ಜೋತಿಷ ಜ್ಞಾನರತ್ನ, ಯಕ್ಷದೇವ ಸಂಶೋಧಕ ಅನಂತರಾಮ ಬಂಗಾಡಿ (68) ಅವರು ಅಲ್ಪಕಾಲದ ಅಸೌಖ್ಯ ದಿಂದ ಮೇ 12ರಂದು ಪೂರ್ವಾಹ್ನ 11.45ಕ್ಕೆ ಸ್ವಗೃಹದಲ್ಲಿ ನಿಧನ ಹೊಂದಿದರು.

ದಕ್ಷಿಣ ಕನ್ನಡದ ಬೆಳ್ತಂಗಡಿಯ ಮಾಯಿಲ ಭಂಡಾರಿ ವಂಶದ ಕುತ್ರೊಟ್ಟು ಮಂಜು ಭಂಡಾರಿ ಮತ್ತು ಕಿನ್ಯಕ್ಕ ದಂಪತಿಯ ದ್ವಿತೀಯ ಪುತ್ರರಾದ ಅನಂತರಾಮ ಅವರು ತುಳು ಭಾಷೆಯಲ್ಲಿ ಜೋತಿಷ ಗ್ರಂಥವನ್ನು ಮೊತ್ತಮೊದಲ ಬಾರಿಗೆ ಬರೆದ ಸಂಶೋಧಕ. 150ಕ್ಕೂ ಅಧಿಕ ಯಕ್ಷಗಾನ ಪ್ರಸಂಗ ರಚಿಸಿದ ತುಳುನಾಡಿನ ಅಪರೂಪದ ಸಾಧಕ.

ವಿದ್ಯಾಭ್ಯಾಸ
1951ರ ನ.14ರಂದು ಜನಿಸಿದ ಅವರು ಪ್ರಾಥಮಿಕ ಶಿಕ್ಷಣವನ್ನು ಬಂಗಾಡಿಯಲ್ಲಿ ಪೂರೈಸಿ, ಹೈಸ್ಕೂಲು ವಿದ್ಯಾಭ್ಯಾಸ ವನ್ನು ಹಾಸನದ ಹೆತ್ತೂರಿನಲ್ಲಿ ಆರಂಭಿಸಿ ಎಸೆಸೆಲ್ಸಿ ಪೂರ್ಣ ಗೊಳಿಸಿದರು. ಕವಿ ನೀಲಕಂಠ ಭಟ್‌ ಶಿರಾಡಿಪಾಲರ ಮಾರ್ಗ ದರ್ಶನದಲ್ಲಿ ಕನ್ನಡರತ್ನ ಪರೀಕ್ಷೆಯನ್ನು ಖಾಸಗಿಯಾಗಿ ಬರೆದು ಶಿಮಂತೂರು ನಾರಾಯಣ ಶೆಟ್ಟರ ಮಾರ್ಗದರ್ಶನದಲ್ಲಿ ಯಕ್ಷಗಾನ ಛಂದಸ್ಸನ್ನು ಅಧ್ಯಯನ ಮಾಡಿದ್ದರು. ಜೋತಿಷಿ, ಸಾಹಿತಿ, ಹರಿಕಥಾ ಪ್ರವಚನಕಾರ, ನಾಟಕ ದಿಗªರ್ಶಕ, ತೊಗಲು ಬೊಂಬೆಯಾಟ ಸೇರಿದಂತೆ ವರ್ಣಾಲಂಕಾರ, ವಸ್ತ್ರಾಲಂಕಾರ, ಪಾಡªನ ಪರಿಣತಿ ಪಡೆದ ಬಹು ಅಪೂರ್ವ ಸಾಧಕರಾಗಿ ಜಿಲ್ಲೆಯ ಮನೆಮಾತಾಗಿದ್ದರು.

ಕ್ರೈಸ್ತ ಸಂತರ ಕಥೆಗಳನ್ನು ಯಕ್ಷಗಾನಕ್ಕೆ ಅಳವಡಿಸುವದ ರೊಂದಿಗೆ ಹೊಸ ಭಾಷ್ಯ ಬರೆದಿದ್ದರು. ಸಮಾನಮನಸ್ಕ ಸ್ನೇಹಿತರೊಡಗೂಡಿ “ಸೌಹಾರ್ದ ಕಲಾವಿದರು ಯಕ್ಷರಂಗ ಬಂಗಾಡಿ’ ಎಂಬ ತಂಡ ಕಟ್ಟಿ ಸುಮಾರು 15 ವರ್ಷ ಯಕ್ಷ ಕಲೆಯನ್ನು ಪಸರಿಸಲು ಅಪಾರ ಕೊಡುಗೆ ಸಲ್ಲಿಸಿದ್ದರು.

ನಮ್ಮ ಸೌಹಾರ್ದ ಕಲಾವಿದರ ಯಕ್ಷರಂಗ ಬಂಗಾಡಿ ತಂಡದ ಮೂಲಕ ಶಾಲಾ ಕಾಲೇಜುಗಳಲ್ಲಿ ಪರಿಸರ ಸಂರಕ್ಷಣೆ ಸಂದೇಶ ಸಾರಲು 50ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದರು. ಫಿನ್ ಲ್ಯಾಂಡ್ – ಭಾರತದ ಜಾನಪದ ಅಧ್ಯಯನಕ್ಕಾಗಿ ಮತ್ತು ತುಳು ಶಬ್ದಕೋಶ ರಚನೆಗಾಗಿ ತುಳು ನಿಘಂಟು ಕಾರ್ಯಾಗಾರದಲ್ಲಿಯೂ ಸೇವೆ ಸಲ್ಲಿಸಿದ್ದರು.

ಪ್ರಶಸ್ತಿ ಪುರಸ್ಕಾರ
ಭಾರತೀಯ ಜೋತಿಷ ಸಂಸ್ಥೆಯಿಂದ “ಜೋತಿಷ ಜ್ಞಾನರತ್ನ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕುಬೆವೂರು ಪ್ರತಿಷ್ಠಾನ ಯಕ್ಷಗಾನ ಪ್ರಸಂಗ ಸಾಹಿತ್ಯ ಪ್ರಶಸ್ತಿ, ಕೊರಗಪ್ಪ ಪ್ರಶಸ್ತಿ ಪ್ರತಿಷ್ಠಾನ ಪುರಸ್ಕಾರ, ಗಣಪಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ, ಪುಳಿಂಚ ರಾಮಯ್ಯ ಶೆಟ್ಟಿ ಪ್ರತಿಷ್ಠಾನ ಪ್ರಶಸ್ತಿ, ಅಖೀಲ ಭಾರತ ತುಳು ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ವಿಶ್ವ ತುಳು ಸಮ್ಮೇಳನ ಪ್ರಶಸ್ತಿ, ತುಳುನಾಡ ಸಿರಿ ಪ್ರಶಸ್ತಿ, ಸ್ಕಂದ ಪುರಸ್ಕಾರ ಮತ್ತು ಇತ್ತೀಚೆಗೆ ದೊರೆತ ಯಕ್ಷದೇವ ಪ್ರಶಸ್ತಿ ಜತೆಗೆ ನೂರಾರು ಸಂಘ – ಸಂಸ್ಥೆಗಳು ಅವರನ್ನು ಸಮ್ಮಾನಿಸಿ ಪುರಸ್ಕರಿಸಿವೆ.

-ಉದಯವಾಣಿ

error: Content is protected !!
Share This