ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಷನ್ ವತಿಯಿಂದ ಕೊರೋನ ವೈರಸ್ ನಿರ್ಬಂಧದಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಯಕ್ಷಗಾನ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಲಾವಿದರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸುವ ಕಾರ್ಯವನ್ನು ಪ್ರಾರಂಭಿಸಲಾಗಿದ್ದು, ಬುಧವಾರ ಮುಂಜಾನೆ ಬ್ರಹ್ಮಾವದಲ್ಲಿ ಇದಕ್ಕೆ ಚಾಲನೆ ನೀಡಲಾಯಿತು.

ಎರಡು ದಿನಗಳಲ್ಲಿ ಬ್ರಹ್ಮಾವರ, ಕೋಟ, ತೆಕ್ಕಟ್ಟೆ, ಕುಂದಾಪುರ, ತ್ರಾಸಿ, ಹೆಮ್ಮಾಡಿ, ನಾಗೂರು, ವಂಡ್ಸೆ, ಅಂಪಾರು, ಶಂಕರನಾರಾಯಣ, ಹಾಲಾಡಿ, ಮಂದಾರ್ತಿ, ಹೆಬ್ರಿ ಸಂತೆಕಟ್ಟೆ ಹಾಗೂ ಸಿದ್ಧಾಪುರಗಳಲ್ಲಿ ಒಟ್ಟು 712 ತೆಂಕು ಹಾಗೂ ಬಡಗುತಿಟ್ಟು ಯಕ್ಷಗಾನ ಕಲಾವಿದರಿಗೆ ಅಕ್ಕಿ, ಬೇಳೆ, ಚಾಪುಡಿ ಸೇರಿದಂತೆ ಒಂದು ತಿಂಗಳಿಗಾಗುವಷ್ಟು ರೇಷನ್ ಸಾಮಗ್ರಿಗಳನ್ನು ವಿತರಿಸಲಾಯಿತು ಎಂದು ಕಾರ್ಯಕ್ರಮವನ್ನು ಸಂಯೋಜಿಸಿದ ಉದಯಕುಮಾರ್ ಶೆಟ್ಟಿ ಕೆರೆಕಟ್ಟೆ ತಿಳಿಸಿದ್ದಾರೆ.

ಉಡುಪಿಯ ಯಕ್ಷಗಾನ ವಿದ್ವಾಂಸ ಪ್ರೊ.ಎಂ.ಎಲ್.ಸಾಮಗ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೆ.ಸುಧಾಕರ ಆಚಾರ್ಯ, ಡಾ.ಹರೀಶ್ ಜೋಷಿ, ಉದಯಕುಮಾರ್ ಶೆಟ್ಟಿ ಹಾಗೂ ಸತೀಶ್ ಶೆಟ್ಟಿ ಹೊಸಂಗಡಿ ಉಪಸ್ಥಿತರಿದ್ದರು.

ರೇಷನ್ ಅಗತ್ಯವುಳ್ಳ ಕಲಾವಿದರಿಂದ ಹೆಸರು ನೊಂದಾಯಿಸಲು ಕೋರಲಾಗಿದ್ದರೂ, ನಿಗದಿತ ಊರುಗಳಿಗೆ ತೆರಳಿದಾಗ, ಅಲ್ಲಿದ್ದ ಎಲ್ಲಾ ಕಲಾವಿದರಿಗೂ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು. ಅವರಲ್ಲಿದ್ದ ಗುರುತು ಚೀಟಿಯನ್ನು ಪರಿಶೀಲಿಸಿ ರೇಷನ್‌ನ್ನು ವಿತರಿಸಲಾಗಿದೆ. ಪ್ರತಿಯೊಬ್ಬರಿಗೂ 1600ರೂ.ಗಳಿಂದ 1800ರೂ. ಮೌಲ್ಯದ ತಿಂಗಳಿಗೆ ಅಗತ್ಯವಿರುವ ಆಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ ಎಂದು ಉದಯ ಕುಮಾರ್ ಶೆಟ್ಟಿ ತಿಳಿಸಿದರು.

ಅಲ್ಲದೇ ಯಕ್ಷಗಾನ ಕಲಾವಿದರಾಗಿ ಇತ್ತೀಚೆಗೆ ಅಪಘಾತಕ್ಕೆ ಸಿಲುಕಿ ಮತ್ತೆ ಮೇಳದಲ್ಲಿ ಕಾರ್ಯನಿರ್ವಹಿಸಲು ಅಸಾಧ್ಯವಾಗಿ ಮನೆಯಲ್ಲೇ ಇರುವ ಸೌಡದ ಯೋಗೀಶ್ ಕುಮಾರ್ ಸಾಗರ ಹಾಗೂ ಎಲ್ಲಂಪಳ್ಳಿ ಜಗನ್ನಾಥ ಆಚಾರ್ಯರಿಗೆ ಇಂದು ಅವರ ಮನೆಗೆ ತೆರಳಿ ರೇಷನ್ ಸಾಮಗ್ರಿ ವಿತರಿಸಲಾಗಿದೆ. ಅದೇ ರೀತಿ ಗಂಗನಾಡು ಪರಮೇಶ್ವರ ಅವರಿಗೂ ಇಂದು ರೇಷನ್ ನೀಡಲಾಯಿತು. ಅಲ್ಲದೇ ಇಂದು ಕೆರೆಕಟ್ಟೆಯಲ್ಲಿ 62 ಕಲಾವಿದರಿಗೆ ರೇಷನ್ ವಿತರಿಸಲಾಯಿತು ಎಂದು ಅವರು ಹೇಳಿದರು.

ವೃತ್ತಿಪರ ಯಕ್ಷಗಾನ ಕಲಾವಿದರಿಗೆ ಆಯಾ ಮೇಳದಿಂದ ಪ್ರತಿದಿನ ನಡೆಯುವ ಯಕ್ಷಗಾನ ಪ್ರದರ್ಶನವೇ ಜೀವನಾಧಾರವಾಗಿದೆ. ಆದರೆ ಕೊರೋನ ವೈರಸ್ ಹರಡುವಿಕೆ ಪ್ರಾರಂಭಗೊಂಡ ನಂತರ, ಕರಾವಳಿಯ ಎಲ್ಲಾ ವೃತ್ತಿಪರ ಮೇಳಗಳೂ ತಮ್ಮ ತಿರುಗಾಟವನ್ನು ಸಂಪೂರ್ಣವಾಗಿ ನಿಲ್ಲಿಸಿವೆ. ಹವ್ಯಾಸಿಗಳ ಪ್ರದರ್ಶನಕ್ಕೂ ಈಗ ಬ್ರೇಕ್ ಬಿದ್ದಿದೆ. ಹೀಗಾಗಿ ಯಕ್ಷಗಾನ ಆಟವನ್ನೇ ನಂಬಿರುವ ಬಡ ಕಲಾವಿದರ ಪರಿಸ್ಥಿತಿ ಈಗ ತೀರಾ ಹದಗೆಟ್ಟಿದೆ. ಹೀಗಾಗಿ ಇಂಥ ಎಲ್ಲಾ ಕಲಾವಿದರನ್ನು ಗುರುತಿಸಿ ರೇಷನ್ ವಿತರಿಸಲು ಪಟ್ಲ ಫೌಂಡೇಷನ್ ನಿರ್ಧರಿಸಿತ್ತು ಎಂದು ಉದಯಕುಮಾರ್ ಶೆಟ್ಟಿ ವಿವರಿಸಿದರು.

ವೇತನ ನೀಡಲು ಒಪ್ಪಿಗೆ: ಕರಾವಳಿಯ ಮೂರು ಜಿಲ್ಲೆಗಳಲ್ಲಿರುವ ದಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಸ್ಥಾನಗಳ ವತಿಯಿಂದ ನಡೆಯುವ ಯಕ್ಷಗಾನ ಮೇಳಗಳ ಎಲ್ಲಾ ಕಲಾವಿದರಿಗೂ ಮಾರ್ಚ್‌ನಿಂದ ಪ್ರಾರಂಭಿಸಿ ಮೂರು ತಿಂಗಳ ವೇತನ ನೀಡಲು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಈ ಕುರಿತಂತೆ ಯಕ್ಷಗಾನದ ಖ್ಯಾತ ಭಾಗವತ ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರು ಸಚಿವರೊಂದಿಗೆ ಮಾತುಕತೆ ನಡೆಸಿದ ವೇಳೆ ಅವರು, ಈ ಪ್ರಸ್ತಾಪಕ್ಕೆ ಒಪ್ಪಿಕೊಂಡು ಇದಕ್ಕೆ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಉದಯಕುಮಾರ್ ಶೆಟ್ಟಿ ತಿಳಿಸಿದರು.

error: Content is protected !!
Share This