‘ಎಡನೀರು ಮಠದ ಸ್ವಾಮೀಜಿಯವರು ಧರ್ಮ ಮತ್ತು ಕಲೆಯನ್ನು ಎರಡು ಕಣ್ಣುಗಳಾಗಿ ನೋಡಿದ್ದಾರೆ. ಸಾ‌ಮಾಜಿಕ ಸೂಕ್ಷ್ಮಗಳನ್ನು ಗಮನದಲ್ಲಿರಿಸಿಕೊಂಡು ಯಕ್ಷಗಾನ ಕಲೆಯನ್ನು ಎತ್ತರದ ಸ್ಥಾನಕ್ಕೆ ಬೆಳೆಸುವುದರೊಂದಿಗೆ ಯಕ್ಷಗಾನದ ಇತಿಹಾಸದಲ್ಲಿ ಒಂದು ಅಧ್ಯಾಯ ಆಗಿದ್ದಾರೆ. ಇವರ ಬಗ್ಗೆ ಸಂಶೋಧನೆಗೆ ಹೆಚ್ಚಿನ ಅವಕಾಶಗಳಿವೆ ‘ಎಂದು ವಿಶ್ರಾಂತ ಪ್ರಾಚಾರ್ಯ ಹಾಗೂ ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಹೇಳಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಮಂಗಳೂರು ವಿವಿಯ ಸಿಂಡಿಕೇಟ್ ಸಭಾಂಗಣದಲ್ಲಿ ಮಂಗಳವಾರ ಜರಗಿದ ಕಲಾರಾಧಕರಾದ ಎಡನೀರು ಮಠದ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಸಂಸ್ಮರಣೆ ಹಾಗೂ ಅಗಲಿದ ಯಕ್ಷಗಾನ ಕಲಾವಿದರಿಗೆ ‘ಯಕ್ಷ ನಮನ’ ಕಾರ್ಯಕ್ರಮದಲ್ಲಿ ಅವರು ಸಂಸ್ಮರಣಾ ಭಾಷಣ ಮಾಡಿದರು.ಕಾರ್ಯಕ್ರಮದಲ್ಲಿ ಎಡನೀರು ಸ್ವಾಮೀಜಿಯವರ ಸಂಸ್ಮರಣೆಯೊಂದಿಗೆ , ಕಳೆದ ಸಾಲಿನಲ್ಲಿ ಅಗಲಿದ ಕಲಾವಿದರಿಗೆ ಪುಷ್ಪನಮನವನ್ನು ಸಲ್ಲಿಸಲಾಯಿತು.

ಯಕ್ಷಗಾನ ರಂಗ ಬಡವಾಗಿದೆ:
ಯಕ್ಷಗಾನ ಅರ್ಥಧಾರಿ ಹಾಗೂ ಕರ್ನಾಟಕ ಜಾನಪದ,ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಭಾಸ್ಕರ ರೈ ಕುಕ್ಕುವಳ್ಳಿ ಅವರು ಅಗಲಿದ ಕಲಾವಿದರಿಗೆ ನುಡಿ ನಮನವನ್ನು ಸಲ್ಲಿಸಿ ‘ಯಕ್ಷಗಾನ ರಂಗಕ್ಕೆ ಕಲಾವಿದರ ಕೊಡುಗೆ ಅಪಾರವಾದುದು. ಕಳೆದ ಸಾಲಿನಲ್ಲಿ ಅಗಲಿದ ಬಹು ಸಂಖ್ಯೆಯ ಕಲಾವಿದರನ್ನು ಯಕ್ಷಗಾನರಂಗವು ಕಳೆದುಕೊಂಡು ನಿಜವಾಗಿಯೂ ಬಡವಾಗಿದೆ. ಮಂಗಳೂರು ವಿವಿ ಯಕ್ಷಗಾನ ಅಧ್ಯಯನ ಕೇಂದ್ರವು ಎಡನೀರು ಸ್ವಾಮೀಜಿಯವರ ಸಂಸ್ಮರಣೆಯೊಂದಿಗೆ ಅಗಲಿದ 25ಕ್ಕೂ ಹೆಚ್ಚಿನ ಕಲಾವಿದರ ಸಂಸ್ಮರಣೆಯನ್ನು ಮಾಡಿರುವುದು ಉಲ್ಲೇಖನೀಯ ಕಾರ್ಯವಾಗಿದೆ ‘ ಎಂದರು.

ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೊ.ಪಿ.ಎಲ್.ಧರ್ಮ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ‘ಯಕ್ಷಗಾನಕ್ಕಾಗಿ ಸರ್ವಸ್ವವನ್ನೂ ಅರ್ಪಿಸಿ ಸೇವೆಗೈದ ಕಲಾವಿದರ ಅಧ್ಯಯನ ಹಾಗೂ ದಾಖಲೀಕರಣದ ಕಾರ್ಯ ಆಗಬೇಕಿದ್ದು ಈ ನಿಟ್ಟಿನಲ್ಲಿ ಮಂಗಳೂರು ವಿವಿ ಯಕ್ಷಗಾನ ಅಧ್ಯಯನ ಕೇಂದ್ರವು ಮುನ್ನಡೆಯಲಿದೆ’ ಎಂದರು. ಮಂಗಳೂರು ವಿವಿ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ.ಶ್ರೀಪತಿ ಕಲ್ಲೂರಾಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸತೀಶ್ ಕೊಣಾಜೆ ವಂದಿಸಿದರು.

ಅಗಲಿದ ಕಲಾವಿದರು:
ಯಕ್ಷನಮನ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಸಂಸ್ಮರಣೆಯೊಂದಿಗೆ, ಅಗಲಿದ ಕಲಾವಿದರಾದ ಹಿರಿಯಡ್ಕ ಗೋಪಾಲ್ ರಾವ್, ಮತ್ಯಾಡಿ ನರಸಿಂಹ ಶೆಟ್ಟಿ, ಪುತ್ತೂರು ಶ್ರೀಧರ ಭಂಡಾರಿ, ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ, ಸಂಪಾಜೆ ಶೀನಪ್ಪ ರೈ, ಮಲ್ಪೆ ವಾಸುದೇವ ಸಾಮಗ, ಶ್ರೀಪಾದ ಹೆಗಡೆ ಹಡಿನಬಾಳ, ಮಂಗಲ್ಪಾಡಿ ಮಹಾಬಲ ಶೆಟ್ಟಿ, ಕಡಬ ವಿನಯ ಆಚಾರ್ಯ, ಯಕ್ಷಗಾನ ಸಾಹಿತ್ಯ ಕ್ಷೇತ್ರದ ಸಾಧಕ ಡಾ. ಶಿಮಂತೂರು ನಾರಾಯಣ ಶೆಟ್ಟಿ, ಅನಂತರಾಮ ಬಂಗಾಡಿ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಹಾಗೂ ಹವ್ಯಾಸಿ ಕಲಾವಿದರಾದ ಇನ್ನ ಆನಂದ ಶೆಟ್ಟಿ, ಕುಕ್ಕಾಜೆ ಚಂದ್ರಶೇಖರ್ ರಾವ್, ನಿಸ್ರಾಣಿ ರಾಮಚಂದ್ರ, ಎಚ್.ಬಿ.ಎಲ್.ರಾವ್, ಕಜೆ ಈಶ್ವರ ಭಟ್, ರಾಮಹೆಗಡೆ ಕೆರೆಮನೆ, ಜೋಕಟ್ಟೆ ಮಹಮ್ಮದ್, ಪೂವಪ್ಪ ಶೆಟ್ಟಿ ತುಂಬೆ, ಪಿ.ಕೆ.ನಾಯ್ಕ್ ಶಿರೋಳ್ತಳಿಕೆ ಹಾಗೂ ಯಕ್ಷಗಾನಕ್ಕಾಗಿ ಸೇವೆ ಸಲ್ಲಿಸಿದ ದೇವಕಾನ ಕೃಷ್ಣ ಭಟ್, ಮ.ವಿಠಲ ಪುತ್ತೂರು, ಸರಸ್ವತಿ ಭಟ್ ಮೊದಲಾದ ಕಲಾವಿದರ ಸಂಸ್ಮರಣೆಯನ್ನು ನಡೆಸಲಾಯಿತು.

ಅನರ್ಘ್ಯ ರತ್ನ:
‘ಕಳೆದ ಎರಡು ವರ್ಷಗಳಲ್ಲಿ ಯಕ್ಷಗಾನರಂಗವು ವೃತ್ತಿ ಕಲಾವಿದರು, ಹವ್ಯಾಸಿ ಕಲಾವಿದರು ಸೇರಿದಂತೆ ಯಕ್ಷಗಾನಕ್ಕಾಗಿ ಸೇವೆ ಸಲ್ಲಿಸುತ್ತಿದ್ದ ಸುಮಾರು 25 ಕ್ಕೂ ಹೆಚ್ಚು ಅನರ್ಘ್ಯ ರತ್ನಗಳನ್ನು ಕಳೆದುಕೊಂಡಿರುವುದು ಅತ್ಯಂತ ಬೇಸರದ ಸಂಗತಿ’
ಡಾ.ಪ್ರಭಾಕರ ಜೋಶಿ, ಯಕ್ಷಗಾನ ವಿದ್ವಾಂಸರು

error: Content is protected !!
Share This