ಹೆಬ್ಬೈಲು ರಾಮಪ್ಪ (1938-1988)

ಆಟದ ರಾಮಯ್ಯ ಎಂದು ಖ್ಯಾತರಾಗಿದ್ದ ಶ್ರೀ ಜಿ.ರಾಮಪ್ಪ ಅವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಂಪಗದ್ದೆ ಕೆದ್ಲಗುಡ್ಡೆಯಲ್ಲಿ ಪುಟ್ಟಪ್ಪ ಹಾಗೂ ಸೂಲಿಂಗಮ್ಮ ಇವರ ಮಗನಾಗಿ 1938ರಲ್ಲಿ ಜನಿಸಿದರು. ಅವರಿಗೆ ಹಾಲಮ್ಮ, ಹೂವಮ್ಮ, ಲಿಂಗಮ್ಮ,ವೀರಭದ್ರಪ್ಪ, ಪುಟ್ಟಪ್ಪ ಎಂಬ ಸಹೋದರ, ಸಹೋದರಿಯರು. ನಿರಂತರವಾಗಿ ಅಲೆದಾಡುತ್ತಿದ್ದ ಕುಟುಂಬದ ಮೂಲ ಸೌಳ್ನಾಡು ಸೀಮೆಯಾಗಿತ್ತು. ಕಾಲಾನಂತರದಲ್ಲಿ ಹೊಸನಗರದ ಹೆಬ್ಬೈಲಿನಲ್ಲಿ ತಮ್ಮ ಬದುಕಿನ ನೆಲೆಯನ್ನು ಕಂಡವರಾಗಿದ್ದರು.

ಇದೊಂದು ಘಟನೆ ಈ ಕಾಲಕ್ಕೆ ನಂಬಲಾಗದ ವಿಚಾರವೆನಿಸಿದರೂ ಕಾಲಘಟ್ಟದಲ್ಲಿ ಬಂದ ನಂಬಿಕೆಗಳ ಪ್ರಭಾವದಿಂದ ಉಂಟಾಗಬಹುದಾದ ಮಾನಸಿಕ ಪರಿಣಾಮಗಳನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಮನೆಯಿಂದ ಹೊರಕ್ಕೆ ಹೋಗಿದ್ದ ರಾಮಪ್ಪನವರ ತಂದೆ ಪುಟ್ಟಪ್ಪನವರು, ಇದ್ದಕ್ಕಿದ್ದ ಹಾಗೆ ದಾರಿಯಲ್ಲಿಯೇ ಮರಣವನ್ನು ಹೊಂದಿದ್ದರು. ನೋಡಿದವರೆಲ್ಲ ಅದು ಭೂತದ ಚೇಷ್ಟೆಯಲ್ಲಿ ಸಿಲುಕಿದ ಕೃತ್ಯವೆಂದು ಬಣ್ಣಿಸಿದರು. ಆಗ ರಾಮಪ್ಪನವರಿಗೆ ಆರೇಳು ವರ್ಷವಾಗಿದ್ದಿರಬಹುದು. ಗಂಡನ ಅನಿರೀಕ್ಷಿತ ನಿರ್ಗಮನವು ಹೆಂಡತಿ ಸೂಲಿಂಗಮ್ಮನವರನ್ನು ದಿಕ್ಕುಗೆಡಿಸಿತ್ತು. ತನ್ನ ಕುಟುಂಬವನ್ನು ಕಾಪಿಡುವ ಉದ್ದೇಶದಿಂದಲೋ ಏನೋ ಆ ತಾಯಿ ಊರನ್ನು ಬಿಟ್ಟು ಸಣ್ಣ ಮಕ್ಕಳನ್ನು ಕರೆದುಕೊಂಡು ಹೊಸನಗರದ ಬಾಲಗೇರಿ ಎಂಬಲ್ಲಿಗೆ ಬಂದು, ಸಣ್ಣ ಮನೆಯನ್ನು ಕಟ್ಟಿಕೊಂಡು ಹೊಸ ಬದುಕನ್ನು ಪ್ರಾರಂಭಿಸಿದ್ದರು. ಜೀವನ ನಿರ್ವಹಣೆಗಾಗಿ ಒಬ್ಬೊಬ್ಬ ಮಕ್ಕಳು ಒಂದೊಂದು ಕೆಲಸವನ್ನು ಮಾಡುತ್ತಿರುವಾಗ ರಾಮಪ್ಪನವರಿಗೆ ದನಗಾವಲು ಕೆಲಸ ನಿಗದಿಯಾಗಿತ್ತು. ಓದುವ ಹಂಬಲವಿದ್ದರೂ ಅಂತಹ ಆಯ್ಕೆಗಳು ಸರಿಯಾಗಿ ಒದಗಲಿಲ್ಲ. ಆದರೂ ಆ ಕಾಲದಲ್ಲಿದ್ದ ರಾತ್ರಿ ಶಾಲೆಯಲ್ಲಿ(ಗೌಂಟಿ ಶಾಲೆ) ಅಕ್ಷರಾಭ್ಯಾಸವನ್ನು ಮಾಡಿದರು. ದನ ಮೇಯಿಸುವಾಗ ಕೌಲು ಎಲೆಗಳ ಮೇಲೆ ಕಡ್ಡಿಯಿಂದ ತಿದ್ದಿ ಅಕ್ಷರಗಳನ್ನು ಮೆಲುಕು ಹಾಕಿಕೊಳ್ಳುತ್ತಿದ್ದರು. ರಾತ್ರಿ ಶಾಲೆಯ ಗುರುಗಳಾಗಿದ್ದ ಕಾಳೋಜಿ ರಾವ್ ಅವರಲ್ಲಿ ಮೂರನೆಯ ತರಗತಿಯಲ್ಲಿ ಅಭ್ಯಸಿಸುತ್ತಿರುವಾಗ ನಡೆದ ಘಟನೆ ಮತ್ತೆ ಬದುಕನ್ನು ಬೇರೆಡೆಗೆ ಸಾಗಿಸಿತ್ತು. ತಾಯಿ ಸೂಲಿಂಗಮ್ಮ ಮಾಸೂರು ಮದಗದಕೆರೆ ಜಾತ್ರೆಗೆಂದು ಎತ್ತಿನ ಗಾಡಿಯಲ್ಲಿ ಹೋಗಿದ್ದರು. ಇದ್ದಕ್ಕಿದ್ದ ಹಾಗೆ ಜಾತ್ರೆಯಲ್ಲಿಯೇ ಅವರಿಗೆ ಜ್ವರ ನೆತ್ತಿಗೆ ಏರಿ, ಸರಿಯಾದ ಚಿಕಿತ್ಸೆ ಸಿಗದೆ ಮೂರು ನಾಲ್ಕು ದಿನದಲ್ಲಿ ಅಸು ನೀಗಿದ್ದರು. ಈ ಮೂಲಕವಾಗಿ ತಂದೆತಾಯಿಗಳಿಂದ ಬದುಕನ್ನು ಕಟ್ಟಿಕೊಳ್ಳಬೇಕಾದ ಮಕ್ಕಳು ಅನಾಥರಾದರು. ಜೀವನಕ್ಕಾಗಿ ಅಣ್ಣತಮ್ಮಂದಿರು ಹತ್ತಾರು ಕಡೆಗಳಲ್ಲಿ ಕೆಲಸವನ್ನು ಮಾಡುತ್ತಿದ್ದರು. ಹೀಗೆ ಸಾಗುತ್ತಿದಾಗ ರಾಮಪ್ಪನವರು ಸೌಳ್ನಾಡು ಗಣಪಯ್ಯ ಶೆಟ್ಟಿ, ಗೋಪಾಲ ಪೂಜಾರಿ ಅವರ ಸಂಪರ್ಕದಿಂದ ಯಕ್ಷಗಾನವನ್ನು ಅಭ್ಯಸಿಸಿದರು.

ಅಂದೊಂದು ದಿನ ಹೊಸನಗರದ ಗಣಪತಿ ದೇವರ ದೀಪೋತ್ಸವದಲ್ಲಿ ಅತಿಥಿ ಕಲಾವಿದರ ಆಟ ಸಂಯೋಜನೆಗೊಂಡಿತ್ತು. ಆಟವನ್ನು ನೋಡಲೆಂದು ಹತ್ತುಹನ್ನೆರಡು ವರುಷದ ರಾಮಪ್ಪನವರು ಸಹ ಹೋಗಿದ್ದರು. ಪರಿಚಯವಿದ್ದ ಸ್ನೇಹಿತರು ಇವತ್ತು ನೀನು ಕೂಡ ವೇಷವನ್ನು ಮಾಡಲೇಬೇಕೆಂದು ಒತ್ತಾಯಿಸಿದರು. ತನಗೆ ಒದಗಿಬಂದ ಅವಕಾಶವನ್ನು ಚಾಚೂತಪ್ಪದೆ ನಿರ್ವಹಿಸಿ ಅಲ್ಲಿದ್ದವರ ಮೆಚ್ಚುಗೆಯನ್ನು ಗಳಿಸಿದರು. ಆಗಿನ ಘಟ್ಟದ ಮೇಲಿನ ಪ್ರಸಿದ್ಧ ವೇಷಧಾರಿ ರೋಡ್ ಇಂಜಿನ್ ರಾಮಣ್ಣ ಎಂಬುವವರ ಪರಿಚಯ ರಾಮಪ್ಪನವರಿಗೆ ಈ ಆಟದಲ್ಲಿ ಸಿಕ್ಕಿತು. ಬೆಳಗ್ಗೆ ಆಟ ಮುಗಿಯುವ ಹೊತ್ತಿಗೆ ರಾಮಣ್ಣನವರು ರಾಮಪ್ಪನವರನ್ನು ಕರೆದು ಆಟದ ಪಾತ್ರವನ್ನು ಮೆಚ್ಚಿಕೊಂಡಿದ್ದಲ್ಲದೇ ಬೆನ್ನುತಟ್ಟಿ ಹರಸಿದ್ದರು. ಅವರ ಪ್ರತಿಭೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದ ರಾಮಣ್ಣನವರು , ರಾಮಪ್ಪನವರ ಸುಪ್ತವಾಗಿದ್ದ ಆಳಂಗ ಒನಪು ವೈಯ್ಯಾರ ಬೆಡಗುಗಳನ್ನು ಗಮನಿಸಿ, ಸ್ತ್ರೀವೇಷಕ್ಕೆ ಹೇಳಿಮಾಡಿಸಿದಂತಿದೆ ಎಂದಿದ್ದರು. ಅಂತಹ ವೇಷಧಾರಿಯ ಪ್ರೇರಣೆಯ ಮಾತುಗಳು ರಾಮಪ್ಪದವರಿಗೆ ತಾನು ಸಾಗಬೇಕಾದ ಪಥದ ಬಗ್ಗೆ ಸ್ಪಷ್ಟತೆ ಸಿಕ್ಕಿದಂತಾಯಿತು. ಹೆಚ್ಚು ಯೋಚಿಸದೆ ಐವತ್ತರ ದಶಕದ ವೇಳೆಗೆ ಮಲೆನಾಡಿನಲ್ಲಿ ಖ್ಯಾತವಾಗಿದ್ದ ಹನ್ನಾರ ಮೇಳಕ್ಕೆ ಸೇರ್ಪಡೆಗೊಂಡರು. ಲಿಂಗದಕೈ ಮಹಾಬಲಯ್ಯ, ಶ್ರೀಪಾದಯ್ಯ ದರೆಮನೆ ಮುಂತಾದವರು ಆ ಮೇಳದಲ್ಲಿ ಕಲಾವಿದರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಒಂದಷ್ಟು ವರುಷ ರಾಮಪ್ಪನವರು ಆ ಮೇಳದಲ್ಲಿ ವೇಷವನ್ನು ಮಾಡಿದರು.

ಆಗಿನ್ನೂ ರಾಮಪ್ಪನವರು ಪ್ರವರ್ಧಮಾನಕ್ಕೆ ಬರುತ್ತಿರುವ ಕಲಾವಿದರಾಗಿದ್ದರು. ಅವರ ವಿದ್ಯುನ್ಮತಿ ಕಲ್ಯಾಣ ಪಾತ್ರದ ಬಗ್ಗೆ ಹತ್ತಾರು ಜನರು ಮಾತನಾಡಿಕೊಳ್ಳುವಂತಾಗಿತ್ತು. ಹೊಸನಗರದಲ್ಲಿ ಧರ್ಮರಾಯ ಎನ್ನುವವರು ಯಕ್ಷಗಾನ ಸಂಘಟನೆಯನ್ನು ಮಾಡುತ್ತ, ತೆಂಕು ಬಡಗಿನ ವೇಷಗಳನ್ನು ಹೊಂದಿಸಿ ಸ್ಥಳೀಯವಾಗಿ ಆಟಗಳನ್ನು ಆಯೋಜಿಸುತ್ತಿದ್ದರು. ಅಂತೆಯೇ ಪಟಗುಪ್ಪೆಯಲ್ಲಿ ಅತಿಥಿ ಕಲಾವಿದರನ್ನು ಸೇರಿಸಿ ಆಟವೊಂದನ್ನು ಆಯೋಜಿಸಿದ್ದರು. ಅದರಲ್ಲಿ ರಾಮಪ್ಪನವರಿಗೆ ವಿದ್ಯುನ್ಮತಿ ಪಾತ್ರ ನಿಗದಿಯಾಗಿತ್ತು . ಯಕ್ಷಗಾನದಲ್ಲಿ ಕೆಲವೊಮ್ಮೆ ಅರಿವಿದ್ದೋ ಅರಿವಿಲ್ಲದೆಯೋ ಪಾತ್ರಧಾರಿಗಳಾಗಿ ಅವರ ಅಭಿಮಾನಿ ಬಳಗ ಅಥವಾ ಸ್ನೇಹಿತರ ಬಳಗ ಮದ್ಯವನ್ನು ಕುಡಿಸಿ ಪಾತ್ರಗಳನ್ನು ಮಾಡಿಸುವುದು ಇತಿಹಾಸದಲ್ಲಿ ಬಂದಿರುವುದನ್ನು ಕಾಣಬಹುದು. ಅವತ್ತು ಕೂಡ ಯಾರೋ ರಾಮಪ್ಪನವರ ಎದುರಿನ ಪಾತ್ರಧಾರಿಗಳಿಗೆ ಚೆನ್ನಾಗಿ ಕುಡಿಸಿಬಿಟ್ಟಿದ್ದರು. ಕುಡಿದ ಮತ್ತಿನಲ್ಲಿ ವಿದ್ಯುನ್ಮತಿ ಪಾತ್ರದ ಎದುರು ಪಾತ್ರಧಾರಿಗಳು ಪ್ರಸಂಗವನ್ನು ಮುಂದುವರೆಸದೆ ಅಡ್ಡಾದಿಟ್ಟಿಯಾಗಿ ಹೋಗಿ, ಸಭೆ ಮುಜುಗರಪಟ್ಟುಕೊಳ್ಳುವ ಸನ್ನಿವೇಶ ನಿರ್ಮಾಣವಾಗಿತ್ತು. ಪಾತ್ರಧಾರಿಯಾಗಿದ್ದ ರಾಮಪ್ಪನವರಿಗೆ ಇದೆಲ್ಲ ಹೊಸತು. ಇಂತಹ ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕೆಂಬ ಅರಿವಿರಲಿಲ್ಲ. ಆದರೂ ಅಂತಹ ಸಂದರ್ಭದಲ್ಲಿ ಸ್ವಲ್ಪವೂ ವಿಚಲಿತರಾಗದೆ ಇಡೀ ಸಭೆಯನ್ನು ತಾವೇ ನಿಯಂತ್ರಣಕ್ಕೆ ಪಡೆದು, ತಮ್ಮ ಮಾತು, ನರ್ತನ, ಅಭಿನಯಗಳಿಂದ ಆಗಬಹುದಾದ ಆಭಾಸವನ್ನು ತಪ್ಪಿಸಿ ಮೆಚ್ಚುಗೆಯನ್ನು ಪಡೆದಿದ್ದರು.

ಹನ್ನಾರ ಮೇಳದ ತರುವಾಯ ರಾಮಪ್ಪನವರು ರಂಜದಕಟ್ಟೆ ಮೇಳದಲ್ಲಿ ಹಲವಾರು ವರುಷಗಳ ಕಾಲ ತಿರುಗಾಟವನ್ನು ಮಾಡಿದರು. ಈ ಮೇಳದ ಇತಿಹಾಸವನ್ನು ಗಮನಿಸುವಾಗ ಒಂದು ಅಂದಾಜಿನ ಪ್ರಕಾರ 1930ರ ಅಸುಪಾಸಿನಲ್ಲಿ ತೀರ್ಥಹಳ್ಳಿಯ ಶಿವರಾಜಪುರ ರಂಜದಕಟ್ಟೆದಲ್ಲಿ ಈ ಮೇಳವು ಪ್ರಾರಂಭವಾಗಿತ್ತು. ಇದನ್ನು ಘಂಟೆಹಕ್ಲು ಚಿನ್ಮಯ ಆಚಾರ್ ಹಾಗೂ ಅವರ ಚಿಕ್ಕಪ್ಪ ರಾಮಣ್ಣ ಆಚಾರ್ ಎಂಬುವವರು ಆರಂಭಿಸಿದ್ದರು. ಆ ಮೇಳದಲ್ಲಿ ಯಾವುದೇ ಮೂಲ ವ್ಯವಸ್ಥೆಗಳು ಇರಲಿಲ್ಲ. ಗಣಪೆಕಾಯಿಂದ ಮಾಡಿದ ಆಭರಣಗಳು, ರಟ್ಟಿನಿಂದ ಮಾಡಿದ ಇರುವ ಸ್ಥಳೀಯ ಆಕರಗಳಿಂದಲೇ ಆಟಗಳನ್ನು ಮಾಡುತ್ತಿದ್ದರು. ಈ ಮೇಳಕ್ಕೆ ಮಂಜುನಾಥ ಕಾಮತ್ ಭಾಗವತಿಕೆಯನ್ನು ಮಾಡಿದರೆ, ಅನಂತು ಕೊಂಕಣಿಯವರು ಮದ್ದಲೆವಾದನದಲ್ಲಿದ್ದರು. ಸುಬ್ರಾಯ ವಸಂತ ಹೆಬ್ಬಾರ್ , ಜನ್ನಾಡಿ ಬಸವ, ಶಿವರಾಜಪುರ ಮಂಜುನಾಥ, ಗಣಪತಿ ನಾಯಕ್ ಉಳ್ತೂರು, ಅಣ್ಣೆಗೌಡರು ಮೊದಲಾದವರು ಕಲಾವಿದರಾಗಿದ್ದರು. ಕೃಷ್ಣೋಜಿ ರಾವ್ ಆ ಮೇಳದ ಜನಪ್ರಿಯ ಪಾತ್ರಧಾರಿಗಳಾಗಿದ್ದರು. ಬಚ್ಚನಕುಡಿಗೆ ಹಾಗೂ ರಂಜದಕಟ್ಟೆ ಮೇಳಕ್ಕೆ ಪ್ರಚಂಡ ಜೋಡಾಟ ಆ ಕಾಲದ ಪ್ರಮುಖ ಆಕರ್ಷಣೆಯಾಗಿತ್ತು. ಬಹುಕಾಲದಿಂದ ಈ ಮೇಳವನ್ನು ಮೊಳಹಳ್ಳಿ ಅಂತಯ್ಯ ಶೆಟ್ಟರು ನಡೆಸುತ್ತಿದ್ದರು. ಬುಕ್ಲಾಪುರ ಎಂಬಲ್ಲಿ ರಾಮಪ್ಪನವರು ಕೂಲಿನಾಲಿ ಮಾಡುತ್ತಿರುವಾಗ ಈ ಮೇಳಕ್ಕೆ ಕೃಷ್ಣೋಜಿ ರಾವ್ ಅವರು ಅವರನ್ನು 1955-1960ರ ವೇಳೆಗೆ ಕರೆತಂದಿದ್ದರು. ಈ ಮೇಳದಲ್ಲಿ ರಾಮಪ್ಪನವರು ಭೀಷ್ಮವಿಜಯ, ರತಿ ಕಲ್ಯಾಣ, ವಿದ್ಯುನ್ಮತಿ ಕಲ್ಯಾಣ, ಮೀನಾಕ್ಷಿ ಕಲ್ಯಾಣ ಮುಂತಾದ ಪ್ರಸಂಗಗಳಲ್ಲಿ ಪಾತ್ರಗಳನ್ನು ಮಾಡಿದ್ದರು.

ಮುಂದೆ ನಗರದ ನೀಲಕಂಠೇಶ್ವರ ಯಕ್ಷಗಾನ ಮೇಳ ಪ್ರಾರಂಭವಾದಾಗ ರಾಮಪ್ಪನವರು ಅದರ ಮುಖ್ಯ ಸ್ತ್ರೀವೇಷದ ಕಲಾವಿದರಾಗಿದ್ದರು. ಈ ಮೇಳದಲ್ಲಿ ರಾಘವೇಂದ್ರ ಆಚಾರ್, ಸುಧೀಂದ್ರ ಆಚಾರ್, ರಾಮಕೃಷ್ಣ ಹೆಬ್ಬಾರ್ ಮುಂತಾದವರು ಕಲಾವಿದರಾಗಿದ್ದರು. ಮರುವರುಷ ನಾಗರಕುಡಿಗೆ ಮೇಳವು ಡೇರೆ ಮೇಳವಾದಾಗ ಅದಕ್ಕೆ ನಿಯುಕ್ತಿಗೊಂಡು ಅಲ್ಲಿ ಸುಮಾರು ಎರಡು ಮೂರು ವರುಷಗಳ ಕಾಲ ವೇಷವನ್ನು ಮಾಡಿದ್ದರು. ಈ ಮೇಳದಲ್ಲಿ ಮಾರ್ವಿ ಸುಬ್ರಾಯ ಹೆಬ್ಬಾರ್, ಜಗನ್ನಾಥ ಶೆಟ್ಟಿ ನಗರ, ವಡ್ಡಿನಬೈಲು ಶೀನಯ್ಯ, ಜೋಗಪ್ಪ ಶೆಟ್ಟಿ, ಮೊಳಹಳ್ಳಿ ಅಂತಯ್ಯ, ನಿವಣೆ ಗಣೇಶ್ ಭಟ್, ಜಮದಗ್ನಿ ಶೀನ, ಪಡುಕೋಣೆ ರಾಮ ಐತಾಳ್ ಮುಂತಾದ ಕಲಾವಿದರಿದ್ದರು. 1963-1964ರ ಸಮಯದಲ್ಲಿ ನಾರಾಯಣಪ್ಪ ಉಪ್ಪೂರರು ಪೆರಡೂರು ಮೇಳದಲ್ಲಿ(ಈಗಿರುವ ಮೇಳವಲ್ಲ. ಹಿಂದೆ ಇದ್ದ ಮೇಳ) ಪ್ರಧಾನ ಭಾಗವತರಾಗಿದ್ದ ಸಂದರ್ಭದಲ್ಲಿ ರಾಮಪ್ಪನವರು ಆ ಮೇಳದ ಪ್ರಧಾನ ಸ್ತ್ರೀವೇಷಧಾರಿಗಳಾಗಿ ಪಾತ್ರವನ್ನು ನಿರ್ವಹಿಸುತ್ತಿದ್ದರು. ಎರಡು ವರ್ಷ ಈ ಮೇಳದಲ್ಲಿ ತಿರುಗಾಟವನ್ನು ಮಾಡಿದ ರಾಮಪ್ಪನವರು ಮುಂದೆ ಕೊಲ್ಲೂರು ಮೇಳಕ್ಕೆ ಸೇರ್ಪಡೆಗೊಂಡಿದ್ದರು. ಆ ಮೇಳದಲ್ಲಿ ವೀರಭದ್ರ ನಾಯಕರು, ಶಿರಿಯಾರ ಮಂಜು ನಾಯಕರು, ಬೇಳಂಜೆ ತಿಮ್ಮಪ್ಪ ನಾಯಕರು , ಹಳ್ಳಾಡಿ ಕುಷ್ಟ ಮುಂತಾದ ಕಲಾವಿದರಿದ್ದರು. ಆರ್ಗೋಡು ರಾಮಚಂದ್ರ ಶಾನುಭೋಗರು ಆ ಮೇಳದ ಯಜಮಾನರಾಗಿ ವೇಷಧಾರಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಆದರೆ ಆ ಮೇಳ ಅಷ್ಟೊಂದು ಸುಸೂತ್ರವಾಗಿ ನಡೆಯಲಿಲ್ಲ. ಕಲಾವಿದರ ಕೊರತೆಯಿಂದಾಗಿ ರಾಮಪ್ಪನವರು ಒಬ್ಬರೇ ಬೆಳಗಿನ ತನಕ ಐದಾರು ಪಾತ್ರಗಳನ್ನು ನಿರ್ವಹಿಸಬೇಕಿತ್ತು. ಅಂತಹ ಸಂದರ್ಭದಲ್ಲಿಯೂ ಕೂಡ ದುಃಖಿಸದೇ ಮೇಳಕ್ಕಾಗಿ ರಾಮಪ್ಪನವರು ದುಡಿದರು. ನಿರಂತರವಾಗಿ ಮೇಳ ನಷ್ಟವನ್ನು ಅನುಭವಿಸುತ್ತಲೇ ಸಾಗಿ ಅರ್ಧಕ್ಕೆ ನಿಂತಿತು. ಸಂಬಳವೂ ಸಿಗಲಿಲ್ಲ. ಕಲಾವಿದರು ಅತಂತ್ರರಾದರು. ದುಡಿಮೆ ಇಲ್ಲದೇ ರಾಮಪ್ಪನವರು ಸಹ ಮನೆಗೆ ಬರಬೇಕಾಯಿತು.

ದಕ್ಷಯಜ್ಞದ ದಾಕ್ಷಾಯಿಣಿ, ಭಸ್ಮಾಸುರ ಮೋಹಿನಿಯ ಮೋಹಿನಿ, ದ್ರೌಪದಿ ಪ್ರತಾಪದ ದ್ರೌಪದಿ, ಮೀನಾಕ್ಷಿ ಕಲ್ಯಾಣದ ಮೀನಾಕ್ಷಿ, ಮಾಯಾಪುರಿ ಮದನಾಕ್ಷಿ, ಪಂಚವಟಿಯ ಮಾಯಾ ಶೂರ್ಪನಖಿ, ಮಾಯಾ ಹಿಡಂಬೆಯ ಹಿಡಂಬೆ, ಶ್ವೇತಕುಮಾರ ಚರಿತ್ರೆಯ ಲೋಕಸುಂದರಿ ಹೀಗೆ ಅನೇಕ ಪಾತ್ರಗಳನ್ನು ರಾಮಪ್ಪನವರು ನಿರ್ವಹಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದರು. ನಲ್ವತ್ತು ವರುಷದ ಬಹುದೀರ್ಘ ಯಕ್ಷಗಾನದ ಅನುಭವವನ್ನು ಹೊಂದಿದ್ದ ರಾಮಪ್ಪನವರಿಗೆ ಹಿರಿಯ ಕಿರಿಯ ಕಲಾವಿದರ ದೊಡ್ಡ ಒಡನಾಟದ ಅನುಭೂತಿ ಸಿಕ್ಕಿದೆ. ಶ್ರೀ ಜಗನ್ನಾಥ ಶೆಟ್ಟಿ ನಗರ, ಶ್ರೀ ಚಂದಯ್ಯ ಶೆಟ್ಟಿ ಮಜ್ಜಿಗೆಬೈಲು, ಶ್ರೀ ಆನಂದ ಶೆಟ್ಟಿ ಮಜ್ಜಿಗೆಬೈಲು, ಶ್ರೀ ಕೊರ್ಗು ನಾಗಯ್ಯ ಶೆಟ್ಟಿ ಹಾಸ್ಯಗಾರ, ಶ್ರೀ ವೆಂಕಟರಮಣಯ್ಯ ಹಳ್ಳದಾಚೆ, ಶ್ರೀ ಸಲ್ಬಾಡಿ ಶಿವರಾಮ ಶೆಟ್ಟಿ, ಶ್ರೀ ಮೊಹನದಾಸ ಶೆಣೈ, ಶ್ರೀ ಹೊಳೆಮಘೆ ನಾಗಪ್ಪ, ಶ್ರೀ ಪರಮೇಶ್ವರ ಭಟ್ ಹಳ್ಳಿಹೊಳೆ, ಶ್ರೀ ಎಸ್.ಆರ್ ಹೆಗಡೆ ಉಳವಿ, ಶ್ರೀ ಚಕ್ರಮೈದಾನ ಕೃಷ್ಣ, ಶ್ರೀ ಮೊಳಹಳ್ಳಿ ಆಂತಯ್ಯ ಶೆಟ್ಟಿ, ಶ್ರೀ ಶಿರಿಯಾರ ಮಂಜು ನಾಯ್ಕ್, ಶ್ರೀ ಜಯಂತ ನಾಯ್ಕ ಬೇಳೆಂಜೆ, ಶ್ರೀ ನಾರ್ಣಪ್ಪ ಉಪ್ಪೂರ, ಶ್ರೀ ರಾಮದಾಸ ಸಾಮಗ, ಶ್ರೀ ಕೋಟ ವೈಕುಂಠ, ಶ್ರೀ ತೆಕ್ಕಟ್ಟೆ ಆನಂದ ಮಾಸ್ತರ್(ಕೊಲ್ಲೂರು ಮೇಳ), ಶ್ರೀ ಶೇಣಿ ಗೋಪಾಲಕೃಷ್ಣ ಭಟ್ (ಕೊಲ್ಲೂರು ಮೇಳ), ಶ್ರೀ ಕೊಗ್ಗಾಚಾರಿ ಕೊಲ್ಲೂರು, ಶ್ರೀ ಎಂ ಎ ನಾಯಕ್, ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ, ಶ್ರೀ ಕಾಳಿಂಗ ನಾವುಡ, ಶ್ರೀ ಸಂಕದಹೊಳೆ ಕುಷ್ಠ, ಶ್ರೀ ನರಸಿಂಹದಾಸ ಮರವಂತೆ, ಶ್ರೀ ಅಪ್ಪಣ್ಣ ಆಚಾರಿ ಮದ್ದಲೆಗಾರರು, ಶ್ರೀ ಶ್ರೀನಿವಾಸಾಚಾರಿ ಹುಂಚದಕಟ್ಟೆ, ಶ್ರೀ ಮರಿಯಪ್ಪ ಆಚಾರ್ ನೆಲ್ಲೂರು, ಶ್ರೀ ಜನಾರ್ದನ್ ಆಚಾರ್, ಶ್ರೀ ಒಡ್ಡಿನಬೈಲು ಶಿವರಾಮಯ್ಯ, ಶ್ರೀ ಮಳಲಿ ಶೀನಯ್ಯ, ಶ್ರೀ ಜಮದಗ್ನಿ ಶೀನಣ್ಣ, ಶ್ರೀ ಹಾರಾಡಿ ಬಾಬಣ್ಣ, ಶ್ರೀ ವಂಡಾರು ಬಸವ, ಶ್ರೀ ವಡ್ಡರ್ಸೆ ಕಿಟ್ಟಣ್ಣ, ಶ್ರೀ ಕೊಪ್ಪ ಮುತ್ತ, ಶ್ರೀ ಜನ್ಯಾಡಿ ಗೋಪು, ಶ್ರೀ ಅರಳಗೋಡು ಮಾಧವನಾಯಕ, ಶ್ರೀ ತಿಮ್ಮಪ್ಪನಾಯಕ, ಶ್ರೀ ವಾಸುದೇವ ಸಾಮಗರು, ಶ್ರೀ ರಾಮ ನಾಯಕ್ ಮೇಗರವಳ್ಳಿ, ಶ್ರೀ ಬೈಕಾಡಿ ಗೋಪಾಲರಾವ್ ಮುಂತಾದವರನ್ನು ಅವರ ಈ ಪಟ್ಟಿಯಲ್ಲಿ ಸೇರಿಸಬಹುದಾಗಿದೆ.

ಮಲೆನಾಡಿನ ಬಹುತೇಕ ವೃತ್ತಿ ಕಲಾವಿದರಿಗೆ ಬಹುಮುಖ್ಯವಾದ ಸಮಸ್ಯೆ ಎಂದರೆ ಮನೆಯ ಕೃಷಿ ಮತ್ತಿತ್ತರ ಚಟುವಟಿಕೆಗಳನ್ನು ಬಿಟ್ಟು ದೂರದ ಕರಾವಳಿಯ ಮೇಳಗಳಲ್ಲಿ ತಿರುಗಾಡುವುದು ಕಷ್ಟಕರವಾಗುವುದನ್ನು ಗಮನಿಸಬಹುದು. ಇಂತಹ ಸಮಸ್ಯೆ ರಾಮಪ್ಪನವರಿಗೂ ಕಾಡಿತ್ತು. ಅತ್ತ ಮೇಳದ ತಿರುಗಾಟದಲ್ಲಿ ಪೂರ್ಣವಾಗಿ ಭಾಗವಹಿಸಲಾರದೆ ಇತ್ತ ಕೃಷಿ, ಮನೆಯನ್ನು ಬಿಟ್ಟು ಇರುವುದಕ್ಕೆ ಸಾಧ್ಯವಾಗದ ಸ್ಥಿತಿಯಲ್ಲಿ, ರಾಮಪ್ಪನವರು ಘಟ್ಟದ ಮೇಲಿನ ಮೇಳಗಳತ್ತ ಗಮನವನ್ನು ಹರಿಸಿದ್ದರು. ಮನೆಯ ಹತ್ತಿರದ ಚಿಕ್ಕಹೊನ್ನೇಸರ ಮೇಳ ಆಗ ನಿಂತಿತ್ತು. ಆಗ ಚಿಕ್ಕಮಗಳೂರಿನ ಬಾಳೆಹೊಳೆಯಲ್ಲಿ ಬಾಳೆಹೊಳೆ ಮೇಳ ಪ್ರಾರಂಭವಾಗಿತ್ತು. ಆ ಮೇಳದಲ್ಲಿ ರಾಮಪ್ಪನವರು ಒಂದೆರಡು ವರುಷ ತಿರುಗಾಟವನ್ನು ಮಾಡಿದರು. ಈ ಸಮಯದಲ್ಲಿ ಹಳ್ಳದಾಚೆ ವೆಂಕಟರಮಣಯ್ಯ, ಕೃಷ್ಣಮೂರ್ತಿ ಮುಂತಾದವರು ಈ ಮೇಳದ ಕಲಾವಿದರಾಗಿದ್ದರು. ಶೃಂಗೇರಿಯ ರವೀಂದ್ರ ಅವರು ಹೊಸದಾಗಿ ಶೃಂಗೇರಿ ಮೇಳವನ್ನು ಮಾಡಿದ್ದಾಗ ಆ ಮೇಳದ ಕಲಾವಿದರಾಗಿಯೂ ಸಹ ತಿರುಗಾಟವನ್ನು ಮಾಡಿದ್ದರು.

ಒಮ್ಮೆ ಆರಗದಲ್ಲಿ ಕಲಾನಾಥೇಶ್ವರ ದೇವಸ್ಥಾನದ ರಥೋತ್ಸವದ ಪ್ರಯುಕ್ತ ಅತಿಥಿ ಕಲಾವಿದರ ಯಕ್ಷಗಾನವನ್ನು ಆಯೋಜಿಸಿದ್ದರು. ಈಗಿನಂತೆ ಆಧುನಿಕ ರಂಗಸ್ಥಳದ ಕಲ್ಪನೆಗಳು ಇಲ್ಲದೆ ಇರುವ ಕಾಲದಲ್ಲಿ ಬಾಳೆ ಮರದ ಕಂಬಗಳನ್ನು ಚೌಕಾಕಾರದಲ್ಲಿ ನೆಟ್ಟು , ಯಾರಿಂದಲೋ ಪಡೆದ ಅಡಿ ಮಂಚವನ್ನು ಇಟ್ಟು, ರಂಗಸ್ಥಳದ ಮೇಲೆ ಅಡಿಕೆ ಸೋಗೆಗಳಿಂದ ಮುಚ್ಚಿ, ಸುತ್ತಲೂ ಕಂದೀಲನ್ನು ಹಚ್ಚಿದರೆ ರಂಗಸ್ಥಳ ನಿರ್ಮಾಣಗೊಳ್ಳುತ್ತಿತ್ತು. ಅಂತೆಯೇ ಸಂಘಟಕರು ತಮಗೆ ತಿಳಿದಂತೆ ವ್ಯವಸ್ಥೆಯನ್ನು ಮಾಡಿದ್ದರು. ಸಂಜೆ ಆಟ ಪ್ರಾರಂಭವಾಗಬೇಕು. ಮಾಯಾಪುರಿ ಮಹಾತ್ಮೆ ವೀರಮಣಿ ಲವಕುಶ ಎಂಬ ಪ್ರಸಂಗಗಳು ಸಂಯೋಜನೆಗೊಂಡಿದ್ದವು. ಮೂರು ನಾಲ್ಕು ಜನ ಅತಿಥಿ ಕಲಾವಿದರುಗಳು ಕಾರ್ಯಕ್ರಮಕ್ಕೆ ಬಂದಿದ್ದರು. ಬಂದವರ್ಯಾರು ಕೂಡ ಲವಕುಶ ಪ್ರಸಂಗದ ಶತ್ರುಘ್ನ ಪಾತ್ರವನ್ನು ಮಾಡುವುದಿಲ್ಲ, ತಾನು ರಾಮನ ಪಾತ್ರವನ್ನು ಮಾಡುತ್ತೇನೆ ಎಂಬಂತೆ ಹಠಕ್ಕೆ ಬಿದ್ದಿದ್ದರು. ಈಗಿನಂತೆ ಪಾತ್ರಗಳ ಪಾತ್ರಧಾರಿಗಳನ್ನು ಪೂರ್ವ ನಿಗದಿಪಡಿಸುತ್ತಿರಲಿಲ್ಲ. ಭಾಗವತರಾಗಿದ್ದ ಕೋಡೂರು ಮಂಜ ಭಾಗವತರು ಕಲಾವಿದರನ್ನು ಹೊಂದಾಣಿಸುವ ಪ್ರಯತ್ನವನ್ನು ಮಾಡಿದ್ದರು. ಒಂದು ಗಂಟೆ ಕಳೆದರೂ ಕೂಡ ಯಾರೂ ಕೂಡ ತಾವು ಅಂದುಕೊಂಡ ಪಾತ್ರಗಳನ್ನು ಬಿಟ್ಟುಕೊಡಲು ಒಪ್ಪಿರಲಿಲ್ಲ. ಆ ಕಾರ್ಯಕ್ರಮಕ್ಕೆ ರಾಮಪ್ಪನವರು ಕೂಡ ಹೋಗಿದ್ದರು. ಅವರಿಗೆ ಮಾಯಪುರಿಯಲ್ಲಿ ಮದನಾಕ್ಷಿ ಪಾತ್ರ ನಿಗದಿಯಾಗಿತ್ತು. ದಿಕ್ಕುತೋಚದೆ ಕುಳಿತಿದ್ದ ಭಾಗವತರನ್ನು ರಾಮಪ್ಪನವರು ಸಮಾಧಾನಪಡಿಸುತ್ತ ತಾನೇ ಶತ್ರುಘ್ನ ಪಾತ್ರವನ್ನು ಮಾಡುವುದಾಗಿ ತಿಳಿಸಿ, ಮದನಾಕ್ಷಿ ಪಾತ್ರವನ್ನು ಮಾಡಿದ ನಂತರ ಆ ಪಾತ್ರವನ್ನೂ ಮಾಡಿ ಅಂದಿನ ಆಟ ಮುಂದುವರೆಯುವುದಕ್ಕೆ ಕಾರಣರಾಗಿದ್ದರು. ಒಮ್ಮೆ ನೊಣಬೂರಿನಲ್ಲಿ ಸುಧನ್ವ ಕಾಳಗ ಹಾಗೂ ರತಿಕಲ್ಯಾಣ ಪ್ರಸಂಗ ನಿಗದಿಯಾಗಿತ್ತು. ಅದರಲ್ಲಿ ಸುಧನ್ವ ಕಾಳಗದ ಪ್ರಭಾವತಿ ಪಾತ್ರವನ್ನು ರಾಮಪ್ಪನವರು ನಿರ್ವಹಿಸಿದ್ದರು. ಸುಧನ್ವ ಕಾಳಗದ ಮಧ್ಯದಲ್ಲಿ ಇದ್ದಕ್ಕಿದ್ದ ಹಾಗೆ ಭಾಗವತರಿಗೆ ಹೊಟ್ಟೆ ನೋವು ಪ್ರಾರಂಭವಾಗಿತ್ತು. ಆ ಕ್ಷಣದಲ್ಲಿ ಏನೇ ಮಾಡಿದರು ನೋವು ತಡೆದುಕೊಳ್ಳುವ ಸ್ಥಿತಿ ಇರದೇ ಮುಂದಿನ ಪ್ರಸಂಗಕ್ಕೆ ಭಾಗವತಿಕೆಯನ್ನು ಮಾಡುವುದಕ್ಕೆ ಅಸಾಧ್ಯವೆನಿಸಿತ್ತು. ಆ ಸಮಯದಲ್ಲಿ ಮತ್ತೊಬ್ಬ ಭಾಗವತರು ಕೂಡ ಇರಲಿಲ್ಲ. ತಲ್ಲಣವನ್ನು ಸೂಕ್ಷ್ಮವಾಗಿ ಅವಲೋಕಿಸಿದ ರಾಮಪ್ಪನವರು, ತಕ್ಷಣವೇ ತಮ್ಮ ವೇಷವನ್ನು ಕಳಚಿ, ಪಂಚೆಯನ್ನು ಉಟ್ಟು ಭಾಗವತಿಕೆಯ ಅಡಿಮಂಚವನ್ನು ಏರಿ ಭಾಗವತಿಕೆಯನ್ನು ಮಾಡಿ ಆ ಪ್ರಸಂಗವನ್ನು ಮುಂದುವರೆಸಿದ್ದರು.

ಯಾವುದೋ ಮೇಳದಲ್ಲಿ ರಾಮಪ್ಪನವರು ತಿರುಗಾಟವನ್ನು ಮಾಡುತ್ತಿದ್ದರು. ಆ ಮೇಳದ ಸಂಚಾಲಕರು ರಾಮಪ್ಪನವರಿಗೆ ಸರಿಯಾಗಿ ಸಂಬಳವನ್ನು ಕೊಡುತ್ತಿರಲಿಲ್ಲ. ಇದರಿಂದ ರಾಮಪ್ಪನವರು ಬೇಸರಗೊಂಡಿದ್ದರು. ಒಂದು ದಿನ ಯಾವುದೋ ಊರಿನಲ್ಲಿ ದೇವಿ ಮಹಾತ್ಮೆ ಪ್ರಸಂಗ ನಿಗದಿಯಾಗಿತ್ತು. ಎಂದಿನಂತೆ ರಾಮಪ್ಪನವರು ದೇವಿಯ ಪಾತ್ರವನ್ನು ಮಾಡಬೇಕಿತ್ತು. ಸಂಬಳವನ್ನು ಸರಿಯಾಗಿ ನೀಡದಿದ್ದ ಸಂಚಾಲಕರಿಗೆ ಬುದ್ಧಿಯನ್ನ ಕಲಿಸಬೇಕು ಎಂದುಕೊಂಡ ರಾಮಪ್ಪನವರು, ಆ ದಿನ ತನಗೆ ಸೌಖ್ಯವಿಲ್ಲ ಎಂದುಕೊಂಡು ರಜೆಯನ್ನು ಮಾಡಿ, ವೇಷದಿಂದ ದೂರ ಉಳಿದಿದ್ದರು. ಬದಲಾಗಿ ಕ್ಯಾಂಪಿನ ಸಮೀಪವಿದ್ದ ಅವರ ಸ್ನೇಹಿತರ ಮನೆಗೆ ಹೋಗಿದ್ದರು. ರಾತ್ರಿ ಸ್ನೇಹಿತರೊಂದಿಗೆ ಮಾತುಕತೆಗಳನ್ನು ಮಾಡಿ ಊಟವನ್ನ ಮಾಡಿ ಮಲಗಿದ್ದರು. ಮಧ್ಯರಾತ್ರಿಯ ಸಮಯವಿರಬೇಕು. ಇದ್ದಕ್ಕಿದ್ದ ಹಾಗೆ ಅವರ ಕನಸಿನಲ್ಲಿ ಹುಲಿ ಬಂದು ಎರಗಿದಂತ ವಿಚಿತ್ರ ಅನುಭವವಾಗಿ, ಜೋರಾಗಿ ಕೂಗುತ್ತಾ ಎದ್ದು ಕುಳಿತರು. ಆ ಮನೆಯವರಿಗೆಲ್ಲ ಕೂಗಿಗೆ ಎಚ್ಚರವಾಗಿ ಅವರ ಬಳಿ ಬಂದು ವಿಚಾರಿಸಿದರು. ರಾಮಪ್ಪನವರು ನಡೆದಿರುವ ಘಟನೆಯನ್ನು ಸವಿಸ್ತಾರವಾಗಿ ವಿವರಿಸಿದರು. ಕಲೆಗೆ ತನ್ನಿಂದ ಅಪಚಾರವಾಯಿತು ಎಂದು ತೀರ್ಮಾನಿಸಿ, ಪುನಃ ಆ ರಾತ್ರಿಯಲ್ಲಿ ಮೇಳದ ಚೌಕಿಮನೆಗೆ ಹೋಗಿ, ದೇವರಿಗೆ ನಮಸ್ಕರಿಸಿ, ಆ ದಿನದ ದೇವಿ ಪಾತ್ರವನ್ನು ನಿರ್ವಹಿಸಿದ್ದರು.

ಹಲವು ಮೇಳಗಳಲ್ಲಿ ಕಲಾವಿದರಾಗಿ ತಿರುಗಾಟವನ್ನು ಮಾಡಿದ್ದ ರಾಮಪ್ಪನವರು ವೃತ್ತಿ ಕಲಾವಿದರಾಗಿ ಮುಂದುವರೆಯುವುದಕ್ಕೆ ಇಚ್ಛಿಸದೇ ಮುಂದೆ ಹವ್ಯಾಸಿ ಕಲಾವಿದರಾಗಿ ಉಳಿಯುವುದಕ್ಕೆ ಬಯಸಿದ್ದರು. ಯಕ್ಷಗಾನದ ಭಾಗವತಿಕೆ, ವೇಷಗಾರಿಕೆ, ನೃತ್ಯ ಹೀಗೆ ಹಲವು ವಿಭಾಗಗಳನ್ನು ತಿಳಿದಿದ್ದ ಅವರು, ಊರಿನ ಹಲವು ಸಂಘಸಂಸ್ಥೆಗಳಿಗೆ ಯಕ್ಷಗಾನ ತರಬೇತಿಯನ್ನು ನೀಡಿದ್ದರು. ಸಾಗರದ ಸಮೀಪದ ಮಂಕಾಳೆಯ ಯುವಕರ ತಂಡ, ಶ್ರೀ ಮಹಾಬಲೇಶ್ವರ ಕಲಾ ತಂಡ ಬೆಳಗೋಡು ಮುಂತಾದ ತಂಡಗಳಿಗೆ ಅವರ ನಿರ್ದೇಶನ ಮಾಡಿ ಅವರಿಂದ ಅನೇಕ ಪ್ರದರ್ಶನಗಳನ್ನು ಮಾಡಿಸಿದ್ದಾರೆ. ಗುಂಡುಮನೆ ನರಸಿಂಹಯ್ಯನವರ ಮಾರುತಿಪುರ ಮೇಳದಲ್ಲಿಯೂ ಸಹ ರಾಮಪ್ಪನವರು ಅನೇಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ರಾಮಪ್ಪನವರು ಮಳೆಗಾಲದಲ್ಲಿ ಮೇಳಗಳು ತಿರುಗಾಟ ನಡಸದೇ ಇರುವ ಸಂದರ್ಭದಲ್ಲಿ ಚಿಕ್ಕ ಮೇಳವನ್ನು ಮಾಡಿದ್ದರು. ಚೌತಿಯಿಂದ ಆರಂಭವಾಗುತ್ತಿದ್ದ ಈ ಮೇಳವು, ಮಲೆನಾಡಿನ ಹಲವು ಭಾಗದಲ್ಲಿ ಸಂಚರಿಸುತ್ತಿತ್ತು. ಈ ತಂಡದಲ್ಲಿ ಸಹಾಯಕರಾಗಿ ಬಾವ ದೇವಣ್ಣ, ಅಕ್ಕ ಹೂವಮ್ಮ ಜೊತೆಗಿದ್ದರು. ಎಂಪಿಸಿ ಹಾಲಪ್ಪನವರು ಕಟ್ಟು ವೇಷಕ್ಕೆ ನಿಗದಿಯಾಗಿದ್ದರೆ, ರಾಮಪ್ಪನವರು ಸ್ತ್ರೀ ವೇಷ ಮಾಡುತ್ತಿದ್ದರು. ವೆಂಕಟದಾಸರು ಭಾಗವತಿಯನ್ನು ಮಾಡುತ್ತಿದ್ದರು. ರಾಮಪ್ಪನವರು ಚಿಕ್ಕಮೇಳವನ್ನು ಸುಮಾರು 25 ವರ್ಷಗಳ ಕಾಲ ಶ್ರದ್ಧೆಯಿಂದ ನಡೆಸಿದ್ದರು. ಹಿರಿಯ ಭಾಗವತರಾಗಿದ್ದ ಅಚ್ಚಣ್ಣ ಆಚಾರ್ ಶೃಂಗೇರಿ, ಕೊಪ್ಪ ಸಂಜೀವ, ನೆಲ್ಲೂರು ಮರಿಯಪ್ಪ ಆಚಾರ್, ನೆಲ್ಲೂರು ಜನಾರ್ಧನ ಆಚಾರ್, ಮಾರುತಿಪುರದ ಮಂಜುನಾಥ ಪೂಜಾರಿ, ಭೋಜರಾಜ, ನರಸಿಂಹ ಮುಂತಾದವರು ಅವರಿಗೆ ಕಲಾವಿದರಾಗಿ ಸಾಥ್ ನೀಡಿದ್ದಾರೆ. ಚಿಕ್ಕಮೇಳದ ಜೊತೆಗೆ ಮಾರುತಿಪುರ ಸಮೀಪದ ನೀರೇರಿ ಎಂಬಲ್ಲಿ ಮೂಡಲಪಾಯ ಯಕ್ಷಗಾನ ತಂಡದಲ್ಲಿಯೂ ಸಹ ರಾಮಪ್ಪನವರು ಪಾತ್ರವನ್ನು ನಿರ್ವಹಿಸುತ್ತಿದ್ದರು. ಸುಮಾರು ಎಪ್ಪತ್ತು ಎಂಬತ್ತು ವರುಷಗಳ ಹಿಂದೆ ಕೊಪ್ಪ ಶೃಂಗೇರಿ ಕಡೆಗಳಲ್ಲಿ ಹೂವಿನಕೋಲು ಪದ್ದತಿ ಅಷ್ಟೊಂದು ಪ್ರಚಲಿತದಲ್ಲಿರಲಿಲ್ಲ. ಇದು ಆ ವೇಳೆಗೆ ಮಲೆನಾಡಿನ ಕೆಲವೇ ಕೆಲವು ಭಾಗಗಳಲ್ಲಿ ಮಾತ್ರ ಇರುವುದನ್ನು ಕಾಣಬಹುದಾಗಿದೆ. ಇದನ್ನು ಮನಗಂಡ ರಾಮಪ್ಪನವರು ನೆಲ್ಲೂರು ಮರಿಯಪ್ಪ ಆಚಾರ್ ರೊಂದಿಗೆ ಒಡಗೂಡಿಕೊಂಡು ಮಕ್ಕಳಿಗೆ ದ್ವಿಪದಿಯನ್ನು ಕಲಿಸಿಕೊಟ್ಟು, ತಮ್ಮದೇಯಾದ ಹೂವಿನಕೋಲು ತಂಡವನ್ನು ರೂಪಿಸಿ, ಕೊಪ್ಪ, ನಾರ್ವೆ, ಅಗಳಗಂಡಿ, ಒಂದಗದ್ದೆ ಮುಂತಾದ ಕಡೆಗಳಲ್ಲಿ ತಿರುಗಾಟವನ್ನು ಸಹ ಮಾಡಿದ್ದಾರೆ.

1963ರಲ್ಲಿ ಗೌರಮ್ಮನವರನ್ನು ಮದುವೆಯಾದ ರಾಮಪ್ಪನವರಿಗೆ ಗೋಪಾಲಮೂರ್ತಿ, ರಾಘವೇಂದ್ರ, ವೀಣಾ, ಯೋಗೀಶ್ ಎಂಬ ನಾಲ್ವರು ಮಕ್ಕಳು. ಅವರ ಹಿರಿಯ ಮಗ ಗೋಪಾಲಮೂರ್ತಿಯವರು ಯಕ್ಷಗಾನ ರಂಗದಲ್ಲಿ ಸಕ್ರಿಯರಾಗಿ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಅಭ್ಯಾಸವನ್ನು ಮಾಡಿ, ರಂಜದಕಟ್ಟೆ, ನಾಗರಕೂಡಿಗೆ, ಗೋಳಿಗರಡಿ, ಕಮಲಶಿಲೆ, ಮಂದಾರ್ತಿ, ಮಾರಣಕಟ್ಟೆ, ಮಡಾಮಕ್ಕಿ, ಸಾಲಿಗ್ರಾಮ ಮುಂತಾದ ಮೇಳಗಳಲ್ಲಿ ಭಾಗವತರಾಗಿ ದುಡಿದು, ಈಗ ಹವ್ಯಾಸಿ ಕಲಾವಿದರಾಗಿ ಮುಂದುವರೆದಿದ್ದಾರೆ. ಇದರ ಜೊತೆಗೆ ಅವರು ಅನೇಕ ಮೇಳಗಳಲ್ಲಿ ವ್ಯವಸ್ಥಾಪಕರಾಗಿಯೂ ಸಹ ಕಾರ್ಯವನ್ನು ನಿರ್ವಹಿಸಿದ್ದಾರೆ. ರಾಮಪ್ಪನವರ ಇನ್ನೋರ್ವ ಸುಪುತ್ರ ರಾಘವೇಂದ್ರ ಅವರು ಛಾಯಾಗ್ರಾಹಕರಾಗಿ, ಜೀವ ವಿಮಾ ನಿಗಮದಲ್ಲಿ ಕೆಲಸವನ್ನು ಮಾಡುತ್ತಾ, ಪ್ರಸಂಗ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರೇಮ ದುರಂತ. ಧರ್ಮದೇವತೆ. ನಾಗದೇವತೆ, ನಾಗ ಪ್ರತಿಜ್ಞೆ ಮುಂತಾದ ಅವರ ಪ್ರಸಂಗಗಳು, ಈಗಾಗಲೇ ಬಯಲಾಟ ಮೇಳಗಳಲ್ಲಿ ನೂರಾರು ಪ್ರಯೋಗಗಳನ್ನು ಕಂಡಿವೆ. ಅವರ ಮತ್ತೋರ್ವ ಸುಪುತ್ರ ಯೋಗೀಶ್ ಕುಮಾರ್ ಅವರು ಬಿಎ ಪದವಿಯನ್ನು ಪೂರೈಸಿ, ಸರ್ಕಾರಿ ಕೆಲಸ ಒಲಿದು ಬಂದರೂ, ಬೇಡವೆಂದು ತಿರಸ್ಕರಿಸಿ, ಯಕ್ಷಗಾನವನ್ನು ಕಲಿಯಬೇಕೆಂಬ ಆಸ್ಥೆಯಿಂದ ಉಡುಪಿ ಕೇಂದ್ರದಲ್ಲಿ ಅಭ್ಯಾಸವನ್ನು ಮಾಡಿ, ಬಗ್ವಾಡಿ, ಸಿಗಂದೂರು, ಸೀತೂರು, ಗುತ್ಯಮ್ಮ ಮುಂತಾದ ಮೇಳಗಳಲ್ಲಿ ತಿರುಗಾಟವನ್ನು ಮಾಡಿ, ಯುವ ಕಲಾವಿದರಾಗಿ ಬೆಳೆದಿದ್ದರು. ಆದರೆ ದುರದೃಷ್ಟವಶಾತ್ ಯಕ್ಷಗಾನವನ್ನು ಮುಗಿಸಿ ಮನೆಗೆ ಬರುತ್ತಿರುವಾಗ, ಮಾರ್ಗಮಧ್ಯದಲ್ಲಿ ಅಪಘಾತಕ್ಕೀಡಾಗಿ ಬಲಗಾಲಿನ ಸಾಮರ್ಥ್ಯವನ್ನು ಕಳೆದುಕೊಂಡು, ಬೆನ್ನುಹುರಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರೀಗ ಯಕ್ಷಗಾನದಿಂದ ದೂರವೇ ಉಳಿರುವುದು ನೋವಿನ ಸಂಗತಿಯಾಗಿದೆ.

ಆಗಿನ್ನೂ ರಾಮಪ್ಪನವರಿಗೆ ನಲ್ವತ್ತೆಳರ ಪ್ರಾಯ. ಅವರ ಸಂಪಾದನೆಯಲ್ಲಿಯೇ ಕುಟುಂಬ ನಡೆಯುತ್ತಿತ್ತು. ಮಕ್ಕಳು ಓದುತ್ತಿದ್ದರು. ಎಷ್ಟೋ ವರುಷದಿಂದ ಕಷ್ಟದಲ್ಲಿ ದಣಿದಿದ್ದ ಬದುಕಿಗೆ ನೆಮ್ಮದಿಯನ್ನು ಆಶ್ರಯಿಸುವ ಸಮಯ ಆದಾಗಿತ್ತು. ರಂಗದಲ್ಲಿ ತನ್ನಿಂದ ಸಾಧ್ಯವಾಗುವ ಕೆಲಸ ಮಾಡುವುದಕ್ಕೆ, ತಮ್ಮ ಆಶಯಗಳನ್ನು ನೇರವೇರಿಸಿಕೊಳ್ಳುವ ಕನಸುಗಳೂ ಕೂಡ ಇದ್ದವು. ಆದರೆ ವಿಧಿ ಸಂಕಲ್ಪ ಬೇರೆಯಾಗಿಯೇ ಇತ್ತು. ಯಾರೂ ಊಹಿಸಿಕೊಳ್ಳಲಾಗದ, ಬದುಕನ್ನೇ ಕಿತ್ತು ತಿನ್ನುವ ಕ್ಯಾನ್ಸರ್ ರೋಗ ಅವರ ಒಡಲನ್ನು ಸೇರಿರುವುದನ್ನು ಅರಿಯುವಾಗ ತಡವಾಗಿ ಹೋಗಿತ್ತು. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಎರಡು ತಿಂಗಳುಗಳ ಕಾಲ ಚಿಕಿತ್ಸೆಯನ್ನು ಪಡೆದಿದ್ದರಾದರೂ ಅದು ಹೆಚ್ಚೇನು ಪ್ರಯೋಜನಕ್ಕೆ ಬಾರಲಿಲ್ಲ. ಡಾಕ್ಟರ್ ಅವರ ’ಸಾಧ್ಯವಿಲ್ಲ’ ಎಂಬ ಅಸಹಾಯಕ ಮಾತುಗಳು ಕುಟುಂಬವನ್ನು ಗಾರುಗೆಡಿಸಿದ್ದು ಸುಳ್ಳಲ್ಲ. ಮಾಡಬಹುದಾದ ಪ್ರಯತ್ನಗಳೆಲ್ಲ ಕೈಚೆಲ್ಲಿದಾಗ ರಾಮಪ್ಪನವರನ್ನು ಅನಿವಾರ್ಯವೆಂಬಂತೆ ಮನೆಗೆ ಕರೆತಂದಿದ್ದರು. ಆದರೆ ಹೆಚ್ಚು ಕಾಲ ಉಳಿಯುವುದಕ್ಕೆ ಅವಕಾಶವಿಲ್ಲದೇ ಅವರು ಜುಲೈ 10 1988ರಲ್ಲಿ ತಮ್ಮ ಈ ಲೋಕದ ಯಾತ್ರೆಯನ್ನು ಪೂರೈಸಿಬಿಟ್ಟರು.

ರಂಗಭೂಮಿ ವ್ಯವಸ್ಥಿತವಾಗಿ ಪ್ರದರ್ಶನಗಳನ್ನು ನೀಡಬೇಕಿದ್ದರೆ ಅಲ್ಲಿ ಸೇರುವ ಕಲಾವಿದರು, ರಂಗಭೂಮಿಯ ಹಿನ್ನಲೆಯಲ್ಲಿ ಕಾರ್ಯವನ್ನು ನಿರ್ವಹಿಸುವರು ಹೀಗೆ ಹಲವು ಮಂದಿ ಒಂದೇ ಮನಸ್ಸಿನಿಂದ ಕಾರ್ಯವನ್ನು ನಿರ್ವಹಿಸಿದರೆ ಮಾತ್ರವೇ ಪ್ರದರ್ಶನವೆನ್ನುವುದು ಕಳೆಕಟ್ಟುತ್ತದೆ. ರಾಮಪ್ಪನವರ ನಲ್ವತ್ತು ವರುಷದ ಪಯಣವನ್ನು ನೋಡುವಾಗ ಈ ಸಾಲಿನಲ್ಲಿ ಸಲ್ಲುವ ಕಲಾವಿದರೆಂದು ಶ್ರುತಗೊಳ್ಳುತ್ತದೆ. ಅವರು ರಂಗಕ್ಕೆ ಬೇಕಾದ ಕಲಾವಿದರಾಗಿ ಮಾತ್ರವಲ್ಲದೇ, ಆ ಹೊತ್ತಿನ ರಂಗದ ನ್ಯೂನತೆಗಳಿಗೆ ಆ ಕ್ಷಣದಲ್ಲಿ ಸ್ಪಂದಿಸಿ ಸಂವೇದನೆಗೊಳ್ಳುವ ಅವರ ಮನೋಧರ್ಮ ನಿಜಕ್ಕೂ ಶ್ಲಾಘನೀಯವೆನಿಸುತ್ತದೆ. ಅವರ ಎಲ್ಲಾ ಕಾರ್ಯವನ್ನು ಮತ್ತೊಮ್ಮೆ ಮೆಲುಕು ಹಾಕುತ್ತ ಅವರ ಚೇತನಕ್ಕೆ ನಮ್ಮ ನಮನಗಳು.

ಮಾಹಿತಿ ಸಹಕಾರ: ಶ್ರೀ ಕೃಷ್ಣೋಜಿರಾವ್(95 ವರುಷ, ರಂಜದಕಟ್ಟೆ ಮೇಳದಲ್ಲಿ ಕಲಾವಿದರಾಗಿದ್ದವರು), ಶ್ರೀ ರಾಮಣ್ಣ ಕೆಳಮನೆ, ಶ್ರೀ ಪ್ರಭಾಕರ ಹೆಗಡೆ ಈಚಲಕೊಪ್ಪ, ಶ್ರೀ ದಿನೇಶ್ ಉಪ್ಪೂರ, ಶ್ರೀ ಗೋಪಾಲಮೂರ್ತಿ ಹೆಬ್ಬೈಲು,

-ರವಿ ಮಡೋಡಿ, ಬೆಂಗಳೂರು

error: Content is protected !!
Share This