ತೋಟದೂರು ನಂಜುಂಡರಾವ್(1904-1986)

ಶ್ರೀ ತೋಟದೂರು ನಂಜುಂಡರಾವ್ ಅವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಹೊಬಳಿಯ ತೋಟದೂರು ಎಂಬಲ್ಲಿ ವೆಂಕಟಾಚಲಯ್ಯ ಮತ್ತು ವೆಂಕಟಸುಬ್ಬಮ್ಮ ದಂಪತಿಗಳ ಮಗನಾಗಿ ಜನಿಸಿದರು. ಅವರಿಗೆ ಲಕ್ಷ್ಮೀನಾರಾಯಣ, ಲಕ್ಷ್ಮಮ್ಮ, ಸುಬ್ರಾಯ ಸಹೋದರ, ಸಹೋದರಿಯರು. ಕೆಳ ಮಧ್ಯಮ ವರ್ಗದಲ್ಲಿ ಜನಿಸಿದ ನಂಜುಂಡರಾವ್ ಅವರಿಗೆ ಅಂದಿನ ಬಡತನದ ಜೊತೆಯಲ್ಲಿ ಜೀವಿಸುವ ಅನಿವಾರ್ಯತೆ. ಆ ಸ್ಥಿತಿಯಲ್ಲಿಯೂ ಕೂಡ ಸೋದರ ಮಾವನ ಮನೆಯಾದ ಗೋಣಿಬೀಡಿನಲ್ಲಿ ನಾಲ್ಕನೇ ತರಗತಿಯವರೆಗೆ ವಿದ್ಯಾಭ್ಯಾಸವನ್ನು ಮಾಡಿದರು. ಬಾಳೆಹೊನ್ನೂರಿನಲ್ಲಿ ಪಠೇಲಗಾರಿಕೆಯನ್ನು ಮಾಡಿಕೊಂಡಿದ್ದ ತಂದೆ ವೆಂಕಟಾಚಲಯ್ಯನವರು, ನಂಜುಂಡರಾವ್ ಮೂರು ವರುಷವಿರುವಾಗ ತಮ್ಮ ಮೂಲ ಊರಾದ ತೋಟದೂರಿಗೆ ಮರಳಿ ಬಂದು ನೆಲಸಿದರು.

ತೋಟದೂರಿನ ಪಕ್ಕದಲ್ಲಿ ಕಲ್ಲಾರೆ ಎಂಬ ಊರಿದೆ. ಅಲ್ಲಿ ಕಲ್ಲಾರೆ ವೆಂಕಟಾಚಲಯ್ಯ ಎಂಬುವವರು ಸ್ಥಳೀಯ ಯಕ್ಷಗಾನ ಕಲಾವಿದರಾಗಿದ್ದರು. ಅವರು ತಮ್ಮ ಮಕ್ಕಳಾದ ವೆಂಕಟಸುಬ್ಬಯ್ಯ ಮತ್ತು ಕೃಷ್ಣಯ್ಯ ಎಂಬರಿಗೆ ತಾವೇ ಯಕ್ಷಗಾನವನ್ನು ಕಲಿಸಿ, ಅವರಿಂದ ಪ್ರದರ್ಶನವನ್ನು ಮಾಡಿಸುತ್ತಿದ್ದರು. ಆ ಮಕ್ಕಳು ನಂಜುಂಡರಾವ್ ಅವರಿಗೆ ಬಾಲ್ಯ ಸ್ನೇಹಿತರಾಗಿದ್ದರು. ತಮ್ಮ ಕಲಿಕೆಯ ವಿಚಾರವನ್ನು ನಂಜುಂಡಯ್ಯನವರಲ್ಲಿ ಹಂಚಿಕೊಳ್ಳುತ್ತಿದ್ದರು. ಯಕ್ಷಗಾನವನ್ನು ತಿಳಿಯದ ನಂಜುಂಡಯ್ಯನವರಿಗೆ ಈ ಬಗ್ಗೆ ಆಸಕ್ತಿ ಒಡಮೂಡಿತು. ನಂಜುಂಡಯ್ಯನವರ ಆಸಕ್ತಿಯನ್ನು ಗಮನಿಸಿದ ಮಕ್ಕಳು ಅವರನ್ನು ತಮ್ಮ ಜೊತೆಯಲ್ಲಿ ಯಕ್ಷಗಾನ ಕಲಿಕೆಗಾಗಿ ಕೂರಿಸಿಕೊಂಡರು. ವೆಂಕಟಚಾಲಯ್ಯನವರು ಸಹ ಕಲಿಕೆಯಲ್ಲಿ ಭೇದಭಾವವನ್ನು ಮಾಡದೇ ಸಮಾನವಾಗಿ ಮಕ್ಕಳಿಗೆ ಯಕ್ಷಶಿಕ್ಷಣವನ್ನು ಬೋಧಿಸಿದರು. ಅಷ್ಟೇ ಆಸ್ಥೆಯಿಂದ ಕಲಿತ ನಂಜುಂಡಯ್ಯನವರು ಬಹುಬೇಗ ಅದನ್ನು ಸಿದ್ಧಿಸಿಕೊಂಡರು.

ಆರ್ಥಿಕವಾಗಿ ಸದೃಢರಾಗಿದ್ದ ಕಲ್ಲಾರೆ ವೆಂಕಟಾಚಲಯ್ಯನವರಿಗೆ ತಾವೊಂದು ಮೇಳವನ್ನು ಕಟ್ಟಬೇಕೆಂಬುದು ಬಹುಕಾಲದ ಹೊಂಗನಸಾಗಿತ್ತು. ಅದಕ್ಕಾಗಿ ಸಮಾನಮನಸ್ಕ ಆಸಕ್ತರನ್ನು ಒಗ್ಗೂಡಿಸಿಕೊಂಡು 1925-1930ರ ಹೊತ್ತಿನಲ್ಲಿ ಕಲ್ಲಾರೆ ಮೇಳವನ್ನು ಸ್ಥಾಪಿಸಿದರು. ಅದೊಂದು ತಿರುಗಾಟದ ಮೇಳವಲ್ಲದಿದ್ದರೂ ಊರಿನ ಮೇಳವಾಗಿ ಸ್ಥಳೀಯ ಯಕ್ಷಗಾನ ಸದೃಢವಾಗಿದ್ದಕ್ಕೆ ಕಾರಣವಾಗಿತ್ತು. ಊರಿನ ವ್ಯಾಪ್ತಿಯಲ್ಲಿ ವರುಷದಲ್ಲಿ ಹತ್ತಿಪ್ಪತ್ತು ಆಟಗಳನ್ನು ಸಂಘಟಿಸುತ್ತ ಕಲಾವಿದರ ಯಕ್ಷಗಾನ ಪ್ರತಿಭೆಯನ್ನು ಸಮೀಚೀನವಾಗಿ ಅನಾವರಣಗೊಳಿಸುತ್ತಿತ್ತು. ಅದರಲ್ಲಿ ಬಿದಕಿನಮನೆ ವೆಂಕಟ್ರಾಮಯ್ಯ, ಶಾಂತಿಕುಡಿಗೆ ವೆಂಕಟ್ರಾಮಯ್ಯ, ಹೆಬ್ಬಾರ್, ಕೆಂಪಿನಮಕ್ಕಿ ಅಪ್ಪಣ್ಣಯ್ಯ, ಕೇದಿಗೆಮನೆ ಚೆನ್ನಯ್ಯ ಮುಂತಾದವರು ಕಲಾವಿದರಾಗಿ ಕಾಣಿಸಿಕೊಂಡರು. ಇವರ ಜೊತೆಯಲ್ಲಿ ಇಪ್ಪತ್ತು ವರುಷದ ತರುಣ ನಂಜುಂಡಯ್ಯನವರು ಕೂಡ ಹೆಜ್ಜೆ ಹಾಕಿ ವೇಷವನ್ನು ಮಾಡಿದರು. ಒಂದಷ್ಟು ವರುಷಗಳ ಕಾಲ ಮೇಳವು ಸುಸೂತ್ರವಾಗಿ ನಡೆಯಿತು. ಆದರೆ ತಾನೊಂದು ಎಣಿಸಿದರೆ ವಿಧಿ ಮತ್ತೊಂದು ಬಗೆಯುತ್ತದೆ ಎಂಬಂತೆ ವೆಂಕಟಚಾಲಯ್ಯ ಅವರ ಬದುಕಿನ ಬಿರುಗಾಳಿ ಎದ್ದಿತು. ಅವರ ಮಕ್ಕಳಿಬ್ಬರು ಅಕಾಲಿಕವಾಗಿ ಮರಣವನ್ನು ಹೊಂದಿದರು. ಎಷ್ಟಾದರೂ ಪುತ್ರ ಶೋಕಂ ನಿರಂತರಂ ಎನ್ನುವುದು ಯಾವ ಕಾಲಕ್ಕೂ ಒಪ್ಪುವ ಮಾತು. ಬೆಳೆದು ನಿಂತಿದ್ದ ಮಕ್ಕಳ ಅಗಲುವಿಕೆಯ ನೋವು, ಶೋಕವು ನಿತ್ಯವೂ ಬಾಧಿಸಿದ ವೆಂಕಟಾಚಲಯ್ಯನವರಿಗೆ, ಬದುಕಿನ ಚೇತನವಾಗಿದ್ದ ಯಕ್ಷಗಾನದ ಆಸಕ್ತಿಯನ್ನು ಕಳೆಯುವಂತೆ ಮಾಡಿತು. ಆ ಸ್ಥಿತಿಯಲ್ಲಿಯೂ ದೂರದೃಷ್ಟಿಯುಳ್ಳವರಾಗಿದ್ದ ವೆಂಕಟಾಚಲಯ್ಯನವರು, ತಮ್ಮ ಮೇಳದ ವೇಷಭೂಷಣವನ್ನು ಊರಿನ ಆರಾಧ್ಯ ದೈವವಾದ ಚೆನ್ನಕೇಶವ ಸ್ವಾಮಿ ಸನ್ನಿಧಿಗೆ ಒಪ್ಪಿಸಿ ಹಿನ್ನೆಲೆಗೆ ಜಾರಿದರು.

ಹಣ್ಣೆಲೆ ಬಿದ್ದಾಗ ಆ ಜಾಗದಲ್ಲಿ ಹೊಸ ಎಲೆಗಳು ಚಿಗುರೊಡೆಯುವುದು ಪ್ರಕೃತಿಯ ನಿಯಮ. ಕಲ್ಲಾರೆ ಮೇಳ ಮರೆಯಾದ ಮೇಲೆ ಆ ಜಾಗದಲ್ಲಿ ಮತ್ತೊಂದು ಮೇಳ ರೂಪುಗೊಳ್ಳುವುದಕ್ಕೆ ಸಮಯ ಬೇಕಾಯಿತಷ್ಟೇ. ವೆಂಕಟಾಚಲಯ್ಯನವರ ಯಕ್ಷ ಸಂಸರ್ಗದಲ್ಲಿ ಕಾಣಿಸಿಕೊಂಡಿದ್ದ ತಾರೆಗಳು ಹೊಸ ಮೇಳದ ನೇತೃತ್ವವನ್ನು ವಹಿಸಿಕೊಂಡರು. ಬಿದಿಕಿನಮನೆ ವೆಂಕಟ್ರಾಮಯ್ಯ, ರಾಯರಮನೆ ನಂಜುಂಡಯ್ಯ, ಕೇದಿಗೆಮನೆ ಚೆನ್ನಯ್ಯ ಇವರ ಮುಂದಾಳುತನದಲ್ಲಿ ಬಾಳೆಹೊಳೆ ಶ್ರೀ ಚೆನ್ನಕೇಶವ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯನ್ನು 1940ರ ಹೊತ್ತಿಗೆ ಸ್ಥಾಪಿಸಿದರು.

ಮಲೆನಾಡಿನ ಗುಡ್ಡಬೆಟ್ಟಗಳ ನಡುವೆ, ಕಡಿಮೆ ಜನಸಂಖ್ಯೆಯ ಪ್ರದೇಶದಲ್ಲಿ ಯಕ್ಷಗಾನ ಸಂಘಟಿಸುವುದು ಕಷ್ಟಕರ ಸಂಗತಿ. ಇದು ಭೌಗೋಳಿಕ ಮಿತಿಯಾದರೆ ಆರ್ಥಿಕ ದೃಷ್ಟಿಯಲ್ಲಿಯೂ ಕೂಡ ಅಂತಹ ಗಟ್ಟಿತನವಿಲ್ಲ. ಕರಾವಳಿಯ ಯಕ್ಷಗಾನಕ್ಕೆ ದೇವಸ್ಥಾನ, ಮಠ-ಮಂದಿರಗಳ ಹಿನ್ನೆಲೆಗಳಿದ್ದರೆ ಮಲೆನಾಡಿನ ಯಕ್ಷಗಾನಕ್ಕೆ ಅಂತಹ ಬೆಂಬಲ ಸಿಗದೆ ಸೊರಗಿಹೋದ ಅನೇಕ ಸಂಘಟನೆಗಳು ಇಂದು ಇತಿಹಾಸ ಪುಟವನ್ನು ಸೇರಿರುವುದನ್ನು ಗಮನಿಸಬಹುದು. ಇಂತಹ ಹಿನ್ನೆಲೆಯಲ್ಲಿ ಆಗಿನ ಕಾಲಕ್ಕೆ ಅನುಗುಣವಾಗಿ ಸಿಗುವ ಅವಕಾಶ ಮತ್ತು ಸೌಲಭ್ಯವನ್ನು ಬಳಸಿಕೊಂಡು, ಊರಿನ ಆಢ್ಯರ ನೆರವಿನಿಂದ ಬಾಳೆಹೊಳೆ ಮೇಳಕ್ಕೆ ಆಟಗಳು ಲಭ್ಯವಾಗುತ್ತಿದ್ದವು.ಬಾಳೆಹೊನ್ನೂರು, ಮಾಗುಂಡಿ, ಕಳಸ,ಮೂಡಿಗೆರೆ, ಕಿಗ್ಗ, ಶೃಂಗೇರಿ, ಕೊಪ್ಪ, ಜಯಪುರ ಮುಂತಾದ ಕಡೆಗಳಲ್ಲಿ ಅದರ ಕಾರ್ಯವ್ಯಾಪ್ತಿಯ ಕ್ಷೇತ್ರಗಳಾಗಿ ಬದಲಾದವು. ಕೆಲವೇ ವರುಷಗಳಲ್ಲಿ ಇದು ’ನಮ್ಮೂರಿನ ಮೇಳ’ವಾಗಿ ಹೆಸರನ್ನು ಗಳಿಸಿತು. ಮೇಳದಲ್ಲಿ ಬಿದಕಿನ ವೆಂಕಟ್ರಾಮಣ್ಯನವರದ್ದು ಎರಡನೇಯ ವೇಷವಾದರೆ, ನಂಜುಂಡಯ್ಯನವರದ್ದು ಪುರುಷಪಾತ್ರವಾಗಿತ್ತು. ಮೇಳಕ್ಕೆ ಉಡುಪಿಯ ಜಿಲ್ಲೆಯ ಮಹಾಬಲ ಶೆಟ್ಟಿ, ಪುತ್ತೂರಿನ ಸೋಮಗಾಣಿಗ ಎನ್ನುವವರು ಬರುತ್ತಿದ್ದರು. ಒಂದಷ್ಟು ವರುಷಗಳ ತರುವಾಯ ನಂಜುಂಡಯ್ಯನವರು ಎರಡನೇ ವೇಷಗಳ ಪಾತ್ರಗಳನ್ನು ಸಹ ನಿರ್ವಹಿಸಿದರು.

ನಂಜುಂಡಯ್ಯನವರು ಹಲವು ಪಾತ್ರಗಳಲ್ಲಿ ಖ್ಯಾತಿಯನ್ನು ಗಳಿಸಿದ್ದಾರೆ. ಪಾರಿಜಾತ ಪ್ರಸಂಗದ ದೇವೇಂದ್ರ, ದ್ರೌಪದೀ ಪ್ರಸಂಗದ ಭೀಮ,ಮೀನಾಕ್ಷಿ ಕಲ್ಯಾಣದ ಶೂರಸೇನ, ರತಿಕಲ್ಯಾಣದ ಕಮಲಭೂಪ ಇತ್ಯಾದಿ ಪಾರಂಪರಿಕ ಪ್ರಸಂಗಗಳ ಪಾತ್ರಗಳು ಜನರ ಮೆಚ್ಚುಗೆಗೆ ಪಾತ್ರವಾದವು. ನಡುತಿಟ್ಟಿನ ಪಾತ್ರಪೋಷಣೆಯಲ್ಲಿ ವಿಶಿಷ್ಟವಾದ ಕ್ವಚಿತ ನಡೆಗಳಿವೆ. ಅವು ಪಾತ್ರದ ಅಂತಃಸತ್ವವನ್ನು ಸ್ಥಾಯಿಭಾವವನ್ನು ಯೋಗ್ಯವಾಗಿ ಹೆಚ್ಚಿಸುವುದು ಸುಳ್ಳಲ್ಲ. ಅಂತಹ ಅನುಕ್ರಮಗಳು ನಂಜುಂಡಯ್ಯನವರ ಪಾತ್ರ ಪೋಷಣೆಯಲ್ಲಿ ಕಾಣಬಹುದಿತ್ತು. ಕೈಯಲ್ಲಿ ಕರವಸ್ತ್ರವನ್ನು ಧರಿಸಿ ಪ್ರವೇಶಿಸುತ್ತಿದ್ದ ರೀತಿ, ಒಂಟಿ ಕಾಲಿನಲ್ಲಿ ನಿಂತು ಗತ್ತು ಗಭೀರವಾಗಿ ಪದ್ಯವನ್ನು ಎತ್ತುತ್ತಿದ್ದ ರೀತಿ ಇತ್ಯಾದಿ ಕ್ರಮಗಳು ಪೌರಾಣಿಕ ಆವರಣವನ್ನು ಸ್ಪುಟವಾಗಿ ಪ್ರೇಕ್ಷಕನ ಮನಸ್ಸಿನಲ್ಲಿ ಮೂಡಿಸುವಂತೆ ಮಾಡುತ್ತಿತ್ತು.

20-30ರ ದಶಕದಲ್ಲಿ ಉಂಟಾದ ರಂಗಭೂಮಿಯ ಕ್ರಾಂತಿ ಯಕ್ಷಗಾನದ ಮೇಲೂ ಆಗಿರುವುದನ್ನು ಕಾಣಬಹುದು. ಬಿಟ್ಟ ಮೈಯ ವೇಷ, ಪಾರ್ಟಿನ ವೇಷಗಳು ಇತ್ಯಾದಿಗಳು ನೇರವಾಗಿ ಯಕ್ಷಗಾನವನ್ನು ಪ್ರವೇಶಿಸಿದ್ದವು. ವೃತ್ತಿಯ ರಂಗದಲ್ಲಿ ಹೊಸತನನ್ನು ಕೊಡುವ ಭರದಲ್ಲಿ ಅಂತಹ ಕ್ರಮಗಳು ಯಕ್ಷಗಾನದಲ್ಲಿ ಬಂದಿರಬಹುದು. ಉದಾಹರಣೆ, ಹನುಮಂತನಿಗಾಗಿ ಸಣ್ಣ ಮರವನ್ನು ರಂಗದ ಮುಂದೆ ಕಟ್ಟಿ, ಅಲ್ಲಿಂದ ಹಾರುವ ದೃಶ್ಯ. ಈಶ್ವರನ ಪಾತ್ರಕ್ಕೆ ಚಂದ್ರನಂತೆ ಕಾಣುವ ಸಲುವಾಗಿ ಬಲ್ಬುಗಳನ್ನು ಕಟ್ಟುವುದು ಇತ್ಯಾದಿಗಳನ್ನು ಯಕ್ಷಗಾನದಲ್ಲಿ ಮಾಡುತ್ತಿದ್ದರು. ಈ ರೀತಿಯ ಧೋರಣೆಗಳು ಈಗ ಆಭಾಸವೆಂದು ತೋರಿದರೂ ಆ ಕಾಲದ ಹೊಸ ಶೋಧನೆಯಾಗಿತ್ತು. ಇಂತಹ ಕ್ರಮಗಳಲ್ಲಿ ನಂಜುಂಡಯ್ಯನವರು ನವಿಲುಗರಿಯ ಮಧ್ಯದಲ್ಲಿ ಬಲ್ಬವೊಂದನ್ನು ಕಟ್ಟಿ ಹಿಂಭಾಗದಿಂದ ಯಾರಿಗೂ ಕಾಣಿಸದಂತೆ ವೈರ್ ವೊಂದನ್ನು ಜೋಡಿಸಿ, ತನ್ನ ಸೊಂಟದ ಡಾಬಿನಲ್ಲಿ ಬ್ಯಾಟರಿ ಉಪಕರಣವೊಂದನ್ನು ಇಟ್ಟುಕೊಂಡು ಸ್ವೀಚ್ ಮೂಲಕ ನಿಮಿಷಕ್ಕೊಮ್ಮೆ ಮೇಲಿನ ಬಲ್ಬ್ ಉರಿಯುವಂತೆ ಮಾಡುತ್ತಿದ್ದರಂತೆ!

ನಂಜುಂಡಯ್ಯನವರು ಕೇವಲ ಆಟದಲ್ಲಿ ಮಾತ್ರವಲ್ಲದೇ ತಾಳಮದ್ದಲೆಯ ಕೂಟಗಳಲ್ಲಿಯೂ ಭಾಗವಹಿಸುತ್ತಿದ್ದರು. ತಾಳಮದ್ದಲೆಗಳಲ್ಲಿ ಹಲವು ಸಲ ಪುರಾಣದ ಹಿನ್ನೆಲೆಗಿಂತ ಹೆಚ್ಚಾಗಿ ಆ ಕ್ಷಣದಲ್ಲಿ ಚಮತ್ಕಾರಿ ಮಾತುಗಳು ಹೆಚ್ಚು ಪ್ರಾಮುಖ್ಯವನ್ನು ಪಡೆಯುತ್ತವೆ. ಇಂತಹ ಮಾತುಗಳು ಪ್ರಸಂಗದ ಆವರಣವನ್ನು ಭಂಗ ಮಾಡದೆ ಪಾತ್ರ ಮತ್ತು ಪ್ರೇಕ್ಷಕರನ್ನು ರಸಸ್ಯಂದಿಯಾಗಿ ಹಿಡಿದಿಟ್ಟುಕೊಳ್ಳುವಂತೆ ಮಾಡುವುದು ಹೌದು. ನಂಜುಂಡಯ್ಯ ಅವರು ಮಲೆನಾಡಿನ ಭಾಗದಲ್ಲಿ ಸಾಕಷ್ಟು ವೇದಿಕೆಗಳಲ್ಲಿ ಅರ್ಥವನ್ನು ಹೇಳಿದ್ದಾರೆ. ಒಮ್ಮೆ ತೋಟದೂರು ಪಠೇಲರ ಮನೆಯಲ್ಲಿ ತಾಳಮದ್ದಲೆಯ ಪ್ರಸಂಗ. ಪ್ರಸಂಗ ಕೃಷ್ಣ ಸಂಧಾನ. ಕೌರವನ ಪಾತ್ರವನ್ನು ಹಿರಿಯ ಕಲಾವಿದರೊಬ್ಬರು ನಿರ್ವಹಿಸಿದರೆ ಕೃಷ್ಣ ಪಾತ್ರವನ್ನು ನಂಜುಂಡಯ್ಯನವರು ನಿರ್ವಹಿಸಿದ್ದರು. ನಂಜುಂಡಯ್ಯನವರನ್ನು ಕೆಣಕಲು ಕೌರವ ಪ್ರಶ್ನೆಯೊಂದನ್ನು ಕೇಳಿದರಂತೆ. “ಹೌದಾ ಕೃಷ್ಣಾ? ನಿನಗೆ ಹದಿನಾರು ಸಾವಿರದ ಎಂಟು ಜನ ಹೆಂಡತಿಯರಂತೆ. ಅವರ ಹೆಸರೇನಾದರೂ ನೆನಪಿದೆಯಾ?” ಎಂದರಂತೆ. ನಂಜುಂಡಯ್ಯನವರು ತಡಬಡಿಸಿದೆ “ಅದಕ್ಕೇನು ಈಗಲೇ ಹೇಳುವೆ ಕೇಳು” ಎಂದು ಅಷ್ಟಮಹಿಷಿಯರ ಹೆಸರನ್ನು ಹೇಳುತ್ತಾ ಹೋದರು. ನಂತರ ನೆನಪಿಗೆ ಬಂದ ಹೆಸರು ಹೇಳುವಾಗ ತಡವರಿಸಿತು. ಕೂಡಲೇ ಸಭೆಯನ್ನು ನೋಡಿ ಅಲ್ಲಿನ ಹೆಂಗಸರ ಹೆಸರನ್ನೇ ಪಟ್ಟಿ ಮಾಡತೊಡಗಿದರು. ಆಗ ಯಾವುದೋ ಒಂದು ಹೆಸರು ಎರಡು ಬಾರಿ ಬಂತು. ಕೂಡಲೇ ಕೌರವ ಅವರನ್ನು ತಡೆದು ನಿಲ್ಲಿಸಿ “ಒಂದೇ ಹೆಸರು ಹೇಗೆ ಎರಡು ಬಾರಿ ಬಂತು?” ಎಂದರು. ಅದಕ್ಕೆ ಕೃಷ್ಣ “ಹೌದು ಸರಿ. ಒಂದೇ ಹೆಸರು ಆದರೆ ಜನ ಮಾತ್ರ ಬೇರೆ” ಎಂದು ಮುಂದುವರೆಸಿದರು. ಅಷ್ಟಕ್ಕೆ ಸುಮ್ಮನಾಗದ ಕೌರವ “ಸರಿ ನೀನು ಇವರೆಲ್ಲ ಪತ್ನಿಯರು ಎಂದು ಹೇಳುತ್ತಿರುವೆ. ಅದಕ್ಕೆ ದಾಖಲೆಗಳೇನು?” ಎಂದರು. ಆಗ ಕೃಷ್ಣ ದಾಖಲೆ ಬೇಕಾದರೆ ಕೊಡುವೆ. ಅದಕ್ಕೆ ಮೊದಲು ಅವರು ನನ್ನ ಪತ್ನಿಯರಲ್ಲ ಎನ್ನಲು ನಿನ್ನಲ್ಲಿ ಏನಾದರೂ ಸಾಕ್ಷಿಗಳಿದ್ದರೆ ಕೊಡು ಎಂದಾಗ ಸಭೆಯಲ್ಲಿ ನಗುವಿನ ಚಿಲುಮೆ ಹರಿಯಿತು. ಮುಂದೆ ಪ್ರಸಂಗವೂ ಶಾಂತವಾಗಿ ಮುಂದುವರೆಯಿತು.

ನಲವತ್ತಕ್ಕೂ ಹೆಚ್ಚು ವರುಷಗಳ ಕಾಲ ಬಾಳೆಹೊಳೆ ಮೇಳದಲ್ಲಿ ನಂಜುಂಡಯ್ಯನವರು ಹಲವು ರೀತಿಯಲ್ಲಿ ದುಡಿದಿದ್ದಾರೆ. ಕಲಾವಿದ, ಸಂಘಟಕ, ನಿರ್ವಾಹಕ ಯಾವೆಲ್ಲ ದುಡಿಮೆಗಳು ಕೇವಲ ಮನಸ್ಸಂತೋಷ ಬಿಟ್ಟರೆ ಅದರಿಂದ ಏನನ್ನೂ ಅಪೇಕ್ಷಿಸಿದವರಲ್ಲ. ಯಕ್ಷಗಾನವನ್ನು ಆಸ್ಥೆಯಿಂದ ಪ್ರೀತಿಸಿ, ಶ್ರದ್ಧಾ ಭಕ್ತಿಯಿಂದ ಕಲಾಜೀವನವನ್ನು ನಡೆಸಿದ ನಂಜುಂಡನವರನ್ನು ಗುರುತಿಸಿ ಲಲಿತಾಕಲಾ ಸಮಿತಿಯರು 1974ರಲ್ಲಿ ಗೌರವ ಸನ್ಮಾನವನ್ನು ಮಾಡಿದ್ದಾರೆ. ಸಾಂಸಾರಿಕವಾಗಿ ನಂಜುಂಡಯ್ಯನವರು ಹೊನ್ನಮ್ಮ ಮತ್ತು ಲಕ್ಷ್ಮಮ್ಮ ಅವರನ್ನು ಮದುವೆಯಾಗಿ ಸುಬ್ರಾಯ, ಸುಬ್ಬುಲಕ್ಷ್ಮೀ, ವಿಜೇಂದ್ರ, ಆನಂದ, ನಾಗರಾಜ, ರವಿಶಂಕರ, ವೆಂಕಟೇಶ, ಬಾಲಕೃಷ್ಣ ಹಾಗೂ ಶಾರದಾ ಎಂಬ ಮಕ್ಕಳನ್ನು ಪಡೆದಿದ್ದಾರೆ. ಈಗಿನಂತೆ ಆಗೀನ ತಲೆಮಾರುಗಳಲ್ಲಿ ವಯಸ್ಸಿನ ಅಂತರ ಕಡಿಮೆ ಇರುತ್ತಿರಲಿಲ್ಲ. ಹಾಗಾಗಿಯೇ ಹಳೆಯ ತಲೆಮಾರಿನ ಸಹಜ ವರ್ತನೆ ಎಂಬಂತೆ ತಂದೆ ಹಾಗೂ ಮಕ್ಕಳು ಮಾತುಕಥೆಗಳು, ಅವರ ಮನದ ಅಭೀಷ್ಟಗಳನ್ನು ಅರ್ಥವಿಸಿಕೊಳ್ಳುವುದು ತೀರಾ ಕಡಿಮೆಯಿತ್ತು. ಆದರೆ ನಂಜುಂಡಯ್ಯನವರು ಮಕ್ಕಳ ಯಕ್ಷಗಾನದ ವಿಚಾರದಲ್ಲಿ ಹೊರತಾಗಿದ್ದಿರಬೇಕು. ಮಕ್ಕಳಾದ ಆನಂದ ಹಾಗೂ ವಿಜೇಂದ್ರ ಅವರ ಅಭಿರುಚಿಯನ್ನು ಅರಿತು ಆ ಕಾಲದಲ್ಲಿ ಯಕ್ಷಗಾನದ ಗುರುಗಳಾಗಿದ್ದ ಉಳ್ತೂರು ಗಣಪತಿ ನಾಯಕ್ ಅವರನ್ನು ತಮ್ಮ ಮನೆಗೆ ಕರೆಯಿಸಿ, ಮಕ್ಕಳಿಗೆ ಯಕ್ಷ ಶಿಕ್ಷಣವನ್ನು ನೀಡಿದ್ದರು. ಮುಂದೆ ಮಗ ವಿಜೇಂದ್ರ ಅವರು ಕೇದಿಗೆಮನೆ ಚೆನ್ನಯ್ಯರಲ್ಲಿ ಹೆಚ್ಚಿನ ಅಭ್ಯಾಸವನ್ನು ಮಾಡಿ, ಬಾಳೆಹೊಳೆ ಮೇಳದ ನಿರ್ವಾಹಕರಾಗಿ, ಕಲಾವಿದರಿಗಾಗಿ, ತಾಳಮದ್ದಲೆಯ ಅರ್ಥಧಾರಿಗಳಾಗಿ 50ಕ್ಕೂ ವರುಷದ ಹೆಚ್ಚಿನ ಯಕ್ಷದುಡಿಮೆಯನ್ನು ಮಾಡಿದ್ದಾರೆ. ಅವರ ಮತ್ತೊಬ್ಬ ಮಗ ಆನಂದ ಅವರು ಒಳ್ಳೆಯ ಆಳ್ತನ, ವೇಷಗಾರಿಕೆ ಹಾಗೂ ನರ್ತನವನ್ನು ಹೊಂದಿದ್ದರು. ಆದರೆ ವಿಧಿಯ ವಿಪರ್ಯಾಸವೆಂಬಂತೆ ಯಕ್ಷರಂಗದಲ್ಲಿ ಚಿಗುರಿ, ಮೊಗ್ಗಾಗಿ ಹೂವಾಗಿ ಅರಳುವ ಮುನ್ನವೇ ತಮ್ಮ 23ನೇ ವಯಸ್ಸಿಗೆ ಈ ಲೋಕದ ಯಾತ್ರೆಯನ್ನು ಮುಗಿಸಿದ್ದರು. ಇಂದು ಅವರ ಮೂರನೇ ತಲೆಮಾರಿನ ಕುಡಿ ಅಜಿತ್ ಕಾರಂತರು ಯಕ್ಷಗಾನದಲ್ಲಿ ಅರಳುತ್ತಿರುವುದು ವಿಶೇಷ. ವೇದಾಧ್ಯಯನ ಮಾಡಿರುವ ಅವರು ತಾಳಮದ್ದಲೆಗಳಲ್ಲಿ ಯುವ ಅರ್ಥಧಾರಿಗಳಾಗಿ ಯಕ್ಷರಂಗದಲ್ಲಿ ಕಾಣಿಸಿಕೊಂಡು ಪ್ರಖ್ಯಾತ ಕಲಾವಿದರೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದಾರೆ. ಅಷ್ಟೇಯಲ್ಲದೆ ಯಕ್ಷಗಾನದ ದಾಖಲೀಕರಣ ವಿಷಯದಲ್ಲಿ ಆಸಕ್ತಿಯನ್ನು ಹೊಂದಿರುವ ಅವರು, ಬೆಂಗಳೂರಿನ ಯಕ್ಷವಾಹಿನಿ ಸಂಸ್ಥೆಯ ’ಮಟ್ಟುಕೋಶ’ ಯೋಜನೆಯ ಸಂಪಾದಕರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

ಅನಿರೀಕ್ಷಿತವಾಗಿ ಎರಗಿದ ಮಗನ ಸಾವೆಂಬ ಆಘಾತವನ್ನು ಸಹಿಸದಾದ ನಂಜುಂಡಯ್ಯನವರು ಕಾಲಕ್ರಮೇಣ ನೇಪಥ್ಯಕ್ಕೆ ಸರಿದರು. 1986ರಲ್ಲಿ ತಮ್ಮ 82ನೇ ವಯಸ್ಸಿನಲ್ಲಿ ಅವರು ದೈವಾಧೀನರಾದರು. ಇಂದಿಗೂ ನಂಜುಂಡಯ್ಯನವರು ಸ್ವತಃ ತಯಾರಿಸಿ ಧರಿಸಿ ಮೆರೆದಿದ್ದ ವೇಷಭೂಷಣವನ್ನು ಕುಟುಂಬದವರು ಅತ್ಯಂತ ಜತನದಿಂದ ಕಾಪಿಟ್ಟುಕೊಂಡು ಅವರ ನೆನಪನ್ನು ಶಾಶ್ವತವಾಗಿ ಕಾಯ್ದಿಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಜೊತೆಗೆ ಮೇಳದಲ್ಲಿ ಆ ಕಾಲದಲ್ಲಿ ಪ್ರದರ್ಶನ ಕಂಡ ರಾಮಕೃಷ್ಣರ ಕಿರೀಟಗಳು ಬಾಳೆಹೊಳೆ ಮೇಳದಲ್ಲಿ ಇಂದಿಗೂ ಜೋಪಾನವಾಗಿವೆ.

ಯಕ್ಷಗಾನವನ್ನು ಕಲೆಯಾಗಿ ನೋಡುವುದು ಒಂದು ಬಗೆಯಾದರೆ, ತಲೆತಲೆಮಾರುಗಳಿಂದ ಕಲೆಯನ್ನು ಆಚರಣೆಯಾಗಿ, ನಂಬಿಕೆಯಾಗಿ ಆಚರಿಸಿಕೊಂಡು ಬಂದಿರುವುದು ಹಲವು ಶತಮಾನಗಳಿಂದ ಅಧಿಷ್ಠಿತವಾಗಿ ಈ ಕಲೆಯನ್ನು ಉಳಿಸುತ್ತಲೇ ಬಂದಿದೆ. ಒಂದು ಕಾಲದಲ್ಲಿ ಕಲೆಯಾಗಿ ನೋಡುವುದಕ್ಕಿಂತ ಹೆಚ್ಚಾಗಿ ಆರಾಧನೆಯ ಭಾಗವಾಗಿ ಕಂಡವರೇ ಹೆಚ್ಚು. ಇಲ್ಲಿ ಕಲಾವಿದ ಅಥವಾ ಪ್ರೇಕ್ಷಕನಿಗೆ ಆರಾಧನೆ ಭಾವದಲ್ಲಿ, ಸ್ವರೂಪದಲ್ಲಿ ವ್ಯತ್ಯಾಸಗಳಿರಲಿಲ್ಲ. ಇಬ್ಬರೂ ಸಮಾನವಾಗಿ ಅರಿವಿಲ್ಲದೇ ಇದಕ್ಕಾಗಿ ಸಮರ್ಪಿಸಿಕೊಂಡಿದ್ದರು. ನಂಜುಂಡಯ್ಯನವರು ಕೂಡ ಇದಕ್ಕೆ ಹೊರತಾಗಿರಲಿಲ್ಲ. ತಾವು ನಂಬಿದ ದೇವರಿಗೆ ತನ್ನ ಕಲಾಸೇವೆ ಪ್ರಿಯವೆಂದು ನಂಬಿ ಕಲೋಪಾಸನೆಯಲ್ಲಿ ತೊಡಗಿಕೊಳ್ಳುವುದು ಆಧ್ಯಾತ್ಮದ ಪರಮಸ್ಥಿತಿ. ತನ್ನದಲ್ಲವೆಂದು ಚೆನ್ನಕೇಶವನಿಗೆ ಅರ್ಪಿಸಿಕೊಳ್ಳುತ್ತ ಗೆಜ್ಜೆ ಕಟ್ಟಿ ಕುಣಿದು ಬದುಕಿನ ಕಷ್ಟ,ಸುಖ, ನೋವು, ನಲಿವು, ದುಗುಡ,ದುಮ್ಮಾನಗಳನ್ನು ಸೈರಣೆ ಮಾಡುತ್ತ ಬದುಕಿದವರು ನಂಜುಂಡಯ್ಯನವರು. ಅಂತವರ ಕಲಾ ಬದುಕಿನ ಅಚಿಂತ್ಯ ವ್ರತವಾಗಿ ಈ ಹೊತ್ತು ಕಲೆ ಸ್ರೋತವಾಗಿ ಎಲ್ಲೆಡೆ ಕಂಗೊಳಿಸುವುದಕ್ಕೆ ಕಾರಣವಾಗಿರುವುದನ್ನು ಮರೆಯಬಾರದು. ಈ ಕಾರಣಕ್ಕೆ ನಂಜುಂಡಯ್ಯನವರನ್ನು ಮತ್ತೊಮ್ಮೆ ನೆನಪಿಸಿಕೊಳ್ಳುತ್ತ ಅವರ ಚೇತನಗಳಿವೆ ನಮನಗಳು.

ಮಾಹಿತಿ ಸಹಕಾರ: ಶ್ರೀಮತಿ ಲಕ್ಷಮ್ಮ, ಶ್ರೀ ವಿಜೇಂದ್ರ ತೋಟದೂರು, ಶ್ರೀ ಅಜಿತ್ ಕಾರಂತ್

  • ರವಿ ಮಡೋಡಿ, ಬೆಂಗಳೂರು
error: Content is protected !!
Share This