ಡಾ. ಎಂ. ಪ್ರಭಾಕರ ಜೋಶಿ

-1-

ಯಕ್ಷಗಾನವು, ಕಳೆದ ಒಂದು ನೂರು ವರ್ಷಗಳ ಅವಧಿಯಲ್ಲಿ ಹಲವು ಹಂತಗಳ ಬದಲಾವಣೆಗಳನ್ನು ಕಂಡಿದ್ದು, ಅದರ ಸ್ಥೂಲವಾದೊಂದು ಚಿತ್ರವನ್ನು ಕಲ್ಪಿಸುವಷ್ಟು ಮಾಹಿತಿಗಳು- ಆರಂಭಿಕ ಹಂತದ ಬಗೆಗೂ ನಮಗೆ ಸಿಗುತ್ತದೆ. 1940ರ ಬಳಿಕದ ಸಂಗತಿಗಳು ಸಾಕಷ್ಟು ವಿವರವಾಗಿಯೆ ನಮ್ಮ ಮುಂದಿವೆ.

ಕ್ರಿ. 1900, 1930, 1950, 1975 ಮತ್ತು 2000 – ಹೀಗೆ ಬದಲಾವಣೆ, ಬೆಳವಣಿಗೆಗಳ ಏರಿಳಿತಗಳ ಹಂತಗಳೆಂದು ಗುರುತಿಸಬಹುದು.

1900 : ಮುದ್ದಣ ಕವಿಯ ‘ರತ್ನಾವತಿ ಕಲ್ಯಾಣ’, ‘ಕುಮಾರ ವಿಜಯ’ ಪ್ರಕಟನೆ, ಹಲಸಿನ ಹಳ್ಳಿಯವರ ರಚನೆಗಳ ಆರಂಭಕಾಲ.

ಸುಮಾರು : 1930 – ಯುದ್ಧಾಂತರ ಕಾಲ, ಎಲ್ಲ ರಂಗಗಳಲ್ಲಿ ಪ್ರಭಾವ ಬೀರಿ ಸಾಮಗ್ರಿ, ಸಂಘಟನೆ, ಸಾಂಸ್ಕೃತಿಕ ಚಿಂತನೆಗಳಲ್ಲಿ ಪರಿವರ್ತನೆಗಳಾದ ಕಾಲ, ಯಕ್ಷಗಾನದಲ್ಲೂ ಅದು ಪ್ರಭಾವಬೀರಿ ಯಕ್ಷಗಾನ ನಾಟಕ, ಹೊಸಬಗೆಯ ತಾಳಮದ್ದಳೆಗಳ ಆರಂಭವಾದುದು.

1950 – ಯಕ್ಷಗಾನ ಡೇರೆ ಮೇಳಗಳ ಆರಂಭ, ವೃತ್ತಿಗೆ ಹೊಸ ಸ್ವರೂಪ.

ಡಾ| ಶಿವರಾಮ ಕಾರಂತರ ಯಕ್ಷಗಾನ ಬಯಲಾಟ, ನೂತನ ನಾಟ್ಯ ಪ್ರಯೋಗಗಳು ಇತ್ಯಾದಿಗಳ ಆರಂಭಕಾಲ. ಯಕ್ಷಗಾನದ ವಿಸ್ತಾರದ ಆರಂಭ. 1970ರಿಂದ ಕಮರ್ಶಿಯಲ್ ಯಕ್ಷಗಾನದ ಏರುಕಾಲ. ಹತ್ತಾರು ಮೇಳಗಳು, ಕಂಟ್ರಾಕ್ಟ್ ಪದ್ಧತಿಯ ಜನಪ್ರಿಯತೆ, ಬಡಗುತಿಟ್ಟಿನಲ್ಲಿ ಡೇರೆ ಮೇಳಗಳ ಪುನರುಜ್ಜೀವನ, ಇಡಗುಂಜಿ ಮೇಳ ಪುನರ್ ಸಂಘಟನೆ, ಉತ್ತರ ಕನ್ನಡ ತಿಟ್ಟು ಉಳಿದ ತಿಟ್ಟುಗಳನ್ನು ತೀವ್ರವಾಗಿ ಪ್ರಭಾವಿಸಲು ಆರಂಭ, ಯಕ್ಷಗಾನದಲ್ಲಿ ಹಲವು ಹೊಸ ಪ್ರಯೋಗಗಳು, ಸಂಶೋಧನೆಗಳು, ವಿಮರ್ಶೆ, ಕಮ್ಮಟ, ಪ್ರಾತ್ಯಕ್ಷಿಕೆಗಳ ಯುಗಾರಂಭ, ಜತೆಗೆ ಶೈಲಿ ವಿನಾಶದ ಸ್ಪಷ್ಟ ಸೂಚನೆಗಳು. ಯಕ್ಷಗಾನ ಕೇಂದ್ರಗಳ ಸ್ಥಾಪನೆ, ವಿಕಾಸ, ಒಟ್ಟಿನಲ್ಲಿ 1960-1985 ಯಕ್ಷಗಾನ ಚಟುವಟಿಕೆಗಳ ಉಬ್ಬರದ ಯುಗ.

ಈ ಹಿನ್ನೆಲೆಯಲ್ಲಿ ಯಕ್ಷಗಾನ ರಂಗದ ಸದ್ಯದ ಸನ್ನಿವೇಶ, Art Situration ಮತ್ತು ಮುಂದಣ ಸಂಭವನೀಯವಾದ ಕೆಲವು ಸ್ಥಿತಿಗತಿಗಳನ್ನು ಈ ಲೇಖನದಲ್ಲಿ, ಸ್ಥೂಲವಾಗಿ ಟಿಪ್ಪಣಿಗಳ ರೂಪದಲ್ಲಿ ಪರಿಶೀಲಿಸಿದೆ.

-2-

ಸದ್ಯ ಯಕ್ಷಗಾನದಲ್ಲಿ ಸುಮಾರು ಮೂವತ್ತು ವ್ಯವಸಾಯಿ ಮತ್ತು ಅರೆವ್ಯವಸಾಯಿ ಮೇಳಗಳಿವೆ. ಇವುಗಳ ಪೈಕಿ ಡೇರೆ ಮೇಳಗಳು ಮೂರು ಮಾತ್ರ – ಪೆರ್ಡೂರು ಮೇಳ, ಸಾಲಿಗ್ರಾಮ ಮೇಳ, ಮಂಗಳಾದೇವಿ ಮೇಳ. 1950ರಿಂದ ಆರಂಭವಾಗಿ, 1960ರ ಬಳಿಕ ಕಂಟ್ರಾಕ್ಟ್ ಪದ್ಧತಿ ಬಂದು, 70-80ರ ಅವಧಿಯಲ್ಲಿ ಹತ್ತು ಹದಿನೈದಕ್ಕೆ ತಲುಪಿತ್ತು ಡೇರೆ ಮೇಳಗಳ ಸಂಖ್ಯೆ. ಆಟ ಕಾಂಟ್ರಾಕ್ಟ್ ಗೆ ಕ್ಯೂ. ಸಂಸ್ಥೆಗಳ ಸಹಾಯಾರ್ಥ ಪ್ರದರ್ಶನ ನಿಶ್ಚಿತ ದಿನದ ಆಟಗಳಿಗೆ ಭಾರೀ ಒತ್ತಡ. ಅವರಿವರಿಂದ ಶಿಫಾರಸು. ಪುತ್ತೂರು, ಶಿರಸಿ, ಸುಳ್ಯ. ಇಂತಹ ಊರುಗಳ ಜಾತ್ರೆಗಳಲ್ಲಿ ಮೂರು ನಾಲ್ಕು ಡೇರೆ ಮೇಳಗಳ ಆಟಗಳು. ಹಲವೆಡೆ – ಮುಗಿಬೀಳುವ ಪ್ರೇಕ್ಷಕರು, ಪೊಲೀಸ್ ರಕ್ಷಣೆ, ಪ್ರವೇಶಕ್ಕಾಗಿ ಹೊಡೆದಾಟ, ಜಾಗವಿಲ್ಲದೆ ಮನೆಗೆ ಜನರು ಮರಳಿದುದು – ಇದೆಲ್ಲ ಮೊನ್ನೆ ಮೊನ್ನೆ ಎಂಬಂತೆ ಕಂಡ ಸಂಗತಿಗಳು.

ಬರಿಯ ಹತ್ತು ಹದಿನೈದು ವರ್ಷಗಳಲ್ಲಿ ಎಲ್ಲಿ ಹೋದರು ಈ ಪ್ರೇಕ್ಷಕರು, ಕಂಟ್ರಾಕ್ಟುದಾರರು, ವ್ಯಕ್ತಿ, ಸಂಸ್ಥೆಗಳು? ಆಶ್ಚರ್ಯವಾಗುತ್ತದೆ. ವಿಶೇಷ ಆಕರ್ಷಣೆಗಳು, ಕಥನ ಕುತೂಹಲ ಪ್ರಸಂಗಗಳು, ಮಸಾಲೆ ರಂಜನೆ, ಹಾಸ್ಯ, ಸಿನಿಮಾ ಮಾದರಿ ಕತೆ – ಇನ್ನೂ ಏನೇನೋ ಇದ್ದು, ಬೇರೆ ಆಟಗಳ ಸಂಖ್ಯೆ ಕಡಿಮೆ ಆಗಿ, ಇರುವ ಆಟಗಳಿಗೂ ಪ್ರೇಕ್ಷಕ ಸಂಖ್ಯೆ ಇಳಿಯುತ್ತದೆ. 1950-2009 ಈ ಅವಧಿಯಲ್ಲಿ ಯಕ್ಷಗಾನದ ವ್ಯವಹಾರವು ಕಂಡ ಏರಿಳಿತಗಳು, ಆಶ್ಚರ್ಯಕರವಾಗಿ, ಅಧ್ಯಯನ ಯೋಗ್ಯವಾಗಿವೆ.

-3-

ಚಂದ್ರಗಿರಿಯಿಂದ ಕಾರವಾರದ ಕಾಳೀನದಿ ತನಕ, ಕಡಲಿನಿಂದ ಗಟ್ಟದ ಒಡಲಿನ ತನಕ ಸುಮಾರು 250 ಕಿಲೋಮೀಟರ್ ಉದ್ದ, 150 ಕಿ.ಮೀ. ಅಗಲದ ಭೂಭಾಗದಲ್ಲಿ ಮೂವತ್ತು ಮೇಳಗಳು, ನೂರಾರು ಹವ್ಯಾಸಿ ತಂಡಗಳೂ ಒಳಗೊಂಡ ಒಂದು ಸಾಂಪ್ರದಾಯಿಕ ರಂಗಭೂಮಿ ಇರುವುದೇ ಒಂದು ವಿಸ್ಮಯ, ಈ ಕಾಲದಲ್ಲಿ, ಈ ಸಮೃದ್ಧಿಯೇ ಯಕ್ಷಗಾನದ ಹಲವು ಸಮಸ್ಯೆಗಳ ಮೂಲ ಕೂಡ ಹೌದು. ಗುಣಮಟ್ಟದ ಇಳಿಕೆ, ಸಮರ್ಥ ಕಲಾವಿದರ ಕೊರತೆ, ವಿಶೇಷ ಆಕರ್ಷಣೆಗಳ ಕೃತಕ ಲೇಪನ, ಹೊರ ಆವರಣದ ವೈಭವೀಕರಣಗಳಿಗೆಲ್ಲ ಇದೇ ಮೂಲವೂ ಹೌದು. ‘ಸಮೃದ್ಧಿಯೇ ಸಮಸ್ಯೆ’ ಕೂಡ ಆಗಿರುವುದು ನಿಜ.

ಮೂವತ್ತಕ್ಕೂ ಮಿಕ್ಕಿ ಬಯಲಾಟದ ಮೇಳಗಳಿಗೆ ಕಲಾವಿದರ ಪೂರೈಕೆ ಆಗುವುದು – ಮೂರು ನಾಲ್ಕು ಜಿಲ್ಲೆಗಳ ವ್ಯಾಪ್ತಿಯಿಂದ. ಇಷ್ಟೊಂದು ಚಿಕ್ಕ ಪ್ರದೇಶದಲ್ಲಿ ಆ ಪ್ರಮಾಣದ ಗುಣಮಟ್ಟದ ಕಲಾವಿದರು ಸಿಗುವುದು ಅಸಾಧ್ಯ. ಅದರಿಂದ ‘ಸುದರಿಕೆ’ಗೆ, ಹೊಂದಾಣಿಕೆಗೆ, ಗುಣಮಟ್ಟದಲ್ಲಿ ರಾಜಿಗೆ ಅನಿವಾರ್ಯ ಒಪ್ಪಿಗೆ ಬಂದಿದೆ. ಇದು ಸಹಜ. ಇದರಿಂದ ಒಟ್ಟು ಯಕ್ಷಗಾನ – ತನ್ನ ಭಾರದ ಅಡಿಯಲ್ಲಿ ತಾನೇ ಕುಸಿಯುವುದೂ ಸಹಜ. ಇದರ ಪರಿಣಾಮಗಳೂ ಸ್ಪಷ್ಟ.

ಒಂದೊಂದು ಕಡೆ – ಒಂದೊಂದು ಪುಣ್ಯಕ್ಷೇತ್ರಗಳು ನಡೆಸುವ ಎರಡು-ನಾಲ್ಕು ಮೇಳಗಳಿವೆ. ಆದರೂ ಹರಕೆಗಳು ವರ್ಷಗಟ್ಟಲೆ ಬಾಕಿ ಇವೆ. ಇನ್ನೊಂದೆಡೆ ಕಲಾವಿದರ ಕೊರತೆ. ಈ ವೈವಿಧ್ಯವು ಏನನ್ನು ಸೂಚಿಸುತ್ತದೆ ಎಂಬುದು ವಿಚಾರಣೀಯ. “ಕ್ಷೇತ್ರಕ್ಕೆ ಹರಕೆಗಳಿರುವಾಗ ಮೇಳಗಳ ಸಂಖ್ಯೆ ಹೆಚ್ಚಿಸಬೇಡಿ ಅನ್ನುತ್ತೀರಾ?” ಎಂದು ಪ್ರಶ್ನಿಸುತ್ತಾರೆ ಸಂಬಂಧಪಟ್ಟವರು. ಅದೂ ನಿಜವೇ.

-4-

ಹರಕೆ ಬಯಲಾಟಗಳಿಗೆ, ಅಂತೆಯೇ, ಬೇರೆ ಬಯಲಾಟಗಳಿಗೂ-ರಾತ್ರಿ ಇಡೀ ಪ್ರದರ್ಶನವಾದರೆ ಪ್ರೇಕ್ಷಕರಿಲ್ಲ. ಇದಕ್ಕೆ ಹಲವು ಸಾಮಾಜಿಕ, ಆರ್ಥಿಕ ಕಾರಣಗಳಿವೆ.

1. ವಿಸ್ತರಿಸುತ್ತಿರುವ ನಗರೀಕರಣ
2. ಕಿರಿದಾಗುತ್ತಿರುವ ಕುಟುಂಬಗಳು. ಎಲ್ಲರೂ ಆಟಕ್ಕೆ ಹೋದರೆ ಮನೆಯ ಭದ್ರತೆಗೆ ಯಾರು ಎಂಬ ಪ್ರಶ್ನೆ.
3. ರಾತ್ರಿ-ಹಗಲು ಮನೆಯೊಳಗೆ ಸಿಕ್ಕುವ ಎಲೆಕ್ಟ್ರಾನಿಕ್ ಮನರಂಜನೆಯ ರಾಶಿ.
4. ಕಾನೂನು ಸುವ್ಯವಸ್ಥೆ, ಭದ್ರತೆಯ ಅನಿಶ್ಚಿತತೆ.
5. ಸಹಜವಾಗಿ ಅಭ್ಯಾಸವಾಗಿರುವ ಸೌಲಭ್ಯ. ನಿದ್ರೆಗೆಡುವ ಶಕ್ತಿ ಕಡಿಮೆ ಆಗಿರುವುದು.
6. ಹೆಚ್ಚಿರುವ ಖಾಸಗಿ ವಾಹನ ಸೌಲಭ್ಯ. ಬೇಗನೇ ಮನೆಗೆ ಬರಲು ಇದು ಪ್ರೇರಕ.
7. ಪ್ರತಿ ಮನೆಯಲ್ಲೂ ಹೊರಗೆ ಹೋಗಿ ದುಡಿಯುವವರ ಸಂಖ್ಯೆ ಹೆಚ್ಚಾಗಿರುವುದು. ನಾಳಿನ ಕೆಲಸಗಳ ಚಿಂತೆ. ವಿರಾಮ ಕಡಿಮೆ.
8. ಸಂಖ್ಯಾ ಬಾಹುಳ್ಯದಿಂದ – ಎಲ್ಲೆಲ್ಲೋ ಯಕ್ಷಗಾನದ ಲಭ್ಯತೆ., ನೋಡಿದರಾಯಿತು. ಅವಕಾಶ ಸಿಗುತ್ತಲೇ ಇರುತ್ತದೆ ಎಂಬ ಭಾವನೆ.
9. ಜನರಲ್ಲಿ ಅಭಿರುಚಿ ನಿರ್ಮಿಸುವ, ಜನರನ್ನು ಹಿಡಿದಿಡಬಲ್ಲ ಗುಣಮಟ್ಟವು ಪ್ರದರ್ಶನಗಳಲ್ಲಿ ಇಲ್ಲದಿರುವುದು.
10. ಹರಕೆ ಬಯಲಾಟಗಳ ಕ್ಷೇತ್ರಗಳಿಗೆ – ಖಚಿತ ಕಲಾಧೋರಣೆ ಇಲ್ಲದಿರುವುದು.
 ಇವು ಇಡಿ ರಾತ್ರಿಯ ಬಯಲಾಟಗಳಿಗೆ ಜನ ಸೇರದಿರಲು ಕಾರಣಗಳು. ಮಧ್ಯರಾತ್ರಿ, ಸುಮಾರು ಎರಡು ಗಂಟೆ ರಾತ್ರಿಯ ಬಳಿಕ-ಪ್ರಸಿದ್ಧ ಮೇಳಗಳ ಆಟಗಳಿಗೂ ಪ್ರೇಕ್ಷಕ ಸಂಖ್ಯೆ ಕಡಿಮೆ. ಹರಕೆದಾರರ ಕುಟುಂಬ, ಬಂಧು-ಮಿತ್ರರೂ ಇರುವುದಿಲ್ಲ. ಪ್ರದರ್ಶನ ‘ಹರಕೆ ಸಂದಾಯವೇ’ ಆಗಿಬಿಡುತ್ತದೆ.

-5-

ಯಕ್ಷಗಾನವೆಂಬ ಉದ್ಯೋಗ, ವೃತ್ತಿ – ಡೋಲಾಯಮಾನವಾಗಿದೆ. ಇನ್ನು ಐದು ವರ್ಷಗಳಲ್ಲಿ – ಡೇರೆ ಮೇಳಗಳು ಅಂದರೆ ಪ್ರವೇಶ ಧನ ಪಡೆದು ಪ್ರದರ್ಶನ ನೀಡುವ ಪೂರ್ಣಾವಧಿ ಮೇಳಗಳು, ಉಳಿದರೆ ಅದು ಆಶ್ಚರ್ಯ. ಎರಡು ಮೇಳಗಳು ಉಳಿದಿವೆ. ಏರುತ್ತಿರುವ ಬೆಲೆಗಳು, ಖರ್ಚುವೆಚ್ಚಗಳು, ಇಳಿದಿರುವ ಆಸಕ್ತಿಗಳಿಂದಾಗಿ ಮೇಳ ಸಂಚಾಲಕರು ಸಮಸ್ಯೆಗಳನ್ನು ಇದಿರಿಸುತ್ತಿದ್ದಾರೆ. ಆಡಳಿತದಲ್ಲಿ ಸಮಸ್ಯೆಗಳು ಹೆಚ್ಚಿವೆ. ದೊಡ್ಡ ಇಮೇಜ್ ಇರುವ ಹೊಸ ಕಲಾವಿದರು ತಯಾರಾಗುತ್ತಿಲ್ಲ. ಕೆಲವೇ ಕಲಾವಿದರನ್ನು ಬಿಟ್ಟು, ಉಳಿದಂತೆ ಮಧ್ಯಮ ಮತ್ತು ಸಾಮಾನ್ಯ ವರ್ಗದ ಕಲಾವಿದರ ಗಳಿಕೆ ಆಕರ್ಷಕವಾಗಿಲ್ಲ. ಆಧುನಿಕ ಜೀವನವು ನಿರ್ಮಿಸಿರುವ ಅಪೇಕ್ಷೆಗಳನ್ನು (ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ, ಗುಣಮಟ್ಟದ ಜೀವನ ನಿರ್ವಹಣೆ, ವಸ್ತು ವೈವಿಧ್ಯ) ಪೂರೈಸುವ ಮಟ್ಟಿನ ಸಾಮಥ್ರ್ಯ ಯಕ್ಷಗಾನ ವ್ಯವಸಾಯಕ್ಕೆ ಇಲ್ಲ.

ಈಗಾಗಲೇ ಕೋಡಂಗಿ, ನಿತ್ಯವೇಷ (ಬಾಲಗೋಪಾಲ) ಗಳಿಗೂ, ಸಹಾಯಕ ಕಾರ್ಮಿಕ ವರ್ಗದ ಸ್ಥಾನಗಳಿಗೂ ಕೊರತೆ ಕಂಡು ಬಂದಿದೆ. ಇದು ಮುಂದುವರಿದು, ಮುಖ್ಯ ವೇಷಗಳಿಗೆ ಕಲಾವಿದರ ಕೊರತೆ ಬರಲು ಹೆಚ್ಚು ವರ್ಷಗಳು ಬೇಕಿಲ್ಲ. ಇದು ಸ್ಪಷ್ಟವಾಗಿ ಕಾಣುವ ಸಾಧ್ಯತೆ.

-6-

ಇನ್ನೊಂದೆಡೆ – ವಿಸ್ತರಿಸಿರುವ ಮಧ್ಯಮವರ್ಗ, ಸುಲಭವಾಗಿರುವ ಸ್ಥಳೀಯ ಪ್ರಾಯೋಜಕತ್ವ, ಸಹಾಯಧನಗಳಿಂದ ಹವ್ಯಾಸಿ ಆಟಗಳ ಸಂಖ್ಯೆ ಹೆಚ್ಚಿದೆ. ಸಂಸ್ಥೆಗಳ ವಾರ್ಷಿಕೋತ್ಸವ, ಊರಜಾತ್ರೆ, ಉತ್ಸವ, ಸಭೆ ಸಮಾರಂಭಗಳಲ್ಲಿ ಅಯ್ಯಪ್ಪ ಸ್ವಾಮಿ ಉತ್ಸವ ಸರಣಿಗಳಿಗೆ – ಹವ್ಯಾಸಿ – ವ್ಯವಸಾಯ ಮಿಶ್ರಣದ ತಂಡಗಳಿಗೆ ಬೇಡಿಕೆ ಇದೆ. ಅನೇಕ ವ್ಯವಸಾಯಿಗಳು, ಮೇಳಗಳಿಗೆ ಇಡಿಯ ತಿರುಗಾಟಕ್ಕೆ ಹೋಗದೆ, ಆಹ್ವಾನದ ಮೇಲೆ ಭಾಗವಯಿಸುವ ‘ಫ್ರೀಲಾನ್ಸ್’ ವ್ಯವಸಾಯಿಗಳಾಗಿದ್ದು, ಅವರ ಗಳಿಕೆ ನಿರಂತರ ತಿರುಗಾಟದ ಕಲಾವಿದರಷ್ಟೆ ಅಥವಾ ಹೆಚ್ಚು ಇದೆ. ಮೇಳ ತಿರುಗಾಟದ ನಿಯಮಗಳ ಬಂಧನವೂ ಅವರಿಗಿಲ್ಲ. ಮನೆ, ಕುಟುಂಬದ ಕಡೆಗೆ ಹೆಚ್ಚು ಸಮಯ ಕೊಡಲು ಸಾಧ್ಯ. ಅದುದರಿಂದ ಈ ಬಗೆಯ ಮುಕ್ತ ವ್ಯವಸಾಯಿಗಳ ಸಂಖ್ಯೆ ಇನ್ನೂ ಹೆಚ್ಚಲಿದೆ.

ಪೂರ್ಣಾವಧಿ, ತಿರುಗಾಟಗಳಿಗೆ, ಕಲಾವಿದರ ಕೊರತೆ, ಇಡೀರಾತ್ರಿ ನೋಡುವ ಪ್ರೇಕ್ಷಕರಿಲ್ಲದಿರುವುದು – ಈ ಕಾರಣಗಳಿಂದ ಹರಕೆ ಬಯಲಾಟಗಳು – ಒಂದೆರಡು ವರ್ಷಗಳಲ್ಲೆ ಮಿತ ಅವಧಿಯ ಪ್ರದರ್ಶನದ ಆಟಗಳಾಗುವುದು ಖಚಿತ. ಸಾಯಂಕಾಲದ ಆಟ ಮತ್ತು ಅರ್ಧರಾತ್ರಿ ತನಕದ ಹೀಗೆ ಎರಡು ಬಗೆಯ ಪ್ರಸಂಗಗಳು, ಖಾಯಂ ಆಗಿ ನೆಲೆ ನಿಲ್ಲುವ ದಿನಗಳು ದೂರವಿಲ್ಲ.

ಈ ಪದ್ಧತಿಯಿಂದಾಗಿ – ಪ್ರೇಕ್ಷಕರಿಗೆ ಅನುಕೂಲ. ಕಲಾವಿದರಿಗೆ ವಿರಾಮ ದೊರೆಯುತ್ತವೆ. ಅಧ್ಯಯನಕ್ಕೂ ಅನುಕೂಲ ಜತೆಗೆ ಒಟ್ಟು ಮೇಳದ ಆಡಳಿತ ಸುಲಭವಾಗುತ್ತದೆ.

ಈ ವ್ಯವಸ್ಥೆಯಿಂದ ಆಗುವ ಇನ್ನೊಂದು ಪ್ರಯೋಜನವೆಂದರೆ – ಗುಣಮಟ್ಟದ ಸಾಧನೆ. ಮೇಳದ ಗಾತ್ರ ಅಂದರೆ ಸದಸ್ಯ ಸಂಖ್ಯೆ ಕಡಿಮೆ ಆಗುತ್ತದೆ. ಅರ್ಥಾತ್ ಕಡಿಮೆ ಜನ ಸಾಕಾಗುತ್ತಾರೆ. ಹಾಗಾಗಿ ಗುಣಮಟ್ಟದ, ಸಂತುಲಿತ, ತಂಡಗಳನ್ನು ಸಂಘಟಿಸಲು ಅನುಕೂಲ.

-7-

ಇದರೊಂದಿಗೆ, ಆಗಬಹುದಾದ ಮತ್ತು ಆಗಬೇಕಾಗಿರುವ ಒಂದು ಹೊಸ ವಿನ್ಯಾಸವೆಂದರೆ – ತೆಂಕುತಿಟ್ಟಿನ ಹರಕೆ ಬಯಲಾಟಗಳ ಮೇಳಗಳಿಂದ ತುಳುಭಾಷೆಯಲ್ಲಿ ಸಾಂಪ್ರದಾಯಿಕ ರೂಪದ ಯಕ್ಷಗಾನ ಪ್ರದರ್ಶನಗಳು. ತುಳುನಾಡಿನ ಪ್ರಮುಖ ಭಾಷೆ ತುಳು. ಅದು ಜನ ಭಾಷೆ. ಜನಭಾಷೆಯನ್ನು ಅಲಕ್ಷಿಸಿ, ಕಲೆ ಉಳಿದು ಬರಲಾರದು. ಈಗಾಗಲೇ ಹರಕೆ ಮೇಳಗಳು ತುಳು ಭಾಷೆಯಲ್ಲಿ ಹರಕೆ ಆಟಗಳನ್ನು ಆಡುತ್ತಿವೆ. (ಉದಾ – ಶ್ರೀ ಸುಂಕದ ಕಟ್ಟೆ ಕ್ಷೇತ್ರದ ಮೇಳ), ಈ ವಿಸ್ತರಣವು ಯಕ್ಷಗಾನವನ್ನು ಜನಪರಗೊಳಿಸಿದ, ತುಳು ಯಕ್ಷಗಾನ ರಂಗದ, ಅರ್ಥಪೂರ್ಣ ಅನ್ವಯವೆನಿಸುವುದು.

-8-

ಆಧುನಿಕತೆಯು ಸಂಪ್ರದಾಯಗಳನ್ನು, ಪಾರಂಪರಿಕ ಕಲೆಗಳನ್ನು ವಿಘಟನೆ ಮಾಡಿಬಿಡುತ್ತದೆ. ಈ ಮಧ್ಯೆ – ಯಕ್ಷಗಾನ ಕಲೆಯಂತಹ ಈ ಪಾರಂಪರಿಕ ಸಂಪದಗಳನ್ನು ಪ್ರೀತಿಸುವ ನಾವೆಲ್ಲ – ಅದರ ರಕ್ಷಣೆಗೆ ಏನು ಮಾಡಬೇಕು ಎಂದು ಸಾಮೂಹಿಕವಾಗಿ ಯೋಚಿಸಬೇಕು. ಅನವಶ್ಯ, ಅಕಲಾತ್ಮಕವಾದ, ಕಲಾ ಮಾಧ್ಯಮ ಸ್ವಭಾವ ವಿರುದ್ಧವಾದುದನ್ನು ಯಾರೇ ತಂದಿರಲಿ, ನಿರ್ದಾಕ್ಷಿಣ್ಯವಾಗಿ ಅಲ್ಲಗಳೆದು, ಗಂಭೀರವಾದುದನ್ನು, ಸೂಕ್ತವಾದುದನ್ನು ಸ್ವೀಕರಿಸುವ ಧೋರಣೆಯಿಂದ – ಕಲಾವಿದರು, ಮೇಳ ಸಂಘಟಕರು, ಪೋಷಕರು, ಕಲಾಭಿಮಾನಿಗಳು ಯೋಚಿಸಬೇಕು. ಕ್ಷಣಿಕ ರಂಜನೆಯ ಟ್ರೆಂಡ್‍ಗಳಿಂದ ಕಲೆಯನ್ನು ವಿರೂಪಗೊಳಿಸುವುದನ್ನು ಅಲ್ಲಗಳೆಯಬೇಕು. ಕಲಾರೂಪದ ಮಟ್ಟಿಗೆ ಸ್ಥೂಲ ಒಪ್ಪಂದವು ಮೌಲಿಕ.

ಹೊಸತನದ ಸಂಭ್ರಮದಲ್ಲಿ, ಜನಪ್ರಿಯತೆಯ ಹೊಯ್ಲಿನಲ್ಲಿ, ಗೌಜಿ ಗದ್ದಲದಲ್ಲಿ ಯಾವ್ಯಾವುದೋ ಕಲಾಮಾಧ್ಯಮಗಳ ಅವಿಚಾರಿತ ಅನುಕರಣೆಯಲ್ಲಿ, ನಾವು ಕಳೆದುಕೊಂಡಿರುವುದನ್ನು ಪುನಃ ಪಡೆಯಲು ಇದೀಗ ಸಕಾಲ ಮತ್ತು ಪ್ರಾಯಶಃ ಕೊನೆಯ ಅವಕಾಶ. ಕಳೆದ ಐವತ್ತು ವರ್ಷಗಳಲ್ಲಿ, ಒಂದೇ ಸವನೆ ಕಲೆಯೊಳಗೆ ಬಂದಿರುವ ಕಲೇತರ ಮತ್ತು ಆ-ಯಕ್ಷಗಾನೀಯ ಅಂಶಗಳನ್ನು ಯಕ್ಷರಂಗ ತಾಳಿಕೊಂಡಿದೆ. ಈಗ ಅದು ಮಾತ್ರ ಸಂಕರಗಳ ಗೂಡಾಗಿದೆ. ಆದರೂ ಹೆಚ್ಚು ಕಡಿಮೆ ಯಕ್ಷಗಾನದ ವೇಷ, ಗಾನ, ನಾಟ್ಯ, ರಂಗವಿಧಾನ, ಮಾತುಗಾರಿಕೆಗಳನ್ನು ಸಮಗ್ರವಾಗಿ ಶೈಲಿ ಸಮ್ಮತ ರೂಪದಲ್ಲಿ ಉದ್ಧಾಪನಗೊಳಿಸಲು ಈಗಲೂ ಸಾಧ್ಯವಿದೆ. ಅಷ್ಟು ಮೂಲದ್ರವ್ಯ ರಂಗದಲ್ಲಿ ಈಗಲೂ ಇದೆ. ಇದು ಯಕ್ಷಗಾನದ ಕುರಿತು ಗಂಭೀರವಾದ ಶೈಕ್ಷಣಿಕ ಕಾಳಜಿಗಳಿರುವವರ ಮುಂದೆ ಇರುವ ಒಂದು ದೊಡ್ಡ ಕೆಲಸ. ವೇಷ-ಭೂಷಣ (ಮುಖ್ಯವಾಗಿ ತೆಂಕುತಿಟ್ಟು) ಗಳ ಪುನಾರಚನೆ – ಶೈಲಿಯ ಪುನ ನಿರ್ಮಾಣದ ಕೆಲಸವನ್ನು ತಜ್ಞ ಡಿಸೈನರುಗಳ ಮೂಲಕ ಮಾಡಿಕೊಳ್ಳದಿದ್ದರೆ ಐದಾರು ಶತಮಾನಗಳ ಕಾಲ ಬೆಳೆದು ನಿಂತ ಒಂದು ಶ್ರೀಮಂತ ವೇಷ ವಿಧಾನ, ವರ್ಣಿಕೆ ವಿನ್ಯಾಸಗಳು ನಾಶವಾಗುವ ಸಾಧ್ಯತೆಯಿದೆ.

ಕಾಲಮಿತಿಯ ಪ್ರದರ್ಶನಗಳು ಇನ್ನು ಮುಂದೆ ಸರ್ವತ್ರ ಸಾಮಾನ್ಯವಾಗಲಿದೆ., ಆದುದರಿಂದ ಕಲೆಯ ಅಂಗೋಪಾಂಗಗಳ ಕುರಿತು ಚಿಂತನೆಗೆ ಹೆಚ್ಚು ಕಾಲಾವಕಾಶ, ವ್ಯವಧಾನ ಸಿಗಲಿವೆ.

-9-

ಸದ್ಯ ಸಕ್ರಿಯವಾಗಿರುವ ಮೂರು ಯಕ್ಷಗಾನ ಕೇಂದ್ರದಲ್ಲೂ ಎರಡು ಕೇಂದ್ರಗಳಿಗೆ ವಿದ್ಯಾರ್ಥಿಗಳ ಕೊರತೆಯಿದೆ. ಉಡುಪಿಯ ಎಂ.ಜಿ.ಎಂ ಕಾಲೇಜಿನ ಕೇಂದ್ರದಲ್ಲೂ ಸಂಖ್ಯೆ ಇಳಿದಿದೆ. ಯಕ್ಷಗಾನವನ್ನು ಕಲಿತು ಏನು ಮಾಡುವುದು, ಮೇಳದ ಬದುಕು, ತಿರುಗಾಟದ ಸಂಕಷ್ಟ ಯಾಕೆ? ಅಷ್ಟು ಮಾಡಿಯೂ ಸಿಗುವ ಗಳಿಕೆ ಎಷ್ಟು? ಹೆಚ್ಚು ಸುಖಕರವಾದ ಬೇರೆ ಉದ್ಯೋಗ ಮಾಡಬಾರದೇಕೆ? ಎಂಬಂತಹ ಪ್ರಶ್ನೆಗಳು ಸಹಜ. ಅವನ್ನು ಅಲ್ಲಗಳೆಯಲು ಬರುವುದಿಲ್ಲ.

ಯಕ್ಷಗಾನವನ್ನು ನಗರ –ಗ್ರಾಮ ಪ್ರದೇಶದ ಮಕ್ಕಳಲ್ಲಿ, ಯುವಕರಲ್ಲಿ ಒಂದು ಆಸಕ್ತಿಯಾಗಿ ಬೆಳೆಸಲು – ಮಾಡುವ ಯತ್ನಗಳೇ, ಇನ್ನು ಮುಂದಣ ಯಕ್ಷಗಾನ ಕೇಂದ್ರಗಳು. ಉಡುಪಿಯ ಯಕ್ಷ ಶಿಕ್ಷಣ ಟ್ರಸ್ಟ್, ಯಕ್ಷಗಾನ ಕಲಾರಂಗಗಳು ಕೈಗೊಂಡಿರುವ ಶಾಲೆಗಳಲ್ಲಿ ಯಕ್ಷಗಾನ ಕಲಿಕೆಯ ದೊಡ್ಡ ಯೋಜನೆ, ಮುಂದಿನ ಕಾಲಕ್ಕೆ ಸೂಕ್ತವಾದ ಮಾದರಿಯಾಗಿದೆ.

ಯಕ್ಷಗಾನ ಶಿಕ್ಷಣವನ್ನು ಅರೆಕಾಲಿಕ, ಅಂಶಕಾಲಿಕ, ರಜಾ ಅವಧಿ, ಶಿಕ್ಷಣಗಳಾಗಿ ಸಂಯುಕ್ತ (Package) ಕಾರ್ಯಕ್ರಮ, ವೇಗ ಶಿಕ್ಷಣ ಯೋಜನೆ (Crash Programme) ಗಳ ರೂಪದಲ್ಲಿ ವಿವಿಧ ಗಾತ್ರ ರೂಪದಲ್ಲಿ, ಔಪಚಾರಿಕ ಅನೌಪಚಾರಿಕ ವಿಧಾನಗಳಲ್ಲಿ ರೂಪಿಸಿಕೊಂಡು ಅದನ್ನು ಜನರೆಡೆಗೆ ಕೊಂಡೊಯ್ಯುವಲ್ಲಿ ತಜ್ಞರಿಗೆ ಕಲಾಶಿಕ್ಷಕರಿಗೆ ಪಂಥಾಹ್ವಾನಗಳಿವೆ ಅವಕಾಶಗಳಿವೆ. ಮೂಡಬಿದ್ರೆಯ ಆಳ್ವಾಸ್ ಧೀಂಕಿಟ ಯಕ್ಷಗಾನ ವಿಭಾಗ ಮತ್ತು ಯಕ್ಷಗಾನ ಡಿಪ್ಲೋಮ ಶಿಕ್ಷಣವು ಈ ನಿಟ್ಟಿನಲ್ಲಿ ಮಹತ್ತ್ವದ ಆರಂಭವಾಗಿದೆ.

-10-

ಸಾಂಪ್ರದಾಯಿಕ ಕಲೆಗಳ ಇತಿಹಾಸವನ್ನು ಗಮನಿಸಿದಾಗ ಕಾಣುವ ಒಂದು ಅಂಶವೆಂದರೆ – ಅವು ಹುಟ್ಟುವುದು ಆಚರಣಾತ್ಮಕವಾಗಿ, ಧಾರ್ಮಿಕ ಕ್ರಿಯೆಯಾಗಿ. ಕೆಲವು ಕಲೆಗಳು – ಭೂತಾರಾಧನೆಯಂತೆ ಕೇವಲ ಆಚರಣೆಗಳಾಗಿಯೆ ಉಳಿದರೆ ಉಳಿದವು ನಿಧಾನವಾಗಿ ಧಾರ್ಮಿಕ – ಮತೀಯ ಕಲೆಗಳಾಗಿ ಬೆಳೆದು ರಂಜನಾಂಶಗಳನ್ನು ಕೂಡಿಸಿಕೊಂಡವು. ಆ ಬಳಿಕ ಅವು ಧಾರ್ಮಿಕ – ಮತೀಯ ರೂಪದಲ್ಲೆ, ರಂಜನಾತ್ಮಕ ಲೌಕಿಕ ಕಲೆಗಳಾದವು. ಉದಾ – ಬಯಲಾಟಗಳು ಮತ್ತು ಶಾಸ್ತ್ರೀಯ ಸಂಗೀತ. ದೇವಾಲಯ ಸೇವೆಯಾಗಿ ಹುಟ್ಟಿದ ಶಾಸ್ತ್ರೀಯ ಸಂಗೀತ ಇಂದು ಹಾಗಾಗಿ ಉಳಿದಿಲ್ಲ. ಅದು ಸಭಾಗಾನವಾಗಿದೆ. ಹೀಗೆಯೇ ಅನೇಕ ಕಲೆಗಳು ಮತಧಾರ್ಮಿಕ ರೂಪದಿಂದ ಲೌಕಿಕತೆಯತ್ತ ಸಾಗಿವೆ, ಸಾಗುತ್ತವೆ. ಹಿಂದುಸ್ತಾನೀ ಸಂಗೀತವು ವಸ್ತುವಿನಲ್ಲೂ ಈ ಅಂಶವನ್ನು ಒಳಗೊಳ್ಳುವಲ್ಲಿ ಹೆಚ್ಚು ಮುಂದೆ ಹೋಗಿದೆ.

ನಮ್ಮ ಕಲೆಗಳು ಧಾರ್ಮಿಕ, ಅಧ್ಯಾತ್ಮ, ಪ್ರಧಾನವೆಂದು ಹೇಳುವಾಗ, ಸಂಗೀತವೆಂದರೆ ದೈವಾರಾಧನೆ-ಭಕ್ತಿ-ನಾದೋಪಾಸನೆ ಎನ್ನುವಾಗ – ಆ ಮಾತು ಒಂದು ಮುಖದಲ್ಲಿ ಮಾತ್ರ ಸತ್ಯ ಎಂಬುದನ್ನು ಮರೆಯಬಾರದು. ಇದೀಗ ಓರ್ವ ಗಾಯಕನು ತ್ಯಾಗರಾಜರ, ಪುರಂದರದಾಸರ ರಚನೆಯನ್ನು ಸಭೆಯಲ್ಲಿ ಹಾಡುವುದು, ಅವರು ಮಾಡಿದ ನಾದೋಪಾಸನಾ ಭಾವದಿಂದಲ್ಲ. ದೈವಿಕ ಅನುಸಂಧಾನಕ್ಕೂ ಅಲ್ಲ. ಅವರು ಮಾಡಿದ ಆ ಅನುಸಂಧಾನದ ರಾಗ-ಭಾವ ಅಭಿವ್ಯಕ್ತಿಗಳು ಇವರಿಗೆ ಕಲಾ ಪರಂಪರೆಯಾಗಿ ಬಂದಿವೆ ಅಷ್ಟೆ. ಯಕ್ಷಗಾನ ಕಲೆಯೂ ಹಾಗೆಯೆ.

ಈ ವಿಷಯವನ್ನು ಇಲ್ಲಿ ಪ್ರಸ್ತಾಪಿಸಲು ಕಾರಣ – ಯಕ್ಷಗಾನವೆಂಭ ರಂಗ ಪ್ರಕಾರಕ್ಕೆ ಕಥೆ, ಕಥಾವಸ್ತು ಯಾವುದಿರಬೇಕೆಂಬ ಒಂದು ಪ್ರಶ್ನೆ. ಪಾರಂಪರಿಕ ಕಲೆಗಳಿಗೆ ಪುರಾಣಗಳ ವಸ್ತು ಹೆಚ್ಚು ಸೂಕ್ತ ಎಂಬುದು ಅಂಗೀಕೃತ ಅಭಿಪ್ರಾಯ. ಆದರೂ ಪುರಾಣ ಪೌರಾಣಿಕವೆಂದರೇನೆಂಬ ವಿಚಾರವೂ ಪರಿಶೀಲನಾರ್ಹ.

ಯಕ್ಷಗಾನ ಪರಂಪರೆಗೆ ಪೌರಾಣೀಕ ವಸ್ತು ಮಾತ್ರ ಯೋಗ್ಯ, ಹಾಗಿಲ್ಲವಾದರೆ ಅದು ಪರಂಪರಾತ್ಮಕ ಕಲೆ ಆಗುವುದಿಲ್ಲ ಎಂದು ಪರಂಪರಾವಾದಿಗಳಲ್ಲಿ ಕೆಲವರ ಅಭಿಪ್ರಾಯ. ಅವರ ಉದ್ದೇಶ ಸರಿ. ಆದರೆ ಅಭಿಪ್ರಾಯ ಪರಿಷ್ಕಾರಾರ್ಹ.

ಆಯ್ದುಕೊಂಡ ಕಥಾವಸ್ತುವು ಯಕ್ಷಗಾನದ ಗಾನ, ನೃತ್ಯ, ವೇಷ ರಂಗ ವಿಧಾನಗಳಿಗೆ ಅನುಕೂಲವಾಗಿರಬೇಕು. ನಾಟಕೀಯ ಸತ್ವವಂತೂ ಇರಲೇಬೇಕು. ಹಾಗಾಗಿ ‘ಪೌರಾಣಿಕತೆ’ ಎಂಬುದಕ್ಕಿಂತ ‘ಯಕ್ಷಗಾನಾರ್ಹತೆ’ ಅನ್ನುವುದು ಹೆಚ್ಚು ಸೂಕ್ತ. ‘ಯಕ್ಷಗಾನವೆಂಬ ಕಲೆಯ ಮೂಲ ಘಟಕಗಳಾದ ನೃತ್ಯ ಗೀತ, ಗಾನ, ವಾದ್ಯ, ವೇಷ ಮೊದಲಾದವನ್ನು ಸರಿಯಾಗಿ ದುಡಿಸಿಕೊಳ್ಳುವಂತೆ, ಯಾವುದೇ ಕತೆಯೂ ಯಕ್ಷಗಾನ ಪ್ರಸಂಗವಾಗಿ ರಂಗಕೃತಿಯಾಗಿ ಬರಬಹುದು, ಬರಬೇಕು. ಇಲ್ಲವಾದರೆ ಈ ಕಲೆ ಸ್ಥಗಿತ ಅಥವಾ ಪ್ರತಿಗಾಮಿಯಾಗುತ್ತದೆ.’ (ಡಾ. ಪುರುಷೋತ್ತಮ ಬಿಳಿ ಮಲೆಯವರ ಒಂದು ಭಾಷಣದಿಂದ) ಇದು ‘ಮೂಲ ಘಟಕವಾದ,’ ಇದರಂತೆ – ಪಂಚತಂತ್ರ, ರಾಮಾಯಣ, ಯಕ್ಷಗಾನೀಕೃತವಾದ ಶೇಕ್ಸ್ಪಿಯರನ ನಾಟಕದ ಕತೆ, ಸಶಕ್ತ ಕಾಲ್ಪನಿಕ ಕತೆ – ಯಾವುದೂ ಯಕ್ಷಗಾನದಲ್ಲಿ ಸ್ವೀಕಾರ್ಯವೇ. ಈ ಮಾಧ್ಯಮಕ್ಕೆ ಅದು ಅನ್ಯವೆನಿಸಬಾರದು ಅಷ್ಟೆ.

ಈ ವಾದವು ಈಗಾಗಲೇ ಅಂಗೀಕಾರವಾಗಿದ್ದು, ಈ ದಾರಿಯಲ್ಲೆ ಆಧುನಿಕವಾದ ಅನೇಕ ಪ್ರಸಂಗಗಳು ಬಂದಿವೆ. (ಅವುಗಳ ಗುಣಮಟ್ಟದ ವಿಮರ್ಶೆ, ಬೇರೆ ವಿಚಾರ) ಹೀಗೆ ಬಂದಿರುವುದೆಲ್ಲ ಕೇವಲ ರಂಜನೆಗಾಗಿ, ಕೀಳು ಅಭಿರುಚಿಯಿಂದ ಎಂದು ಹೇಸುವುದಕ್ಕಾಗುವುದಿಲ್ಲ. ಹೊಸ ಆಶಯದ ಅಪೇಕ್ಷೆಯಿಂದಲೂ ಅವು ಬಂದಿವೆ.

ಕಲೆ ಹೆಚ್ಚು ಹೆಚ್ಚು ಜನರಿಗೆ ತಲಪುವಾಗ ತಾವಾಗಿ ಸಾರ್ವಜನಿಕ (ಡೆಮೊಕ್ರೆಟೈಸ್) ಆಗುವಾಗ, ಈ ಪರಿವರ್ತನೆಯು ಕಲೆಯಲ್ಲಿರುವ ಸಹಜವಾದ ನಡೆ. ಆಶಯ ಅಪ್ರಸ್ತುತವಾಗಬಹುದು. ಆಧುನಿಕ ಭಾವಕ್ಕೆ ವಿರುದ್ಧವಾಗಬಹುದು. ಆಗ ಹಳೆಕತೆಗಳಿಗೆ ಹೊಸಭಾವ ನೀಡುವಿಕೆ (ಆಕೃತಿ ಅದೇ, ಆಶಯ ಬೇರೆ) ಅಥವಾ ಹೊಸ ಸಶಕ್ತ ಕಥೆಗಳ ಆವಿಷ್ಕಾರವು ಆಗಬೇಕು. ಈ ನಿಟ್ಟಿನಲ್ಲಿ ಗಮನಾರ್ಹ ವಿಷಯವೆಂದರೆ – ನಳ ದಮಯಂತಿ, ಚಂದ್ರಹಾಸ, ಗುಣಸುಂದರಿ, ಕತೆಗಳು ಸಾರ್ವಜನಿಕ, ಸರ್ವಜನೀನ, ಅವು ಮತಧಾರ್ಮಿಕವಲ್ಲ. ಈಗಿನ ಅನೇಕ ಪ್ರಸಂಗಗಳೂ ಹಾಗಿವೆ. ಯೋಗ್ಯತೆಯಲ್ಲಿ ಅಲ್ಲದಿರಬಹುದು, ಸ್ವಭಾವದಲ್ಲಿ ಹೌದು.

ಈ ಲೌಕಿಕ ಆಶಯ, ಆಧುನಿಕ ದೃಷ್ಟಿಗೆ ಸಮ್ಮತವಾದ ಕಥಾನಕಗಳ ಅಭಿರುಚಿ ಇನ್ನಷ್ಟು ವಿಸ್ತರಿಸಲಿದೆ. ಅವುಗಳನ್ನು ರಂಗಕೃತಿಗಳಾಗಿಸುವಾಗ ಯಕ್ಷಗಾನವಾಗಿ ಅವು ರೂಪಿತವಾಗುವುದೂ ಮುಖ್ಯ ಎಂಬುದನ್ನು ಈ ಕಲೆಯ ಆಸಕ್ತರು ಗಮನಿಸುವುದು ಅವಶ್ಯ.

-11-

ಯಕ್ಷಗಾನ ಕಲೆಯನ್ನು ಬಹುವಾಗಿ ಹೊಗಳುವ ‘ಇದು ನಮ್ಮ ಭಾರತೀಯತೆಯ ಸಾರ’ – ಎಂದು ಹೆಮ್ಮೆಪಡುವ ಯಕ್ಷಗಾನ ಸಮೂಹವು, ಯಕ್ಷಗಾನ ಕಲಾವಿದರ ಸಂಬಳ ಸೌಲಭ್ಯ, ಆರೋಗ್ಯ, ಹಿತರಕ್ಷಣೆಗಳ ವಿಷಯವನ್ನು ಅಷ್ಟಾಗಿ ಗಣಿಸಿಲ್ಲ. (ಕ್ಷೇತ್ರಗಳೂ, ಮೇಳಗಳ ಯಜಮಾನರೂ ವೈಯಕ್ತಿಕವಾಗಿ ನೆರವಾದವರಿದ್ದಾರೆ. ಅದು ಬೇರೆ). “ಕಲಾವಿದರು, ಗುತ್ತಿಗೆ ಆಧಾರದ ಉದ್ಯೋಗಿಗಳಾದುದರಿಂದಲೂ ಯಜಮಾನಿಕೆ ಮೇಳ ತೆಗೆದವನ (ವಹಿಸಿಕೊಂಡವನ) ಜವಾಬ್ದಾರಿಯಾದುದರಿಂದಲೂ ನಮಗೆ ಅದರಲ್ಲಿ ಹೊಣೆ ಇಲ್ಲ” ಎಂದು ಕ್ಷೇತ್ರಗಳ ವಾದ. ಇದು ಕಾನೂನೀ ವಾದವಾಗಿ ಸರಿ. ಆದರೆ ಯಕ್ಷಗಾನದ ಬಗೆಗಿನ ಕರ್ತವ್ಯದ ದೃಷ್ಟಿಯಿಂದ ಸಮರ್ಪಕವಲ್ಲ.

ಈಗಾಗಲೇ – ಒಪ್ಪಿಗೆಯಿಂದಲೋ, ಪರಿಸ್ಥಿತಿಯ ಒತ್ತಡದಿಂದಲೋ – ಕ್ಷೇತ್ರಗಳು, ಮೇಳಗಳು ಈ ಕುರಿತು ಕ್ರಮಗಳನ್ನು ಕೈಗೊಳ್ಳಲಾರಂಭಿಸಿವೆ. ಇದು ಒಳ್ಳೆಯ ಸೂಚನೆ. ಉಡುಪಿಯ ಯಕ್ಷಗಾನ ಕಲಾರಂಗದ ಯಕ್ಷನಿಧಿ ಪ್ರಕಲ್ಪವು ಈ ದೆಸೆಯಲ್ಲಿ ಸ್ವತಂತ್ರ ವ್ಯವಸ್ಥೆಯಾಗಿ, ಆದರ್ಶ ಮಾರ್ಗದರ್ಶಿ ಉಪಕ್ರಮವಾಗಿದೆ. ಯಕ್ಷಗಾನದ ಕಲಾಂಶಗಳ ಉಳಿವಿನಷ್ಟೆ, ಈ ಬಗೆಯ ಕ್ರಮಗಳೂ ಮುಖ್ಯ.

-12-

ಹರಕೆ ಬಯಲಾಟವು ಒಂದು ಆರಾಧನಾ ಸೇವೆ. ಪೂಜೆ. ಮೇಳವನ್ನು ಹೊಂದಿರುವ ದೇವಾಲಯ ಕ್ಷೇತ್ರಗಳ ಒಂದು ವಿಭಾಗ. ಆದುದರಿಂದ-ಕ್ಷೇತ್ರಗಳಿಗೆ ತನ್ನ ಮೇಳದ ಬಗೆಗೆ ಹೆಮ್ಮೆ ಇರುವಂತೆ, ಕಾಳಜಿಯೂ ಇರಬೇಕು. ಪ್ರದರ್ಶನಗಳ ಬಗೆಗೂ ಅಭಿಮತ ಇರುವುದಗತ್ಯ. ‘ಆಟ ಹೇಗಾಗಬೇಕೆಂಬುದು ಹರಕೆದಾರರ ಅಪೇಕ್ಷೆ’ ಎಂದು ಕ್ಷೇತ್ರಗಳು ಹೇಳುತ್ತಿವೆ. ಜೊತೆಗೆ – ‘ನಮ್ಮದು ಹರಕೆ ಆಟ. ಆಟ ಆದರಾಯಿತು. ವಿಮರ್ಶೆ ಬೇಕಿಲ್ಲ’ ಅನ್ನುವವರೂ ಇದ್ದಾರೆ. ಇದು ಜವಾಬ್ದಾರಿಯುಳ್ಳ ನಿಲುಮೆಯಾಗುವುದಿಲ್ಲ.

ಕ್ಷೇತ್ರವು ತನ್ನ ಉತ್ಸವ, ಬಲಿ, ಪೂಜೆ, ಪಂಚಕಜ್ಜಾಯ, ಆರತಿಗಳ ಬಗೆಗೆ ಹೇಗೆ ಧೋರಣೆ ಹೊಂದಿದೆಯೋ ಹಾಗೆಯೇ ಪೂಜೆಯ ವಿಸ್ತರಣವೆ ಆಗಿರುವ ಯಕ್ಷಗಾನ ಆಟಗಳ ಕುರಿತು ಖಚಿತ ಕಲಾಧೋರಣೆ (Art Policy) ಹೊಂದುವುದು ಅಪೇಕ್ಷಿತ. ಇದರಲ್ಲಿ ಕಲಾ ಪದ್ಧತಿ, ಗುಣಮಟ್ಟ, ಕಲಾವಿದರ ಕ್ಷೇಮಾಭ್ಯುದಯಗಳೂ ಒಳಗೊಂಡಿರುವುದು ನ್ಯಾಯ.

-13-

ಡಾ| ಶಿವರಾಮ ಕಾರಂತರ ಪ್ರಯೋಗಗಳಿಂದ ತೊಡಗಿ ಈಗೀಗ ಬಂದಿರುವ ಏಕವ್ಯಕ್ತಿ ಪ್ರಯೋಗದವರೆಗೆ ಪ್ರಯೋಗಶೀಲತೆ ಬೇರೆ ಬೇರೆ ಮುಖಗಳಲ್ಲಿ ಬೆಳೆದಿದೆ. ಅದರಲ್ಲಿ ಹಲವು ಮಟ್ಟಗಳೂ ಇವೆ. ಅಭಿರುಚಿಯ ಕವಲುಗಳು ಹೊರಡುತ್ತಿರುವ ಈ ಕಾಲದಲ್ಲಿ ಅನ್ಯ ಕಲೆಗಳ ಮಧ್ಯೆ ಯಕ್ಷಗಾನವು ಪ್ರವೃತ್ತವಾಗಬೇಕಾಗಿರುವಾಗ ಈ ಬಗೆಯ ಪ್ರಯೋಗಗಳಿಗೆ ಹೆಚ್ಚು ಹೆಚ್ಚು ಅವಕಾಶ ಮತ್ತು ಮಾನ್ಯತೆಗಳು – ರಂಜನಾರ್ಥವಾಗಿಯಾದರೂ, ದೊರೆಯಲಿದೆ.

ಆದರೆ – ಯಕ್ಷಗಾನವನ್ನು ಗಾನವಾಗಿ ಮಾತ್ರ ಪ್ರದರ್ಶಿಸುವ ಗಾಯನ (ಯಕ್ಷಗಾನ ಸಂಗೀತ ಕಛೇರಿ) ಗಳು ಎರಡೇ ಪಾತ್ರಗಳನ್ನು ಮಾಡಿ ಸನ್ನಿವೇಶಗಳನ್ನು ಪ್ರದರ್ಶಿಸುವ ಸಂವಾದ ಸರಣಿಗಳು – ಸಹಜವಾಗಿ ಪ್ರಧಾನ ರಂಗದ ಮೇಲೆ ಪ್ರಭಾವ ಬೀರಿ, ವಿಕೃತಿಗಳಿಗೆ ಹೇತುವಾಗಿರುವುದು ಕಂಡು ಬರುತ್ತಿದೆ.

-14-

ಸಂಕ್ಷಿಪ್ತ ಅವಧಿಯ ಸಾರಭೂತವಾದ ಆರ್ಕರೂಪೀ ಪ್ರದರ್ಶನ, ಕಿರು ಪ್ರದರ್ಶನಗಳು ಹೆಚ್ಚು ಹೆಚ್ಚು ಬೇಡಿಕೆ ಗಳಿಸಲಿವೆ. ಯಕ್ಷಗಾನವು ಕಾರ್ಯಕ್ರಮ ವೈವಿಧ್ಯಗಳ ಮಧ್ಯೆ, ದೇಶ ವಿದೇಶಗಳ ವಿವಿಧ ವೇದಿಕೆಗಳ್ಲಿ ಹೆಚ್ಚು ಅವಕಾಶಗಳನ್ನು ಪಡೆಯಲಿರುವುದರಿಂದ, ಒತ್ತಿ ತಯಾರಿಸಿದ (Compact) ಸಂಕ್ಷಿಪ್ತ, ಚೊಕ್ಕ, ಸುಂದರ ಪ್ಯಾಕೇಜ್ ಪ್ರದರ್ಶನಗಳನ್ನು ತಯಾರಿಸುವ ಅಗತ್ಯ ಹೆಚ್ಚು ಇದೆ. ಇಲ್ಲಿ ಕಲಾವಿದರಿಗೆ ಸವಾಲುಗಳಿವೆ. ವಿದ್ಯುನ್ಮಾನ (ವಿಡಿಯೋ) ಯಕ್ಷಗಾನ, ಸಾಕಷ್ಟು ಬಂದಿದೆಯಾದರೂ, ಆ ಮಾಧ್ಯಮವನ್ನು ಯಕ್ಷಗಾನಕ್ಕೆ ಹೊಂದಿಸುವ ಸಫಲ ಕಲಾತ್ಮಕ ತಯಾರಿಕೆಗಳು ಆಗಿಲ್ಲ. ಎಲೆಕ್ಟ್ರಾನಿಕ್ ಯಕ್ಷಗಾನ ತೀರ ಆರಂಭಿಕ ಹಂತದಲ್ಲಿದೆ,. ಇಲ್ಲಿ ಉತ್ಸಾಹ ಹೆಚ್ಚು, ಮಾರುಕಟ್ಟೆ ದ್ರವ್ಯ ಹೆಚ್ಚು, ಕಲಾತ್ಮಕತೆ ಕಡಿಮೆ ಇವೆ. ಸಿನಿಮಾ ಮಾಧ್ಯಮದ ಬಗೆಗೆ ನೈಜ ಪ್ರಾವೀಣ್ಯವುಳ್ಳ ನಿರ್ದೇಶಕ-ಛಾಯಾಗ್ರಾಹಕರು, ಇನ್ನೂ ಈ ಕ್ಷೇತ್ರಕ್ಕೆ ಬರಬೇಕು, ಬರಲಿದ್ದಾರೆ ಎನಿಸುತ್ತದೆ.

ಸಭಾ ಪ್ರದರ್ಶನಗಳೂ ಹೆಚ್ಚು ಹೆಚ್ಚು ನಿರ್ದೋಶಿತವಾಗುತ್ತಿದ್ದು, ಸ್ವತಂತ್ರ ನಿರ್ದೇಶಕನೊಬ್ಬ ಭಾಗವತನಿಗಿಂತಲೂ ಬೇರೆಯಾಗಿ – ನಿದೇಶಕನಾಗಿ ಕಾರ್ಯಗೈಯುವ ವ್ಯವಸ್ಥೆ ಹೆಚ್ಚು ಪ್ರಚಲಿತವಾಗಬಹುದು. ಇದರಿಂದ ಯಕ್ಷಗಾನ ಕಲಾಪ್ರಕಾಶನಕ್ಕೆ, ಕಲಾಸ್ವರೂಪದ ರಕ್ಷಣೆಗೆ ಒತ್ತು ಸಿಗಬಹುದು.

-15-

ಮಹಿಳಾ ಯಕ್ಷಗಾನ, ಮಕ್ಕಳ ಯಕ್ಷಗಾನಗಳಿಗೆ ಇನ್ನಷ್ಟು ಉತ್ಕರ್ಷ ಒದಗಬಹುದಾದ ಸನ್ನಿವೇಶ ಇದೆ. ಸದ್ಯಕ್ಕೆ ಸಿದ್ಧವಾದ, ಪ್ರಾತ್ಯಕ್ಷಿಕೆಯ ರೂಪದಲ್ಲಿರುವ ಮಹಿಳಾ ಯಕ್ಷಗಾನ ಆಟ, ಕೂಟಗಳು ಇನ್ನು ಕಲಾಪ್ರದರ್ಶನಗಳಾಗಿ ರೂಪುಗೊಳ್ಳಬಹುದು. ಬೊಂಬೆಯಾಟಗಳಿಗೂ ಭವಿಷ್ಯವಿದೆ. ಮಕ್ಕಳ ರಂಗಭೂಮಿಯಾಗಿ ಅದಕ್ಕೆ ಅಧಿಕೃತ ಸರಕಾರಿ ಪ್ರೋತ್ಸಾಹ ದೊರೆತು ಅದು ಹೆಚ್ಚು ಜನಪ್ರಿಯವಾಗಬಹುದು.

-16-

ಯಕ್ಷಗಾನವು ಮುಂದಕ್ಕೆ ಉಳಿದೀತೆ? ಈ ಭವಿಷ್ಯವೇನು? ಎಂದು ಆಗಾಗ ಅಭಿಮಾನಿಗಳು ಚರ್ಚಿಸುವುದುಂಟು. ಪ್ರಶ್ನೆ ಸಹಜ, ಅಭಿಮಾನದಿಂದ ಬಂದದ್ದು. ಉತ್ತರ ಸುಲಭವಲ್ಲ. ನಮ್ಮ ಕಲೆಗಳು, ಭಾಷೆಗಳು, ಸಾಂಸ್ಕೃತಿಕ ವಿವರಗಳಿಗೆಲ್ಲ ಈ ಪ್ರಶ್ನೆ ಇದೆ. ವಿಶ್ವಗ್ರಾಮ ಕಲ್ಪನೆ ಬರುತ್ತಿರುವಾಗ ಮುಂದೇನೆಂದು ಊಹಿಸಲಾರೆವು. ಇಂದಿನ ಸ್ಥಿತಿ ನಾಳೆಗಲ್ಲ. ಬದಲಾವಣೆಯ ವೇಗ, ದಿಕ್ಕುಗಳೂ ಅನೂಹ್ಯ.
ಆದರೂ, ಯಕ್ಷಗಾನ ಉಳಿಯುತ್ತದೆ ಎಂದು ಭಾವಿಸೋಣ. ರೂಪಾಂತರಗಳಲ್ಲಿ ಮತ್ತು ಅನೂಹ್ಯ ಸ್ವರೂಪಗಳಲ್ಲಿ. ಆಗ ಅದು ಯಕ್ಷಗಾನ. ಯಕ್ಷರೆಂದರೆ ಮಾಯಾಮಹಿಮರಲ್ಲವೆ?

ನಾದಲೋಲ

ಪೊಲ್ಯ ಶ್ರೀ ಲಕ್ಷ್ಮೀನಾರಾಯಣ ಶೆಟ್ಟಿ ಅಭಿನಂದನಾ ಗ್ರಂಥ

ಸಂಪಾದಕರು: ಪ್ರಾ| ಸೀತಾರಾಮ್ ಆರ್. ಶೆಟ್ಟಿ

ಪ್ರಕಾಶಕರು: ಅಜೆಕಾರು ಕಲಾಭಿಮಾನಿ ಬಳಗ ಪ್ರಕಾಶನ, ಮುಂಬಯಿ

ವರ್ಷ : 2009

error: Content is protected !!
Share This