ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಯಕ್ಷಗಾನ ಕಲೆಯಾಧಾರಿತ ರಾಜ್ಯಮಟ್ಟದ ಸ್ಪರ್ಧೆ
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ ಸಹಯೋಗದೊಂದಿಗೆ ಯಕ್ಷಧ್ರುವ- ಯಕ್ಷಶಿಕ್ಷಣ ಯೋಜನೆಯ ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ – 2023-24 ಕಾರ್ಯಕ್ರಮವು ದಿನಾಂಕ: 06-02-2024, ಮಂಗಳವಾರ ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್, ಮೂಡುಬಿದಿರೆ ಇಲ್ಲಿ ನಡೆಯಲಿದೆ. ಇದು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಯಕ್ಷಗಾನ ಕಲೆಯಾಧಾರಿತ ರಾಜ್ಯಮಟ್ಟದ ಸ್ಪರ್ಧೆಯಾಗಿದ್ದು ಪ್ರಸಕ್ತ ಸ್ಪರ್ಧೆಯಲ್ಲಿ ರಾಜ್ಯದ ಯಾವುದೇ ಸರಕಾರಿ, ಅನುದಾನಿತ, ಖಾಸಗಿ ಶಾಲಾ ವಿದ್ಯಾರ್ಥಿಗಳಿಗೆ ಭಾಗವಹಿಸಲು ಮುಕ್ತ ಅವಕಾಶವಿದೆ. ಕಾಸರಗೋಡು ಸಹಿತ ಇತರ ಹೊರ ರಾಜ್ಯಗಳ ಶಾಲಾ ವಿದ್ಯಾರ್ಥಿಗಳಿಗೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು ಸ್ಪರ್ಧೆಯಲ್ಲಿ 6 ರಿಂದ 10 ನೇ ತರಗತಿಯೊಳಗಿನ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದಾಗಿದೆ.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಪ್ರಸಕ್ತ ವರ್ಷದಿಂದ ದ.ಕ ಜಿಲ್ಲೆಯ ಒಟ್ಟು 38 ಶಾಲೆಗಳಲ್ಲಿ ಉಚಿತವಾಗಿ ಯಕ್ಷಶಿಕ್ಷಣವನ್ನು ನೀಡುತ್ತಿದ್ದು ಸುಮಾರು 3,000 ವಿದ್ಯಾರ್ಥಿಗಳು ಯಕ್ಷಗಾನ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಆ ವಿದ್ಯಾರ್ಥಿಗಳಿಗೆ ಮತ್ತು ರಾಜ್ಯದ ಯಕ್ಷಗಾನಾಸಕ್ತ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶ ಸಹಿತ ಯಕ್ಷಗಾನ ಕಲೆಯಾಧಾರಿತ ಸ್ಪರ್ಧೆ ಇದಾಗಿದ್ದು ಎಲ್ಲ ಸ್ಪರ್ಧೆಗಳು ಕನ್ನಡ ಭಾಷಾ ಮಾಧ್ಯಮದಲ್ಲಿ ನಡೆಯಲಿದೆ.
ಯಕ್ಷರೂಪಕ ಸ್ಪರ್ಧೆಯಲ್ಲಿ ಯಕ್ಷಧ್ರುವ- ಯಕ್ಷಶಿಕ್ಷಣ ಯೋಜನೆಯಡಿ ಬರುವ ಶಾಲೆಯ ತಂಡಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದು ಉಳಿದ ಸ್ಪರ್ಧೆಗಳಲ್ಲಿ ಬೇರೆಲ್ಲಾ ಶಾಲೆಗಳ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದೆ.
ಪ್ರಸಕ್ತ ಯಕ್ಷಗಾನ ಸ್ಪರ್ಧೆಗಳಲ್ಲಿ ಯಕ್ಷರೂಪಕ ಸ್ಪರ್ಧೆ (ಯಕ್ಷಗಾನದ ವೇಷಭೂಷಣ ಧರಿಸಿ ಯಕ್ಷಗಾನೀಯ ನಾಟ್ಯದೊಂದಿಗೆ ಯಾವುದೇ ಆಖ್ಯಾನಗಳನ್ನು ಪ್ರಸ್ತುತಪಡಿಸಬಹುದಾದ ಸ್ಪರ್ಧೆ), ಯಕ್ಷ ರಸಪ್ರಶ್ನೆ (ಯಕ್ಷಗಾನ ಕಲೆಗೆ ಸಂಬಂಧಿಸಿದ ರಸಪ್ರಶ್ನೆ ಸ್ಪರ್ಧೆ), ಯಕ್ಷಜ್ಞಾನ ಪರೀಕ್ಷಾ ಪಂಥ (ಸ್ಪರ್ಧಾ ಸ್ಥಳದಲ್ಲಿ ತೋರಿಸುವ ಯಕ್ಷಗಾನ ಕಲೆಗೆ ಸಂಬಂಧಿಸಿದ ಪರಿಕರಗಳನ್ನು ಗಮನಿಸಿ ಆ ಬಳಿಕ ನೆನಪಿಸಿ ಗುರುತಿಸುವ ಸ್ಪರ್ಧೆ), ಯಕ್ಷ ಸ್ವಗತ ಮಾತುಗಾರಿಕೆ ಸ್ಪರ್ಧೆ (ಯಕ್ಷಗಾನದಲ್ಲಿ ಬರುವ ಯಾವುದೇ ಪಾತ್ರಗಳ ಪೀಠಿಕೆ ಅಥವಾ ಸ್ವಗತ ಮಾತನಾಡುವ ಸ್ಪರ್ಧೆ) ಯಕ್ಷಲೇಖನ ಸ್ಪರ್ಧೆ (ಯಕ್ಷಗಾನ ಕಲೆಗೆ ಸಂಬಂಧಿಸಿದ ಪ್ರಬಂಧ ಸ್ಪರ್ಧೆ), ಶ್ಲೋಕ ಕಂಠಪಾಠ ಸ್ಪರ್ಧೆ (ಸ್ಪರ್ಧಾ ಸ್ಥಳದಲ್ಲಿ ನೀಡುವ ಶ್ಲೋಕವನ್ನು ಕಂಠಪಾಠ ಮಾಡಿ ಹೇಳುವ ಸ್ಪರ್ಧೆ), ಯಕ್ಷರಂಗು ಮುಖವರ್ಣಿಕೆ ಸ್ಪರ್ಧೆ (ಯಕ್ಷಗಾನ ಬಣ್ಣಗಾರಿಕೆ- ಮುಖವರ್ಣಿಕೆಗೆ ಸಂಬಂಧಿಸಿದ ಸ್ಪರ್ಧೆ) ನಡೆಯಲಿದೆ.
ಯಕ್ಷ ಶಿಕ್ಷಣ ಯೋಜನೆಯ ಒಟ್ಟು 38 ಶಾಲೆಗಳ ಸುಮಾರು 43 ತಂಡಗಳ ನಡುವೆ ಎರಡು ವೇದಿಕೆಗಳಲ್ಲಿ ಯಕ್ಷರೂಪಕ ಸ್ಪರ್ಧೆಯು ನಡೆಯಲಿದ್ದು ಎರಡು ಪ್ರತ್ಯೇಕ ವೇದಿಕೆಗಳ ವಿಜೇತ ತಂಡಕ್ಕೆ ತಲಾ ಪ್ರಥಮ ತಂಡ ಪ್ರಶಸ್ತಿ (30,000/-) ದ್ವಿತೀಯ ತಂಡ ಪ್ರಶಸ್ತಿ (20,000/-) ತೃತೀಯ ತಂಡ ಪ್ರಶಸ್ತಿ (15,000/-) ಯನ್ನು ನೀಡಿ ಗೌರವಿಸಲಿದೆ. ಯಕ್ಷ ರೂಪಕದ ಶಿಸ್ತಿನ ತಂಡಕ್ಕೆ ಶಿಸ್ತಿನ ತಂಡ ಪ್ರಶಸ್ತಿ (10,000/-)ಯನ್ನು ನೀಡಲಿದೆ.
ಇತರ ವೈಯಕ್ತಿಕ ಮತ್ತು ತಂಡ ಸ್ಪರ್ಧೆಯಲ್ಲಿನ ವಿಜೇತ ವಿದ್ಯಾರ್ಥಿಗಳಿಗೆ, ಪ್ರಥಮ- 5,000/-, ದ್ವಿತೀಯ- 3,000/-ತೃತೀಯ- 2,000/- ರೂ ಸಹಿತ ಪ್ರಮಾಣ ಪತ್ರ ನೀಡಿ ಗೌರವಿಸಲಿದೆ. ಭಾಗವಹಿಸುವ ಸ್ಪರ್ಧಾಳುಗಳು ಸಂಬಂಧಪಟ್ಟ ಶಾಲಾ ಮುಖ್ಯೋಪಾಧ್ಯಾಯರಿಂದ ಪ್ರವೇಶ ಪತ್ರ ಹಾಗೂ ದೃಢೀಕರಣ ಪತ್ರ ಸಲ್ಲಿಸಿ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಸ್ಪರ್ಧೆಗೆ ಹೆಸರು ನೋಂದಾಯಿಸಲು 25-01-2024 ಕೊನೆಯ ದಿನಾಂಕವಾಗಿದ್ದು ಹೆಚ್ಚಿನ ಮಾಹಿತಿಗಾಗಿ ಕದ್ರಿ ನವನೀತ ಶೆಟ್ಟಿ (9448123061) ದೀವಿತ್ ಎಸ್ ಕೆ ಪೆರಾಡಿ (9845109989) ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ಸುದ್ದಿ ಗೋಷ್ಟಿಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ CA ಸುದೇಶ್ ರೈ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ಹಾಗೂ ಯಕ್ಷಗಾನ ಶಿಕ್ಷಕ ದೀವಿತ್ ಎಸ್ ಕೆ ಪೆರಾಡಿ ಉಪಸ್ಥಿತರಿದ್ದರು.