ಯಕ್ಷಗಾನದಲ್ಲಿ ಎಷ್ಟೋ ಪೌರಾಣಿಕ ಪ್ರಸಂಗಗಳು ಪ್ರಸಿದ್ದವಾಗಿವೆ. ಇವುಗಳು ರಾಮಾಯಣ, ಮಹಾಭಾರತ , ಭಾಗವತ ಅಥವಾ ಉಪನಿಷತ್ ಕಥೆಗಳನ್ನಾಧರಿಸಿ ಹಲವು ಪ್ರಸಂಗಗಳು ಚಾಲ್ತಿಯಲ್ಲಿ ಬಂದು ಯಕ್ಷಗಾನಕ್ಕೆ ಮೂಲ ಅಧಾರವಾಗಿ ಇಂದಿನವರೆಗೂ ಪ್ರದರ್ಶನಗೊಳ್ಳುತ್ತ ಬಂದಿದೆ. ಹಲವು ಪ್ರಸಂಗ ಕರ್ತೃಗಳು ಹಲವು ಕಥಾನಕಗಳನ್ನು ತಮ್ಮ ಜ್ಞಾನ ತಮ್ಮ ಪ್ರತಿಭೆಗೆ ತಕ್ಕಂತೆ ಹಲವು ಪ್ರಸಂಗಗಳನ್ನು ರಚಿಸುತ್ತ ಕಲೆಯ ಒಟ್ಟಂದಕ್ಕೆ ತಮ್ಮ ದೇಣಿಗೆಯನ್ನು ಸಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಹೀಗೆ ಯಕ್ಷಗಾನ ಕಥಾನಕಗಳಲ್ಲಿರುವ ಪೌರಾಣಿಕ ಕಥಾನಕಗಳಲ್ಲಿ ಹಲವು ಪಾತ್ರಗಳು ಸಾಮಾನ್ಯವಾಗಿ ಬರುತ್ತದೆ. ಅದು ದೇವೆಂದ್ರನ ಪಾತ್ರವಾಗಿರಬಹುದು, ಇಲ್ಲ ಶಿವನ ಪಾತ್ರವಾಗಿರಬಹುದು, ಹೀಗೆ ಹಲವು ಪಾತ್ರಗಳು ಕಧಾನಕದ ಜೀವಾಳವಾಗಿ ಕಥೆಗೆ ಅತ್ಯಂತ ಪೂರಕವಾಗಿರುತ್ತದೆ.ಇಂತಹ ಪ್ರಸಂಗದಿಂದ ಪ್ರಸಂಗಗಳಿಗೆ ಮರುಕಳಿಸುವ ಪಾತ್ರಗಳ ವಿಶ್ಲೇಷಣೆಯಿದು.
ಯಕ್ಷಗಾನದ ಅತ್ಯಂತ ಸಾಮಾನ್ಯ ಪಾತ್ರ ದೇವೆಂದ್ರನದು. ಕಥೆಯ ದೃಷ್ಟಿಯಿಂದ ಅದರ ಬೆಳವಣಿಗೆಗೆ ಮಾತ್ರವಲ್ಲ ಇಂದು ಯಕ್ಷಗಾನ ಎಂದೊಡನೆ ನಮ್ಮ ಮನಃಪಟಲದಲ್ಲಿ ಮೂಡುವ ಚಿತ್ರ ಸಾಮಾನ್ಯವಾಗಿ ದೇವೆಂದ್ರಾದಿ ದೇವತೆಗಳ ಪಾತ್ರವೇ ಆಗಿರುತ್ತದೆ. ಯಕ್ಷಗಾನ ಆರಂಭದಲ್ಲಿ ದೇವೇಂದ್ರನ ಒಡ್ಡೋಲಗದ ಸನ್ನಿವೇಶ ಸಾಂಪ್ರದಾಯಿಕವಾಗಿ ಅತಿ ಮಹತ್ವವನ್ನು ಪಡೆದಿದೆ. ಇಂದ್ರ ಅಗ್ನಿ ವಾಯು ವರುಣಾದಿ ದೇವತೆಗಳ ಸಾಂಪ್ರದಾಯಿಕ ಒಡ್ದೋಲಗ ಯಕ್ಷಗಾನದ ವೇದಿಕೆಯ ವೈಭವವನ್ನು ಸಾರುವಲ್ಲಿ ಪ್ರಧಾನ ಪಾತ್ರವನ್ನು ವಹಿಸಿದೆ. ಇತ್ತೀಚಿನ ದಿನಗಳಲ್ಲಿ ಇದನ್ನು ಕೇವಲ ಹರಕೆಯ ಸನ್ನಿವೇಶದಂತೆ ಚಿತ್ರಿಸುವುದು ಯಕ್ಷಗಾನದ ನಿಜ ವೈಭವವನ್ನು ಸಾರುವಲ್ಲಿ ಹಿನ್ನಡೆಯನ್ನು ಅನುಭಿವಿಸಿದಂತೆ ಭಾಸವಾಗುತ್ತದೆ. ಹಲವು ವರ್ಷಗಳ ಮೊದಲಿನ ಯಕ್ಷಗಾನದಲ್ಲಿ ದೇವೆಂದ್ರನ ಒಡ್ಡೊಲಗದಲ್ಲಿ ಅಗ್ನಿ ವರುಣಾದಿಗಳಿಂದ ತೊಡಗಿ ಬಣ್ಣದ ವೇಷವಾಗಿ ಯಮನ ವೇಷವೂ ಪ್ರವೇಶಿಸುತ್ತಿತ್ತು. ಸುಮಾರು ಒಂದು ಘಂಟೆಯ ಅವಧಿಗೆ ನಡೆಯುವ ಇಂದ್ರನ ಒಡ್ಡೊಲಗದ ದೃಶ್ಯ ಝಗ ಝಗಿಸುವ ವೇಶಭೂಷಣದಿಂದ ರಂಗಸ್ಥಳ ಪೂರ್ಣವಾಗಿ ತುಂಬಿ ಇಂದ್ರನ ಅಮರಾವತಿಯ ನಿಜವೈಭವವನ್ನು ಧರೆಗಿಳಿಸಿದ ಅನುಭವ ನೀಡುತ್ತಿತ್ತು. ಅದರೆ ಇಂದು ಕೇವಲ ವೇಶ ಯಾವುದು ಎಂದರೆ ದೇವೆಂದ್ರನ ಬಲ (ಎಡವೂ ಇಲ್ಲ) ಎನ್ನುವಷ್ಟರ ಮಟ್ಟಿಗೆ ಸಂಕುಚಿತಗೊಂಡಿದೆ. ಬಹುಶಃ ಮುಂದಿನ ಜನಾಂಗ ಈ ದೃಶ್ಯಗಳಿಂದ ವಂಚಿತವಾಗಿದೆ ಎಂದೇ ಭಾವಿಸೋಣ. ಇಂದು ಯಕ್ಷಗಾನದ ಪ್ರಾಥಮಿಕ ವಿದ್ಯಾರ್ಥಿಗಳು ಮಾತ್ರವೇ ಈ ದೇವೆಂದ್ರನ ಪಾತ್ರವನ್ನು ನಿರ್ವಹಿಸುತ್ತಾರೆ. ಅದು ಒಂದೆರಡು ಬಾರಿ ಒಬ್ಬ ಈ ಬಗೆಯ ಪಾತ್ರ ಮಾಡಿ ರಂಗಸ್ಥಳ ಪ್ರವೇಶ ಮಾಡಿದರೆ ನಂತರ ಅದೇ ಪಾತ್ರ ಮಾಡಲು ನಿರಾಕರಿಸುವುದೂ ಇದೆ. ಇದರಲ್ಲು ಪಟ್ಟಭದ್ರ ರಾಜಾಕೀಯ ಮಾಡುವವರು ತಮಗೆ ಆಗದವರಿಗೆ ಇದನ್ನು ಬರುವಂತೆ ಮಾಡುವಲ್ಲಿ ಪಿತೂರಿ ಮಾಡುವ ನೆಲೆಗೆ ಈ ಪಾತ್ರ ನಿರ್ವಹಣೆ ಬಂದಿದೆ ಎಂದರೆ ಖೇದವಾಗಿ ಬಿಡುತ್ತದೆ. ದೇವೇಂದ್ರನ ಒಡ್ಡೊಲಗ ಎಂದೊಡನೆ ಬಾಲ್ಯದಲ್ಲಿ ನೋಡಿದ ಕಟೀಲು ಧರ್ಮಸ್ಥಳ ಮೇಳದ ಆಟಗಳು ಕಣ್ಣೆದುರಿಗೆ ಬರುತ್ತವೆ. ಧರ್ಮಸ್ಥಳ ಮೇಳದ ಆಟದ ದೇವೆಂದ್ರನ ಒಡ್ಡೊಲಗದಲ್ಲಿ ಬರುವ ಜಯಂತನ ಪಾತ್ರ ಶ್ರೀಧರ ಭಂಡಾರಿ ಸಿಡಿಲ ಮರಿಯಂತೆ ನಿರ್ವಹಿಸುತ್ತಿದ್ದ ದೃಶ್ಯ ಇನ್ನು ನೆನಪಿಗೆ ಬಂದರೆ ಅದು ನಿರ್ವಹಿಸುತ್ತ ನೀಡುತ್ತಿದ್ದ ಅನನ್ಯ ಅನುಭವವೇ ಕಾರಣ.
ದೇವೆಂದ್ರನ ಪಾತ್ರ ಹಲವು ಪ್ರಸಂಗಗಳಲ್ಲಿ ಪ್ರಧಾನ ಪಾತ್ರವಾಗಿದ್ದರೂ ಪ್ರಸಂಗದ ಮುಖ್ಯಪಾತ್ರವಾಗಿ ಮತ್ತು ಮೇಳದ ಯಾ ತಂಡದ ಮುಖ್ಯವೇಶಧಾರಿ ನಿರ್ವಹಿಸುವ ಹಾಗಿರುವ ಪ್ರಸಂಗಗಳಲ್ಲಿ ಸಮುದ್ರಮಥನ, ಕಾಯಕಲ್ಪ, ಕನ್ಯಾಂತರಂಗ, ಕುಮಾರವಿಜಯ, ಮಹಾಬ್ರಾಹ್ಮಣ ಹೀಗೆ ಹೆಸರಿಸಬಹುದು. ಹಲವು ಪ್ರಸಂಗಗಳಲ್ಲಿ ಇಂದ್ರನ ಪಾತ್ರ ಬಂದರೂ ಅದು ಒಂದು ಯುದ್ದದ ಸನ್ನಿವೇಶದಲ್ಲಿ ಆ ಪಾತ್ರ ನಿರ್ವಹಣೆ ಸಂಪನ್ನಗೊಳ್ಳುವುದುದು ಅಧಿಕ. ಆದರೂ ಯಕ್ಷಗಾನದ ದೃಷ್ಟಿಯಿಂದ ಇಂದ್ರ ಒಂದು ಮಹಾಪಾತ್ರಗಳಲ್ಲಿ ಒಂದು ಎನ್ನಬಹುದೇನೊ. ಎಂಪೆಕೆಟ್ಟೆ ರಾಮರೈ ಇಂದ್ರನ ಪಾತ್ರವನ್ನು ಅತ್ಯಂತ ಸುಂದರವಾಗಿ ನಿರೂಪಿಸುತ್ತಿದ್ದರು. ಇದರಲ್ಲಿ ಸಮುದ್ರ ಮಥನದ ಇಂದ್ರ ಇವರ ವಿಶೇಷ ಪಾತ್ರಗಳಲ್ಲಿ ಒಂದು. ಹೀಗೆ ಇನ್ನೂ ಗಮನಕ್ಕೆ ಬಾರದ ಕಲಾವಿದರು ಇದ್ದರೂ ಇರಬಹುದು.
ಯಕ್ಷಗಾನದಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಇನ್ನೊಂದು ಶ್ರೀಕೃಷ್ಣನ ಅಥವಾ ಮಹಾವಿಷ್ಣುವಿನ ಪಾತ್ರ. ಈ ಪಾತ್ರಕ್ಕಿರುವಷ್ಟು ಮಹತ್ವ ಯಕ್ಷಗಾನದಲ್ಲಿ ಬೇರೆ ಯಾವುದೇ ಪಾತ್ರಕ್ಕೂ ಇಲ್ಲ ಎನ್ನಬಹುದೇ? ಈ ಪಾತ್ರ ಮಾಡುವವನಿಗೆ ಅಲ್ಪಸ್ವಲ್ಪ ಸಂಸ್ಕ್ರತ ಜ್ಞಾನ ಇರಬೇಕಾದ್ದು ಅನಿವಾರ್ಯ ಎಂಬ ಪ್ರತೀತಿ ಇದೆ. ಹಲವು ಪ್ರಸಂಗಗಳ ಪ್ರಧಾನ ಪಾತ್ರ ಶ್ರೀಕೃಷ್ಣನ ಪಾತ್ರ. ಸಾಮಾನ್ಯವಾಗಿ ಇದನ್ನು ಹೆಚ್ಚಾಗಿ ಮೇಳದ ಪುಂಡುವೇಶಧಾರಿ ನಿರ್ವಹಿಸುತ್ತಾರೆ. ಶ್ರೀಕೃಷ್ಣ ಲೀಲೆ, ಶ್ರೀಕೃಷ್ಣ ಸಂಧಾನ, ಪಾರಿಜಾತ ನರಕಾಸುರ ವಧೆ, ಜಾಂಬವತಿ ಕಲ್ಯಾಣ, ರುಕ್ಮಿಣಿ ಕಲ್ಯಾಣ, ರತಿ ಕಲ್ಯಾಣ ಹೀಗೆ ಪಾಂಡವಾಶ್ವ ಮೇಧದ ಹಲವು ಪ್ರಸಂಗಗಳು ಯಕ್ಷಗಾನದ ಹೆಚ್ಚಿನ ಪ್ರಮುಖ ಪ್ರಸಂಗಗಳ ಮುಖ್ಯಪಾತ್ರವೇ ಶ್ರೀ ಕೃಷ್ಣನದು. ವೇಶಗಾರಿಕೆಯಲ್ಲು ಅಷ್ಟೆ ಯಕ್ಷಗಾನದ ಸಂಪ್ರದಾಯದಂತೆ ಕಿರೀಟವೇಶ ಧರಿಸಿದರೆ ಇನ್ನು ಕೆಲವರು ನಾಟಕೀಯ ವೇಶ ಹಾಕುವುದು ರೂಢಿಯಲ್ಲಿದೆ.ಇದರಲ್ಲಿ ಯಾವುದು ಸರಿ ಯಾವುದು ಸೂಕ್ತವಲ್ಲದ್ದು ಎಂದು ಹೇಳುವುದು ಅವರವರ ವಿವೇಚನೆಗೆ ಬಿಟ್ಟ ವಿಚಾರ. ವಿವೇಚನೆ ಬಿಟ್ಟು ಮತ್ತೂ ಹೇಳಿದರೆ ಕೃಷ್ಣನ ವೇಶಧಾರಿ ಬಣ್ಣದ ವೇಶವಾಗಿ ಮೈಮೇಲೆ ಎರಿ ಬಂದರೆ.!?? ಪರಂಪರೆಯ ಯಕ್ಷಗಾನದಲ್ಲಿ ಶ್ರೀ ಕೃಷ್ಣನ ಒಡ್ಡೋಲಗವನ್ನು ಸಾಂಪ್ರದಾಯಿಕವಾಗಿ ಪ್ರದರ್ಶಿಸುವುದು ಬಳಕೆಯಲ್ಲಿದೆ. ಹೀಗೆ ಯಕ್ಷಗಾನದ ಮಹಾಪಾತ್ರಗಳಲ್ಲಿ ಶ್ರೀಕೃಷ್ಣನ ಪಾತ್ರ ಅತೀ ಪ್ರಮುಖ ಪಾತ್ರ ಮತ್ತು ಶ್ರೀಕೃಷ್ಣ ಪರಮಾತ್ಮನ ಕಥಾನಕ ಅಂದರೆ ಅದು ರಂಜನೀಯವಾಗಿ ಯಕ್ಷಗಾನ ಪ್ರಸಂಗ ಅಕರ್ಷಣೀಯವಾಗಿ ಮೂಡಿಬರುತ್ತದೆ.ಪ್ರಮುಖ ಪಾತ್ರವಲ್ಲದ ಪ್ರಸಂಗವಾದರೂ ಕೃಷ್ಣ ಪ್ರವೇಶದ ಸನ್ನಿವೇಶ ಅತಿ ಮುಖ್ಯವಾಗಿ ಬಿಂಬಿಸಲ್ಪಡುತ್ತವೆ. ಮೇಳದ ಮುಖ್ಯ ಪಾತ್ರಧಾರಿ ನಿರ್ವಹಿಸುವ ಈ ಪಾತ್ರಗಳನ್ನು ಹಲವು ಕಲಾವಿದರು ತಮ್ಮ ಪ್ರತಿಭೆಯಿಂದ ತಮ್ಮದೇ ಛಾಪನ್ನು ಈ ಪಾತ್ರ ನಿರ್ವಹಣೆಯಲ್ಲಿ ಮೂಡಿಸಿದ್ದಾರೆ. ನಮ್ಮ ಕಾಲದಲ್ಲಿ ಶ್ರೀ ಕುಂಬಳೆ ಸುಂದರ್ ರಾವ್ ಶ್ರೀ ಕೃಷ್ಣನ ಪಾತ್ರ ನಿರ್ವಹಿಸುವುದರಲ್ಲಿ ಅತ್ಯಂತ ಪ್ರಸಿದ್ದವಾಗಿದ್ದರು. ಹಾಗೆ ಇನ್ನೂ ಹಲವು ಕಲಾವಿದರು ಈ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸುತ್ತಾರೆ.
ಶಿವನ ಪಾತ್ರವೂ ಹಲವು ಪ್ರಸಂಗಗಳಲ್ಲಿ ಪ್ರಮುಖವಾಗಿ ಕಾಣಬಹುದು. ತ್ರಿಪುರ ಮಥನ, ಭಸ್ಮಾಸುರ ಮೋಹಿನಿ, ದಕ್ಷಯಜ್ಞ, ಬ್ರಹ್ಮಕಪಾಲ, ಶಿವಪಂಚಾಕ್ಷರಿ ಮಹಾತ್ಮೆ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ. ಹೀಗೆ ಹಲವು ಪ್ರಸಂಗಗಳ ಶಿವನ ಪಾತ್ರ ಪ್ರಧಾನ ಕಲಾವಿದರಿಂದಲೇ ನಿರ್ವಹಿಸಲ್ಪಡುತ್ತದೆ. ಇದರಲ್ಲು ಹಲವು ಬಗೆಯ ಭಿನ್ನ ವೇಶಗಾರಿಕೆಯನ್ನು ಕಾಣಬಹುದು. ಗಜ ಚರ್ಮಾಂಬರನಾದ ಶಿವನ ವೇಶ, ಭುಜಕೀರ್ತಿ ಮುಂತಾದ ದಿರಿಸುಗಳಿಂದ ಪರಂಪರೆಯ ಶಿವನ ವೇಶ, ಕೆಲವು ಕಡೆ ಸನ್ಯಾಸಿ ವೇಶವನ್ನೇ ಅಲ್ಪ ಸ್ವಲ್ಪ ಮಾರ್ಪಾಟು ಮಾಡಿ ಶಿವನ ವೇಶ ಧರಿಸುವುದು ಇದೆ. ಮಾತ್ರವಲ್ಲ ಕಾವಿ ದಿರಿಸನ್ನು ಧರಿಸಿ ಶಿವನ ವೇಶ ಸಹ ಮಾಡುವವರಿದ್ದಾರೆ. ಆಯಾಯ ಸಮಯಕ್ಕೆ ಮತ್ತು ವೇಶಧಾರಿಯ ಮನೋಭಾವಕ್ಕೆ ತಕ್ಕ ಹಾಗೆ ಹಲವು ಬಗೆಯವೇಶವನ್ನು ಕಂಡರೂ ಕೆಲವು ಪ್ರಸಂಗಗಳಲ್ಲಿ ಶಿವನ ಪಾತ್ರ ತುಂಬ ಪ್ರಧಾನವಾಗಿರುತ್ತದೆ. ದಿವಂಗತ ಶ್ರೀ ರಾಮದಾಸ ಸಾಮಗರು ಬ್ರಹ್ಮಕಪಾಲ ಪ್ರಸಂಗದ ಶಿವನ ಪಾತ್ರಕ್ಕೆ ಪ್ರಸಿದ್ದರಾಗಿದ್ದರು. ತನ್ನದೇ ವಿಶಿಷ್ಟ ಶೈಲಿಯಿಂದ ಈ ಪ್ರಸಂಗವನ್ನೆ ಎತ್ತಿನಿಲ್ಲಿಸುವ ಸಾಮಾರ್ಧ್ಯವಿತ್ತು ಅವರ ನಿರ್ವಹಣೆಯಲ್ಲಿ ಎಂದು ಕೇಳಿದ್ದೇನೆ.
ಶ್ರೀರಾಮನ ಪಾತ್ರವು ಯಕ್ಷಗಾನದ ಹತ್ತು ಹಲವು ಪ್ರಮುಖ ಪಾತ್ರಗಳಲ್ಲಿ ಒಂದು. ನಿರ್ದಿಷ್ಟವಾಗಿ ರಾಮಾಯಣವನ್ನು ಆಧರಿಸಿದ ಹೆಚ್ಚಿನ ಎಲ್ಲಾ ಪ್ರಸಂಗಗಳಲ್ಲಿ ಶ್ರೀರಾಮನ ಪಾತ್ರ ಅತ್ಯಂತ ಪ್ರಮುಖವಾಗಿರುತ್ತದೆ. ಪರಂಪರೆಯ ಯಕ್ಷಗಾನದಲ್ಲಿ ರಾಜವೇಶದ ಶ್ರೀರಾಮನನ್ನು ಕಂಡರೆ ನೀಲ ಬಣ್ಣದ ನಾರು ಮುಡಿಯ ರಾಮನೇ ಹತ್ತು ಹಲವು ಪ್ರಸಂಗಗಳಲ್ಲಿ ಮುಖ್ಯವಾಗಿ ಕಾಣಬಹುದು. ಭಾವನಾತ್ಮಕ ಅಭಿನಯ ಅರ್ಥಪೂರ್ಣ ಮಾತುಕಾರಿಕೆ ಹಿತಮಿತವಾದ ಗಂಭೀರ ನಾಟ್ಯವಿದ್ದರೆ ಮಾತ್ರ ಸಮರ್ಥವಾಗಿ ರಾಮನ ಪಾತ್ರ ನಿರ್ವಹಿಸಬಹುದು. ಪಟ್ಟಾಭಿಷೇಕ, ಪಂಚವಟಿ, ಪಾದುಕಾಪ್ರದಾನ, ವಾಲಿವಧೆ, ಇಂದ್ರಜಿತು ಕಾಳಗ, ಕುಂಭಕರ್ಣ ಕಾಳಗ ರಾವಣವಧೆ, ಲವಕುಶ ಕಾಳಗ ಹೀಗೆ ಹಲವು ಪ್ರಸಂಗಗಳಲ್ಲಿ ಶ್ರೀರಾಮನ ಪಾತ್ರ ಅತ್ಯಂತ ಪ್ರಮುಖ ಪಾತ್ರ. ಅದರಲ್ಲೂ ಲವಕುಶ ಅಥವಾ ಸೀತಾ ಪರಿತ್ಯಾಗದಂತ ಪ್ರಸಂಗದ ಶ್ರೀರಾಮನ ಪಾತ್ರ ನಿರ್ವಹಿಸುವುದು ಯಾವುದೇ ಕಲಾವಿದನಿಗೂ ಅತ್ಯಂತ ಸವಾಲಿನ ವಿಷಯವಾಗಿರುತ್ತದೆ. ವಿನೋದದ ಮತ್ತು ಸರಸ ಸಂಭಾಷಣೆಯ ಶ್ರೀರಾಮನನ್ನು ಪಂಚವಟಿ ಪ್ರಸಂಗದಲ್ಲಿ ಮಾತ್ರವೇ ಕಾಣಬಹುದು.ಅದರೂ ಸಹಜವಾಗಿ ಗಂಭೀರ ವ್ಯಕ್ತಿತ್ವದ ರಾಮನ ಪಾತ್ರ ಯಕ್ಷಗಾನ ಪ್ರಸಂಗಗಳಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ.
ಯಕ್ಷಗಾನದ ಹಲವು ಪ್ರಸಂಗಗಳಲ್ಲಿ ಬಹುಮುಖ್ಯವಾಗಿ ಬರುವ ಪಾತ್ರಗಳಲ್ಲಿ ಹನುಮಂತನ ಪಾತ್ರ ಇನ್ನೊಂದು ಬಗೆಯದು. ಭಕ್ತಾಗ್ರೇಸರ ಸಾಹಸಿ ಹನುಮ ಮೆರೆದಾಡುವಂತಹ ಹಲವು ಯಶಸ್ವೀ ಪ್ರಸಂಗಗಳು ಯಕ್ಷಗಾನದ ಯಶಸ್ವೀ ಅಂಶಗಳಲ್ಲಿ ಒಂದು. ರಾಮಾಯಣದ ಹಲವು ಪ್ರಸಂಗಗಳು. ಲಂಕಾದಹನ, ಚೂಡಾಮಣಿ, ಇಂದ್ರಜಿತು ಕಾಳಗ, ಮೈರಾವಣ ಅಹಿರಾವಣ ಕಾಳಗ. ವೀರಮಣಿ ಕಾಳಗ. ಮಹಾಭಾರತದ ಹಲವು ಪ್ರಸಂಗಗಳು ಶರಸೇತು ಬಂಧನ ಪುರುಷಾಮೃಗ, ವೀರವರ್ಮ ಕಾಳಗ ಗರುಡಗರ್ವಭಂಗ ಹೀಗೆ ರಾಮಾಯಣಕ್ಕು ಮಹಾಭಾರತಕ್ಕು ಮಧೆ ಬೆಸುಗೆಯಂತಿರುವ ಚಿರಂಜೀವಿ ಹನುಮನ ಪಾತ್ರವನ್ನು ಮೇಳದ ಮುಖ್ಯಕಲಾವಿದ ಮಾತ್ರವೇ ಸಮರ್ಥವಾಗಿ ನಿರ್ವಹಿಸಬಲ್ಲ. ಹನುಮಂತನ ಒಡ್ಡೋಲಗವೆಂಬು ಸಾಂಪ್ರದಾಯಿಕ ಯಕ್ಷಗಾನದ ಬಹು ಮುಖ್ಯ ಅಂಶ. ಹಲವು ವಿಧದ ಹನುಮಂತನ ವೇಶಗಳು ಯಕ್ಷಗಾನದಲ್ಲಿ ಬಳಕೆಯಲ್ಲಿವೆ.
ಯಕ್ಷಗಾನದ ವೀರಾವೇಶದ ಪಾತ್ರಕ್ಕೆ ಸೂಕ್ತವಾದ ಪಾತ್ರ ಅರ್ಜುನನ ಪಾತ್ರ. ಹಲವು ಪ್ರಸಂಗಗಳ ಬಹುಮುಖ್ಯವಾದ ಈ ಪಾತ್ರ ಅತ್ಯಂತ ವೈವಿಧ್ಯಮಯವಾಗಿ ಹಲವು ಪ್ರಸಂಗಗಳಲ್ಲಿ ಚಿತ್ರಿತವಾದ ಪಾತ್ರ. ರಾಜವೇಶದ ಕಿರೀಟವೇಶದ ಪಾತ್ರವೆಂದಾಕ್ಷಣ ಅರ್ಜುನನ ಪಾತ್ರವೂ ಮನಸ್ಸಿನಲ್ಲಿ ಹಾದು ಹೋಗುವುದಕ್ಕೆ ಹಲವು ಕಾರಣಗಳಿದೆ. ವೀರರಸಕ್ಕೆ ಪ್ರಾಧಾನ್ಯವಿರುವ ಯಕ್ಷಗಾನದಲ್ಲಿ ಅರ್ಜುನನ ಪಾತ್ರ ಮೇಳದ ಬಹುಮುಖ್ಯ ಕಲಾವಿದನಿಂದ ನಿರ್ವಹಿಸಲ್ಪಡುವುದು ಸಾಮಾನ್ಯ. ಅದರಲ್ಲಿ ಹಲವು ಪ್ರಸಂಗಗಳು, ಪಾಂಡವಾಶ್ವಮೇಧದ ಹಲವು ಪ್ರಸಂಗಗಳು, ಕರ್ಣಪರ್ವ, ಕೃಷ್ಣಾರ್ಜುನ,ಶರಸೇತು ಬಂಧನ, ಕುರುಕ್ಷೇತ್ರದ ಹಲವು ಪ್ರಸಂಗಗಳು ಅರ್ಜುನನ ಪಾತ್ರ ಮುಖ್ಯವಾಗುವ ಪ್ರಸಂಗಗಳು. ಅಳಕೆ ರಾಮ ರೈ, ಸಂಪಾಜೆ ಶೀನಪ್ಪ ರೈ, ಇವರುಗಳ ಅರ್ಜುನ ಪಾತ್ರ ಒಂದು ಮಾದರಿ ಅರ್ಜುನನ ಪಾತ್ರ ಎನ್ನಬಹುದು. ಕೇವಲ ವೀರರಸಕ್ಕೆ ಸೀಮಿತವಾಗಿ ಪಾತ್ರವಲ್ಲ, ಈ ಅರ್ಜುನನ ಪಾತ್ರ ಭಕ್ತಿ, ಕರುಣ ರಸಗಳಿಂದಲೂ ಪ್ರಧಾನವಾಗಿದೆ.
ಇವುಗಳೆಲ್ಲದರಿಂದ ತೀರ ಭಿನ್ನವಾಗಿ ಗುರುತಿಸಲ್ಪಡುತ್ತದೆ ಯಕ್ಷಗಾನದಲ್ಲಿ ನಾರದನ ಪಾತ್ರ. ನಾರದನ ಪಾತ್ರವಿಲ್ಲದ ಪ್ರಸಂಗ ಅತ್ಯಂತ ಕಡಿಮೆ ಎನ್ನಬಹುದೇನೋ? ಹಲವು ಪ್ರಸಂಗದ ನಡೆಗೆ ಸನ್ನಿವೇಶದ ಉಪಯುಕ್ತತೆಯನ್ನು ಅನುಸರಿಸಿಕೊಂಡು ಈ ಪಾತ್ರ ತುಂಬ ವೈಶಿಷ್ಟ್ಯಪೂರ್ಣವಾಗಿ ರಂಗದಲ್ಲಿ ಬರುವುದು. ಜಾಂಬವತಿ ಕಲ್ಯಾಣದಂತಹ ಕಥಾನಕಗಳಲ್ಲಿ ನಾರದನ ಪಾತ್ರ ಕಥೆಗೆ ಸೂಕ್ತವಾಗಿ ಬಳಕೆಯಾಗುತ್ತದೆ. ಹಾಸ್ಯ ಮಿಶ್ರಿತ ನಾರದನ ಪಾತ್ರವೇ ಹೆಚ್ಚಾಗಿ ನೋಡಬಹುದು. ಬಹುಶಃ ಮೇಳದ ಹಾಸ್ಯಗಾರನೆ ಹೆಚ್ಚಾಗಿ ನಿರ್ವಹಿಸುವುದರಿಂದಲೋ ಏನೋ ಈ ಪ್ರಭಾವ ಅಧಿಕವಾಗಿ ಕಾಣಬಹುದು. ಪ್ರಸಂಗಗಳಿಗೆ ಕೀಲಿಕೈಯಂತಿರುವ ನಾರದನ ಪಾತ್ರ ಎಷ್ಟು ಮುಖ್ಯವೋ ಅಷ್ಟೆ ಔದಾಸಿನ್ಯದಿಂದ ಇದು ಪ್ರದರ್ಶಿತವಾಗುವುದು ಇದೆ. ಕಲಾವಿದರು ಹರಕೆ ಸಲ್ಲಿಸುವ ಯೋಜನೆ ಹಾಕವುದು ಈ ಪಾತ್ರದ ಮುಖಾಂತರವೆ ಅಂತ ಅನ್ನಿಸಿದ್ದಿದೆ. ಕೆಲವೊಮ್ಮೆ ಅಷ್ಟೂ ಸೋಮಾರಿತನದಲ್ಲಿ ಇದನ್ನು ಬಿಂಬಿಸಲಾಗುತ್ತದೆ. ಯಾವುದೇ ಪ್ರಸಂಗದಲ್ಲಿ ನಾರದನ ಪಾತ್ರ ಅತೀ ಮುಖ್ಯ ಅಂತ ಅನ್ನಿಸುವುದೇ ಇಲ್ಲ. ಇದು ನನ್ನ ಅಭಿಮತ. ವೇಶಗಾರಿಕೆಯಿಂದಲೂ ನಾಟ್ಯ ಮತ್ತು ಅರ್ಥಗಾರಿಕೆಯಿಂದಲೂ ಈ ಪಾತ್ರ ಅತ್ಯಂತ ಉದಾಸಿನದ ಪಾತ್ರ ಅಂತ ಹೇಳಬಹುದೆನೋ?
ಇನ್ನೂ ನನ್ನ ಗಮನಕ್ಕೆ ಬಾರದ ಹಲವು ಪಾತ್ರಗಳಿವೆ. ವಿಶ್ವಾಮಿತ್ರ ವಸಿಷ್ಠರ ಪಾತ್ರ. ಸತ್ಯ ಹರಿಶ್ಚಂದ್ರ, ಮಹಾಬ್ರಾಹ್ಮಣ, ಸೀತಾಸ್ವಯಂವರ, ತಾಟಕಿ ಸಂಹಾರ ಹೀಗೆ ಹಲವು ಪ್ರಸಂಗಗಳಲ್ಲಿ ವಿಶ್ವಾಮಿತ್ರ ಪಾತ್ರ ಅತಿಮುಖ್ಯವಾಗಿ ಬಿಡುತ್ತದೆ. ಯಕ್ಷಗಾನದ ಪ್ರಸಂಗಗಳಲ್ಲಿ ಹಲವು ಪಾತ್ರಗಳ ಬಳಕೆಯನ್ನನುಸರಿಸಿ ಒಂದು ಸಂಶೋಧನೆಯನ್ನು ಮಾಡಿ ಆ ಮೂಲಕ ಒಂದು ಗ್ರಂಥವನ್ನು ಬರೆಯಬಹುದು.ಅದು ಕಲೆಯ ಬೆಳವಣಿಗೆಯ ದೃಷ್ಟಿಯಿಂದ ಅತ್ಯಂತ ಬಹಳ ಸೂಕ್ತವಾಗಬಹುದು.
(ರಾಜಕುಮಾರ್, ಬೆಂಗಳೂರು)