಗತಿ ಎಂದರೆ ಕನ್ನಡ ಸಂಘ ಕಾಂತಾವರ ಖ್ಯಾತ ವಿಮರ್ಶಕ ಡಾ. ಬಿ .ಜನಾರ್ದನ ಭಟ್ ಸಂಪಾದಕತ್ವದಲ್ಲಿ ಪ್ರಕಟಿಸುತ್ತಿರುವ ನಾಡಿಗೆ ನಮಸ್ಕಾರ ಮಾಲಿಕೆಯಲ್ಲಿ 150ನೇ ಕೃತಿಯಾಗಿ ನನ್ನಿಂದ “ಹೊರನಾಡ ಕನ್ನಡ ಸೇನಾನಿ ಎಚ್ ಬಿ ಎಲ್ ರಾವ್ ” ಕೃತಿಯನ್ನು ಬರೆಸಿರುವುದು.

ಎಚ್ ಬಿ ಎಲ್ ರಾಯರಿಗೆ ಡಾ. ಜಿ ಎನ್ ಉಪಾಧ್ಯ ಅವರ ಸಂಪಾದಕತ್ವದಲ್ಲಿ ಹರಸಾಹಸಿ ಎಂಬ ಅಭಿನಂದನ ಗ್ರಂಥವೂ ಪ್ರಕಟವಾಗಿದೆ. ಉಪಾಧ್ಯ ಅವರು ಕಲಾತಪಸ್ವಿ ಎಚ್ ಬಿ ಎಲ್ ರಾವ್ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ.

ರಾಯರನ್ನು ಬಹುಶಃ ನಾನೇ ಮೊದಲ ಬಾರಿಗೆ 1993 ರಲ್ಲಿ ಮುಂಬೈ ಕನ್ನಡ ದೈನಿಕ ಉದಯ ದೀಪ ಸಾಪ್ತಾಹಿಕ ಕ್ಕಾಗಿ ಸಂದರ್ಶನ ಮಾಡಿದ್ದೆ. ಅದು 28 .11 .1993 ಎಚ್ ಬಿ ಎಲ್ ರಾಯರ ಅರವತ್ತರ ಸಂಭ್ರಮದಲ್ಲಿ ಆ ಸಂದರ್ಶನ ಮಾಡಿದ್ದಾಗಿತ್ತು. ಶೀರ್ಷಿಕೆ “ನನ್ನ ವಿರೋಧಿಗಳಿಗೆ ನಾನು ಋಣಿ”. ಈ ಸಂದರ್ಶನದಲ್ಲಿ ಈಗ ವಿಜಯಕರ್ನಾಟಕ ದೈನಿಕದಲ್ಲಿ ಇರುವ ಸಂತೋಷ ಸಸಿಹಿತ್ಲು ರಾಯರ ಆಕರ್ಷಕ ಕ್ಯಾರಿಕೇಚರ್ ಬಿಡಿಸಿದ್ದರು.

ರಾಯರ ಪೂರ್ಣಹೆಸರು ಹೆಜಮಾಡಿ ಬಾಗಿಲ್ತಾಯ ಲಕ್ಷ್ಮೀನಾರಾಯಣ ರಾವ್.
2004ರಲ್ಲಿ ಕಸಾಪ ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿ ಅವರು ಆಯ್ಕೆಯಾದಾಗ ಕರ್ನಾಟಕ ಮಲ್ಲಕ್ಕೆ ನಾನು ವಿಶೇಷ ಸಂದರ್ಶನ ಮಾಡಿದ್ದೆ . ಮಹಾ ಜಗಳಗಂಟಿ ಕೂಡ ರಾಯರು!

ರಾಯರ ಬಾಲ್ಯ ಜೀವನ ಬಹಳ ಕಷ್ಟಕರವಾಗಿತ್ತು. ಅವರದು ಕ್ರಾಂತಿಕಾರಿ ಮನೋಭಾವ. ಅವರು ಹೋಟೆಲ್ ನಲ್ಲಿ ಕೆಲಸ ಮಾಡಿದವರೂ ಆಗಿದ್ದು ಎಂದೂ ಬದುಕಿಗೆ ಭಯ ಪಡದವರು. ಡಾ. ಜಿ. ಎನ್ ಉಪಾಧ್ಯ ಹೇಳಿದಂತೆ ಅವರು ‘ಒಂಟಿಸಲಗ’.

ನಾನು ಎಷ್ಟೋ ಸಲ ಅವರಿಗೆ ಹೇಳಿದ್ದೆ- “ನಿಮ್ಮ ನಂತರ ಈ ರೀತಿಯ ವಿಷಯ ವಸ್ತುಗಳನ್ನೊಳಗೊಂಡ ವಿಚಾರಗೋಷ್ಠಿಗಳನ್ನು ಮುಂಬೈಯಲ್ಲಿ ಯಾರೂ ಇಡಲಾರರು. ನಿಮ್ಮ ಜತೆ ಆ ರೀತಿಯ ವಿಚಾರ ಗೋಷ್ಟಿಗಳೂ ಹೊರಟು ಹೋಗಬಹುದು” ಎಂದು.

ತನ್ನ ಬದುಕಿನ ಕೊನೆಯ ದಿನಗಳನ್ನು ವಾಶಿಯ ಕರ್ನಾಟಕ ಭವನ ಮೇಲೇರುವಲ್ಲಿ ಬೆಂಗಳೂರಿಗೆ ಓಡಾಟ ನಡೆಸುವುದರಲ್ಲಿ ಕಳೆದಿದ್ದರು ಎಂದರೂ ತಪ್ಪಾಗಲಾರದು. ರಾಯರ ಪ್ರಯತ್ನದಿಂದ ಕನ್ನಡ ಪ್ರವೇಶ ಕಾವ ಜಾಣ ಮತ್ತು ರತ್ನ ಪರೀಕ್ಷೆಗಳು ಮುಂಬೈಯಲ್ಲೇ ನಡೆಯುತ್ತಿವೆ . ಸಂಗೀತ ನೃತ್ಯ ಪರೀಕ್ಷೆಗಳೂ ಮುಂಬಯಿಯಲ್ಲಿ ನಡೆಯುವಂತಾಗಿದೆ. ರಾಯರ ಈ ಕೊಡುಗೆಗೆ ಮುಂಬೈ ಕನ್ನಡಿಗರು ಸದಾ ಕೃತಜ್ಞರು. ಪರ್ಯಾಯ ಯಕ್ಷಗಾನ ಸಮ್ಮೇಳನವನ್ನು ಯಾರೂ ಮರೆಯುವಂತಿಲ್ಲ.

ಒಂದು ಘಟನೆ ಹೇಳಿ ಈ ಬರಹ ಮುಕ್ತಾಯ ಮಾಡುವೆ- “ಶಿವಳ್ಳಿ ಬ್ರಾಹ್ಮಣ” ಎನ್ನುವ ಗ್ರಂಥವನ್ನು ಎಚ್ .ಬಿ.ಎಲ್ ರಾಯರ ಪ್ರಧಾನ ಸಂಪಾದಕತ್ವದಲ್ಲಿ 2001ರಲ್ಲಿ ತರಲಾಗಿತ್ತು. ಅದರಲ್ಲಿ ಸಾಂಸ್ಕೃತಿಕ ರಂಗದಲ್ಲಿ ಶಿವಳ್ಳಿಯವರು ಎನ್ನುವ ಲೇಖನವನ್ನು ಮುರಳೀಧರ ಉಪಾಧ್ಯ ಬರೆದಿದ್ದರು . (ಅದರಲ್ಲಿ ನನ್ನ ಹೆಸರು ಇರಲಿಲ್ಲ. ) ವಿಜಯಕರ್ನಾಟಕದ 25 .11. 2001 ರ ಸಂಚಿಕೆಯಲ್ಲಿ ಡಾ. ಬಿ ಜನಾರ್ದನ ಭಟ್ ವಿಮರ್ಶೆ ಬರೆಯುತ್ತ “ಶ್ರೀನಿವಾಸ ಜೋಕಟ್ಟೆ ಅವರಂಥ ಸಾಹಿತಿಗಳ ಜಾತಿ ಅವರ ಹೆಸರಲ್ಲಿ ತಿಳಿದಿಲ್ಲವಾದ್ದರಿಂದ ಅಂತ ಹಲವು ಹೆಸರುಗಳು ಸಹಜವಾಗಿಯೇ ಬಿಟ್ಟುಹೋಗಿವೆ” ಎಂದಿದ್ದರು. ಅನಂತರ ಒಂದು ದಿನ ತಮಾಷೆಯಾಗಿ “ರಾಯರೇ, ನಿಮ್ಮ ಪ್ರಧಾನ ಸಂಪಾದಕತ್ವದಲ್ಲಿ ಬಂದ ಕೃತಿಯಲ್ಲಿ ನನ್ನ ಹೆಸರೇ ಇಲ್ಲವಲ್ಲ” ಎಂದಾ ಗ “ಅರೆ,ನನಗೂ ಈಗಲೇ ಗೊತ್ತಾಗಿದ್ದು” ಅಂದಿದ್ದರು.
ರಾಯರಿಗೆ ರಾಯರೇ ಸಾಟಿ.

error: Content is protected !!
Share This