ಪತಿತ ಪಾವನ ಶ್ರೀರಾಮ. ಶಾಪಗ್ರಸ್ಥ ಜನ್ಮವನ್ನು ಮೋಕ್ಷಪದದತ್ತ ಕೊಂಡೊಯ್ಯುವ ರಾಮನ ಕುರಿತು ಹೇಳುವ ನುಡಿಯಿದು. ವೈಶಾಖ ಮಾಸದ ಬಿರು ಬೇಸಗೆಯ ಸಮಯ. ಬೀಸುವ ಗಾಳಿಯೂ ಸ್ತಬ್ಧವಾಗಿ ಶಾಖ ಇನ್ನೂ ಅಧಿಕವಾದ ಅನುಭವ. ಶಾಖ ಅಧಿಕವಾಗಿ ಬೆವರು ಒಡೆಯುತ್ತದೆ. ಆಕಾಶದಲ್ಲಿ ಒಮ್ಮಿಂದೊಮ್ಮೆಗೆ ಮೋಡ ಕಪ್ಪಾಗಿ ಇನ್ನೇನು ಮಳೆ ಸುರಿಯಬಹುದು ಎಂಬ ಸೂಚನೆ. ಆದರೆ ಮಳೆ ಸುರಿಯುವುದಿಲ್ಲ. ಉಷ್ಣ ಅಧಿಕವಾಗುತ್ತಾ ಒಂದು ಚರಮ ಸ್ಥಿತಿಗೆ ತಲುಪಿದಂತೆ ಒಮ್ಮೇಲೆ ಮಳೆ ಹನಿ ಸುರಿಯಲಾರಂಭಿಸಿ ತಂಪಾದ ಹವೆ ಬೀಸಿದಂತೆ, ವೃಣಒಂದ ಕೀವು ಕಟ್ಟಿ ವೇದನೆ ಸಹಿಸದಾಗಿ ಯಾತನೆಯ ಉತ್ಕಟ ಸ್ಥಿತಿಯಲ್ಲಿ ವೃಣ ಒಡೆದು ಕೀವು ಹರಿದು ವೇದನೆಯ ಮೋಕ್ಷವನ್ನು ಅನುಭವಿಸುವ ನಿರಾಳ ಸ್ಥಿತಿಯಂತೆ ಕೈವಲ್ಯ ಧರ ಶ್ರೀರಾಮನ ಆಗಮನವಾದಾಗ ಬಿರುಬೇಸಗೆಯ ತಂಪಾದ ಹವೆಯ ಅಹ್ಲಾದಕರ ಅನುಭವವಾಗುತ್ತದೆ.

ಪಾದ ಪ್ರತೀಕ್ಷ ಯಕ್ಷಗಾನದ ಕ್ಷಣವೊಂದರ ಅನುಭವವಿದು. ಒಂದು ರೀತಿಯ ನೀರಸ ಘಳಿಗೆಯ ಮೋಕ್ಷವೋ ಎಂಬಂತೆ ಚೆಂಡೆಯ ಬಿರುಸಿನ ಪೆಟ್ಟಿಗೆ ಮೊದಲು ಲಕ್ಷ್ಮಣನ ಪ್ರವೇಶವಾಗುತ್ತದೆ. ಲಕ್ಷ್ಮಣನ ಒಂದಷ್ಟು ದಿಗಿಣದ ಸುತ್ತು ಕಳೆದಾಗ ಸಹಜವಾಗಿ ರಾಮನ ಪ್ರವೇಶ ಹೇಗಾಗುತ್ತದೆ ಎಂಬ ಕುತೂಹಲ ಮೂಡುತ್ತದೆ. ಯಕ್ಷಗಾನದ ಕುಣಿದಲ್ಲಿ ಶ್ರೀರಾಮನ ಪಾತ್ರದ ಕುಣಿತದ ಮಹತ್ವ ಅದಕ್ಕೆ ಕಾರಣ. ಆಗ ರಾಮನಾಗಿ ವಾಸುದೇವ ರಂಗ ಭಟ್ಟರ ಪ್ರವೇಶವಾಗುತ್ತದೆ. ಮೂರು ದಿಗಿಣದಲ್ಲಿ ಕುಣಿತ ಮುಕ್ತಾಯವಾಗುವಾಗುತ್ತದೆ. ರಾಮನ ಪಾತ್ರದ ಇತಿಮಿತಿಯ ಕುಣಿತದ ಲೆಕ್ಕಾಚಾರಕ್ಕೆ ಅನುಗುಣವಾದ ಪ್ರವೇಶ ಮತ್ತು ಕುಣಿತ. ನಿಜಕ್ಕೂ ಭಟ್ಟರ ಶ್ರದ್ಧೆ ಮತ್ತು ಕಾಳಜಿ ಇಲ್ಲಿ ಇಷ್ಟವಾಗುತ್ತದೆ.  ಯಕ್ಷಗಾನದಲ್ಲಿ ರಾಮನ ಪಾತ್ರಕ್ಕಿರುವ ಘನತೆ ಬೇರೆ ಯಾವುದಕ್ಕೂ ಇರುವುದಕ್ಕಿಲ್ಲ. ಪರಿಪೂರ್ಣ ವ್ಯಕ್ತಿತ್ವದ, ಮರ್ಯಾದಾ ಪುರುಷೋತ್ತಮನ ಪಾತ್ರ ನಿರ್ವಹಣೆ ಕುಣಿತದಲ್ಲೂ ಮಾತುಗಾರಿಕೆಯಲ್ಲೂ ಬಹಳ ತೂಕವುಳ್ಳದ್ದಾಗಿರಬೇಕು. ಇದರ ಮಹತ್ವವನ್ನು ತಿಳಿಯದವರು ನಿರ್ವಹಿಸಿದಲ್ಲಿ ರಾಮನ ವ್ಯಕ್ತಿತ್ವಕ್ಕೇ ಪರೋಕ್ಷವಾಗಿ ಅಪಚಾರವೆಸಗಿದಂತೆ.  ರಾಮನ ಪಾತ್ರ ಗಿರಕಿ ಸುತ್ತುವ ಪರಿಪಾಠವಿಲ್ಲ. ರಾಮನ ಗಿರಕಿ ಸುತ್ತುವುದಿದ್ದರೆ ಅದು ಪಟ್ಟಾಭಿಷೇಕದ ಬಾಲ ರಾಮನ ಪಾತ್ರದಲ್ಲಿ ಮಾತ್ರ.

ವಾಸ್ತವದಲ್ಲಿ ರಂಗಾ ಭಟ್ಟರು ರಂಗಸ್ಥಳದ ಕಲಾವಿದರಲ್ಲ ಎಂದು ಅವರು ಒಪ್ಪಿಕೊಂಡರೂ ಪಾತ್ರದ ಪ್ರಭುದ್ದತೆಯಲ್ಲಿ ಹಾಗನಿಸುವುದಿಲ್ಲ. ಹಲವು ಕಲಾವಿದರು ತಮ್ಮ ಹಲವು ನ್ಯೂನ್ಯತೆಗಳನ್ನು ತಮ್ಮ ಮತ್ತೋಂದು ನಿರ್ವಹಣೆಯ ಮುಖದಲ್ಲಿ ಅಳಿಸಿ ಹಾಕುತ್ತಿದ್ದರು. ಮಾತುಗಾರಿಕೆಯಿಂದಲೋ ಅಭಿನಯದಿಂದಲೋ ಸಮಯ ಪ್ರಜ್ಞೆಯಿಂದಲೋ ಕುಣಿತದ ಕೊರತೆಯನ್ನು ನೀಗಿಸುತ್ತಿದ್ದರು. ಇವರ ನಿರ್ವಹಣೆಯಲ್ಲಿ ಆ ಪ್ರಮೇಯವೇ ಒದಗಿ ಬರುವುದಿಲ್ಲ. ಕುಣಿತದಲ್ಲಿ ಅಭಿನಯದಲ್ಲಿ ತೋರುವ ಶ್ರದ್ಧೆ ತೃಪ್ತಿಕರ ಅನುಭವವನ್ನು ನೀಡುತ್ತದೆ. ಮಾತಿಗಿಳಿದರೆ ತಾನಿನ್ನೂ ಕುಣಿತ ರಂಗನಡೆಯ ಅಭ್ಯಾಸದಲ್ಲೇ ಇದ್ದೇನೆ ಎಂದು ವಿನಮ್ರವಾಗಿ ಒಪ್ಪಿಕೊಂಡುಬಿಡುತ್ತಾರೆ. ಹಲವು ಕಲಾವಿದರು ತಮ್ಮ ಪಾತ್ರ ನಿರ್ವಹಣೆಯ ಬಗ್ಗೆ ಪ್ರತಿಕ್ರಿಯೆಯನ್ನು ಮುಕ್ತವಾಗಿ ನೀಡುವಂತೆ ಕೇಳಿದರೂ ವಾಸ್ತವದಲ್ಲಿ ಅದರಲ್ಲಿ ಧನಾತ್ಮಕ ಗುಣಗಳನ್ನಷ್ಟೆ ಬಹಳವಾಗಿ ಬಯಸುತ್ತಾರೆ. ಆದರೆ ಇಲ್ಲಿ ಋಣಾತ್ಮಕವಾಗಲಿ ಧನಾತ್ಮಕವಾಗಲಿ ಅದನ್ನು ಅರಿತು ನಿರ್ವಹಿಸುವ ಸಾಲಿಗೆ ಭಟ್ಟರು ಸೇರುತ್ತಾರೆ. ಇದು ಬಹಳ ವಿಶೇಷ ಅಂತ ಹೇಳಬೇಕು.

ಸಾಮಾನ್ಯವಾಗಿ ಕಲಾವಿದನಾದವನು ತನ್ನ ಕೊರತೆಗಳತ್ತ ಗಮನ ಹರಿಸಬೇಕು. ಆಗಲೇ ಪರಿಪೂರ್ಣತೆಯತ್ತ ಸಾಗುವುದಕ್ಕೆ ಸಾಧ್ಯವಾಗುತ್ತದೆ. ಇದು ಎಲ್ಲರಿಗೂ ಇದು ತಿಳಿದಿರುವ ವಿಚಾರವೇ.  ಯಕ್ಷಗಾನದ ಮಟ್ಟಿಗೆ ಇದಕ್ಕೆ ಸಾಕಷ್ಟು ಅವಕಾಶಗಳಿದ್ದರೂ ಅದರತ್ತ ಗಮನ ಹರಿಸುವುದು ಬಹಳ ಕಡಿಮೆ. ತಮ್ಮ ನ್ಯೂನ್ಯತೆಗಳನ್ನು ರಂಗದ ಮೇಲೆ ತತ್ಸಮಯದಲ್ಲೇ ತಿದ್ದಿಕೊಳ್ಳುವ ಅವಕಾಶ ಯಕ್ಷಗಾನದಲ್ಲಿದ್ದಷ್ಟು ಬೇರೆ ಕಲೆಯಲ್ಲಿ ಸಾಧ್ಯವಿಲ್ಲ. ಆದರೂ ಇದನ್ನು ಪರಿಗಣಿಸುವವರು ಬಹಳ ಕಡಿಮೆ. ಇಂದು ಬಹಳಷ್ಟು ಕಲಾವಿದರು ವಿಮರ್ಶೆಯನ್ನು ಬಯಸುತ್ತಾರೆ. ಆದರೆ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸುವುದಿಲ್ಲ. ತಮ್ಮ ನಿರ್ವಹಣೆ ಗಮನಾರ್ಹವಾಗಬೇಕು ಆದರೆ ಇಲ್ಲಿ ಫಲಿತಾಂಶದ ಅವಶ್ಯಕತೆ ಇರುವುದಿಲ್ಲ. ಇದು ಒಂದು ರೀತಿಯಲ್ಲಿ ಅಂಗಡಿಯಲ್ಲಿ ಪ್ರದರ್ಶನಕ್ಕೆ ಇಟ್ಟ ಉಡುಗೆಯಂತೆ ಅದು ದರ್ಶನಕ್ಕೆ ಮಾತ್ರ ತೊಡುವುದಕ್ಕೆ ಇಲ್ಲ. ರಂಗಾಭಟ್ಟರ ವೇಶ ಕಾಣುವಾಗ ಈ ವಿಚಾರಗಳೆಲ್ಲ ಇಲ್ಲಿ ಸ್ಪಂದನೆಯನ್ನು ಉಂಟು ಮಾಡಿದೆಯೋ ಎಂಬ ಪರಿಪಕ್ವತೆ ಕಂಡುಬರುತ್ತದೆ. ಒಬ್ಬ ಕಲಾವಿದ ತನ್ನ ನಿರ್ವಹಣೆಯಲ್ಲಿ ಎಷ್ಟು ತಾದಾತ್ಮ್ಯವನ್ನು ಅನುಭವಿಸುತ್ತಾನೋ ಅದರ ಮೇಲೆ ಆತನ ಬದುಕು ಆಧರಿಸಲ್ಪಟ್ಟಿದೆ. ಭಟ್ಟರು ಅದನ್ನು ಅನುಭವಿಸಿ ರಂಗದಲ್ಲಿ ಪಾತ್ರವಾಗುತ್ತಾರೆ.

ಒಂದು ಪಾತ್ರದ ಬಗ್ಗೆ. ಪಾತ್ರಧಾರಿಯ ಬಗ್ಗೆ ಹೇಳುವಾಗ ಅದನ್ನು ವಿಮರ್ಶೆ ಎಂದು ಪರಿಗಣಿಸುವುದುಂಟು. ಆದರೆ ವಿಮರ್ಶೆಗೆ  ಬಹಳಷ್ಟು ಅರ್ಹತೆಗಳನ್ನು ಗುರುತಿಸಬೇಕಾಗುತ್ತದೆ. ಅದನ್ನು ಗುರುತಿಸದೇ ವಿಮರ್ಶೆ ಎಂದು ಪರಿಗಣಿಸುವುದರಿಂದ ಮೂಲಭಾವನೆಗೆ ಮತ್ತು ಪರಿಣಾಮಕ್ಕೆ ಅದು ತೊಂದರೆಯನ್ನುಂಟು ಮಾಡುತ್ತದೆ. ವಿಮರ್ಶೆ ಮತ್ತು ಅನಿಸಿಕೆ ಅಥವಾ ಪ್ರತಿಕ್ರಿಯೆ ಪರಸ್ಪರ ತೀರಾ ಭಿನ್ನವಾದ ರೂಪವನ್ನು ಪಡೆದವುಗಳು. ಅವುಗಳ ವೆತ್ಯಾಸ ತಿಳಿಯದೆ ಅನಗತ್ಯ ಗೊಂದಲ ವಿವಾದಗಳಿಗೆ ಇದು ಕಾರಣವಾಗುತ್ತದೆ. ಆದುದರಿಂದ ಇಲ್ಲಿ ಕೆಲವೊಂದು ಅಂಶಗಳನ್ನು ಹೇಳುವ ಮನಸ್ಸಾಗುತ್ತದೆ. ಮೂಲ ವಿಷಯಕ್ಕೆ ಇದು ಸಂವಹನ ಉಂಟು ಮಾಡದೇ ಇದ್ದರೂ ಇದು ಅಪರಾಧವಲ್ಲ ಎಂದು ನನ್ನ ಭಾವನೆ.

ಯಕ್ಷಗಾನ ವಿಮರ್ಶೆ ಎಂಬುದು ಈಗ ಬೇಡಿಕೆ ಸಲ್ಲಿಸಿ ಪಡೆಯುವ ವಸ್ತುವಾಗಿದೆ. ಒಮ್ಮಿಂದೊಮ್ಮೆ ವಿಮರ್ಶೆ ಮಾಡಿದರೆ ತನಗೆ ಎಷ್ಟು ತಿಳಿದಿದೆ ಎಂಬುದರ ಬದಲಾಗಿ ವಿಮರ್ಶಕನ ಜ್ಞಾನವೇ ಪ್ರಶ್ನಾರ್ಹವಾಗುವುದು ಒಂದು ವಿಡಂಬನೆ. ಹಾಗಾಗಿ ಅಭಿಪ್ರಾಯ ಸೂಚಿಸಿದರೂ ಅದು ಕೇವಲ ಧನಾತ್ಮಕ ಅಂಶಗಳಷ್ಟೇ ಇರುತ್ತದೆ. ಋಣಾತ್ಮಕವಾದುದನ್ನು ಹೇಳಿ ಈತನ ಜ್ಞಾನವು ಪ್ರಶ್ನಾರ್ಹವಾಗಿ ಕಲಾವಿದನೇ ವಿಮರ್ಶಕನಾಗುವ ಅಪಾಯವಿರುತ್ತದೆ! ಆದುದರಿಂದ ವಿಮರ್ಶೆ ಎಂಬುದು ಕತ್ತಿಯಅಲಗಿನಂತೆ ಪರಿಣಾಮ ಉಂಟು ಮಾಡುವುದಿಲ್ಲ. ವಿಮರ್ಶೆಗೂ ಪ್ರಶಂಸೆಗೂ ವೆತ್ಯಾಸ ತಿಳಿಯದೇ ಹೋಗುತ್ತದೆ.

ವಿಮರ್ಶೆಯಾಗಲಿ ಪ್ರತಿಕ್ರಿಯೆಯಾಗಲಿ ಎಲ್ಲಿ ಋಣಾತ್ಮಕ ಅಂಶಗಳಿವೆಯೋ ಅವುಗಳು ಕಲಾವಿದನಲ್ಲಿ ಧನಾತ್ಮಕ ಪರಿಣಾಮವನ್ನು ಬೀರಬೇಕು. ಹಾಗೇಯೆ ಧನಾತ್ಮಕ ಅಂಶಗಳು ಋಣಾತ್ಮಕ ಧೋರಣೇಯಲ್ಲೇ ಸ್ವೀಕರಿಸಲ್ಪಡಬೇಕು. ಆದರೆ ಇಂದು ಧನಾತ್ಮಕವಾದವುಗಳು ಸ್ವೀಕೃತವಾಗಿ ಮಿಕ್ಕುಳಿದವುಗಳು ಕಸದಬುಟ್ಟಿಯನ್ನು ಸೇರುವ ಕಸವಾಗಿಬಿಟ್ಟಿದೆ. ವಿಮರ್ಶೆ ಮಾಡುವವನೂ ಆತಂಕವನ್ನು ಎದುರಿಸುವ ಇಚ್ಛೆಯಿಲ್ಲದೆ ಕಸವನ್ನು ಹೊರಗೆ ಎಸೆಯದೇ ಮನಸ್ಸಿನಲ್ಲೇ ಇರಿಸಿಬಿಡುತ್ತಾನೆ. ತನ್ನ ಅನಿಸಿಕೆಗಳನ್ನೂ ಅಭಿಪ್ರಾಯಗಳನ್ನು ಮುಕ್ತವಾಗಿ ಪ್ರತಿಕ್ರಿಯಿಸಿದರೆ ಅದು ವಿವಾದಕ್ಕೆ ಕಾರಣವಾಗುವ ಭಯ. ಹಾಗಾಗಿ ಒಂದು ಯಕ್ಷಗಾನವನ್ನು ನೋಡಿದಾಗ ಹೇಳಿದುದಕ್ಕಿಂತಲೂ ಹೇಳದೇ ಇರುವದ್ದು ಬಹಳವಿದೆ ಎಂದನಿಸುತ್ತದೆ.

ಯಕ್ಷಗಾನದ ವೇಷಧಾರಿಗೆ ಕನ್ನಡಿ ಎಂದರೆ ಅತ್ಯಂತ ಹತ್ತಿರದ ಸಹಚರನಿದ್ದಂತೆ. ಆತನ ಕುಂದುಕೊರತೆಗಳನ್ನು ಮೊದಲು ತೋರಿಸುವ ಸ್ನೇಹಿತ. ಆದರೆ ಸಮಷ್ಟಿಯಲ್ಲಿ ಒಬ್ಬ ಕಲಾವಿದನಾದವನು ಪ್ರೇಕ್ಷಕನಲ್ಲೇ ಇದನ್ನು ಕಾಣಬಹುದು. ಮಾತ್ರವಲ್ಲ ಕಾಣಲೇಬೇಕು. ಹಾಗಾಗಿ ಪ್ರೇಕ್ಷಕನೆಂದರೆ ಕಲಾವಿದನಿಗೆ ಕನ್ನಡಿಯಂತೆ. ಅದು ನೀರಲ್ಲಿ ಕಾಣುವ ಪ್ರತಿಬಿಂಬವಲ್ಲ. ಆದರೆ ಅದನ್ನು ನೀರ ಪ್ರತಿಬಿಂಬದಂತೆ ಮರೆತುಬಿಡುವುದೇ ಹೆಚ್ಚು. ಕಲೆಗೆ ಸಂಬಂಧಿಸಿ ಪ್ರೇಕ್ಷಕನ ಪ್ರತಿಕ್ರಿಯೆ ನೀರ ಪ್ರತಿಬಿಂಬವಾಗದೆ ಅದು ನೇರ (ಸತ್ಯ) ಪ್ರತ್ರಿಬಿಂಬವಾಗಿರುತ್ತದೆ. ಹೀಗಾಗಿ ಕಲಾಸ್ವಾದನೆಯಲ್ಲಿ ಕನ್ನಡಿಯಾಗಿ ಪ್ರೇಕ್ಷಕನ ಕರ್ತವ್ಯವೂ ಬಹಳ ಹಿರಿದಾಗಿರುತ್ತದೆ. ಆದರೆ ವಿಪರ್ಯಾಸವೆಂದರೆ ಇಲ್ಲಿ ಕನ್ನಡಿ ಯಥಾವತ್ ಸತ್ಯ ಬಿಂಬವನ್ನು ತೋರಿಸಿದರೆ ಆ ಕನ್ನಡಿಗೆ ಮಸಿ ಬಳಿದು ಕನ್ನಡಿಯ ಗುಣವನ್ನೇ ಅಡಗಿಸಿಬಿಡುವ ಪ್ರಯತ್ನವೂ ಇಲ್ಲದಿರುವುದಿಲ್ಲ. ಇದರಿಂದ ವಿಮರ್ಶೆಯಲ್ಲಿ ಅಥವಾ ಪ್ರತಿಕ್ರಿಯೆಯಲ್ಲಿ ಸತ್ಯದರ್ಶನವಾಗಬೇಕಾದರೆ ಅಂತಹ ಪರಿಸರವೂ ಅನಿವಾರ್ಯವಾಗುತ್ತದೆ. ವಾಸ್ತವದ ಯಕ್ಷಗಾನದಲ್ಲಿ ಅಂತಹ ಪರಿಸರ ಖಂಡಿತವಾಗಿಯೂ ಇಲ್ಲ ಎಂಬುದು ಬೇಸರದ ಸಂಗತಿ.

ಒಂದು ಯಕ್ಷಗಾನವನ್ನು ನೋಡಿ ಬರಿದೇ ಒಂದು ಪ್ರತಿಕ್ರಿಯೆಯನ್ನು ಸಾರ್ವಜನಿಕವಾಗಿ ಮಂಡಿಸಿದರೆ ಮಂಡಿಸಿದವನ ಜಾತಕ ಅನ್ವೇಷಣೆಗೆ ವಸ್ತುವಾಗುತ್ತದೆ. ಆತನ ಇತಿಮಿತಿಗಳ ಬಗ್ಗೆ ಅನಪೇಕ್ಷಿತ    ಭಾವ ಪ್ರಕಟನೆಯಾಗುತ್ತದೆ. ಇದರ ಬಗ್ಗೆ ಹೇಳುವುದಕ್ಕೆ ಆತನಿಗೆಷ್ಟು ತಿಳಿದಿದೆ ಎಂಬುದಷ್ಟೇ ಪ್ರಧಾನವಾಗಿ ಆತನ ಪ್ರತಿಕ್ರಿಯೆಯ ವಿಚಾರಗಳು ಗೌಣವಾಗಿಬಿಡುತ್ತದೆ. ಹಾಗಾಗಿ ಉಂಡ ಅಹಾರ ಹುಳಿಯೋ ಒಗರೋ ಎಂದು ತಿಳಿಯುವ ಪ್ರಧಾನ ಮಾಧ್ಯಮವನ್ನೇ ಇಂದಿನ ವಾತಾವರನ ನಾಶಮಾಡುತ್ತದೆ. ಒಬ್ಬಾಕೆ ತಾಯಿ ತನ್ನ ಪುಟ್ಟ ಎಳೆ ಮಗುವಿಗೆ ಅಂಬಲಿಯನ್ನು ಮಾಡಿ ಉಣಿಸುತ್ತಾಳೆ. ಆ ಬಾಯಿಬಾರದ ಮಗು ಅದನ್ನು ತಿನ್ನದೇ ತಳ್ಳಿಬಿಡುತ್ತದೆ. ತಾಯಿ ತಾಳ್ಮೆಯಿಂದ ಯಾವರೀತಿಯ ತಂತ್ರ ಮಾಡಿದರೂ ಮಗು ಅಂಬಲಿಯನ್ನು ಉಣ್ಣುವುದಿಲ್ಲ. ಕೊನೆಗೆ ತಾಯಿ ಒಂದಿಷ್ಟು ಅಂಬಲಿಯ ರುಚಿ ನೋಡುತ್ತಾಳೆ ಆಗ ಅರಿವಿಗೆ ಬರುತ್ತದೆ ಅದಕ್ಕೆ ನಿತ್ಯ ಸಹಜವಾಗಿ ಹಾಕುವಂತಹ ಉಪ್ಪು ಅಥವಾ ಸಿಹಿಯೋ ಹಾಕುವುದನ್ನು ಮರೆತಿರುತ್ತಾಳೆ.  ಎಲ್ಲವನ್ನು ತಿಳಿದ ತಾಯಿಗೆ ಏನೂ ತಿಳಿಯದ ಪುಟ್ಟ ಮಗು ಅಂಬಲಿಯ ದೋಷವನ್ನು ಪ್ರತಿಕ್ರಿಯೆಯಾಗಿ ಹೇಳುತ್ತದೆ. ಇಲ್ಲಿ ಮಗುವಿಗೆ ಏನೂ ತಿಳಿಯದೇ ಇರುವುದರಿಂದ ಅದರ ಅಜ್ಞಾನದಿಂದ ಹೇಳಿದ ಸತ್ಯ ಸತ್ಯವಾಗದಿರಲು ಸಾಧ್ಯವಿಲ್ಲ. ಅದನ್ನು ತಾಯಿಯಾದವಳು ತಿಳಿಯಬೇಕಾಗುತ್ತದೆ. ಇದರಿಂದ ಸ್ವತಃ ತಾಯಿಯ ತಿಳುವಳಿಕೆ ವೃದ್ಧಿಯಾಗಿ ಮುಂದೆ ಹೀಗಾಗದೇ ಇರುವಂತೆ ಎಚ್ಚರಿಕೆಯನ್ನು ನೀಡುತ್ತದೆ.

ಶೇಣಿಯವರು ಹೇಳಿದ ಮಾತೊಂದು ನೆನಪಿಗೆ ಬರುತ್ತದೆ. ಆಟವನ್ನು ನೋಡಿದ ಪ್ರೇಕ್ಷಕ ಮರುದಿನ ಹೇಳುತ್ತಾನೆ. “ ನಿನ್ನೆ ಎಂತಹ ರಾವಣ ಮಾರಾಯ್ರೆ.  ಭಾರಿ ಒಳ್ಳೆಯ ರಾವಣ.”  ಈ ಮಾತಿನ ಅರ್ಥವನ್ನು ಗ್ರಹಿಸುವಲ್ಲಿ ನಾವು ಪ್ರಾಮಾಣಿಕರಾಗಬೇಕು. “ರಾವಣ ಒಳ್ಳೆಯವನಾದರೆ … ಹೋಗಿ,  ಹೋಗಿ ರಾವಣ ಒಳ್ಳೆಯವ ಅಂತ ಹೇಳ್ತಾನಲ್ಲ?  ಲೋಕ ಉಳಿದಿತೋ ಅದೊಂದು ದುರಂತ ಅಲ್ಲವೇ?” ಆದರೆ ಇಲ್ಲಿ ಈ ಮಾತಿನ ಪ್ರಾಮಾಣಿಕ ಭಾವ,  ಅದು ನಾವು ಅರ್ಥವಿಸಿಕೊಳ್ಳುವುದರಲ್ಲಿದೆ.  ಇಲ್ಲಿ ಆತ ಹೇಳಿದ್ದು ರಾವಣನ ಪಾತ್ರದ ರಸಾಭಿವ್ಯಕ್ತಿಯನ್ನಷ್ಟೇ ಹೇಳಿದ್ದು. ಬದಲಾಗಿ ರಾವಣ ವ್ಯಕ್ತಿತ್ವದ ವಿಮರ್ಶೆಯಲ್ಲ. ಕೀಚಕ ವಧೆಯನ್ನು ನೋಡಿ ಎಂತಹಾ ಒಳ್ಳೆಯ ಕೀಚಕ ಎಂದು ಹೇಳಿದರೆ ಅದರ ಮೂಲಾರ್ಥವನ್ನು ಗ್ರಹಿಸುವಾಗ ಪ್ರೇಕ್ಷಕನ ಪ್ರತಿಕ್ರಿಯೆಯನ್ನು ದಮನಿಸುವುದು ಸರಿಯಲ್ಲ. ಕಲೆ ಅಂದರೆ ಅಷ್ಟೆ. ಅದು ಕೇವಲ ರಸಾಭಿವ್ಯಕ್ತಿ. ಒಂದಲ್ಲ ಒಂದು ರಸವನ್ನು ಬಿಂಬಿಸುವುದಷ್ಟೇ ಅದರ ಉದ್ದೇಶ. ಆ ರಸವನ್ನು ಗ್ರಹಿಸುವುದರಲ್ಲೇ ರಸಿಕನಾದ ಪ್ರೇಕ್ಷಕನ ಅಸ್ತಿತ್ವ ಇರುವುದು.  ಯಕ್ಷಗಾನದಲ್ಲಿ ಕಿಂಚಿತ್ತೂ ಸಂಭಾವನೆ ಇಲ್ಲದವನು ಎಂದರೆ ಅದು ಪ್ರೇಕ್ಷಕ ಮಾತ್ರ. ಇದನ್ನು ಅರ್ಥವಿಸಿಕೊಳ್ಳಬೇಕು. ಪ್ರೇಕ್ಷಕ ಸಂಭಾವನೆ ರೂಪದಲ್ಲಿ ಯಾವುದನ್ನು ಬಯಸುತ್ತಾನೋ ಅದು ಅವನ ಪ್ರಾಮಾಣಿಕತೆಗೆ ಸಂದ ವಿಚಾರ. ಆದರೂ ಕಲೆಗೆ ಸಂಬಂಧಿಸಿ ಮುಕ್ತವಾದ ಪ್ರತಿಕ್ರೆಯೆಯೂ ಪ್ರಧಾನವಾಗಿಬಿಡುತ್ತದೆ.

ಕಲೆಯ ಬಗ್ಗೆ ವಿಮರ್ಶೆ ಬಂದರೆ ಅದರ ಬಗ್ಗೆ ಗಮನ ಹರಿದಿದೆ ಎಂದರ್ಥ. ಕಲಾವಿದನಿಗೂ ಅವನ ಅಸ್ತಿತ್ವಕ್ಕೂ ಈ ವಿಮರ್ಶೆಗಳೇ  ನಿದರ್ಶನವಾಗುತ್ತದೆ. ಒಬ್ಬನ ಪಾತ್ರದ ಬಗೆಯೋ ಅಥವ ಗಾಯನದ ಬಗೆಯೋ ಅವನಲ್ಲಿರುವ ಕಲೆಯ ಬಗ್ಗೆ ವಿಮರ್ಶೆ ಇಲ್ಲವೆಂದಾದರೆ ಕಲಾಪ್ರಪಂಚದಲ್ಲಿ ಆತನ ಅಸ್ತಿತ್ವ ಪ್ರಶ್ನಾರ್ಹವಾಗುತ್ತದೆ.

(ರಾಜಕುಮಾರ್  ಬೆಂಗಳೂರು)

error: Content is protected !!
Share This