ಆಧುನಿಕ ಮಣಿಪಾಲದ ಶಿಲ್ಪಿ ಡಾ. ಟಿ. ಎಂ. ಎ. ಪೈ ಅವರಿಂದ ಆರಂಭಗೊಂಡು ಅವರ ಸುಪುತ್ರ ಡಾ. ರಾಮ್‌ದಾಸ್ ಪೈಯವರಿಂದ ಮುಂದುವರಿದು ಪ್ರಸಕ್ತ ಅವರ ಸುಪುತ್ರ ಡಾ. ರಂಜನ್ ಆರ್. ಪೈ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಮಾಹೆ’ ಶಿಕ್ಷಣದೊಂದಿಗೆ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಕಲೆ, ಸಾಹಿತ್ಯ, ಸಂಸ್ಕೃತಿಯ ಸಂವರ್ಧನೆಗೆ ವಿಶೇಷ ಕೊಡುಗೆ ನೀಡುತ್ತಾ ಬಂದಿದೆ. ಎಂ.ಜಿ.ಎಂ. ಯಕ್ಷಗಾನ ಕೇಂದ್ರದ ಮೂಲಕ ಯಕ್ಷಗಾನ ಕಲಿಕೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿದೆ. ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಯಕ್ಷಗಾನ ಕಲಾರಂಗ ಯಕ್ಷಗಾನ ಪ್ರದರ್ಶನ, ಯಕ್ಷಗಾನ ಕಲೆ, ಕಲಾವಿದರ ಕ್ಷೇಮ ಚಿಂತನೆ, ಕಲಿಕೆ ಹಾಗೂ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ನೆರವು, ಮಾರ್ಗದರ್ಶನ, ಸಮಾಜದಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾ ಬಂದಿದೆ. ಉಡುಪಿಯ ಈ ಎರಡು ಸಂಸ್ಥೆಗಳು ತಮ್ಮ ಕಾರ್ಯವೈಖರಿಯಿಂದ ಸರ್ವತ್ರ ಮನ್ನಣೆಗೆ ಪಾತ್ರವಾಗಿದೆ.

ಸಂಸ್ಥೆ ಯಕ್ಷಗಾನ ಕಲಾರಂಗದ ಕಾರ್ಯ ಚಟುವಟಿಕೆಗಳಿಗೆ ಪೋಷಕವಾಗಿ ಆರ್ಥಿಕ ನೆರವು ನೀಡಿದ ಅಪೂರ್ವ ಸಂದರ್ಭ ಇಂದು (27-04-2023) ಮಣಿಪಾಲದ ಮಾಹೆಯ ಆಡಳಿತ ಸೌಧದಲ್ಲಿ ಜರಗಿತು. ಮಾಹೆಯ ಅಧ್ಯಕ್ಷರಾದ ಡಾ. ರಂಜನ್ ಆರ್. ಪೈ ಇವರು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಇವರಿಗೆ ರೂ. 50 ಲಕ್ಷದ ಚೆಕ್ಕನ್ನು ಹಸ್ತಾಂತರಿಸಿದರು. ಸಹಕುಲಪತಿಗಳಾದ ಡಾ. ಎಂ. ಡಿ. ವೆಂಕಟೇಶ್ ಮತ್ತು ಸಹ ಉಪಕುಲಪತಿ ಡಾ. ನಾರಾಯಣ ಸಭಾಹಿತರು ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ವಿವರಿಸುತ್ತಾ ಇನ್ಫೋಸಿಸ್ ಫೌಂಡೇಶನ್ ಸಂಸ್ಥೆಗೆ ಬೃಹತ್ ಕಟ್ಟಡದ ಕೊಡುಗೆ ನೀಡಿದೆ. ಇದು ಉಡುಪಿಯ ಸಾಂಸ್ಕೃತಿಕ ಕ್ಷೇತ್ರಕ್ಕೆ ವರದಾನವಾಗಿದೆ. ಸಂಸ್ಥೆ ಯಕ್ಷಗಾನ ಕಲೆ-ಕಲಾವಿದರ ಪೋಷಣೆ, ಯಕ್ಷಶಿಕ್ಷಣ, ವಿದ್ಯಾಪೋಷಕ್ ಹೀಗೆ ನಾಲ್ಕು ಮುಖಗಳಲ್ಲಿ ಕೆಲಸಮಾಡುತ್ತಿದೆ. ಸಮರ್ಪಣಾ ಭಾವದಿಂದ ದುಡಿಯುತ್ತಿರುವ ನಿಸ್ವಾರ್ಥ ಕಾರ್ಯಕರ್ತರೇ ಸಂಸ್ಥೆಯ ಆಸ್ತಿ ಎಂದು ಹೇಳಿದರು. ಎಲ್ಲವನ್ನೂ ಆಲಿಸಿದ ಡಾ. ರಂಜನ್ ಆರ್. ಪೈ ಅವರು ಸಂಸ್ಥೆಯ ಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಪ್ರತಿವರ್ಷ ರೂ. 10 ಲಕ್ಷದಂತೆ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಡಾ. ರಂಜನ್ ಆರ್. ಪೈ ಅವರಿಗೆ ಮತ್ತು ಡಾ. ಎಚ್. ಎಸ್. ಬಲ್ಲಾಳರಿಗೆ ಶಾಲು, ಸ್ಮರಣಿಕೆ ಹಾಗೂ ಬೆಳ್ಳಿಯ ಅಭಿನಂದನ ಪತ್ರವನ್ನು ನೀಡಿ ಗೌರವಿಸಿದರು. ಸಂಸ್ಥೆಯ ಉಪಾಧ್ಯಕ್ಷ ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ, ವಿ. ಜಿ. ಶೆಟ್ಟಿ ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಬಿ. ಭುವನ ಪ್ರಸಾದ್ ಹೆಗ್ಡೆ, ಜತೆ ಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ ಹಾಗೂ ಎಚ್. ಎನ್. ಶೃಂಗೇಶ್ವರ ಭಾಗವಹಿಸಿದ್ದರು. ಪದಾಧಿಕಾರಿಗಳು ಡಾ. ರಂಜನ್ ಆರ್. ಪೈಯವರ ಔದಾರ್ಯದ ಕೊಡುಗೆಗೆ ಕೃತಜ್ಞತೆ ಸಲ್ಲಿಸಿ ಇದು ಸಂಸ್ಥೆಯ ಚರಿತ್ರೆಯಲ್ಲಿ ಒಂದು ಸ್ಮರಣೀಯ ದಿನ ಎಂದು ಸಂತಸ ವ್ಯಕ್ತಪಡಿಸಿದರು.

error: Content is protected !!
Share This