ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ವತಿಯಿಂದ ನಡೆಯುತ್ತಿರುವ ಯಕ್ಷಧ್ರುವ- ಯಕ್ಷಶಿಕ್ಷಣ ಯೋಜನೆಯ ನಾಟ್ಯ ತರಗತಿ ಅಭಿಯಾನದಡಿ ಬೋಧನಾ ನಿರತ ಯಕ್ಷಗಾನ ಶಿಕ್ಷಕರಿಗೆ ಬಿ.ಸಿ ರೋಡಿನ ರಂಗೋಲಿ ಹೊಟೇಲಿನಲ್ಲಿ ಯಕ್ಷಗಾನ ಶಿಕ್ಷಣದ ಒಂದು ದಿನದ ಕಾರ್ಯಾಗಾರ ಮಂಗಳವಾರ ನಡೆಯಿತು.
ಯಕ್ಷಗಾನ ದಶಾವತಾರಿ ಸೂರಿಕುಮೇರು ಗೋವಿಂದ ಭಟ್ಟರ ಅಧ್ಯಕ್ಷತೆಯಲ್ಲಿ ನಡೆದ ಪ್ರಸಕ್ತ ಕಾರ್ಯಾಗಾರದಲ್ಲಿ ತೆಂಕುತಿಟ್ಟು ನಾಟ್ಯ ಪರಂಪರೆ ಹಾಗೂ ತಾಳ ಪ್ರಸ್ತುತಿಯಲ್ಲಿರುವ ಅಭಿಪ್ರಾಯ ಬೇಧವನ್ನು ಪರಿಗಣಿಸಿ ತೆಂಕುತಿಟ್ಟು ಯಕ್ಷಗಾನ ಲೋಕದಲ್ಲಿ ಏಕರೂಪದ ಯಕ್ಷಶಿಕ್ಷಣ ಮುಂದಿನ ಪೀಳಿಗೆಗೆ ದೊರಕಬೇಕೆಂಬ ಸದುದ್ದೇಶದಿಂದ ತಯಾರಿಸಿದ ಯಕ್ಷಧ್ರುವ-ಯಕ್ಷಶಿಕ್ಷಣದ ಪಠ್ಯದ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.


ಕೈಪಿಡಿ ತಯಾರಿಕೆಯ ಹಂತ ಮತ್ತು ಯಕ್ಷಧ್ರುವ- ಯಕ್ಷ ಶಿಕ್ಷಣದ ಧ್ಯೇಯೋದ್ದೇಶಗಳ ಬಗ್ಗೆ ಯಕ್ಷಧ್ರುವ -ಯಕ್ಷ ಶಿಕ್ಷಣದ ನಿರ್ದೇಶಕ ಭಾಗವತ ಪಟ್ಲ ಸತೀಶ್ ಶೆಟ್ಟಿ ದಿಕ್ಸೂಚಿ ಭಾಷಣವನ್ನು ಮಾಡಿದರು. ಪ್ರಸಕ್ತ ಯೋಜನೆಯ ಬಗ್ಗೆ ಸರಪಾಡಿ ಅಶೋಕ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಯಕ್ಷಗಾನ ವಿದ್ವಾಂಸರಾದ ಡಾ. ಎಂ.ಪ್ರಭಾಕರ ಜೋಶಿ, ಪ್ರೊ. ಎಂ.ಎಲ್ ಸಾಮಗ, ಯಕ್ಷಗಾನ ಹಿರಿಯ ಕಲಾವಿದರಾದ ಬಂಟ್ವಾಳ ಜಯರಾಮ ಆಚಾರ್ಯ, ಸಂಜಯ್ ಕುಮಾರ್ ಗೋಣಿಬೀಡು, ಉಮೇಶ್ ಶೆಟ್ಟಿ ಉಬರಡ್ಕ, ಶಿವರಾಮ ಜೋಗಿ, ಪದ್ಮನಾಭ ಉಪಾಧ್ಯಾಯ ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ಇದರ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಪದಾಧಿಕಾರಿಗಳಾದ ಸರಪಾಡಿ ಅಶೋಕ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಯಕ್ಷಶಿಕ್ಷಣದ ಪ್ರಧಾನ ಸಂಚಾಲಕ ಪಣಂಬೂರು ವಾಸುದೇವ ಐತಾಳ್ ಉಪಸ್ಥಿತರಿದ್ದರು.



ಕಾರ್ಯಾಗಾರದ ಸಮನ್ವಯಕಾರರಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್ ಸಾಮಗ ಕಾರ್ಯಾಗಾರವನ್ನು ನಿರ್ವಹಿಸಿದರು. ಯಕ್ಷಶಿಕ್ಷಣದ ಹೊಸ ಕೈಪಿಡಿಯನ್ನು ಯಕ್ಷ ಶಿಕ್ಷಕ ದೀವಿತ್ ಎಸ್ ಕೆ ಪೆರಾಡಿ ಪರಿಚಯಿಸಿ, ವಿವರಿಸಿದರು. ಪಠ್ಯ ಪ್ರಾತ್ಯಕ್ಷಿಕೆಯ ಮುಮ್ಮೇಳದಲ್ಲಿ ರಾಕೇಶ್ ರೈ ಅಡ್ಕ, ರಕ್ಷಿತ್ ಶೆಟ್ಟಿ ಪಡ್ರೆ ಹಿಮ್ಮೇಳದಲ್ಲಿ ಪ್ರಸಾದ್ ಚೇರ್ಕಾಡಿ, ರಾಮ್ ಪ್ರಕಾಶ್ ಕಲ್ಲೂರಾಯ, ಯಜ್ಞೇಶ್ ರೈ ಕಟೀಲು ಭಾಗವಹಿಸಿದರು. ಸುಮಾರು ೨೫ ಕ್ಕೂ ಅಧಿಕ ಯಕ್ಷಗಾನ ಶಿಕ್ಷಕರು ಪ್ರಸಕ್ತ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.
