ಯಕ್ಷರಂಗದ ಖ್ಯಾತಿಯ ಧರ್ಮಸ್ಥಳ ಮೇಳದ  ಹಿರಿಯ ಕಲಾವಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಶ್ರೀಧರ್ ಭಂಡಾರಿ (73 ವ) ಅವರು ಇಂದು ಮುಂಜಾನೆ ನಿಧನ ಹೊಂದಿದರು.

ಧರ್ಮಸ್ಥಳ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಪುತ್ತೂರು ಶ್ರೀಧರ ಭಂಡಾರಿಯವರ ಅಭಿಮನ್ಯು ಪಾತ್ರ ಭಾರಿ ಪ್ರಸಿದ್ಧಿ ಪಡೆದಿತ್ತು. ರಂಗಸ್ಥಳದಲ್ಲಿ ಚುರುಕಿನ, ವೇಗದ ನಡೆಯಿಂದ ಅವರಿಗೆ ಸಿಡಿಲಮರಿ ಎಂಬ ಬಿರುದು ಒಲಿದಿತ್ತು. ಒಮ್ಮೆಗೆ 200ರಿಂದ 250ರಷ್ಟು ಧೀಂಗಿಣ ಹಾಕುತ್ತಿದ್ದ ಶ್ರೀಧರ ಭಂಡಾರಿ ಅವರು ಬಭ್ರುವಾಹನ, ಅಶ್ವತ್ಥಾಮ, ಕುಶ, ಭಾರ್ಗವ ಮುಂತಾದ ಪಾತ್ರಗಳಲ್ಲಿ ಸೈ ಎನಿಸಿದ್ದರು.

ಶ್ರೀಧರ ಭಂಡಾರಿಯವರು ತಮ್ಮ 62 ನೆಯ ವಯಸ್ಸಿನಲ್ಲಿ ಖಾಸಗಿ ಸುದ್ದಿವಾಹಿನಿಯ ‘ಶಭಾಶ್ ಇಂಡಿಯಾ’ ಕಾರ್ಯಕ್ರಮದಲ್ಲಿ ಭಾಗವಹಿಸಿ 3 ನಿಮಿಷಗಳಲ್ಲಿ 148 ಧೀಂಗಿಣಗಳನ್ನು ಹೊಡೆದು ದಾಖಲೆ ನಿರ್ಮಿಸಿದ್ದರು.

ಯಕ್ಷಗಾನ ಸೇವೆಗಾಗಿ ಪುತ್ತೂರು ಶ್ರೀಧರ ಭಂಡಾರಿಯವರಿಗೆ ಅಮೇರಿಕಾದ ಯುನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಈ ಗೌರವಕ್ಕೆ ವಿಶ್ವದಾದ್ಯಂತ ಆಯ್ಕೆಯಾದ ಕೇವಲ 35 ಜನರಲ್ಲಿ ಪುತ್ತೂರು ಶ್ರೀಧರ ಭಂಡಾರಿ ಓರ್ವರು.

ಮೃತರು ಪತ್ನಿ ಉಷಾ ಭಂಡಾರಿ, ಪುತ್ರಿಯರಾದ ಕೋಕಿಲ, ಶಾಂತಲಾ, ಅನಿಲ ಹಾಗೂ ಪುತ್ರ ದೇವಿ ಪ್ರಕಾಶರನ್ನು ಅಗಲಿದ್ದಾರೆ.

Share This