ಎರಡನೇ ಜಾಗತಿಕ ಯುದ್ಧದ ಕಾಲ. ಈ ಗಿನಂತೆಯೇ ತುರ್ತು ಪರಿಸ್ಥಿತಿ.. 1940-41ರ ಸಮಯ. ಆಗ ನಮ್ಮೂರು ಕುಂಬಳೆ ಮದ್ರಾಸ್ ಪ್ರಾಂತ್ಯದ ಭಾಗ, ದ.ಕ ಜಿಲ್ಲೆಯ ಅಂಗ. ದೇಶಕ್ಕೆ ಯುದ್ಧದ ಬವಣೆಯಾದರೂ ಅದರ ನಿಜವಾದ ಬಿಸಿ ತಟ್ಟಿದ್ದು ಕುಂಬಳೆಗೆ…

ಕಾರಣವೇನೆಂದರೆ ಕುಂಬಳೆಯ ಶಾಂತಿಪಳ್ಳ ಪರಿಸರಲ್ಲಿ ಬ್ರಿಟೀಷ್ ಸೇನೆ ಬೀಡುಬಿಟ್ಟು ತಮ್ಮಶಸ್ತ್ರಸಂಗ್ರಹಗಳ ದಾಸ್ತಾನಿರಿಸಿದ್ದುವು. ಇದರಿಂದಾಗಿ ಶಾಂತಿಪಳ್ಳದಿಂದ ಅನಂತಪುರ ತನಕದ 8ಕಿ.ಮೀ ವ್ಯಾಪ್ತಿಯ ಜನರು ತಮ್ಮ ಮನೆ, ಮಠ ತೊರೆದು ಸ್ಥಳಖಾಲಿ ಮಾಡಬೇಕೆಂದು ಮಂಗಳೂರು ಜಿಲ್ಲಾಧಿಕಾರಿ ಆದೇಶಿಸಿದರು. ಅಲ್ಲದೇ ಯುದ್ಧದ ಪರಿಣಾಮ ಉಂಟಾಗುವ ಕಷ್ಟನಷ್ಟ ಭರಿಸಲು ಸಾರ್ವಜನಿಕರಿಂದಲೇ ದೇಣಿಗೆ ಸಂಗ್ರಹಿಸಲು ಮದ್ರಾಸ್ ಗವರ್ನರ್ ಆದೇಶಿಸಿದರು. ಆಗಿನ 1ಸಾವಿರ ರೂ. ಧನಸಂಗ್ರಹ ಮಾಡಿಕೊಡಬೇಕೆಂಬುದು ಆದೇಶ. ಧನಸಂಗ್ರಹಕ್ಕೆ ಬೇರ್ಯಾವ ಉಪಾಯವೂ ಕಾಣಲಿಲ್ಲ. ಹೀಗಾಗಿ ಕುಂಬಳೆಯಲ್ಲಿ “ಯುದ್ಧ ಸಹಾಯನಿಧಿಗಾಗಿ ತಾಳಮದ್ದಳೆ” ಟಿಕೆಟ್ ಇರಿಸಿ ಏರ್ಪಡಿಸಲಾಯಿತು.

ಸ್ವಾತಂತ್ರ್ಯಪೂರ್ವದ ದಿನ. ಶೇಣಿ,ಸಾಮಗರ ಪ್ರವೇಶ ಆಗಿರಲಿಲ್ಲ. ಕುಂಬಳೆಯ ಆಢ್ಯಮನೆತನವಾದ ಇಚ್ಲಂಪಾಡಿ ಕುಟುಂಬದ ಚಿಕ್ಕಪ್ಪ ಭಂಡಾರಿ ಯಾನೆ ಐ. ಸಿ ಭಂಡಾರಿಗಳ ನೇತೃತ್ವದಲ್ಲಿ ಕುಂಬಳೆ ಹೈಸ್ಕೂಲು ಬಳಿ ಮಡಲಿನ ಚಪ್ಪರಹಾಕಿ ,ಟೆಂಟ್ ನಿರ್ಮಿಸಿ ತಾಳಮದ್ದಳೆಗೆ ಸೌಕರ್ಯ ಒದಗಿಸಲಾಯಿತು.

ತಾಳಮದ್ದಳೆಯ ಚರಿತ್ರೆಯಲ್ಲೇ ಮೊದಲ ಟಿಕೇಟಿನ ತಾಳಮದ್ದಳೆ ಇದೇ ಪ್ರಥಮ. ನಾಲ್ಕಾಣೆ, ಯೆರಡಾಣೆ, ಯೆಂಟಾಣೆಗಳ ಪ್ರವೇಶಶುಲ್ಕ. ಊರಿಡೀ ಪ್ರಚಾರವಾಯ್ತು. ಶ್ರೀಮಂತರ ಮನೆಗೆ ತೆರಳಿ ಧನಸಂಗ್ರಹವೂ ನಡೆಯಿತು.

ಮಂಗಳೂರಿನಲ್ಲಿ ವಕೀಲರಾಗಿ ಪ್ರಸಿದ್ಧರಾಗಿ, ಬಳಿಕ ತಾಳಮದ್ದಳೆಯನ್ನು ದೇಶದಾದ್ಯಂತ ಕೊಂಡೊಯ್ದು ಪರಿಚಯಿಸಿ ಕೀರ್ತಿಶೇಷರಾದ ಕುಬಣೂರು ಬಾಲಕೃಷ್ಣರಾವ್ ಸಾರಥ್ಯದಲ್ಲಿ ಪಂಚವಟಿ ಪ್ರಸಂಗದ ತಾಳಮದ್ದಳೆ ನಡೆಯಿತು. ಮುಮ್ಮೇಳದಲ್ಲಿ ಪೊಳಲಿ ಶಾಸ್ತ್ರಿ, ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್, ಅರ್ಕುಳ ಸುಬ್ರಾಯಾಚಾರ್ಯ, ಪ್ರೊ. ಎಂ.ಆರ್.ಶಾಸ್ತ್ರಿ, ಹಿಮ್ಮೇಳದಲ್ಲಿ ಕೋಟಕುಂಜ ಮಹಾಬಲ ನೋಂಡ, ಏರಿಕ್ಕಳ ಈಶ್ವರಪ್ಪಯ್ಯ. ಕುಬಣೂರು ಬಾಲಕೃಷ್ಣರಾಯರು ದೊಡ್ಡ ಸೆಟ್ಟಿನ ತಾಳಮದ್ದಳೆಯಲ್ಲಿ ಅರ್ಥ ಹೇಳಿದ್ದು ಅದೇ ಮೊದಲು.

ಟಿಕೇಟಿನ ಕೂಟವಾದರೂ ಭಾರೀ ಜನ ಸೇರಿದ್ದರು. ಅದು ಆ ಕಾಲದ ಸುಪ್ರಸಿದ್ದ ವಾಗ್ಮಿಯಾದ ನಾರಾಯಣ ಕಿಲ್ಲೆಯವರಿಲ್ಲದೇ ನಡೆದ ಕೂಟ. ಕಿಲ್ಲೆಯವರಾಗ ಸ್ವಾತಂತ್ರ್ಯ ಸಂಗ್ರಾಮದಲ್ಲಿದ್ದರು. ಕಿಲ್ಲೆಯವರಿಲ್ಲದೆಯೂ ಕೂಟ ಭರ್ಜರಿ ಯಶಸ್ಸು ಕಂಡಿದೆಯೆಂದು ಜನರು ಕೊಂಡಾಡಿದರು. ಇದೊಂದು ಚರ್ಚಿತ ಸುದ್ದಿಯಾಯಿತು.

ಇದರಿಂದಲೇ ಪ್ರಚೋದಿತರಾಗಿ ಅದೇ ವರ್ಷ ಅಂಬಿಲಡ್ಕದಲ್ಲಿ ಕಿಲ್ಲೆಯವರನ್ನು ಕರೆಸಿ ಇಚ್ಲಂಪಾಡಿಯವರಿಗೆ ಸಡ್ಡು ಹೊಡೆದು ಬಾಡೂರು ಜಗನ್ನಾಥ ರೈ ನೇತೃತ್ವದಲ್ಲಿ ಮತ್ತೊಂದು ಉಚಿತ ತಾಳಮದ್ದಳೆಯೂ ನಡೆಯಿತು.ಹೀಗೆ 80 ವರ್ಷದ ಹಿಂದಣ ಕತೆಯನ್ನು 2012ರಲ್ಲಿ ನನಗೆ ಹೇಳಿದವರು ಸಂಗೀತವಿದ್ವಾನ್ ಕೋಟೆಕ್ಕಾರು ಬಾಬು ರೈ. 2012ರ ಅಕ್ಟೋಬರ್ ಕಣಿಪುರ ಸಂಚಿಕೆಯಲ್ಲಿದು ಪ್ರಕಟವೂ ಆಗಿದೆ.

ಈಗ ಮತ್ತೆ ಅಂತದೇ ವಾತಾವರಣ ಬಂದಿದೆ. 3ನೇ ಜಾಗತಿಕಯುದ್ಧವೆಂದು ಕೊರೋನಾ ಪ್ರತಿರೋಧವನ್ನು ಬಿಂಬಿಸಲಾಗುತ್ತಿದೆ. ಮನುಷ್ಯರೆಲ್ಲರೂ ಮನೆಯೊಳಗೆ ಬಂಧಿ. ಸರಕಾರ ನಿಧಿ ಯಾಚಿಸುತ್ತಿದೆ….

  • ಎಂ. ನಾ. ಚಂಬಲ್ತಿಮಾರ್
error: Content is protected !!
Share This