– ಡಾ. ಎಂ.ಪ್ರಭಾಕರ ಜೋಶಿ

ನಮ್ಮ ಕಾಲದ ಓರ್ವ ಶ್ರೇಷ್ಠ ಕಲಾವಾಗ್ಮಿ, ಮಾತಿನ ಲೋಕದ ಭಾವಾವೇಶಜೀವಿ ಮಲ್ಪೆ ರಾಮದಾಸ ಸಾಮಗರ ಒಡನಾಟ, ನೆನಪು, ರಂಗದ ಮೇಲಣ ಸಹವರ್ತಿತ್ವ – ಇವೆಲ್ಲ ಒಂದೊಂದು ವಿಶಿಷ್ಟ ಆಪ್ಯಾಯಮಾನ ಅನುಭವಗಳು. ಅಂತಹ ಅನುಭವ ಪಡೆದ ಅದೃಷ್ಟವಂತರಲ್ಲಿ ನಾನೂ ಒಬ್ಬ. ನಿಜಹೆಸರಿಗಿಂತಲೂ, ಸಣ್ಣ ಸಾಮಗರೆಂದೆ ನಮಗವರು ಬಾಲ್ಯದಿಂದಲೂ ಪ್ರಸಿದ್ಧರು. ಗೆಳೆಯ ನಾ. ಕಾರಂತರು ಮಾಡಿರುವ ಈ ಪುಣ್ಯದ ಕೆಲಸ, ಸಾಮಗರ ಮಾತುಗಾರಿಕೆಯ ಅಂಶಗಳ  ಒಂದು ಸಂಗ್ರಹಕ್ಕೆ, ಸಾಮಗರ ಅರ್ಥಗಾರಿಕೆಯ ಈ ಪಡಿದನಿಗೆ ದನಿಗೂಡಿಸುವುದೊಂದು ಯೋಗಭಾಗ್ಯ. ಸಾಮಗರ ಒಡನಾಟದಲ್ಲಿ ಮತ್ತು ಅವರ ಶ್ರೋತೃಗಳಾಗಿ ನಾವು ಪಡೆದ ಆನಂದದ ಋಣವನ್ನು ಒಂದಿಷ್ಟು ಸಂದಾಯ ಮಾಡುವ ಅವಕಾಶ.

ದೊಡ್ಡ ಸಾಮಗರೆಂದು ಖ್ಯಾತರಾಗಿ ಯಕ್ಷಗಾನ. ಹರಿಕಥೆಗಳಲ್ಲಿ ಉನ್ನತ ಗೌರವಕ್ಕೆ ಪಾತ್ರರಾದ ಮಲ್ಪೆ ಶಂಕರನಾರಾಯಣ ಸಾಮಗರ, ಅಂತೆಯೇ ಅಕಾಲ ನಿಧನ ಹೊಂದಿದ ಇನ್ನೋರ್ವ ಸೋದರ ಶ್ರೀನಿವಾಸ ಸಾಮಗರ ಕಲಾಪ್ರತಿಭೆಯ ಆವರಣ, ತಂದೆ ಲಕ್ಷ್ಮೀನಾರಾಯಣ ಸಾಮಗರಲ್ಲಿದ್ದ ಕಲಾಸಕ್ತಿಯ ಹಿನ್ನೆಲೆಗಳಲ್ಲಿ ಸಾಮಗರು ಬೆಳೆದರೂ, ಪ್ರಾಯಃ ಕಲಾವಿದನಾಗುವ ಅಪೇಕ್ಷೆಯನ್ನು ಬಾಲ್ಯದಲ್ಲಿ ಹೊಂದಿರಲಿಲ್ಲ. ಆದರೆ ಕಲೆಗಾರಿಕೆ ಸಹಜವಾಗಿ ಅವರಲ್ಲಿತ್ತು.

ಉಡುಪಿ ಬೋರ್ಡು ಹೈಸ್ಕೂಲು ವಿದ್ಯಾಭ್ಯಾಸ, ಜತೆಗೆ ಕೆಲಕಾಲ ಪೇಜಾವರ ಮಠದಲ್ಲಿ ಸಂಸ್ಕೃತ ಅಧ್ಯಯನಗೈದು – ಆ ಮಠಕ್ಕೆಯೇ ಸೇರಿದ ಮುಚ್ಲುಕೋಡಿ ದೇವಸ್ಥಾನದ ಅರ್ಚಕರಾದ ಸಾಮಗರು; ಮುಂದೆ ತುಳು, ಕನ್ನಡಗಳ ಶ್ರೇಷ್ಠ ವಾಗ್ಮಿಯಾಗಿ ಬೆಳೆದು ನಿಂತ ಕತೆ ರೋಚಕ. ಆ ಕಾಲದ ಶ್ರೇಷ್ಠ ಸಂಗೀತಗಾರರಾದ ಉಡುಪಿ ನರಸಿಂಹ ಸೇರೆಗಾರರಿಂದ, ಪಿಟೀಲು ಮಂಜುನಾಥಯ್ಯನವರಿಂದ ದೊರಕಿದ ಸಂಗೀತ ಪಾಠ ಒಂದು ತಿರುವು ನೀಡಿತು. ಅದೇನೋ ಒಂದು ಚಿಕ್ಕ ಕಾರಣಕ್ಕೆ ದೇವಾಲಯದ ಅರ್ಚಕತ್ವ ಬೇಡ ಅನಿಸಿದ್ದು ಸ್ವತಂತ್ರನಾಗಲು ಪ್ರೇರಣೆ ನೀಡಿತುದೀ ಮಧ್ಯೆ ಹರಿಕಥೆ, ನಾಟಕ ಅಭಿನಯ, ತಾಳಮದ್ದಳೆಗಳಲ್ಲಿ ಹವ್ಯಾಸ ಇದ್ದುದು, ಅದೇ ಮುಂದೆ ವ್ಯವಸಾಯವಾಯಿತು.

ಪ್ರಸಿದ್ಧ ಕಲಾವಿದ ದಿ.ಉದ್ಯಾವರ ಬಸವನವರ ಒತ್ತಾಯದಿಂದ, ಉಪ್ಪಿನಂಗಡಿಯಲ್ಲಿ ಜರುಗಿದ ಆಟವೊಂದರಲ್ಲಿ ವೇಷ ಮಾಡಿದ ಸಾಮಗರಿಗೆ, ಮುಂದೆ ಅದು ವೃತ್ತಿಯಾಯಿತು. ಇರಾ, ಕರ್ನಾಟಕ ಮೇಳಗಳಲ್ಲಿ ಬಹುಕಾಲ; ಮಧ್ಯೆ ಕೆಲ ವರುಷ ಕೂಡ್ಲು ಮೇಳದಲ್ಲಿ, ಕೊನೆಗೆ ಕದ್ರಿ ಮೇಳದಲ್ಲಿ ತಿರುಗಾಟ. ಜತೆಗೆ ನಿರಂತರವಾಗಿ ಹರಿಕಥೆ, ತಾಳಮದ್ದಳೆಗಳಲ್ಲಿ ನಿರತರಾದರು ಸಾಮಗರು. 1955-2005  ಈ ಐವತ್ತು ವರುಷಗಳಲ್ಲಿ ಯಕ್ಷಗಾನದ ಮಾತುಗಾರಿಕೆಗೆ, ಹರಿಕಥಾ ರಂಗಕ್ಕೆ ದೊಡ್ಡ ಕೊಡುಗೆ ನೀಡಿದ ಸಾಮಗರು ಓರ್ವ ವಿಶಿಷ್ಟ, ವಿಚಿತ್ರ ಪ್ರತಿಭಾವಂತ. 

ಸಾಮಗರು ನರ್ತಕರಲ್ಲ. ಅವರ ವೇಷಗಾರಿಕೆ, ರಂಗದ ನಟನೆಯ ತಾಂತ್ರಿಕ ಅಂಶಗಳೂ ಸಾಮಾನ್ಯ. ಆದರೆ ವಾಚಿಕದ ಅಂಗದಲ್ಲಿ ಅವರೋರ್ವ ಅಸಾಮಾನ್ಯ ಸಿದ್ಧಿಯಿದ್ದ ಪ್ರತಿಭಾಶಾಲಿ. ಸನ್ನಿವೇಶ ನಿರ್ಮಾಣ, ವಿವರಗಳ ಪೋಣಿಕೆ, ಪೂರಕ ಪಾಂಡಿತ್ಯ, ಭಾಷಾ ಸೌಂದರ್ಯ, ದೃಷ್ಟಾಂತಗಳು, ಶಬ್ದಾಲಂಕಾರ, ಅರ್ಥಾಲಂಕಾರ, ಧ್ವನಿ ಸೌಂದರ್ಯ, ಉತ್ಕಟಭಾವ, ಸಂವಹನ ವಿಧಾನ, ವಿನೋದದ ಚಿಮುಕುಗಳ ಪಾಕವಾದ ಅವರ ಮಾತುಗಾರಿಕೆ – ಒಂದು ಅಸಾಮಾನ್ಯ ಅನುಭವ. ಭಾಷೆ ಚೊಕ್ಕ ಮತ್ತು ಪ್ರೌಢ. ಪೌರಾಣಿಕತೆ ಇರುವ ಭಾಷಾಶುದ್ಧಿಯಲ್ಲಿ ಅವರಿಗೆ ವಿಶ್ವಾಸ. ಆಧುನಿಕ ಅನ್ನಬಹುದಾದ ಪದ, ಉದಾಹರಣೆ ಬಹು ವಿರಳ.

ಹಿಂದು ಮುಂದಾಗಿರುವಂತೆ ಕಾಣುವ ವಾಕ್ಯಸರಣಿ, ಎಲ್ಲೋ ತೊಡಗಿ ಎಲ್ಲೋ ನಿಲ್ಲುವ ನಿರೂಪಣೆ, ಪಕ್ಕನೆ ಸಿಡಿಯುವ ದೃಷ್ಟಾಂತ, ಶ್ಲೋಕ, ಕಥಾವಿವರ, ಉಪಕಥೆ, ನಿಟಿನಿಟಿ ಹರಿಯುವ ನಿರರ್ಗಳ ಸಾಭಿನಯ ವಾಕ್ಸರಣಿ – ಕೇಳುಗನಿಗೊದಗಿಸುವ ವಿಚಿತ್ರಾನುಭವ ಅಸಾಮಾನ್ಯ. ಒಮ್ಮೆ ಫಕ್ಕನೆ ನಿಲ್ಲುವ, ಇದಿರಾಳಿಯ ಪ್ರಶ್ನೆಗೆ ತಬ್ಬಿಬ್ಬಾದಂತೆ ಕಾಣುವ, ತಟ್ಟನೆ ಉತ್ತರಿಸುವ, ತುಂಡು ಸಂವಾದದ ಟಾಸಿಂಗ್ನಲ್ಲಿ ಸಾಮಗರದು ಎಣೆಯಿಲ್ಲದ ಸಿದ್ಧಿ. ಅರ್ಥಗಾರಿಕೆ ಎಂಬುದು ಹಲವರು ಸೇರಿ ನಿರ್ಮಿಸುವ ನಾಟಕವೆಂಬ ಅರಿವು ಅವರಲ್ಲಿ ಸದಾ ಜಾಗೃತ. ವಾಗ್ವಿಪುಲತೆ, ವಿಷಯ ವೈವಿಧ್ಯ, ರೋಚಕತೆಗಳಲ್ಲಿ ಅವರೊಬ್ಬ ಹರಿದಾಸ-ಅರ್ಥದಾರಿ. ಮಾತಿನಲ್ಲಿ ವಿಷಯದಿಂದ ವಿಷಯಕ್ಕೆ ಜಿಗಿಯುತ್ತ ಅಲಂಕಾರಗಳ ದಟ್ಟಣೆ, ಹಾಸ್ಯ-ರಂಜನೆಯ ಸ್ವಾದ, ಹಗುರವಾಗದ ಲೌಕಿಕದ ಜೋಡಣೆಗಳಿಂದ ಇಡಿಕಿರಿದ ಸಾಮಗ ವಾಗ್ವಿಲಾಸ ಸೌಂದರ್ಯ ಅನನ್ಯ. ಅದರಲ್ಲಿ ಪರಂಪರೆಯ ಸೊಬಗು, ಸತತ ಸೃಜನದ ನಿರಾಯಾಸ ಹರಿವು ತುಂಬಿರುತ್ತದೆ. 

ತಾಳಮದ್ದಳೆ ಕ್ಷೇತ್ರದ ಒಬ್ಬ ಪ್ರಮುಖ ಅರ್ಥದಾರಿಯಾಗಿ ಬಹುಕಾಲ ವ್ಯವಸಾಯ ಮಾಡಿದ ಸಾಮಗರು – ಪೊಳಲಿ ಶಾಸ್ತ್ರಿ, ದೇರಾಜೆ, ದೊಡ್ಡ ಸಾಮಗರು, ಶೇಣಿ, ಪೆರ್ಲ, ಕಾಂತ ರೈ ಇವರೊಂದಿಗೂ; ಆ ಬಳಿಕ ಕುಂಬ್ಳೆ ಸುಂದರ ರಾವ್, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಈ ಲೇಖಕನೂ ಸೇರಿದಂತೆ ಹಲವರ ಜತೆ ಸಹಕಲಾವಿದರಾಗಿ ಇದ್ದವರು. ಬೇರಾರಂತೆಯೂ ಅಲ್ಲದೆ – ಎಲ್ಲರೊಂದಿಗೆ ಸಮರಸವಾಗಿ ಹೊಂದಿ ಮೆರೆದ, ಇತರರನ್ನೂ ಮೆರೆಸಿದ ಸಮನ್ವಯಶೀಲ ಕಲಾವಿದ.

ಹಿರಿಯ ಸಾಮಗ – ಶೇಣಿಯವರಂತಹ ಇಬ್ಬರು ಪ್ರಭಾವಿ ಮಾತುಗಾರರ ನೆರಳಲ್ಲಿದ್ದೂ ಅವರೀರ್ವರ ಪ್ರಭಾವಕ್ಕೊಳಗಾಗದೆ ಮೆರೆದು ಬೆಳಗಿದುದು ಅವರ ಅಸಾಮಾನ್ಯ ಸಾಮಥ್ರ್ಯಕ್ಕೆ ಸಾಕ್ಷಿ. ವಿಮರ್ಶಕ, ಅರ್ಥದಾರಿ ದಿ.ಮುಳಿಯ ಮಹಾಬಲ ಭಟ್ಟರ ಮಾತಿನಲ್ಲಿ ಹೇಳುವುದಾದರೆ ಸಾಮಗರ ಅರ್ಥಗಾರಿಕೆಯ ಕುರಿತಾಗಿ ನಮ್ಮ ವಿಮರ್ಶೆ ಏನೇ ಇದ್ದರೂ, ಅವರದು ಮೊದಲ ದರ್ಜೆಯ  ಪ್ರತಿಭೆ ಎಂಬುದು ನಿರ್ವಿವಾದ. ಅಂಥವರೂ ಎಂದೂ ಅನುಕರಣಶೀಲರಾಗಿರುವುದಿಲ್ಲ. ತಾಳಮದ್ದಳೆಯಲ್ಲಿ ದಶರಥ, ಭೀಷ್ಮ, ಅಂಗದ, ಪ್ರಹಸ್ತ, ಮಯೂರಧ್ವಜ, ವಿಭೀಷಣ, ಅತಿಕಾಯ, ವಿದುರ.. ಇವು ಅವರ ಶ್ರೇಷ್ಠ ನಿರ್ವಹಣೆಗಳು.

ಸಂಗೀತ, ಸಾಹಿತ್ಯ, ಸಂಪ್ರದಾಯ, ಪುರಾಣಜ್ಞಾನ ಖಚಿತ, ಸಂಸ್ಕಾರಪೂರ್ಣವಾದ ಆವೇಶದ ಅಭಿವ್ಯಕ್ತಿ ಬೆರೆತ ಹರಿಕಥಾ ಕ್ರಮ ಸಾಮಗರದು. ಅವರ ಸಂಗೀತ ಜ್ಞಾನ, ಪ್ರಯೋಗ ಎರಡೂ ಪ್ರೌಢ. ಹಾಡುಗಾರಿಕೆ, ಮೃದಂಗ, ಹಾರ್ಮೋನಿಯಂ ವಾದನಗಳಲ್ಲಿ ಒಳ್ಳೆಯ ಪರಿಣತಿ. ತಾನೇ ಹಾರ್ಮೋನಿಯಂ ಬಾರಿಸಿಕೊಂಡೇ ಹರಿಕಥೆ ಮಾಡುತ್ತಿದ್ದರು. ರಾಗ ತಾಳಗಳಲ್ಲಿ, ನಾದ ಭಾವಗಳಲ್ಲಿ ಹೊಕ್ಕು ಅನುಭವಿಸಿ ಲೀನರಾಗಬಲ್ಲ ಕಲಾವಿದ. ಅಂತಯೇ ಕೇಳುಗ ಕಲಾವಿದನೂ ಹೌದು. ಲಯವಿನ್ಯಾಸ, ಸರ್ಕಸ್ ಕೂಡಾ ಅವರಿಗೆ ಇಷ್ಟವೇ. ಅವರ ಸಂಗೀತದಲ್ಲಿ ಮಾಧುರ್ಯ, ಪಾಂಡಿತ್ಯ, ರಂಜತೆ ಮೂರೂ ಇತ್ತು. ದಾಸಸಾಹಿತ್ಯ, ವೈದಿಕ, ಪೌರಾಣಿಕ ಸಂಸ್ಕೃತಿ, ಮಾನವ ಜೀವನದ ಭಾವ ವಿಸ್ತಾರದ ಹಿಡಿತವಿದ್ದ ಸಾಮಗರ ಹರಿಕಥೆ ಒಂದು ಪ್ರವಚನ, ವ್ಯಾಖ್ಯಾನ, ನಾಟಕ ಎಲ್ಲವೂ ಆಗಿತ್ತು. ಅದರಲ್ಲಿ ಕೇಳಿಸುವ ಗುಣವಿತ್ತು. ಕೆಲವೊಮ್ಮೆ, ಎತ್ತೆತ್ತಲೋ ಹೋಗಿ, ಏನು ಹೇಳಿರಬಹುದು ಎಂದೆನಿಸಿದರೂ, ಮತ್ತೂ ಕೇಳೋಣ ಅನಿಸುತ್ತಿತ್ತು. ವೈದಿಕ, ಪೌರಾಣಿಕ ವಿಚಾರಗಳಷ್ಟೇ ಆಳವಾದ ಅರಿವು ಅವರಿಗೆ ತುಳು ಸಂಸ್ಕೃತಿಯ ವಿಚಾರಗಳಲ್ಲೂ ಇದ್ದಿತ್ತು.

ರಾಮದಾಸ ಸಾಮಗರು ಸಾಂಪ್ರದಾಯಿಕ ಕ್ರಮದ ಶ್ರೇಷ್ಠ ಕೀರ್ತನಕಾರರಲ್ಲಿ ಒಬ್ಬರು. ಅವರ ಅರ್ಥಗಾರಿಕೆಯ ಪೀಠಿಕೆಗಳಲ್ಲಿ ಇದು ಸ್ಪಷ್ಟವಾಗುತ್ತಿತ್ತು – ದಿ.ಶೇಣಿಯವರ ಒಂದು ನುಡಿ. ರಂಗದ ಅವರ ಪಾತ್ರ ನಿರ್ವಹಣೆಗೆ ಅಪಾರ ಶಕ್ತಿ, ಜನಪ್ರಿಯತೆ ಎರಡೂ ಇದ್ದುವು. ಒಂದು ವ್ಯವಸಾಯ ಮೇಳವನ್ನು ತನ್ನ ಶಕ್ತಿಯಿಂದಲೇ ಆಕರ್ಷಕವಾಗಿಸಿ ಮೆರೆಸುವ ತಾಕತ್ತಿದ್ದ ಕಲಾವಿದ ಸಾಮಗರು. ಹರಿಶ್ಚಂದ್ರ, ನಳ – ಇವು ಇಡೀ ರಾತ್ರಿ ಒಬ್ಬನನ್ನೇ ಅವಲಂಬಿಸಿ ನಡೆಯುವ ಪ್ರಸಂಗಗಳು. ಆ ಪಾತ್ರಗಳನ್ನು ಆಭೂತಪೂರ್ವ ಎನಿಸಿ, ಅವರಿಗೇ ಮೀಸಲೆನಿಸುವಂತೆ ನಿರ್ವಹಿಸಿದ್ದು ಸಾಮಗರ ಹಿರಿಮೆ. ನಳ, ಹರಿಶ್ಚಂದ್ರ, ಅಕ್ಷಯಾಂಬರದ ಶಕುನಿ, ಪರ್ವದ ಭೀಷ್ಮ, ಪಟ್ಟಾಭಿಷೇಕದ ದಶರಥ, ಪಾರಿಜಾತದ ಕೃಷ್ಣ, ಕೋಟಿಚೆನ್ನಯದ ಬುದ್ಯಂತ, ಸಿರಿಪ್ರಸಂಗದ ಕಾಂತುಪೂಂಜ – ಇವು ಬಹುಶಃ ಸಾಮಗರ ಶ್ರೇಷ್ಠ ಸ್ಮರಣೀಯ ಪಾತ್ರರಚನೆಗಳು ಮಾದರಿಗಳು. ಉಳಿದಂತೆ ನೂರಾರು ಪಾತ್ರಗಳು ಕಡಿಮೆಯಲ್ಲ.

ಸಾಮಗರ ಅರ್ಥಗಾರಿಕೆಯಲ್ಲಿದ್ದುದು ಭಾವಪೂರ್ಣತೆ, ಆವೇಶ, ದರ್ಶನ, (ಎರಡೂ ಅರ್ಥದಲ್ಲಿ) ಧರ್ಮ, ಸತ್ಯ, ಭಗವಂತ, ಪರಮಾತ್ಮ – ಅನ್ನುವಾಗ ಅವರಿಗಾಗುವ ಅತ್ಯಾವೇಶಭಾವ ನೋಡಿಯೇ ಸವಿಯಬೇಕು. ಅವರ ಪೀಠಿಕೆ, ನಿರ್ವಹಣೆ, ಸಂವಾದಗಳ ಸೊಬಗು ಬಹುಮುಖಿ. ಭಕ್ತಿ, ಅಧ್ಯಾತ್ಮ, ಶೋಕಗಳಲ್ಲಿ ಮುಳುಗಿ ಬಿಡುವ ಕಲಾವಿದರವರು. ಶೃಂಗಾರವೂ ಅಸಾಧಾರಣವೇ. ಅವರ ಅರ್ಥ ತರ್ಕಪ್ರಧಾನವಲ್ಲ. ಕೆಲವೊಮ್ಮೆ ಆದ್ಯಂತ ಏಕಸೂತ್ರವಲ್ಲ. ಪರಸ್ಪರ ವಿರೋಧ, ಅತಿಕರಣ, ಅತಿಯಾದ ಶಬ್ದವಿಶ್ಲೇಷಣೆ, ಮಾರಕ ಪ್ರತಿಪಾದನೆಗಳೂ,  ವಿಕ್ಷಿಪ್ತತೆಗಳು ಅವರ ಅಭಿವ್ಯಕ್ತಿಯಲ್ಲಿದ್ದುವು.

ತುಳು ಭಾಷೆಯ ಅರ್ಥಗಾರಿಕೆಗೆ, ಹರಿಕಥೆಗಳಲ್ಲಿ ಸಾಮಗರೋರ್ವ ಶಕಪುರುಷ. ತುಳುವಿನ ಬೆಡಗು, ಸೊಬಗು, ಧ್ವನಿ, ಅಂದ, ಸಿರಿಗಳನ್ನು ಅವರು ಮೊಗೆದು ಕೊಡುತ್ತಿದ್ದ ಕ್ರಮ ಅದ್ಭುತ. ತುಳು ಬದುಕಿನ, ಸಂಸ್ಕೃತಿಯ ಅವರ ಚಿತ್ರಗಳು – ಕಾವ್ಯಾನುಭವಗಳು. ಅವರ ಹಲವು ತುಳು ಪೀಠಿಕೆಗಳು ತುಳುನಾಡಿನ ರಾಷ್ಟ್ರೀಯತೆಯ ಗದ್ಯಗೀತೆಗಳಂತಿದ್ದುವು.

ಕನ್ನಡ, ತುಳು ಎರಡೂ ಅರ್ಥಗಾರಿಕೆಯಲ್ಲಿ ಸಾಮಗರು ರಚಿಸುತ್ತಿದ್ದ ಸಂವಾದ, ಇದಿರಾಳಿಯನ್ನು ಮಾತನಾಡಿಸುತ್ತಿದ್ದ ಕ್ರಮ – ಒಂದು ಮಾದರಿ. ಸಾಮಗರು, ಹಾಸ್ಯಗಾರ ಮಿಜಾರು ಅಣ್ಣಪ್ಪ, ಪುಳಿಂಚ ರಾಮಯ್ಯ ಶೆಟ್ಟರೊಂದಿಗೆ ರಂಗದಲ್ಲಿ ರಚಿಸುತ್ತಿದ್ದ ನೂರಾರು ಹಾಸ್ಯ ಸನ್ನಿವೇಶಗಳು ಹಾಸ್ಯಕಾವ್ಯಗಳಾಗಿದ್ದುವು. ಕೋಳ್ಯೂರು ರಾಮಚಂದ್ರ ರಾವ್ ಜತೆ ಸಾಮಗರು ರಚಿಸುತ್ತಿದ್ದ ದಾಂಪತ್ಯದ ವಿವಿಧ ಚಿತ್ರಣಗಳು ನಮ್ಮ ಕಾಲದ ಯಕ್ಷಗಾನದ ವಿಶಿಷ್ಟ ಸಾಧನೆಗಳು. ಹೀಗೆಯೇ ಮಾನವಜೀವನದ ವಿವಿಧ ಭಾವಗಳ ಚಿತ್ರ ಸರಣಿಯ ಸಾಮಗಶೈಲಿಯ ವಿಸ್ತಾರ ಬಹುಮುಖಿ. ಜತೆಗಾರರಿಗೆ ಸಾಮಗರ ಜತೆ ಮಾತನಾಡುವುದು ಮೃಷ್ಟಾನ್ನದ ಅನುಭವ ಎಂದು ಅವರ ಅನೇಕ ಸಹವರ್ತಿಗಳ ಅನಿಸಿಕೆ.

ವ್ಯಕ್ತಿಶಃ ಸಾಮಗರದು ವಿಚಿತ್ರ ಸ್ವಭಾವ. ಸ್ನೇಹಶೀಲ, ಆತ್ಮೀಯ, ವಿನಯವಂತ. ಒಮ್ಮೊಮ್ಮೆ ಸಿಡುಕನಂತೆ, ವಿಕ್ಷಿಪ್ತರಂತಿರುತ್ತಿದ್ದುದೂ ಉಂಟು. ಆದರೆ ಅವರದು ನೇರ ಮುಗ್ಧ ಸ್ವಭಾವ. ಕಸುಬಿನಲ್ಲಿ ಉದಾಸೀನವಿಲ್ಲದ, ಆಲಸ್ಯವರಿಯದ ದುಡಿಮೆಗಾರ. ಪ್ರತಿಭೆಯನ್ನು ಮೆಚ್ಚುವ, ಕಿರಿಯರನ್ನು ಪ್ರೋತ್ಸಾಹಿಸಿ ಬೆಳೆಸುವ ಗುಣಶಾಲಿ. ಜನಪ್ರಿಯತೆ, ಕೀರ್ತಿ, ಮಾನ ಸಂಮಾನಗಳ ಜತೆ, ಜೀವನದಲ್ಲಿ ಕೆಲವು ದುರಂತಗಳನ್ನು ಕಂಡವರವರು. ಎಲ್ಲವನ್ನೂ ಮೀರಿ ಮೆಟ್ಟಿನಿಂತ ಧೀರರೂ ಹೌದು.

ಅವರ ಪತ್ನಿ ಶ್ರೀಮತಿ ನಾಗರತ್ನಾರವರ ಬಾಳಸಂಗಾತಿತನ ಅವರ ದೊಡ್ಡ ಭಾಗ್ಯ. ಅವರು ಸಾಮಗರನ್ನು, ಅವರ ಎಲ್ಲಾ ವೈಚಿತ್ರ್ಯಗಳೊಂದಿಗೆ ಒಪ್ಪಿ, ಆರಾಧಿಸಿ ಆರೈಕೆ ಮಾಡಿದ ರೀತಿ – ಶಬ್ದಗಳಿಗೆ ಮೀರಿದ ಆದರ್ಶ. ನಾಗರತ್ನಮ್ಮ – ಆ ಹೆಸರಿಗೆ ಅನ್ವರ್ಥಕರು.

ಸಾಮಗರ ವಿಶಿಷ್ಟ ಕಲಾಭಿವ್ಯಕ್ತಿಯ ಕೆಲವು ತುಣುಕುಗಳು ಇಲ್ಲಿವೆ. ಇದು ಅವರ ವಾಚಿಕದ ತೀರಾ ಸೀಮಿತ ಸ್ವರೂಪವೆಂಬುದು ಸ್ಪಷ್ಟ. ಅಲ್ಲದೆ ಮಾತಿನ ಮಾಧ್ಯಮವು ಬರೆಹಕ್ಕೆ ಬಂದಾಗ, ಅದರ ವಾಚಿಕ ವೈಭವ ಮರೆಯಾಗಿರುತ್ತದೆಯಷ್ಟೆ.

ಅಂತಿದ್ದರೂ ಈ ಬಗೆಯ ಸಂಕಲನ ಪ್ರಕಾರ ಅತ್ಯಂತ ಸ್ವಾಗತಾರ್ಹ. ಶೇಣಿ ದರ್ಶನ, ಶೇಣಿ ಚಿಂತನಗಳ ಸಂಪಾದಕ; ಕೃಷಿ, ಕಲೆ, ಪರ್ಯಾಯ ಜೀವನ, ಯಕ್ಷಗಾನ ಸಂಬಂಧಿ ಸಾಹಿತ್ಯಗಳ ಪರಿಣತ ಲೇಖಕ, ಕಲಾವಿದ, ಗೆಳೆಯ ನಾ. ಕಾರಂತ ಪೆರಾಜೆಯವರು ಇದನ್ನು ಕೈಗೊಂಡು ಸ್ತುತ್ಯ ಕೃತಿಯೊಂದನ್ನು ರಚಿಸಿ, ಸಾಮಗರ ಕಲಾಭಾವಜೀವನದ ದಾಖಲೆಯೊಂದನ್ನು ನೀಡಿದ್ದಾರೆ. ಅವರಿಗೆ ಅಭಿನಂದನೆಗಳು.

ಹಿರಿಯ, ಕಲಾವಿದ ಸಾಮಗರ ಪುಣ್ಯ ಸ್ಮೃತಿಗೆ ಮಗದೊಮ್ಮೆ ಪ್ರಣತಿ.

error: Content is protected !!
Share This