ಹಿರಿಯ ಯಕ್ಷಗಾನ ಮದ್ದಲೆವಾದಕ ನಲ್ಲೂರು ಜನಾರ್ದನ ಆಚಾರ್ಯ (75ವರ್ಷ) ಸೆಪ್ಟಂಬರ್ 20, 2020ರಂದು ಶೃಂಗೇರಿ ಸಮೀಪದ ನಲ್ಲೂರಿನ ಸ್ವಗ್ರಹದಲ್ಲಿ ನಿಧನಹೊಂದಿದರು. ಪ್ರಸಿದ್ಧ ಭಾಗವತರಾಗಿದ್ದ ಮರಿಯಪ್ಪ ಆಚಾರ್ ಇವರ ಸಹೋದರ. ಐದು ದಶಕಗಳಿಗೂ ಮೀರಿದ ಸುದೀರ್ಘ ವೃತ್ತಿ ಬದುಕಿನಲ್ಲಿ ಶಿವರಾಜಪುರ, ಶೃಂಗೇರಿ, ಕಿಗ್ಗ, ಹಾಲಾಡಿ, ಬಗ್ವಾಡಿ, ಗೋಳಿಗರಡಿ, ಮುಲ್ಕಿ, ಮಡಾಮಕ್ಕಿ, ಮೇಗರವಳ್ಳಿ, ಮಂದಾರ್ತಿ, ಗುತ್ಯಮ್ಮ, ಪೆರ್ಡೂರು, ಕಮಲಶಿಲೆ, ಮಾರಣಕಟ್ಟೆ ಮೇಳಗಳಲ್ಲಿ ಕಲಾಸೇವೆ ಗೈದಿದ್ದಾರೆ. ಸಂಪ್ರದಾಯಬದ್ಧ ಪೆಟ್ಟುಗಳಿಂದ ಕರ್ಣಾನಂದಕರ ನಾದ ಹೊಮ್ಮಿಸುವಲ್ಲಿ ನಿಷ್ಣಾತರಾಗಿದ್ದರು. ಭಾಗವತರ ಹಾಡುಗಾರಿಕೆಗೆ ಪೂರಕವಾಗಿ ವೇಷಧಾರಿಗಳ ಕುಣಿತಕ್ಕೆ ಪ್ರೇರಕವಾಗಿ ಮದ್ದಳೆ ನುಡಿಸುವ ಕೌಶಲ ಕರಗತ ಮಾಡಿಕೊಂಡಿದ್ದರು. ಯಕ್ಷಗಾನ ಅಕಾಡೆಮಿ ಕೊಡಮಾಡುವ 2019-20ನೇ ಸಾಲಿನ ‘ಯಕ್ಷಸಿರಿ’ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಉಡುಪಿಯ ಯಕ್ಷಗಾನ ಕಲಾರಂಗ, ಡಾ.ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ, ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿ ಅಂಬಲಪಾಡಿಯ ಪ್ರಶಸ್ತಿಯೂ ಸೇರಿದಂತೆ ಹಲವು ಪುರಸ್ಕಕಾರಗಳಿಗೆ ಭಾಜನರು. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗ (ರಿ.) ಉಡುಪಿ ಇದರ ಅಧ್ಯಕ್ಷ ಕೆ. ಗಣೇಶ್ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

error: Content is protected !!
Share This