ಬಹುಭಾಷಾ ವಿದ್ವಾಂಸ, ಪ್ರಸಂಗಕರ್ತ, ಸಂಘಟಕ, ಅರ್ಥಧಾರಿ ಡಾ. ಡಿ. ಸದಾಶಿವ ಭಟ್ಟರು ಅಧ್ಯಾಪಕರಾಗಿ ನಿವೃತ್ತರು.

1933 ರಲ್ಲಿ ಪುತ್ತೂರು ಸಮೀಪದ ನಿಲ್ಲೆಯಲ್ಲಿ ಜನಿಸಿದ ಡಿ. ಸದಾಶಿವ ಭಟ್ಟರು ಡಿ. ನಾರಾಯಣ ಭಟ್ -ಗೋದಾವರಿ ಅಮ್ಮ ದಂಪತಿ ಸುಪುತ್ರರು. ಮದ್ರಾಸ್ ವಿಶ್ವವಿದ್ಯಾಲಯದಿಂದ ವಿದ್ವಾನ್ ಪದವಿ ಪಡೆದು ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯಲ್ಲಿ ವೃತ್ತಿ ಜೀವನ ಆರಂಭಿಸಿ 1992ರಲ್ಲಿ ನಿವೃತ್ತರಾದರು. ತಮ್ಮ ವೃತ್ತಿ ಬದುಕಿನಲ್ಲಿ ಅಧ್ಯಾಪನದೊಂದಿಗೆ ಅಧ್ಯಯನವನ್ನು ಮುಂದುವರೆಸಿದ ಇವರು ಅರ್ಹವಾಗಿಯೇ ಅನೇಕ ಶೈಕ್ಷಣಿಕ ಉಪಾಧಿಗಳಿಂದ ಶೋಭಿತರು. ಪಂಜೆಯವರ ಸಾಹಿತ್ಯ ಕೃತಿಗಳು ಒಂದು ಅಧ್ಯಯನ ಎಂಬ ವಿಷಯದ ಕುರಿತು ಮಹಾ ಪ್ರಬಂಧ ಬರೆದು ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಇದು ಅವರ ನಿರಂತರ ಕಲಿಕಾ ಸ್ಫೂರ್ತಿಗೆ ದ್ಯೋತಕ.

ವಿದ್ವಾನ್ ಪದವಿ ಪಡೆದು ವೃತ್ತಿ ಆರಂಭಿಸುವ ನಡುವಿನ ಹತ್ತು ವರ್ಷದ ಅವಧಿಯಲ್ಲಿ ಯಕ್ಷಗಾನ ಮತ್ತು ಇತರ ಕಲೆಗಳ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅಡೂರು ವೆಂಕಟರಾವ್ ಅವರಿಂದ ಯಕ್ಷಗಾನ ಸಂಬಂಧೀ ಹಲವು ವಿಷಯಗಳನ್ನು ಕಲಿತುಕೊಂಡರು. ವಿದ್ಯಾಗುರುಗಳಾದ ಪೆರಡಾಲ ಕೃಷ್ಣಯ್ಯನವರಿಂದ ಸಾಹಿತ್ಯ ಕಲೆಯ ಕುರಿತ ಹೆಚ್ಚಿನ ವಿಷಯ ತಿಳಿದುಕೊಂಡರು. 1960ರಲ್ಲಿ ಸಮಾನಾಸಕ್ತ ಸ್ನೇಹಿತರೊಂದಿಗೆ ಶ್ರೀ ಸತ್ಯನಾರಾಯಣ ಯಕ್ಷಗಾನ ಕಲಾಕೂಟ ಎಂಬ ಸಂಘಟನೆ ಸ್ಥಾಪಿಸಿ ಊರಿನ ಜನರಿಗೆ ಯಕ್ಷಗಾನ ವೇದಿಕೆ ಕಲ್ಪಿಸಿ ಎಳೆಯರಲ್ಲಿ ಈ ಕಲೆ ಬೆಳೆಸುವಲ್ಲಿ ಪ್ರೇರಕರಾದವರು. ಸಂಘದ ತಾಳಮದ್ದಲೆಗಳಲ್ಲದೇ ಆ ಕಾಲದ ಪ್ರಸಿದ್ದ ಅರ್ಥಧಾರಿಗಳೊಂದಿಗೆ ಭಾಗವಹಿಸಿ, ಕೂಟದ ಕಳೆ ಏರಿಸಿದವರು. ಅವರ ಸಂಘಟನೆಯ ತಾಳಮದ್ದಲೆಗಳು ಮಂಗಳೂರು ಆಕಾಶವಾಣಿಯಲ್ಲಿ ಬಿತ್ತರಗೊಂಡಿವೆ.

ಶಾಲೆಯಲ್ಲಿ ಮಕ್ಕಳಿಗಾಗಿ ಸ್ವತಃ ತಾವೇ ನಾಟಕ ಬರೆದು ಆಡಿಸಿದವರು. 1960ರ ದಶಕದಲ್ಲೇ ಹುಡುಗಿಯರಿಂದ ಯಕ್ಷಗಾನ ಮಾಡಿಸಿದ ಕೀರ್ತಿಗೆ ಭಾಜನರು. ಬಹುಭಾಷಾ ಪಂಡಿತರಾದ ಇವರು ಕನ್ನಡ, ತುಳು, ಸಂಸ್ಕೃತ, ಹಿಂದಿ, ಇಂಗ್ಲೀಷ್, ಹವ್ಯಕ ಕನ್ನಡ, ಕೊಂಕಣಿ, ಮರಾಠಿ, ಕರಾಡ ಹೀಗೆ ಒಂಬತ್ತು ಭಾಷೆಗಳಲ್ಲಿ ಅರ್ಥಸಹಿತ ಯಕ್ಷಗಾನ ಪ್ರಸಂಗ ಬರೆದಿದ್ದಾರೆ. ಪದ್ಯಗಳು ಹಿಂದಿಯಲ್ಲಿ ಅರ್ಥ ಇಂಗ್ಲಿಷ್‌ನಲ್ಲಿ ಹಾಗೊಂದು ಪ್ರಸಂಗ ಬರೆದವರು.

ಕಲಾಂತರಂಗ

error: Content is protected !!
Share This