ಯಕ್ಷಗಾನ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದ ಅಜೆಕಾರು ಕಲಾಭಿಮಾನಿ ಬಳಗ ಇದೀಗ ಇಪ್ಪತ್ತೊಂದು ವರ್ಷಗಳನ್ನು ಪೂರೈಸುತ್ತಿದೆ. ಈ ಸಂದರ್ಭದಲ್ಲಿ ಇದರ ಸ್ಥಾಪಕ ಸಂಚಾಲಕ, ಕಲಾವಿದ, ಸಂಘಟಕ ಶ್ರೀ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರನ್ನು ಮಾತಾಡಿಸಿದಾಗ ಅವರಿಂದ ದೊರೆತ ಉತ್ತರಗಳ ಸಾರವೇ ಪ್ರಸ್ತುತ ಲೇಖನ.

ಮುಂಬಯಿ ನಗರ ಸೇರಿದ ಶೆಟ್ಟರು ಕ್ಯಾಂಟೀನ್ ನಡೆಸಿಕೊಂಡು, ಹಲವಾರು ಕಡೆ ಕೆಲಸ ಮಾಡಿಕೊಳ್ಳುತ್ತಲೇ ತನ್ನ ಆಸಕ್ತಿಯ ಯಕ್ಷಗಾನವನ್ನೂ ಬಿಟ್ಟಿರಲಾಗದೆ ಅವಕಾಶ ಸಿಕ್ಕಾಗಲೆಲ್ಲಾ ಇಲ್ಲಿನ ಮೇಳಗಳಲ್ಲಿ ವೇಷ ಮಾಡತೊಡಗಿದರು. ಬಾಲ್ಯದಿಂದಲೂ ಯಕ್ಷಗಾನ ಕಲೆಯ ಕುರಿತಂತೆ ತೀವ್ರ ಸೆಳೆತ ಒಲವು ಹೊಂದಿದ್ದ ಬಾಲಕೃಷ್ಣ ಶೆಟ್ಟರು ಊರಿಗೆ ಬರುತ್ತಿದ್ದ ಯಕ್ಷಗಾನ ಮೇಳಗಳ ಪ್ರದರ್ಶನಗಳನ್ನು ನೋಡುತ್ತಲೇ ಹಿರಿಯ ಕಲಾವಿದರನೇಕರ ಸಂಪರ್ಕ ಹೊಂದಿ ಯಕ್ಷಗಾನ ಕುರಿತಂತೆ ಅನುಭವ ಸಂಪಾದಿಸಿ ಯಕ್ಷಗಾನ ಕಲಾವಿದನಾಗಬೇಕೆಂಬ ಅದಮ್ಯ ಆಸೆಯನ್ನು ಅದುಮಿಟ್ಟಕೊಳ್ಳಲಾಗದೆ ಪ್ರೌಢ ಶಿಕ್ಷಣ ಮುಗಿಯುತ್ತಲೆ ಊರಿನ ಪ್ರಸಿದ್ಧ ಮೇಳದಲ್ಲಿ ಗೆಜ್ಜೆ ಕಟ್ಟಿ ಕಲಾವಿದನೆಂಬಂತೆ ಗುರುತಿಸಿಕೊಂಡು ಒಂದು ವರ್ಷ ಊರಿನಲ್ಲೆ ತಿರುಗಾಟ ನಡೆಸಿದರು. ಆದರೆ ಆ ಸಮಯದಲ್ಲಿ ಯಕ್ಷಗಾನವನ್ನೇ ನಂಬಿಕೊಂಡು ಜೀವನ ಯಾಪನೆಗೆ ಕುಟುಂಬ ಪೋಷಣೆಗೆ ಆದಾಯ ಸಾಲದೆಂಬ ಸತ್ಯವನ್ನು ಮನಗಂಡ ಬಾಲಣ್ಣ ವಾಣಿಜ್ಯ ನಗರಿ ಮುಂಬಯಿ ಕಡೆ ಮುಖಮಾಡಿದರು.

ಬಳಿಕ ತನ್ನ ಉದ್ಯೋಗ ವ್ಯವಹಾರಗಳ ಮಧ್ಯೆ ಅವಕಾಶ ಸಿಕ್ಕಾಗಲೆಲ್ಲ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸುತ್ತಾ ಪ್ರಸಿದ್ಧಿ ಪಡೆದ ಬಾಲಕೃಷ್ಣ ಶೆಟ್ಟರು ನಗರದ ಹಲವಾರು ಯಕ್ಷಗಾನ ಮೇಳಗಳಲ್ಲಿ ಅತಿಥಿ ಕಲಾವಿದರಾಗಿಯೂ ಭಾಗವಹಿಸುತ್ತಿದ್ದರು. ಅಜೆಕಾರು ಅವರ ಕಲಾಜೀವನದಲ್ಲಿ ಅನೇಕ ಕಲಾಕ್ಷೇತ್ರದ ಅನುಭವಿಗಳು ಅವರಿಗೆ ಗುರು ಸದೃಶರಾಗಿ ಒದಗಿ ಬಂದ ಪರಿಣಾಮ ಬಾಲಕೃಷ್ಣ ಶೆಟ್ಟರು ಯಕ್ಷಗಾನ ಕಲೆಯ ಸರ್ವಾಂಗ ಪರಿಣತಿ ಹೊಂದಿದರು. ತಾನು ಸಂಪಾದಿಸಿದ ಜ್ಞಾನವನ್ನು ಇತರರಿಗೂ ಧಾರೆಯೆರೆದು ಕೊಡಬೇಕೆಂಬ ಸದಾಶಯದಿಂದ ಕಲೆಯ ಬಗ್ಗೆ ಅತೀವ ಆಸಕ್ತಿ ಹೊಂದಿ ಯಕ್ಷಗಾನವನ್ನು ಕಲಿಯಬೇಕು ತಿಳಿಯಬೇಕು ಎಂಬ ಬಯಕೆಯನ್ನು ಹೊಂದಿದ ಯುವಕರಿಗೆ ಹಾಗೂ ಮಕ್ಕಳಿಗೆ ಯಕ್ಷಗಾನ ಹೆಜ್ಜೆ ನಾಟ್ಯ ಮಾತುಗಾರಿಕೆಗಳ ಕುರಿತ ತರಬೇತಿ ನೀಡುತ್ತಲೇ ತನಗರಿವಿಲ್ಲದಂತೆ ಅಜೆಕಾರು ಅವರು ಯಕ್ಷಗಾನ ಕಲಾಗುರು ಎಂಬಂತೆ ಗುರುತಿಸಿಕೊಂಡರು.

ಆ ಹೊತ್ತಿಗೆ ಆಸಲ್ಫ ಗೀತಾಂಬಿಕ ಯಕ್ಷಗಾನ ಮಂಡಳಿಯಲ್ಲಿ ನಮ್ಮೂರಿನ ಯಕ್ಷಗಾನ ಆಸಕ್ತರು ವೇಷ ಮಾಡುತ್ತಿದ್ದರು. ಪ್ರಸಿದ್ಧ ಭಾಗವತರಾದ ಶ್ರೀ ಪೊಲ್ಯ ಲಕ್ಷ್ಮೀ ನಾರಾಯಣ ಶೆಟ್ಟರು ಮೇಳದ ಭಾಗವತರು. ಅಜೆಕಾರು ಬಾಲಕೃಷ್ಣ ಶೆಟ್ಟರ ಕಲಾ ಪ್ರತಿಭೆ ಆಸಕ್ತಿಗಳನ್ನು ಗಮನಿಸಿದ ಪೊಲ್ಯ ಅವರು ಅಜೆಕಾರು ಅವರನ್ನು ಪ್ರೋತ್ಸಾಹಿಸುತ್ತಿದ್ದರು. ಕಲೆಯ ಕುರಿತ ಮಹತ್ವದ ಮಾಹಿತಿಗಳನ್ನು ಅವರಿಂದ ತಿಳಿದು ಒಬ್ಬ ಪರಿಪೂರ್ಣ ಕಲಾವಿದನೆಂಬಂತೆ ಗುರುತಿಸಿಕೊಂಡರು. ಬಾಲಕೃಷ್ಣ ಶೆಟ್ಟಿ ಅವರು ಸ್ವಯಂಘೋಷಿತ ಕಲಾಗುರುವಾಗಿ ಬೆಳೆದಿಲ್ಲ. ಅವರಿಂದ ಯಕ್ಷಗಾನದ ಹೆಜ್ಜೆ ಕಲಿತ ಕಲಾಭಿಮಾನಿಗಳು ಪ್ರೀತಿ ಅಭಿಮಾನಗಳಿಂದ ಹಾಗೆ ಕರೆದರು. ಮುಂದೆ ಮುಂಬಯಿ ನಗರದ ಯಕ್ಷಗಾನ ಕಲಾಪ್ರೇಮಿಗಳ ಮನ ತಣಿಸಲು ಯಕ್ಷಗಾನ ಹಾಗೂ ತಾಳಮದ್ದಳೆ ಕ್ಷೇತ್ರದಲ್ಲಿ ಕೀರ್ತಿ ಸಂಪಾದಿಸಿದ ಕಲಾವಿದರನ್ನು ಮುಂಬಯಿಗೆ ಕರೆಸಿ ಉತ್ತಮ ಮಟ್ಟದ ತಾಳಮದ್ದಳೆ ಹಾಗೂ ಯಕ್ಷಗಾನ ಕಾರ್ಯಕ್ರಮಗಳನ್ನು ಸಂಯೋಜಿಸತೊಡಗಿದರು. ಮುಂಬಯಿ ನಗರ ಉಪನಗರಗಳಲ್ಲಿ ತಾಳಮದ್ದಳೆ ಕಾರ್ಯಕ್ರಮಗಳು ಜನಮನ ರಂಜಿಸ ತೊಡಗಿದವು. ಇಲ್ಲಿನ ಕಲಾಭಿಮಾನಿ ಉದ್ಯಮಿಗಳು ಸಂಘ ಸಂಸ್ಥೆಗಳು ಸಂಘಟಕರು ಅಜೆಕಾರು ಕಲಾಭಿಮಾನಿ ಬಳಗದ ಸಂಯೋಜನೆಯ ಕಾರ್ಯಕ್ರಮಗಳಿಗೆ ಪ್ರಾಯೋಜಕರಾಗಿ ಸಹಕರಿಸಿ ಪ್ರೋತ್ಸಾಹಿಸಿದರು. ಹೀಗೆ ಕೆಲವೇ ವರ್ಷಗಳಲ್ಲಿ ಅಜೆಕಾರು ಕಲಾಭಿಮಾನಿ ಬಳಗ ನಗರದಲ್ಲಿ ಮನೆಮಾತಾಯಿತು.

ನಂತರದ ದಿನಗಳಲ್ಲಿ ಮುಂಬಯಿ ನಗರದ ಅನೇಕ ಸಂಘ ಸಂಸ್ಥೆಗಳ ಸದಸ್ಯರಿಗೂ ತರಬೇತಿ ನೀಡುವಂತೆ ಬೇಡಿಕೆ ಬಂದಾಗ ಅಜೆಕಾರು ವಿನಯದಿಂದಲೇ ಒಪ್ಪಿಕೊಂಡು ತನಗೆ ತಿಳಿದ ವಿದ್ಯೆಯನ್ನು ಅವರಿಗೆ ಪಾತ್ರ ನಿರ್ವಹಣೆಗಳಿಗೆ ಅಗತ್ಯ ಬೀಳುವ ಹೆಜ್ಜೆ ನಾಟ್ಯ ಹಾವಭಾವ ಮಾತುಗಾರಿಕೆ ಕುರಿತ ತರಬೇತಿ ನೀಡ ತೊಡಗಿದರು. ಕನ್ನಡ ಸಂಘ, ಕಲಾ ಸಂಘಟನೆಗಳು, ಬಂಟರ ಸಂಘ ಹಾಗೂ ಕೆಲವು ಪ್ರಾದೇಶಿಕ ಸಮಿತಿಯ ಸದಸ್ಯರಿಗೆ ಸಂಸ್ಥೆಗಳ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ನಡೆಯುವ ಯಕ್ಷಗಾನ ಪ್ರದರ್ಶನಗಳ ಪಾತ್ರ ನಿರ್ವಹಣೆಗೆ ಬೇಕಾಗುವಷ್ಟು ತರಬೇತಿ ನೀಡಿ ಸಿದ್ಧಗೊಳಿಸತೊಡಗಿದರು. ಆರಂಭದ ವರ್ಷಗಳಲ್ಲಿ ಊರಿನ ಯುವ ಕಲಾವಿರಾಗಿದ್ದ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಕಾವಳಕಟ್ಟೆ ದಿನೇಶ್ ಶೆಟ್ಟಿ, ಬೊಳಂತಿಮೊಗರು ಹರೀಶ್ ಭಟ್, ವಾಸುದೇವ ರಂಗ ಭಟ್, ಶಶಿಕಾಂತ್ ಶೆಟ್ಟಿ ಕಾರ್ಕಳ ಮೊದಲಾದ ಅರ್ಥಧಾರಿಗಳು ಆಗಮಿಸುತ್ತಿದ್ದರೆ ಬಳಿಕ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ, ಸಿದ್ಧಕಟ್ಟೆ ವಿಶ್ವನಾಥ್ ಶೆಟ್ಟಿ, ಭಾಸ್ಕರೈ ಕುಕ್ಕುವಳ್ಳಿ, ಉಜಿರೆ ಅಶೋಕ್ ಭಟ್, ಕೋಳ್ಯೂರು ರಾಮಚಂದ್ರ ರಾವ್ ಮೊದಲಾದ ಪ್ರಬುದ್ಧ ಕಲಾವಿದರನ್ನೂ ಕರೆಸತೊಡಗಿದರು. ಪ್ರತಿ ವರ್ಷ ಓರ್ವ ಹೊಸ ಪ್ರತಿಭೆಯನ್ನು ಪರಿಚಯಿಸುವುದರ ಜೊತೆಗೆ ಮುಂಬಯಿ ಕಲಾವಿದರಿಗೂ ಅವಕಾಶ ನೀಡುತ್ತಿದ್ದರು. ಇತ್ತೀಚೆಗೆ ಎರಡೆರಡು ತಾಳಮದ್ದಳೆ ತಂಡಗಳು ಹಾಗೂ ಮಹಿಳಾ ಯಕ್ಷಗಾನ ಮಂಡಳಿಗಳೂ ಮಳೆಗಾಲ ಸಮಯದಲ್ಲಿ ಮುಂಬಯಿಗೆ ಆಗಮಿಸುತ್ತಿದ್ದು ಅಜೆಕಾರು ಕಲಾಭಿಮಾನಿ ಬಳಗದ ಸಂಘಟನೆ ಸಂಯೋಜನೆ ಮುಖಾಂತರ ನಗರ ಉಪನಗರಗಳಲ್ಲಿ ಮಾತ್ರವಲ್ಲದೆ ಪುಣೆಯಲ್ಲೂ ಕಾರ್ಯಕ್ರಮ ನೀಡುತ್ತಾರೆ.

ಬಾಲಕೃಷ್ಣ ಶೆಟ್ಟರ ಅಜೆಕಾರು ಕಲಾಭಿಮಾನಿ ಬಳಗವನ್ನು ಪ್ರೋತ್ಸಾಹಿಸುವ ಮೂಲಕ ಯಕ್ಷಗಾನ ಕಲೆಗೆ ಗೌರವ ನೀಡುವ ಉದ್ದೇಶದಿಂದ ಆರಂಭದ ದಿನಗಳಲ್ಲಿ ವಿಶೇಷ ಸಹಕಾರ ನೀಡಿದವರು ಪಪ್ಪಿಲೋನ್ ರಘು ಎಲ್ ಶೆಟ್ಟಿ, ಶೇಖರ್ ಶೆಟ್ಟಿ ಇನ್ನ ಗಿರಿರಾಜ್ ಹೋಟೆಲ್ ಮುಲುಂಡ್, ಹರಿದಾಸ್ ಭಟ್ ವಿದ್ಯಾವಿಹಾರ್ ಹಾಗೂ ಮುಲುಂಡ್ ಥಾಣೆ ಪರಿಸರದ ಕಲಾಭಿಮಾನಿಗಳು, ಹೋಟೆಲ್ ಉದ್ಯಮಿಗಳು ಬಳಿಕದ ದಿನಗಳಲ್ಲಿ ಕಾರ್ಯಕ್ರಮದ ಪ್ರಾಯೋಜಕರಾಗಿ ಸಂಘ ಸಂಸ್ಥೆಗಳು ಸಹಕರಿಸಿವೆ. ಕಳೆದ ಇಪ್ಪತ್ತೊಂದು ವರ್ಷಗಳಲ್ಲಿ ಪ್ರತಿವರ್ಷವೂ ಊರಿನ ಪ್ರತಿಭಾವಂತ ಕಲಾವಿದರನ್ನು ಮುಂಬಯಿಗೆ ಬರಮಾಡಿಕೊಂಡು ಮುಂಬಯಿ ತಾಳಮದ್ದಳೆ ಪ್ರಿಯ ಕಲಾಪೋಷಕರ ಸಹಾಯದಿಂದ ಕಾರ್ಯಕ್ರಮಗಳನ್ನು ಸಂಯೋಜಿಸಿ ಕಲಾಭಿಮಾನಿಗಳಿಗೆ ರಸದೌತಣ ಉಣಬಡಿಸಿದ್ದಾರೆ. ಇಪ್ಪತ್ತೊಂದು ವರ್ಷಗಳ ಸುದೀರ್ಘ ಅವಧಿಯಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಅಸಂಖ್ಯ ಕಾರ್ಯಕ್ರಮಗಳನ್ನು ಸಂಯೋಜಿಸಿವೆ. ಊರಿನ ಯಕ್ಷಗಾನ ಮೇಳಗಳ ಆಯ್ದ ಕಲಾವಿದರ ಯಕ್ಷಗಾನ ಪ್ರದರ್ಶನ, ಹೆಸರಾಂತ ಕಲಾವಿದರಿಂದ ತಾಳಮದ್ದಳೆ, ಯಕ್ಷಗಾನ ಸಂಬಂಧಿ ಕೃತಿಗಳ ಪ್ರಕಟನೆ, ಹಿರಿಯ ಕಲಾವಿದರಿಗೆ ಸನ್ಮಾನ ಗೌರವಧನ, ತನ್ನ ಮಾತೃಶ್ರೀ ಹೆಸರಿನಲ್ಲಿ ಯಕ್ಷರಕ್ಷಾ ಪ್ರಶಸ್ತಿ ಪ್ರಧಾನ, ಅಶಕ್ತ ಕಲಾವಿದರಿಗೆ ಸಹಾಯಧನ, ಪ್ರತಿಭಾ ಪುರಸ್ಕಾರ, ಯಕ್ಷರಕ್ಷಾ ಯಕ್ಷಪೋಷಕ ಪ್ರಶಸ್ತಿ ನಗದು ಹಣ ಹೀಗೆ ಬಾಲಕೃಷ್ಣ ಶೆಟ್ಟರ ಸಾರಥ್ಯದಲ್ಲಿ ಅದೆಷ್ಟೋ ಜನ ಮೆಚ್ಚುಗೆಯ ಕಾರ್ಯಕ್ರಮಗಳು ಜರಗಿ ಹುಟ್ಟೂರಲ್ಲಿ ಹಾಗೂ ಮುಂಬಯಿ ಪುಣೆಗಳಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಕಲಾವಿದರ ಸಾಧನೆ ಯಕ್ಷಗಾನಕ್ಕೆ ಅವರ ಕೊಡುಗೆ ಮತ್ತು ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅವಧಿ ಇತ್ಯಾದಿಗಳ ಪರಾಮರ್ಶೆ ನಡೆಸಿದ ಬಳಿಕ ಪ್ರಶಸ್ತಿ ನೀಡುತ್ತಾರೆ. ಯಕ್ಷರಕ್ಷಾ ಪ್ರಶಸ್ತಿ ಜೊತೆಗೆ ರೂ. ಒಂದು ಲಕ್ಷ ಮೊತ್ತ ಪಡೆದವರಲ್ಲಿ ನಗರದ ಹೆಸರಾಂತ ಭಾಗವತ ನಾದಲೋಲ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಹಾಗೂ ವಿಶ್ವ ವಿಖ್ಯಾತ ಭಾಗವತ ಪಟ್ಲ ಫೌಂಡೇಷನ್ ಸ್ಥಾಪಕ ಸಂಚಾಲಕ ಶ್ರೀ ಸತೀಶ್ ಶೆಟ್ಟಿ ಪಟ್ಲ ಇವರು ಸೇರಿದ್ದಾರೆ. ಯಕ್ಷರಕ್ಷಾ ಪ್ರಶಸ್ತಿ ಮತ್ತು 50000 ನಗದು ಪಡೆದವರಲ್ಲಿ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ, ಸಿದ್ಧಕಟ್ಟೆ ವಿಶ್ವನಾಥ್ ಶೆಟ್ಟಿ, ಶಂಭು ಶರ್ಮಾ, ಬೊಟ್ಟಿಕೆರೆ ಪುರುಷೋತ್ತಮ ಪೂಂಜಾ, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಉಜಿರೆ ಅಶೋಕ್ ಭಟ್, ಗಣೇಶ್ ಕೊಲಕಾಡಿ, ಪ್ರಶಾಂತ್ ವಗನಾಡು, ಹರೀಶ್ ಬೊಳಂತಿಮೊಗರು, ದಿನೇಶ್ ಶೆಟ್ಟಿ ಕಾವಳಕಟ್ಟೆ, ಸದಾಶಿವ ಆಳ್ವ ತಲಪಾಡಿ, ಶಶಿಕಾಂತ್ ಶೆಟ್ಟಿ ಕಾರ್ಕಳ ಇವರು ಸೇರಿದ್ದಾರೆ. ಯಕ್ಷರಕ್ಷಾ ಪ್ರಶಸ್ತಿ ಜೊತೆಗೆ 25000 ನಗದು ಪಡೆದವರಲ್ಲಿ ಕೊಲ್ಯಾರು ರಾಜು ಶೆಟ್ಟಿ, ಇನ್ನ ಆನಂದ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ರಾಜಾ ತುಂಬೆ, ಬಾಲಕೃಷ್ಣ ಗೌಡ ದೇಲಂಪಾಡಿ, ಪುಂಡಲೀಕ ಶೆಣೈ, ದಿನೇಶ್ ಪ್ರಭು, ಪ್ರಕಾಶ್ ಪಣಿಯೂರು, ಕೇಶವ ಪುತ್ರನ್, ರಮೇಶ್ ಸುವರ್ಣ, ಗಂಗಾಧರ್ ಸಾಲಿಯಾನ್, ವಿಶ್ವನಾಥ್ ಸಾಲಿಯಾನ್, ರೇಷ್ಮಾ ಎಸ್ ಶೆಟ್ಟಿ, ಲಕ್ಷ್ಮೀನಾರಾಯಣ ರಾವ್, ಆನಂದ ಶೆಟ್ಟಿ ವಿಕ್ರೋಲಿ, ತಿಮ್ಮಪ್ಪ ಆರ್ ಶೆಟ್ಟಿ, ರಾಮ ಬಿ ಸಾಲಿಯಾನ್, ಎಂ ಟಿ ಪೂಜಾರಿ, ನಾಗೇಶ್ ಸುವರ್ಣ, ಜಯರಾಮ ಶೆಟ್ಟಿ ಮುಂಡ್ಕೂರು, ರಘುನಾಥ ಆಳ್ವ, ಕೆ.ಕೆ ಶೆಟ್ಟಿ ಶೇಣಿ, ಶ್ಯಾಂ ಭಟ್, ದಿನೇಶ್ ರೈ ಕಡಬ, ನಾರಾಯಣ ಶೆಟ್ಟಿ ನಂದಳಿಕೆ, ಶ್ರೀಧರ್ ಉಚ್ಚಿಲ್, ಪೂರ್ಣಿಮಾ ಯತೀಶ್ ರೈ, ರಮೇಶ್ ಶಿವಪುರ, ಡಾ. ಸುನೀತಾ ಶೆಟ್ಟಿ, ಉಮೇಶ್ ಶೆಟ್ಟಿ, ಸದಾನಂದ ಶೆಟ್ಟಿ ಮಾನಾಡಿ, ರಮೇಶ್ ಶೆಟ್ಟಿ ಬಾಯಾರು, ನವೀನ್ ಕೆ ಇನ್ನ, ಜ್ಯೂಲಿಯೆಟ್ ಡಿ ಸೋಜಾ, ರಾಮಕೃಷ್ಣ ಭಟ್ ದೇವಲ್ಕುಂದ, ಭಾಸ್ಕರ್ ಶೆಟ್ಟಿ, ಕೃಷ್ಣ ಕೆ ದೇವಾಡಿಗ, ನಾರಾಯಣ ಬಂಗೇರ, ನಿತ್ಯಪ್ರಕಾಶ್ ಶೆಟ್ಟಿ, ವಸಂತ ಶೆಟ್ಟಿ ವಿಕ್ರೋಲಿ, ಚಿಕ್ಕಯ್ಯ ಶೆಟ್ಟಿ,ಭೋಜ ಬಿ ಬಂಗೇರ, ಶ್ಯಾಮ ಎನ್ ಶೆಟ್ಟಿ, ಶ್ರೀನಿವಾಸ ಪೈ, ಅಪ್ಪಯ್ಯ ಮಣಿಯಾಣಿ, ರೋನ್ಸ್ ಬಂಟ್ವಾಳ, ಬಾಲಚಂದ್ರ ರಾವ್, ಎಸ್ ಡಿ ಕಾಂಚನ್, ಕೆ.ಎಚ್. ದಾಸಪ್ಪ ರೈ, ಮೋಹನ್ ಶೆಟ್ಟಿ ಬಾಯಾರು. ಇವರು ಅಜೆಕಾರು ಕಲಾಭಿಮಾನಿ ಬಳಗ ದಿಂದ ಯಕ್ಷ ರಕ್ಷಾ ಪ್ರಶಸ್ತಿ ಜೊತೆಗೆ ರೂ 10000 ನಗದು ಪಡೆದಿರುತ್ತಾರೆ.

ಅಜೆಕಾರು ಕಲಾಭಿಮಾನಿ ಬಳಗ ಸುದೀರ್ಘ ಕಲಾಸೇವೆಯನ್ನು ನಗರದ ಹಾಗೂ ಹೊರನಾಡ ಪತ್ರಿಕೆಗಳು ಕೊಂಡಾಡಿ ವರದಿ ಮಾಡಿವೆ. ಬಾಲಕೃಷ್ಣ ಶೆಟ್ಟಿಯವರನ್ನು ಯಕ್ಷಗಾನ ಕಲಾ ಸಾಂಸ್ಕೃತಿಕ ರಾಯಭಾರಿ ಎಂದು ಹೊಗಳಿ ಬರೆದಿವೆ. ಅವರು ಮಾಡಿದ ಕಲಾಸೇವೆಯನ್ನು ಗುರುತಿಸಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರದಾನಿಸುವ ಅಗತ್ಯ ಇದೆ. ಕರ್ನಾಟಕ ಸರ್ಕಾರವೂ ಹೊರನಾಡ ಕನ್ನಡಿಗನ ಅಪ್ರತಿಮ ಸೇವೆಯನ್ನು ಗುರುತಿಸಿ ಪುರಸ್ಕರಿಸಬೇಕು. ಅದೆಷ್ಟೋ ಕಲಾವಿದರಿಗೆ ಪ್ರಶಸ್ತಿ ಜೊತೆಗೆ ಗೌರವಧನ, ಯಕ್ಷಗಾನ ಕೃತಿ ಪ್ರಕಟಣೆ..ಅಬಿನಂದನ ಹಾಗೂ ಸಂಸ್ಮರಣ ಗ್ರಂಥ ಪ್ರಕಟನೆ, ಅನೇಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಮಾತೃಶ್ರೀ ಪ್ರಶಸ್ತಿ ಜೊತೆಗೆ ನಗದು ಹಣ ನೀಡಿ ಗೌರವಿಸುವ ಬಾಲಕೃಷ್ಣ ಶೆಟ್ಟಿಯವರ ಹೃದಯ ಶ್ರೀಮಂತಿಕೆಯನ್ನು ಕೊಂಡಾಡಲೇ ಬೇಕು. ಇಷ್ಟು ವರ್ಷಗಳಲ್ಲಿ ಕಲಾಸೇವೆ ಮಾಡಿ ತನಗೇನೂ ಸಂಪತ್ತು ಕೂಡಿಡದೆ ಕೆರೆಯ ನೀರನು ಕೆರೆಗೆ ಚೆಲ್ಲಿ ಕೃತಾರ್ಥರಾದ ಶೆಟ್ಟರಿಗೆ ಭವಿಷ್ಯದಲ್ಲಿ ಆರ್ಥಿಕ ಭದ್ರತೆಯ ಅಗತ್ಯ ಇದೆ. ಅದನ್ನು ಒದಗಿಸಿಕೊಡುವ ಹೊಣೆ ಖಂಡಿತಾ ಕಲಾಭಿಮಾನಿ ಬಾಂಧವರ ಮೇಲಿದೆ. ಅಜೆಕಾರು ಬಾಲಕೃಷ್ಣ ಶೆಟ್ಟಿಯವರಿಗೆ ಸುದೀರ್ಘ ಕಲಾಸೇವೆ ಮಾಡುವ ಯೋಗ ಭಾಗ್ಯಗಳನ್ನು ಕಲಾಮಾತೆ ಅನುಗ್ರಹಿಸಲಿ. ದೇವರು ಅವರನ್ನು ಅವರ ಕುಟುಂಬಿಕರನ್ನು ಸುಖವಾಗಿಟ್ಟಿರಲಿ. ಅವರ ಭವಿಷ್ಯ ಜೀವನ ಆರ್ಥಿಕ ಭದ್ರತೆಯನ್ನು ಹೊಂದಲಿ ಎಂದು ಹಾರೈಸೋಣ.

error: Content is protected !!
Share This