ಕೆಲಸಮಯದಿಂದ ಯಕ್ಷಗಾನ ಪತ್ರಿಕೆಗಳಲ್ಲಿ, ಜಾಲತಾಣಗಳಲ್ಲಿ ಯಕ್ಷಗಾನ ಮತ್ತು ವಿಮರ್ಶೆಯ ಸುತ್ತ ಸಾಕಷ್ಟು ಚರ್ಚೆಯಾಗುತ್ತಿರುವುದನ್ನು ಗಮನಿಸಿ ಈ ಲೇಖನ.

ಇಲ್ಲಿ ಮಾತ್ರ ಕಾಣಿಸುವ ಆಶು ಸಂಭಾಷಣಾ ಕೌಶಲ ಉಳಿದ ಕಲೆಗಳಿಗಿಂತ ಭಿನ್ನವಾಗಿ ಯಕ್ಷಗಾನವನ್ನು ಎತ್ತರಿಸಿದೆ ಎಂಬುದು ನನ್ನ ನಂಬುಗೆ. ನಮ್ಮ ಅದೃಷ್ಟಕ್ಕೆ ಹೊಸ ನಾಗರೀಕತೆ ಇತಿಹಾಸದ ಮತ್ತು ತಂತ್ರಜ್ಞಾನದ ಯುಗದ ಹೊಯ್ಲಿಗೆ ಸಿಗದೆ ಪೂರ್ಣ ಅವನತಿಯಿಂದ ಬದುಕುಳಿಯಲು ಕಾರಣ ಈ ಕಲೆಯನ್ನು ಚಿಂತಕರು ಸುಶಿಕ್ಷಿತರು ಪ್ರೀತಿಸಿದ್ದು, ಬೆಳೆಸಿದ್ದು. ಯಕ್ಷಗಾನದಂತೆಯೇ ಇದ್ದ ಘಟ್ಟದ ಕೋರೆ, ಮೂಡಲಪಾಯ, ಪಾರಿಜಾತದಂತಹ ಕಲಾಪ್ರಕಾರಗಳು ಇಂದಿಗೆ ನಾಮಮಾತ್ರವಾಗಿ ಉಳಿಯಲು ಸುಶಿಕ್ಷಿತರ ಉಪೇಕ್ಷೆಯೇ ಕಾರಣ.

ಹತ್ತೊಂಬತ್ತನೆ ಶತಮಾನದಲ್ಲೇ ತೊಡಗಿ ಇಪ್ಪತ್ತರಲ್ಲಿ ಬೆಳೆದ ಯಕ್ಷಗಾನಕ್ಕೆ ಕಾರಂತರಂತಹ, ಕುಕ್ಕಿಲರಂತಹ ಅನ್ಯಕ್ಷೇತ್ರದ ಧೀಮಂತರು ಲಕ್ಷ್ಯವಿತ್ತುದೂ ಬಹುದೊಡ್ಡ ಕೊಡುಗೆ. ಇಂಥವರು ಯಕ್ಷಗಾನದ ಸೀಮೋಲ್ಲಂಘನವನ್ನೂ ಮಾಡಿಸಿದರು.

ಉನ್ನತ ಮಟ್ಟದ ಕಲಾವಿದರ ಪ್ರೌಢಿಮೆ, ಶಿಕ್ಷಿತರ ಬರಹ, ಅಧ್ಯಯನದ ವಸ್ತುವಾಗಿ ರೂಪುಗೊಂಡುದು, ಕಮ್ಮಟ, ಗೋಷ್ಠಿ, ಮುಂತಾದವುಗಳಿಂದ ಕಲಾಪ್ರದರ್ಶನಕ್ಕೆ ಸಂವಾದಿಯಾಗಿ ಮತ್ತೊಂದು ಮುಖದಲ್ಲಿ ಬೆಳೆದುದೂ ಗಮನಾರ್ಹ ಸಾಧನೆ.

ಗಾನ ನಾಟ್ಯಗಳಲ್ಲೂ ವ್ಯಷ್ಟಿ ಪ್ರತಿಭೆಗೆ ಸಾಕಷ್ಟು ಅವಕಾಶ ನೀಡುವ ಯಕ್ಷಗಾನ ಇದೇ ಕಾರಣಕ್ಕಾಗಿ ಚಪ್ಪಾಳೆ ಸರಕಾಗತೊಡಗಿತು‌. ಬಹುಜನಾಕರ್ಷಣೆಯ ಹುಚ್ಚು ವಿಪರೀತವಾದಾಗ ಮತ್ತೆ ಚಿಂತಕರು ಎಚ್ಚರಗೊಳ್ಳಬೇಕಷ್ಟೆ? ಚಪ್ಪಾಳೆಗೂ ಮಾನದಂಡವಿರಬೇಕಲ್ಲವೆ?. ಬಹುಜನ ಸೇರುವುದೇ ಕಲಾಮಾನದಂಡವಾಗಬಾರದು. ಪಾತ್ರಗಳ ಘನತೆಯನ್ನು ಬಲ್ಲ ಕಲಾವಿದರು, ಸಾಹಿತಿಗಳು, ಚಿಂತಕರು ಕಾಪಿಟ್ಟ ಕಲೆ ಯಕ್ಷಗಾನ.

ವಿಪರೀತ, ಅಸಂಬದ್ಧ, ಅತಿರೇಕ ಮುಂತಾದ ಅಸಂಬದ್ಧಗಳ ಶಬ್ದ ಇಲ್ಲಿ ಕೇಳಿಸದಿರಲಿ. ಇದು ನನ್ನ ವೈಯಕ್ತಿಕ ಅನಿಸಿಕೆ.

– ಶ್ರೀ ಡಿ. ಎಸ್. ಶ್ರೀಧರ್ 

error: Content is protected !!
Share This