ನಿನ್ನೆ 22-12-2022ರಂದು ಕಟೀಲಿನ ಸರಸ್ವತಿ ಸದನದಲ್ಲಿ ತ್ರಿಜನ್ಮ ಮೋಕ್ಷದ ಶಿಶಿಪಾಲನ ಪಾತ್ರದಲ್ಲಿರುವಾಗಲೇ ಕಲಾವಿದ ಪ್ರಸಂಗಕರ್ತ ಗುರುವಪ್ಪ ಬಾಯಾರು (58) ನಿಧನ ಹೊಂದಿದರು. ಕಾಸರಗೋಡು ಸಮೀಪದ ಬಾಯಾರಿನ ಕರಿಯ ದೇವಾಡಿಗ – ಸರಸ್ವತೀ ದಂಪತಿ ಮಗನಾದ ಗುರುವಪ್ಪರು 10ನೇ ತರಗತಿಯವರೆಗೆ ಓದಿ ಉಪಜೀವಿತಕ್ಕೆ ಹೋಟೆಲ್‍ನಲ್ಲಿ ಉದ್ಯೋಗಿಯಾಗಿದ್ದರು. ಎಳವೆಯಲ್ಲೇ ಯಕ್ಷಗಾನಾಸಕ್ತರಾದ ಇವರು ಕಾವೂರು ಕೇಶವರಿಂದ ಯಕ್ಷಗಾನ ನಾಟ್ಯಭ್ಯಾಸ ಮಾಡಿದ್ದರು. ಡಾ. ಶಿಮಂತೂರು ನಾರಾಯಣ ಶೆಟ್ಟರಲ್ಲಿ ಛಂದಸ್ಸು ಅಧ್ಯಯನ ಮಾಡಿ ತುಳುವಿನಲ್ಲಿ ಅತ್ಯಂತ ಪ್ರಸಿದ್ಧಿ ಪಡೆದ ಗಟ್ಟದ ಗರುಡೆ ಸಹಿ10ಕ್ಕೂ ಹೆಚ್ಚು ಪ್ರಸಂಗಗಳನ್ನು ರಚಿಸಿದ್ದಾರೆ. ತೆಂಕುತಿಟ್ಟಿನ ಕುಂಬಳೆ, ಮಂಗಳಾದೇವಿ ಹಾಗೂ ಪುತ್ತೂರು ಮೇಳಗಳಲ್ಲಿ ಇವರ ಪ್ರಸಂಗಗಳು ಜಯಭೇರಿ ಬಾರಿಸಿದ್ದವು. ಗಣೇಶಪುರ, ಸಸಿಹಿತ್ಲು, ಬಪ್ಪನಾಡು ಮೇಳಗಳಲ್ಲಿ ತಿರುಗಾಟ ಮಾಡಿ ಕಿರೀಟ ವೇಷಧಾರಿಯಾಗಿ ಗುರುತಿಸಿಕೊಂಡಿದ್ದರು. ಕಳೆದ 9 ವರ್ಷಗಳಿಂದ ಕಟೀಲು ಮೇಳದಲ್ಲಿ ವೇಷಧಾರಿಯಾಗಿ ಸೇವೆಸಲ್ಲಿಸುತ್ತಿದ್ದರು. ದೇವಿ ಮಹಾತ್ಮೆಯ ಮಧುಕೈಟಪ, ದೇವೇಂದ್ರ, ವಿದ್ಯುನ್ಮಾಲಿ, ಶತೃಘ್ನ ಮೊದಲಾದ ಪಾತ್ರಗಳು ಇವರಿಗೆ ವಿಶೇಷ ಕೀರ್ತಿ ತಂದಿವೆ. ಹೆಂಡತಿ ಮತ್ತು ನಾಲ್ಕು ಗಂಡು ಮಕ್ಕಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

error: Content is protected !!
Share This