ನಗರ ಜಗನ್ನಾಥ ಶೆಟ್ಟಿ (೧೯೪೧-೨೦೦೪)

ನಗರ ಜಗನ್ನಾಥ ಶೆಟ್ಟಿಯವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ‌ ನಗರದಲ್ಲಿ ೧೯೪೧ರಲ್ಲಿ ಚಂದಯ್ಯ ಶೆಟ್ಟಿ ಮತ್ತು ಚಿಕ್ಕಮ್ಮ ಶೆಡ್ತಿ ದಂಪತಿಗಳ ಮಗನಾಗಿ ಜನಿಸಿದರು. ಅವರಿಗೆ ನಾಗರಾಜ, ಸುಬ್ಬಣ್ಣ, ಜಯಮ್ಮ, ಪದ್ದಮ್ಮ, ಶಾಂತ, ರಾಧ ಎಂಬ ಆರು ಸಹೋದರ, ಸಹೋದರಿಯರು ಇದ್ದಾರೆ. ಮೂಲತಃ ಜಗನ್ನಾಥ ಶೆಟ್ಟರ ಹಿರಿಯರು ಕುಂದಾಪುರ ಮೂಲದವರಾದರೂ ಕೂಡ ಅವರು ಹುಟ್ಟಿ ಬೆಳೆದಿದ್ದು ನಗರದಲ್ಲಿಯೇ. ಅಲ್ಲಿಯೇ ಅವರು ಮೂರನೇ ತರಗತಿಯವರೆಗೆ ವಿದ್ಯಾಭ್ಯಾಸವನ್ನು ಮಾಡಿದರು.

ಜಗನ್ನಾಥ ಶೆಟ್ಟರ ಯಕ್ಷಗಾನ ರಂಗ ಪ್ರವೇಶವೇ ತೀರ ಆಕಸ್ಮಿಕ. ಊರಿನಲ್ಲಿ ಸೌಕೂರು ಮೇಳದ ಬಯಲಾಟ ಸಂಪನ್ನವಾಗಿತ್ತು. ಅದರಲ್ಲಿ ಐರಾವತ ಪ್ರಸಂಗ. ಪ್ರಸಂಗಕ್ಕೆ ಬೇಕಾದ ಬ್ರಾಹ್ಮಣ ವಟುಗಳ ಪಾತ್ರಕ್ಕೆ ಊರಿನ ಒಂದಷ್ಟು ಮಂದಿ ಹುಡುಗರಿಗೆ ಕಚ್ಚೆ, ನಾಮ ಹಾಕಿ ರಂಗಸ್ಥಳಕ್ಕೆ ಬಿಟ್ಟಿದ್ದರು. ಆಟದಲ್ಲಿ ಬ್ರಾಹ್ಮಣ ವಟುವಿನ ಪಾತ್ರಧಾರಿಯಾಗಿದ್ದ ಹನ್ನೆರಡರ ಹುಡುಗನೊಬ್ಬ ಅಲ್ಲಿಯಾಗುವ ರಂಗ ಕ್ರಿಯೆಗಳನ್ನು ಬಹಳ ಆಸ್ಥೆಯಿಂದ ನೋಡುತ್ತಿದ್ದ. ಹುಡುಗನಿಗೆ ಇದೊಂದು ಆಕರ್ಷಣೆಯಾಗಿ ಕಾಣಿಸಿತು. ಅವನಿಗೆ ರಂಗದ ರಂಗು ಮುದವನ್ನು ಕೊಟ್ಟಿತು. ಬೆಳಗಾಗಿ ಆ ದಿನದ ಆಟ ಮುಗಿಯಿತು. ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದರು. ಆ ಹುಡುಗನೂ ಹೋದ. ಮೇಳದವರು ರಂಗಸ್ಥಳವನ್ನು ಬಿಚ್ಚಿ ಎಲ್ಲವನ್ನು ಕಟ್ಟಿಕೊಂಡು ಊರನ್ನು ಬಿಟ್ಟು ಮತ್ತೊಂದು ಕಡೆಯಲ್ಲಿ ಪ್ರದರ್ಶನವನ್ನು ನೀಡುವುದಕ್ಕೆ ತೆರಳಿದರು. ಆ ಹುಡುಗನಿಗೆ ರಾತ್ರಿ ಕಂಡ ರಂಗಭೂಮಿ ನೆನಪುಗಳು ಮತ್ತೆ ಮತ್ತೆ ಕಾಡಿ ಮನೆಯಲ್ಲಿ ನಿಲ್ಲುವುದಕ್ಕೆ ಸಾಧ್ಯವಾಗಲಿಲ್ಲ. ತಾನು ಏನನ್ನು ಗಳಿಸಿಕೊಳ್ಳಬೇಕು ಎಂಬ ಅವ್ಯಕ್ತವಾದ ಭಾವ ಸ್ಪುಟವಾಗುತ್ತಿರುವಾಗ ಮನೆಯಲ್ಲಿ ಯಾರಿಗೂ ಏನನ್ನು ಹೇಳದೆ ಆ ದಿನ ಆಟ ನಡೆಯುವ ಸ್ಥಳವಾದ ಹುಲಿದೇವರಬನಕ್ಕೆ ಹೋಗಿ ಆಟದ ಚೌಕಿಯಲ್ಲಿ ನಿಂತ. ಹಿಂದಿನ ದಿನ ಆಟದಲ್ಲಿ ಈ ಹುಡುಗನ್ನು ನೋಡಿದ್ದ ಮೇಳದವರು, ಆ ದಿನದ ಆಟಕ್ಕೂ ಹುಡುಗನನ್ನು ಸೇರಿಸಿಕೊಂಡರು. ಮುಂದೆ ಇದು ಅವ್ಯಾಹತವಾದಾಗ ಹುಡುಗ ಆ ಮೇಳವನ್ನೇ ಸೇರಿಬಿಟ್ಟ. ಅದೇ ಹುಡುಗ ಮುಂದೆ ಬೆಳೆಯುತ್ತ ಬೆಳೆಯುತ್ತ ಹೆಮ್ಮರವಾಗಿ ’ ನಗರ ಜಗನ್ನಾಥ ಶೆಟ್ಟಿ’ ಎಂಬ ಅಭಿಧಾನವನ್ನು ಹೊತ್ತು ಸರಿ ಸುಮಾರು ನಲವತ್ತು ವರುಷಗಳ ಕಾಲ ಯಕ್ಷರಂಗದಲ್ಲಿ ಮೆರೆದು, ಇತಿಹಾಸವನ್ನು ನಿರ್ಮಿಸುವುದಕ್ಕೆ ಕಾರಣನಾದ.

ಆಗಿನ ಕಾಲದಲ್ಲಿ ವೃತ್ತಿ ಮೇಳಗಳ ಪ್ರದರ್ಶನಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಿಗೆ ಅಥವಾ ರಂಗವನ್ನು ತುಂಬುವುದಕ್ಕೆ ಬೇಕಾಗುವ ಪಾತ್ರಗಳಿಗೆ ಊರಿನ ಹುಡುಗರುಗಳಿಂದಲೇ ಮಾಡಿಸುವ ಪದ್ದತಿಗಳಿತ್ತು. ಇದೊಂದು ಮುಂದಿನ ತಲೆಮಾರಿಗೆ ರಂಗದ ಬಗ್ಗೆ ಆಸಕ್ತಿಯನ್ನೋ ಪ್ರೇರಣೆಗಳನ್ನೋ ನೀಡಿ ಹೊಸ ಕಲಾವಿದರುಗಳನ್ನು ಬೆಳೆಸುವ ಮಹತ್ವದ ಸಂಗತಿಯೆಂದು ಭಾವಿಸ ಬಹುದಾಗಿದೆ. ಜಗನ್ನಾಥ ಶೆಟ್ಟರು ಸೌಕೂರು ಮೇಳವನ್ನು ಸೇರುವಾಗ ಅವರಿಗೆ ಯಕ್ಷಗಾನದ ಬಗ್ಗೆ ಯಾವ ಏನು ತಿಳಿದಿರಲಿಲ್ಲ. ಜೊತೆಗೆ ಅವರಿಗೆ ಯಕ್ಷಗಾನದ ಹಿನ್ನೆಲೆಯಾಗಲಿ, ನೋಡಿದ ಅನುಭವವಾಗಲಿ ಇರಲಿಲ್ಲ. ಕೇವಲ ಆಕರ್ಷಣೆಯಿಂದಲೇ ಸ್ವಯಂಪ್ರೇರಿತರಾಗಿ ಮೇಳವನ್ನು ಸೇರಿದ ಅವರು ಮೊದಲು ಯಕ್ಷಗಾನದ ಬಾಲಪಾಠವಾದ ಪೂರ್ವರಂಗವನ್ನು ರಂಗದಲ್ಲಿ ಅಭ್ಯಾಸಿಸಿದರು. ಇದೇ ಮೇಳದಲ್ಲಿ ಬಾಲ ಕಲಾವಿದರಾಗಿ ಮೊಳಹಳ್ಳಿ ಹಿರಿಯ ನಾಯಕರು ಇದ್ದರು. ಇವರಿಬ್ಬರು ಮೇಳದಲ್ಲಿ ಕೊಡಂಗಿ ವೇಷವನ್ನು ಮಾಡುತ್ತಿದ್ದರು. ಮೇಳದ ಯಜಮಾನರಾದ ಶ್ರೀನಿವಾಸ ನಾಯಕ್ ಹಾಗೂ ಭಾಗವತರರಾಗಿದ್ದ ಗುಂಡ್ಮಿ ರಾಮಚಂದ್ರ ನಾವಡರು ಅವರಿಗೆ ಪ್ರೋತ್ಸಾಹವನ್ನು ನೀಡಿದರು. ಅವರು ಶ್ರದ್ಧೆಯಿಂದ ಕಲಿಯುತ್ತ, ಹಂತ ಹಂತವಾಗಿ ಬೆಳೆದು ಪ್ರಸಂಗದ ಪಾತ್ರಗಳನ್ನು ಪ್ರಾರಂಭಿಸಿದರು. ಸೌಕೂರು ಮೇಳದಲ್ಲಿ ಮೊದಲ ಎರಡು ವರುಷದ ತಿರುಗಾಟವನ್ನು ಮಾಡಿದ ನಂತರ ಹೆಗ್ಗೊಡಿನ ಚಿಕ್ಕಹೊನ್ನೆಸರದ ಮೇಳದಲ್ಲಿ ಒಂದು ವರುಷದ ತಿರುಗಾಟವನ್ನು ಮಾಡಿದರು. ಮುಂದೆ ಮಾರಣಕಟ್ಟೆ, ಹೆರ್ಗಾ, ಬಾಳೆಹೊಳೆ, ನಾಗರಕುಡಿಗೆ, ಗೋಳಿಗರಡಿ, ಅಮೃತೇಶ್ವರಿ, ಮಂದಾರ್ತಿ, ಸಾಲಿಗ್ರಾಮ, ಮೂಲ್ಕಿ, ಇಡಗುಂಜಿ, ಕುಮಟಾ, ಪೆರ್ಡೂರು ಹೀಗೆ ಮಲೆನಾಡು ಹಾಗೂ ಕರಾವಳಿಯ ಅನೇಕ ಮೇಳಗಳಲ್ಲಿ ದುಡಿಯುತ್ತ ಸತತ ನಲವತ್ತೆರಡು ವರುಷಗಳ ಕಲಾ ಬದುಕನ್ನು ಕಂಡಿದ್ದಾರೆ. ಜೊತೆಗೆ ತೆಂಕಿನ ಮೇಳವಾದ ಸುರತ್ಕಲ್ ಮೇಳದಲ್ಲಿಯೂ ಸಹ ಪಾತ್ರಗಳನ್ನು ನಿರ್ವಹಿಸಿದ್ದಾರೆ.

೧೯೭೦ ರಿಂದ ೧೯೯೦ ವರೆಗೆ ಯಕ್ಷಗಾನ ಕಂಡ ಸ್ವರ್ಣಯುಗವೆಂದು ಬಲ್ಲವರು ಹೇಳುತ್ತಾರೆ. ಈ ಕಾಲದಲ್ಲಿ ಸಂಪನ್ನವಾದ ಪ್ರದರ್ಶನಗಳು ಹೊಸ ಪ್ರೇಕ್ಷಕರನ್ನು ಸೃಷ್ಠಿಸಿ ಯಕ್ಷಗಾನಕ್ಕೆ ನೀಡಿದ್ದು ಮಾತ್ರವಲ್ಲದೇ ಪ್ರದರ್ಶನದ ಗುಣಮಟ್ಟಗಳು ಇಂದಿಗೂ ಕೂಡ ಯಕ್ಷಗಾನಕ್ಕೆ ಮಾದರಿ ಎನಿಸಿದ್ದು ಅದರ ಶ್ರೇಷ್ಠತೆಯನ್ನು ಸಾರುತ್ತದೆ . ಇಲ್ಲಿ ಕೇವಲ ಪ್ರಸಂಗಗಳು ಮಾತ್ರವಲ್ಲದೇ ಆ ಕಾಲಘಟ್ಟದಲ್ಲಿ ಉದಯಿಸಿದ ಕೆಲವು ಕಲಾವಿದರು ಯಕ್ಷಗಾನದ ದಿಗ್ಗಜರು ಎನಿಸಿಕೊಂಡಿದ್ದಾರೆ. ಇಂತಹ ಪರ್ವಕಾಲದ ಶ್ರೇಷ್ಠ ಕಲಾವಿದರಲ್ಲಿ ನಗರ ಜಗನ್ನಾಥ ಶೆಟ್ಟಿಯವರು ಒಬ್ಬರು. ಅವರು ಮಾಡಿದ ಪಾತ್ರಗಳು ಮತ್ತೊಬ್ಬರಿಂದ ಆ ಪಾತ್ರವನ್ನು ಮಾಡಲು ಸಾಧ್ಯವೇ ಇಲ್ಲವೆಂಬುವಷ್ಟು ಗಟ್ಟಿಯಾಗಿ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಅವರು ಮಾಡಿದ ಪಾತ್ರಗಳು ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದಿರುವುದು ಅವರ ಕಲಾವಂತಿಕೆಗೆ ಸಾಕ್ಷಿ ಎನಿಸುತ್ತದೆ.

ನಗರ ಜಗನ್ನಾಥ ಶೆಟ್ಟಿಯವರು ಹಲವು ಕಲಾವಿದರೊಂದಿಗಿನ ಮಾಡಿದ ಪಾತ್ರಗಳು ಜನಪ್ರಿಯ ತಾರ ಜೋಡಿ ವೇಷಗಳಾಗಿ ಗುರುತಿಸಲ್ಪಡುತ್ತದೆ. ಇದರಲ್ಲಿ ಪ್ರಮುಖವಾಗಿ, ಕೀಚಕ ವಧೆಯಲ್ಲಿ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಕೀಚಕ ಪಾತ್ರವಾದರೆ ಇವರ ವಲಲ, ಕೋಟ ವೈಕುಂಠರ ಸೈರಂದ್ರಿ, ಮಧುರಾ ಮಹೇಂದ್ರದಲ್ಲಿ ಎಮ್ ಎ ನಾಯಕರ ರುಚಿಮತಿ ಮತ್ತು ಇವರ ಉಗ್ರಸೇನ, ರಾಮಾಂಜನೇಯ ಪ್ರಸಂಗದಲ್ಲಿ ವಿಷ್ಣುಭಟ್ ಮುರೂರು ಅವರ ಸೀತೆ , ಕುಮಟಾ ಗೊವಿಂದ ನಾಯಕರ ಆಂಜನೇಯ ಹಾಗೂ ಇವರ ರಾಮ, ಲಂಕದಹನದಲ್ಲಿ ಚಿಟ್ಟಾಣಿಯವರ ಹನುಮಂತ ಹಾಗೂ ಇವರ ಸುಂದರ ರಾವಣ, ವಸಂತಸೇನೆಯಲ್ಲಿ ಇವರ ಚಾರುದತ್ತ, ಆರ್ಗೋಡು ಮೋಹನ್ ದಾಸ್ ಶೆಣೈ ಅವರ ಮೈತ್ರೇಯ ಹಾಗೂ ಗೊವಿಂದ ನಾಯಕರ ಶಕಾರ ಇತ್ಯಾದಿ ಪ್ರಸಂಗ ಮತ್ತು ಪಾತ್ರಗಳು ಹೆಸರನ್ನು ಗಳಿಸಿವೆ. ಇದರ ಜೊತೆಗೆ ಮಾರುತಿ ಪ್ರತಾಪದ ಬಲರಾಮ, ನರಕಾಸುರ ವಧೆಯ ನರಕಾಸುರ, ರಾವಣ ವಧೆಯ ರಾವಣ, ದ್ರೌಪದಿ ಪ್ರತಾಪದ ಭೀಮ ಹೀಗೆ ಹತ್ತು ಹಲವು ಪಾತ್ರಗಳಲ್ಲಿ ಖ್ಯಾತಿಯನ್ನು ಪಡೆದಿದ್ದಾರೆ.

ನಗರ ಜಗನ್ನಾಥ ಶೆಟ್ಟರ ಪಾತ್ರಗಳಲ್ಲಿ ಎಲ್ಲಿಯೋ ನೋಡಿದ ಛಾಯೆಗಳಂತೆ ಅಥವಾ ಯಾರದ್ದೋ ಪಾತ್ರದ ಅನುಕರಣೆಯಂತೆ ಕಾಣಿಸುವುದಿಲ್ಲ. ಅನುಕರಣೆ ಬಗ್ಗೆ ಖಚಿತ ನಿಲುವನ್ನು ಹೊಂದಿದ್ದ ಜಗನ್ನಾಥ ಶೆಟ್ಟರು “ಈ ಪಾತ್ರ ’ಇಂತವರ’ ಹಾಗೆ ಕಾಣಿಸುತ್ತದೆ ” ಎಂದು ಪ್ರೇಕ್ಷಕ ಹೇಳಿದರೆ ತಾನು ರಂಗದಲ್ಲಿ ಹಾಕಿದ ಶ್ರಮ ವ್ಯರ್ಥವಾಗುತ್ತದೆ. ಸುಮ್ಮನೆ ತನ್ನ ಪರಿಶ್ರಮ ಹಾಳಾಗುವುದಕ್ಕಿಂತ ತಾನೇ ಹೊಸ ರೀತಿಯಲ್ಲಿ ಪಾತ್ರವನ್ನು ಕಟ್ಟುವ ಪ್ರಯತ್ನವನ್ನು ಮಾಡುತ್ತೇನೆ” ಎನ್ನುವುದು ಅವರ ಚಿಂತನೆಯಾಗಿತ್ತು. ಹಾಗಾಗಿಯೇ ಅವರ ಪಾತ್ರಗಳಲ್ಲಿ ಸ್ವತಂತ್ರವಾದ ಪಾತ್ರ ಸೃಷ್ಠಿ ಹಾಗೂ ವೈಚಾರಿಕ ದೃಷ್ಠಿಕೋನದಲ್ಲಿ ಮಂಡಿಸುತ್ತಿರುವುದನ್ನು ಕಾಣಬಹುದಾಗಿದೆ. ಬಹುಶಃ ಇಂತಹ ಧೋರಣೆಗಳು ಹೊಸ ಪ್ರಯೋಗಗಳನ್ನು ಸಾಧಿಸುವುದಕ್ಕೋ ಅಥವಾ ಪಾತ್ರಗಳ ಅಂತಃಸತ್ವವನ್ನು ಹೆಚ್ಚಿಸಿ ಬೌದ್ಧಿಕ ನೆಲೆಯಲ್ಲಿ ಪಾತ್ರಗಳನ್ನು ಕಟ್ಟುವುದಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ಹೇಳಬಹುದಾಗಿದೆ. ಜೊತೆಗೆ ಇದು ಯಕ್ಷಗಾನದ ಕ್ಷೇತ್ರಗಳ ವಿಸ್ತರಣೆಗೆ ಬಹಳ ಮುಖ್ಯವಾದ ಸಂಗತಿಯಾಗಿದೆ.

ನಗರ ಜಗನ್ನಾಥ ಶೆಟ್ಟರು ೬೦-೯೦ ದಶಕದ ಬಹುತೇಕ ಎಲ್ಲಾ ಶ್ರೇಷ್ಠ ಕಲಾವಿದರೊಂದಿಗೆ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಲ್ಲಿ ಪ್ರಮುಖರೆಂದರೆ ಹಾರಾಡಿ ಕುಷ್ಟ ಗಾಣಿಗ, ಹಾರಾಡಿ ನಾರಾಯಣ ಗಾಣಿಗ, ಶಿರಿಯಾರ ಮಂಜು ನಾಯಕ್, ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ,ಕುಮಟಾ ಗೋವಿಂದ ನಾಯಕ್, ಜಲವಳ್ಳಿ ವೆಂಕಟೇಶ ರಾವ್, ಕೋಟ ವೈಕುಂಠ, ಗಜಾನನ ಹೆಗಡೆ, ಐರೋಡಿ ಗೋವಿಂದಪ್ಪ, ಉಡುಪಿ ಬಸವ,ಅರಾಟೆ ಮಂಜುನಾಥ, ಆರ್ಗೋಡು ಮೋಹನದಾಸ ಶಣೈ, ಮಲ್ಪೆ ವಾಸುದೇವ ಸಾಮಗ, ಬೇಗಾರು ಪದ್ಮನಾಭ,ಗೋಡೆ ನಾರಾಯಣ ಹೆಗಡೆ, ಉಪ್ಪೂಂದ ನಾಗೇಂದ್ರ, ಎಮ್ ಎ ನಾಯಕ್, ವಿಷ್ಣು ಭಟ್ ಮೂರೂರು ಮುಂತಾದವರು ಮುಮ್ಮೇಳ ಕಲಾವಿದರಾದರೆ ಹಿಮ್ಮೇಳದಲ್ಲಿ ನಾರಾಯಣಪ್ಪ ಉಪ್ಪೂರು, ಜಾನುವಾರುಕಟ್ಟೆ ಗೋಪಾಲಕೃಷ್ಣ ಕಾಮತ್, ನೆಲ್ಲೂರು ಮರಿಯಪ್ಪಾಚಾರ್, ಮರವಂತೆ ನರಸಿಂಹದಾಸ ,ಗೋರ್ಪಾಡಿ ವಿಠಲ ಪಾಟೀಲ, ಸುಬ್ರಮಣ್ಯ ಧಾರೇಶ್ವರ ಮುಂತಾದವರು ಮುಖ್ಯ ಹಿಮ್ಮೇಳ ಕಲಾವಿದರಾಗಿದ್ದಾರೆ. ತೆಂಕಿನಲ್ಲಿಯೂ ವೇಷ ಮಾಡಿದ ನಗರ ಅವರಿಗೆ ಗುಂಪೆರಾಮಯ್ಯ, ಅಳಿಕೆ ಲಕ್ಷ್ಮಣ ಶೇಟ್ರು, ಅಮ್ಮಣ್ಣಯ್ಯ ಮುಂತಾದವರ ಸಾಂಗತ್ಯ ಸಿಕ್ಕಿದೆ

ಇನ್ನು ಅವರ ಪಾತ್ರಗಳನ್ನು ಅವಲೋಕಿಸುವುದಾರೆ ರಂಗವನ್ನು ಪ್ರವೇಶಿಸುತ್ತಿದ್ದಂತೆ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆದು ಪಾತ್ರವನ್ನು ನಿರ್ವಹಿಸುತ್ತಿದ್ದ ರೀತಿಯೇ ಬೆರಗುಗೊಳಿಸುತ್ತದೆ. ಎರಡನೇ ವೇಷದ ಸಾಲಿನ ಪಾತ್ರಗಳನ್ನೇ ಹೆಚ್ಚಾಗಿ ನಿರ್ವಹಿಸುತ್ತಿದ್ದ ಅವರಿಗೆ, ಆ ಪಾತ್ರಗಳಿಗೆ ಬೇಕಾದ ಶರೀರ ಹಾಗೂ ಶಾರೀರ, ಗಾಂಭಿರ್ಯತೆ, ಪ್ರತ್ಯುತ್ಪನ್ನಮತಿತ್ವ ಎಲ್ಲವು ಅವರಲ್ಲಿತ್ತು. ಹಿತಮಿತವಾಗಿ ಕುಣಿಯುತ್ತಿದ್ದರೂ ಅವರು ತಮ್ಮ ಪಾತ್ರಗಳಲ್ಲಿ ಸಾಹಿತ್ಯವನ್ನು ಮಹೋನ್ನತವಾಗಿ ಬಳಸಿಕೊಂಡು ಮಾಡುತ್ತಿದ್ದ ತೀಕ್ಷ್ಣ ಹಾಗೂ ಚುರುಕಾದ ಸಂಭಾಷಣೆಗಳು ಬಹಳ ಬೇಗ ಪ್ರೇಕ್ಷಕರ ಮನಸ್ಸಿಗೆ ನಾಟಿಸುವ ಸಾಮರ್ಥ್ಯ ಅವರಲ್ಲಿತ್ತು. ಪಾತ್ರಗಳಿಗೆ ಕೊಡುತ್ತಿದ್ದ ಅಭಿನಯಗಳು ದೃಶ್ಯದಿಂದ ದೃಶ್ಯಕ್ಕೆ ಹೆಚ್ಚಾಗುತ್ತಿದ್ದವೇ ವಿನಃ ರಂಗದ ಬಿಸಿಯನ್ನು ಕಡಿಮೆ ಮಾಡುತ್ತಿರಲಿಲ್ಲ. ಈ ಕಾರಣಕ್ಕೆ ಜಗನ್ನಾಥ ಶೆಟ್ಟರ ಪಾತ್ರಗಳು ಜನರಿಗೆ ಬಹಳ ಹತ್ತಿರವಾಗಿದ್ದವು. ಅವರ ಯಶಸ್ವಿ ಪಾತ್ರಗಳಲ್ಲಿ ಒಂದಾದ ಉಗ್ರಸೇನನ ಪಾತ್ರದಲ್ಲಿ “ಬಾರಿಲ್ಲಿ ಸಖಿಯೆ ನೀನೂ | ರುಚಿಮತಿಯ |ಸೇರಿ ಪೋಗಿಲ್ಲವೇನೂ” ಮತ್ತು “ಬರಿ ಮೌನವಾಂತಿರೇಕೆ| ಹೇಳಿ ಎ | ನ್ನರಸಿಯಳ ಬಗೆಯ ಜೋಕೆ ” ಎಂಬ ಪದ್ಯಗಳ ಅಭಿನಯಕ್ಕೆ ಸಖಿ ಪಾತ್ರಗಳನ್ನು ಮಾಡುತ್ತಿದ್ದ ಕಲಾವಿದರು ಅಕ್ಷರಶಃ ರಂಗದಲ್ಲಿ ನಲುಗಿ ಹೋಗುತ್ತಿದ್ದರು. ಇನ್ನು ಇವರ ಭೀಷ್ಮ ಪಾತ್ರದ ಬಗ್ಗೆ ಹೇಳುವುದಾದರೆ ಮಹಾಬಲ ಹೆಗಡೆಯವರ ಭೀಷ್ಮ ಪಾತ್ರದಲ್ಲಿ ಬಹಳ ಗಂಭೀರವಾಗಿ, ಧೀರೋತ್ತರವಾಗಿ ಪಾತ್ರವನ್ನು ಕಟ್ಟಿದರೆ ಇವರು ತುಸು ಭಿನ್ನವಾದ ನಡೆಯಲ್ಲಿ ಆ ಪಾತ್ರವನ್ನು ಕಟ್ಟುತ್ತಿದ್ದರು. ಭೀಷ್ಮನ ಪಾತ್ರದ ಗಾಂಭೀರ್ಯತೆಯ ಜೊತೆಗೆ ಚಕ್ರಾಧಿಪತ್ಯವನ್ನು ರಕ್ಷಿಸುವ ಹೊಣೆಗಾರಿಕೆ ಇತ್ತು ಎಂಬುದನ್ನು ತೋರಿಸುವ ಚುರುಕುತನವನ್ನು ಪಾತ್ರದಲ್ಲಿ ತುಂಬುತ್ತಿದ್ದರು. “ಸುತ್ತಲು ನೋಡುತ ಗಂಗಾತನಯನು | ಪಥ್ವೀಶರ ಸಭೆಯ ” ಭೀಷ್ಮನ ರಂಗಪ್ರವೇಶದಿಂದಲೇ ಪಾತ್ರವನ್ನು ಸಂಪೂರ್ಣವಾಗಿ ಆವಾಹಿಸಿಕೊಂಡು ಪದಶಃ ಭೀಷ್ಮನ ಎತ್ತರವನ್ನು ಸಾದರಪಡಿಸುತ್ತಿದ್ದ ರೀತಿಯೇ ಗಮನಾರ್ಹವಾದ ಸಂಗತಿಯಾಗಿದೆ.

ಒಂದು ಕಡೆಯಲ್ಲಿ ನಗರ ಜಗನ್ನಾಥ ಶೆಟ್ಟಿಯವರು ಕ್ರೂರ, ವೀರ ರಸದ ಪಾತ್ರಗಳಲ್ಲಿ ಹೆಸರನ್ನು ಗಳಿಸಿಕೊಂಡರೆ ಅದಕ್ಕೆ ವಿರುದ್ದ ಭಾವದ ಪಾತ್ರಗಳನ್ನು ಅಷ್ಟೆ ಸುಂದರವಾಗಿ ಕಟ್ಟಿಕೊಡುತ್ತಿದ್ದರು. ಈ ಸಾಲಿನಲ್ಲಿ ರಾಮಾಂಜನೇಯ ರಾಮ ಹಾಗೂ ವಸಂತಸೇನೆಯ ಚಾರುದತ್ತ ಪಾತ್ರಗಳು ಬಹಳ ಗಮನ ಸೆಳೆಯುತ್ತದೆ. ವಸಂತಸೇನೆಯಲ್ಲಿ ಚಾರುದತ್ತ ಪಾತ್ರವನ್ನು ಮಾಡುತ್ತ ಕೊನೆಯ ಸನ್ನಿವೇಶದಲ್ಲಿ ” ಮಿತ್ರ, ಈ ಚಾರುದತ್ತನನ್ನು ಶೂಲಕ್ಕೆ ಹಾಕಬಹುದು, ಆದ್ರೆ ನಾನು ನಂಬಿದ ಸತ್ಯವನ್ನು ಶೂಲಕ್ಕೆರಿಸುವುದಕ್ಕೆ ಸಾಧ್ಯವೇ? ” ಎಂಬ ಭಾವನಾತ್ಮಕ ಸನ್ನಿವೇಶದಲ್ಲಿ ಆಡುತ್ತಿದ್ದ ತೀಕ್ಷ್ಣವಾದ ಮಾತುಗಳು ಪ್ರೇಕ್ಷಕರ ಕಣ್ಣಿನಂಚಿನಲ್ಲಿ ಹನಿಯುವಂತೆ ಮಾಡುತ್ತಿದ್ದವು. ಇವರು ನಿರ್ವಹಿಸುವ ಯಾವುದೇ ಪಾತ್ರವಾಗಿರಲಿ ಅದಕ್ಕೆ ಪ್ರಾಮಾಣಿಕವಾಗಿ ನ್ಯಾಯ ಸಲ್ಲಿಸುವ ಕಾರ್ಯವನ್ನು ಮಾಡುತ್ತಿದ್ದರು. ಯಾವುದೋ ಸಾಮಾಜಿಕ ಪ್ರಸಂಗವೊಂದರಲ್ಲಿ ಬೆಳಗಿನ ಜಾವದ ಐದು ಗಂಟೆಗೆ ಅವರ ಪ್ರವೇಶವಿರುತ್ತದೆ. ಅವರಿಗೆ ಸಿಗುವ ಅವಕಾಶ ಕೇವಲ ಅರ್ಧದಿಂದ ಮುಕ್ಕಾಲು ಗಂಟೆಗಳು ಮಾತ್ರವಾಗಿತ್ತು. ಬೆಳಗ್ಗೆ ಆಟ ಮುಗಿಯುವಾಗ ಇಡೀ ಪ್ರಸಂಗದಲ್ಲಿ ಅವರು ಮಾಡಿದ ಪಾತ್ರ ಪ್ರೇಕ್ಷಕರ ನೆನಪಿನಲ್ಲಿ ಉಳಿಯುವಂತೆ ಮಾಡುತ್ತಿದ್ದರು ಎಂದರೆ ಅವರ ಪ್ರತಿಭೆ ಹಾಗೂ ಅವರಿಗಿರುವ ಕಲಾಶಕ್ತಿಯ ಸಾಧ್ಯತೆಯನ್ನು ಮೆಚ್ಚಬೇಕಾಗುತ್ತದೆ.

ಇನ್ನು ಅವರ ವ್ಯಕ್ತಿತ್ವದ ಬಗ್ಗೆ ಹೇಳುವುದಾದರೆ ಸರಳ, ಸಜ್ಜನ, ನೇರ ನಡೆ ನುಡಿಯ ವ್ಯಕ್ತಿ. ನಿಸ್ಪ್ರಹವಾಗಿ ಜೀವಿಸಿದವರು. ಮತ್ತೊಬ್ಬರಿಂದ ಏನನ್ನು ನಿರೀಕ್ಷಿಸುತ್ತಿದ್ದವರಲ್ಲ. ಮೇಳದ ತಿರುಗಾಟದಲ್ಲಿ ಮೇಳದ ಬಿಡಾರವನ್ನು ಬಿಟ್ಟು ಬೇರೆಡೆ ಉಳಿಯುತ್ತಿರಲಿಲ್ಲ. ಜೊತೆಗೆ ವ್ಯವಸ್ಥೆಗಳು ಮುಖ್ಯ ಪಾತ್ರಧಾರಿಯಾದ ನನಗೆ ಹೀಗೆಯೇ ಇರತಕ್ಕದ್ದು ಎಂದು ಕಟ್ಟುಪಾಡುಗಳನ್ನು ವಿಧಿಸಿದವರಲ್ಲ. ಇರುವ ವ್ಯವಸ್ಥೆಗಳಲ್ಲಿಯೇ ಹೊಂದಿಕೊಂಡು ಹೋಗುವ ಬಹಳ ದೊಡ್ಡ ಗುಣ ಅವರಲ್ಲಿತ್ತು. ಹಾಗಂತ ರಂಗದ ಅಭಿವ್ಯಕ್ತಿಯ ಗುಣಮಟ್ಟದ ವಿಷಯದಲ್ಲಿ ಯಾವುದೇ ರಾಜಿಯಾಗಲಿ , ಹೊಂದಣಿಕೆಯಾಗಲಿ ಇರಲಿಲ್ಲ. ಅವರ ಸಹ ಪಾತ್ರಗಳು ಅದು ಹೇಗೆ ರಂಗದಲ್ಲಿ ಚಿತ್ರಣವಾಗಬೇಕೋ ಹಾಗೆ ಕಾಣಿಸಿಕೊಳ್ಳಬೇಕಿತ್ತು. ಒಂದೊಮ್ಮೆ ತಪ್ಪಿದರೆ ಚೌಕಿಗೆ ಬಂದು ನೇರವಾಗಿ ಅದನ್ನು ಸಹ ಕಲಾವಿದರಿಗೆ ತಿಳಿಸುತ್ತಿದ್ದರು. ಬಹುಶಃ ಸಮಗ್ರವಾದ ಪರಿಣಾಮಗಳಿಗೆ ಹಾಗೂ ಪ್ರಸಂಗದ ಸಂದೇಶಗಳಿಗೆ ಆದ್ಯತೆಗಳಿದ್ದವೇ ವಿನಃ ರಂಗದಲ್ಲಿ ನನ್ನ ಪಾತ್ರ ಮಾತ್ರ ಚೆನ್ನಾಗಿ ಕಾಣಿಸಿಕೊಂಡರೆ ಸಾಕು ಅನ್ನುವ ಯಾವ ಧೋರಣೆಗಳು ಅವರಲ್ಲಿ ಇರಲಿಲ್ಲ. ಒಬ್ಬ ಕಲಾವಿದನ ’ಮೇಳ’ವಾಗಿ ಕಾಣಿಸಿಕೊಳ್ಳಬೇಕೆಂಬ ಆಶಯಗಳು ಇಡೀ ರಂಗಭೂಮಿಯ ಬೆಳವಣಿಗೆಗೆ ಪೂರಕವಾದ ಸಂಗತಿಗಳೆಂದು ಭಾವಿಸಬಹುದು. ಹಾಗಂತ ಅವರು ಎಲ್ಲವನ್ನು ಬಲ್ಲವರಂತೆ ವರ್ತಿಸುತ್ತಿರಲಿಲ್ಲ. ರಂಗದಲ್ಲಿ ಒಂದೊಮ್ಮೆ ಪ್ರಶ್ನೆಗಳಿಗೆ ಅವರೇ ಸೋಲನ್ನು ಕಂಡರೇ, ಅಲ್ಲಿಯೇ ಮುಕ್ತವಾಗಿ ಸೋಲನ್ನು ಸ್ವೀಕರಿಸಿ, ಮುಂದಿನ ಬಾರಿ ಆ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಿಕೊಂಡೇ ರಂಗಕ್ಕೆ ಬರುತ್ತಿದ್ದರು. ಬಹುಶಃ ಈ ಧೋರಣೆಗಳೇ ಅವರನ್ನು ಎತ್ತರದ ಸ್ಥಾನವನ್ನು ತಲುಪಿಸಿದ್ದು ಎಂದರೆ ತಪ್ಪಾಗಲಾರದು.

ಅವರು ಮೇಳಕ್ಕೆ ರಜೆಯಿರುವಾಗ ಅವರು ಆ ಪ್ರಸಂಗದಲ್ಲಿ ಮಾಡುತ್ತಿರುವ ಪಾತ್ರವನ್ನು ಮತ್ತೊಬ್ಬರಿಗೆ ಹಂಚಬೇಕಾಗುತ್ತದೆ. ಒಂದೊಮ್ಮೆ ಅವರು ರಜೆಯನ್ನು ಮೊಟಕುಗೊಳಿಸಿ ಆಟಕ್ಕೆ ಬಂದರೆ ಬೇರೆಯವರಿಗೆ ನಿಗಧಿಯಾಗಿದ್ದ ತಮ್ಮ ಪಾತ್ರಗಳನ್ನು ಅವರು ಮಾಡದೆ ಪಟ್ಟಿಯಲ್ಲಿ ನಿರ್ಧರಿಸಿದ ಕಲಾವಿದರಿಗೆ ಅದನ್ನು ಬಿಟ್ಟುಕೊಡುತ್ತಿದ್ದರು. ಮತ್ತೊಬ್ಬರಿಗೆ ಪಾತ್ರಗಳನ್ನು ಬಿಟ್ಟುಕೊಡುವ ವಿಶಾಲ ಹೃದಯವೂ ಅವರಲ್ಲಿತ್ತು. ಇದಕ್ಕೆ ಮತ್ತೊಂದು ಉದಾಹರಣೆಯೆಂದರೆ ಕರ್ಣಾರ್ಜುನ ಕಾಳಗದಲ್ಲಿ ಇವರ ಕರ್ಣ ಹಾಗೂ ಐರೋಡಿ ಗೋವಿಂದಪ್ಪನವರ ಅರ್ಜುನ ಬಹಳ ಪ್ರಸಿದ್ಧವಾಗಿತ್ತು. ಯಾವುದೋ ಒಂದು ಬಾರಿ ಐರೋಡಿ ಗೋವಿಂದಪ್ಪನವರು ಕರ್ಣನನ್ನು ಮಾಡಿ, ಇವರು ಅರ್ಜುನನನ್ನು ಮಾಡಿದರು. ಐರೋಡಿಯವರ ಕರ್ಣ ತನಗಿಂತ ಹೆಚ್ಚು ಚೆನ್ನಾಗಿ ಆಗುತ್ತದೆ ಎಂದು ಆ ಪಾತ್ರವನ್ನು ಮಾಡದೇ ತಾವೇ ಅರ್ಜುನ ಪಾತ್ರವನ್ನು ಮಾಡಿದರು. ಈ ಬದಲಾವಣೆ ಕೂಡ ಬಹಳ ದೊಡ್ಡ ಹೆಸರನ್ನು ಪಡೆಯಿತು. ಬಹುಶಃ ಕಲಾವಿದನೊಬ್ಬ ಸ್ವಸ್ವರೂಪ ಜ್ಞಾನವನ್ನು ಹೊಂದಿ ತನ್ನನ್ನು ವಿರ್ಮಶಿಸಿಕೊಂಡು, ಮತ್ತೊಂದು ಪಾತ್ರವನ್ನು ಸಹ ಒಪ್ಪಿಕೊಂಡು ಅದನ್ನು ಪ್ರೋತ್ಸಾಹಿಸುವ ದೊಡ್ಡ ಗುಣ ನಗರದವರಲ್ಲಿತ್ತು ಎನ್ನುವುದನ್ನು ಹೇಳಬಹುದಾಗಿದೆ.

ಒಂದು ಸಾಲಿನ ಪಾತ್ರಗಳು ಒಮ್ಮೆ ಒಗ್ಗಿ ಹೋದರೆ ಮತ್ತೊಂದು ಸಾಲಿನ ಪಾತ್ರಗಳನ್ನು ಮಾಡುವುದು ಬಹಳ ಕಷ್ಟಸಾಧ್ಯ. ಒಮ್ಮೆ ಪೆರ್ಡೂರು ಮೇಳದಲ್ಲಿ ಮೊದಲ ಬಾರಿ ವಸಂತಸೇನೆ ಪ್ರಸಂಗ ನಿರ್ಣಯವಾಗಿತ್ತು. ಉಳಿದೆಲ್ಲ ಪಾತ್ರಗಳಿಗೆ ಕಲಾವಿದರು ಆಯ್ಕೆಯಾದರೆ ಪ್ರಸಂಗದ ಬಹಳ ಮುಖ್ಯವಾದ ಚಾರುದತ್ತ ಪಾತ್ರವನ್ನು ಮಾಡಲು ಕಲಾವಿದರುಗಳು ಸಿದ್ದರಿರುವುದಿಲ್ಲ. ಯಾರು ಯಾರು ಎನ್ನುವ ಚರ್ಚೆಗಳಾದವೇ ವಿನಃ ಉತ್ತರ ಮಾತ್ರ ಸಿಗಲಿಲ್ಲ. ಭಾಗವತರಾದ ಧಾರೇಶ್ವರಿಗೆ ಇದು ಬಹಳ ಸಮಸ್ಯೆಯಾಯಿತು. ಜೊತೆಗೆ ನಿಗಧಿಯಾಗಿದ್ದ ಆಟವು ಹತ್ತಿರವಾಗುತ್ತಿತ್ತು. ಇಂತಹ ಸಂಕೀರ್ಣವಾದ ಪರಿಸ್ಥಿತಿಯಲ್ಲಿ ಜಗನ್ನಾಥ ಶೆಟ್ಟರು ಸ್ವಯಂ ಪ್ರೇರಿತರಾಗಿ ಚಾರುದತ್ತ ಪಾತ್ರವನ್ನು ಮಾಡಲು ಒಪ್ಪಿ ಅದನ್ನು ನಿರ್ವಹಿಸಿದರು. ಮುಂದೆ ಅದೇ ಯಕ್ಷಗಾನದ ಇತಿಹಾಸದಲ್ಲಿ ’ಚಾರುದತ್ತ’ ಎಂದರೆ ’ನಗರ ಜಗನ್ನಾಥ ಶೆಟ್ಟರ’ ಎನ್ನುವಷ್ಟು ಜನಜನಿತವಾಯಿತು. ಇದು ರಾಮಾಂಜನೇಯದ ರಾಮನ ಪಾತ್ರವನ್ನು ಕೂಡ ಇದೇ ರೀತಿಯಲ್ಲಿ ನಿರ್ವಹಿಸಿದ್ದರು. ಈ ರೀತಿಯಲ್ಲಿ ಕಲಾವಿದನೊಬ್ಬ ಪಾತ್ರಗಳ ಸವಾಲನ್ನು ಸ್ವೀಕರಿಸುವ ಎದೆಗಾರಿಕೆ ಮತ್ತು ಮನಸ್ಥಿತಿ ಗಮನಾರ್ಹವೆನಿಸುತ್ತದೆ.

ಯಕ್ಷಗಾನ ರಂಗಭೂಮಿಯಲ್ಲಿ ಹರಿಕೆ ಮೇಳಗಳು ಮತ್ತು ಡೇರೆ ಮೇಳಗಳ ಕಲಾ ಅಭಿವ್ಯಕ್ತಿಗಳಲ್ಲಿ ವ್ಯತ್ಯಾಸಗಳಿವೆ. ಜೊತೆಗೆ ಒಬ್ಬ ಕಲಾವಿದನನ್ನು ಗುರುತಿಸುವ ಬಗೆಯಲ್ಲಿಯೂ ಕೂಡ ಭಿನ್ನತೆಯನ್ನು ಗಮನಿಸಬಹುದು. ಟೆಂಟಿನ ಮೇಳಗಳಲ್ಲಿ ಅಸ್ತಿತ್ವವನ್ನು ಉಳಿಸಿಕೊಂಡು ಮುಂದುವರೆಯಬೇಕಾದರೆ ಅಲ್ಲಿ ಪ್ರತಿಭೆಯೇ ಹೆಚ್ಚು ಮಾನದಂಡವಾಗುತ್ತದೆ. ಜಗನ್ನಾಥ ಶೆಟ್ಟರ ಕಲಾ ಬದುಕಿನ ಯಾತ್ರೆಯಲ್ಲಿ ಮೊದಲ ಒಂದಷ್ಟು ವರುಷಗಳು ಬಯಲಾಟ ಮೇಳಗಳಲ್ಲಿ ದುಡಿದಿದ್ದರು. ಹಾಗಾಗಿಯೇ ಅವರ ಹರವು ಕೂಡ ಸೀಮಿತವಾಗಿತ್ತು. ಆದರೆ ಯಾವಾಗ ಅವರು ಡೇರೆ ಮೇಳಗಳಲ್ಲಿ ಸೇರ್ಪಡೆಗೊಂಡರೋ ಅಲ್ಲಿಗೆ ವ್ಯಾಪ್ತಿಗಳು ಕೂಡ ವಿಸ್ತಾರಗೊಂಡು ಕಾಸರಗೋಡಿನಿಂದ ಕಾರವಾರ, ಯಲ್ಲಾಪುರದವರೆಗೆ ಜಗನ್ನಾಥ ಶೆಟ್ಟರ ಹೆಸರು ಜನಜನಿತವಾಗುತ್ತದೆ ಎಂದರೆ ಅದಕ್ಕೆ ಕಾರಣ ಪ್ರತಿಭೆಯೇ ಹೊರತು ಬೇರೆಯಲ್ಲ. ನಾರಾಯಣಪ್ಪ ಉಪ್ಪೂರರ ಬಗ್ಗೆ ಅಪರಿಮಿತ ಗೌರವವನ್ನು ಹೊಂದಿದ್ದ ಜಗನ್ನಾಥ ಶೆಟ್ಟರು ” ರಂಗದಲ್ಲಿ ನಾವು ಕುಣಿಯುತ್ತಿರಲಿಲ್ಲ. ಉಪ್ಪೂರು ಕುಣಿಸುತ್ತಿದ್ದರು” ಎಂದು ಮನಪೂರ್ವಕವಾಗಿ ಹೇಳುತ್ತಿದ್ದರು. ಇದು ಒಬ್ಬ ಕಲಾವಿದನವ ಅಂತಃಸತ್ವವನ್ನು ಅರಿತು ಅದನ್ನು ಹೊರಗೆಡವಿ ರಂಗದಲ್ಲಿ ದುಡಿಸಿಕೊಳ್ಳುವ ನಿರ್ಣಾಯಕತೆಯಲ್ಲಿ ಭಾಗವತನ ಪಾತ್ರವನ್ನು ಪ್ರಚುರಪಡಿಸುತ್ತದೆ. ಜೊತೆಗೆ ಹಿಮ್ಮೇಳ ಮತ್ತು ಮುಮ್ಮೇಳದ ಪೂರಕವಾದ ಸಾಂಗತ್ಯವಿದ್ದರೇ ಮಾತ್ರ ಪ್ರದರ್ಶನವೊಂದು ಪರಿಪೂರ್ಣವಾಗುವುದಕ್ಕೆ ಸಾಧ್ಯವೆನ್ನುವುದನ್ನು ಕಾಣಬಹುದಾಗಿದೆ.

ಮೊದಮೊದಲು ಅವರನ್ನು ಮೇಳಗಳಲ್ಲಿ ’ಘಟ್ಟದ ಕಲಾವಿದ’ ಎಂಬ ನಿಕೃಷ್ಟ ಭಾವನೆಯಿಂದ ಕಾಣುತ್ತಿದ್ದರಂತೆ. ಯಾವಾಗ ಅವರು ತಮ್ಮ ಸಾಮರ್ಥ್ಯವನ್ನು ರಂಗದಲ್ಲಿ ಪ್ರತಿಪಾದಿಸಿದರೋ ಮತ್ತೆ ಯಾರು ಆ ಬಗ್ಗೆ ಮಾತನ್ನಡಲಿಲ್ಲ. ತಾನು ಸಾಧಿಸಲೇ ಬೇಕು ಎಂಬ ದೃಢವಾದ ಸಂಕಲ್ಪ ಮತ್ತು ಆತ್ಮ ವಿಶ್ವಾಸವನ್ನು ಹೊಂದಿದರೆ ಯಾವುದನ್ನು ಕೂಡ ಸಾಧಿಸಬಹುದು ಎನ್ನುವುದಕ್ಕೆ ನಗರ ಜಗನ್ನಾಥ ಶೆಟ್ಟರು ಉದಾಹರಣೆಯಾಗಿ ನಿಲ್ಲುತ್ತಾರೆ. ಅವರ ಸಾಧನೆಯನ್ನು ಗುರುತಿಸಿ ನೂರಾರು ಸನ್ಮಾನ, ಪ್ರಶಸ್ತಿಗಳು ಅರಸಿ ಬಂದರೂ ಕೂಡ ಅವರದ್ದು ಮಾತ್ರ ನಿರ್ಲಿಪ್ತ ಧೋರಣೆ. ’ನನಗೆ ಯಾಕೆ ಸನ್ಮಾನ? ಆಗುವುದೆಲ್ಲ ಆಗಿದೆ. ಇನ್ನು ಬೇರೆಯವರಿಗೆ ಮಾಡಿ’ ಎಂದು ಆಯೋಜಕರಿಗೆ ಮತ್ತೊಬ್ಬರನ್ನು ತೋರಿಸಿ ಸನ್ಮಾನದಿಂದ ತಪ್ಪಿಸಿಕೊಳ್ಳುತ್ತಿದ್ದರು. ಆಯೋಜಕರಿಗೆ ಸನ್ಮಾನಕ್ಕೆ ಇವರನ್ನು ಒಪ್ಪಿಸುವುದು ಬಹಳ ಸವಾಲಿನ ಕೆಲಸವಾಗಿತ್ತು. ಬಹುಶಃ ಅವರ ಕಲಾಜೀವನದಲ್ಲಿ ಲೌಕಿಕ ಆಶಯಗಳಿಗೆ ಮನ್ನಣೆಯನ್ನು, ಲಾಭಿಯನ್ನು ಮಾಡದೆ, ಕೇವಲ ರಂಗ ತುಡಿತ ಹಾಗೂ ಆತ್ಮಸಂತೋಷವನ್ನೇ ಪ್ರಧಾನವಾಗಿಸಿರುವುದನ್ನು ಕಾಣಬಹುದಾಗಿದೆ. ಇಂತಹ ಮೇರು ಪ್ರತಿಭೆಗೆ ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಯದಂತ ಗೌರವ ಸಿಗದಿರುವುದಕ್ಕೆ ಅಭಿಮಾನಿಗಳಿಗೆ ದೊಡ್ಡ ನಿರಾಸೆಯಾಗಿರುವುದು ಸುಳ್ಳಲ್ಲ

ಇನ್ನು ಸಾಂಸಾರಿಕವಾಗಿ ನೋಡುವುದಾದರೆ ಮೀರಾ ಅವರನ್ನು ಮದುವೆಯಾಗಿ ಪ್ರಕಾಶ್ ಹಾಗೂ ಕೃಷ್ಣಮೂರ್ತಿ ಎಂಬ ಇಬ್ಬರು ಸುಪುತ್ರರನ್ನು ಪಡೆದಿದ್ದಾರೆ. ಕಲಾವಿದನೊಬ್ಬ ತನ್ನ ಪಾತ್ರಗಳ ಬೌದ್ಧಿಕ ಗುಣಮಟ್ಟವನ್ನು ಹೆಚ್ಚಿಸುವುದಕ್ಕೆ ಓದಬೇಕು, ನೋಡಬೇಕು, ಜೊತೆಗೆ ಪಾತ್ರಗಳನ್ನು ಅವಲೋಕಿಸುವ ಜ್ಞಾನವನ್ನು ಹೊಂದಬೇಕು. ಜಗನ್ನಾಥ ಶೆಟ್ಟರು ಪಾತ್ರಗಳಿಗೆ ಬೇಕಾದ ತಯಾರಿಗಳನ್ನು ಈ ಮೂರು ರೀತಿಯಲ್ಲಿಯೇ ಮಾಡಿಕೊಳ್ಳುತ್ತಿದ್ದರು. ಅವರು ಪಾತ್ರಕ್ಕೆ ಸಿದ್ದವಾಗುವ ರೀತಿಯೇ ಬಹಳ ಕುತೂಹಲವನ್ನು ಮೂಡಿಸುತ್ತದೆ. ರಾತ್ರಿ ಆಟವನ್ನು ಮುಗಿಸಿ ಬೆಳಗ್ಗೆ ಮನೆಗೆ ಬಂದು ವಿಶ್ರಾಂತಿ ಪಡೆಯುವ ಸಂದರ್ಭದಲ್ಲಿ ಅವರ ಮಡದಿ ಅವರ ಕಾಲ ಬುಡದಲ್ಲಿ ಕುಳಿತು ಪಾತ್ರಕ್ಕೆ ಬೇಕಾದ ಪುರಾಣದ ಪುಸ್ತಕಗಳನ್ನು ಗಟ್ಟಿಯಾಗಿ ಓದುತ್ತಿದ್ದರಂತೆ. ಬಹುಶಃ ಇದು ಕಲಾವಿದನ ಕಲಾವಂತಿಕೆ ಹಿಂದೆ ಹೆಂಡತಿಯ ಪಾತ್ರವನ್ನು ಎತ್ತಿ ಹಿಡಿಯುತ್ತದೆ. ಅವರ ಹಿರಿಯ ಮಗನಾದ ಪ್ರಕಾಶ್ ಶೆಟ್ಟಿಯವರು ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಹೆಜ್ಜೆಯನ್ನು ಕಲಿತು ಮಂದಾರ್ತಿ ಮುಂತಾದ ಮೇಳಗಳಲ್ಲಿ ತಿರುಗಾಟವನ್ನು ಮಾಡಿ ಸದ್ಯ ಅವರು ನಗರದಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ.

’ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನ’ ಎಂದು ಪ್ರತಿ ಪಾತ್ರಗಳಲ್ಲೂ ಹೇಳುತ್ತಿದ್ದ ಜಗನ್ನಾಥ ಶೆಟ್ಟಿರಿಗೆ ವಿಧಿ ಅನಾಯಸವಾದ ಮರಣವನ್ನು ಕರುಣಿಸಲಿಲ್ಲ. ಹಲವು ವರುಷಗಳ ಕಾಲ ಕಿಡ್ನಿ ಸಮಸ್ಯೆಯಿ೦ದ ಬಳಲುತ್ತಿದ್ದ ಅವರು ೨೦೦೪ರಲ್ಲಿ ತಮ್ಮ ೬೩ನೇ ವಯಸ್ಸಿಗೆ ಕೊನೆಯುಸಿರೆಳೆದರು. ಕಲಾವಿದ ಕಲೆಯಲ್ಲಿ ಶ್ರೀಮಂತ ಆದರೆ ಆರ್ಥಿಕವಾಗಿಯಲ್ಲ. ಅವರಿಗೆ ಯಕ್ಷಗಾನದ ಬದುಕೇ ಜೀವನ ನಿರ್ವಹಣೆಯ ಮಾರ್ಗವಾಗಿದ್ದರೂ ಕೂಡ ಮತ್ತೊಬ್ಬರಲ್ಲಿ ಎಂದು ಕೈಚಾಚಿದವರಲ್ಲ. ತಮ್ಮ ಜೀವನವೇ ಸಂಕಷ್ಟದಲ್ಲಿದ್ದರೂ ಯಾರಿಗೂ ತಲೆಭಾಗದೆ ತಮ್ಮ ಧೀಮಂತ ವ್ಯಕ್ತಿತ್ವವನ್ನು ಪ್ರತಿಪಾದಿಸುತ್ತ ಗಾಂಭೀರ್ಯವಾಗಿ ಬದುಕಿದ್ದಾರೆ. ೨೦೧೪ರಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಅವರ ಕುಟುಂಬವು ’ಜಗನ್ನಾಥ ಶೆಟ್ಟರ 10ನೇ ವರ್ಷದ ಸಂಸ್ಮರಣ’ ಕಾರ್ಯಕ್ರಮವನ್ನು ಆಯೋಜಿಸಿ, ಆ ಕಾರ್ಯಕ್ರಮದಲ್ಲಿ ಸಂಪನ್ನವಾದ ಹಮ್ಮಿಣಿಯಿಂದ ’ಬಿದನೂರು ಸಾಂಸ್ಕೃತಿಕ ವೇದಿಕೆ’ಯ ಮೂಲಕ ಅಂಬುಲೆನ್ಸ್ ನ್ನು ಒಂದನ್ನು ತಂದು ’ನಗರ ಜಗನ್ನಾಥ ಶೆಟ್ಟರ ಸ್ಮರಣಾರ್ಥ’ ಉಚಿತವಾಗಿ ನಗರದಲ್ಲಿ ಸಾರ್ವಜನಿಕ ಸೇವೆಗಾಗಿ ಬಿಟ್ಟಿದ್ದಾರೆ. ಕಳೆದ ಹಲವಾರು ವರುಷಗಳಿಂದ ಈ ವಾಹನವು ತನ್ನ ಸೇವೆಯಲ್ಲಿ ನಿರತವಾಗಿ ಸಾವಿರಾರು ಜನರ ಆಪತ್ತಿನ ಕಾಲದಲ್ಲಿ ನೆರವಾಗಿದೆ. ಕುಟುಂಬವು ಅದ್ಭುತ ಕಲಾವಿದನನ್ನು ಯಕ್ಷಗಾನಕ್ಕೆ ನೀಡಿರುವುದಲ್ಲದೇ ಅವರ ನಂತರವು ಕೂಡ ಸಮಾಜಮುಖಿಯಾಗಿ ಅವರ ಹೆಸರನ್ನು ನೆನಪಿಸುವ ಕಾರ್ಯದಲ್ಲಿ ತೊಡಗಿರುವುದು ಅತ್ಯಂತ ಶ್ಲಾಘನೀಯವಾಗಿದೆ

ಅಭಿನಯ ಪ್ರಧಾನವಾದ ಕಲೆಗಳಲ್ಲಿ ಮತ್ತು ಭೌತಿಕ ಕಲೆಗಳಲ್ಲಿ(ಚಿತ್ರ, ಶಿಲ್ಪ ಇತ್ಯಾದಿ) ಕಲೆಯ ಜೀವಂತಿಕೆಗಳಲ್ಲಿ ವ್ಯತ್ಯಾಸಗಳಿವೆ. ಭೌತಿಕ ಕಲೆಗಳಲ್ಲಿ ನೂರಾರು ವರುಷ ಕಳೆದ ಮೇಲೂ ಕೂಡ ಇದು ಇಂತವರ ಕಲಾಶಕ್ತಿಯೆಂದು ಗ್ರಹಿಸಬಹುದಾಗಿದೆ. ಆದರೆ ಅಭಿನಯ ಪ್ರಧಾನವಾದ ರಂಗ ಕಲೆಗಳಲ್ಲಿ ರಂಗದ ಮೇಲೆ ಕಲಾವಿದ ಇರುವಷ್ಟು ಕಾಲ ಮಾತ್ರ ಅವನ ಕಲಾವಂತಿಕೆ ಜೀವಂತವಾಗಿರುತ್ತದೆ. ಅವನ ಕಾಲ ನಂತರ ಕಲಾವಿದ ನೆನಪಿನಲ್ಲಿ ಮರೆಯಾಗುತ್ತ ಸಾಗುತ್ತಾನೆ. ಇಂದು ಯಕ್ಷಗಾನ ರಂಗಭೂಮಿಯಲ್ಲಿ ಅದೆಷ್ಟೊ ಶ್ರೇಷ್ಠ ಕಲಾವಿದರು ಆಳಿ ಮೆರದಿದ್ದಾರೆ. ಆದರೆ ಅವರ ನೆನಪುಗಳನ್ನು ಮತ್ತು ಅವರ ಕಲಾಪ್ರೌಢಿಮೆಯ ಮಾದರಿಗಳನ್ನು ಕಾಪಿಡುವ ಕೆಲಸಗಳು ಆಗಬೇಕಿದೆ. ಈ ನಿಟ್ಟಿನಲ್ಲಿ ನಗರ ಜಗನ್ನಾಥ ಶೆಟ್ಟರು ಮಾಡಿದ ಪಾತ್ರಗಳು, ಅದರ ಅಭಿವ್ಯಕ್ತತೆ, ಕಲಾನಿಷ್ಠೆಗಳು, ಆದರ್ಶಗಳು ಇತ್ಯಾದಿಗಳನ್ನು ಅವಲೋಕಿಸಿ ದಾಖಲಿಸಬೇಕಿದೆ. ಮತ್ತೊಮ್ಮೆ ಅವರನ್ನು ನೆನಪಿಸಿಕೊಳ್ಳುತ್ತ ಅವರ ಚೇತನಕ್ಕೆ ನಮ್ಮ ನಮನಗಳು

ಮಾಹಿತಿ ಸಹಕಾರ: ಶ್ರೀ ಬನ್ನಂಜೆ ಸಂಜೀವ ಸುವರ್ಣ, ಶ್ರೀ ಸುಬ್ರಮಣ್ಯ ಧಾರೇಶ್ವರ, ಶ್ರೀ ಐರೋಡಿ ಗೋವಿಂದಪ್ಪ, ಶ್ರೀ ಕೆರೆಮನೆ ಶಿವಾನಂದ ಹೆಗಡೆ, ಶ್ರೀ ಸುರೇಂದ್ರ ಪಣಿಯೂರು, ಶ್ರೀ ಮನೋಹರ್ ಕುಂದರ್, ಶ್ರೀ ಶುಂಠಿ ಸತ್ಯ ನಾರಾಯಣ ಭಟ್, ಶ್ರೀ ವಿಷ್ಣು ಭಟ್ ಮೂರೂರು, ಶ್ರೀ ಆರ್ಗೋಡು ಮೋಹನ್ ದಾಸ್ ಶೆಣೈ, ಶ್ರೀ ಎಮ್. ಎ ನಾಯಕ್, ಶ್ರೀ ದಿನೇಶ್ ಉಪ್ಪೂರ, ಶ್ರೀ ಸುಬ್ರಮಣ್ಯ ಭಟ್ ಗುಡೆಹಿತ್ಲು, ಶ್ರೀ ಲಂಬೋದರ ಹೆಗಡೆ ಕೆಸವಿನಮನೆ, ಶ್ರೀ ಪ್ರಕಾಶ್ ಶೆಟ್ಟಿ ನಗರ

ಆಕರ: ೨೦೦೧ರಲ್ಲಿ ಶ್ರೀ ಮನೋಹರ್ ಕುಂದರ್ ರವರು ಮಾಡಿದ ನಗರ ಜಗನ್ನಾಥ ಶೆಟ್ಟರ ಧ್ವನಿ ಮುದ್ರಿತ ಸಂದರ್ಶನ

ರವಿ ಮಡೋಡಿ, ಬೆಂಗಳೂರು

error: Content is protected !!
Share This