ಹುಕ್ಲಮಕ್ಕಿ ಮಂಜುನಾಥ ಹೆಗಡೆ(೧೯೧೦-೧೯೯೧)

ಹುಕ್ಲಮಕ್ಕಿ ಮಂಜುನಾಥ ಹೆಗಡೆಯವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕರ್ಕಿಸವಲ್ ಗ್ರಾಮದ ಹತ್ತಿರದ ಮುಠ್ಠಳ್ಳಿ ಹೊಂಡದಲ್ಲಿ ೧೯೧೦ರಲ್ಲಿ ಗಣಪಯ್ಯ ಹೆಗಡೆ ಮತ್ತು ಗಣಪಿ ದಂಪತಿಗಳ ಮಗನಾಗಿ ಜನಿಸಿದರು. ಇವರಿಗೆ ಶಿವರಾಮ, ಲಕ್ಷ್ಮೀನಾರಾಯಣ, ಗಣಪತಿ ಎಂಬ ಸಹೋದರರು ಇದ್ದಾರೆ. ದುರದೃಷ್ಟವಶಾತ್ ಚಿಕ್ಕ ವಯಸ್ಸಿನಲ್ಲಿಯೇ ತಂದೆಯಯನ್ನು ಕಳೆದುಕೊಂಡಾಗ ತಾಯಿ ಗಣಪಿಯವರು ಮಕ್ಕಳ ಲಾಲನೆ ಪಾಲನೆಯನ್ನು ಮಾಡಿ ಜೀವನಕ್ಕೆ ಮಾರ್ಗದರ್ಶನವನ್ನು ನೀಡಿದರು.ಆರ್ಥಿಕವಾಗಿ ಅಷ್ಟೇನು ಉತ್ತಮ ಸ್ಥಿತಿಯಲ್ಲಿಯಿರದಿದ್ದರೂ ನಾಲ್ಕನೇ ತರಗತಿಯವರೆಗೆ ಮಂಜುನಾಥ ಹೆಗಡೆಯವರು ವಿದ್ಯಾಭ್ಯಾಸವನ್ನು ಮಾಡಿದರು.

ಮಂಜುನಾಥ ಹೆಗಡೆಯವರು ಯಕ್ಷಗಾನ ರಂಗವನ್ನು ಪ್ರವೇಶಿಸುವುದಕ್ಕೆ ಒಂದು ಹಿನ್ನಲೆಯಿತ್ತು. ಒಂದು ಕಾಲದಲ್ಲಿ ಮಲೆನಾಡಿನ ಅಡಿಕೆ ಹಾಗೂ ತೋಟದ ಕೆಲಸಗಳಿಗೆ ಘಟ್ಟದ ಕೆಳಗಿನಿಂದ ಕೆಲಸಗಾರರು ಬರುತ್ತಿದ್ದರು. ನಾಲ್ಕೈದು ತಿಂಗಳು ಊರಿನಲ್ಲಿಯೇ ಉಳಿದು ಕೆಲಸ ಮಾಡಿ ನಂತರ ತಮ್ಮ ಊರುಗಳಿಗೆ ಸೇರಿಕೊಳ್ಳುತ್ತಿದ್ದರು. ಬರುವ ಕೆಲಸಗಾರರು ಅಥವಾ ಅದನ್ನು ನಿರ್ವಹಿಸುವ ಸೇರೆಗಾರರು ಯಕ್ಷಗಾನ ಆಸಕ್ತರಾದರೆ ಸಂಜೆ ಅಥವಾ ಬಿಡುವಿನ ವೇಳೆಯಲ್ಲಿ ಯಕ್ಷಗಾನದ ಕಲಾಪಗಳು ಮನೆಯಲ್ಲಿ ಸಂಪನ್ನವಾಗುತ್ತಿದ್ದವು. ಇದು ಮಲೆನಾಡಿನ ಹಾಗೂ ಕರಾವಳಿಯ ಕಲೆಯ ತುಡಿತಗಳನ್ನು ಮತ್ತು ಕಲಾವಂತಿಕೆಯನ್ನು ಹಂಚಿಕೊಳುವ ಮಾಧ್ಯಮವಾಗಿತ್ತು ಎಂದರೆ ತಪ್ಪಾಗಲಾರದು. ಹಾಗೆಯೇ ಇಂತಹ ಕಾಲದಲ್ಲಿ ಮಂಜುನಾಥ ಹೆಗಡೆಯವರ ಮನೆಗೆ ಹೊನ್ನಾವರದ ಗುಡಿಹಿತ್ಲ ಮನೆಯ ಮಂಜಪ್ಪ ಭಾಗವತರು ತೋಟದ ಕೆಲಸಕ್ಕೆ ಬಂದಿದ್ದರು. ಹುಡುಗ ಮಂಜುನಾಥ ಹೆಗಡೆಯವರನ್ನು ನೋಡಿದಾಗ ಅವರ ಚುರುಕತನವನ್ನು ಗುರುತಿಸಿ ಯಕ್ಷಗಾನವನ್ನು ಕಲಿಸುವುದಕ್ಕೆ ಮುಂದದಾಗ ತಾಯಿ ಗಣಪಿಯವರ ಹಾಗೂ ಅಣ್ಣ ಶಿವರಾಮ ಹೆಗಡೆಯವರ ಪ್ರೋತ್ಸಾಹವು ಸಿಕ್ಕಿತು. ಹನ್ನೆರಡರ ಪ್ರಾಯದ ಹೆಗಡೆಯವರು ಯಕ್ಷಗಾನವನ್ನು ಕಲಿಯುವುದಕ್ಕೆ ಪ್ರಾರಂಭಿಸಿದರು. ಇವರ ಜೊತೆಯಲ್ಲಿ ಅದೇ ಪ್ರಾಯದ ಜಾನಕೈ ತಿಮ್ಮಪ್ಪ ಹೆಗಡೆ, ಅಗ್ಗೆರೆ ಮಂಜಪ್ಪ ಹೆಗಡೆ, ದೇವಣಗದ್ದೆ ಸುಬ್ರಾಯ ಹೆಗಡೆ ಮುಂತಾದವರು ಕೂಡ ಮಂಜಪ್ಪ ಭಾಗವತರಲ್ಲಿ ಯಕ್ಷಗಾನವನ್ನು ಕಲಿಯುವುದಕ್ಕೆ ಬಂದರು. ಹೀಗೆ ಒಂದಷ್ಟು ಕಲಿಸಿದ ನಂತರ ಕೆಲಸ ಮುಗಿದ ಮೇಲೆ ಊರಿಗೆ ಹೋದವರು ಮತ್ತೆ ಮರು ವರುಷ ಬಂದರು. ಆಗ ಮತ್ತೆ ತರಗತಿಗಳು ಪ್ರಾರಂಭವಾಯಿತು.

ಗುಡಿಹಿತ್ಲ ಮಂಜಪ್ಪ ಭಾಗವತರಿಗೆ ಶಿಷ್ಯರ ಮೇಲೆ ಎಲ್ಲಿಲ್ಲದ ಅಕ್ಕರೆ, ವಾತ್ಸಲ್ಯ. ಯಕ್ಷಗಾನವನ್ನು ಕಲಿತ ಮೇಲೆ ಪ್ರಯೋಗದಿಸದಿದ್ದರೇ ಯಾವ ಪ್ರಯೋಜನವೆಂದು ಗ್ರಹಿಸಿ ಅದಕ್ಕೊಂದು ವೇದಿಕೆಯನ್ನು ಕಲ್ಪಿಸುವುದಕ್ಕೆ ಅಣ್ಣ ಶಿವರಾಮ ಹೆಗಡೆಯವರು ಯೋಚಿಸಿದರು. ಅದಕ್ಕಾಗಿ ’ ಶ್ರೀ ಸಿದ್ಧಿವಿನಾಯಕ ದುರ್ಗಾಂಬಾ ಯಕ್ಷಗಾನ ಮಿತ್ರ ಮಂಡಳಿ ಹುಕ್ಲಮಕ್ಕಿ’ ಎಂಬ ಮೇಳವನ್ನು ೧೯೨೫ರಲ್ಲಿ ವಿಜಯದಶಮಿಯಂದು ಕಿರೀಟ ಪೂಜೆಯನ್ನು ನೆರವೆರಿಸಿ, ಶುಭಾರಂಭ ಮಾಡಿ ಸ್ಥಾಪನೆ ಮಾಡಿದರು. ಮೇಳದ ಸಂಸ್ಥಾಪಕರಾಗಿ ಹುಕ್ಲಮಕ್ಕಿ ಶಿವರಾಮ ಹೆಗಡೆಯವರು ಮೇಳಕ್ಕೆ ರೂಪರೇಷೆಯನ್ನು ಕೊಡಲಾರಂಭಿಸಿದರು. ಮೊದಲ ಪ್ರದರ್ಶನವಾಗಿ ಧ್ರುವ ಚರಿತ್ರೆಯನ್ನು ಆಡಲಾಯಿತು. ಇದರಲ್ಲಿ ಹುಕ್ಲಮಕ್ಕಿ ಮಂಜುನಾಥ ಹೆಗಡೆಯವರ ಬಾಲ ಧ್ರುವ, ಅಗ್ಗೆರೆ ಮಂಜಪ್ಪ ಹೆಗಡೆಯವರ ಉತ್ತಮ, ಹುಕ್ಲಮಕ್ಕಿ ಶಿವರಾಮ ಹೆಗಡೆಯವರ ಉತ್ತಾನಪಾದ, ಜಾನಕೈ ತಿಮ್ಮಪ್ಪ ಹೆಗಡೆ ಮದ್ದಲೆ ಹೀಗೆ ಆಟ ಸಂಪನ್ನವಾಯಿತು. ಮೊದಲ ಪ್ರಯೋಗ ಮತ್ತು ಮೇಳ ಯಶಸ್ವಿಯಾದ ಮೇಲೆ ಮತ್ತೆ ಹದಿನೈದೇ ದಿನಕ್ಕೆ ’ಲವಕುಶ ಕಾಳಗ’ ಪ್ರಸಂಗವನ್ನು ಆಡಲಾಯಿತು. ಇದರಲ್ಲಿ ಮಂಜುನಾಥ ಹೆಗಡೆಯವರ ಲವ, ಅಗ್ಗೆರೆ ಮಂಜಪ್ಪ ಹೆಗಡೆಯವರ ಕುಶ, ಶಿವರಾಮ ಹೆಗಡೆಯವರ ರಾಮ ಹೀಗೆ ಆಟ ಪ್ರದರ್ಶನವಾಯಿತು.

ಹಿಂದಿನ ಕಾಲದಲ್ಲಿ ರಂಗಸ್ಥಳವೆಂಬುದೇ ಯಕ್ಷಗಾನ ಮತ್ತು ಬದುಕಿನ ಪಾಠವಾಗುತ್ತಿತ್ತು ಎಂದರೆ ತಪ್ಪಾಗಲಾರದು. ಈಗೀನಂತೆ ಯಕ್ಷಗಾನ ಶಾಲೆಯಲ್ಲಿ ಕಲಿತು ಅಥವಾ ಯಾವುದೋ ತರಗತಿಯಲ್ಲಿ ಕಲಿತು ಪ್ರದರ್ಶನಗಳಿಗೆ ಸಾಕಷ್ಟು ತಯಾರಿಯನ್ನು ನಡೆಸಿ ಪ್ರಯೋಗಿಸುವ ಕ್ರಮಗಳು ಇರಲಿಲ್ಲ. ಕಲಾವಿದರು ಪ್ರದರ್ಶನಗಳನ್ನು ಮಾಡುತ್ತ, ಮಾಡುತ್ತ ಕಲಿಯಬೇಕಿತ್ತು. ತಪ್ಪು ಒಪ್ಪುಗಳಿಗೆ ಹಿರಿಯರ ಮಾರ್ಗದರ್ಶನವನ್ನು ಪಡೆದು ಬೆಳೆಯಬೇಕಿತ್ತು. ಹೀಗೆ ಮೇಳವು ಪ್ರಾರಂಭವಾದ ಮೇಲೆ ಮಂಜುನಾಥ ಹೆಗಡೆಯವರು ಏಳೆಂಟು ಬಾರಿ ಬಾಲ ಧ್ರುವನ ಪಾತ್ರವನ್ನು ಮಾಡಿದ್ದರು. ಪಾತ್ರದ ಒಳ ಹೊರವನ್ನು ಚೆನ್ನಾಗಿಯೇ ತಿಳಿದಿದ್ದರು. ಯಾವುದೋ ಕಾರ್ಯಕ್ರಮದಲ್ಲಿ ಧ್ರುವ ಚರಿತ್ರೆ ಪ್ರಸಂಗ ಸಂಪನ್ನವಾಗಿತ್ತು. ಎಂದಿನಂತೆ ಹೆಗಡೆಯರ ಧ್ರುವ, ಗುರುಗಳಾದ ಮಂಜಪ್ಪ ಭಾಗವತರ ಪದ್ಯಕ್ಕೆ ಪ್ರದರ್ಶನ ಸಾಗುತ್ತಿತ್ತು. ಧ್ರುವ, ರಾಣಿ ಸುರುಚಿಯಿಂದ ತಿರಸ್ಕೃತನಾಗಿ, ದಿಕ್ಕು ಕಾಣದೆ ದುಃಖಿಸುತ್ತ ಅಡವಿಯಲ್ಲಿ ಸಾಗಬೇಕಾದ ದೃಶ್ಯ ನಡೆಯುತ್ತಿತ್ತು. ಭಾಗವತರು ಪದ್ಯವನ್ನು ಹೇಳುತ್ತ ಪಾತ್ರಧಾರಿಯ ಹಿಂದೆ ಹೋಗುತ್ತಿದ್ದರು. ಆಗೆಲ್ಲ ಭಾಗವತರು ಪದ ಹೇಳುತ್ತಾ ಪಾತ್ರಧಾರಿಯ ಹಿಂದೆ ಹೋಗುವ ಕ್ರಮವಿತ್ತು. ಇದ್ದಕ್ಕಿದ್ದ ಹಾಗೆ ಹೆಗಡೆಯವರ ಜುಟ್ಟನ್ನು ಹಿಡಿದು ಯಾರೋ ಬಲವಾಗಿ ಸೊಂಟಕ್ಕೆ ಒದೆದರು .ಆ ಹೊಡೆತದ ರಭಸಕ್ಕೆ ಅವರು ರಂಗಸ್ಥಳದ ಹೊರಗೆ ಹೋಗಿ ಬಿದ್ದರು. ಹೊಡೆದವರು ಯಾರು ಎಂದು ನೋಡುವಾಗ ಗುರುಗಳಾದ ಭಾಗವತರು. ಏನಾಯಿತು? ಹಾಗಂತ ಕುಣಿತ ತಪ್ಪಿರಲಿಲ್ಲ, ರಂಗ ನಡೆಯನ್ನೂ ತಪ್ಪಿರಲಿಲ್ಲ. ಆದರೆ ಯಾಕೆ ಈ ಸಿಟ್ಟು? ಎಲ್ಲಿಯೋ ತಪ್ಪಿದೇ ಎಂದು ತಿಳಿದಾಗ ಅಳು ಉಮ್ಮಳಿಸಿ ಬರುತ್ತಿತ್ತು. ಧ್ರುವನ ಆ ಸನ್ನಿವೇಷಕ್ಕೆ ದುಃಖ ಕಡಿಮೆಯಾಗಿದ್ದಕ್ಕೆ ಭಾಗವತರು ಆ ಕ್ಷಣದಲ್ಲಿಯೇ ದಂಡಿಸಿದ್ದರು. ಅದು ಅರ್ಥವಾಯಿತು. ಆದ ಅಪಮಾನ, ದುಃಖದ ನಡುವೆಯೂ ಮತ್ತೆ ಹೆಗಡೆಯವರು ಪಾತ್ರವನ್ನು ಮುಂದುವರೆಸಿದರು. ಪಾತ್ರ ಸಹಜವಾಗಿ ಬಂದಿದೆ ಎಂದು ಪ್ರೇಕ್ಷಕರು ಶ್ಲಾಘಿಸಿದರು!!

ಬಾಲ ಕಲಾವಿದರಾಗಿ ಕಲಿಯುತ್ತ ಬೆಳೆಯುತ್ತ ಸಾಗಿದ ಮಂಜುನಾಥ ಹೆಗಡೆಯವರು ಪಾತ್ರಗಳನ್ನು ವಿಸ್ತರಿಸುತ್ತ, ಹೊಸ ನೋಟಗಳನ್ನು ಅಳವಡಿಸುತ್ತ ಗಟ್ಟಿಯಾಗುತ್ತ ಸಾಗಿದರು. ಪ್ರಹ್ಲಾದ ಚರಿತ್ರೆಯ ಪ್ರಹ್ಲಾದ, ಸುಧನ್ವ ಕಾಳಗದ ಸುಧನ್ವ , ಕೃಷ್ಣಲೀಲೆಯ ಕೃಷ್ಣ ಹೀಗೆ ಮುಂತಾದ ಪುಂಡು ಪಾತ್ರಗಳಿಗೆ ಹೆಸರನ್ನು ಗಳಿಸಿಕೊಂಡರು. ಹುಕ್ಲಮಕ್ಕಿ ಮೇಳದ ಸಹ ಕಲಾವಿದರಾಗಿ ಅಣ್ಣ ಶಿವರಾಮ ಹೆಗಡೆ, ಬೆಳಸಲಿಗೆ ಗಣಪತಿ ಹೆಗಡೆ, ಹುಲಿಮನೆ ಮುಖ್ಯಪ್ರಾಣ ಭಟ್ಟರು, ಗಾಳೀಜಡ್ಡಿ ನಾರಾಯಣ ಹೆಗಡೆ, ದಂಟ್ಕಲ್ ನಾರಾಯಣ ಹೆಗಡೆ, ದೇವಣಗದ್ದೆ ಸುಬ್ರಾಯ ಹೆಗಡೆ, ಗೋಳಗೋಡ ಕೃಷ್ಣ ಹೆಗಡೆ, ಬಗರಿಮಕ್ಕಿ ಪುಟ್ಟೇ ಹೆಗಡೆ ಮುಂತಾದವರು ಒಡನಾಡಿಗಳಾಗಿ ಮೇಳವನ್ನು ಬೆಳೆಸಿದರು. ಕಡತೋಕ ಮಂಜುನಾಥ ಭಾಗವತರು ಹಾಗೂ ಕೆರೆಮನೆ ವೆಂಕಟಚಾಲ ಭಟ್ಟರು ಕೂಡ ಈ ಮೇಳದಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ.

ಒಳ್ಳೆಯ ರೀತಿಯಲ್ಲಿ ಸಾಗುತ್ತಿದ್ದ ಹುಕ್ಲುಮಕ್ಕಿ ಮೇಳಕ್ಕೆ ೧೯೪೫ರ ಹೊತ್ತಿಗೆ ಆಘಾತವೊಂದು ಎದುರಾಯಿತು. ಸುಮಾರು ೨೦ ವರುಷಗಳ ಕಾಲ ಮೇಳದ ಆಧಾರ ಸ್ಥಂಭವಾಗಿದ್ದ ಅಣ್ಣ ಶಿವರಾಮ ಹೆಗಡೆಯವರು ನಿಧನರಾದ ನಂತರ ಸುಮಾರು ೮-೧೦ ವರುಷಗಳ ಕಾಲ ಮೇಳವು ತನ್ನ ಕಾರ್ಯ ಚಟುವಟಿಕೆಯನ್ನು ನಿಲ್ಲಿಸಿತು. ಜೊತೆಗೆ ಹಳೆಯ ಕಲಾವಿದರೆಲ್ಲ ವಯಸ್ಸಿನ ಕಾರಣಗಳಿಂದ ಯಕ್ಷಗಾನದಿಂದ ದೂರ ಸರಿದರು. ಆದರೆ ಹೆಗಡೆಯವರ ಕಲಾ ಸೇವೆಯ ದಾಹ ಕಡಿಮೆಯಾಗಿರಲಿಲ್ಲ. ಸಕಾಲದಲ್ಲಿ ಒಪ್ಪಿತ ಮನಸ್ಸುಗಳು ಕೂಡದೆ ಇರುವುದರಿಂದ ತಮ್ಮ ಆಸೆಯನ್ನು ಹಾಗೆಯೇ ಅದುಮಿಟ್ಟುಕೊಂಡಿದ್ದರು. ಯಾವಾಗ ಅವರ ಹದಿನಾರು ವರುಷದ ಮಗ ಕಮಲಾಕರ ಹೆಗಡೆಯವರು ಕಲೆಯ ಬಗ್ಗೆ ಆಸಕ್ತಿಯನ್ನು ತಳೆದು ಅದರಲ್ಲಿ ಪಾಲ್ಗೊಳುವ ಇಚ್ಛೆಯನ್ನು ವ್ಯಕ್ತಪಡಿಸಿದರೋ ಆಗ ಮತ್ತೆ ಅವರ ಯಕ್ಷಗಾನದ ಆಸೆ ಚಿಗುರೊಡೆಯಿತು. ೧೯೫೫ರ ಹೊತ್ತಿಗೆ ಮತ್ತೆ ಮೇಳವನ್ನು ಮರುಸ್ಥಾಪನೆಗೆ ಮುಂದಾದರು. ಜಾನಕೈ ತಿಮ್ಮಪ್ಪ ಹೆಗಡೆ ಸಹಕಾರದೊಂದಿಗೆ ಊರಿನ ಕಲಿಯುವ ಆಸಕ್ತರನ್ನು ಒಗ್ಗೂಡಿಸಿಕೊಂಡು, ಅವರಿಗೆ ಯಕ್ಷಗಾನವನ್ನು ಕಲಿಸಿ, ಮತ್ತೆ ಮೇಳದ ಹೆಸರಿನಲ್ಲಿ ಪ್ರದರ್ಶನಗಳನ್ನು ನೀಡಲು ಪ್ರಾರಂಭಿಸಿದರು. ಅವರ ಎರಡನೇ ಹಂತದಲ್ಲಿ ಹಾರ್ಸಿಮನೆ ಗಣಪತಿ, ಜಾನಕೈ ಮಂಜುನಾಥ ಹೆಗಡೆ, ದಂಟ್ಕಲ್ ಗಣಪತಿ ಹೆಗಡೆ, ನೇರ್ಲಮನೆ ಈಶ್ವರ ಹೆಗಡೆ ಮತ್ತು ಗಂಗಾಧರ ಹೆಗಡೆ, ಭಾಸ್ಕರ ಹೆಗಡೆ ಮುಂತಾದವರು ಮೇಳದ ಕಲಾವಿದರಾದರು. ಕಡತೋಕ ಮಂಜುನಾಥ ಭಾಗವತರು ಕೂಡ ಮೇಳದ ಸಾಕಷ್ಟು ಆಟಗಳಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ.

ಮೇಳದ ಎರಡನೇ ಹಂತದಲ್ಲಿ ಹೆಗಡೆಯವರ ಪಾತ್ರಗಳ ಸಾಲು ಕೂಡ ಬದಲಾಯಿತು. ಮೊದಲ ಹಂತದಲ್ಲಿ ಪುಂಡು/ಪುರುಷವನ್ನು ಮಾಡುತ್ತಿದ್ದ ಹೆಗಡೆಯವರು ಎರಡನೇ ಹಂತದಲ್ಲಿ ಪ್ರಬುದ್ದ ಪಾತ್ರಗಳನ್ನು ಮಾಡುವುದಕ್ಕೆ ಪ್ರಾರಂಭಿಸಿದರು. ಶಲ್ಯಪರ್ವದ ಶಲ್ಯ, ಕಂಸವಧೆಯ ಕಂಸ, ಪ್ರಹ್ಲಾದ ಚರಿತ್ರೆಯ ಹಿರಣ್ಯಕಶಿಪು ಮುಂತಾದ ಪಾತ್ರಗಳು ಹೆಸರನ್ನು ಗಳಿಸಿದವು. ಸ್ವತಃ ಮೇಳದ ಕಲಾವಿದರಾಗಿದ್ದ ಜಾನಕೈ ತಿಮ್ಮಪ್ಪ ಹೆಗಡೆಯವರು ಬರೆದ ’ಶನಿಕಥಾ ಪ್ರಸಂಗಕ್ಕೆ’ ಹುಕ್ಲುಮಕ್ಕಿ ಮೇಳವು ಸಾಕಷ್ಟು ಪ್ರಯೋಗವನ್ನು ನಡೆಸಿದ್ದಲ್ಲದೇ , ಅದಕ್ಕೊಂದು ಹೊಸ ಭಾಷ್ಯವನ್ನು ಬರೆಯಿತು. ಅನೇಕರು ಹರಿಕೆಯನ್ನು ಹೊತ್ತು ಈ ಮೇಳದ ’ಶನಿಕಥಾ’ ಪ್ರಸಂಗವನ್ನು ಮಾಡಿದವರು ಸಹ ಇದ್ದಾರೆ. ಈ ಪ್ರಸಂಗದಲ್ಲಿ ಮಂಜುನಾಥ ಹೆಗಡೆಯವರು ಸಮಗ್ರ ವಿಕ್ರಮನ ಪಾತ್ರವನ್ನು ಮಾಡುತ್ತಿದ್ದರು. ಪ್ರದರ್ಶನದ ದಿನದಂದು ಪೂರ್ಣವಾಗಿ ಉಪವಾಸವಹಿಸಿ ಪಾತ್ರವನ್ನು ನಿರ್ವಹಿಸುತ್ತಿದ್ದರು. “ಪುಟ್ಟೆದಾಕ್ಷಣ ತನ್ನ ದೃಷ್ಠಿಯನು ಪಿತನ ಮೇಲಿಟ್ಟರಿಂದಲೇ ಬಳಿಕ ತಪನ” ಹೇಳಿ ಮುಗಿಸುವುದರೊಳಗೆ ಶನಿಯನ್ನು ಹೊಗಳಿದ ಬ್ರಾಹ್ಮಣರನ್ನು ಜರೆಯುತ್ತಾ ಕೋಪದ ಪರಾಕಷ್ಟೆಯನ್ನು ತಲುಪಿ “ಪುಟ್ಟುತ ಬಾಲ್ಯದಿ ತಂದೆಗೆ ಕಷ್ಟವ ಕೊಟ್ಟ ದುರಾತುಮನು ದಿಟ್ಟಿಸಿ ನೋಡೆನೆನುತ ನೃಪ ಕರಗಳ ತಟ್ಟುತ ನಗುತಿರಲು” ಎಂದು ವಿಡಂಭನೆಯನ್ನು ಮಾಡುತ್ತ ಕುಣಿದು ಕುಪ್ಪಳಿಸಿ ನಿಜಾರ್ಥದಲ್ಲಿ ವಿಕ್ರಮನ ಮೇಲೆ ಕೋಪ ಮೂಡುವಂತೆ ಮಾಡುತ್ತಿರುವುದು ಅವರ ಕಲಾವಂತಿಕೆಯ ಶ್ರೇಷ್ಠತೆಗೆ ಸಾಕ್ಷಿ ಎನಿಸುತ್ತದೆ.

ಒಂದು ಹಂತಕ್ಕೆ ಪ್ರಬುದ್ದವಾಗಿ ಕಲಾವಿದ ಬೆಳೆದ ನಂತರ ಹೊಸ ಅನ್ವೇಷಣೆಯನ್ನು ಪ್ರಾರಂಭಿಸುತ್ತಾನೆ. ತಾನು ಯಾವ ಪಾತ್ರ ಮಾಡುತ್ತೇನೆ ಎನ್ನುವುದಕ್ಕಿಂತ ಮಾಡಿದ ಪಾತ್ರವನ್ನು ಹೇಗೆ ನಿರ್ವಹಿಸುವುದು ಎಂಬುದರ ಬಗ್ಗೆ ಹೆಚ್ಚು ಲಕ್ಷ ಹರಿಸುತ್ತಾನೆ. ಹೆಗಡೆಯವರು ಸಹ ಒಂದು ಹಂತದಲ್ಲಿ ಸಾಕಷ್ಟು ಪಾತ್ರಗಳನ್ನು ಪ್ರಬುದ್ದವಾಗಿ ನಿರ್ವಹಿಸಿದ ಮೇಲೆ ತನ್ನ ಪಾತ್ರಗಳನ್ನು ಸಹ ಕಲಾವಿದರಿಗೆ ಅಥವಾ ಹೊಸ ತಲೆಮಾರಿನ ಕಲಾವಿದರಿಗೆ ಬಿಟ್ಟುಕೊಟ್ಟು, ಅವರಿಗೆ ತನ್ನ ಅನುಭವವನ್ನು ಧಾರೆಯೆರೆದು ಅವರಿಂದ ಪಾತ್ರಗಳನ್ನು ಮಾಡಿಸಿ, ತಾನು ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಿದ್ದರು . ಈ ಉದಾತ್ತತೆ, ಅಂತಸ್ಸಾರ ಹೊಸ ಕಲಾವಿದರನ್ನು ಬೆಳೆಸುವ ಮಹತ್ವದ ಸಂಗತಿಯೆಂದು ಭಾವಿಸಬಹುದು. ಆದರೆ ಪ್ರಸಂಗದಲ್ಲಿನ ಮಹತ್ವದಲ್ಲದ ಪಾತ್ರಗಳನ್ನು ತಾನು ಮಾಡಿ ಅದಕ್ಕೂ ಕೂಡ ಜೀವ ತುಂಬುವುದು ಅವರ ಕಲಾವಂತಿಕೆಯ ಹೆಚ್ಚುಗಾರಿಕೆಯೆಂದು ಭಾವಿಸಬಹುದು. ಈ ಸಾಲಿನಲ್ಲಿ ತ್ರಿಶಂಕು ಚರಿತ್ರೆಯ ದೇವೇಂದ್ರ ಇತ್ಯಾದಿ ಪಾತ್ರಗಳು ಸೇರಿವೆ . ಪ್ರದರ್ಶನ ಮುಗಿದ ಮೇಲೆ ಈ ಪಾತ್ರಗಳನ್ನು ಪ್ರೇಕ್ಷಕ ನೆನಪಿಟ್ಟುಕೊಳ್ಳುವಂತೆ ರೂಪಿಸುವುದು ಸಾಮನ್ಯ ಸಂಗತಿಯಲ್ಲ. ಇದೊಂದು ಅವರ ಕಲಾಶ್ರೇಷ್ಠತೆಯನ್ನು ಪ್ರತಿಪಾದಿಸುತ್ತದೆ. ಬಹುಶಃ ಕಲಾ ಬದುಕಿನ ಅನುಭದಿಂದಲೇ ಅಥವಾ ಕಲಾಪಕ್ವತೆಯಿಂದಲೇ ಯಾವುದೇ ಪಾತ್ರಗಳನ್ನು ಗೆಲ್ಲಿಸುತ್ತೇನೆ ಎನ್ನುವ ಆತ್ಮವಿಶ್ವಾಸ ಮತ್ತು ಧೃಡತೆಗಳು ಕಲೆಯನ್ನು ಉನ್ನತ ಸ್ಥರದಲ್ಲಿ ನಿಲ್ಲಿಸುವುದಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ಖಚಿತವಾಗಿ ಹೇಳಬಹುದಾಗಿದೆ.

ಒಂದು ಕಾಲದಲ್ಲಿ ಮಲೆನಾಡಿನಾದ್ಯಂತ ಯಕ್ಷಗಾನವನ್ನು ಜೀವನ ನಿರ್ವಹಣೆಗೆಂದು ಸ್ವೀಕರಿಸಿ ವೃತ್ತಿ ಮೇಳಗಳಿಗೆ ಹೋದವರು ತುಂಬಾ ಬಹಳ ಕಡಿಮೆಯೇ. ಅದಕ್ಕಿದ್ದ ಪ್ರಮುಖ ಕಾರಣಗಳೆಂದರೆ ಮನೆಯ ಗದ್ದೆ ತೋಟಗಳನ್ನು ನೋಡಿಕೊಳ್ಳುವ ಅನಿವಾರ್ಯತೆ ಇತ್ತು. ಅದನ್ನು ಬಿಟ್ಟು ಹೊಗುವುದಕ್ಕೆ ಸಾಧ್ಯವಿರಲಿಲ್ಲ. ಆದರೆ ಹವ್ಯಾಸಿಗಳಾಗಿ ಕಲೆಯನ್ನು ಸ್ವೀಕರಿಸಿ, ಹವ್ಯಾಸಿ ಮೇಳಗಳನ್ನು ಮಾಡಿದವರು ಸಾಕಷ್ಟು ಮಂದಿಗಳಿದ್ದಾರೆ. ಇಲ್ಲಿ ಯಾವುದೇ ಆರ್ಥಿಕವಾದ ಕಾರಣಗಳಿಗಾಗಿ ಆಟವನ್ನು ಮಾಡುತ್ತಿದುದ್ದು ಬಹಳ ಕಡಿಮೆಯೇ. ಮಂಜುನಾಥ ಹೆಗಡೆಯವರ ಮನೆಗೆ ಅನೇಕರು ನಿಮ್ಮ ಮೇಳದ ಕಾರ್ಯಕ್ರಮವಾಗಬೇಕೆಂದು ವೀಳ್ಯವನ್ನು ಕೊಟ್ಟು ಬರುವುದು ವಾಡಿಕೆಯಾಗಿತ್ತು. ಹೆಚ್ಚಿನ ಸಲ ಅಲ್ಲಿ ಬರೇ ವೀಳ್ಯವೇ ಇರುತ್ತಿತ್ತು ವಿನಃ ಹಣ/ಆಟದ ಸಂಭಾವನೆ ಇರುತ್ತಿರಲಿಲ್ಲ . ಇದ್ದರೂ ಅದು ಬಣ್ಣ ಬೆಗಡೆ ಸಾಲುತ್ತಿತ್ತೇ ವಿನಃ ಹೆಚ್ಚಿನ ಮೊತ್ತವೇನು ಸಿಗುತ್ತಿರಲಿಲ್ಲ. ಇದನ್ನು ನೋಡುತ್ತಿದ್ದ ಮನೆಯವರು “ಹಣವೇ ಇಲ್ಲದೇ ಯಾಕೆ ಪ್ರದರ್ಶನಗಳನ್ನು ಮಾಡಬೇಕು” ಎಂದು ಹೆಗಡೆಯವರನ್ನು ಕೇಳಿದರೆ ” ಮಗು ಇದು ಸೇವೆ. ಇಂತಹ ಸೇವೆ ಮಾಡುವ ಅಥವಾ ಪಾಲ್ಗೊಳ್ಳುವುದಕ್ಕೆ ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯ. ಕ್ಷಣಕಾಲವಾದರೂ ದುಗುಡಗೊಂಡಿರುವ ಮನಸ್ಸುಗಳಿಗೆ ಕಲೆಯ ಮೂಲಕ ಸಾಂತ್ವನವನ್ನು ನೆಮ್ಮದಿಯನ್ನು ಕರುಣಿಸುವುದು ಸಾಮಾನ್ಯ ವಿಚಾರವಲ್ಲ. ಹಾಗಾಗಿ ಇದನ್ನು ಮಾಡುವುದರಿಂದ ನಮಗೆ ಯಾವುದೇ ನಷ್ಟವಿಲ್ಲ. ಕೊಡುವವ ದಾತಾರ ನಮಗೆ ಕೊಟ್ಟೆ ಕೊಡುತ್ತಾನೆ. ಈ ಬಗ್ಗೆ ಚಿಂತಿಸಬೇಕಿಲ್ಲ” ಎಂದು ನಿರ್ಲಿಪ್ತವಾಗಿಯೇ ಉತ್ತರಿಸುತ್ತಿದ್ದರು. ಬಹುಶಃ ಇಂತಹ ಅವರ ಸಮರ್ಪಣ ಭಾವದ ನಿಷ್ಕಾಮ ಕರ್ಮದ ಚಿಂತನೆಗಳು ಎತ್ತರದಲ್ಲಿದೇ ಎನ್ನುವುದನ್ನು ತೋರಿಸುತ್ತದೆ.

ಯಕ್ಷಗಾನದ ವಲಯದಲ್ಲಿ ಶತಮಾನಗಳಿಂದ ಉದಯಿಸಿದ ಹೊಸ ಚಿಂತನೆಗಳು, ಆವಿಷ್ಕಾರಗಳು ಕಲಾ ಚೌಕಟ್ಟಿನ ಪರಧಿವೊಳಗೆ ಒಡಮೂಡಿ, ಅವುಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುತ್ತ ಪರಂಪರೆಗಳು ಸೃಷ್ಠಿಯಾಗಿರುವುದನ್ನು ಯಕ್ಷಗಾನದ ಇತಿಹಾಸದಿಂದ ಕಾಣಬಹುದಾಗಿದೆ. ಇಂತಹ ವೃದ್ಧಿಸಿದಂತಹ ಕ್ರಮಗಳು ಕಾಲ ಘಟ್ಟದ ಸೃಜನಾತ್ಮಕ ಅಂಶಗಳೆಂದು ಪರಿಗಣಿಸಿ,ಈ ಪ್ರಯತ್ನಶೀಲತೆಗಳು ಯಕ್ಷಗಾನದ ಬೆಳವಣಿಗೆಗೆ ಪೂರಕವಾದ ಸಂಗತಿಗಳೆಂದು ಸಹ ಕರೆಯಬಹುದಾಗಿದೆ. ಈ ನಿಟ್ಟಿನಲ್ಲಿ ಹುಕ್ಲಮಕ್ಕಿ ಮೇಳ ಮತ್ತು ಮಂಜುನಾಥ ಹೆಗಡೆಯವರು ಕಂಡುಕೊಂಡ ಹೊಸತನಗಳನ್ನು ಅಧ್ಯಾಯನ ದೃಷ್ಠಿಕೋನದಿಂದ ನೋಡುವ ಅಗತ್ಯತೆಗಳಿವೆ. ಇದರಲ್ಲಿ ಕೆಲವು ಮುಖ್ಯವಾದ ಸಂಗತಿಗಳೆಂದರೆ ಹಿಲಾಲು ಬೆಳಕಿನಲ್ಲಿ ಒಡಮೂಡಿ ಬರುತ್ತಿದ್ದ ಭಯಾನಕ ತಟ್ಟೇ ವೀರಭದ್ರ, ಉಗ್ರಸ್ವರೂಪಿ ನರಸಿಂಹ ಪಾತ್ರದ ಆಹಾರ್ಯ ಮತ್ತು ಮುಖವರ್ಣಿಕೆ, “ತೈಕು ತೈಕು ತೈದಾ ಧೇಂ, ತೈಕು ತೈಕು ತೈದಾ ಧೇಂ” ಎಂಬ ಬಿಡ್ತಿಗೆಯೊಂದಿಗೆ ಪ್ರವೇಶವಾಗುವ ವರಾಹ ಪಾತ್ರಗಳು ಇತ್ಯಾದಿಗಳನ್ನು ಅವಲೋಕಿಸಬಹುದಾಗಿದೆ.

ಹೀಗೆ ಎರಡನೇ ಬಾರಿಗೆ ಪುನರ್ಜೀವನಗೊಂಡು ಸಾಗುತ್ತಿದ್ದ ಮೇಳ ಮತ್ತೆ ನಿಲ್ಲುವ ಸ್ಥಿತಿಯನ್ನು ತಲುಪಿತು. ಮತ್ತೆ ಪುನರ್ ಜೀವನಗೊಳ್ಳುವ ಲಕ್ಷಣಗಳು ಇರಲಿಲ್ಲ. ಈ ನಿಟ್ಟಿನಲ್ಲಿ ಮಂಜುನಾಥ ಹೆಗಡೆಯವರ ಕಲಾ ಜೀವನದ ಮೂರನೇ ಹಂತವಾಗಿ ೧೯೭೨ರಲ್ಲಿ ಹುಕ್ಲಮಕ್ಕಿ ಮಕ್ಕಳ ಮೇಳವನ್ನು ಆರಂಭಿಸಿ ಹಲವಾರು ಮಕ್ಕಳಿಗೆ ಯಕ್ಷಗಾನ ತರಬೇತಿಯನ್ನು ನೀಡಿ ಅವರಿಂದ ಯಕ್ಷಗಾನದ ಪ್ರದರ್ಶನಗಳನ್ನು ಮಾಡಿಸಿದರು. ಇದರಲ್ಲಿ ಹುಕ್ಲಮಕ್ಕಿ ಪರಮೇಶ್ವರ ಹೆಗಡೆ, ದಂಟ್ಕಲ್ ಸತೀಶ್ ಹೆಗಡೆ, ಹಾರ್ಸಿಮನೆ ಶಿವರಾಮ ಹೆಗಡೆ, ಹಾರ್ಸಿಮನೆ ವೆಂಕಟಗಿರಿ, ಶ್ರೀಪಾದ ಹೆಗಡೆ, ದಂಟ್ಕಲ್ ಮಾಬ್ಲೆಶ್ವರ ಮುಂತಾದವರು ಇದರ ಕಲಾವಿದರಾಗಿದ್ದರು. ಈ ಮಕ್ಕಳಿಂದ ಅನೇಕ ಪ್ರದರ್ಶನಗಳು ಸಂಪನ್ನವಾಗಿದೆ. ಮಂಜುನಾಥ ಹೆಗಡೆಯವರ ಕೊನೆಯ ವೇಷವಾಗಿ ತಮ್ಮ ೭೦ನೇ ವಯಸ್ಸಿನಲ್ಲಿ ಹಾರ್ಸಿಕಟ್ಟಾದಲ್ಲಿ ನರಸಿಂಹನ ವೇಷವನ್ನು ಮಾಡಿದರು. ಸಂತೃಪ್ತ ಜೀವನವನ್ನು ಸಾಗಿಸಿದ ಮಂಜುನಾಥ ಹೆಗಡೆಯವರು ತಮ್ಮ ಬದುಕಿನ ನಿಜವೇಷವನ್ನು ೧೫ ಮೇ ೧೯೯೧ರಲ್ಲಿ ಮುಗಿಸಿ ಸ್ವರ್ಗಸ್ಥರಾದರು.

ಮಂಜುನಾಥ ಹೆಗಡೆಯವರ ಸಾಂಸಾರಿಕ ಜೀವನವನ್ನು ನೋಡುವುದಾದರೆ ಕಲಾ ಜೀವನದ ಬೆಳವಣಿಗೆಯಲ್ಲಿ ಅವರ ತಾಯಿ ಗಣಪಿಯವರು ಮತ್ತು ಅವರ ಅಣ್ಣ ಶಿವರಾಮ ಹೆಗಡೆಯವರ ಪಾತ್ರವನ್ನು ಮರೆಯುವ ಹಾಗಿಲ್ಲ. ಅವರುಗಳು ನೀಡಿದ ಪ್ರೋತ್ಸಾಹಗಳು ಹೆಗಡೆಯವರ ಕಲಾ ಬದುಕನ್ನು ಬೆಳಗುವಂತೆ ಮಾಡಿದ್ದು ಸುಳ್ಳಲ್ಲ. ಮುಂದೆ ಹೆಗಡೆಯವರು ಲೀಲಾವತಿಯವರನ್ನು ಮದುವೆಯಾಗಿ ಕಮಲಾಕರ, ಪರಮೇಶ್ವರ,ಗೋಪಾಲಕೃಷ್ಣ, ಶ್ರೀಪಾದ, ಸುಶೀಲಾ, ಯಶೋದಾ,ಕುಸುಮಾಕ್ಷಿ,ಅಹಲ್ಯಾ ಎಂಬ ಮಕ್ಕಳನ್ನು ಪಡೆದಿದ್ದಾರೆ. ಮಕ್ಕಳು ಕೂಡ ತಂದೆಯ ಯಕ್ಷಗಾನದ ಹಾದಿಯಲ್ಲಿಯೇ ಬೆಳೆದು ಹುಕ್ಲಮಕ್ಕಿ ಮೇಳವನ್ನು ಬೆಳೆಸುತ್ತಿರುವುದು ವಿಶೇಷ. ಅವರ ಹಿರಿಯ ಮಗ ಕಮಲಾಕರ ಹೆಗಡೆಯರು ಎರಡನೇ ವೇಷಗಳಲ್ಲಿ ಹಲವು ಖ್ಯಾತ ಹಿರಿಯ ಕಿರಿಯ ಕಲಾವಿದರೊಂದಿಗೆ ವೇಷವನ್ನು ಮಾಡಿ ಹೆಸರನ್ನು ಗಳಿಸಿದ್ದಾರೆ. ಮತ್ತೊಬ್ಬ ಮಗ ಪರಮೇಶ್ವರ ಹೆಗಡೆಯರಿಗೂ ಯಕ್ಷಗಾನ ಸಂಸ್ಕಾರಗಳು ಬೆಳೆದು ಅವರು ಕೂಡ ಅರ್ಥಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಅವರ ಇನ್ನೊಬ್ಬ ಮಗ ಡಾ.ಶ್ರೀಪಾದ ಹೆಗಡೆಯವರು ವೃತ್ತಿಯಲ್ಲಿ ವೈದ್ಯರಾದರೂ ಕೂಡ ಪ್ರವೃತ್ತಿಯಲ್ಲಿ ಯಕ್ಷಗಾನದಲ್ಲಿ ಅದಮ್ಯ ಆಸಕ್ತಿಯನ್ನು ಹೊಂದಿ ಹಲವಾರು ಪ್ರದರ್ಶನಗಳನ್ನು ನೀಡಿದ್ದಾರೆ. ಜೊತೆಗೆ ಹುಕ್ಲಮಕ್ಕಿ ಮೇಳದ ವೇಷ ಪರಂಪರೆಯನ್ನು ಪುನರ್ಜೀವನಗೊಳಿಸುವ ಮಹತ್ತರವಾದ ಹೆಜ್ಜೆಯನ್ನು ಇರಿಸಿ ದಕ್ಷಯಜ್ಞದ ತಟ್ಟೇ ವೀರಭದ್ರ ಹಾಗೂ ಹಿರಣ್ಯಾಕ್ಷ ವಧೆಯ ವರಾಹ ಇತ್ಯಾದಿ ಪಾತ್ರಗಳನ್ನು ಮತ್ತೆ ರಂಗದಲ್ಲಿ ತಂದಿದ್ದಾರೆ. ಹುಕ್ಲಮಕ್ಕಿ ಮೇಳದ ಪರಂಪರೆಯನ್ನು ದಾಖಲಿಸುವ ಸಲುವಾಗಿ ’ಹುಕ್ಲಮಕ್ಕಿ ಮೇಳ’ ಎಂಬ ಹೊತ್ತಿಗೆಯನ್ನು ತಂದಿರುವುದು ಗಮನಾರ್ಹ ಸಂಗತಿಯಾಗಿದೆ. ಒಟ್ಟಿನಲ್ಲಿ ಕುಟುಂಬವು ಸುಮಾರು ನೂರು ವರುಷಗಳಿಂದ ಮೇಳವನ್ನು ನಡೆಸಿ, ಜೊತೆಗೆ ಯಕ್ಷಗಾನದ ಬಗ್ಗೆ ಅದ್ವಿತೀಯ ಪ್ರೀತಿ ಹಾಗೂ ಆಸಕ್ತಿಯನ್ನು ಹೊಂದಿರುವುದು ಅತ್ಯಂತ ಶ್ಲಾಘನೀಯ ವಿಚಾರವಾಗಿದೆ.

ನಮ್ಮ ಬದುಕಿಗೆ ಆತ್ಮವಿಶ್ವಾಸವೇ ಸಾಧನೆಯ ಹಾದಿಗೆ ಮೆಟ್ಟಿಲೆನಿಸುತ್ತದೆ. ಸಾಧಿಸುವ ಹಾದಿಯಲ್ಲಿ ಅಡೆತಡೆಗಳು, ಉಪಹತಿಗಳು ಬಂದರೂ ನಮ್ಮ ಸಕಾರಾತ್ಮಕ ಚಿಂತನೆಗಳು, ಆಸಕ್ತಿ, ಕಠಿಣ ಪರಿಶ್ರಮ, ಪ್ರಾಮಾಣಿಕತೆ, ನಿಷ್ಕಾಮ ಭಾವಗಳು ಬದುಕನ್ನು ಉದ್ದರಿಸುವಂತೆ ಮಾಡುತ್ತದೆ. ಮಂಜುನಾಥ ಹೆಗಡೆಯವರ ಬದುಕನ್ನು ನೋಡುವಾಗ ಬಾಲ್ಯದಲ್ಲಿ ಕಂಡ ನೋವು, ಹತಾಶೆ ಎಲ್ಲವನ್ನು ಮೆಟ್ಟಿ ಗಮ್ಯವಾದುದನ್ನು ಪಡೆಯಲೇ ಬೇಕೆಂಬ ಉತ್ಕಟವಾದ ಅಭಿಲಾಷೆಯನ್ನು ಹೊಂದಿ, ಅದನ್ನು ಸಾಧಿಸಿದ ಪರಿ ಅನನ್ಯವೆನಿಸುತ್ತದೆ. ನೋಡುಗರಿಗೆ ಹೊರಗಡೆ ಶಾಂತ ಸರೋವರದಂತೆ ಮನಸ್ಸು ಹೊರ ಹೊಮ್ಮಿದರೂ ಒಳಗಡೆ ಮಾತ್ರ ಪ್ರಕ್ಷುಬ್ಧವಾದ ಕಡಲಿನಲ್ಲಿ ಹೊಸತನ್ನು ಕಂಡು ಹಿಡಿಯುವ ನಾವಿಕನ ತೊಳಲಾಟಗಳ ಸಂಚಾರಿ ಭಾವದಲ್ಲಿ ಸಾಧಿಸಿದ ಸ್ಥಿತಿ ಮೆಲ್ಮಟ್ಟದೆನಿಸುತ್ತದೆ. ಅವರನ್ನು ಮತ್ತೊಮ್ಮೆ ನೆನಪಿಸಿಕೊಳ್ಳುತ್ತ, ಸಾಧನೆಯನ್ನು ಮೆಲುಕು ಹಾಕುತ್ತ, ಅವರ ಚೇತನಕ್ಕೆ ನಮ್ಮ ನಮನಗಳು.

ಮಾಹಿತಿ ಸಹಕಾರ: ’ಹುಕ್ಲಮಕ್ಕಿ ಮೇಳ’ ಹೊತ್ತಿಗೆ, ಡಾ.ಶ್ರೀಪಾದ್ ಹೆಗಡೆ

-ರವಿ ಮಡೋಡಿ, ಬೆಂಗಳೂರು

error: Content is protected !!
Share This