- ಡಾ.ಎಂ.ಪ್ರಭಾಕರ ಜೋಶಿ, ಹಿರಿಯ ವಿದ್ವಾಂಸರು, ಸಂಶೋಧಕರು, ವಿಮರ್ಶಕರು
ಹಿರಿಯ ಪ್ರಸಿದ್ಧ, ಯಶಸ್ವಿ ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರ ನಿಧನ ಯಕ್ಷಗಾನ ರಂಗಕ್ಕೆ ಮತ್ತು ನನ್ನಂತಹ ಅನೇಕ ಆಪ್ತ ಕಲಾವಿದರಿಗೆ ವೈಯಕ್ತಿಕ ನಷ್ಟ ಕೂಡ. ಕಳೆದ ಅರ್ಧ ಶತಮಾನದ ಯಕ್ಷಗಾನದ ಇತಿಹಾಸದಲ್ಲಿ ಧಾರೇಶ್ವರರಿಗೆ ಪ್ರತ್ಯೇಕವಾದ, ವಿಶಿಷ್ಟವಾದ ಸ್ಥಾನ ಇದೆ. ವೈಯಕ್ತಿಕ ಸಾಧನೆಯಿಂದ ಐತಿಹಾಸಿಕ ಸನ್ನಿವೇಶವನ್ನು ಎದುರಿಸಿ ತನ್ನ ಸ್ಥಾನವನ್ನು ಸೃಷ್ಟಿಸಿಕೊಂಡದ್ದು ಮಾತ್ರವಲ್ಲ ಯಕ್ಷಗಾನಕ್ಕೆ ಹೊಸ ಮೆರುಗನ್ನು ಕೊಟ್ಟಿದ್ದಾರೆ ಎನ್ನುವುದು ನಿರ್ವಿವಾದ ವಿಷಯ.
ಸಿದ್ಧಿ-ಪ್ರಸಿದ್ಧಿ ಎರಡರಲ್ಲೂ ಧಾರೇಶ್ವರರು ಎತ್ತರದ ಕಲಾವಿದ. ಒಬ್ಬ ಯಕ್ಷಗಾನ ಕಲಾವಿದನ ಕಲೆ ಮತ್ತು ವೈಯಕ್ತಿಕ ಸಾಧನೆ, ಶ್ರಮ ಪರಿಶ್ರಮವನ್ನು ಮೆಚ್ಚಬೇಕಾದ ಅನುಕರಿಸಬೇಕಾದ ಅನೇಕ ಗುಣಗಳಿದ್ದವು.
ಹಿನ್ನೆಲೆ: ಧಾರೇಶ್ವರರು ಹುಟ್ಟಿದ್ದು ಉತ್ತರ ಕನ್ನಡದ ಗೋಕರ್ಣದಲ್ಲಿ ಯಕ್ಷಗಾನದ ಕಲಾಭಿರುಚಿಯ ದಟ್ಟವಾದ ವಾತಾವರಣದಲ್ಲಿ. ಅವರು ಕುಂದಾಪುರದ ಕೋಟದಿಂದ ಧಾರೇಶ್ವರಕ್ಕೆ, ಬಳಿಕ ಗೋಕರ್ಣಕ್ಕೆ ಹೋಗಿ ನೆಲೆಯಾದ ಕುಟುಂಬಕ್ಕೆ ಸೇರಿದವರು. ಅವರು ಹಿರಿಯ ಭಾಗವತರಾದ ಉಪ್ಪೂರು, ಕಡತೋಕ, ನೆಬ್ಬೂರು ಮತ್ತು ತನ್ನ ಸಮಕಾಲೀನರಾದ ನಾವಡರ ಭಾಗವತಿಕೆಯಿಂದ ಪ್ರಭಾವಿತರಾಗಿ ತಾನೂ ಭಾಗವತನಾಗಬೇಕೆಂದು ಹೊರಟವರು ಮುಂದೆ ನಾವಡರ ಕಿರಿಯ ಸಹಪಾಠಿಯೂ ಆದರು.
ಕೋಟ ಯಕ್ಷಗಾನ ಕೇಂದ್ರ ಅಂದರೆ ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಐರೋಡಿ ಸದಾನಂದ ಹೆಬ್ಬಾರ್, ಉಪ್ಪೂರು ನಾರಣಪ್ಪರು ಸ್ಥಾಪಿಸಿದ ಐತಿಹಾಸಿಕ ಕೇಂದ್ರದಲ್ಲಿ ವಿದ್ಯಾರ್ಥಿಯಾಗಿ ಸೇರಿದರು, ಭಾಗವತರಾದರು. ಮುಂದೆ ಸುಮಾರು ನಾಲ್ಕು ದಶಕಗಳಿಗೂ ಅಧಿಕ ಕಾಲ ವ್ಯವಸಾಯಿ ಮೇಳದಲ್ಲಿ, ಹವ್ಯಾಸಿಗಳೊಂದಿಗೆ ಮತ್ತೆ ತಾಳಮದ್ದಳೆಯಲ್ಲಿ ಅತ್ಯಂತ ಯಶಸ್ವಿ ಮತ್ತು ಸಹಕಾರಿ ಭಾಗವತರಾಗಿ ಮುಂದುವರಿದರು.
1970ರ ದಶಕದಲ್ಲಿ ನಾವೆಲ್ಲ ಕಂಡ ಹಾಗೆ ಯಕ್ಷಗಾನದ ಹಿರಿಯ ಭಾಗವತರ ಜತೆಜತೆಗೆ ಕಿರಿಯರ ಒಂದು ಹೊಸ ತಂಡವೇ ಭಾಗವತಿಕೆಯಲ್ಲಿ ಕಾಣಿಸಿಕೊಂಡಿತು. ಹಳೆಯ ಭಾಗವತರು ಪ್ರಸಿದ್ಧರಾಗಿದ್ದಿರುವಾಗ ಒಂದು ತರುಣರ ತಂಡವೇ ಬಂತು. ಅದರಲ್ಲಿ ಧಾರೇಶ್ವರರು, ಕುರಿಯ ಗಣಪತಿ ಶಾಸ್ತ್ರಿಗಳು, ದಿನೇಶ್ ಅಮ್ಮಣ್ಣಾಯ, ಕಾಳಿಂಗ ನಾವಡ, ಪದ್ಯಾಣ ಗಣಪತಿ ಭಟ್, ಪುರುಷೋತ್ತಮ ಪೂಂಜರು…ಹೀಗೆ ಹತ್ತಾರು ಪ್ರತಿಭಾವಂತರು ಏಕಕಾಲದಲ್ಲಿ ಕಾಣಿಸಿಕೊಂಡರು. ಅದರಲ್ಲಿ ಒಂದು ಪ್ರತ್ಯೇಕ ಪ್ರಭೆಯನ್ನು ಉಳಿಸಿ ನಕ್ಷತ್ರವಾಗಿ ಬೆಳೆಗಿದವರು ಧಾರೇಶ್ವರರು.
ಹಂಗಾರಕಟ್ಟೆ ಯಕ್ಷಗಾನ ಕೇಂದ್ರಕ್ಕೆ ಅವರು ಕಾಳಿಂಗ ನಾವಡರ ಕಿರಿಯ ಸಹಪಾಠಿಯಾಗಿ ಸ್ನೇಹಿತರಾಗಿ ಬಂದವರು. ಮುಂದೆ ಅವರೊಳಗೊಂದು ಸಹಜ, ಹಿತಕರ ವೃತ್ತಿ ಸ್ಪರ್ಧೆ ಕೂಡ ಇತ್ತು. ಸ್ನೇಹವೂ ಇತ್ತು. ಯಕ್ಷಗಾನದ ಮಹಾನ್ ಗುರು ಉಪ್ಪೂರರು ಅವರಿಗೆ ಕಲಿಸಿದವರು ಅದರೊಟ್ಟಿಗೆ ನೆಬ್ಬೂರು ಕಡತೋಕ ಭಾಗವತರ ಪ್ರಭಾವವೂ ಅವರ ಮೇಲೆ ಇತ್ತು. ಅವರು ಬೇಗ ಒಳ್ಳೆಯ ಭಾಗವತರಾದರು. ಅವರು ಕೇಂದ್ರದಲ್ಲಿ ಕಲಿಯುವ ಕಾಲಕ್ಕೆ ನಾನು ಅವರ ತರಗತಿಗಳನ್ನು ವೀಕ್ಷಿಸಿದ್ದೇನೆ. ಅವರು ಕಲಿಯಬೇಕೆನ್ನುವ ಉತ್ಸಾಹ, ಅಭ್ಯಾಸ ಕೊನೆವರೆಗೂ ಅವರ ಅಧ್ಯಯನಶೀಲತೆ ಮೆಚ್ಚುವಂಥದ್ದು.
ಅಮೃತೇಶ್ವರಿ ಮೇಳದಲ್ಲಿ ಸಂಗೀತಗಾರರಾಗಿ, ಸಹ ಭಾಗವತರಾಗಿ, ಮುಂದೆ ಹಿರೆಮಹಾಲಿಂಗೇಶ್ವರ ಮೇಳ, ಪಂಚಲಿಂಗೇಶ್ವರ ಮೇಳದಲ್ಲಿ ಸ್ವಲ್ಪ ಕಾಲ ಇದ್ದರು. ಪೆರ್ಡೂರು ಮೇಳದಲ್ಲಿ 30 ವರ್ಷ ಮುಖ್ಯ ಭಾಗವತರಾಗಿದ್ದರು. ಪೆರ್ಡೂರು ಮೇಳ ಐತಿಹಾಸಿಕವಾದದ್ದು ಕರುಣಾಕರ ಶೆಟ್ಟರ ನೇತೃತ್ವದಲ್ಲಿ ಅವರ ಮೇಳದಲ್ಲಿ ಪ್ರಧಾನ ಶಕ್ತಿಯಾದರು. ತನ್ನ ಒಬ್ಬನ ಬಲದಲ್ಲಿಯೇ ಪ್ರೇಕ್ಷಕ ವರ್ಗವನ್ನು ನಿರ್ಮಾಣ ಮಾಡುವ ಯೋಗ್ಯತೆ ಇತ್ತು. ಪ್ರಬಲ ಮೇಳವಾದ ಸಾಲಿಗ್ರಾಮ ಮೇಳಕ್ಕೆ ಸಹಜವಾಗಿ ಒಂದು ಸ್ಪರ್ಧಿ ಮೇಳವಾಗಿ ಬೆಳೆಯಬೇಕಾಯಿತು.
ಇಡೀ ಯಕ್ಷಗಾನ ಪ್ರಭಾವಿಸಿದ್ದ ಬಿರುಗಾಳಿ ಮಿಂಚಿನ ಪ್ರಭಾವ ಕಾಳಿಂಗ ನಾವಡರು. ಕಾಳಿಂಗ ನಾವಡರ ಭಾಗವತಿಕೆ ಎಂಬ ವಾತಾವರಣ ನಿರ್ಮಾಣವಾದ ಕಾಲದಲ್ಲಿ ಅದನ್ನು ಸಮರ್ಥವಾಗಿ ನಿಭಾಯಿಸಿ ತನ್ನದೇ ಶೈಲಿಯನ್ನು ಸೃಷ್ಟಿಸಿಕೊಂಡು ಕಾಳಿಂಗ ನಾವಡರ ಪ್ರಭಾವಕ್ಕೆ ಒಳಗಾಗದೇ ಬೇರೆಯೇ ದಾರಿಯನ್ನು ಕಟ್ಟಿಕೊಳ್ಳುವುದು ಸುಲಭವಲ್ಲ. ನಾವಡರ ಹಾಗೆ ಪದ್ಯ ಹೇಳಲು ಹೋಗಲಿಲ್ಲ. ಪೆರ್ಡೂರು ಮೇಳದಲ್ಲಿ ಅವರ ತಂಡದ ನಾಯಕನಾಗಿ ಮೇಳದ ನಿಷ್ಠನಾಗಿ, ನಿತ್ಯ ಪರಿಶ್ರಮಿಯಾಗಿ ಮಾಡಿದ ಸೇವೆ ಅವಿಸ್ಮರಣೀಯವಾದದ್ದು. ತಂಡವನ್ನು ಬಳಸಿಕೊಂಡ ರೀತಿ, ಒಳ್ಳೆಯ ಕಲಾವಿದರ ತಂಡವೂ ಇತ್ತು. ತಂಡವನ್ನು ಬೆಳೆಸಿಕೊಂಡು ಹಳೆ ಮತ್ತು ಹೊಸ ಪ್ರಸಂಗಗಳನ್ನು ಪಾರಂಪರಿಕ ಪ್ರಸಂಗಗಳಲ್ಲಿ ಅಲ್ಲದೆ ಶೂದ್ರ ತಪಸ್ವಿನಿಯಂತಹ ಪ್ರಸಂಗಗಳು ಮುಖ್ಯವಾಗಿ ಕಂದಾವರ ರಾಘು ಮಾಸ್ಟ್ರ ಅನೇಕ ಪ್ರಸಂಗಗಳಿಗೆ ರಂಗ ರೂಪವನ್ನು ಕೊಟ್ಟವರು ಧಾರೇಶ್ವರರು.
ಪ್ರತಿಯೊಂದು ಪ್ರಸಂಗಗಳಲ್ಲಿ ಆಮೂಲಾಗ್ರವಾಗಿ ಅಧ್ಯಯನ ಮಾಡಿಕೊಂಡು ಸ್ವಾರಸ್ಯವನ್ನು ಕಂಡು ಕೊಂಡು ರೂಪಿಸುವ ಗುಣ ಮತ್ತು ಸ್ವಯಂ ಸ್ವಭಾವ ಕಲಾವಿದ ಅಭ್ಯಾಸಿಗ ಒಬ್ಬ ಕಲಾವಿದನ ತುಡಿತ ಭಾಗವತರಲ್ಲಿತ್ತು. ಪೆರ್ಡೂರು ಮೇಳಕ್ಕೆ ವ್ಯವಸಾಯಿಕವಾಗಿ ಮತ್ತು ಕಲಾತ್ಮಕವಾಗಿ ಮೆರುಗನ್ನು ಕೊಟ್ಟವರು ಧಾರೇಶ್ವರರು ಎಂದು ಧಾರಾಳವಾಗಿ ಯಾವುದೇ ಆಕ್ಷೇಪವಿಲ್ಲದೆ ಹೇಳಬಹುದು.
ಉಪ್ಪೂರರ ಶೈಲಿ, ಸ್ವಂತದ ಸೃಜನಶೀಲತೆ ಎರಡನ್ನೂ ಇಟ್ಟುಕೊಂಡು ಬೆಳೆದ ಧಾರೇಶ್ವರರು ಪ್ರಯೋಗಶೀಲ ಭಾಗವತರೆಂದೇ ಪ್ರಸಿದ್ಧರಾದರು. ಅವರು ಪಾರಂಪರಿಕ ಭಾಗವತಿಕೆಯನ್ನು ಬಿಟ್ಟುಬಿಟ್ಟರು. ಭಾವಗೀತೆ ಭಾಗವತಿಕೆಯಲ್ಲಿ ವ್ಯವಸಾಯಿಕವಾದ ನೆಲೆಯಲ್ಲಿ ಬೇರೆ ಬೇರೆ ಚರ್ಚೆಗಳನ್ನು ಅವರು ಹುಟ್ಟುಹಾಕಿದರು. ಅದು ಇದ್ದದ್ದೇ. ಮುಂದೆ ಅವರು ಪ್ರಯೋಗಶೀಲ ಭಾಗವತರೆಂದೇ ಪ್ರಸಿದ್ಧರಾದರು. ಪಾರಂಪರಿಕ ಮತ್ತು ಪ್ರಾಯೋಗಿಕ ಭಾಗವತಿಕೆಯಲ್ಲಿ ಅಸಾಧಾರಣ ಯೋಗ್ಯತೆಯನ್ನು ಹೊಂದಿದ್ದರು. ಪಾರಂಪರಿಕ ಭಾಗವತಿಕೆಯನ್ನು ಹಾಡುವ ಮತ್ತು ಆಡಿಸುವ ರೀತಿ ಅವರಿಗೆ ಚೆನ್ನಾಗಿ ಗೊತ್ತಿತ್ತು. ಇಡೀ ರಾತ್ರಿ ರಂಗದಲ್ಲಿ ಅವರೇ ಜೀವಂತ ಭಾಗವಾಗಿ ಜೀವಂತಿಕೆ ಇತ್ತು. ನಿರಾಯಾಸವಾಗಿ, ಒತ್ತಡವಿಲ್ಲದೇ ಹಾಡುತ್ತಿದ್ದರು.
ತಾಳಮದ್ದಳೆಯಲ್ಲಿ ಬಹುಕಾಲದ ನನ್ನ ಒಡನಾಡಿ ಅವರು. ತಾಳಮದ್ದಳೆ ಭಾಗವತಿಕೆಯನ್ನು ಪ್ರೀತಿಯಿಂದ ಸ್ವೀಕರಿಸುತ್ತಿದ್ದರು. ತಾಳಮದ್ದಳೆಯಲ್ಲಿ ಅರ್ಥದಲ್ಲಿ ಮುಳುಗಿ ಏಳುತ್ತಿದ್ದರು. ಶೃಂಗೇರಿ ಪ್ರದೇಶದಲ್ಲಿ ಆದ ಮೂರ್ನಾಲ್ಕು ತಾಳಮದ್ದಳೆಯಲ್ಲಿ ಒಟ್ಟಿಗೆ ಇರುವ ಪಾರಂಪರಿಕ ರೀತಿಯಲ್ಲೇ ಸಂಘಟಕರ ಅಪೇಕ್ಷೆಗೆ ಹಾಡಿ ಆ ಸ್ಫೂರ್ತಿಯಿಂದಲೇ ತಾಳಮದ್ದಳೆಯಲ್ಲಿ ಜ್ಞಾನ ಯಜ್ಞ ಸಪ್ತಾಹಗಳನ್ನು ಮಾಡಿದರು. ಬೆಂಬಲ ಗಳಿಸಿದರು.
ತಾಳಮದ್ದಳೆಯಲ್ಲಿ ಪ್ರತ್ಯೇಕ ತಂತ್ರಗಳಿವೆ. ಅದನ್ನು ಚೆನ್ನಾಗಿ ಮಾಡಿದ್ದರು. ಅವರ ಆತಿಥ್ಯ, ಮನೆ ವಿಶ್ರಾಂತಿ ಸ್ಥಳವಲ್ಲ ಒಂದು ಕಲೆಯ ವರ್ಕ್‌ಶಾಪ್ ಆಗುತ್ತಿತ್ತು. ಅವರೊಂದಿಗಿರುವಾಗ ಖುಷಿ ಪಡುತ್ತಿದ್ದರು. ಅವರ ಸಾಂಪ್ರದಾಯಿಕ ಹಾಡುಗಾರಿಕೆಯ ಹತ್ತಾರು ಪ್ರಸಂಗಗಳ ಧ್ವನಿಮುದ್ರಣದ ಯೋಜನೆಯನ್ನು ನಾನು ಹಾಕಿದ್ದೆ. ಅದು ಮಾಡಲಾಗಲಿಲ್ಲ. ಅದು ಬೇರೆ ಬೇರೆ ಕಾರಣದಿಂದ. ಅವರ ಹಾಡುಗಾರಿಕೆ ಸಾಕಷ್ಟು ಲಭ್ಯವಾಗಿದೆ.
ಸ್ವತಃ ಎಲೆಕ್ಟ್ರಿಷಿಯನ್ ಕೂಡ ಆಗಿದ್ದರಿಂದ ಮೈಕ್‌ನ್ನು ಬಳಸುವ ತಂತ್ರದಲ್ಲಿ ಅವರು ಮಾದರಿ ಹಾಗೂ ಆದರ್ಶವಾಗಿದ್ದರು. ತುಂಬಾ ಕ್ರಿಯಾಶೀಲವಾದ ವ್ಯಕ್ತಿತ್ವದಿಂದ ಬೆಳೆದವರು. ಎಲ್ಲ ಕಲಾವಿದರೊಂದಿಗೆ ಸ್ನೇಹ, ಹೊಂದಾಣಿಕೆ, ವ್ಯವಸಾಯಿಕವಾದ ಕ್ಷೇತ್ರದಲ್ಲಿ ನೋವುಗಳು ಬಂದಾಗ ತುಂಬಾ ನೊಂದಿದ್ದರು. ಆದರೂ ಅವರು ಬಹಿರಂಗವಾಗಿ ಎಲ್ಲೂ ಅದನ್ನು ಪುನಃ ಅದೇ ಮೇಳಕ್ಕೆ ಹೋಗಬೇಕಾಗಿ ಬಂದಾಗ ಕೂಡ ತೋರಿಸಿಕೊಂಡವರಲ್ಲ. ದೊಡ್ಡ ಗುಣ ಅವರದ್ದು. ಎರಡು ವರ್ಷ ಹಿಂದೆ ಅವರೊಂದಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ.
ಯಕ್ಷಗಾನದ ಒಂದು ಜೇನುಕೊರಳಿನ ಧಾರೆ ಕಡಿಯಿತು. ಅಪ್ಯಾಯಮಾನವಾಗಿ ಕೇಳುತ್ತಿದ್ದ ಕಂಠ ನಿಂತು ಹೋಯಿತು. ಆ ತಿಳಿವಳಿಕೆ, ಹಾಡುವಿಕೆ, ವ್ಯಕ್ತಿತ್ವ ಮೂರು ಕೂಡ ನಿಂತು ಹೋಯಿತಲ್ಲ. ಸುಲಭದಲ್ಲಿ ಲಭ್ಯವಲ್ಲ. ಧಾರೇಶ್ವರು ನಮ್ಮ ಮನಸ್ಸಿನಲ್ಲಿ, ಕಲಾರಸಿಕರಲ್ಲಿ ಧ್ವನಿಮುದ್ರಣಗಳ ಮೂಲಕ ಒಂದು ಸ್ಮೃತಿಯಾಗಿ ಶಾಶ್ವತರಾಗಲಿದ್ದಾರೆ. ಸ್ಫೂರ್ತಿಯಿಂದ ಯಕ್ಷಗಾನ ರಂಗ ಮುಂದುವರಿಯಲಿ ಎಂದು ಮಾತ್ರ ಪ್ರಾರ್ಥಿಸುವ ಸನ್ನಿವೇಶಗಳು ಉಳಿದುಬಿಟ್ಟಿವೆ. ಇಂತಹ ನೆನಪಿನ ಲೇಖನಗಳನ್ನು ಅವರ ಬಗ್ಗೆ ನಾನು ಬರೆಯುವುದಲ್ಲ, ನನ್ನ ಬಗ್ಗೆ ಅವರು ಬರೆಯಬೇಕಾಗಿತ್ತು.