• ಕೆ. ಶ್ರೀಕರ ಭಟ್ ಮರಾಠೆ, ಮುಂಡಾಜೆ

ಯಕ್ಷಗಾನ ರಂಗದ ಇತಿಹಾಸ, ಪರಂಪರೆ, ಆಶಯ, ತಿಟ್ಟು-ಮಟ್ಟುಗಳ ಸ್ವರೂಪ, ಸಂಪ್ರದಾಯ, ಸ್ಥಿತಿ-ಗತಿ, ಸ್ಥಿತ್ಯಂತರ, ವರ್ತಮಾನ, ಈ ರಂಗದ ಹಿರಿಯರ ಸಿದ್ಧಿ-ಸಾಧನೆಗಳ ಮಾಹಿತಿ, ಅಲ್ಲಿನ ಸೌಂದರ್ಯ ಮೀಮಾಂಸೆ, ಕಲಾ ಮೌಲ್ಯಗಳು, ಸೈದ್ಧಾಂತಿಕ ಅಂಶಗಳು – ಈ ಎಲ್ಲವನ್ನೂ ಸೂತ್ರಬದ್ಧವಾಗಿ ಮತ್ತು ಅಷ್ಟನ್ನೂ ನಿಸ್ಸಂದಿಗ್ಧವಾಗಿ ನಿರೂಪಿಸಬಲ್ಲ ಸಮರ್ಥ ಉಪನ್ಯಾಸಕಾರ ರಂಗತಜ್ಞ ಯಾರೆಂದರೆ ಅವರೇ ಶ್ರೀ ಪ್ರಭಾಕರ ಜೋಶಿ. ಸ್ವಾಧ್ಯಾಯ, ಪ್ರೌಢಸ್ತರದ ಅಧ್ಯಯನ, ಸಂಶೋಧಕ ಬುದ್ಧಿಯ ಜಿಜ್ಞಾಸೆ, ಪರಾಮರ್ಶೆ, ಚಿಂತನೆಗಳ ಹಿನ್ನೆಲೆಯ ಪ್ರಬುದ್ಧ ಲೇಖಕ-ವಿಮರ್ಶಕ-ಚಿಂತಕ, ನಾಡು ಹೆಮ್ಮೆ ಪಡುವ ವಿರಳ ಶ್ರೇಣಿಯ ವಿದ್ವಾಂಸ;

ಜೀವನೋತ್ಸಾಹದ ಚಿಲುಮೆ, ಲೋಕಾನುಭವದ ಕಣಜ, ಸಂಭಾಷಣಾಚತುರ, ಸಾಟಿಯಿಲ್ಲದ ಮಾತುಗಾರ, ತಾಳಮದ್ದಳೆ ಅರ್ಥಧಾರಿ; ಅಸಾಧಾರಣಗ್ರಹಣ ಸಾಮರ್ಥ್ಯ, ಅಪರೂಪದ ಸ್ಮರಣ ಶಕ್ತಿ, ಅತಿರಥ ಮಹಾರಥರ ಸಾಂಗತ್ಯದಲ್ಲಿ ನಿರಂತರ ಸಂವಾದದಲ್ಲಿ ರೂಪುಗೊಂಡ ಬಹುಮುಖ ವ್ಯಕ್ತಿತ್ವ; ಸ್ವಚ್ಛಂದ ಸ್ವತಂತ್ರದೃಷ್ಟಿ, ಸ್ವತಂತ್ರ ನಿರ್ಭೀತ ಪ್ರವೃತ್ತಿ, ಉದಾರ ಪ್ರಗತಿಪರ ನಿಲುವು, ಅಂಧಶ್ರದ್ಧೆ ಅಂಧಾನುಕರಣೆಗಳಿಂದ ಮಾರುದೂರ, ಸಂವೇದನಶೀಲ, ಯಾರೊಂದಿಗಾದರೂ ಸ್ನೇಹ ಸಂಪಾದಿಸಿಕೊಳ್ಳಬಲ್ಲ ಜಾಣ, ವ್ಯವಹಾರ ಚತುರ, ಸಾರ್ವಜನಿಕ ಜೀವನದಲ್ಲೂ ಅಷ್ಟೇ ಆಸಕ್ತ – ಕ್ರಿಯಾಶೀಲ; ಇಷ್ಟು ವಿಶೇಷಣಗಳನ್ನು ಒಬ್ಬ ವ್ಯಕ್ತಿ ಸಂಪಾದಿಸುವುದು ಸಾಧ್ಯವೇ, ಶಕ್ಯವೇ. ಅದು ಅಷ್ಟು ಸುಲಭ ಸಾಧ್ಯ ಸಂಗತಿಯಲ್ಲ. ಕರ್ನಾಟಕರಾಜ್ಯ ಪ್ರಶಸ್ತಿ ವಿಜೇತ ಡಾ. ಎಂ.ಪ್ರಭಾಕರ ಜೋಶಿಯವರನ್ನು ಪರಿಚಯಿಸಲು ಅವರ ಒಂದು ವ್ಯಕ್ತಿಚಿತ್ರ ಬರೆಯಲು ಇಷ್ಟು ಪೀಠಿಕೆ ಬೇಕೇಬೇಕು.

ಒಂದು ಕಾಲದಲ್ಲಿ ಕುಗ್ರಾಮ ಎಂಬ ಹಣೆಪಟ್ಟಿ ಹೊತ್ತಿದ್ದ ದುರ್ಗಮ ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯ ಗರ್ಭದಲ್ಲಿದ್ದ ಮಾಳ ಗ್ರಾಮದ ಚಿತ್ಪಾವನರ ಪುಟ್ಟ ವಸತಿಯೊಂದರಲ್ಲಿ ಹೇರಂಜೆ ವಾಳ್ಯದ ನವೆದರ ನಾರಾಯಣ ಜೋಶಿ-ಲಕ್ಷ್ಮೀಬಾಯಿ ದಂಪತಿಯ ಪುತ್ರನಾಗಿ 1946ರಲ್ಲಿ ಪ್ರಭಾಕರ ಜೋಶಿಯವರು ಜನಿಸಿದರು. ತಂದೆ ನಾರಾಯಣ ಜೋಶಿಯವರು ಕೃಷಿಕರು. ಸಂಸ್ಕೃತ ಮರಾಠಿ ಭಾಷಾ ವಾಙ್ಮಯದಲ್ಲಿ ಒಲವು ಇದ್ದವರು. ಆ ಕಾಲದಲ್ಲಿ ಲೋಕಮಾನ್ಯ ಬಾಲಗಂಗಾಧರತಿಲಕರು ಹೊರಡಿಸುತ್ತಿದ್ದ ಕೇಸರಿ ಪತ್ರಿಕೆಯನ್ನು ಅಂಚೆಯ ಮೂಲಕ ತರಿಸಿ ಓದುವ ಅಭ್ಯಾಸ ನಾರಾಯಣ ಜೋಶಿಯವರಿಗಿತ್ತು.

ಮಾಳಗ್ರಾಮದ ಪರಿಸರ, ಜೋಶಿ ಕುಟುಂಬ ಮನೆತನದ ಹಿನ್ನೆಲೆ, ಬಾಲ್ಯದಲ್ಲಿ ಮನೆಯಲ್ಲಿ ಸಿಕ್ಕಿದ ಶಿಕ್ಷಣ, ಈ ಅಂಶಗಳನ್ನು ಗಮನಿಸಿದರೆ ಜೋಶಿಯವರು ಓರ್ವ ವೈದಿಕರೊ, ಸಂಸ್ಕೃತ ವಿದ್ವಾಂಸರೊ ಆಗಬೇಕಿತ್ತು. ಶೃಂಗೇರಿಯ ಸಾಮೀಪ್ಯದಿಂದಾಗಿ ಮಾಳದ ಹುಡುಗರು ವೇದಾಧ್ಯಯನಕ್ಕೆ ಶೃಂಗೇರಿ ಮಠಕ್ಕೆ ಹೋಗುತ್ತಿದ್ದ ಕಾಲವದು. ಜೋಶಿಯವರು ಕಾರ್ಕಳ ಬೋರ್ಡ್ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಪೂರೈಸಿ ಭುವನೇಂದ್ರ ಕಾಲೇಜಿಗೆ ಸೇರಿದರು. ಅಲ್ಲಿ ವಾಣಿಜ್ಯ ಶಾಸ್ತ್ರದಲ್ಲಿ ಪದವಿ ನಂತರ ಧಾರವಾಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ಉಪನ್ಯಾಸಕರಾಗಿ ವೃತ್ತಿಜೀವನ ಪ್ರಾರಂಭಿಸಿದರು. ಆದರೆ ವ್ಯಾಸಂಗದ ಅವಧಿಯಲ್ಲಿ ಅವರಿಗೆ ಯಕ್ಷಗಾನ -ತಾಳಮದ್ದಳೆಯ ಆಸಕ್ತಿ ಅಭಿರುಚಿ ಬೆಳೆಯಿತು. ಪದವಿ ಶಿಕ್ಷಣ ಪೂರೈಸುವ ವೇಳೆಗೆ ಜೋಶಿ ತಾಳಮದ್ದಳೆ ಅರ್ಥಧಾರಿಗಳ ಪಂಕ್ತಿಯಲ್ಲಿ ಗುರುತಿಸಲ್ಪಟ್ಟಿದ್ದರು. ಅನಂತರ ಲೇಖನ ವ್ಯವಸಾಯವನ್ನು ಪ್ರಾರಂಭಿಸಿದರು. ಯಕ್ಷಗಾನದ ವಿವಿಧ ಅಂಗಗಳನ್ನು ಅಭ್ಯಾಸ ಮಾಡಿ, ಈ ರಂಗದ ಹಿರಿಯರನ್ನು ನಾಡಿಗೆ ಪರಿಚಯಿಸಿದರು. ಯಕ್ಷಗಾನ ರಂಗದ ಆಗುಹೋಗುಗಳಲ್ಲಿ ಜೋಶಿಯವರೊಬ್ಬರು ಬೇಕು ಎನ್ನುವ ಮಟ್ಟಕ್ಕೆ ಬೆಳೆದರು. ಈ ಮಧ್ಯೆ “ಕೃಷ್ಣ ಸಂಧಾನ – ಪ್ರಸಂಗ ಮತ್ತು ಪ್ರಯೋಗ” ಎಂಬ ಶೀರ್ಷಿಕೆಯ ಮಹಾಪ್ರಬಂಧವನ್ನು ಮಂಡಿಸಿ ಮಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಸಂಪಾದಿಸಿದರು.

ತಾಳಮದ್ದಳೆ ಅರ್ಥಗಾರಿಕೆಯಲ್ಲಿ ಜೋಶಿ ಅವರದ್ದು ಎಲ್ಲ ದೃಷ್ಟಿಯಿಂದಲೂ ಸ್ವತಂತ್ರ ಮಾರ್ಗ. ಯಾರ ಅನುಕರಣೆಯೂ ಅಲ್ಲಿ ಇಲ್ಲ. ಅರ್ಥಗಾರಿಕೆಯಲ್ಲಿ ಸ್ಥೂಲವಾಗಿ ಸಾಂಪ್ರದಾಯಿಕ ಪ್ರಸಂಗನಿಷ್ಠ ದೇಸೀ ಶೈಲಿ. ಆಡುಮಾತಿನ ದೇಸೀ ಶೈಲಿ, ಸಾಹಿತ್ಯ ಸಮೃದ್ಧ ಶೈಲಿ, ರಸನಿಷ್ಠ ರಂಗಶೈಲಿ, ಪುರಾಣನಿಷ್ಠ ಸಾಂಪ್ರದಾಯಿಕ ಶೈಲಿ, ವಿಚಾರಪರ ಶೈಲಿ ಎಂದು ಕೆಲ ಪ್ರಬೇಧಗಳನ್ನು ಗುರುತಿಸಬಹುದು. ಹರಿದಾಸರು ಅತ್ಯಾಕರ್ಷಕ ಕಾವ್ಯ-ಸಾಹಿತ್ಯ ಸಮೃದ್ಧ ರಂಗಶೈಲಿಯನ್ನು ತಂದವರು. ಕೆ.ಪಿ.ವೆಂಕಪ್ಪ ಶೆಟ್ಟಿ, ಪೊಲ್ಯದೇಜಪ್ಪ ಶೆಟ್ಟಿ, ಮಟ್ಟಿ ಸುಬ್ಬರಾಯರಂತಹರು ಈ ಶೈಲಿಯ ಸೊಬಗನ್ನು ಹೆಚ್ಚಿಸಿದರು. ಪೊಳಲಿ ಶಾಸ್ತ್ರಿಗಳು, ಪೆರ್ಲಕೃಷ್ಣಭಟ್ಟರು, ಕಾವ್ಯ-ಶಾಸ್ತ್ರ-ದರ್ಶನ ವಾಕ್ ಮಯದ ವೈಭವವನ್ನು ಮರೆದರು. ಈ ಮಧ್ಯೆ ಶೇಣಿ ಗೋಪಾಲಕೃಷ್ಣ ಭಟ್, ದೇರಾಜೆ ಸೀತಾರಾಮಯ್ಯ ತಮ್ಮ ವಿನೂತನ ಶೈಲಿಯಿಂದ ಜನಮನಗೆದ್ದರು. ಜೋಶಿಯವರು ಈ ಹಿನ್ನೆಲೆಯಲ್ಲಿ ಈ ಎಲ್ಲ ಶೈಲಿಗಳನ್ನೂ ಅಭ್ಯಾಸ ಮಾಡಿದರು. ಹಠ-ಅತಿರೇಕಗಳಿಲ್ಲದ ವಸ್ತುನಿಷ್ಠ ಪ್ರಸಂಗನಿಷ್ಠ ಶೈಲಿಯನ್ನು ಆಯ್ದುಕೊಂಡರೆ ಅದು ಅಚ್ಚರಿಯ ಸಂಗತಿಯಲ್ಲ.

ಜೋಶಿಯವರ ಅಧ್ಯಯನ, ವಿದ್ವತ್ತು, ಲೋಕಾನುಭವ ತುಂಬಿದ ಪಠ್ಯನಿಷ್ಠ ವಿಚಾರಪರ ಅರ್ಥಗಾರಿಕೆಯಲ್ಲಿಅವರು ಬಳಸುವ ಹಾಸ್ಯಮಿಶ್ರಿತ ರಂಗಶೈಲಿ, ವಾದ ಮಂಡನೆ, ಪ್ರತಿಪಾದನೆಯಲ್ಲಿ ತೋರುವ ಗಟ್ಟಿತನ, ಹೊಂದಾಣಿಕೆಯ ಮನೋಧರ್ಮ, ಶಾಸ್ತ್ರೀಯ ಮಾರ್ಗಕ್ಕೆ ಅವರು ನೀಡುವಆದ್ಯತೆ – ಇವೆಲ್ಲವೂ ರಂಗಕ್ಕೆ ಮಾದರಿಯಾಗುವಂಥವು. ವಾದಕ್ಕೆ ನಿಂತರ ಒಮ್ಮೆಗೆ ಎಂಥವರಿಗಾದರೂ ಉಪ್ಪು-ನೀರು ಕುಡಿಸುವ ಕಸುವು-ಸಾಮರ್ಥ್ಯ ಧಾರಾಳವಾಗಿದ್ದರೂ ಎಂದಿಗೂ ಯಾರೊಂದಿಗೂ ಜಗಳಕ್ಕೆ ನಿಂತವರಲ್ಲ, ಅರ್ಥಧಾರಿ ಎಷ್ಟೆ ಪ್ರಭಾವಶಾಲಿಯಾಗಿದ್ದರೂ ಕಲೆಯ ಅಂಗೀಕೃತ ಮೌಲ್ಯಗಳನ್ನು ಎಂದೂ ಅತಿಕ್ರಮಿಸಬಾರದು, ರಂಗದ ಶಿಸ್ತನ್ನು ಕಾಯ್ದುಕೊಳ್ಳಬೇಕು ಎನ್ನುವುದು ಜೋಶಿಯವರ ಸ್ಪಷ್ಟ ನಿಲುವು.

ಯಕ್ಷಗಾನ ರಂಗದ ದಕ್ಷಿಣೋತ್ತರ ಸೀಮೆಗಳಲ್ಲಿ, ಯಕ್ಷಗಾನ ಮೇಳಗಳ ಕಲಾವಿದರನ್ನು ಹೊರತುಪಡಿಸಿದರೆ ಜೋಶಿಯವರಿಗೆ ಇರುವಷ್ಟು ಸಂಪರ್ಕ-ಸAವಹನ ಮತ್ತಾರಿಗೂ ಇಲ್ಲ. ಇದು ಅವರ ವ್ಯಾಪ್ತಿ, ಸಂವಹನ ಕೌಶಲ ಮತ್ತು ಕಲಾಪ್ರೀತಿಗೆ ಸಾಕ್ಷಿ. ಜೋಶಿ ಈ ರಂಗದಲ್ಲಿ ಒಬ್ಬೊಬ್ಬರನ್ನೂ ಕರೆದು ಗುರುತಿಸಿ ಗುರುತು ಹಿಡಿದು ಮಾತನಾಡಿಸಬಲ್ಲರು. ಉಳಿದಂತೆ ಕಲಾವಿದರು ತಮ್ಮ ಪಾಡಿಗೆ ತಾವಿರುವುದುರೂಢಿ. ಜೋಶಿ ಅದಕ್ಕೆ ಅಪವಾದ. ಯಾವುದೇ ವಿಷಯದಲ್ಲೂ ವಿಚಾರದಲ್ಲೂಖಚಿತ ನಿಲುವು, ನೇರ ಮಾತು, ನೇರ ನಡೆ. ಎಂದೂ ಅಡ್ಡಗೋಡೆಯ ಮೇಲೆ ದೀಪವಿರಿಸುವ ಬೌದ್ಧಿಕ ಜಾಣತನ ತೋರುವವರಲ್ಲ. ಸಾಮಾಜಿಕ ಸಾರ್ವಜನಿಕ ವಿಚಾರಗಳಲ್ಲಿ ಸದಾಜಾಗೃತ. ಹಾಗಾಗಿ ಸನ್ಮಾನ-ಅಭಿನಂದನಾ ಸಮಾರಂಭಗಳಲ್ಲಿ ಅಭಿನಂದನಾ ಭಾಷಣಕ್ಕೆ ಜೋಶಿಯವರೇ ಬರಬೇಕು, ಇಂತಹ ಸಂದರ್ಭಗಳಲ್ಲಿ ಅವರ ಮಾತು ಕೇಳಲು ಜನರೂಕಾಯುತ್ತಿರುತ್ತಾರೆ. ಬರವಣಿಗೆ ಮಾತುಗಾರಿಕೆ ಎರಡರಲ್ಲೂ ಜೋಶಿ ಸವ್ಯಸಾಚಿ. ಕಾವ್ಯ-ಸಾಹಿತ್ಯ-ಶಾಸ್ತ್ರ-ದರ್ಶನ ವಿಚಾರಗಳಲ್ಲಿ ಒಂದೇ ರೀತಿಯ ಆಸಕ್ತಿ ಅವರದು. ಅವರ ಬರವಣಿಗೆ ಮಾತುಗಾರಿಕೆ ಒಂದೇ ರೀತಿ. ಕಾವ್ಯ ಮಾರ್ಗಕ್ಕಿಂತ ಶಾಸ್ತ್ರ ಮಾರ್ಗವೇ ಅವರಿಗೆ ಹತ್ತಿರ. ವಸ್ತು ವಿಷಯಗಳನ್ನು ಗ್ರಹಿಸುವ ಇತಿಹಾಸ ಮತ್ತು ಸಮಾಜಶಾಸ್ತ್ರೀಯ ಚಿಂತನೆಯಿಂದ ತುಲನಾತ್ಮಕ ಅಧ್ಯಯನ ಮಾಡಿ ಅದನ್ನು ಗ್ರಹಿಸುವ ಜೋಶಿಯವರ ಸಾಮರ್ಥ್ಯ ಅಸಾಧಾರಣ ಮಟ್ಟದ್ದು. ಅವರ ಬರಹಗಳನ್ನು ಅವರು ಬರೆದ ಕೃತಿಗಳನ್ನು ಪರಾಮರ್ಶೆ ನಡೆಸಿದರೆ ಈ ಅಂಶ ಯಾರಿಗಾದರೂ ಮನದಟ್ಟಾಗುತ್ತದೆ. ತಾಳಮದ್ದಳೆ ಅರ್ಥಗಾರಿಕೆ ಕುರಿತ ವಾಗರ್ಥ (ವಿಮರ್ಶಾ ಪ್ರಬಂಧಗಳು), ಕೃಷ್ಣ ಸಂಧಾನ: ಪ್ರಸಂಗ ಮತ್ತು ಪ್ರಯೋಗ (ಡಾಕ್ಟರೇಟ್‌ಗಾಗಿ ಮಂಡಿಸಿದ ಮಹಾಪ್ರಬಂಧ). ಈ ಎರಡೂ ಕೃತಿಗಳು ಯಕ್ಷಗಾನ ವಿಮರ್ಶಾ ಲೋಕದ ಮೌಲಿಕ ಕೃತಿಗಳು ಎಂದು ಪರಿಗಣಿತವಾಗಿವೆ. ಯಕ್ಷಗಾನ ಕಲೆಯ ವಿವಿಧ ವಿಭಾಗಗಳನ್ನು ಪರಿಚಯಿಸುವ ‘ಕೇದಗೆ, ಜಾಗರ, ಮಾರುಮಾಲೆ, ಯಕ್ಷಗಾನ ಪದಕೋಶ, ಮುಡಿ ಮುಂತಾದ ಹತ್ತಾರು ಕೃತಿಗಳನ್ನು ಜೋಶಿಯವರು ಬರೆದಿದ್ದಾರೆ.

ಭಾರತೀಯ ತತ್ವಶಾಸ್ತ್ರ-ವೇದಾಂತ-ದರ್ಶನಗಳನ್ನು ಪರಿಚಯಿಸುವ ತತ್ವಮನನ ಜೋಶಿಯವರ ಅಧ್ಯಯನ ವ್ಯಾಪ್ತಿಗೆ ನಿರ್ದರ್ಶನ. ಅದು ವಿವಿಧ ತತ್ವಶಾಸ್ತ್ರಗಳ ಸಿದ್ಧಾಂತ, ಅಲ್ಲಿರುವ ಸಮುದ್ರದಂತಿರುವ ಸಮಗ್ರ ವಾಙ್ಮಯದ ಪಕ್ಷಿನೋಟವನ್ನು ನೀಡುತ್ತದೆ. ನಾಡಿನ ಪತ್ರಿಕೆಗಳಲ್ಲಿ ಯಕ್ಷಗಾನ, ಪ್ರಚಲಿತ ವಿದ್ಯಮಾನ, ಸಂಸ್ಕೃತಿಚಿಂತನೆ ಮುಂತಾದ ವಿಷಯಗಳ ಮೇಲೆ ನೂರಾರು ಲೇಖನಗಳನ್ನು ಬಿಡಿಬರಹಗಳನ್ನು ಅನೇಕ ವರ್ಷಗಳಿಂದ ಬರೆಯುತ್ತಾ ಬಂದವರು ಇವರು.

ಯಕ್ಷಗಾನ ರಂಗದಲ್ಲಿ ಡಾ.ಜೋಶಿಯವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರಕಾರ ಅವರಿಗೆ 2021-22ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದೆ. ಜತೆಗೆ ಈ ರಂಗದ ಪ್ರತಿಷ್ಠೆಯ ಅಕಾಡೆಮಿ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ ಸೇರಿದಂತೆ ಹತ್ತಾರು ಮಾನ-ಸನ್ಮಾನಗಳನ್ನು ಇವರ ಮಡಿಲು ಸೇರಿವೆ. ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿರುವ ಹಲವು ಸಂಘಸಂಸ್ಥೆಗಳು ಇವರನ್ನು ಕರೆದು ಅಭಿನಂದನೆಗಳನ್ನು ಸಲ್ಲಿಸಿವೆ. ಮಠಮಾನ್ಯಗಳಿಂದ ಗೌರವಾದರಕ್ಕೂ ಜೋಶಿಯವರು ಪಾತ್ರರಾಗಿದ್ದಾರೆ. ದಕ್ಷಿಣಕನ್ನಡ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದ ಅಧ್ಯಕ್ಷ ಪದವೂ ಇವರಿಗೆ ಒಲಿದು ಬಂದಿದೆ. ಕರ್ನಾಟಕ ಸರಕಾರದ ವತಿಯಿಂದ ಇತ್ತೀಚೆಗೆ ಉಡುಪಿಯಲ್ಲಿ ಆಯೋಜಿತವಾಗಿದ್ದ ಮೊದಲ ಯಕ್ಷಗಾನ ಸಾಹಿತ್ಯ ಸಮೇಳನದ ಅಧ್ಯಕ್ಷರಾಗಿ ಪ್ರಭಾಕರ ಜೋಶಿಯವರು ಆಯ್ಕೆಯಾಗಿರುವುದು ಚಿತ್ಪಾವನ ಸಮಾಜ ಹೆಮ್ಮೆಪಡುವಂತಹ ವಿಷಯವಾಗಿದೆ.

ಅಖಿಲ ಕರ್ನಾಟಕ ಚಿತ್ಪಾವನ ಬ್ರಾಹ್ಮಣ ಸಂಘದ ಆಶ್ರಯದಲ್ಲಿ ಜರುಗಿದ ಚಿತ್ಪಾವನ ಸಮ್ಮೇಳನಗಳಲ್ಲೂ ಇವರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದ್ದಾರೆ. 2016ರಲ್ಲಿ ಇವರಿಗೆ ಎಪ್ಪತ್ತು ತುಂಬಿದಾಗ ಬೆಂಗಳೂರಿನ ಚಿತ್ಪಾವನ ಸಮಾಜದ ಆಶ್ರಯದಲ್ಲಿ “ಈ ಹೊತ್ತು ಜೋಶಿಯವರಿಗೆ ಎಪ್ಪತ್ತು” ಎಂಬ ವಿಶೇಷ ಸಮಾರಂಭವನ್ನು ಆಯೋಜಿಸಲಾಗಿತ್ತು. ನಾಡಿನ ಅನೇಕ ಹಿರಿಯ ಕಿರಿಯ ವಿದ್ವಾಂಸರು ಮತ್ತು ಸಮಾಜದ ಬಂಧುಗಳು ಈ ಸಮಾರಂಭಕ್ಕೆ ಸಾಕ್ಷಿಗಳಾಗಿದ್ದರು. ಚಿತ್ಪಾವನ ಸಮಾಜ ತನ್ನ ಐವತ್ತನೇ ವಾರ್ಷಿಕೋತ್ಸವ ಚಿತ್ಪಾವನ ಸಮಾಜ ಸುವರ್ಣ ಸಂಭ್ರಮದಲ್ಲಿ ಶ್ರೀ ಎಂ.ಪ್ರಭಾಕರ ಜೋಶಿಯವರನ್ನು ಆಹ್ವಾನಿಸಿ ಗೌರವಿಸುವ ಸುಯೋಗ ಲಭಿಸಿರುವುದು ನಮಗೆ ಇನ್ನಿಲ್ಲದ ಆನಂದ ಸಂತಸವನ್ನು ತಂದಿದೆ.

(ಋಣ. ಚಿನ್ನಾ ಕಾಸರಗೋಡು)

error: Content is protected !!
Share This