ಈ ವರ್ಷ ಸಾಂಸ್ಕೃತಿಕ ಕ್ಷೇತ್ರಕ್ಕೆ ಮೇ 30ರ  ಮೇಲೆ ಹಲವಾರು ಆಘಾತಗಳು. ಮೊನ್ನೆ ಅಗಲಿ ಹೋದ ಅಗ್ರಗಣ್ಯ ರಂಗ ನಿರ್ದೇಶಕರಾದ ಪ್ರೊ. ಉದ್ಯಾವರ ಮಾಧವಾಜಾರ್ಯ – ಕವಿ, ಕತೆಗಾರ, ರಂಗಕರ್ಮಿ, ನೇತಾರ, ಕಾರ್ಯಕರ್ತ, ಶಿಕ್ಷಕರಾಗಿ ನಾಡಿಗೆ ಸಲ್ಲಿಸಿದ ಸೇವೆ ಅಸಾಧಾರಣ. ಯೋಗ್ಯತೆಯ ಮಟ್ಟದ ಮನ್ನಣೆ ಸಿಗದ ಸಾಧಕ ಅವರು. ಉದ್ಯಾವರ, ಉಡುಪಿ , ಕಲ್ಯಾಣಪುರ, ಉಪ್ಪೂರುಗಳ ಸಮೃದ್ಧ ಸಾಂಸ್ಕೃತಿಕ ವಾತಾವರಣ, ಎಂಜಿಎಂ ಕಾಲೇಜು, ಪ್ರೊ. ಕು.ಶಿ. ಪ್ರಭಾವ, ಬೆಂಗಳೂರಿನಲ್ಲಿ ಎಂಎ (ಅರ್ಥಶಾಸ್ತ್ರ) ತಂದೆ ಸಂಸ್ಕೃತ ಕವಿ ಲಕ್ಷ್ಮೀನಾರಾಯಣ ಆಜಾರ್ಯರು – ಹೀಗೆ ಹಲವು ಪ್ರಭಾವಲಯದ ಹಿನ್ನಲೆ ಅವರದು. ಬಿ.ವಿ. ಕಾರಂತರ ಶಿಬಿರಗಳಿಂದ ಹೊಸ ಚಿಂತನೆಯ ಮುಪ್ಪು.

ಅವರ ಬಾಗಿದ ಮರ, ಭಾಗದೊಡ್ಡಮ್ಮನ ಕಥೆ, ಹಾಡಿ. ಉತ್ಕೃಷ್ಟ ಮಟ್ಟದ ಕಥಾಸಂಕಲನಗಳು. ಬಹುಶಃ ಅವರ ‘ಸೀಳು ಬಿದಿರಿನ ಸಿಳ್ಳು’ ಅತ್ಯುತ್ತಮ ಕಥೆ.

ನೃತ್ಯ ನಾಟಕ ಕ್ಷೇತ್ರದಲ್ಲಿ ಆಚಾರ್ಯರ ಸಾಧನೆ – ಐತಿಹಾಸಿಕವಾದುದು. ಸಮಗ್ರ ಪರಿಕಲ್ಪನೆಯ ರಂಗಕೃತಿಯ ನಿರ್ಮಾಣ. ವಸ್ತು ವ್ಯಾಖ್ಯಾನ ನಿರ್ವಹಣೆಗಳಲ್ಲಿ ಅವರದು ದೊಡ್ಡಸಿದ್ಧಿ. ಅವರು ಪತ್ನಿ ಜಯಂತಿ ಆಚಾರ್ಯರ ಜತೆ ಸ್ಥಾಪಿಸಿ ನಡೆಸಿದ ‘ಸಮೂಹ’ – ಒಂದು ದೊಡ್ಡ ಸಾಹಸ. ಕರಾವಳಿಯಲ್ಲಿ ಸಮಗ್ರ ನೃತ್ಯ ನಾಟಕದ ರೂವಾರಿಗಳಲ್ಲಿ ಶ್ರೇಷ್ಠರಾಗಿ ಮಾಧವಾಜಾರ್ಯರದು ಶಾಶ್ವತ ಸಾಧನೆ.

ಯಕ್ಷಗಾನವನ್ನು ಆಧರಿಸಿ ಅವರು ಮಾಡಿದ ಪ್ರಯೋಗಗಳು – ನಳದಮಯಂತಿ, ನವನೀತ ರಾಮಾಯಣ, ಶಬರಿ, ದಾಕ್ಷಾಯಣಿ, ಭೀಷ್ಮ, ಪಾಂಚಾಲಿ (ಏಕವ್ಯಕ್ತಿ ನೃತ್ಯರೂಪಕ), ಏಕವ್ಯಕ್ತಿ ತಾಳಮದ್ದಳೆಗಳು, ಆಶುಸಂಭಾಷಣೆಯ ‘ತರ್ಕಪದ್ಧತಿ’! ಇವೆಲ್ಲ ಆಚಾರ್ಯರ ಅಸಾಮಾನ್ಯ ಕಲ್ಪನಾ ವಿಲಾಸದ ಸಾಫಲ್ಯಗಳು. ಉಡುಪಿಯ ಗೀತಾಮಂದಿರ ಉದ್ಭಾಟನೆಯಂದು ಮಂದಿರವನ್ನು ಇಡಿಯಾಗಿ ಬಳಸಿ ರೂಪಿಸಿದ ಗೀತಾ ಪ್ರತಿಭಾದ ರೂಪಕ ಅವಿಸ್ಮರಣೀಯ. ಅವರ ರಂಗವಿಮರ್ಶಾ ಸಂಕಲನಗಳು, ಬಹುವಿಜಾರ ಪರಿಪ್ಲುತ. ‘ರಾಧೆ ಎಂಬ ಗಾಥೆ’ – ಕನ್ನಡದಲ್ಲೇ ವಿಶಿಷ್ಟವಾದ ಮಹಾಕಾವ್ಯ. ಅರ್ಥಶಾಸ್ತ್ರ ಅಧ್ಯಾಪನದಲ್ಲೂ ಉ.ಮಾ. ಕುರಿತು  ವಿದ್ಯಾರ್ಥಿಗಳ ತುಂಬು ಪ್ರಶಂಸೆ. ಆತ್ಮೀಯತೆ, ಸ್ನೇಹ, ತುಡಿತ, ಚಟುವಟಿಕೆಗಳ ಮೂರ್ತಿ, ರಂಗಭೂಮಿ, ಸ್ನೇಹಿತರು ಎಂದರೆ ಆವೇಶದಿಂದ ಮಿಡಿಯುವ ಉದ್ಯಾವರರ ನಿಧನ – ಏನೋ ಒಂದು ದೊಡ್ಡ ಸಂಪತ್ತು ಕಳಕೊಂಡಂತೆ.

-ಡಾ.ಎಂ.ಪ್ರಭಾಕರ ಜೋಶಿ, ಮಂಗಳೂರು

error: Content is protected !!
Share This