ಮಂದಾರ ರಾಮಾಯಣದಲ್ಲಿ ತುಳುತನದ ದರ್ಶನವಾಗುತ್ತದೆ. ಆಡು ಭಾಷೆಯಲ್ಲಿ ಮಹಾಕಾವ್ಯ ಬರೆಯಲು ಸಾಧ್ಯ ಎನ್ನುವುದನ್ನು ಮಂದಾರ ಕೇಶವ ಭಟ್ಟರು ಸಾಬೀತುಪಡಿಸಿದ್ದಾರೆ. ಮಂದಾರ ರಾಮಾಯಣವನ್ನು ನೃತ್ಯರೂಪಕವಾಗಿಯೂ ಪ್ರಸ್ತುತಪಡಿಸುವ ಅವಕಾಶಗಳಿವೆ. ಪ್ರಯೋಗ ಸ್ವರೂಪಕ್ಕೆ ಹಲವಾರು ಸಾಧ್ಯತೆಗಳಿವೆ ಎಂದು ಮಂದಾರ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಪ್ರಭಾಕರ ಜೋಷಿ ಅಭಿಪ್ರಾಯಪಟ್ಟರು. 

ತುಳುವರ್ಲ್ಡ್ ಮಂಗಳೂರು, ಧವಲತ್ರಯ ಜೈನ ಕಾಶಿ ಟ್ರಸ್ಟ್ ಮೂಡುಬಿದಿರೆ, ತುಳುಕೂಟ ಬೆದ್ರ ಹಾಗೂ ಮಂದಾರ ಪ್ರತಿಷ್ಠಾನ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆ ಜೈನ ಮಠದ ಸ್ವಸ್ತಿ ಶ್ರೀ ಭಟ್ಟಾರಕ ಸಭಾಭವನದಲ್ಲಿ ನಡೆದ ಏಳದೆ ಮಂದಾರ ರಾಮಾಯಣೋ 2022 ಸಪ್ತಾಹದ ಸಮಾರೋಪ ಸಮಾರಂಭದದಲ್ಲಿ ಸಮಾರೋಪ ಭಾಷಣ ಮಾಡಿದರು. 

ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಸಮಾರಂಭದ ಅಧ್ಯಕ್ಷತೆ ವಹಿಸಿ, ಮಂದಾರರವರ ಮನೆ ಉಳಿಸಲು ಸರ್ಕಾರ ಯೋಜನೆಯನ್ನು ರೂಪಿಸಬೇಕು ಎಂದರು. 

ಮಂದಾರ ಸಮ್ಮಾನ್: ಹಿರಿಯ ಯಕ್ಷಗಾನ ಭಾಗವತರಾದ ಲೀಲಾವತಿ ಬೈಪಡಿತ್ತಾಯ ಹಾಗೂ ತುಳುಕೂಟ ಬೆದ್ರದ ಸ್ಥಾಪಕ ಅಧ್ಯಕ್ಷ ಚಂದ್ರಹಾಸ ದೇವಾಡಿಗ ಅವರಿಗೆ ಮಂದಾರ ಸಮ್ಮಾನ್ ನೀಡಿ ಗೌರವಿಸಲಾಯಿತು. ಮಂದಾರ ರಾಮಾಯಣದ ಉತ್ತರಕಾಂಡವನ್ನು ತೋನ್ಸೆ ಪುಷ್ಕಳ ಕುಮಾರ್, ಪ್ರಶಾಂತ್ ರೈ ಪುತ್ತೂರು, ಭಾಸ್ಕರ್ ರೈ ಕುಕ್ಕುವಳ್ಳಿ ಪ್ರಸ್ತುತಪಡಿಸಿದರು. 

ರಾಜ್ಯ ಕಸಾಪ ಮಾಜಿ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು, ಪೂವಾಳ ಧರ್ಣಪ್ಪ ಶೆಟ್ಟಿ, ತುಳುಕೂಟ ಬೆದ್ರದ ಅಧ್ಯಕ್ಷ ಧನಕೀರ್ತಿ ಬಲಿಪ, ಉದ್ಯಮಿ ಕೆ.ಶ್ರೀಪತಿ ಭಟ್, ಮಂದಾರ ಕೇಶವ ಭಟ್ಟರ ಪುತ್ರಿ ಶಾರದಾಮಣಿ, ಕಾಸರಗೋಡು ತುಳುಕೂಟದ ಕಾರ್ಯದರ್ಶಿ ಸತೀಶ್ ನೆಲ್ಲಿಕಟ್ಟೆ ಮುಖ್ಯ ಅತಿಥಿಯಾಗಿದ್ದರು. 

ಸಂಘಟಕರಾದ ಡಾ.ರಾಜೇಶ್ ಆಳ್ವ, ಮಂದಾರ ರಾಜೇಶ್ ಭಟ್, ಪ್ರಮೋದ್ ಸಪ್ರೆ, ಭಾಸ್ಕರ ಕಾಸರಗೋಡು ಉಪಸ್ಥಿತರಿದ್ದರು. 

error: Content is protected !!
Share This