ಯಕ್ಷಗಾನ ಎಂಬ ತೋರಿಕೆಗೆ ಸೀಮಿತ ಪ್ರಾದೇಶಿಕ ವ್ಯಾಪ್ತಿಯನ್ನು ಹೊಂದಿದ ಅಪ್ಪಟ ದೇಸಿಕಲೆಯ ಸೀಮೆ ಭಾರತೀಯ ದರ್ಶನ ಶಾಸ್ತ್ರಗಳು, ಸಂಗೀತ, ಜಾನಪದೀಯ ಮೌಲ್ಯ, ಪೌರಾಣಿಕ ಹಿನ್ನೆಲೆ ಇವನ್ನೆಲ್ಲಾ ಏಕಕಾಲದಲ್ಲಿ ತನ್ನ ಒಡಲಲ್ಲಿ ಇಟ್ಟು ಅವನ್ನು ವಾಚಿಕ, ಅಭಿನಯ, ನಾಟ್ಯ, ಸಂಗೀತ, ವಿಜೃಂಭಕ ಆಹಾರ್ಯಗಳಿಂದೆಲ್ಲಾ ಅಭಿವ್ಯಕ್ತಿಸುವ ಶ್ರೀಮಂತಿಕೆಯಿಂದ ಕೂಡಿದೆ. ಇದನ್ನೆಲ್ಲಾ ಗಮನದಲ್ಲಿರಿಸಿ ಡಾ.ಎಂ.ಪ್ರಭಾಕರ ಜೋಷಿಯವರ ನೆಲೆಯನ್ನು ಅರ್ಥವಿಸಿಕೊಳ್ಳಬೇಕು. ಡಾ.ಎಂ.ಪ್ರಭಾಕರ ಜೋಷಿಯವರು ತಾಳಮದ್ದಳೆಯ ಅರ್ಥಧಾರಿ, ವಿಮರ್ಶಕ ಮತ್ತು ಬರಹಗಾರರು ಹೀಗೆಲ್ಲ ಮಾತ್ರವೇ ಕಂಡರೆ ಅವರ ಕುರಿತಾಗಿ ಒಟ್ಟು ರೂಪ-ನಿರೂಪಣೆ ಮಾಡಿದಂತಾಗದು. ಹಾಗಾಗಿ ತಾತ್ವಿಕವಾಗಿ ಅವರನ್ನು ಗಮನಿಸಬೇಕಾಗುತ್ತದೆ. ಹಾಗಾದಾಗ ನಾವು ಯಕ್ಷಗಾನವನ್ನೂ ಅರ್ಥೈಸಿಕೊಂಡಂತಾಗುತ್ತದೆ. ಡಾ.ಜೋಷಿಯವರನ್ನು ಅರ್ಥಮಾಡಿಕೊಳ್ಳುವುದೂ ಒಂದೇ ಮತ್ತು ಯಕ್ಷಗಾನವನ್ನು ಅರ್ಥಮಾಡಿಕೊಳ್ಳುವುದೂ ಒಂದೇ. ಈ ಬರಹ ಡಾ.ಜೋಷಿಯವರ ಕುರಿತು ಎಲ್ಲವನ್ನು ಹೇಳಿದಂತೆ ಆಗುದಿಲ್ಲವೆಂಬ ಎಂಬ ಜಾಗ್ರತೆಯೂ ಇದೆ.

ಡಾ.ಪ್ರಭಾಕರ ಜೋಷಿಯವರು ಯಕ್ಷಗಾನವನ್ನು ಯಾವತ್ತೂ ಒಂದು obsessive ಆಗಿ ಕಂಡವರಲ್ಲ. ಅವರೇ ಹೇಳುವಂತೆ “ ತದ್ದೂರೇ ತದಂತಿಕೇ’ ಎಂಬ ನಿಷ್ಟೆಯಿಂದ ಬರೆದವರಿವರು.  ಎಂದೂ ಸಹೃದಯತೆಯನ್ನು ಬಿಡದ ಬರಹ ಮತ್ತು ಚಿಂತನೆಗಳು ಯಕ್ಷಗಾನ ಕ್ಷೇತ್ರದ ಒಳಗಿದ್ದೂ ಹೊರಗಿನವರಂತೆ ಆರೋಗ್ಯಪೂರ್ಣ ಅಂತರವಿರಿಸಿ ಗಮನಿಸುವವರು. ಭಾರತೀಯ ದರ್ಶನ ಶಾಸ್ತ್ರ, ಪೌರಾಣಿಕ ಕತೆಗಳ ಮೌಲ್ಯ, ಕಲೌಚಿತ್ಯ, ಕಲಾ ಸೌಂದರ್ಯ ಮತ್ತು ಇವೆಲ್ಲದರ ಜತೆ ಜತೆಗೇ ಸಾಗುವ ಭಾರತೀಯ ಸಂವೇದನೆ ಇದರ ಒಟ್ಟು ಪರಿಪಾಕವಾಗಿ ಡಾ.ಪ್ರಭಾಕರ ಜೋಷಿಯವರ ಚಿಂತನೆಗಳು ತಮ್ಮ ಮೊದಲ ಕೃತಿ “ ಜಾಗರ”ದಿಂದಲೇ ತೊಡಗಿದೆ. ಅವರ ಈಚಿನ ಕೃತಿಯಲ್ಲಿವರೆಗೂ ಈ ಚಿಂತನೆಗಳಲ್ಲಿ  ಸಡಿಲತೆ ಕಂಡುಬಂದಿಲ್ಲ.

ಹಾಗೆಂದು ಡಾ.ಜೋಷಿಯವರ ನಿಲುವುಗಳಲ್ಲಿ ಕಠೋರ ಸಂಪ್ರದಾಯ ಶರಣತೆಯೂ ಇಲ್ಲ. ಕಾಲ-ದೇಶ ಬದ್ಧವಾಗಿ ಜೀವನದ ಚಲನೆ ಸಾಗಬೇಕಾದ ಅನಿವಾರ್ಯತೆಯ ಸತ್ಯ ಇವರಿಗೆ ಗೊತ್ತಿದೆ. ಹಾಗೆಂದು ತಮ್ಮ ಚಿಂತನೆಯಲ್ಲಿ ಯಕ್ಷಗಾನ ವಿಷಯಕವಾದ ಸಂವೇದನೆಗಳು ಮೂಲ ಪ್ರಮೇಯವನ್ನು ಎಂದೂ ಭಂಗಿಸಲಿಲ್ಲ.

ಕೇವಲ ತಾಳಮದ್ದಳೆ- ಯಕ್ಷಗಾನ ಕ್ಷೇತ್ರಕ್ಕೆ ಡಾ.ಜೋಷಿಯವರನ್ನು ಸೀಮಿತಗೊಳಿಸಿದರೆ ಅದು ನಮ್ಮ ಅಪ್ರಬುದ್ಧತೆಯಾಗುತ್ತದೆ. ನಿಜವೇ, ಯಕ್ಷಗಾನ-ತಾಳಮದ್ದಳೆಯ ಮಯಾವಿಲಾಸದ ಕದಂಬ ಬಾಹುಗಳ ನಡುವಿಂದ ಹೊರಬಂದಿದ್ದರೆ ಡಾ.ಪ್ರಭಾಕರ ಜೋಷಿ ಯವರು ಇಂದು ವಿಶ್ವಮಾನ್ಯ ಚಿಂತಕರ ಸಾಲಲ್ಲಿರುತ್ತಾ ಇದ್ದರು. 

ಕೇವಲ ತಾಳಮದ್ದಳೆ- ಯಕ್ಷಗಾನ ಕ್ಷೇತ್ರಕ್ಕೆ ಡಾ.ಜೋಷಿಯವರನ್ನು ಸೀಮಿತಗೊಳಿಸಿದರೆ ಅದು ನಮ್ಮ ಅಪ್ರಬುದ್ಧತೆಯಾಗುತ್ತದೆ. ನಿಜವೇ, ಯಕ್ಷಗಾನ-ತಾಳಮದ್ದಳೆಯ ಮಯಾವಿಲಾಸದ ಕದಂಬ ಬಾಹುಗಳ ನಡುವಿಂದ ಹೊರಬಂದಿದ್ದರೆ ಡಾ.ಪ್ರಭಾಕರ ಜೋಷಿ ಯವರು ಇಂದು ವಿಶ್ವಮಾನ್ಯ ಚಿಂತಕರ ಸಾಲಲ್ಲಿರುತ್ತಾ ಇದ್ದರು. 

ಡಾ.ಪ್ರಭಾಕರ ಜೋಷಿ ಯಕ್ಷಗಾನ ಕ್ಷೇತ್ರದ ಪ್ರಮುಖ “ಧ್ವನಿ”. ಇವರ ಅಧ್ಯಯನ ವ್ಯವಸಾಯ ತತ್ವಶಾಸ್ತ್ರ ಕ್ಷೇತ್ರಕ್ಕೂ ಹಬ್ಬಿದೆ ಎಂಬುದು ಸರ್ವವಿದಿತ. ಅದರಲ್ಲೂ ಭಾರತೀಯ ತತ್ವಶಾಸ್ತ್ರದ ಕುರಿತಂತೆ ಒಂದು ರೀತಿಯ ತೀವ್ರಾಸಕ್ತಿ ಮತ್ತು ತತ್ವಶಾಸ್ತ್ರದ ಕುರಿತಂತೆ ಒಂದು ಶಬ್ದ ನಾವಾಡಿದರೆ ತಾಸುಗಟ್ಟಲೆ ಅದರ ಕುರಿತು ಮಾತಾಡುವ ಉಮೇದು ಡಾ.ಜೋಷಿಯವರದ್ದು. ಇದು ನನ್ನ ವೈಯಕ್ತಿಕ ಅನುಭವ. ಅವರ ಮಾತು ಚುಟುಕು. ವಿಷಯದ ಆಳ ಅಗಾಧ. ಮದ್ದಿನ ಗುಳಿಗೆಗಳಂತಹಾ ಮಾತು. ಅದೇ ತರಹವೇ ಅವರ ಬರಹವೂ. ಸೂತ್ರರೂಪದಂತೆ. ಎಷ್ಟು ಬೇಕೋ ಅಷ್ಟು. No nonsense. 

ಡಾ.ಪ್ರಭಾಕರ ಜೋಷಿಯವರು ಯಕ್ಷಗಾನ ಕಂಡ ಅತ್ಯುತ್ಕೃಷ್ಟ ದರ್ಜೆಯ ಕಲಾವಿಮರ್ಶಕರು. ಅವರು ವಿಮರ್ಶೆಯ ಕುರಿತು ಹೇಳುತ್ತಾ: “ವಿಮರ್ಶೆಯು ಕಲಾ ರಸಿಕನಿಗೂ ಕಥೆಗೂ ಹೊಸ ಪ್ರಚೋದನೆ ನೀಡಬೇಕು…ನಿಲುಮೆಗಳನ್ನು ತಳೆಯುವ ಅಥವಾ ನಿರಾಕರಿಸುವ, ಭಿನ್ನಾಭಿಪ್ರಾಯಗಳನ್ನು , ಚರ್ಚೆಯನ್ನು ಪ್ರಚೋದಿಸುವುದೂ ವಿಮರ್ಶೆಯ ಒಂದು ಕೆಲಸವೇ ಆಗಿದೆ”

ಒಬ್ಬ ಅರ್ಥಧಾರಿಯಾಗಿಯೂ ಸೂಕ್ಷ್ಮ ವಿಮರ್ಶಕನಾಗಿಯೂ ಇರುವ ಜೋಷಿಯವರ  ಇಲ್ಲಿ ಉಲ್ಲೇಖಿಸಬೇಕಾದ ಜೋಷಿಯವರ ಮಾತು ” ಈ ಕ್ಷೇತ್ರದ ವಿಮರ್ಶೆಯ ತಾತ್ವಿಕ ವಿವೇಚನೆ ಆಗಿಲ್ಲ. ಹಾಗಾಗಿ ಯಕ್ಷಗಾನ ವಿಮರ್ಶಾ ಶಾಸ್ತ್ರ ಬೆಳೆದಿಲ್ಲ. ಅದು ಬೆಳೆದಿದ್ದರೆ ಯಕ್ಷಗಾನ ಇಂದು ಇರುವಂತೆ ಇರುತ್ತಿರಲಿಲ್ಲ. ಎಷ್ಟೋ ಉತ್ತಮವಾಗಿರುತ್ತಿತ್ತು. ಯಕ್ಷಗಾನ ರಂಗಕ್ಕೆ ಬೇಕಾದ ಮಾರ್ಗದರ್ಶನ ಒದಗಿಸಲು ವಿಮರ್ಶಕರು ವಿಫಲರಾಗಿದ್ದಾರೆ. ಈ ಸೋಲನ್ನು ನಾವು ಒಪ್ಪಿಕೊಳ್ಳಬೇಕು. ಇದರಿಂದಾಗಿ ವಿಮರ್ಶೆಗೆ ಮುಕ್ತವಾಗಿ ಒಡ್ಡಿಕೊಳ್ಳಲು ಯಕ್ಷಗಾನ ರಂಗ ಇನ್ನೂ ಸಿದ್ಧವಾಗಿಲ್ಲ. ವಿಮರ್ಶೆ ಗೋಷ್ಟಿ ಅಂದರೆ ಅದೇನೋ ತಮ್ಮನ್ನು ಟೀಕಿಸುವಂತಹ ಉದ್ದೇಶ ಎಂದೇ ಕಲಾವಿದರು ತಿಳಿದಿರುವಂತೆ ಕಾಣುತ್ತದೆ. ಈ ಸಂದೇಹವನ್ನು ನಿವಾರಿಸಲು ನಾವು ಪ್ರಯತ್ನಿಸಬೇಕು”.

ಡಾ.ಜೋಷಿಯವರೆನ್ನುವಂತೆ “ ವಿಮರ್ಶೆಗೂ ಮರು ವಿಮರ್ಶೆ ಬೇಕು. ಅದು ಆಚಾರ್ಯ ಪೀಠವಾಗಿರಬಾರದು. ಯಕ್ಷಗಾನ ಸಂಶೋಧನೆಗೆ  ವಿಮರ್ಶೆಯಬಲವಾದ ಅಡಿಪಾಯ ಬೇಕು. ಪ್ರೀತಿ ಬೇಕು. ನಿರ್ಭೀತಿ ಬೇಕು. ಮಾಧ್ಯಮದ ಎಚ್ಚರವಿಲ್ಲದೆ ಮಾಡುವ ವಿಮರ್ಶೆ ‘ ಒಟ್ಟಾರೆ ವಿಮರ್ಶೆ’ಯಾಗುತ್ತದೆ. ಅದರಿಂದ ರಂಗಕ್ಕೆ ಪ್ರಯೋಜನವಿಲ್ಲ.” ಇನ್ನೊಂದು ಮುಖ್ಯ ಮಾತು ಇಲ್ಲಿ ಬರುತ್ತದೆ “ವಿಮರ್ಶೆಯನ್ನು ಯಾರು ಒಳಗಿದ್ದುಕೊಂಡೇ ಮಾಡುತ್ತಾನೋ, ಅವನ ಬಗ್ಗೆ ಬಹಳಷ್ಟು ವಿಶ್ವಾಸ ನಂಬುಗೆಗಳು ಬರುತ್ತವೆ.”

ಹೀಗೆ ಡಾ.ಪ್ರಭಾಕರ ಜೋಷಿಯವರು ತಾಳಮದ್ದಳೆ ಅರ್ಥಧಾರಿಯಾಗಿ, ವೇಷಧಾರಿಯಾಗಿ, ಮದ್ದಳೆವಾದಕನಾಗಿ, ಯಕ್ಷಗಾನ-ತಾಲಮದ್ದಳೆ ವಿಮರ್ಶಕನಾಗಿ ಸಂಸ್ಕೃತಿಗಳ ಚಿಂತಕನಾಗಿ, ಕೋಶಕಾರನಾಗಿ ತನ್ನ ಚಿತ್ತದ ಸಾಮರ್ಥ್ಯವನ್ನು ಭವ್ಯವಾಗಿ ಅಭಿವ್ಯಕ್ತಿಗೊಳಿಸಿದ ನಿಜಾರ್ಥದ ಅಭಿಜ್ಞ. ಇಂತಹಾ ಯಕ್ಷಗಾನದ ಅಭಿಮಾನಕ್ಕೆ 2019 ನೇ ಸಾಲಿನ “ ಯಕ್ಷದ್ರುವ ಪಟ್ಲ” ಪ್ರಶಸ್ತಿಯು ಜೂನ್ 2 ರಂದು ಮಂಗಳೂರಿನ ಸಮೀಪದ ಅಡ್ಯಾರ್ ನ “ ಅಡ್ಯಾರ್ ಗಾರ್ಡನ್”ಇಲ್ಲಿ ಪ್ರದಾನಿಸಲ್ಪಡುತ್ತದೆ.

ತೆಂಕುತಿಟ್ಟು ಕಂಡ ನಕ್ಷತ್ರ ಸದೃಶ ಭಾಗವತರಾದ ಶ್ರೀ ಪಟ್ಲ ಸತೀಶ ಶೆಟ್ಟರ ವಿದ್ವತ್ಪ್ರೀತಿ ಇಲ್ಲಿ ಕಾಣಬಹುದು. ಮಂಗಳೂರಿನ ಬೀದಿ ಬೀದಿಯಲ್ಲಿ ರಾರಾಜಿಸುವ “ ಪಟ್ಲ ಸಂಭ್ರಮ”ದ ಫ್ಲೆಕ್ಸ್ ಗಳಲ್ಲಿ ಡಾ.ಪ್ರಭಾಕರ ಜೋಷಿಯವರ ದೊಡ್ಡದಾದ ಚಿತ್ರಗಳನ್ನು ಕಾಣುವಾಗ ವಿದ್ಯೆ, ವಿದ್ವತ್ತಿಗೆ ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಇವರು ಕೊಡುವ ಮಾನ್ಯತೆಯ ಅರಿವಾಗುತ್ತದೆ. ಈ ನಿಟ್ಟಿನಲ್ಲಿ ಶ್ರೀ ಪಟ್ಲ ಸತೀಶ ಶೆಟ್ಟರು ಅಭಿನಂದನಾರ್ಹರೇ ಸರಿ. ಇಂತಹಾ ವಿದ್ಯಾಪಕ್ಷಪಾತಿತ್ವ, ವಿದ್ವತ್ ಸಮ್ಮಾನ ಮತ್ತಷ್ಟೂ ಅವರಿಂದ ನಡೆಸಲ್ಪಡಲಿ. ಮತ್ತೊಮ್ಮೆ ಡಾ.ಪ್ರಭಾಕರ ಜೋಷಿಯವರಿಗೆ ಅಭಿನಂದನೆಗಳು.

ಕೃಷ್ಣಪ್ರಕಾಶ ಉಳಿತ್ತಾಯ

ಈಶಾವಾಸ್ಯ, ಸದಾಶಿವ ದೇವಸ್ಥಾನದ ಬಳಿ, ಪೆರ್ಮಂಕಿ, ಮಂಗಳೂರು.

error: Content is protected !!
Share This
%d bloggers like this: