ಎಂ. ಜಿ. ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ

ಸಂಶೋಧನೆಯ ಕ್ಷೇತ್ರದಲ್ಲಿ, ಅದರಲ್ಲೂ ವಿಶೇಷವಾಗಿ ಯಕ್ಷಗಾನ ಸಂಶೋಧನೆಯ ಕ್ಷೇತ್ರದಲ್ಲಿ ವಿಶೇಷವಾದ ಶ್ರದ್ಧೆ ಮತ್ತು ಪರಿಶ್ರಮ ದ ಮೂಲಕ ತೊಡಗಿಸಿಕೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಆ ಕಾಲದಲ್ಲಿಯೇ ಈ ರೀತಿಯ ಶ್ರದ್ಧೆಯನ್ನು ಮೈಗೂಡಿಸಿಕೊಂಡಿದ್ದ ‘ಮುಳಿಯ ತಿಮ್ಮಪ್ಪಯ್ಯನವರ ಛಾಯೆ’ ನಮ್ಮನ್ನು ಆವರಿಸುವ ಅಗತ್ಯವಿದೆ ಎಂದು ಖ್ಯಾತ ವಿದ್ವಾಂಸ ಮತ್ತು ವಿಶ್ರಾಂತ ಕುಲಪತಿಗಳಾದ ಪ್ರೊ. ಬಿ.ಎ ವಿವೇಕ ರೈ ಇಂದಿಲ್ಲಿ ಹೇಳಿದರು.

ಅವರು ಮಾರ್ಚ್ 3, 2020 ಶನಿವಾರದಂದು ಎಂ.ಜಿ. ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ), ಎಂ.ಜಿ. ಎಂ ಕಾಲೇಜು ಹಾಗೂ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಡಾ. ಎಂ. ಪ್ರಭಾಕರ ಜೋಶಿಯವರಿಗೆ ಕೊಡಮಾಡಿದ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಸಂಶೋಧನೆಗೆ ಅರ್ಧವಿರಾಮ, ಅಲ್ಪವಿರಾಮಗಳಿವೆಯೇ ವಿನಾ: ಪೂರ್ಣವಿರಾಮವಿಲ್ಲ ಎಂಬ ಪ್ರೊ. ಎಂ. ಎಂ. ಕಲಬುರ್ಗಿಯವರ ಮಾತನ್ನು ಉದ್ಧರಿಸಿದ ಪ್ರೊ. ವಿವೇಕ ರೈಯವರು ಯಕ್ಷಗಾನ ಕ್ಷೇತ್ರದಲ್ಲಿ ವಿಸ್ತಾರವಾದ ಮತ್ತು ಆಳವಾದ ಸಂಶೋಧನೆಯ ಅಗತ್ಯವನ್ನು ಪ್ರತಿಪಾದಿಸಿದರು. ಯಕ್ಷಗಾನ ಕ್ಷೇತ್ರಕ್ಕೆ ಡಾ ಪ್ರಭಾಕರ ಜೋಶಿಯವರ ಕೊಡುಗೆಯನ್ನು ಶ್ಲಾಘಿಸಿದ ಅವರು ಯಕ್ಷಗಾನ ಪದಕೋಶದ ಹಾಗೆ ಯಕ್ಷಗಾನ ವಿಮರ್ಶೆಯ ಪರಿಭಾಷಾ ಕೋಶವೊಂದರ ಅಗತ್ಯವನ್ನು ಎತ್ತಿಹೇಳಿದರು.

ಜಾತಿಯೆನ್ನುವುದು ಒಂದು ಕಠಾರಿಯೂ, ಒಂದು ಗುರಾಣಿಯೂ ಆಗಿರುವ ಇಂದಿನ ಸಂದರ್ಭದಲ್ಲಿ ತನ್ನ ಬರಹಗಳಲ್ಲಿ ತನ್ನ ಜಾತಿಯ ವಿಮರ್ಶೆಗೂ ತೊಡಗಿಕೊಂಡ ಮುಳಿಯ ತಿಮ್ಮಪ್ಪಯ್ಯನವರ ಸಾಹಿತ್ಯವನ್ನು ನಾವು ಅವಲೋಕಿಸಬೇಕು ಎಂದರು.

ಪ್ರಶಸ್ತಿಯನ್ನು ಪಡೆದ ಡಾ. ಎಂ. ಪ್ರಭಾಕರ ಜೋಶಿಯವರು ಮಾತನಾಡಿ ತಮ್ಮ ಬರಹಗಳಿಗೆ ‘ದೇಶೀ ಸ್ಪರ್ಶವನ್ನು ನೀಡಿದವರು ಮುಳಿಯ ತಿಮ್ಮಪ್ಪಯ್ಯನವರು’. ಅವರ ಯಕ್ಷಗಾನ ಸಂಬಂಧಿ ಲೇಖನಗಳು ನಿಜಕ್ಕೂ ಎದ್ದು ನಿಲ್ಲುವಂತವುಗಳು. ಯಕ್ಷಗಾನ ಕಲಾವಿದರು ಮತ್ತು ಯಕ್ಷಗಾನ ವಿಮರ್ಶಕರು ಇವರ ನಡುವೆ ಒಂದು ಸಂವಾದದ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು. ಈ ಪ್ರಶಸ್ತಿ ಇಲ್ಲಿಯವರೆಗೆ ನಾನು ಪಡೆದಿರುವ ಶ್ರೇಷ್ಟ ಪ್ರಶಸ್ತಿಗಳ ಸಾಲಿಗೆ ಸೇರುತ್ತದೆ. ಮುಳಿಯ ತಿಮ್ಮಪ್ಪಯ್ಯನವರ ವಿಶಾಲ ಹಾಗೂ ಎಲ್ಲವನ್ನೂ ಒಳಗೊಳ್ಳುವ ಯೋಚನೆ ಮತ್ತು ಅಧ್ಯಯನ ನಾವು ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕಾಗಿರುವ ಮುಖ್ಯ ಅಂಶಗಳು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಮಣಿಪಾಲದ ಆಡಳಿತಾಧಿಕಾರಿಗಳಾದ ಡಾ. ಎಚ್. ಶಾಂತಾರಾಮ್ ಮಾತನಾಡಿ ಯಾವ ವಿದ್ವಾಂಸರು ಪ್ರಶಸ್ತಿ ಪುರಸ್ಕöÈತರಾಗುತ್ತಾರೊ ಅವರ ಜೀವನ ಮತ್ತು ವಿದ್ವತ್ತನ್ನು ಯುವ ಜನತೆ ಅರಿಯುವ ಪ್ರಯತ್ನ ಮಾಡುವುದೇ ಅವರಿಗೆ ನೀಡುವ ಅತಿ ದೊಡ್ಡ ಗೌರವ ಎಂದರು.

– 2 –

ಪ್ರಶಸ್ತಿ ಪುರಸ್ಕೃತರ ಕುರಿತು ಅಭಿನಂದನಾ ಭಾಷಣವನ್ನು ನೆರವೇರಿಸಿದ ಪ್ರೊ. ಎಂ. ಎಲ್. ಸಾಮಗ ಮಾತನಾಡಿ ಜೋಶಿಯವರು ವಿಸ್ತಾರವಾದ ಜ್ಞಾನ, ವಾಕ್ಚಾತುರ್ಯ, ಅಭಿಯಕ್ತಿ ಕೌಶಲ, ಸಂವಹನ, ಸೌಷ್ಠವ ಇತ್ಯಾದಿಗಳಿಂದಾಗಿ ಜನಮಾನಸದಲ್ಲಿ ಎಲ್ಲರಿಗೂ ಪ್ರಿಯರಾದವರು, ನಾಡಿನ ಉದ್ದಗಲಕ್ಕೂ ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಇವರನ್ನು ಗೌರವಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿ ಕಾರ್ಯದರ್ಶಿ ಮನೋರಮ ಎಂ. ಭಟ್, ಮುಳಿಯ ತಿಮ್ಮಪ್ಪಯ್ಯನವರ ಮಕ್ಕಳಾದ ಶ್ರೀ ಗೋಪಾಲಕೃಷ್ಣ ಭಟ್ ಹಾಗೂ ಶ್ರೀ ಮುಳಿಯ ರಾಘವಯ್ಯ ಉಪಸ್ಥಿತರಿದ್ದರು. ಕೇಂದ್ರದ ಸಂಯೋಜನಾಧಿಕಾರಿಗಳಾದ ಪ್ರೊ. ವರದೇಶ ಹಿರೇಗಂಗೆ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಭ್ರಮರಿ ಶಿವಪ್ರಕಾಶ ಸ್ವಾಗತ ಗೀತೆ ಹಾಡಿದರು ಕು. ಸುಶ್ಮಿತಾ ಎ ವಂದಿಸಿದರು, ಡಾ. ನರಸಿಂಹ ಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!
Share This