ಒಂದು ಯಕ್ಷಗಾನ ಪ್ರದರ್ಶನವು ಯಶಸ್ವಿಯಾಗಿ ಸಂಪನ್ನವಾಗಬೇಕಾದರೆ ಅದರಲ್ಲಿ ಪ್ರಸಂಗ ಸಾಹಿತ್ಯದ ಪಾತ್ರ ಬಹಳ ದೊಡ್ಡದು. ಪ್ರಸಂಗ ಸಾಹಿತ್ಯವು ಯಕ್ಷಗಾನದ ಮುಖ್ಯ ಭಾಗವಾಗಿ, ಅದರ ಜೀವಾಳವಾಗಿ ರಂಗಭೂಮಿಯ ಆಧಾರ ಪಠ್ಯವಾಗಿದೆ. ಹಲವು ಶತಮಾನಗಳಿಂದ ಯಕ್ಷಗಾನದಲ್ಲಿ ಕೃತಿಗಳು ರಚಿಸಲ್ಪಡುತ್ತಿದ್ದು, ಇದರ ಹಿಂದೆ ನೂರಾರು ಪ್ರಸಂಗಕರ್ತರ ಶ್ರಮ ಅಡಕವಾಗಿದೆ. ಇವರುಗಳು ಕಾಲಕ್ಕೆ ಸರಿಯಾಗಿ ಪ್ರಸಂಗಗಳನ್ನು ರಚಿಸುತ್ತ ಯಕ್ಷಗಾನವನ್ನು ಇಂದಿಗೂ ಜೀವಂತವಾಗಿಡುವಲ್ಲಿ ಸ್ಮರಣೀಯವಾದ ಕಾರ್ಯವನ್ನು ಮಾಡುತ್ತಿದ್ದಾರೆ. ಇದರಲ್ಲಿ ಯಕ್ಷಗಾನದ ಅತ್ಯುನ್ನತ ಪ್ರಶಸ್ತಿಯಾದ ಕರ್ನಾಟಕ ಯಕ್ಷಗಾನ ಅಕಾಡೆಮಿ ಕೊಡಮಾಡುವ ‘ಪಾರ್ತಿಸುಬ್ಬ’ ರಾಜ್ಯ ಪ್ರಶಸ್ತಿಗೆ ಭಾಜನರಾದ ಶ್ರೀಧರ್ ಡಿ.ಎಸ್ ಅವರು ಕೂಡ ಒಬ್ಬರು.

ಶ್ರೀಧರ್ ಅವರದ್ದು ಬಹುಮುಖೀ ಕಲಾ ವ್ಯಕ್ತಿತ್ವ. ಪ್ರಸಂಗಕರ್ತೃ,ಅರ್ಥಧಾರಿ,ಕಾದಂಬರಿಕಾರ,ಚಿಂತಕ ,ವಾಗ್ಮಿ, ಲೇಖಕ, ಉಪನ್ಯಾಸಕ, ಸಂಘಟಕ ಹೀಗೆ ವೈವಿಧ್ಯಮಯವಾದ ಕ್ಷೇತ್ರಗಳಿಗೆ ತಮ್ಮನ್ನು ಸಮರ್ಪಿಸಿಕೊಂಡು ಅಗಾಧ ವೃಕ್ಷದಂತೆ ಬೆಳೆದವರು. ಸುಮಾರು ಐದು ದಶಕಗಳ ಕಾಲ ಯಕ್ಷಗಾನ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಇಂದು ಯಕ್ಷಗಾನದ ಸಂಪನ್ಮೂಲ ವ್ಯಕ್ತಿಯಾಗಿ ಮಾನ್ಯತೆಯನ್ನು ಹೊಂದುವುದರ ಜೊತೆಗೆ ಒಬ್ಬ ಪ್ರಸಂಗಕರ್ತರಾಗಿ ಸಾಧಿಸಿದ ಎತ್ತರ, ಮನ್ನಣೆಗಳು ಅದ್ವಿತೀಯವೆನಿಸುತ್ತವೆ. ಅವರ ಯಕ್ಷಸಾಹಿತ್ಯದ ಚಿಂತನೆಗಳು, ನೋಟಗಳು ಮುಂದಿನ ತಲೆಮಾರಿಗೊಂದು ದಾರಿದೀವಿಗೆಯಾಗಿ ಕೈಹಿಡಿದು ನಡೆಸುತ್ತವೆ. ಮಲೆನಾಡಿನ ಕುಗ್ರಾಮ ದರೆಮನೆಯಿಂದ ಪಾರ್ತಿಸುಬ್ಬ ಪ್ರಶಸ್ತಿಯವರೆಗೆ ಸಾಗಿ ಬಂದ ಅವರ ಸಾಧನೆಯ ಹಾದಿಯನ್ನು, ಜೀವನಾನುಭವನ್ನು ದಾಖಲಿಸುವ ಪ್ರಯತ್ನವಾಗಿ ಈ ‘ಯಕ್ಷಶ್ರೀಧರ’ ಎಂಬ ಗೌರವ ಗ್ರಂಥವನ್ನು ನಿಮ್ಮ ಮುಂದೆ ತಂದಿದ್ದೇವೆ.

ಒಬ್ಬ ವ್ಯಕ್ತಿಯನ್ನು ಆತನ ಯಶಸ್ಸಿನ ಆಧಾರದ ಮೇಲೆ, ಅಲಂಕರಿಸಿದ ಸ್ಥಾನಗಳ ಆಧಾರದ ಮೇಲೆ ಅಳೆಯುವುದು ಪ್ರಪಂಚದ ರೀತಿ. ನಡೆದು ಬಂದ ಹಾದಿಯತ್ತ ಗಮನ ಹರಿಸುವವರು ಕಡಿಮೆಯೇ. ಶ್ರೀಧರರ ಬಾಲ್ಯ-ಯೌವನ ಕಾಲದ ಕಡು ಬಡತನ, ಜ್ಞಾನಕ್ಕಾಗಿ ಹಂಬಲಿಸಿದ ಹಾದಿಯಲ್ಲಿ ಇದ್ದ ಅಡಚಣೆಗಳು ಸಾಮಾನ್ಯದ್ದಲ್ಲ. ಮನುಷ್ಯ ಸಾಧನೆಯ ಶಿಖರವನ್ನೇರಿ ನಿಂತು ಹಿಂತಿರುಗಿ ನೋಡಿದಾಗ ಈ ಅಡೆತಡೆಗಳೆಲ್ಲವೂ ಅನುಭವದಂತೆ, ಶಿಲ್ಪಿಯ ಏಟಿನಂತೆ ಕಂಡುಬರುವುದೇ ಬದುಕಿನ ಧನಾತ್ಮಕತೆಯ ಸಂಕೇತ. ಈ ಪುಸ್ತಕದಲ್ಲಿನ ಲೇಖನಗಳನ್ನು ಓದುತ್ತಾ ಶ್ರೀಧರರ ಸಾಧನೆಯ ಜೊತೆಗೆ ಯಶಸ್ಸಿನ ದಾರಿ ರೂಪುಗೊಂಡ ಬಗೆಯೂ ತಿಳಿಯುತ್ತದೆ. ಸಂಬಂಧಿಕರ-ಸ್ನೇಹಿತರ ಅಭಿಪ್ರಾಯಗಳನ್ನು ಕಲೆ ಹಾಕುತ್ತಾ ನಾವು ಕಣ್ಣೀರಾಗಿದ್ದೇವೆ. ಲೋಕದ ದೃಷ್ಟಿಯಲ್ಲಿ ಸಣ್ಣದು ಮತ್ತು ದೊಡ್ಡದು ಎಂದು ಪರಿಗಣಿಸಲ್ಪಡುವ ಎಲ್ಲಾ ಕಾರ್ಯಗಳನ್ನೂ ಏಕಶ್ರದ್ಧೆಯಿಂದ ನಿರಂತರವಾಗಿ ಮಾಡುವುದೇ ನಿಜವಾದ ಸಾಧನೆ. ಆ ನಿರಂತರತೆಯನ್ನು ಉಳಿಸಿಕೊಂಡದ್ದೇ ಶ್ರೀಧರರ ಸಾಧಕ ಪ್ರವೃತ್ತಿಯ ಮೂಲಧಾತು ಎಂಬುದನ್ನು ಇಲ್ಲಿನ ಎಲ್ಲಾ ಬರಹಗಳು ಒಟ್ಟಂದದಲ್ಲಿ ಧ್ವನಿಸುತ್ತವೆ.

ರವಿ ಮಡೋಡಿ, ಸುಧಾಕಿರಣ ಅಧಿಕಶ್ರೇಣಿ, ಶ್ರೀನಿಧಿ ಡಿ.ಎಸ್ ಹಾಗೂ ಶ್ರೀಕಲಾ ಡಿ.ಎಸ್… ಹೀಗೆ ನಾವು ನಾಲ್ಕು ಮಂದಿ ಸೇರಿಕೊಂಡು ಈ ಯೋಜನೆಯನ್ನು ಮೇ 2021ರಲ್ಲಿ ಕೈಗೆತ್ತಿಕೊಂಡೆವು. ಸಂಪೂರ್ಣ ರೂಪುರೇಷೆಯ ಚರ್ಚೆಯಾದ ಬಳಿಕ ಲೇಖಕರ ಆಯ್ಕೆಯನ್ನು ಮಾಡಿ, ನಮ್ಮ ಯೋಜನೆಯ ಉದ್ದೇಶಗಳನ್ನು ತಿಳಿಸಿ ಲೇಖನವನ್ನು ಬರೆದುಕೊಂಡುವಂತೆ ವಿನಂತಿಸಿಕೊಂಡೆವು. ಎಲ್ಲರೂ ಸಂತೋಷದಿಂದ ಒಪ್ಪಿದರು. ಇಷ್ಟಾದರೂ ಶ್ರೀಧರರಿಗೆ ಮಾತ್ರ ಪುಸ್ತಕ ಹೊರತರುವ ವಿಚಾರ ತಿಳಿದಿರಲಿಲ್ಲ! ಪುಸ್ತಕ ಹೊರಬಂದು ಅಭಿನಂದನಾ ಸಮಾರಂಭಕ್ಕೆ ಈ ‘ರಹಸ್ಯ ಕಾರ್ಯಾಚರಣೆ’ಯ ಗುಟ್ಟು ರಟ್ಟಾಗಲಿ ಎಂಬ ನಮ್ಮ ಆಶಯವನ್ನು ಈಡೇರಿಸಿಕೊಳ್ಳಲಾಗಲಿಲ್ಲ. ಆಗಸ್ಟ್ 25 ಶ್ರೀಧರರ ಹುಟ್ಟುಹಬ್ಬ. ಆ ದಿನ ಗೌರವ ಗ್ರಂಥದ ಕುರಿತು ಅವರಿಗೆ ಅಧಿಕೃತವಾಗಿ ತಿಳಿಸುವಂತಾಯಿತು. “ನನ್ನ ಬಗ್ಗೆ ಹೇಳುವಂಥದ್ದು ಏನಿದೆ? ಅದರಿಂದ ಆಗುವುದಾದರೂ ಏನು? ಸುಮ್ಮನೆ ಇವೆಲ್ಲಾ ಬೇಡವಿತ್ತು” ಎಂದದ್ದು ಅವರ ಸೌಜನ್ಯ. ಆದರೆ ನಾವು ಮುಂದುವರಿಯುವುದು ಖಚಿತವಾಗಿದ್ದ ಕಾರಣ ನಮ್ಮ ಉತ್ಸಾಹವನ್ನು ಕಂಡು ಒಪ್ಪಿ ಹರಸಿದರು.

ಸುಮಾರು ಆರು ತಿಂಗಳ ಕಾಲ ಈ ಕಾಯಕದಲ್ಲಿ ನಿರತವಾಗಿ ಪುಸ್ತಕವನ್ನು ಈಗ ನಿಮ್ಮ ಮುಂದಿಡುತ್ತಿದ್ದೇವೆ. ನಮ್ಮ ಕಾರ್ಯಕ್ಕೆ ಸಹಕರಿಸಿದವರು ಹಲವರು. ಅವರೆಲ್ಲರನ್ನು ಸ್ಮರಿಸಿಕೊಳ್ಳುವುದು ನಮ್ಮ ಕರ್ತವ್ಯವೆಂದು ಭಾವಿಸುತ್ತೇವೆ. ಯಕ್ಷಗಾನದ ಪಾರ್ತಿಸುಬ್ಬ ಪ್ರಶಸ್ತಿಗೆ ಭಾಜನರಾದ, ಬಹುಶ್ರುತ ವಿದ್ವಾಂಸರಾದ ಶ್ರೀಯುತ ಪ್ರಭಾಕರ ಜೋಶಿಯವರು ಶ್ರೀಧರರ ಮನೆಗೇ ತೆರಳಿ ಅತ್ಯಂತ ಪ್ರೀತಿಯಿಂದ ಸಂದರ್ಶನವನ್ನು ನಡೆಸಿಕೊಟ್ಟಿದ್ದಾರೆ. ಅವರಿಗೆ ವಿಶೇಷ ಧನ್ಯವಾದಗಳು. ಪುಸ್ತಕಕ್ಕೆ ಬೇಕಾದ ಲೇಖನವನ್ನು ಸಕಾಲದಲ್ಲಿ ಬರೆದುಕೊಟ್ಟ ಎಲ್ಲ ಮಹನೀಯರಿಗೂ ನಮ್ಮ ವಂದನೆಗಳು. ಶ್ರೀಧರರ ಬದುಕಿನ ಹಾದಿಯಲ್ಲಿ ಬೇರೆ ಬೇರೆ ಕಾಲಘಟ್ಟದಲ್ಲಿ ಜೊತೆಗಿದ್ದ-ಸಹಕರಿಸಿದ-ಬೆಳೆಸಿದ ಅನೇಕ ಬಂಧು-ಮಿತ್ರರು ತಮ್ಮ ಅಭಿಪ್ರಾಯಗಳನ್ನು ಅತ್ಯಂತ ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ. ಅವರಿಗೆ ನಮ್ಮ ನಮನ.

ಪುಸ್ತಕವನ್ನು ಸುಂದರವಾಗಿ ವಿನ್ಯಾಸಗೊಳಿಸಿದ ಸ್ವತಃ ಅತ್ಯುತ್ತಮ ಬರಹಗಾರರೂ ಆದ ನಾಗರಾಜ ವೈದ್ಯ ಅವರಿಗೆ ಧನ್ಯವಾದ. ಚಂದದ ರೇಖಾಚಿತ್ರಗಳನ್ನು ಬಿಡಿಸಿಕೊಟ್ಟ ಅದ್ಭುತ ಕಲಾವಿದ ಸತೀಶ್ ಯಲ್ಲಾಪುರ ಅವರಿಗೆ ಆಭಾರಿ. ‘ಯಕ್ಷಶ್ರೀಧರ’ ಲಾಂಛನವನ್ನು ತಯಾರಿಸಿದ ಶಾಶ್ವತ್ ಹೆಗಡೆ ತ್ಯಾಗಲಿ ಅವರಿಗೆ ಧನ್ಯವಾದ. ಆಕರ್ಷಣೀಯ ಮುಖಪುಟ ಛಾಯಾಚಿತ್ರವನ್ನು ಒದಗಿಸಿದ ಯಕ್ಷಗಾನ ಕಲಾವಿದರೂ, ಛಾಯಾಚಿತ್ರ ಪತ್ರಕರ್ತರೂ ಆಗಿರುವ ಸುಧಾಕರ ಜೈನ್ ಹೊಸಬೆಟ್ಟುಗುತ್ತು ಇವರಿಗೆ ನಮನ. ಈ ಪುಸ್ತಕಕ್ಕೆ ಡಿಟಿಪಿ ಮಾಡಿಕೊಟ್ಟ ಶ್ರೀಮತಿ ಸುಮಾ ಸುಧಾಕಿರಣ್ ಅಧಿಕಶ್ರೇಣಿ, ಶ್ರೀಮತಿ ವಸುಮತಿ ಜಿ ಹಾಗೂ ಲೇಖನವನ್ನು ಪರಿಶೀಲಿಸಿಕೊಟ್ಟ ಶ್ರೀಮತಿ ಅಶ್ವಿನಿ ಹೊದಲ ಅವರಿಗೆ ನಮ್ಮ ಕೃತಜ್ಞತೆಗಳು. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಾಯ ಮತ್ತು ಸಹಕಾರವನ್ನು ನೀಡಿದ ಸಮಸ್ತರಿಗೂ ನಮ್ಮ ಅಭಿವಂದನೆಗಳು.

ಈ ಎಲ್ಲಾ ಕಾರ್ಯಗಳನ್ನು ಸುಲಲಿತವಾಗಿ ನಡೆಸಲು ಶಕ್ತಿ-ಯುಕ್ತಿಗಳ ಕರುಣಿಸಿದ ಪ್ರಕೃತಿಗೆ ನಮನ…

ಇದೇ ಶನಿವಾರ ಡಿಸೆಂಬರ್ 11 ರಂದು ಶ್ರೀಧರ ಡಿ.ಎಸ್ ಅವರ ಹುಟ್ಟೂರಾದ, ಶಿವಮೊಗ್ಗ ಜಿಲ್ಲೆಯ ನಿಟ್ಟೂರಿನಲ್ಲಿ ಗೌರವ ಗ್ರಂಥವೊಂದನ್ನು ಬಿಡುಗಡೆ ಮಾಡುತ್ತಿದ್ದೇವೆ. ಈ ಕಾರ್ಯಕ್ರಮಕ್ಕೆ ನಿಮಗೆಲ್ಲ ಸ್ವಾಗತ.

error: Content is protected !!
Share This