ಜವಳೆಕೆರೆ ನರಸಿಂಹ ಭಟ್(1933-2009)
ಶ್ರೀ ಜವಳೆಕೆರೆ ನರಸಿಂಹ ಭಟ್ಟ ಇವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಜವಳೆಕೆರೆಯಲ್ಲಿ ಸುಬ್ರಾಯ ಭಟ್ಟ ಹಾಗೂ ಯಮುನಾ ದಂಪತಿಗಳ ಮಗನಾಗಿ 21 ಮಾರ್ಚ 1933ರಲ್ಲಿ ಜನಿಸಿದರು. ಇವರಿಗೆ ನಾಗವೇಣಿ, ಪಾರ್ವತಿ, ವೆಂಕಟರಮಣ, ರಾಮಕೃಷ್ಣ ಎಂಬ ಸಹೋದರ, ಸಹೋದರಿಯರು ಇದ್ದಾರೆ. ಹತ್ತು ವರುಷವಿರುವಾಗ ತಂದೆ ಸುಬ್ರಾಯ ಭಟ್ಟರನ್ನು ಕಳೆದುಕೊಂಡರು. ಅವರಿಗೆ ಸ್ಥಿರಾಸ್ತಿ ಇರಲಿಲ್ಲ. ಮನೆಯ ಸ್ಥಿತಿಗತಿಗಳು ತೀರಾ ಕಷ್ಟವಿತ್ತು. ಇಂತಹ ಪರಿಸ್ಥಿತಿಯಲ್ಲೂ ಆರು ತಿಂಗಳು ಕಾಲ ಶಾಲೆಗೆ ಹೋದರು. ನಂತರ ಅದನ್ನು ನಿಲ್ಲಿಸಿ ನಂದೊಳ್ಳಿ ಕೃಷ್ಣ ಭಾಗವತರ ಮನೆಯಲ್ಲಿ ಉಳಿದು, ದನಗಾವಲನ್ನು ಮಾಡುತ್ತಿದ್ದರು.
ಹೀಗೆ ಸಾಗುತ್ತಿದ್ದ ಭಟ್ಟರ ಜೀವನ ಯಕ್ಷಗಾನದತ್ತ ಹೊರಳಿತು. ಹಾಗೆ ನೋಡಿದರೆ ಪೂರ್ವ ಸೂರಿಗಳು ಯಕ್ಷಗಾನದ ಬಗ್ಗೆ ಒಲವು ಹೊಂದಿದವರೇ ಆಗಿದ್ದರು. ಹಿಂದಿನ ತಲೆಮಾರಿನಲ್ಲಿ ಅವರ ಅಜ್ಜ ವೆಂಕಟ್ರಮಣ ಭಟ್ಟರು ಆ ವಲಯದಲ್ಲಿ ಒಳ್ಳೆಯ ಸ್ತ್ರೀ ವೇಷಧಾರಿಯಾಗಿ ಹೆಸರನ್ನು ಗಳಿಸಿದ್ದರು. ಅಂತೆಯೇ ತಂದೆ ಸುಬ್ರಾಯ ಭಟ್ಟರು ಪ್ರಸಿದ್ಧ ಕಟ್ಟುವೇಷಧಾರಿಗಳಾಗಿ ಗುರುತಿಸಿಕೊಂಡಿದ್ದರು. ಇವರು ಕಾರಕುಂಕಿ ಮಹಾಬಲೇಶ್ವರ ಮಾಧವ ಹೆಗಡೆಯವರಿಂದ ಯಕ್ಷಗಾನದ ತರಬೇತಿಯನ್ನು ಪಡೆದವರಾಗಿದ್ದರು. ಆ ಕಾಲದಲ್ಲಿ ಮಹಾಬಲೇಶ್ವರ ಮಾಧವ ಹೆಗಡೆಯವರು ಪ್ರಸಿದ್ಧ ಮದ್ದಲೆವಾದಕರಾಗಿದ್ದರು. ಸುಬ್ರಾಯ ಭಟ್ಟರ ಯಕ್ಷಗಾನ ಆಸಕ್ತಿಯನ್ನು ಗಮನಿಸಿ ಅವರಿಗೆ ಬೇಕಾದ ಯಕ್ಷ ಶಿಕ್ಷಣವನ್ನು ನೀಡಿದ್ದರು. ಮುಂದೆ ಸುಬ್ರಾಯ ಭಟ್ಟರು ಯಲ್ಲಾಪುರ ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವರ ಹೆಸರಿನಲ್ಲಿ ಸಂಘಟಿತವಾದ ಮೇಳದಲ್ಲಿ ವೇಷಗಾರಿಕೆಯನ್ನು ಪ್ರಾರಂಭಿಸಿ, ರಾಮ, ಭೀಮ, ಕೀಚಕ, ವಲಲ ಮುಂತಾದ ಪಾತ್ರಗಳಿಗೆ ಜೀವತುಂಬಿ ಜನಮನ್ನಣೆಯನ್ನು ಪಡೆದಿದ್ದರು.
ಹತ್ತು ಹನ್ನೆರಡು ವರುಷವಿರುವಾಗ ನರಸಿಂಹ ಭಟ್ಟರು ರಾತ್ರಿ ಕಬ್ಬಿನ ಗದ್ದೆಯನ್ನು ಕಾಯುವುದಕ್ಕೆಂದು ಹೋಗುತ್ತಿದ್ದರು. ಆ ಸಮಯದಲ್ಲಿ ಕದ್ದುಮುಚ್ಚಿ ಯಾರಿಗೂ ತಿಳಿಯದಂತೆ ತಾಳಮದ್ದಲೆ /ಆಟವನ್ನು ನೋಡುವುದಕ್ಕೆ ಹೋಗುತ್ತಿದ್ದರು. ಹೀಗೆ ಹೋದಾಗ ಒಂದು ದಿನ ಸುಬ್ರಾಯ ಭಟ್ಟರ ಮಗ ಎಂಬ ಕಾರಣಕ್ಕೆ ತಾಳಮದ್ದಲೆಯಲ್ಲಿ ಅರ್ಥ ಹೇಳುವ ಅವಕಾಶ ಲಭಿಸಿತು. ಆದರೆ ಈ ವಿಷಯ ತಾಯಿಗೆ ಮಾತ್ರ ತಿಳಿದಿರಲಿಲ್ಲ. ಪ್ರದರ್ಶನವನ್ನು ನೋಡಿದವರು, ಕಂಡವರು ಮರುದಿನ ತಾಯಿಗೆ ವರದಿಯನ್ನು ಒಪ್ಪಿಸಿದಾಗ, ತಾಯಿಗೆ ಆಶ್ಚರ್ಯ. ಮಗ ಕದ್ದುಮುಚ್ಚಿ ಹೋಗುವುದರಲ್ಲಿ ಅರ್ಥವಿಲ್ಲೆಂದು ಭಾವಿಸಿ, ಆನುವಂಶಿಕವಾಗಿ ಬಂದ ಯಕ್ಷಗೀಳನ್ನು ತಡೆಯುವುದು ಉಚಿತವಲ್ಲೆಂದು ಬಗೆದು , ಅವರನ್ನು ಹರಸಿ ಯಕ್ಷಗಾನ ಕಲಿಯುವುದಕ್ಕೆ ಕಳುಹಿಸಿಕೊಟ್ಟರು.
1944ರಲ್ಲಿ ನರಸಿಂಹ ಭಟ್ಟರು ಚಿನ್ಮನೆ ಮಹಾಬಲ ಹೆಗಡೆ ಅವರಿಂದ ಹೆಜ್ಜೆಗಳನ್ನು ಕಲಿಯುವುದಕ್ಕೆ ಪ್ರಾರಂಭಿಸಿದರು. ಯಕ್ಷಗಾನವು ಆಸಕ್ತಿಯ ವಿಷಯವಾಗಿದ್ದರಿಂದ ಭಟ್ಟರಿಗೆ ಕಲಿಕೆ ಚೆನ್ನಾಗಿಯೇ ಅಭ್ಯಾಸವಾಯಿತು. ಜೊತೆಗೆ ಗುರುಗಳ ಮೆಚ್ಚುಗೆಯನ್ನು ಗಳಿಸಿದರು. ಅವರ ಉತ್ಸಾಹವನ್ನು ಅರಿತಿದ್ದ ನಂದೊಳ್ಳಿ ಕೃಷ್ಣ ಭಾಗವತರು ಅಣಲಗಾರ ಮೇಳದಲ್ಲಿ ಪಾತ್ರ ಮಾಡುವುದಕ್ಕೆ ಅವಕಾಶವನ್ನು ನೀಡಿದರು. ಮೊದಲು ಬಾಲಗೋಪಾಲ, ಸಖಿ ವೇಷ, ಪಡೆಗಳು ಇತ್ಯಾದಿ ಸಣ್ಣ ಪುಟ್ಟ ವೇಷಗಳನ್ನು ಮಾಡುತ್ತ, ರಂಗದಲ್ಲಿ ಕಾಣಿಸಿಕೊಳ್ಳುತ್ತ ಅದರ ಗೆಯ್ಮೆಯನ್ನು ಸಂಪಾದಿಸಿದರು. ಒಳ್ಳೆಯ ರೂಪ, ಸಹಜವಾಗಿಯೇ ಸ್ತ್ರೀವೇಷಕ್ಕೆ ಹೇಳಿ ಮಾಡಿಸಿದ ಆಕಾರವನ್ನು ಹೊಂದಿದ್ದ ಕಾರಣಕ್ಕೆ ಒಂದಷ್ಟು ವರುಷಗಳ ಕಾಲ ಮೇಳದಲ್ಲಿ ಮುಖ್ಯ ಸ್ತ್ರೀ ಪಾತ್ರಗಳನ್ನು ಮಾಡಿದರು. ಸಿಕ್ಕ ಅವಕಾಶಗಳನ್ನು ಸದುಪಯೋಗಗೊಳಿಸಿಕೊಳ್ಳುತ್ತ ಕಲಾಯಾನದಲ್ಲಿ ಹೆಜ್ಜೆ ಹಾಕಿದರು. ತಮ್ಮ ಬೆಳವಣಿಗೆಯ ಜೊತೆ ಜೊತೆಗೆ ಮೇಳದ ಬೆಳವಣಿಗೆಗೂ ಕಾರಣರಾದರು. ಆ ಕಾಲದಲ್ಲಿ ಪಠದ ಸಂಧಿ ಪ್ರಸಂಗವು ಅಣಲಗಾರ ಮೇಳದಲ್ಲಿ ಜನಮನ್ನಣೆಯನ್ನು ಪಡೆದ ಪ್ರಸಂಗವಾಗಿತ್ತು. ಸಣ್ಣಣ್ಣ ಭಾಗವತರ ಲಕ್ಷ್ಮಣ, ಇಡಗುಂದಿ ಗಜಾನನ ಭಟ್ಟರ ರಾಮ, ನರಸಿಂಹ ಭಟ್ಟರ ಸೀತೆ ಹಾಗೂ ಚಿನ್ಮನೆ ನಾಗ ಹೆಗಡೆಯವರ ಭಾಗವತಿಕೆಯಲ್ಲಿ ಈ ಪ್ರಸಂಗವು ನಡೆಯುತ್ತಿತ್ತು. ನರಸಿಂಹ ಭಟ್ಟರ ಭಾವನಾತ್ಮಕ ಸೀತೆಯ ಪಾತ್ರವನ್ನು ಮೆಚ್ಚಿ ಪ್ರೇಕ್ಷಕರು ಅಭಿಮಾನದಿಂದ ಚಿನ್ನದ ಸರವನ್ನು ತೊಡಿಸಿದ್ದರು. ಜನ ಸಂಪರ್ಕಗಳೇ ಇಲ್ಲದ ಆ ಕಾಲದಲ್ಲಿ ಒಂದು ಸೀಮೆಯ ತಂಡಕ್ಕೆ ಮತ್ತೊಂದು ಸೀಮೆಯಲ್ಲಿ ಅವಕಾಶ ದೊರೆಯುವುದೆಂದರೆ ಅದೊಂದು ಗೌರವದ ಸಂಕೇತವಾಗಿತ್ತು. ಈ ನಿಟ್ಟಿನಲ್ಲಿ ಅಣಲಗಾರ ಮೇಳವು ಪ್ರಸಿದ್ಧಿಯನ್ನು ಪಡೆದು ಸೀಮಾತೀತವಾಗಿ ಪ್ರದರ್ಶನಗಳನ್ನು ಮಾಡಿ ಯಲ್ಲಾಪುರ ಭಾಗದ ಮುಖ್ಯ ಬಯಲಾಟ ಮೇಳವಾಗಿ ಹೆಸರನ್ನು ಪಡೆದಿತ್ತು.
ಅಣಲಗಾರ ಮೇಳದಲ್ಲಿ ಸ್ತ್ರೀವೇಷವನ್ನು ಮಾಡುತ್ತಿದ್ದ ಭಟ್ಟರು ಆಕಸ್ಮಿಕವಾಗಿ ಪುರುಷ ವೇಷಕ್ಕೆ ಬಂದರು. ಆ ವರ್ಷ ಮೇಳವು ಗದಾಯುದ್ಧ ಪ್ರಸಂಗವನ್ನು ಮಾಡುತ್ತಿತ್ತು. ಅದರಲ್ಲಿ ಸಣ್ಣಣ್ಣ ಭಾಗವತರ ಕೌರವನ ಪಾತ್ರವಾದರೆ ಮತ್ತೊಬ್ಬ ಕಲಾವಿದರ ಭೀಮನ ಪಾತ್ರವಾಗಿತ್ತು. ನರಸಿಂಹ ಭಟ್ಟರಿಗೆ ಭೀಮ ಪಾತ್ರದ ಅಭಿವ್ಯಕ್ತಿ ಇಷ್ಟವಾಗದೇ ಅದನ್ನು ಕಲಾವಿದರಿಗೆ ತಿಳಿಸಿದರು. ಆ ಕಲಾವಿದರು “ಹೇಳಿದಂತೆ ಮಾಡುವುದು ಸುಲಭವಲ್ಲ. ಸಾಧ್ಯವಾದರೆ ಮಾಡಿ ತೋರಿಸು” ಎಂದು ಸವಾಲನ್ನು ಹಾಕಿದರು. ಅಲ್ಲಿಯವರೆಗೆ ಸ್ತ್ರೀವೇಷವನ್ನು ಮಾಡುತ್ತಿದ್ದ ಭಟ್ಟರು ಅಂದು ಕಿರೀಟವನ್ನು ಧರಿಸಿಯೇ ಬಿಟ್ಟರು. ಅಂದಿನ ಪ್ರದರ್ಶನದಲ್ಲಿ ಭೀಮನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಇದರ ಜೊತೆಗೆ ಆ ಸಾಲಿನ ಇನ್ನಷ್ಟು ಪಾತ್ರಗಳು ಮೇಳದಲ್ಲಿ ಪ್ರಾಪ್ತವಾದವು. ಅಲ್ಲಿಂದ ಮುಂದೆ ಪುರುಷ ಮತ್ತು ಸ್ತ್ರೀ ಪಾತ್ರಗಳಲ್ಲಿ ಕಾಣಿಸಿಕೊಂಡರು. ರಂಗದಲ್ಲಿ ಮೊದಲು ಪ್ರಮೀಳಾರ್ಜುನದ ಪ್ರಮೀಳೆ ಪಾತ್ರವನ್ನು ಮಾಡಿ ನಂತರ ಗದಾಯುದ್ಧದ ಭೀಮನ ಪಾತ್ರವನ್ನು ನಿರ್ವಹಿಸುತ್ತಿದ್ದರು. ಎರಡು ಬೇರೆ ಬೇರೆ ಮನಸ್ಥಿತಿಯ ಪಾತ್ರಗಳಾದರೂ ಅದನ್ನು ನಿರ್ವಹಿಸುವಾಗ ಪಾತ್ರಗಳ ಮನೋಧರ್ಮ,ಸ್ಥಾಯಿಭಾವವನ್ನು ಚೆನ್ನಾಗಿಯೇ ಅರ್ಥವಿಸಿಕೊಂಡು ಚ್ಯುತಿ ಬರದಂತೆ ನಿರ್ವಹಿಸುವುದನ್ನು ಸಿದ್ಧಿಸಿಕೊಂಡಿದ್ದರು. ಒಮ್ಮೆ ಕಲಾವಿದ ಅಭಿವ್ಯಕ್ತಿಯಲ್ಲಿ ಪಕ್ವತೆಯನ್ನು ಸಾಧಿಸಿದರೆ ಪ್ರಯೋಗಕ್ಕೆ ತನ್ನನ್ನು ತಾನು ಒಡ್ಡಿಕೊಳ್ಳುತ್ತಾನೆ. ಆ ಬಗ್ಗೆ ಪ್ರೇಕ್ಷಕರಿಗೂ ಒಂದು ಬಗೆಯ ಕುತೂಹಲವಿರುತ್ತದೆ. ತಮ್ಮನ್ನು ಕೆಲವು ಪಾತ್ರಗಳಿಗೆ ಮಾತ್ರ ಸೀಮಿತಗೊಳಿಸದೆ ಹಲವಾರು ಪ್ರಯೋಗಾತ್ಮಕವಾದ ಪಾತ್ರಗಳನ್ನು ನಿರ್ವಹಿಸಿದರು. ಈ ಸಾಲಿನಲ್ಲಿ ಅವರ ಕಂಸ ಹಿರಣ್ಯಕಶಿಪು, ದುಷ್ಟಬುದ್ಧಿ ಮುಂತಾದ ಪಾತ್ರಗಳು ಅಣಲಗಾರ ಮೇಳದಲ್ಲಿ ಜನಪ್ರಿಯವಾಗಿದ್ದವು.
ಒಮ್ಮೆ ಯಾವುದೋ ಊರಿನಲ್ಲಿ ಅಣಲಗಾರ ಮೇಳದ ಆಟ. ರಾತ್ರಿ ಆಟ ನಡೆಯಬೇಕು ಎನ್ನುವಾಗ ಮಳೆ ಪ್ರಾರಂಭವಾಯಿತು. ಸುಮಾರು 8 ದಿನಗಳ ವರೆಗೆ ಮಳೆ ನಿಲ್ಲಲೇ ಇಲ್ಲ. ಕಟ್ಟಿದ ರಂಗಸ್ಥಳದಲ್ಲಿ ಆಟ ಕುಣಿಸದೇ ಇರಬಾರದು ಎನ್ನುವುದು ಆ ಕಾಲದ ಅಘೋಷಿತ ನಿಯಮವಾಗಿತ್ತು. 9 ದಿನಗಳವರೆಗೆ ಊರಿನಲ್ಲಿದ್ದ ಮೇಳದವರು ಅದೇ ರಂಗಸ್ಥಳದಲ್ಲಿ ಕೊನೆಗೆ ಆಟ ಕುಣಿದು ಊರಿಗೆ ತೆರಳಿದರು ಪಾತ್ರಧಾರಿಗಳಲ್ಲದೇ ಇದ್ದರೂ ಕೇವಲ ಸೇವೆ ಎಂಬ ಕಾರಣಕ್ಕೆ ಅಣಲಗಾರ ಮೇಳದಲ್ಲಿ ನಂದೊಳ್ಳಿ ಕೃಷ್ಣಪ್ಪ ಎಂಬವರು ಸತತ 20-30 ವರುಷಗಳ ಕಾಲ ಹಾರ್ವೊನಿಯಂ ಪೆಟ್ಟಿಗೆಯನ್ನು ಬಾರಿಸುತ್ತ, ಯಾವುದೇ ನಿರೀಕ್ಷೆಯನ್ನು ಹೊಂದದೆ ಮೇಳದಲ್ಲಿ ತಿರುಗಾಟವನ್ನು ಮಾಡುತ್ತಿದ್ದರು. ಬಹುಶಃ ಇವುಗಳೆಲ್ಲ ಕಲೆಯ ಬಗ್ಗೆ ಇರುವ ಆರಾಧನಾ ಭಾವಕ್ಕೆ ಉದಾಹರಣೆ ಎನ್ನಬಹುದು.
ನರಸಿಂಹ ಭಟ್ಟರ ಕೆರಮನೆ ಮೇಳ ಪ್ರವೇಶ ತೀರಾ ಅನಿರೀಕ್ಷಿತವಾಗಿತ್ತು. 1950ರ ಹೊತ್ತಿಗೆ ಮಂಚಿಕೇರಿಯಲ್ಲಿ ಕೆರೆಮನೆ ಮತ್ತು ಅಣಲಗಾರ ಮೇಳದ ಆಟ. ಮೊದಲು ಕೆರೆಮನೆ ಮೇಳದವರ ಪ್ರಸಂಗ. ನಂತರ ಅಣಲಗಾರ ಮೇಳದ ದ್ರೌಪದಿ ಪ್ರತಾಪ ಪ್ರಸಂಗ. ಆ ಆಖ್ಯಾನದಲ್ಲಿ ನರಸಿಂಹ ಭಟ್ಟರು ಸುಭದ್ರೆಯ ಪಾತ್ರವನ್ನು ಮಾಡಿದ್ದರು. ಅವರ ಪಾತ್ರವನ್ನು ನೋಡಿದ ಕೆರೆಮನೆ ಶಿವರಾಮ ಹೆಗಡೆಯವರು ಬಹುವಾಗಿ ಮೆಚ್ಚಿಕೊಂಡರು. ಜೊತೆಗೆ ತಮ್ಮ ಮೇಳಕ್ಕೆ ಬರುವಂತೆಯೂ ಭಟ್ಟರಲ್ಲಿ ಕೇಳಿಕೊಂಡರು. ಇದಕ್ಕೆ ನಂದೊಳ್ಳಿ ಕೃಷ್ಣ ಭಾಗವತರು ಒಪ್ಪಿಗೆಯೂ ದೊರೆಯಿತು. ನರಸಿಂಹ ಭಟ್ಟರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅಂತಹ ಯಕ್ಷಗಾನದ ಶ್ರೇಷ್ಠ ಕಲಾವಿದ ತನ್ನ ಪಾತ್ರವನ್ನು ಮೆಚ್ಚಿ ಹರಸಿದ್ದಕ್ಕೆ ಹರುಷಗೊಂಡು, ಅವರ ಅಪೇಕ್ಷೆಯಂತೆಯೇ ಕೆರೆಮನೆ ಮೇಳವನ್ನು ಸೇರಿದರು.ಸತತ ಮೂರು ವರುಷಗಳ ಶಿವರಾಮ ಹೆಗಡೆಯವರ ಮನೆಯಲ್ಲಿಯೇ ಉಳಿದು, ಅವರನ್ನು ಗುರುಗಳನ್ನಾಗಿ ಸ್ವೀಕರಿಸಿ, ಅವರ ಮಾರ್ಗದರ್ಶನದಲ್ಲಿ ಮೇಳದಲ್ಲಿ ಪಾತ್ರಗಳನ್ನು ನಿರ್ವಹಿಸುತ್ತ ರಂಗಭೂಮಿಯ ಬಗ್ಗೆ ತಿಳಿಯುತ್ತ ಬೆಳೆದರು. ಈ ಸಂಸರ್ಗ ವೈಚಾರಿಕತೆಯನ್ನು, ವಿಚಾರಗಳನ್ನು ಕಲಿಸಿಕೊಟ್ಟಿತು. ಜೊತೆಗೆ ಮೇಳದಲ್ಲಿ ಕೊಕ್ಕರ್ಣೆ ನರಸಿಂಹ ಕಮತಿಯವರ ಸ್ತ್ರೀ ಪಾತ್ರಗಳು ಪ್ರಭಾವ ಬೀರಿದವು . ಸ್ತ್ರೀ ಪಾತ್ರಗಳ ಗುಣವಿಶೇಷಗಳು, ಪಾತ್ರದ ಔಚಿತ್ಯ ಇತ್ಯಾದಿಗಳನ್ನು ಯೋಚಿಸಿ ತೆರೆದುಕೊಳ್ಳುವುದಕ್ಕೆ ಕೆರೆಮನೆ ಮೇಳ ಒಳ್ಳೆಯ ಭೂಮಿಕೆಯಾಯಿತು.
ನಮಗೆ ಪಾತ್ರಗಳನ್ನು ಮಾಡುವಾಗ ನಿರ್ದಿಷ್ಟವಾದ ಧೋರಣೆಗಳಿರುತ್ತವೆ. ಎಲ್ಲ ಪಾತ್ರಗಳು ನಮ್ಮ ಮನಸ್ಥಿತಿಗೆ ಒಪ್ಪಿಗೆಯಾಗದೇ ಒಂದು ಸಾಲಿನ ಪಾತ್ರಗಳಿಗೆ ಮಾತ್ರ ಸೀಮಿತವಾಗುತ್ತವೆ. ಆದರೆ ಜವಳೆಕೆರೆಯವರದ್ದು ಇಂತಹ ಮನಸ್ಥಿತಿಯಲ್ಲ. ರಂಗಕ್ಕೆ ತಮ್ಮನ್ನು ಸದಾಕಾಲ ಅರ್ಪಿಸಿಕೊಳ್ಳುವ ಸಮರ್ಪಣಾಭಾವ. ಶಿವರಾಮ ಹೆಗಡೆಯವರ ಹರಿಶ್ಚಂದ್ರ, ಕೌರವ ಮುಂತಾದ ಪಾತ್ರಗಳು ರಂಗದಲ್ಲಿ ಮೆರೆಯುವಾಗ ಅವರಿಗೆ ಸಹಕಾರಿಯಾಗಿ ಆ ಸನ್ನಿವೇಶಗಳನ್ನು ಇನ್ನಷ್ಟು ಗಟ್ಟಿಗೊಳಿಸುವುದಕ್ಕೆ ಹೆಣದ ಪಾತ್ರವಾಗಿ ಅಥವಾ ಇತರ ನಗಣ್ಯ ಪಾತ್ರವಾಗಿ ರಂಗಕ್ಕೆ ಬರುತ್ತಿದ್ದರು.
ಒಮ್ಮೆ ಕೆರೆಮನೆ ಮೇಳದಲ್ಲಿ ಬ್ರಹ್ಮಕಪಾಲ ಪ್ರಸಂಗ. ಈಶ್ವರ ಪಾತ್ರವನ್ನು ಮಾಡಬೇಕಿದ್ದ ಶಂಭು ಹೆಗಡೆಯವರಿಗೆ ಅನಿವಾರ್ಯ ಕಾರಣದಿಂದ ಬರಲು ಸಾಧ್ಯವಾಗಿರಲಿಲ್ಲ. ಭಾಗವತರು ಜವಳೆಕೆರೆಯವರಿಗೆ “ಈ ದಿನ ಈಶ್ವರ ನಿಮ್ಮದು ” ಎಂದರು. ಆ ಕೂಡಲೇ ಮನಸ್ಸಿನಲ್ಲಿ ಆ ಪಾತ್ರವನ್ನು ಆವಾಹಿಸಿಕೊಂಡು ಕಾರ್ಯಪ್ರವೃತ್ತರಾದರು. ಮಧ್ಯಾಹ್ನ ಸ್ನಾನಕ್ಕೆ ಹೋದ ಜವಳೆಕೆರೆಯವರು ಎಷ್ಟು ಹೊತ್ತಾದರೂ ಅಲ್ಲಿಂದ ಬರಲೇ ಇಲ್ಲ. ಅವರು ಸಂಜೆಯ ಈಶ್ವರನ ಪಾತ್ರದ ತಯಾರಿಯಲ್ಲಿದ್ದರು. ತಂಬಿಗೆಯನ್ನೇ ಕಪಾಲವಾಗಿಸಿ ವಿವಿಧ ಭಂಗಿಯಿಂದ ಪಾತ್ರವಾಗಲು ಯತ್ನಿಸುತ್ತಿದ್ದರು. ಇದೊಂದು ಅವರ ಹೊಣೆಗಾರಿಕೆ, ಬದ್ಧತೆಗೆ ಉದಾಹರಣೆಯಷ್ಟೇ. ಶಂಭು ಹೆಗಡೆಯವರು ಮಾಡಿದ ಪಾತ್ರ ಎಂಬ ನಿರೀಕ್ಷೆ ಜನರಲ್ಲಿರುತ್ತಿತ್ತು ಎಂಬ ಅರಿವು ಅವರಲ್ಲಿತ್ತು. ಜೊತೆಗೆ ಮೇಳದ ಅನಿವಾರ್ಯಕ್ಕೆ ಒದಗುತ್ತಿದ್ದರು. ಇದೇ ಪ್ರಸಂಗದಲ್ಲಿ ಅವರು ಮನ್ಮಥ ಪಾತ್ರವನ್ನುಳಿದು ಎಲ್ಲ ಪಾತ್ರಗಳನ್ನು ರಂಗದಲ್ಲಿ ನಿರ್ವಹಿಸಿದ್ದರು. ಕೇವಲ ಅರ್ಧ ಗಂಟೆಯ ಕಾಲಾವಧಿಯಲ್ಲಿ ಲಂಕಾದಹನ ಪ್ರಸಂಗದಲ್ಲಿ ನಾಲ್ಕು ಪಾತ್ರಗಳನ್ನು ನಾಲ್ಕು ತಾಸಿನಲ್ಲಿ ನಿರ್ವಹಿಸುತ್ತಿದ್ದರು ಮೊದಲಿಗೆ ರಾಮ. ನಂತರ ತೃಣಬಿಂದು ಮುನಿ, ಆಮೇಲೆ ಸುಂದರ ರಾವಣ ಕೊನೆಯಲ್ಲಿ ಕಟ್ಟು ವೇಷದ ರಾವಣ ಮಾಡಿ ಮೆರೆಯುತ್ತಿದ್ದರು.
ನರಸಿಂಹಭಟ್ಟರ ಪಾತ್ರಪೋಷಣೆಯಲ್ಲಿ ತಾತ್ವಿಕ ಮತ್ತು ಪ್ರಾಯೋಗಿಕ ಅಂಶಗಳ ಕುರಿತ ನಿರಂತರ ಅಭ್ಯಾಸ ಚಿಂತನೆಯನ್ನು ಕಾಣಬಹುದು. ಹೊಸ ಸಾಧ್ಯತೆಗಳನ್ನು ಹುಡುಕುವ ತುಡಿತ ಅವರಲ್ಲಿತ್ತು. ಭಕ್ತಿ ಹಾಗೂ ಕರುಣಾರಸದಲ್ಲಿ ವಿಶೇಷವಾದ ಸಾಮರ್ಥ್ಯವಿತ್ತು. ಪರ್ವದ ಭೀಷ್ಮನಲ್ಲಿಗೆ ಬಂದು ನೀನು ನಮ್ಮಲ್ಲಿ ಮುನಿದು ನಿಂತರೆ ನಾವು ಬದುಕಲು ಉಂಟೆ ಎಂದು ಆರ್ದ್ರತೆ ಯಲ್ಲಿ ಕೇಳುವಾಗ ಧರ್ಮರಾಯನ ಪಾತ್ರ ಮನಸ್ಸಿನಲ್ಲಿ ಸ್ಥಿರವಾಗಿ ಮೂಡುವಂತೆ ಮಾಡುತ್ತಿದ್ದರು . ಶಂಭು ಹೆಗಡೆಯವರ ಕರ್ಣ ಪಾತ್ರದ ಜೊತೆಗಿನ ಕೌರವ ಪಾತ್ರದಲ್ಲಿ ವೃಷಸೇನ ಮಡಿದ ವಾರ್ತೆಯನ್ನು ತಿಳಿಸುವ ಶೋಕಭಾವದ ಅಭಿನಯ ಎಂತಹವರ ಎದೆಯಲ್ಲಿಯೂ ಮಾರ್ದವತೆಯನ್ನು ಸುರಿಸುತ್ತಿತ್ತು. ಅವರ ಸಂಧಾನದ ವಿದುರ, ಹರಿಶ್ಚಂದ್ರದ ವೀರಬಾಹುಕ, ಕರ್ಣಪರ್ವದ ಕೌರವ, ಭೀಷ್ಮಪರ್ವದ ಧರ್ಮರಾಯ ಮುಂತಾದ ಪಾತ್ರಗಳು ಕೆರೆಮನೆ ಮೇಳದಲ್ಲಿ ಜನಪ್ರಿಯತೆಯನ್ನು ಗಳಿಸಿದ್ದವು. ಗದಾಪರ್ವದಲ್ಲಿ ಶಂಭು ಹೆಗಡೆಯವರ ಕೌರವ ಹಾಗೂ ನರಸಿಂಹ ಭಟ್ಟರ ಸಂಜಯ. ಆ ಸನ್ನಿವೇಶದಲ್ಲಿ “ತಂದೆಗತಿ ಧೈರ್ಯವನು ಹೇಳು” ಎಂಬ ಪದ್ಯಕ್ಕೆ ಶಂಭು ಹೆಗಡೆಯವರು ತಮ್ಮ ತಂದೆ ಶಿವರಾಮ ಹೆಗಡೆಯವರಿಗೂ ಭಟ್ಟರಿಗಿದ್ದ ಆತ್ಮೀಯತೆಯನ್ನು ಹೇಳುತ್ತಿದ್ದರಂತೆ. “ನನ್ನಪ್ಪನಿಗೆ ನೀನು ಹೇಳಿದ ಮೇಲೆ ಆಯಿತು. ನಿನ್ನಷ್ಟು ಆತ್ಮೀಯರು ಅವನಿಗಿನ್ನು ಯಾರು” ಎಂದು ರಂಗದಲ್ಲಿಯೇ ಮೆಚ್ಚುಗೆಯನ್ನು ಸೂಚಿಸುತ್ತಿದ್ದರಂತೆ.
ವೃತ್ತಿ ರಂಗದಲ್ಲಿ ಹಲವಾರು ಮೇಳಗಳಲ್ಲಿ ನರಸಿಂಹ ಭಟ್ಟರು ದುಡಿದಿದ್ದಾರೆ. ಗುಂಡಬಾಳ, ಅಮೃತೇಶ್ವರಿ, ನಾಗರಕುಡಿಗೆ, ಬಗ್ವಾಡಿ ಹೀಗೆ 20 ವರುಷಕ್ಕೂ ಹೆಚ್ಚು ಕಾಲ ವೃತ್ತಿರಂಗದಲ್ಲಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮಾಯಾ ಮೃಗಾವತಿ ಪ್ರಸಂಗದ ಅವರ ಪಾತ್ರವನ್ನು ಸ್ವತಃ ನಾರಣಪ್ಪ ಉಪ್ಪೂರರು ಮೆಚ್ಚಿಕೊಂಡಿದ್ದರು. ಯಾವುದೇ ಮೇಳವಿರಲಿ, ಆ ಮೇಳದ ಭಾಗವಾಗಿ ದುಡಿಯುವುದು, ಅದಕ್ಕೆ ನಿಷ್ಠೆಯಿಂದಿರುವುದು ನರಸಿಂಹ ಭಟ್ಟರ ವ್ಯಕ್ತಿತ್ವ. ಒಮ್ಮೆ ವಾಲಿವಧೆ ಪ್ರಸಂಗ. ವಾಲಿ ಮಾಡಬೇಕಾದ ಕಲಾವಿದರಿಗೆ ಅನಿವಾರ್ಯ ಕಾರಣಕ್ಕಾಗಿ ಬರಲು ಸಾಧ್ಯವಾಗಿರಲಿಲ್ಲ. ವಾಲಿ ಪ್ರವೇಶಕ್ಕೆ ಕೆಲವೇ ನಿಮಿಷಗಳು ಬಾಕಿ ಇರುವಾಗ ಶಂಭು ಹೆಗಡೆಯವರು ಬಂದು ವಾಲಿ ಪಾತ್ರವನ್ನು ಮಾಡುವಂತೆ ನರಸಿಂಹ ಭಟ್ಟರಲ್ಲಿ ವಿನಂತಿಸಿಕೊಂಡರು . ಭಟ್ಟರು ಮರು ಮಾತನಾಡದೇ ಆ ಕ್ಷಣದಲ್ಲಿ ಪಾತ್ರಕ್ಕೆ ಸಿದ್ಧರಾಗಿ ನಿಂತರು. ಒಂದರ್ಥದಲ್ಲಿ ಅವರು ಕಾರ್ಯ ನಿಮಗ್ನತೆಯ ಪ್ರಖರವಾದ ದ್ಯೋತಕವಾಗಿ ರಂಗದ ಒಳ-ಹೊರಗೆ ಕಾಣಿಸಿಕೊಳ್ಳುತ್ತ, ಅನೇಕ ಸಂದರ್ಭದಲ್ಲಿ ಮೇಳದ ಜೊತೆಯಾಗಿ ನಿಲ್ಲುತ್ತಿದ್ದರು. ಮೇಳದ ಬದ್ಧತೆಯನ್ನು ಮೀರಿದವರಲ್ಲ. ಪ್ರಚಾರದ ಆಮಿಷಕ್ಕೆ ಬಲಿಯಾಗಿ ಕಲಾ ಪರಂಪರೆಯನ್ನು ಚಿಂತನೆಗಳನ್ನು ಸಾಧ್ಯತೆಗಳನ್ನು ಗಾಳಿಗೆ ತೂರಿ ನಡೆದವರಲ್ಲ . ತಮ್ಮ ಸಿದ್ಧಾಂತಗಳನ್ನು ರಾಜಿ ಮಾಡಿಕೊಂಡವರೂ ಅಲ್ಲ. ಮೇಳ ಉಳಿದರೆ ಕಲಾವಿದರು ಉಳಿಯುತ್ತಾರೆ ಎನ್ನುವುದು ಅವರ ಒಟ್ಟಂದದ ಬದುಕಿನ ಧೋರಣೆಯಾಗಿತ್ತು. ಆಟ ಪ್ರಾರಂಭದಿಂದ ಮಂಗಳದವರಿಗೆ ಸದಾ ಜಾಗೃತರಾಗಿದ್ದು ಮೇಳದ ಕುಂದುಕೊರತೆಗಳಿಗೆ ದುಡಿಯುತ್ತಿದ್ದರು. ಯಕ್ಷಗಾನ ರಂಗಭೂಮಿಯೊಳಗೆ ಶಿಸ್ತಿನಲ್ಲಿ ವ್ಯವಹರಿಸಿಸುತ್ತಿದ್ದರು. ಕಾರ್ಯಕ್ರಮವೆಂದರೆ ಮೂರು ಗಂಟೆ ಮುಂಚಿತವಾಗಿ ಬಂದು ತಮ್ಮ ಪಾತ್ರಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳುತ್ತ ಪಾತ್ರವಾಗಿ ಅನುಭವಿಸುವ ಖುಷಿಗಾಗಿ ಕಾತರಿಸುತ್ತಿದ್ದರು.
ಬೇರೆ ಮೇಳದಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದರೂ ಊರಿನ ಮೇಳವಾದ ಅಣಲಗಾರ ಮೇಳದಲ್ಲಿ ಆಗಾಗ ಬಂದು ವೇಷವನ್ನು ಮಾಡುತ್ತಿದ್ದರು. ಆ ಬಗ್ಗೆ ಅವರಿಗೊಂದು ಪ್ರೀತಿಯಿತ್ತು. ಸುಮಾರು 25 ವರುಷಗಳ ಕಾಲ ಅಣಲಗಾರ ಮೇಳದ ನೇತೃತ್ವವನ್ನು ಭಟ್ಟರು ವಹಿಸಿಕೊಂಡಿದ್ದರು. ಆ ಸಮಯದಲ್ಲಿ ಮೇಳಕ್ಕೆ ಇನ್ನಷ್ಟು ಹೆಸರು ಪ್ರಾಪ್ತವಾಗಿತ್ತು. ರಾತ್ರಿ ಭಟ್ಟರು ವೇಳದಲ್ಲಿ ವೇಷವನ್ನು ಮಾಡುತ್ತಿದ್ದರೇ, ಹಗಲು ಊರೂರು ಸುತ್ತಿ ಆಟವನ್ನು ಹೊಂದಿಸುವುದಕ್ಕೆ ಯತ್ನಿಸುತ್ತಿದ್ದರು. ಹವ್ಯಾಸಿ ಮೇಳವಾದರೂ ಕಲಾವಿದರ ಬೆಳವಣಿಗೆಯಲ್ಲಿ ನಿರಂತತೆ ಬೇಕು ಎನ್ನುವುದು ಅವರ ಮನದಿಂಗಿತವಾಗಿತ್ತು. . ಅಣಲಗಾರ ಮೇಳದಲ್ಲಿ ಕವ್ವಾಳೆ ರಾಮಚಂದ್ರ ಭಾಗವತರ ಭಾಗವತಿಕೆಗೆ ನರಸಿಂಹ ಭಟ್ಟರು ಮತ್ತು ಸಣ್ಣಣ್ಣ ಭಾಗವತರ ಜೋಡಿ ವೇಷಗಳು ಅತ್ಯಂತ ಯಶಸ್ವಿ ಸಂಯೋಜನೆಯಾಗಿದ್ದವು. ಇದರ ಜೊತೆಗೆ ಮೇಳದಲ್ಲಿ ಅನೇಕ ಹಿರಿಯ ಕಿರಿಯ ಕಲಾವಿದರೊಂದಿಗೆ ರಂಗವನ್ನು ಹಂಚಿಕೊಂಡಿದ್ದಾರೆ. ಸುಬ್ರಾಯ ಭಾಗವತ ಕವ್ವಾಳೆ, ನರಸಿಂಹ ಭಾಗವತ ಕವ್ವಾಳೆ, ಇಡಗುಂದಿ ಗಜಾನನ ಭಟ್, ನಾಗಭಟ್ ಬಾಲಿಗದ್ದೆ, ರಾಮಭಟ್ ಬಾಳೆಕುಂಕಿ, ಸುಬ್ರಾಯ ಗೋಳಿಗದ್ದೆ, ಗಣಪತಿ ಭಟ್ ಹುಲಿಮನೆ, ಕೊಡಗಿಪಾಲ್ ಶಿವರಾಮ ಹೆಗಡೆ, ಮಳಿಗೆಮನೆ ರಾಮಕೃಷ್ಣ ಹೆಗಡೆ, ಗೋವಿಂದ ನಾಯ್ಕ್, ಉತ್ತಮ ನಾಯ್ಕ್, ಕಾಗಾಲ ಈಶ್ವರ ಭಟ್, ಮೂರೂರು ಕೃಷ್ಣ ಹೆಗಡೆ, ವೆಂಕಟರಮಣ ಗೊಡಗಾಂವ್ಕರ ಕಲ್ಲಜ್ಜಿ ಮುಂತಾದವರು ಅವರ ಪ್ರಮುಖ ಒಡನಾಡಿ ಕಲಾವಿದರಾಗಿದ್ದಾರೆ.
ಯಕ್ಷಗಾನದ ವೃತ್ತಿ ಮೇಳದಲ್ಲಿ ನಿವೃತ್ತಿಯನ್ನು ಪಡೆದ ನಂತರ, ತಮ್ಮ ಊರಿನ ವಲಯದಲ್ಲಿ ಯಕ್ಷಗಾನ ಕಲಿಕಾ ಕೇಂದ್ರದ ಅಗತ್ಯತೆಯನ್ನು ಮನಗಂಡು ಸಮಾನಮನಸ್ಕರನ್ನು ಒಗ್ಗೂಡಿಸಿಕೊಂಡು ಪ್ರಾರಂಭಿಸಿದರು. ಸುಮಾರು ಐದಾರು ವರುಷಗಳ ಕಾಲ ಆಸಕ್ತ ಮಕ್ಕಳಿಗೆ ಯಕ್ಷಗಾನದ ತರಬೇತಿಯನ್ನು ನೀಡಿ ಅವರಿಂದ ನಲವತ್ತಕ್ಕೂ ಹೆಚ್ಚು ಪ್ರದರ್ಶನಗಳನ್ನು ಆಯೋಜಿಸಿದ್ದರು. ರಾಮಕೃಷ್ಣ ಭಟ್ ಬಿದ್ರೇಪಾಲ್ ನೇತೃತ್ವವನ್ನು ವಹಿಸಿದ್ದರೆ, ಕವ್ವಾಳೆ ಗಣಪತಿ ಭಾಗವತ್, ಬಾಳೆಗದ್ದೆ ತಿಮ್ಮಪ್ಪ ಭಾಗವತರು ಕಲಿಕಾ ಕೇಂದ್ರದ ಶಿಕ್ಷಕರಾಗಿದ್ದರು. ಭಟ್ಟರು ಮಕ್ಕಳಿಗೆ ಭಾವಾಭಿನಯ, ಅರ್ಥಗಾರಿಕೆ ಮುಂತಾದ ವಿಷಯಗಳಿಗೆ ಮಾರ್ಗದರ್ಶಕರಾಗಿದ್ದರು. ಜೊತೆಗೆ ಸ್ಥಳೀಯವಾಗಿ ನಡೆಯುತ್ತಿದ್ದ ಅನೇಕ ತಾಳಮದ್ದಲೆಯಲ್ಲಿ ಮುಖ್ಯ ಅರ್ಥಧಾರಿಗಳಾಗಿ ಭಾಗವಹಿಸುತ್ತಿದ್ದರು.
ಸುಮಾರು 60 ವರುಷಗಳ ಸುದೀರ್ಘ ಯಕ್ಷಗಾನದ ಅನುಭವವನ್ನು ಹೊಂದಿರುವ ನರಸಿಂಹ ಭಟ್ಟರ ಸಾಂಸಾರಿಕ ಜೀವನವನ್ನು ಕಾಣುವಾಗ ನೋವು ನಲಿವುಗಳನ್ನು ಅನುಭವಿಸಿದ್ದಾರೆ. ನಾಗವೇಣಿಯವರನ್ನು ಮದುವೆಯಾದ ಭಟ್ಟರು ಸುಬ್ರಾಯ,ಸರಸ್ವತಿ ಹಾಗೂ ಪಾರ್ವತಿ ಎಂಬ ಮಕ್ಕಳನ್ನು ಪಡೆದಿದ್ದಾರೆ. ಆದರೆ ನಾಗವೇಣಿಯವರು ಹೆರಿಗೆಯ ಸಮಯದಲ್ಲಿ ಉಂಟಾದ ಅತೀವವಾದ ರಕ್ತಸ್ರಾವದಿಂದಾಗಿ ಅಸು ನೀಗಿದ್ದರು. ಅಲ್ಲಿಗೆ ಒಂಬತ್ತು ವರುಷದ ದಾಂಪತ್ಯ ದುಃಖದಲ್ಲಿ ಕೊನೆಗೊಂಡಿತು. ನಂತರ ಸುಭದ್ರೆಯವರನ್ನು ಮದುವೆಯಾದರು. ಅವರಲ್ಲಿ ತಾರಾ, ಮಂಜುನಾಥ ಹಾಗೂ ಕಾವೇರಿ ಎಂಬ ಮಕ್ಕಳನ್ನು ಪಡೆದಿದ್ದಾರೆ. ಸುಬ್ರಾಯ್ ಹಾಗೂ ಮಂಜುನಾಥ್ ಅವರು ಯಕ್ಷಗಾನದ ಬಗ್ಗೆ ಆಸಕ್ತಿಯನ್ನು ಹೊಂದಿ ಬಾಲ್ಯದಲ್ಲಿ ಒಂದಷ್ಟು ವೇಷಗಳನ್ನು ಮಾಡಿದ್ದರು. ತಂದೆಯ ನೆನಪನ್ನು ಶಾಶ್ವತವಾಗಿಸುವ ಸಲುವಾಗಿ ’ನೆನಪಿನ ಹೆಜ್ಜೆಗಳು’ ಎಂಬ ಹೊತ್ತಿಗೆಯನ್ನು ತಂದಿದ್ದಾರೆ. ಜೊತೆಗೆ ಮಂಜುನಾಥ್ ಅವರು ಯಕ್ಷಗಾನ ಅಭಿಮಾನಿಗಳಾಗಿ ಸ್ಥಳೀಯವಾಗಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾರೆ.
ಯಕ್ಷಗಾನದ ಬಗ್ಗೆ ಅಪಾರ ಕಾಳಜಿ, ಶ್ರದ್ಧೆ,ನಿಷ್ಠೆ ಕಳಕಳಿಯನ್ನು ಹೊಂದಿದ್ದ ನರಸಿಂಹ ಭಟ್ಟರು ತಮ್ಮ ಬದುಕಿನ ಕೊನೆಯವರೆಗೆ ಯಕ್ಷಗಾನಕ್ಕಾಗಿ ದುಡಿದಿದ್ದಾರೆ. ಊರಿನಲ್ಲಿ ವರ್ಷಂಪ್ರತಿ ನಡೆಯುವ ಗಂಗಾಷ್ಟಮಿ ಆಟ. ವೇಷಗಾರಿಕೆ ಪ್ರಾರಂಭಿಸಿದ ಮೇಲೆ ನರಸಿಂಹಭಟ್ಟರು ಎಂದು ಕೂಡ ಅದನ್ನು ತಪ್ಪಿಸಿಕೊಂಡವರಲ್ಲ. 2009ರ ಹೊತ್ತಿಗೆ ಅವರಿಗೆ ವಿಪರೀತವಾಗಿ ಹೊಟ್ಟೆಯಲ್ಲಿ ನೋವು ಉಂಟಾಗಿ ಆರೋಗ್ಯ ಜರ್ಜರಿತವಾಗಿತ್ತು. ಆದರೂ ಕೂಡ ಮನದಿಚ್ಛೆಯಂತೆ ಗಂಗಾಷ್ಟಮಿ ಆಟದಲ್ಲಿ ವೇಷವನ್ನು ಮಾಡಿದ್ದರು. ಇದಾದ ಸ್ವಲ್ಪ ದಿನಗಳ ನಂತರ ಅವರಿಗೆ ಕಾನ್ಸರ್ ಎಂಬ ಮಹಾಮಾರಿ ಇರುವುದು ತಿಳಿಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ತಮ್ಮ ಬದುಕಿನ ಯಾತ್ರೆಯನ್ನು 76 ವರುಷಕ್ಕೆ ಮುಗಿಸಿದರು.
ಈ ಜಗತ್ತು ಬಣ್ಣಗಳಿಂದ ಕೂಡಿದೆ. ಹಾಗಾಗಿ ನಮ್ಮ ಬದುಕು ನಿತ್ಯವೂ ಹೊಸತರಂತೆ ಕಾಣುತ್ತದೆ. ಬಹುಶಃ ಇದು ಇಲ್ಲವಾಗಿದ್ದರೆ, ಏಕತಾನತೆಯಲ್ಲಿ ಮುಳುಗಿ ಹೋಗಿರುತ್ತಿದ್ದೆವು. ಇಂತಹ ಬಣ್ಣವೆಂಬ ಮೂರ್ತಸ್ವರೂಪ ಯಕ್ಷಗಾನದಲ್ಲಿರುವುದರಿಂದಲೇ ಅದು ಜನರನ್ನು ಸೂಜಿಗಲ್ಲಿನಂತೆ ಸೆಳೆದುಕೊಳ್ಳುತ್ತದೆ. ಪ್ರೇಕ್ಷಕರಿಗೆ ಬಣ್ಣವೆಂಬ ಮೋಹದ ಸೊಬಗು, ಸೊಗಸು ಸವಿಯುವುದು ಒಂದು ಬಗೆಯಾದರೆ ಕಲಾವಿದನಾಗಿ ಆ ಬಣ್ಣವನ್ನು ಆವಾಹಿಸಿಕೊಂಡು ಅನುಭವಿಸುವುದು ಮತ್ತೊಂದು ಬಗೆ. ಇಂತಹ ತಾದಾತ್ಮ್ಯತೆಯನ್ನು ಬದುಕಿನ ಭಾಗವಾಗಿಸಿಕೊಂಡವರು ನರಸಿಂಹ ಭಟ್ಟರು. ಯಕ್ಷಗಾನವನ್ನು ಆರಾಧನಾ ಕಲೆಯೆಂದು ಹೇಳುವ ಮಾತಿಗೆ ಪೂರಕವಾಗಿ ಕಲಾಯಾನದಲ್ಲಿ ಪಾಲ್ಗೊಳ್ಳುವುದಕ್ಕೆ ಹಂಬಲಿಸುತ್ತ ಹಪಹಪಿಸಿದವರು. ಅವರ ಕಲಾ ಜೀವನವನ್ನು ಮತ್ತೊಮ್ಮೆ ನೆನೆಯುತ್ತ ಅವರ ಚೇತನಕ್ಕೆ ಮತ್ತೊಮ್ಮೆ ನಮ್ಮ ನಮನಗಳು.
ಆಕರ: ಎಸ್.ಡಿ ಹೆಗಡೆಯವರ ನೆನಪಿನ ಹೆಜ್ಜೆಗಳು, ಡಾ.ರಾಮಕೃಷ್ಣ ಜೋಷಿಯವರ ಇಡಗುಂಜಿ ಮೇಳ
ಚಿತ್ರಕೃಪೆ: ಇಡಗುಂಜಿ ಮೇಳ
ಮಾಹಿತಿ ಸಹಕಾರ: ಶ್ರೀ ಅನಂತ ವೈದ್ಯ, ಶ್ರೀ ಮಂಟಪ ಪ್ರಭಾಕರ ಉಪಾಧ್ಯ, ಶ್ರೀ ಕವ್ವಾಳೆ ಗಣಪತಿ ಭಾಗವತ, ಶ್ರೀ ಅನಂತ ಹೆಗಡೆ ದಂತಳಿಕೆ, ಶ್ರೀ ರವೀಂದ್ರ ಮಾವಖಂಡ ಹಾಗೂ ಶ್ರೀ ಮಂಜುನಾಥ ಹೆಗಡೆ
ಮಲೆನಾಡಿನ ಯಕ್ಷಚೇತನಗಳು ಸರಣಿ(ಮೊದಲ ಸಂಪುಟ) ಈಗ ಪುಸ್ತಕ ರೂಪದಲ್ಲಿ ದೊರೆಯುತ್ತಿದೆ. ಆಸಕ್ತರು ಪುಸ್ತಕಕ್ಕಾಗಿ ಸಂಪರ್ಕಸಿ
– U S Mahesh-9342274331
- ರವಿ ಮಡೋಡಿ, ಬೆಂಗಳೂರು