ಡಾ. ಎಂ. ಪ್ರಭಾಕರ ಜೋಶಿ

ಸಂಸ್ಕೃತಿ ಎಂದರೆ ಪ್ರಕೃತಿಯನ್ನು ಆಧರಿಸಿ ಮಾನವನು ನಿರ್ಮಿಸಿದ ಜೀವನ ವಿನ್ಯಾಸ ವಿಧಾನ. Designs of life. ಸಹಜವಾದುದು ಪ್ರಕೃತಿ. ನಿರ್ಮಿತವಾದುದು ಸಂಸ್ಕೃತಿ. ಉದಾ: ಮರ ಮತ್ತು ಅದರಿಂದ ಮಾಡಿದ ಶಿಲ್ಪ, ಕುರ್ಚಿ, ಅಡಿಕೋಲು ಇತ್ಯಾದಿ ನಿರ್ಮಾಣಗಳೆಲ್ಲಾ ಸಂಸ್ಕೃತಿ ವೈವಿಧ್ಯಗಳೇ. ಕಲೆ, ಸಾಹಿತ್ಯ, ಕ್ರೀಡೆ, ವಿಜ್ಞಾನ, ಉಪಕರಣ, ಆಯುಧ, ಅಡುಗೆ, ಉಡುಪು-ಹೀಗೆ ಇದು, ದೇಶ, ಕಾಲಾಧೀನವಾಗಿ ವಿವಿಧ ಪ್ರದೇಶಗಳಲ್ಲಿ, ವಿವಿಧ ಕಾಲಗಳಲ್ಲಿ, ಅಸಂಖ್ಯ ವಿಧಗಳನ್ನು ಹೊಂದಿದೆ. ಅದನ್ನು ಇತಿಹಾಸ ದೃಷ್ಟಿಯಿಂದ, ವರ್ತಮಾನದಲ್ಲಿ ಇರುವ ರೀತಿಯಲ್ಲಿ ವಿಭಾಗಶಃ-ಹೀಗೆ ಹಲವು ರೀತಿಗಳಲ್ಲಿ ನೋಡಬಹುದು.

ಇದರಲ್ಲಿ ಕಲೆಗಳು ಮತ್ತು ಸಾಹಿತ್ಯ ವೈವಿಧ್ಯಕ್ಕೆ ವಿಶೇಷ ಮಹತ್ವ ಏಕೆಂದರೆ ಅವು ರುಚಿಕರವಾಗಿ, ರಂಜಕ, ಬೋಧಕಗಳಾಗಿ ಇರುತ್ತವೆ ಮತ್ತು ಅವು ಸಂಸ್ಕೃತಿಯ ಚಿತ್ರಣ, ಅಭಿವ್ಯಕ್ತಿ ಮತ್ತು ದಾಖಲೆಗಳು ಆಗಿವೆ ಎಂಬುದರಿಂದ. ಸಾವಿರಾರು ವರ್ಷಗಳ ಹಿಂದಣ ಒಂದು ಚಿತ್ರಶಿಲ್ಪವೋ, ಒಂದು ಸಾಹಿತ್ಯವೋ ನಮಗೆ ತುಂಬಾ ವಿಷಯಗಳನ್ನು ಹೇಳುತ್ತದೆ ಮಾತ್ರವಲ್ಲ, ಕಾಲ, ದೇಶಗಳ ಚಿತ್ರವನ್ನೂ ತಿಳಿಸುತ್ತದೆ. ಜತೆಗೆ ಶಿಕ್ಷಣ, ಸಂಸ್ಕಾರವನ್ನು ವರ್ಧಿಸುತ್ತದೆ. ಅದರಲ್ಲೂ ಹೆಚ್ಚು ಜೀವಂತವಾಗಿ, ಹಲವು ಘಟಕಗಳ ಒಟ್ಟು ಜೋಡಣೆಯಾಗಿ ರೂಪುಗೊಂಡ ರಂಗಭೂಮಿಯ ಪ್ರಕಾರಗಳಿಗೆ ಹೆಚ್ಚು ಮಹತ್ವವಿದೆ. ಈ ನೆಲೆಯಲ್ಲಿ ನಮ್ಮ ಯಕ್ಷಗಾನ ಕಲೆಯು ಒಳಗೊಂಡಿರುವ ಸಾಂಸ್ಕೃತಿಕ ಅಂಶಗಳ ಕುರಿತಾಗಿ ಒಂದಿಷ್ಟು ವಿಚಾರಗಳು-

****

ಯಕ್ಷಗಾನವು ಸುಮಾರಾಗಿ ಕ್ರಿ.ಶ.ಹತ್ತನೇ ಶತಮಾನದಿಂದ ಹೆಚ್ಚು ಉತ್ಕರ್ಷಕ್ಕೆ ಬಂದ ವೈಷ್ಣವ ಭಕ್ತಿ ಸಂಪ್ರದಾಯದ ಹಲವು ರೂಪಗಳಲ್ಲಿ ಒಂದು. ಅದರ ಉಗಮ, ರೂಪ, ವಿವರಗಳಲ್ಲಿ ಭಕ್ತಿಪಂಥದ ಅಚ್ಚು ಇದೆ. ಜತೆಗೆ ಅದರ ಹಿಂದೆ, ಮುಂದೆ ಇದ್ದಂತಹ ಸಾಹಿತ್ಯ ಕಲಾರೂಪಗಳನ್ನು ಅದು ಅಳವಡಿಸಿಕೊಂಡು ರೂಪಿತವಾಗುತ್ತ ಬಂದಿದೆ. ಅದರಲ್ಲಿ ಪುರಾಣ ಕತೆಗಳು, ವಿವಿಧ ಗೀತ-ನಾಟ್ಯ ರೂಪಗಳಲ್ಲಿ-ಚಿತ್ರ, ಶಿಲ್ಪ, ಮಾತು, ಹಾಡು ರಂಗವಿಧಾನಗಳ ಸೃಜನಾತ್ಮಕ ಆಕಾರಗಳಲ್ಲಿ ಅಭಿವ್ಯಕ್ತವಾಗುತ್ತಾ ಬಂದಿದೆ. ಅದರ ಒಂದೊಂದು ವಿಭಾಗವೂ ಸಾಹಿತ್ಯ, ಸಂಗೀತ, ವೇಷ, ಮಾತುಗಾರಿಕೆ, ಸಂಘಟನೆ, ರಂಗರೂಢಿಗಳಲ್ಲಿ ಅತ್ಯಂತ ಪುಷ್ಟವಾಗಿ ಶ್ರೀಮಂತವಾಗಿ ಬೆಳೆದು ಬಂದಿದ್ದು ಒಂದೊಂದು ಅಂಶವೂ ಆಳವಾದ ಅಧ್ಯಯನಕ್ಕೆ ಸಾಮಗ್ರಿಯನ್ನು ನೀಡುತ್ತದೆ. ಈ ಮಾತು ಇಡಿಯ ಭಾರತ ದೇಶದ ಮತ್ತು ನೆರೆಯ ಹಲವು ದೇಶಗಳ ಹಲವಾರು ರಂಗಪ್ರಕಾರಗಳಿಗೂ ಅನ್ವಯವಾಗುತ್ತದೆ. ಉದಾ:-ಆಂಧ್ರದ ಭಾಗವತಂ ರೂಪಗಳು, ಕೇರಳದ ಕಥಕ್ಕಳಿ, ಕೃಷ್ಣನಾಟಂಗಳು, ತಮಿಳುನಾಡಿನ ಭಾಗವತಮೇಳಂ, ತೆರುಕೂತ್ತು, ಮಲೇಶ್ಯಾದ ಬೊಂಬೆಯಾಟಗಳು, ಬಾಲಿ (ಇಂಡೋನೇಶ್ಯಾ)ಯ  ರಾಮಾಯಣ ನೃತ್ಯ ಇತ್ಯಾದಿಗಳು-ಇವುಗಳಲ್ಲಿ ಅನೇಕ ವ್ಯತ್ಯಾಸಗಳಿದ್ದರೂ ಸ್ಥೂಲವಾಗಿ ಒಂದೇ ಕಲೆಯ ಕವಲುಗಳಂತೆ ಕಾಣುತ್ತವೆ. ನಮ್ಮ ತೆಂಕು, ಬಡಗು ಯಕ್ಷಗಾನವು ಈ ಸಮೂಹದ ಕಲೆಗಳಲ್ಲಿ ಕೆಲವು ಅಂಶಗಳಲ್ಲಿ ಹೆಚ್ಚು ವಿಕಸಿತ ಮತ್ತು ಸಂಕೀರ್ಣ ರೂಪವನ್ನು ಕಾಣಿಸುತ್ತವೆ.

ಯಕ್ಷಗಾನ ಮೇಳಗಳು ಸ್ಥಾಪಿತವಾದುದು, ತಿರುಗಾಟ ನಡೆಸುವುದು ದೇವಾಲಯಗಳ ಹೆಸರಿನಲ್ಲಿ. ಈಗಲಾದರೂ ಸ್ವತಂತ್ರ ವೃತ್ತಿಮೇಳವಾದರೂ ಒಂದು ದೇವಾಲಯದ ಹೆಸರನ್ನು ಹೊಂದಿರುತ್ತವೆ. ಸಾಂಪ್ರದಾಯಿಕವಾಗಿ ಮೇಳಗಳ ಪ್ರದರ್ಶನಗಳು ಆ ಆ ದೇವರ ಸೇವಾರೂಪದ ಹರಕೆ ಆಟಗಳು. ಕಷ್ಟ ನಿವಾರಣೆ, ಕರ‍್ಯಸಿದ್ಧಿ ಕುಟುಂಬ ಯಾ ಊರಿನ ಒಳಿತಿಗಾಗಿ ಹರಕೆ ಹೊತ್ತು ಮೇಳದ ಆಟವನ್ನು ಆಡಿಸುವುದಾಗಿದೆ. ಮೇಳವು ಹೊರಡುವ, ಅಂತೆಯೇ ಮೇಳವು ತಿರುಗಾಟ ಮುಗಿಸುವ ದಿನ (ಮೇಳ ಒಳಗಾಗುವುದು), ನಿತ್ಯ ತಿರುಗಾಟದ ದಿನದ ಬೆಳಿಗ್ಗೆ ಸಂಜೆಗಳಲ್ಲಿ, ರಾತ್ರಿ ಬಣ್ಣದ ಮನೆ (ಚೌಕಿ), ರಂಗದಲ್ಲಿ ವಿವಿಧರೂಪದ ಪೂಜೆ, ಆರಾಧನೆಗಳಿವೆ. ಆರತಿ, ನೈವೇದ್ಯಗಳಿವೆ. ಮೇಳದ ಕಿರೀಟವೇ ದೇವರಾಗಿ ಆರಾಧನೆಗೊಳ್ಳುವ ಕ್ರಮವು ಮೂಲವಿಧಾನ. ಬೆಳಗ್ಗಿನ ತಾಳಮದ್ಲೆ ಹಾಕುವಿಕೆ. ಮಧ್ಯಾಹ್ನದ ಪೂಜೆ, ಸಂಜೆ (ಕೆಲವು ಮೇಳಗಳಲ್ಲಿ) ಜರಗುವ ದೇವರ ಉತ್ಸವ-ಮೆರವಣಿಗೆ, ರಾತ್ರಿ ನಡೆಯುವ ಚೌಕಿಪೂಜೆ, ಕಥಾಪ್ರದರ್ಶನದ ಮೊದಲಿನ ಸಭಾಲಕ್ಷಣವೆಂಬ ಪೂರ್ವರಂಗ, ಕೊನೆಯ ಮಂಗಲಪದ, ‘ರಾಮಕೃಷ್ಣರು ಮನೆಗೆ ಬಂದರು ಬಾಗಿಲ ತೆರೆಯಿರೋ’ ಎಂಬ ಹಾಡು ಮೇಳದ ಹಾಡುಗಾರನಿಗೆ ಭಾಗವತ (ಭಗವದ್ಭಕ್ತ)ನೆಂಬ ಹೆಸರು, (ಮೊದಲು ಬಹುಶಃ ಎಲ್ಲ ಕಲಾವಿದರಿಗೂ ಇದ್ದ ಹೆಸರಿರಬೇಕು. ಕಥಾವಸ್ತುವಿನಲ್ಲಿರುವ ದೇವರ ಮಹಿಮೆ, ಭಕ್ತಿಯ ಪ್ರತಿಪಾದನೆ, ರಂಗಸ್ಥಳದ ಸ್ಥಾಪನೆಗಿರುವ ದಿಕ್ಕು ನಿಯಮಗಳು, ತಿರುಗಾಟದ ಮತ್ತು ಪ್ರದರ್ಶನದ ಆರಂಭದಲ್ಲಿ ಮಾಡುವ ಪ್ರಾರ್ಥನೆಗಳು, ವೀಳ್ಯ ಕೊಡುವಿಕೆ (ಮೇಳದ ಸಂಭಾವನೆಯನ್ನು ರಂಗದಲ್ಲಿ ವಿಧಿಪೂರ್ವಕ ಸಲ್ಲಿಸುವಿಕೆಯ) ಪ್ರಾರ್ಥನೆ, ಆಶೀರ್ವಾದಗಳು ಇವೆಲ್ಲ ಸೇರಿ ಭಕ್ತಿ ಆಚರಣೆಗಳ ಸಂಸ್ಕೃತಿಯ ಒಂದು ಚಿತ್ರವನ್ನು ಪ್ರಾತ್ಯಕ್ಷಿಕೆಯಾಗಿ ನೀಡುತ್ತವೆ. ಒಟ್ಟು ಯಕ್ಷಗಾನದ ಆಟವೇ ಪೂಜೆ, ರಂಗಮಂದಿರವು ಮಂದಿರ, ರಂಗಸ್ಥಳವು ಗರ್ಭಗುಡಿ, ಭಾಗವತನೇ ಅರ್ಚಕ, ವೇಷಗಳೇ ಮೂರ್ತಿಗಳು, ಪದ್ಯವೇ ಮಂತ್ರ, ರಂಗ-ಚೌಕಿಗಳ ದೀಪವೇ ದೀಪ-ಎಂಬಂತೆ ರಂಗ ಆಗಮ ದೇವಾಲಯ ಅಭೇದ ಕಲ್ಪನೆಯಲ್ಲಿರುವುದು. ಆದುದರಿಂದಲೇ ಹರಕೆ ಆಟವು ದೇವರಿಗೆ ನೀಡುವ ಬೆಳಕು ಸೇವೆ, ಇಡಿಯ ಆಟವೆ ದೀಪಾರಾಧನೆ ಮತ್ತು ದೀವಟಿಗೆಗಳು ಆರತಿಗಳೂ ಹೌದು.

****

ಸಭಾಲಕ್ಷಣವೆಂಬ ಪೂರ್ವರಂಗವು-ಹಿಂದೆ ನಿತ್ಯ ಕಟ್ಟುಕಟ್ಟಳೆ. ಈಗಲೂ ಹರಕೆ ಬಯಲಾಟ ಮೇಳಗಳಲ್ಲಿ ಅದು ತುಸು ಸಂಕ್ಷಿಪ್ತ ರೂಪದಲ್ಲಿ ಬಳಕೆಯಲ್ಲಿದೆ. (ಅದರಲ್ಲಿ ಬರುವ ಬಾಲಗೋಪಾಲ ವೇಷಗಳು, ಕೋಡಂಗಿ (ಕುಕ್ಕುತಪ್ಪು ವೇಷ-ಮಾವಿನಸೊಪ್ಪು ವೇಷ). ಶಿವ, ಪಾರ್ವತಿ, ಷಣ್ಮುಖ ಸುಬ್ರಾಯ, ಅರ್ಧನಾರಿ, ಗೊಲ್ಲ ಮಾಧವ, ಶ್ರೀಕೃಷ್ಣ ಮೊದಲಾದ ವೇಷಗಳು ಅದರ ಪದ್ಯಗಳೂ, ವಿವಿಧ ದೇವತಾ ಸ್ತುತಿಗಳೂ ಸೇರಿ ಅದೊಂದು ಭಕ್ತಿ ಸಾಹಿತ್ಯದ ಮತ್ತು ವೇದಾಂತದ ಸಂಗ್ರಹದಂತಿದೆ.

ಅಲ್ಲಿ ಹಾಸ್ಯಗಾರನು ಶಿವ, ಪಾರ್ವತಿ, ಕೃಷ್ಣರನ್ನು ಹಾಸ್ಯ ಮಾಡುವ ಅಂಶಗಳು ಸಲುಗೆಯ, ವೇದಾಂತದ ಧ್ವನಿ ಹೊಂದಿವೆ. ಶಿವ-ಪಾರ್ವತಿಯರು ಒಬ್ಬರನ್ನೊಬ್ಬರು ಹುಡುಕುವುದು, ಪ್ರತ್ಯಭಿಜ್ಞಾದರ್ಶನದ ಉತ್ಕೃಷ್ಟ ರಂಗರೂಪವಾಗಿದೆ. ಗ್ರಂಥದಲ್ಲಿರುವ ತಾಳ, ಶ್ರುತಿಗಳ ವಿವರ, ಸಂಗೀತವಿಚಾರಗಳು, ಅಭಿನಯದ ಸಂಗತಿಗಳು ನಾಟ್ಯಶಾಸ್ತ್ರದ ಗ್ರಂಥಗಳಿಂದ ಆಯ್ದವು. ಇದು ಯಕ್ಷಗಾನದ ಶಾಸ್ತ್ರೀಯತೆಯನ್ನು ಸ್ಪಷ್ಟವಾಗಿ ಹೇಳುತ್ತದೆ. ಕನ್ನಡ, ಸಂಸ್ಕೃತ ಹಾಡು ಶ್ಲೋಕಾದಿಗಳೊಂದಿಗೆ ಮಲೆಯಾಳಂ, ತಮಿಳು ಪದಗಳೂ, ತುಳು ಮಾತುಗಳೂ ಸೇರಿ-ಜತೆಗೆ ಕಟ್ಟುಹಾಸ್ಯ ಪ್ರಕರಣಗಳು (ಈಗ ಬಳಕೆ ಇಲ್ಲ) ಬ್ರಾಹ್ಮಣ, ಬೋವಿ, ಬೈರಾಗಿ, ವಿಶ್ವಕರ್ಮ, ಗಂಡ ಹೆಂಡತಿ, ವ್ಯಾಪಾರಿ-ಹೀಗೆ ಬರುತ್ತಿದ್ದ ಸಮಾಜದ ವಿವಿಧ ವರ್ಗಗಳು-ಇವೆಲ್ಲದರ ಸಮ್ಮಿಶ್ರವಾದ ಸಭಾಲಕ್ಷಣವು ಏಕಕಾಲದಲ್ಲಿ ವಿವಿಧಭಾಷೆ, ವಿವಿಧ ಸ್ತರಗಳ ಆರ್ಷ, ಜನಪದ-ಸನಾತನ-ತತ್ಕಾಲಿಕಗಳ ಅಖಿಲ ಭಾರತೀಯ ಏಕಪಾಕರಸವಾಗಿರುತ್ತದೆ.

ಧರೆಯೆಲ್ಲವು ನಿನ್ನುದರದೊಳಿರುತಿರೆ

ಸಿರಿಯೆಂಬಳು ನಿನ್ನ ಚರಣದೊಳಿರುತಿರೆ

ಶರಣಾಗತ ರಕ್ಷಾಮಣಿ ನರಹರಿ

ಗಗನವೆಲ್ಲವು ನಿನ್ನ ನಾಭಿ |

ಎಂಬಲ್ಲಿ ‘ನಾಭ್ಯಾಸೀತ್ ಅಂತರಿಕ್ಷ’ ಎಂಬ ವೇದದ ಮಾತು ಅನುರಣಿಸಿದರೆ, ಹಾಸ್ಯಗಾರನು ಶಿವನನ್ನು ಬೂದಿಗುಡ್ಡೆ ಪರಮೇಸ್ರ ಎನ್ನುತ್ತಾನೆ. ಕುಂದಾಪುರ ಕಂದಪೈಯ್ಲ, ಬನ್ನೂರುಕಟ್ಟೆಯಲ್ಲಿ ಬಿಟ್ಟುಹೋದ ಕಥನವೂ ಒಂದು. ಶಾಸ್ತ್ರ-ಜಾನಪದ, ಅಖಿಲ ಭಾರತೀಯ-ಸ್ಥಳೀಯ ಇವೆಲ್ಲ ಒಂದಾಗುವ ಸಂಸ್ಕೃತಿ ಚಿತ್ರವಿದೆ. ಹೆಚ್ಚಿನೆಲ್ಲ ಭಾರತೀಯ ಪಾರಂಪರಿಕ ರಂಗಗಳಲ್ಲೂ ಹೀಗೇ ಇದೆ. ಅನೇಕ ಸಾಹಿತ್ಯ ಮತ್ತು ಪ್ರಯೋಗಾಂಶಗಳೂ ಸಮಾನವಾಗಿವೆ.

ಉದಾ: ಗಣಪತಿ ಕೌತುಕ, ಸ್ತ್ರೀವೇಷದ ನಾಟ್ಯ, ಕೋಡಂಗಿ ಇತ್ಯಾದಿಗಳು. ಸಭಾಲಕ್ಷಣದ ಸಾಸ್ಕೃತಿಕ ಸಂಪತ್ತು ಅಸಾಧಾರಣವಾದದ್ದು. ಅಧ್ಯಯನಯೋಗ್ಯವಾಗಿದೆ. ಸಭಾಲಕ್ಷಣದಲ್ಲೂ, ಇತರ ಕೃತಿಗಳಲ್ಲೂ ಕಾಣುವ ಬಹುದೇವ ಗೌರವ, ಸಮಾನತೆ ಗಮನಾರ್ಹವಾದುದು.

****

ವೇಷ ವಿಧಾನವನ್ನೆ ತೆಗೆದು ಕೊಳ್ಳೋಣ. ವೇಷದ ಮುಖವರ್ಣಿಕೆಗಳ ವರ್ಣಗಳ ಬಳಕೆ, ಮಿಶ್ರಣ, ವಿವಿಧ ನಾಮಗಳು, ರೇಖೆ, ಗೀಟು, ಮುತ್ತೆರಿ ಮುದ್ರೆ ಬರವಣಿಗೆಗಳು ‘ಎಷ್ಟೊಂದು ಸೂಕ್ಷ್ಮ, ವಿವಿಧ ಮತ್ತು ಸುಂದರ !’ ಬಣ್ಣದ ವೇಷ (ರಾಕ್ಷಸ ಮೊದಲಾದ ವೇಷಗಳ) ಚುಟ್ಟಿಗಳ (ಮುಳ್ಳುಗಳ ಸಾಲಿನ ಮುಖವರ್ಣಿಕೆ) ಹಿಂದಣ ಜ್ಞಾನ, ಪರಿಶ್ರಮ, ಸೌಂದರ್ಯ, ರಮ್ಯಾದ್ಭುತ ಚಿತ್ರಣ-ಜಗತ್ತಿನಲ್ಲಿ ಕಲಾಲೋಕದ ವಿಸ್ಮಯಗಳಲ್ಲಿ ಒಂದಲ್ಲವೆ? ಬಣ್ಣದ ವೇಷವೊಂದರಲ್ಲೆ ಹದಿನಾರು ವಿಧದ ಮುಖವರ್ಣಿಕೆಗಳಿವೆಯೆನ್ನುವರು. ಕಿರೀಟವೇಷ, ಪುಂಡುವೇಷ, ಸ್ತ್ರೀವೇಷಗಳಲ್ಲೂ ಅಂತಹದೆ ವೈವಿಧ್ಯವಿದೆ. ಇಂದ್ರಜಿತು, ಕೌಂಡ್ಲಿಕ, ವರಾಹ ಮೊದಲಾದ ‘ಅರೆಬಣ್ಣ’ ಅನ್ನಬಹುದಾದ ವೇಷಗಳ ಮುಖದ ಚಿತ್ರಗಳ ಅಂದ, ಹನುಮಂತನ ವೇಷದಲ್ಲಿ ಬರುವ ಕಲಾತ್ಮಕ ಕಪಿತ್ವದ ಸುಳಿ, ಚುಕ್ಕಿ, ಕುಸುರಿ, ಗೆರೆಗಳ ಅಸಾಧಾರಣ ವಿನ್ಯಾಸಗಳ ಬಿಂಬ, ಕಿರಾತನ ಓರೆ ನಾಮ, ಓರೆ ಪಗಡಿಯ ಕಲ್ಪನೆ- ಸಂಸ್ಕೃತಿಯ ಅಂದ ಇತಿಹಾಸಗಳನ್ನು ತುಂಬಿಕೊಂಡಿವೆ. ವೇಷದ ಇತರ ಅಂಗಳಾದ ಬಾಲಮುಂಡು, ಕಚ್ಚೆ, ಕೋಲು ಕಿರೀಟ, ಬಟ್ಟಲು ಕಿರೀಟ(ತಡ್ಪೆ) ಕಿರೀಟ, ಪಕಡಿ, ದೊಡ್ಡಮುಂಡಾಸು, ಹೆಗಲವಲ್ಲಿ, ಗೊಂಡೆ, ಮಂಡಿ ಕೇದಗೆ, ಬೆನ್ನಿನ ಪಾಗು, ಕೈಕಟ್ಟು ಕೈಸರಗಳು ಸೊಂಟಪಟ್ಟಿ ಮಾರುಮಾಲೆ ಡಾಬು ಜರಿಗಳು-ಅದೆಂತಹ ಸುಂದರ ಶಿಲ್ಪಗಳು ! ಮಧ್ಯಯುಗದ ವಿಧಿ ವಿಧಾನದ-ರಜಪೂತ, ಮೊಗಲ್, ಮರಾಠಾ ವೇಷ ಮೂಲದ ಅತಿಸುಂದರ ರಂಗಯೋಗ್ಯ ವಿಕಸಿತ ವೇಷಭೂಷಣ ವಿಧಾನವು ಯಕ್ಷಗಾನದಲ್ಲಿದ್ದು ಅದು ಅವಾಸ್ತವವಾದ, ರಮ್ಯ ಕಾಲ್ಪನಿಕ ಪುರಾಣಪಾತ್ರಗಳಿಗೆ ನೀಡಿರುವ ಶಿಲ್ಪ ಸೌಂದರ್ಯವನ್ನೂ, ನೃತ್ಯ ನಡೆ ಚಲನೆಗಳಲ್ಲಿ ಅದು ಉಂಟುಮಾಡುವ ಸೌಂದರ್ಯ ಪರಿಣಾಮವನ್ನೂ ನೋಡಿಯೆ ಸವಿಯಬೇಕಷ್ಟೆ. ವೇಷಗಳ ವೈವಿಧ್ಯ, ಅಂದ, ಸಂತುಲಿತತೆ, ನರ್ತನ ಯೋಗ್ಯತೆ, ಒಟ್ಟು ಆಯ ಆಕಾರ ವರ್ಣಗಳ ಸೌಂದರ್ಯಗಳಲ್ಲಿ ಯಕ್ಷಗಾನ ವೇಷಗಳು ಉಳಿದ ಅನೇಕ, ಅಂತಹುದೆ ರಂಗಗಳ ವೇಷಗಳಿಗಿಂತಲೂ ಹೆಚ್ಚು ಸಮೃದ್ಧವಾಗಿದೆ, ಸಂಪುಷ್ಟವಾಗಿದೆ. ಇತರ ಕೆಲವು ಪಾರಂಪರಿಕ ಅಖಿಲಭಾರತ ರಂಗಭೂಮಿ ಪ್ರಕಾರಗಳ ವೇಷಗಳನ್ನು ಹೋಲಿಸಿದರೆ ಆ ವಿಚಾರ ಕಂಡುಬರುವುದು.

****

ಯಕ್ಷಗಾನದ ಸಂಗೀತ ಅಂದರೆ ಭಾಗವತರು ಪ್ರಸಂಗದ ಪದ್ಯಗಳನ್ನು ಹಾಡುವ ರಾಗ, ಧಾಟಿ, ಮಟ್ಟುಗಳು ಭಾರತೀಯ ಶಾಸ್ತ್ರೀಯ ಸಂಗೀತದೊಳಗೆ ಕರ್ನಾಟಕಿ(ದಕ್ಷಿಣಾದಿ) ಸಂಗೀತದ ಒಂದು ಹಳೆಯ, ಉಳಿದುಬಂದ ಬೆಲೆಯುಳ್ಳ ಸಾಂಸ್ಕೃತಿಕ ಸಂಪತ್ತು. ಯಕ್ಷಗಾನದ ಗಾಯನವು ರಂಗಸಂಗೀತ ಹಿ-ಮ್ಮೇಳದ ಭಾಗ. ಅದು ರಂಗದಲ್ಲಿ ನಡೆಯುವ ಕ್ರಿಯೆಗಳಿಗೆ ಆಧಾರ, ಆಕರ, ಆಕಾರ ಮತ್ತು ಪ್ರೇರಣೆಗಳನ್ನು ನೀಡುವಂತಹದು. ಅಂತಹ ಅಸಾಮಾನ್ಯ ಶಕ್ತಿ, ರಸ, ವೀರತ್ವ, ರಭಸ, ಭಾವಸಂಪತ್ತು ಯಕ್ಷಗಾನಕ್ಕಿರುವುದನ್ನು ಕಂಡ, ಕೇಳಿದವರೆಲ್ಲ ಅನುಭವಿಸುತ್ತಿರುವ ವಿಚಾರ. ಸುಮಾರು ನೂರು ರಾಗಗಳ ಶ್ರೀಮಂತ ಪದ್ಧತಿ ಯಕ್ಷಗಾನ. ಅದರಲ್ಲಿ ಅನೇಕ ರಾಗಗಳು-ನವರೋಜು, ಸುರುಟಿ, ನೀಲಾಂಬರಿ, ಮಧ್ಯಮಾವತಿ, ಭೈರವಿ, ಕಾಂಬೋಜಿ ಇತ್ಯಾದಿಗಳು ಕರ್ನಾಟಕಿ ಸಂಗೀತದಲ್ಲಿ ಇಂದು ಕಾಣದ ಹಳೆಯ ರೂಪಗಳನ್ನು ಉಳಿಸಿಕೊಂಡು ಇವೆ. ಉಳಿದ ರಾಗಗಳಾದರೂ ಹಾಡುವ ಕ್ರಮ, ಗಮಕ, ಭಾವಾನುಗುಣತ, ಕಥನದ ಅಂದಗಳಿಂದ ಕೇಳುಗನಿಗೆ-ಒಂದೆರಡು ನಿಮಿಷದ ಗಾನದಲ್ಲೆ ಅತ್ಯಾನಂದವನ್ನು ನೀಡುವ ಬಗೆ, ನೀವು ಹೆಮ್ಮೆಪಡುವಂತಹದು. ಭಾವಕ್ಕೆ ರಾಗಗಗಳನ್ನು ಯಕ್ಷಗಾನ ಹೇಗೆ ಬಳಸಿಕೊಂಡಿದೆ ಎಂಬುದು ಒಂದು ಉತ್ಕೃಷ್ಟ ಮಾದರಿ. ಉದಾ: ಶೋಕಕ್ಕೆ ಆನಂದಭೈರವಿ, ನೀಲಾಂಬರಿ, ವೀರ-ರೌದ್ರಗಳಿಗೆ ಮಾರವಿ, ಭೈರವಿ, ಪಂತುವರಾಳಿ, ವಿನಯ, ಹಾಸ್ಯಭಾವಕ್ಕೆ ಮುಖಾರಿ ರಾಗವನ್ನು ಬಳಸಿದ ರೀತಿ ಅಸಾಮಾನ್ಯ. ಸಂಗೀತವೂ, ರಂಗಭೂಮಿಯೂ, ಭಾವಗಾನವೂ ಯಕ್ಷಗಾನದ ಗಾನವಿಧಾನದಿಂದ ಕಲಿಯಬಹುದಾದುದು ಬಹಳ ಇದೆ. ಆದರೆ ಹಲವರು ಇಂದು ಯಕ್ಷಗಾನ ಗಾಯನದ ಮೌಲಿಕತೆ, ರೂಪ, ಉದ್ದೇಶಗಳನ್ನು ಮರೆತು ಅದನ್ನು ಹಿಗ್ಗಾ ಮುಗ್ಗಾ ಎಳೆದು ಮ್ಯೂಸಿಕ್ ಮಾಡುತ್ತಿರುವುದು ವ್ಯಸನಾಸ್ಪದವಾಗಿದೆ. ಯಕ್ಷಗಾನದ ಹಿಮ್ಮೇಳವಾದ್ಯಗಳಾದ ಮದ್ದಳೆ, ಚೆಂಡೆಗಳು ಪೆಟ್ಟು, ನಡೆ, ನಾದ, ಗಾಂಭೀರ್ಯ, ಸೌಂದರ್ಯ, ರಂಗಪ್ರಚೋದನೆಗಳಲ್ಲಿ ಹೊಂದುವ ದ್ರವ್ಯ, ಕೃತ್ಯಗಳು ಎಷ್ಟು ವಿಶಿಷ್ಟ ! ತೆಂಕುತಿಟ್ಟಿನ ಚೆಂಡೆಯು ಜಗತ್ತಿನ ಅತ್ಯಂತ ಪರಿಷ್ಕೃತ ಗಂಭೀರವಾದ ವಾದ್ಯಗಳಲ್ಲಿ ಒಂದಾಗಿದೆ. ಯಕ್ಷಗಾನದ ಸಂಗೀತ ಪರಂಪರೆ, ಸಮುಚ್ಚಯಗಳು ಬಹಳ ಸಿರಿವಂತಿಕೆ ಹೊಂದಿವೆ-ಬಳಕೆ, ಸಂಶೋಧನೆ, ಬೋಧನೆಗಳೆಲ್ಲವಕ್ಕೂ ಹೌದು.

****

ಯಕ್ಷಗಾನದ ಆಶುಭಾಷಣದ ಬೃಹತ್ ನಾಟಕರಚನೆ ಸದ್ಯೋಜಾತವಾಗಿ ಉದಿಸಿ, ಬೆಳಗುವ ಪರಿ ಅಸಾಮಾನ್ಯ. ಅದರಲ್ಲೂ ತಾಳಮದ್ದಳೆ ಸ್ವರೂಪದ (ವೇಷ ರಹಿತ ಬೈಠಕ್ ರೂಪದ ಯಕ್ಷಗಾನಕೂಟ) ಅರ್ಥಗಾರಿಕೆ-ಶತಮಾನಗಳ ಸಾಂಸ್ಕೃತಿಕ ವಸ್ತುಗಳ ಶೇಖರಣೆ, ವಿಕಾಸಗಳಿಂದ ಬೆಳೆದ ಉನ್ನತಮಟ್ಟದ ಸೃಜನವಾಗಿದೆ. ತೀರ ಸ್ಥೂಲವಾದ ಪ್ರಸಂಗದ ಪದ್ಯಗಳ ಪ್ರಚಂಡವಾದ ಆಶುಗದ್ಯರೂಪೀ ವಿಸ್ತರಣೆ, ಮಹಾನಾಟಕರಚನೆ, ಮಹಾಕಾವ್ಯ ಮಟ್ಟದ ನಿರ್ಮಾಣಗಳು. ಅದರಲ್ಲಿ ಪುರಾಣ, ಕಾವ್ಯ, ಗಾದೆ, ಒಗಟು, ಜೀವನಾನುಭವ, ತರ್ಕ, ವಿತರ್ಕ, ವಿವಿಧ ಪಾತ್ರಗಳ ವರ್ತನೆಗಳು, ಶಿಷ್ಟ-ವಿಶಿಷ್ಟಗಳೆಲ್ಲ ಒಂದಾಗಿ ಬರುತ್ತವೆ. ಅಸಾಮಾನ್ಯ ವ್ಯುತ್ಪನ್ನಮತಿ, ನಿಶಿತ ತರ್ಕ, ಚಿಂತನ, ಪಾಂಡಿತ್ಯ, ನಾಟಕೀಯ ಕೌಶಲಗಳೆಲ್ಲವೂ ಕಲಾವಿದರಲ್ಲಿ ಮೇಳೈಸಿರಬೇಕು. ಈ ಕಲೆಯ ಅಪೇಕ್ಷೆ, ನಿರೀಕ್ಷೆಗಳು ಬಲು ದೊಡ್ಡವು.

ಇಲ್ಲಿ ತತ್ವಗಳು, ವೇದಾಂತಗಳು ಜನಪ್ರಿಯ ರೀತಿಯಲ್ಲಿ ಓತಪ್ರೋತವಾಗಿ ಬರುತ್ತವೆ. ಹಾಸ್ಯವೂ ಕೂಡಾ ದರ್ಶನದಿಂದ ಕೂಡಿರುವುದು ಶಕ್ಯವಿದೆ. ಒಬ್ಬ ಅರ್ಥಧಾರಿಯ ಮಾತಿನಲ್ಲಿ ವೇದದ ಒಂದು ಉಕ್ತಿ, ಗಾದೆಯ ಒಂದು ಮಾತು, ಒಂದು ವ್ಯಾವಹಾರಿಕ ಉದಾಹರಣೆ, ಸಂಸಾರದ ಚಿತ್ರ, ತರ್ಕ-ವಿತರ್ಕಗಳೆಲ್ಲ ಒಂದೇ ವಾಕ್ಯದಲ್ಲಿ ಸಂದುಗಳಲ್ಲಿ ಬರಬಹುದು. ನಮ್ಮ ಸಂಸ್ಕೃತಿಯ ಎಲ್ಲ ಸ್ತರಗಳನ್ನು ಸಲೀಸಾಗಿ ಬೆಸೆದು ನೇಯ್ಗೆ ಮಾಡಿ ಕೊಡುವುದರಿಂದಲೇ ಪ್ರಾಯಃ ಅರ್ಥಗಾರಿಕೆ ಜನರಿಗೆ ತುಂಬ ಪ್ರಿಯವೆನಿಸಿದೆ. ತಾಳಮದ್ದಳೆಯ ಕಲಾವಿದರು ಅರ್ಥಗಾರಿಕೆಯನ್ನು ಬಳಸಿರುವ ರೀತಿ ಭಾಷೆಯನ್ನು ಬಳಸುವ ವಿಧಾನಗಳು-ಕನ್ನಡಿಗರಾದ ನಾವು ಹೆಮ್ಮೆ ಪಡುವ ಸಾಧನೆಯಾಗಿದೆ. ಪ್ರಸಂಗಗಳು, ಅದನ್ನಾಧರಿಸಿದ ಅರ್ಥಗಾರಿಕೆ ಸೇರಿ-ಕನ್ನಡ ಸಾಹಿತ್ಯದ ಪರಮೋಚ್ಚ ಶಿಖರಗಳಲ್ಲಿ ಇವೆ.

ಹಾಸ್ಯಗಾರನೆಂಬ (ವಿದೂಷಕ ಹನುಮನಾಯಕ) ಸ್ಥಾನದಿಂದ ಅನೇಕ ರೀತಿಯ ನಿರ್ವಹಣೆಗಳುಳ್ಳ ಒಂದು ‘ಹೆಚ್ಚುವರಿ’ ಪಾತ್ರಾತೀತ ಪರಿಕಲ್ಪನೆಯ ಪಾತ್ರ-ವು ಕಥೆಯನ್ನು, ಸಮಾಜವನ್ನು, ಪುರಾಣ-ಸಮಕಾಲೀನಗಳನ್ನು ಬೆಸೆಯುತ್ತ ಸಾಗುವ ಪ್ರೇಕ್ಷಕನ ಅಂತರಂಗವೂ, ರಂಗದ ಸಾಕ್ಷಿಯೂ ಆಗಿರುವ ವಿಶಿಷ್ಟತೆ, ಅದರ ನಾಜೂಕು ಸಿದ್ಧಿಗಳು ಉಚ್ಚವಾದುವು. ಕಥೆ, ವಿವಿಧ ಕಾಲ, ವಿವಿಧ ಮನೋಧರ್ಮಗಳ ಬೆಸುಗೆಯು ಸಂಯುಕ್ತವದು.

ಸುಮಾರು ಮೂರು ಸಾವಿರದಷ್ಟು ಇರಬಹುದಾದ ಯಕ್ಷಗಾನ ಪ್ರಸಂಗಗಳಲ್ಲಿ ಕಥೆಗಳನ್ನು ಹಾಡುಗಳಲ್ಲಿ ಹೇಳುವ ಗೀತಕಾವ್ಯಗಳು, ಹಾಡು-ಆಡು ಕಾವ್ಯಗಳು)-ಇರುವ ಪದ್ಯಗಳ ಸಂಖ್ಯೆ ಅದೆಷ್ಟು? ಅಂದಾಜು ಕೇಳಿದರೆ ಆಶ್ಚರ್ಯವಾದೀತು. ಸರಾಸರಿ ೧೫೦ ಪದ್ಯ ಎಂದಿಟ್ಟುಕೊಂಡರೂ ಐದುಲಕ್ಷದಷ್ಟು ಗೀತಗಳ ಸಾಹಿತ್ಯದ ನಿಧಿ ಅದು ! ತುಳು, ಕೊಂಕಣಿ, ಮರಾಠಿ, ಇಂಗ್ಲಿಷ್, ಹಿಂದಿ, ಹವ್ಯಕ, ಬ್ಯಾರಿಭಾಷೆಗಳಲ್ಲೂ ಯಕ್ಷಗಾನ ರಚನೆಗಳಿವೆ. ಗುಣಮಟ್ಟದಲ್ಲಿ ಬೇರೆ ಬೇರೆ ಸ್ತರಗಳಿರಬಹುದು. ಆದರೂ ಗಾತ್ರ, ಗುಣ ಎರಡರಲ್ಲೂ ಯಕ್ಷಗಾನ ದ ಗೀತಸಾಹಿತ್ಯದ ಮಟ್ಟ, ಹರಹು ದೊಡ್ಡದು. ಪಾರ್ತಿಸುಬ್ಬ, ಹಟ್ಟಿಯಂಗಡಿ ರಾಮಭಟ್ಟ, ಬ್ರಹ್ಮಾವರ ವಿಷ್ಣುಕವಿ, ಮುದ್ದಣ, ಹಲಸಿನಹಳ್ಳಿ ನರಸಿಂಹ ಶಾಸ್ತ್ರೀ ಮೊದಲಾದವರಿಂದ ತೊಡಗಿ ಇಂದಿನ ಕವಿಗಳ ತನಕ-ನೂರಾರು ರಚನೆಗಾರರು ನೀಡಿದ ಅತ್ಯುತ್ತಮ ಮಟ್ಟದ ಹಾಡುಗಳ ಸಾಹಿತ್ಯ ಯೋಗ್ಯತೆ, ನಾಟಕೀಯತೆ, ರಂಗಯೋಗ್ಯತೆಗಳು ಅಸಾಮಾನ್ಯವಾಗಿವೆ.

****

 ತುಳು ಯಕ್ಷಗಾನರಂಗವು (ಆರಂಭ ಕ್ರಿ.ಶ.೧೮೮೦ರಲ್ಲಿ) ೧೯೫೦ರಿಂದ ಕಾಣಿಸಿದ ತುಳು ಮಾತುಗಾರಿಕೆ, ತುಳು ಬದುಕಿನ ಆಪ್ತವಾದ ಚಿತ್ರಣಗಳು-ತುಳು ಸಂಸ್ಕೃತಿ ಚರಿತ್ರೆಯ ದೊಡ್ಡ ಅಧ್ಯಾಯವಾಗಿದೆ. ಒಟ್ಟು ಯಕ್ಷಗಾನವು ಕಾವ್ಯ ಆಕರ-ಪ್ರಾದೇಶಿಕ ಕಾವ್ಯ-ಪ್ರಸಂಗ-ಪ್ರದರ್ಶನವಿರುವ ಸತತ ಜನಾಭಿಮುಖಿ ಚಲನೆಯ ರೂಪವೆ ಆಗಿದೆ.

****

ಸಂಸ್ಕೃತಿಯ ಹಲವು ಪದರುಗಳ ಸಂಚಯ, ಜನಮುಖಿಯಾದ ಸಂವಹನವಾಗಿ ಮೌಲ್ಯ, ಭಾಷೆ, ಸಂಸ್ಕೃತಿಗಳ ಶಿಕ್ಷಣ ಮಾಧ್ಯಮವಾಗಿ ಸೂಕ್ಷ್ಮ, ಪ್ರತಿಭಾಪೂರ್ಣ ಚಿತ್ರಣವಾಗಿ, ಪಂಡಿತ ಸಾಮಾನ್ಯ ಸಕಲ ಜನರಂಜಕವಾಗಿ ಉಳಿದು ಬೆಳೆದು ಮುಂದೆ ಸಾಗುತ್ತಿರುವ ಸೊತ್ತು, ಸಂಪತ್ತು, ಕೋಪೆ.

ವಾಚಾತೀತಂ ಮನೋತೀತಂ ಭಾವಾತೀತಂ ನಿರಂಜನಂ |

ಸರ್ವಶೂನ್ಯಂ ನಿರಾಕಾರಂ ನಿಶ್ಶಬ್ದಂ ಬ್ರಹ್ಮ ಉಚ್ಯತೇ || (ಸಭಾಲಕ್ಷಣದಲ್ಲಿ)

ಹೃದಯಕಮಲವೆಂಬ ಹರಿವಾಣದೊಳು ದಿವ್ಯ

ಸದಮಲ ಭಕ್ತಿರಸದ ತೈಲದಿ

ಪದುಮನಾಭನ ನಾಮವೆಂಬ ಜ್ಯೋತಿಯ ತಂದು

ಮುದದಿಂದ ಜ್ಞಾನದಾರತಿಯೆತ್ತಿರೆ ||               (ಪಾರ್ತಿಸುಬ್ಬ)

ಡಾ. ಎಂ. ಪ್ರಭಾಕರ ಜೋಶಿ- [ಲೇಖಕರು ಪ್ರಸಿದ್ಧ ಅರ್ಥದಾರಿ, ಸಂಶೋಧಕ, ಸಂಸ್ಕೃತಿ ಚಿಂತಕರು, ಲೇಖಕರು, ಶಿಕ್ಷಕರು, ಪ್ರಾಧ್ಯಾಪಕ, ಸಾಮಾಜಿಕ ಕಾರ್ಯಕರ್ತರು]

error: Content is protected !!
Share This